Article

ಎಲ್ಲರೂ ಓದಿ ಅರಿಯಬೇಕಾದ ತಳಮಳ 'ಪದಕುಸಿಯೆ ನೆಲವಿಲ್ಲ'

ನಿಯಾಝ್ ಫಾರೂಖಿಯ 'An Ordinary Man's Guide to Radicalism' ಕೃತಿಯ ಅನುವಾದ, ಉಮಾಪತಿ ಅವರ, ' ಪದ ಕುಸಿಯೆ ನೆಲವಿಲ್ಲ' ಓದಿ ಮುಗಿಸಿದೆ. 

ಪತ್ರಿಕಾ ವೃತ್ತಿಯ ಹೆಸರಲ್ಲಿ ಅರ್ಧಸತ್ಯಗಳನ್ನು ಇಲ್ಲವೇ ಹಸೀ ಸುಳ್ಳುಗಳನ್ನು ಪ್ರಚಾರ ಮಾಡುವವರಲ್ಲಿ ಒಬ್ಬನಾದರೂ ಕಡಿಮೆಯಾದಾನೆಂಬ ಉದ್ದೇಶದಿಂದ ಪತ್ರಕರ್ತನಾದೆನೆಂದು ಹೇಳಿಕೊಂಡಿದ್ದಾರೆ, ನಿಯಾಝ್  ಫಾರೂಖಿ.

2008ರ ಸಪ್ಟೆಂಬರ್ ತಿಂಗಳ ಹತ್ತೊಂಬತ್ತರಂದು  ದೆಹಲಿಯ ಮುಸ್ಲಿಂ  ಬಾಹುಳ್ಯದ ಜಾಮಿಯಾ ನಗರದಲ್ಲಿ ನಡೆದ ಎನ್ಕೌಂಟರ್ ಸುತ್ತಣ ಈ ಕಥನ, ನೊಂದ ಮನದ ಭಾರತೀಯ ತರುಣನ ಆತ್ಮನಿವೇದನೆ. 

ಕಾಕ ಚೇಷ್ಟ, ಬಕೋ ಧ್ಯಾನಂ
ಶ್ವಾನ ನಿದ್ರಾ, ತಥೈವ ಚ
ಅಲ್ಪಾಹಾರಿ, ಗೃಹತ್ಯಾಗಿ
ವಿದ್ಯಾರ್ಥಿ ಪಂಚಲಕ್ಷಣಂ

ಎಂದು ತಾನು ಶಾಲೆಯಲ್ಲಿ ಕಲಿತಿದ್ದ ಶ್ಲೋಕವನ್ನರುಹಿ, ಅಂತೆಯೇ  ವಿದ್ಯೆಗಾಗಿ ಮೊಮ್ಮಗನನ್ನು ದೂರದ ದೆಹಲಿಗೆ ಕಳುಹಿಸಿಕೊಟ್ಟ ದಾದಾ. ಹದೀಸ್, ಕಬೀರ್ ದಾಸನ ದೋಹಾಗಳು, ಅಮೀರ್ ಖುಸ್ರೋ ಒಗಟುಗಳು, ಚಾಣಕ್ಯನ ಉಪದೇಶಗಳು, ಗಾದೆಗಳು, ವಿವೇಕದ ಮಾತುಗಳು, ಕವಿವರ್ಯ ಮಹಮದ್ ಇಕ್ಬಾಲರ ಗೀತೆಗಳು ಸದಾ ಅನುರಣಿಸುತ್ತಿದ್ದ ಮನೆಯಿಂದ ಬಾಲಕ ಫಾರೂಖಿ ದೆಹಲಿಯ ಜಾಮಿಯಾ ನಗರಕ್ಕೆ ಬಂದಿಳಿದು ವಿದ್ಯಾಭ್ಯಾಸ ಪಡೆದ ವಿವರ.

