Article

ದ್ವೇಷದ ದಳ್ಳುರಿಯಲ್ಲುರಿದ ಸ್ತ್ರೀ ಕಥನ ‘ಪಿಂಜರ್‌’

ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಪಂಜಾಬಿ ಲೇಖಕಿ, ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಮಹಿಳೆ ಅಮೃತಾ ಪ್ರೀತಮ್ ಅವರ ಪ್ರಖ್ಯಾತ ಕಾದಂಬರಿ 'ಪಿಂಜರ್' ನ್ನು ಕನ್ನಡಕ್ಕೆ ಎಲ್ ಸಿ. ಸುಮಿತ್ರಾ ವರು 'ಪಿಂಜರ್' ಹೆಸರಿನಲ್ಲೇ ಅನುವಾದ ಮಾಡಿದ್ದಾರೆ.

1947ರ ದೇಶವಿಭಜನೆಯ ಸಂದರ್ಭದಲ್ಲಿ ಮತ್ತೂ ಅದಕ್ಕಿಂತಲೂ ಮೊದಲು ಪಂಜಾಬಿನಲ್ಲಿ ಹಿಂದೂ ಮುಸ್ಲಿಂರ ದ್ವೇಷದ ದಳ್ಳುರಿಯಲ್ಲಿ ಉರಿದು ಅಸ್ಥಿಪಂಜರಗಳಾದ ಸ್ತ್ರೀಯರ ಬದುಕಿನ ಮನಕಲಕುವ ಚಿತ್ರಣ ಈ ಕೃತಿಯಲ್ಲಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಗೆ ಒಳಗಾಗುವ ಪೂರೋ ಎಂಬ ಮುಗ್ದ ಹೆಣ್ಣುಮಗಳ ಕಥೆ ಇದೆ.

ಪಿಂಜರ್ ಎಂದರೆ ಅಸ್ಥಿಪಂಜರ ಎಂದರ್ಥ. ಪಂಜಾಬಿನ ಕೋಮುಗಲಬೆಯಲ್ಲಿ ಸುಟ್ಟು ಕರಕಲಾದ ಮುಗ್ದ ಜೀವಗಳ ಕರುಣಾಜನಕದ ಕಥೆ ಈ ಕಾದಂಬರಿಯಲ್ಲಿ ಕಾಣಬಹುದು.
ಹೆಣ್ಣಿನ ಮೇಲಿನ ಶೋಷಣೆ, ಧರ್ಮದ ಹೆಸರಿನಲ್ಲಿ ಹೆಣ್ಣು ಅನುಭವಿಸುವ ಸಂಕಟ ನೋವುಗಳು, ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಹೆಣ್ಣನ್ನು ಒತ್ತಾಯಪೂರ್ವಕವಾಗಿ ಹೊತ್ತೊಯ್ದು ಹೆಣ್ಣಿನ ಮನದ ಕನಸುಗಳನ್ನು ಚಿದ್ರಗೊಳಿಸಿ ತಮ್ಮದೇ ಬದುಕಿನ ಜಂಜಡದಲ್ಲಿ ಮುಳುಗುವಂತ ಅನ್ಯ ಧರ್ಮದ ನಿರ್ಧಾರಗಳು ಹೆಣ್ಣಿನ ಮನದಾಳದ ಕನಸುಗಳನ್ನು ಕತ್ತುಹಿಸುಕಿ ಕೊಲ್ಲಲ್ಪಡುತ್ತವೆ. ಅಂತಹ ಕನಸು ಹೊತ್ತ ಪೂರೋ ರಶೀದನ ಕಣ್ಣಿಗೆ ಬಿದ್ದು ಹಮೀದಾ ಆಗಿ ಬದಲಾಗಿ ತನ್ನ ಕನಸುಗಳನ್ನು ನೆನೆಯುತ್ತ ಸಾರ್ಥಕ ಬದುಕು ಸಾಗಿಸುತ್ತಾಳೆ. ಗಲಬೆಯಂತಹ ಸಂದರ್ಭದಲ್ಲೂ ಆ ದಂಪತಿಗಳು ಮಾನವತೆಯ ಧರ್ಮದಿಂದ ಅಲ್ಲಿಯ ಜನರನ್ನು ಆದರಿಸಿದ ಪರಿ ನಮ್ಮ ಸಂಸ್ಕೃತಿಯ ಭಾವೈಕ್ಯತೆಯ ಪ್ರತೀಕ, ಮಾನವನ ಮಾನವತೆಯ ಹೃದಯವಂತಿಕೆ ಎದ್ದು ಕಾಣುತ್ತದೆ.

