Article

ಎಲ್ಲ ಇಸಂಗಳನ್ನು ಮೀರಿದ ಕೇಂದ್ರ ಪ್ರಜ್ಞೆಯುಳ್ಳ ಹೊಸಹಾದಿ

ಒಂಬತ್ತು ದಶಕಗಳಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸಣ್ಣಕತೆಗಳು ಸಾಕಷ್ಟು ಸಮೃದ್ಧವಾಗಿ ಬೆಳೆದಿವೆ. ನಮ್ಮ ಕನ್ನಡದ ಈ ಕಥಾ ಪ್ರಕಾರಕ್ಕೆ ಪಾಶ್ಚಿಮಾತ್ಯರ ಸಣ್ಣಕತೆಗಳು  ಒಂದು ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿದ್ದರೂ ನಾವು ಅದಕ್ಕೆ ಅಂಟಿಕೊಳ್ಳದೆ, ಅನುಕರಣೆ ಮಾಡದೆ ನಮ್ಮ ಪ್ರಾದೇಶಿಕ ಸಂಸ್ಕೃತಿಯ ಬದುಕಿಗೆ ಒಗ್ಗಿಕೊಳ್ಳುವಂತಹ ರಚನಾತ್ಮಕ ಬರೆವಣಿಗೆಯ ಜೊತೆಗೆ ಸೃಜನಶೀಲವಾದ ಅಭಿವ್ಯಕ್ತಿ ಶಕ್ತಿಯನ್ನು ಮೈಗೂಡಿಸಿಕೊಂಡು ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ  ಮಾಸ್ತಿಯವರಿಂದ ಮೊದಲುಗೊಂಡು ಇವತ್ತಿನ ಡಿಜಿಟಲ್ ನೆಲೆಗಟ್ಟಿನಲ್ಲಿ ವೈವಿಧ್ಯಮಯವಾಗಿ ಸಹೃದಯರನ್ನು ಆರ‍್ಶಿಸುತ್ತಿರುವ ಬುಕ್ ಬ್ರಹ್ಮದವರೆಗೆ ಸಣ್ಣಕತೆಗಳು ತನ್ನದೇ ಆದ ಒಂದು ವಿಶಿಷ್ಟ ಕೆಂದ್ರವನ್ನು ಸೃಷ್ಟಸಿಕೊಂಡಿವೆ. ಅಲ್ಲದೆ ಕಾದಂಬರಿಗಳ ಜೊತೆಜೊತೆಗೆ ಸಣ್ಣಕತೆಗಳು ಕೂಡ ಕ್ರಿಯಾತ್ಮಕವಾದ ಅಂತ:ಸತ್ವವನ್ನು ಉಳಿಸಿಕೊಂಡು ಸಾಗಿ ಬರುತ್ತಿರುವದು ಒಂದು ಮಹತ್ವದ ವಿಚಾರ.

ಈ ಸಣ್ಣಕತೆಗಳಲ್ಲಿ ಮುಖ್ಯವಾಗಿ ಬದುಕಿನ ರಸಾತ್ಮಕವಾದ  ಚೆಲುವು, ಒಲವು, ನಿಲುವು ಹಾಗೂ ಒಳಿತು-ಕೆಡುಕುಗಳನ್ನು ಘನವಾಗಿ ಕಟ್ಟಿಕೊಡುತ್ತಿರುವದರಿಂದ  ಕನ್ನಡ ಭಾಷೆಯೂ ಇನ್ನಷ್ಟು ಶ್ರೀಮಂತವಾಗುತ್ತಿದೆ. ಆದರೆ ವಿದ್ಯಾ ನೆಲೆಯಲ್ಲಿ ಕನ್ನಡ ಗದ್ಯ ಸಾಹಿತ್ಯದ ಪ್ರಕಾರಗಳಲ್ಲಿ ಕಾದಂಬರಿಗಳಿಗೆ ಸಿಕ್ಕಷ್ಟು ಮಾನ್ಯತೆಯಾಗಲಿ, ಪ್ರೋತ್ಸಾಹವಾಗಲಿ ಸಣ್ಣಕತೆಗಳಿಗೆ ಸಿಗದೆ ಇರುವುದು ಒಂದು ನೋವಿನ ಸಂಗತಿ. ಇದಕ್ಕೆ ಕಾರಣಗಳು ಏನೇ ಇರಲಿ. ಕಾದಂಬರಿಗಳಿಗಿಂತ ಸಣ್ಣಕತೆಗಳು ಯಾವ ಕಲಾತ್ಮಕ ಸೃಜನಶೀಲ ಅಭಿವ್ಯಕ್ತಿಗಿಂತಲೂ ಕಡಿಮೆಯಲ್ಲವೆಂಬುದು ನನ್ನ ಅನಿಸಿಕೆ. ಈ ಹಿನ್ನೆಲೆಯಲ್ಲಿ ಈ ಕಾಲಘಟ್ಟದ ಬದುಕಿನ ವಿದ್ಯಮಾನಗಳನ್ನು ಸಣ್ಣಕತೆಗಳ ಮೂಲಕ ಕಟ್ಟಿಕೊಡುತ್ತಿರುವ  ಸತೀಶ್ ಚಪ್ಪರಿಕೆ ಅವರು ಒಬ್ಬ ಯಶಸ್ವೀ ಕಥೆಗಾರರಾಗಿದ್ದಾರೆ.