ಗಬ್ಬು ನಾರುವ ಯಮುನಾ ದಂಡೆಯ ಮುಸ್ಲಿಂ ಘೆಟ್ಟೋಕರಣ ಪ್ರದೇಶದ ಆವಾಸದಲ್ಲಿರುತ್ತಾ,  ತಾನು ಬಯಸಿದ  ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಕೊನೆಗೂ ಪ್ರವೇಶ ಪಡೆದ 22ರ ತರುಣ. ತನ್ನ ಆವಾಸದಿಂದ ಕೇವಲ  200 ಮೀಟರ್ ದೂರದ ನಿವಾಸದಲ್ಲಿ ತನ್ನಂತಹದೇ ಸಾಮಾನ್ಯ ತರುಣರಿಬ್ಬರನ್ನು ಎನ್ಕೌಂಟರ್ ನಲ್ಲಿ ಹೊಡೆದುರುಳಿಸಿದ್ದನ್ನು  ಅರಿತಾಗ ಛಿದ್ರವಾಗುವ ಅವನ ಲೋಕ!

ಮಸೀದಿಯಲ್ಲಿ ದುವಾದ ನಡುವೆ ಅತ್ತ ಇಮಾಮ್. ಶಾಂತಿ ಕಾಪಾಡುವಂತೆ ಇತ್ತ ಕರೆ. " ಪ್ರಾರ್ಥನೆ, ಅನುಕಂಪ, ಕಾರುಣ್ಯದ ಮಾಸವಿದು. ದೇವನು ಎಲ್ಲವನ್ನೂ ನೋಡುತ್ತಾನೆ.ಮತ್ತು ಅವನು ನ್ಯಾಯಪೂರ್ಣನು." ಎಂಬ ಸಾಂತ್ವನ.
ಆ ಅಮಾಯಕರಿಗಾದ ಗತಿಗೆ ಬೆದರಿ ಜಾಮಿಯಾ ತೊರೆದು ದೆಹಲಿ ಬಿಟ್ಟು ತಂತಮ್ಮ ಊರಿಗೆ ಮರಳಿದ ಗೆಳೆಯರು.

ತೊಂಬತ್ತೆರಡರ ಮುಂಬೈ ದಂಗೆಯ ಸುಲೇಮಾನ್ ಬೇಕರಿ ಪ್ರಕರಣದಲ್ಲಿ  ಅಲ್ಲಿ ಇಮಾಮ್ ಆಗಿದ್ದ ತನ್ನ ಪೋಲಿಯೋ ಪೀಡಿತ ಬಂಧುವನ್ನು ಪೊಲೀಸ್ ಕ್ರೌರ್ಯಕ್ಕೆ ಕಳಕೊಂಡ ಅಮ್ಮಿಯ ಕಾತರ! 

ಸಂಶಯಾಸ್ಪದವಾಗಿರ ಬಹುದಾದ ಎಲ್ಲ ಸಂಪರ್ಕಗಳನ್ನೂ ಕಳಕೊಂಡು ಏಕಾಕಿಯಾದ ಜೀವ! ಅಂತರ್ಮುಖಿಯಾಗಿ ಚಿಪ್ಪಿನೊಳಕ್ಕೆ ಸೇರಿದ ಯುವಕರು! ಆಶೆ, ಭರವಸೆ, ಹೆಮ್ಮೆ, ಸ್ವಚ್ಛಂದ ಬದುಕು ಎಲ್ಲವನ್ನೂ ಕಳೆದುಕೊಂಡವರು. ಆತ್ಮವಿಶ್ವಾಸದಿಂದಿರುವುದು, ಗಡ್ಡ ಬೋಳಿಸಿಕೊಂಡಿರುವುದು, ಗಡ್ಡ ಬಿಟ್ಟಿರುವುದು, ಉದ್ಯೋಗದಲ್ಲಿರುವುದು, ನಿರುದ್ಯೋಗಿಯಾಗಿರುವುದು- ಯಾವುದು ತಪ್ಪು, ಯಾವುದು ಸರಿ ಎಂದು ತಿಳಿಯಲಾರದ ಸಾಧಾರಣ ಮಾನವ ಜೀವಿಗಳು!