ಕುಟುಂಬದ ದ್ವೇಷದ ಹಿನ್ನೆಲೆಯಲ್ಲಿ ರಶೀದ ಮದುವೆಗೆ ನಿಶ್ಚಿತಾರ್ಥವಾದ ಹಿಂದೂ ಧರ್ಮದ ಪೂರೋಳನ್ನು ಹೊತ್ತೊಯುತ್ತಾನೆ. ಅಲ್ಲಿಂದಲೇ ಪುರೋ ಹಮೀದಾ ಆಗಿ ಬದಲಾಗುತ್ತಾಳೆ. ಅಲ್ಲಿ ಅವಳನ್ನು ಕಾಡಿಸಲಿಲ್ಲ ನಿಜ. ಅವಳ ಅನುಮತಿಯ ಮೇರೆಗೆ ರಶೀದ ಮದುವೆಯಾಗುತ್ತಾನೆ. ಆದರೆ ಅವಳ ಕನಸುಗಳನ್ನು ಕೊಂದು ಹಾಕುತ್ತಾನೆ. ಹೆತ್ತವರನ್ನು ಕಾಣಬಯಸುವ ಆ ಹೆಣ್ಣಿಗೆ ಅಂದಿನ ಕೋಮುಗಲಬೆಯ ಸಂದಿಗ್ದ ಪರಿಸ್ಥಿತಿಯಲ್ಲಿ ಹೆತ್ತವರೇ ಅವಳನ್ನು ಮರಳಿ ಮನೆಗೆ ಸ್ವೀಕರಿಸಿಕೊಳ್ಳುವುದಿಲ್ಲ ಮರಳಿ ರಶೀದನ ಆಶ್ರಯಪಡೆದು ಮನದೊಳಗೆ ತನ್ನ ಬದುಕಿನ ಕತನವನ್ನು ನೆನೆಯುತ್ತಲೇ ರಶೀದನೊಡನೆ ಬದುಕು ಸಾಗಿಸಿ ಒಂದು ಮಗುವನ್ನೂ ಹೆತ್ತಳು. ಧರ್ಮಗಲಭೆಯಲ್ಲಿ ಸಿಕ್ಕು ನರಳುತ್ತಿದ್ದ ಲಾಜೋಳನ್ನು ಪಾರುಮಾಡಿ ದೈನ್ಯತೆಯ ಮೆರೆದಳು.
ಕೊನೆಗೆ ತನ್ನ ತಮ್ಮ ಕೊನೆಯ ಬಾರಿ ಯೋಚಿಸಿ ಬಂದು ಬಿಡು ಹಿಂದೂ ಮಹಿಳೆ ಎಂದರೆ ಸಾಕು ಪೋಲಿಸರ ರಕ್ಷಣೆಯಲ್ಲೇ ಹೊರಟುಬರಬಹುದು ಎಂಬ ಕಿವಿಮಾತು ಕರೆಳಿದಾಗ ಹಮೀದಾ ರಶೀದನತ್ತ ಹೆಜ್ಜೆ ಇಟ್ಟು ತಮ್ಮನನ್ನು ಬಿಳ್ಕೊಟ್ಟಳು. ಹೆಣ್ಣಿಗೆ ಅವಕಾಶಗಳೇ ಇಲ್ಲ ನೋಡಿ ಅದಕ್ಕಾಗಿ ಗಂಡನ ಅರಸಿ ಬರುವ ಹಮೀದಾಳ ಆ ಸ್ಥಿತಿ ಹೆಣ್ಣಿನ ಮನದ ವಿವಿಧ ಮಾನಸಿಕ ತಳಮಳಗಳನ್ನು ಚಿತ್ರಿಸುತ್ತದೆ.