ಇವತ್ತು ಇಡೀ ಜಗತ್ತು ಕೋವಿಡ್-೧೯ ರ ಬಿಕ್ಕಟ್ಟಿನಲ್ಲಿ ನರಳುತ್ತಿರುವದಲ್ಲದೆ ಭಯ, ತವಕ-ತಲ್ಲಣ, ಸಾವು, ನೋವು, ಹಿಂಸೆಯಲ್ಲಿ ಮುಳುಗುವಂತಹ ಪರಿಸ್ಥಿತಿಯಲ್ಲಿದೆ. ಈ ಎಲ್ಲ ಒತ್ತಡಗಳ ನಡುವೆ ಸತೀಶ್ ಚಪ್ಪರಿಕೆಯವರು ತಮ್ಮ ಎರಡನೇ ಕಥಾಸಂಕಲನ ’ವರ್ಜಿನ್ ಮೊಹಿತೊ’ ವನ್ನು ಲೋಕಾರ್ಪಣೆ ಮಾಡಿರುವುದು ಸ್ವಾಗತಾರ್ಹ.

ಈ ಕಾಲಘಟ್ಟದಲ್ಲಿ ಸತೀಶ್ ಚಪ್ಪರಿಕೆಯವರು ಪತ್ರಿಕೋದ್ಯಮಕ್ಕೆ ವಿದಾಯ ಹೇಳಿ ಜೀವನ ನಿರ್ವಣೆಗಾಗಿ ಸಂಪೂರ್ಣ ಸ್ವಾತಂತ್ರ‍್ಯವಿರುವ ವ್ಯಾವಹಾರಿಕ ನೆಲೆಯಲ್ಲಿ ದುಡಿಯುವುದರ ಜೊತೆಗೆ ಐದು ದಶಕಗಳಲ್ಲಿ ತಮಗಾದ ಸುಂದರ ಅನುಭವಗಳನ್ನು ಶೋಧಿಸಿ; ಅಲ್ಲಿ ಒಲಿದ ಬದುಕನ್ನು, ಕಾಡಿದ ಆಲೋಚನೆಗಳನ್ನು, ಕಂಗೆಡಿಸಿದ ದೃಷ್ಟಿಕೋನಗಳನ್ನು, ಭಯೋತ್ಪಾದಕ  ಸಮಸ್ಯೆಗಳನ್ನು, ಸಾಮಾಜಿಕ ಬಿಕ್ಕಟ್ಟುಗಳಲ್ಲಿ ಸಿಕ್ಕಿಕೊಂಡಾಗ ತನ್ನೊಳಗೇ ಎದ್ದ ನೈತಿಕ ಪ್ರಶ್ನೆಗಳನ್ನು, ಹೋರಾಟದ ನಿಲುವುಗಳನ್ನು ವೈಯಕ್ತಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ,  ಜವಾಬ್ದಾರಿಯುತವಾಗಿ ತಮ್ಮ ಕತೆಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ “ವರ್ಜಿನ್ ಮೊಹಿತೊ” ಒಂದು ವಿಶಿಷ್ಟ ಕಥಾ  ಸಂಕಲನವಾಗಿದೆ. ಇದರಲ್ಲಿ ಬರುವ ಏಳು ಕತೆಗಳ ಹಿನ್ನೆಲೆಯಲ್ಲಿ ಒಬ್ಬ ಸಹೃದಯನಿಗೆ ಸ್ಪಷ್ಟವಾಗಿ ಅರ್ಥವಾಗುವ ಅಂಶವೆಂದರೆ ಸತೀಶ್ ಚಪ್ಪರಿಕೆಯವರ ಕೇಂದ್ರ ಪ್ರಜ್ಞೆಯು ಎಲ್ಲ ಇಸಂಗಳನ್ನು ಮೀರುವಂತದ್ದಾಗಿದೆ. ಮತ್ತು ಸಮಾಜಮುಖಿ ವ್ಯಕ್ತಿತ್ವಗಳು ಇಲ್ಲಿಯವರೆಗೆ ಅಂಟಿಸಿಕೊಂಡು ಬಂದಿರುವ ತಾತ್ವಿಕ ನಿಲುವುಗಳನ್ನು ಅದರ ಕೇಂದ್ರ ಪ್ರಜ್ಞೆಯಿಂದ  ಬಿಡುಗಡೆಗೊಳಿಸುವಂತದ್ದಾಗಿದೆ. ಅದರಲ್ಲೂ ಮುಖ್ಯವಾಗಿ ಶತಶತಮಾನಗಳಿಂದ ಪುರುಷ ಕೇಂದ್ರಿತ ನೆಲೆಯಿಂದ ದೂರವೇ ಉಳಿದಿರುವ, ಅಸಮಾನತೆಯನ್ನು ಅನುಭವಿಸುತ್ತಿರುವ ಸ್ತ್ರೀ ಸಮುದಾಯ ಪ್ರಜ್ಞೆಯನ್ನು ಎಲ್ಲ ಸಂಕೋಲೆಗಳಿಂದ ಬಿಡಿಸುವುದೇ ಆಗಿದೆ.  ಇದಕ್ಕೆ ‘ಹೈಡ್ ಪಾರ್ಕ್’ ಮತ್ತು ‘ವರ್ಜಿನ್ ಮೊಹಿತೊ’ ಕತೆಗಳಲ್ಲಿ ಬರುವ ಸ್ತ್ರೀ ಪಾತ್ರಗಳೇ ಸಾಕ್ಷಿ.