ಬ್ರಿಟಿಷರು ನಡೆಸುವ, ನೆರವು ನೀಡುವ ಅಲಿಘರ್ ವಿಶ್ವ ವಿದ್ಯಾಲಯವನ್ನು ತೊರೆಯುವಂತೆ ಗಾಂಧೀಜಿ ನೀಡಿದ  ಕರೆಯಂತೆ, ಹಾಗೂ ದೇಶ ವಿಭಜನೆಯನ್ನು ವಿರೋಧಿಸಿದ ಮೌಲಾನಾ ಅಬ್ದುಲ್ ಕಲಾಮ್ ಅಜಾದ್, ಡಾ..ಝಾಕೀರ್ ಹುಸೇನ್, ಮೌಲಾನಾ ಮಹಮದ್ ಆಲಿ ಜೌಹರ್ ,  ಎಂ.ಎ.ಅನ್ಸಾರಿ, ಹಮೀದ್ ಅಜ್ಮಲ್ ಖಾನ್ ಮುಂತಾದವರು ಸ್ಥಾಪಿಸಿದ  ರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾಲಯ ಜಾಮಿಯಾ ಮಿಲಿಯಾದ ಹುಟ್ಟು ಹಾಗೂ ಉಳಿವಿನ ಚಿತ್ರಣ.

"ಹಸರತ್ ಹೆ ಹಮಾರೀ ಹೇ ಹಮ್
ದೇಶ್ ಕೇ ಖಾತಿರ್  ಮರ್ ಮಿಠ್ ಜಾಯೇಂ
ದೇಶ್ ಕೇ ಖಾತಿರ್ ಕಾಮ್ ಆಯೇಂ
ಹಮ್ ಮಾಂಗೇ ಯಹೀ ದುವಾಂ
ಎಂದು ಮೊಮ್ಮಕ್ಕಳಿಗೆ ದಾದಾ ಬರೆದಿತ್ತ ಹಾಡುಗಳು ಅವನ ಸೂಟ್ ಕೇಸ್ ನಲ್ಲಿ.

ಪುಟ ಪುಟಗಳಲ್ಲೂ ಉಧ್ಧೃತವಾದ ಕವಿ ಇಕ್ಬಾಲ್ ರ 'ಫರಿಂದೇ ಕೀ ಫರಿಯಾದ್'ನಂತಹ  ಕವಿತೆಗಳು, ಕಬೀರನ ದೋಹಾಗಳು, ಘಾಲಿಬ್ ನ ಕವಿತೆಗಳು, ದಾದಾ ಬರೆದಿತ್ತ ಖ್ವಾಮೀ ಏಕತೆಯ ಕವಿತೆಗಳು, ಸ್ವತಃ ಕವಿ ಫಾರೂಖಿ ರಚಿಸಿದ ದ್ವಿಪದಿಗಳು ಮನದಲ್ಲಿ ಅಚ್ಚೊತ್ತಿ ಉಳಿಯುತ್ತವೆ.

ದೇಶದ ಪ್ರಸಕ್ತ ಪರಿಸ್ಥಿತಿಯನ್ನು ಉಲ್ಲೇಖಿಸಿದ  ಅನುವಾದಕನ ಟಿಪ್ಪಣಿಯ ಮಹತ್ವ!

ಎನ್ಕೌಂಟರ್ ನಡೆದ ಐದನೆಯ ದಿನ ಕರೆದ ವಿದ್ಯಾರ್ಥಿಗಳ ಸಭೆಯಲ್ಲಿ ಉಪಕುಲಪತಿ ಮುಶೀರುಲ್ ಹಸನ್ ತನ್ನ ವಿದ್ಯಾರ್ಥಿಗಳಿಗೆ ನೀಡಿದ ಆಶ್ವಾಸನೆಯ ಭರವಸೆಯ ಚಿತ್ರ! 

ತಾಯಿ ಭಾರತಿಯ ನೆಲದಲ್ಲಿ ಸರ್ವರೂ ಸಮಾನರಾಗಿರುವಾಗ , ಅಸುರಕ್ಷೆಯ ಭಾವದಿಂದ ಸಹವಾಸಿಗಳು ನಲುಗುವಂತಾಗುವ ಕೆಟ್ಟದಿನಗಳು  ಇನ್ನೆಂದೂ ಬರದಿರಲೆಂದೇ ಪ್ರಾರ್ಥನೆ. 

ಎಲ್ಲರೂ ಓದಿ ಅರಿಯಬೇಕಾದ ತಳಮಳ 'ಪದಕುಸಿಯೆ ನೆಲವಿಲ್ಲ'.

 

ಶ್ಯಾಮಲಾ ಮಾಧವ