ರಶೀದ ಕೂಡ ಹಮೀದಾಳನ್ನು ಮದುವೆ ಆದ ಘಳಿಗೆಯಿಂದಲೂ ಕೂಡ ಏಕರೀತಿಯ ಭಾವಹೊತ್ತು ಮಡದಿಯೊಂದಿಗೆ ನೆಮ್ಮದಿಯ ಜೀವನ ನಡೆಸಿದ. ತಾನು ತಪ್ಪು ಮಾಡಿರುವೆ ಏಂದು ಗೊತ್ತಾದಾಗಲೇ ಪೂರೋಗೆ ಈ ಮೊದಲು ನಿಶ್ಚಯವಾಗಿದ್ದ ರಾಮಚಂದ್ರನೊಡನೆ ತನ್ನ ತಂಗಿಯನ್ನು ಹುಡುಕಿಕೊಡುವೆ ಎಂಬ ಮಾತುಕೊಟ್ಟು ಕೊನೆಗೂ ಆ ಮಾತನ್ನು ಇಡೇರಿಸಿದ. ಲಾಜೋಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಅವಳನ್ನು ಅವಳಣ್ಣ ರಾಮಚಂದ್ರನಿಗೆ ಒಪ್ಪಿಸಿ ತನ್ನ ತಪ್ಪಿನ ಪಶ್ಚಾತಾಪದ ಕಣ್ಣೀರು ಸುರಿಸಿ ದೈನ್ಯತೆ ಮೆರೆದ.

ಕಾದಂಬರಿಯಲ್ಲಿ ಬಹಳಷ್ಟು ಕಾಡಿದ ಘಟನೆ.
ಹುಚ್ಚಿಯೊಬ್ಬಳ ಮಗುವೊಂದನ್ನು ಹಮೀದಾ ಸಾಕುವಾಗಲೂ ಕೂಡ ಧರ್ಮದ ಮುಖಂಡರು ವರ್ತಿಸಿದ ರೀತಿ ಹೇಸಿಗೆ ತರುವಂತಹುದು ಎಂದೆನಿಸುತ್ತದೆ. ಅಂತಹ ಕಟುಧರ್ಮಪ್ರಜ್ಞೆಯವರಲ್ಲಿ ಮಾನವೀಯತೆಯ ಸಣ್ಣ ಅಂಶವೂ ಕಾಣಲಾರದು. ಕೊನೆಗೆ ಹಸುಗೂಸು ಮೂರ್ಚೆ ಹೋದಾಗಲೇ ಮರಳಿ ಹಮೀದಾಳ‌ಮಡಿಲಿಗೆ ಹಾಕುವ ಆ ಜನರ ಮನಸ್ಥಿತಿಗೆ ಹಮೀದಾ ಸರ್ವಧರ್ಮ ಸಮನ್ವಯದ ಮಾರ್ಗವನ್ನೇ ಸಾರಿ ಹೇಳಿದಳು. ಆ ಮಗುವನ್ನು ಪ್ರೀತಿಯಿಂದಲೇ ಸಾಕಿ ಸಲುಗಿದಳು. ಹಿಂದೂಗಳು ನಿರಾಶ್ರಿತರಾಗಿ ಭಾರತಕ್ಕೆ ತೆರಳುವಾಗಲೂ ತೆರೆದ ಮನದಿಂದ ಅವರಿಗೆ ಆಹಾರಪದಾರ್ಥಗಳನ್ನು ಒದಗಿಸುವ ಹಮೀದಾಳ ವ್ಯಕ್ತಿತ್ವ ನಮ್ಮ ದೇಶದ ಭಾವೈಕ್ಯತೆಯನ್ನು ಸಾರುತ್ತದೆ. ಹಮೀದಾಳನ ಗಂಡ ರಶೀದನೂ ಕೂಡ ಮಾನವೀಯತೆಯ ಅಂತಃಕರಣದ ಮನದವನಾಗಿದ್ದರಿಂದಲೇ ಮಡದಿಯನ್ನು ಗೌರದಿಂದ ಕಂಡು ಸಾರ್ಥಕ ಬದುಕನ್ನು ಸಾಗಿಸಿದ.