ಸತೀಶ್ ಚಪ್ಪರಿಕೆ ಅವರನ್ನು ಬಹುವಾಗಿ ಕಾಡುವ ಇನ್ನೊಂದು ವಿಷಯವೆಂದರೆ ‘ಸಂಬಂಧಗಳು’. ಜಾಗತೀಕರಣದ ಈ ಸಂದರ್ಭದಲ್ಲಿ ಸಂಬಂಧಗಳು ವಿಭಜನೆಗೊಳ್ಳುವ ಪ್ರಕ್ರಿಯೆಯಲ್ಲಿ ದಾಪುಗಾಲು ಹಾಕುತ್ತಿವೆ. ಅದರಲ್ಲೂ ಮುಖ್ಯವಾಗಿ ದಾಂಪತ್ಯ ಜೀವನ ಹಳ್ಳ ಹಿಡಿಯುತ್ತಿದೆ. ಗಂಡ-ಹೆಂಡತಿಯ ಮಧ್ಯೆ ಉಂಟಾಗಬಹುದಾದ ಬಿಕ್ಕಟ್ಟುಗಳಾಗಲಿ, ಭಿನ್ನಾಭಿಪ್ರಾಯಗಳಾಗಲಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕಿಂಚಿತ್ತು ಆಲೋಚನೆಗಳನ್ನೂ ಮಾಡದೆ,  ವಿಚ್ಛೇದನವೊಂದೆ ಪರಿಹಾರಕ್ಕೆ ದಾರಿ ಎಂಬ ಹೀನ ದೃಷ್ಟಿಕೋನದಿಂದ ಸುಂದರವಾದ ಬದುಕನ್ನು ಹಾಳುಮಾಡಿಕೊಳ್ಳುತ್ತಿವೆ. ಹೀಗೆ ಬಾಂಧವ್ಯಗಳು ಕೆಡಲು ಅಸೂಯೆ, ಅಹಂಕಾರ, ಅಪನಂಬಿಕೆ, ಕೋಪ, ಭ್ರಮೆ, ಅರೆತಿಳುವಳಿಕೆ, ಮೂರ್ಖತನಗಳೇ ಕಾರಣ. ಮತ್ತು ಇವು ಎಲ್ಲ ಕಾಲದಲ್ಲೂ ಇದ್ದಂತೆ ಈ ಡಿಜಿಟಲ್ ಕಾಲಘಟ್ಟದಲ್ಲೂ ಮುಂದುವರಿಯುತ್ತಿರುವುದರಿಂದ ಸಮಾಜದಲ್ಲಿ ಕುಟುಂಬ ವ್ಯವಸ್ಥೆಯೇ ಮುರಿದು ಬೀಳುವ ಹಾದಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಸತೀಶ್ ಚಪ್ಪರಿಕೆಯವರ ’ವರ್ಜಿನ್ ಮೊಹಿತೊ’ ಕಥಾ ಸಂಕಲನದಲ್ಲಿ ‘ಗರ್ಭ’ ಮತ್ತು ‘ದಾಸ’ ಕತೆಗಳನ್ನು ಹೊರತುಪಡಿಸಿದರೆ ಉಳಿದಿರುವ ನಾಲ್ಕು ಕತೆಗಳಲ್ಲಿ ಸಂಬಂಧಗಳ ಮುಖವಾಡಗಳು ಬಹಳ ಸ್ಪಷ್ಟವಾಗಿ ಎದ್ದು ಕಾಣುತ್ತವೆ. ಹಾಗೂ ಸಾಮಾನ್ಯವಾಗಿ ಬದುಕಿಗೆ ಅಗತ್ಯವಾದದ್ದಕಿಂತ ಮಿಗಿಲಾಗಿ ಗಳಿಸಲು ಮುಂದುವರಿಯುವ, ನಿರೀಕ್ಷೆಗಳನ್ನೇ ನಂಬಿ ಬದುಕುವ, ಅನುಭವಕ್ಕೆ ಬಂದ ವಿಕೃತಿಗಳಿಂದ ಆಚೆ ಬರಲಾಗದೆ ನರಳುವ, ಭ್ರಮೆಗಳನ್ನೇ ಸತ್ಯವೆಂದು ಅಪ್ಪಿಕೊಳ್ಳುವ, ವಾಸ್ತವವನ್ನು ಅರಿತುಕೊಳ್ಳದೆ ಅಪನಂಬಿಕೆಯಿಂದ  ವರ್ಜಿನ್ ಗಾಗಿ ಹಪಹಪಿಸುವ ಪಾತ್ರಗಳನ್ನು ಸತೀಶ್ ಚಪ್ಪರಿಕೆಯವರು ತಮ್ಮ ಕತೆಗಳಲ್ಲಿ ಎತ್ತಿ ತೋರಿಸಿರುವಂಥದ್ದು ಇವತ್ತಿನ ಕಾಲಮಾನಕ್ಕೆ ಅತ್ಯಗತ್ಯವಾಗಿದೆ.

ಈ ಘಟ್ಟದ ಕನ್ನಡ ಸಾಹಿತ್ಯ ಸೃಜನಶೀಲ ಪ್ರಕಾರಗಳಲ್ಲಿ ಒಂದಾದ ಸಣ್ಣಕತೆಗಳು  ಬರೆಹ ರೂಪದ ಜೊತೆಗೆ ಜಾಲತಾಣಗಳಲ್ಲಿ ವಾಚನದ ಮೂಲಕವೂ ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ ಸತೀಶ್ ಚಪ್ಪರಿಕೆಯವರ  ಕತೆಗಳಲ್ಲಿ ಕಥಾ ಬಂಧವನ್ನು ಇನ್ನೂ ಕಲಾತ್ಮಕವಾಗಿ ಕಟ್ಟಿಕೊಡಲು ಸಾಧ್ಯವಿದೆ ಎಂದನ್ನಿಸಿದರೂ ಭಾಷೆಯ ದೃಷ್ಟಿಯಿಂದ, ಶೈಲಿಯ ಸ್ವಂತಿಕೆಯಿಂದ, ಕತೆಗಳಿಗನುಗುಣವಾಗಿ ಮಾಡಿಕೊಂಡಿರುವ ಪಾತ್ರಗಳ ಆಯ್ಕೆಯಿಂದ, ಕತೆ ಕಟ್ಟುವ ಪ್ರಕ್ರಿಯೆಯಲ್ಲಿ ಸಾಕಷ್ಟು ಪಳಗಿರುವುದರಿಂದ ಅವರ ಈ ಸಂಕಲನದ ಏಳೂ ಕತೆಗಳು ಓದುಗರ ಹೃದಯವನ್ನು ಮುಟ್ಟುತ್ತವೆ  ಎಂಬುದು ನನ್ನ ನಂಬುಗೆ. ಮತ್ತು ಅವರಿಂದ ಇನ್ನಷ್ಟು ಕಥಾ ಸಂಕಲನಗಳು ಮೂಡಿಬರಲಿ ಎಂದು ಹಾರೈಸುತ್ತೇನೆ.

ಅಮೃತಹಳ್ಳಿ ಲಕ್ಷ್ಮೀನಾರಾಯಣ