ಕಾದಂಬರಿಯ ಕಮ್ಮೋ,ತಾರೋ ಅವರ ಮಾತುಗಳೂ ಹಮೀದಾಳಿಗೆ ಆರಂಭದಲ್ಲಿ ಧರ್ಮದ ಕಟ್ಟುಪಾಡುಗಳ ಕುರಿತು ಅವಳನ್ನು ಚಿಂತನೆಗೆ ಹಚ್ಚುವ ವಿಚಾರಧಾರೆಗಳಾಗುತ್ತವೆ.

ಚಿಕ್ಕದಾದ ಕಾದಂಬರಿಯಲ್ಲಿ ಬಹಳಷ್ಟು ವಿಚಾರಧಾರೆಗಳ ಮೇಲೆ ಬೆಳಕು ಚೆಲ್ಲುವ ಲೇಖಕರ ಬರಹದ ಶೈಲಿ ಇಷ್ಟವಾಗುವಂತಹುದು. ಧರ್ಮಗಲಬೆಯ ಸಂದರ್ಭದಲ್ಲಿ ಘಟನೆಗೆ ಕಣ್ಣಾದ ಲೇಖಕರಲ್ಲಿ 'ಪಿಂಜರ್' ಅನ್ನುವ ಕಾದಂಬರಿ ಮೂಡಿಬಂದಿರುವುದು ಅವರ ಹೃದ್ಯ ಮನೋಭಾವದ ಸಂಕೇತವಾಗಿದೆ. ಪುರೋಳ ಸಂಕಟಗಳನ್ನು ಆಗಾಗ ಓದುಗನನ್ನು ತಡೆದುನಿಲ್ಲಿಸಿ ಯೋಚಿಸುವಂತೆ ಮಾಡುತ್ತವೆ. ಅವಳ ಮನದ ಎಲ್ಲ ಭಾವನೆಗಳಿಗೆ ಓದುಗ ಹನಿಗಣ್ಣಾಗುತ್ತಾನೆ.

ಒಂದೊಳ್ಳೆ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ ಎಲ್ ಸಿ. ಸುಮಿತ್ರಾ ಮೆಡಮ್ ಅವರಿಗೆ ಮತ್ತೊಮ್ಮೆ ಹೃದಯಸ್ಪರ್ಶಿ ಧನ್ಯವಾದಗಳು. ಭಾವೈಕ್ಯತೆ ಭಾವ ಹೊತ್ತ, ಸಾವಿರಾರು ಕನಸುಗಳನ್ನು ಕಳೆದುಕೊಂಡು ಆಗಸಕ್ಕೆ ಮುಖಮಾಡಿ ನಕ್ಷತ್ರಗಳನ್ನು ಎಣಿಸುತ್ತಲೇ ಎರಡೂ ಧರ್ಮಗಳಲ್ಲಿ ಸಿಕ್ಕ ಪೂರೋ ಆಗಿ,ಹಮೀದಾ ಆಗಿ ತನ್ನದೆಯಾದ ಭಾವಜಗತ್ತನ್ನು ನಿರ್ಮಿಸಿದ ಪೂರೋ, ಹಮೀದಾ ಇಬ್ಬರ ಬದುಕಿನ ಕಥನವನ್ನು ನೀವೂ ಓದಬಯಸುವುದಾದರೆ ತಪ್ಪದೇ ಪಿಂಜರ್ ಓದಿ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜು ಹಗ್ಗದ