Article

ಗಾಢ ಭಾವದ ’ಒಡಲ ಖಾಲಿ ಪುಸ್ತಕ’

ಕೊಪ್ಪಳದ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲರ ಆರೋಗ್ಯ ವಿಚಾರಿಸಲು ಹೋದಾಗ ಸಾಹಿತ್ಯದ ಚರ್ಚಿಸುತ್ತಾ ತಮ್ಮ 'ಒಡಲ ಖಾಲಿಪುಟ' ಪುಸ್ತಕದ ಪ್ರಸ್ತಾಪ ಬಂತು. ಆ ಪುಸ್ತಕದ ಜೊತೆಗೆ ಇನ್ನೊಂದೆರಡು ಪುಸ್ತಕವನ್ನು ಕೈಯಲ್ಲಿಟ್ಟು ಅತ್ಯಂತ ಪ್ರೀತಿಯಿಂದ ಓದಲು ಸೂಚಿಸಿದರು. ಅದು ಕಾವೇರಿ ಎಸ್. ಎಸ್. ಅವರ 'ಒಡಲ ಖಾಲಿ ಪುಟ' ಓದಲು ಆರಂಭಿಸಿದಾಗ ಮೊದಲ ಮಾತಿನಲ್ಲಿ ಪ್ರತಿಕ್ರಿಯೆ, ಸಲಹೆ ಸೂಚನೆಯನ್ನು ಲೇಖಕರು ಮನವಿಸಿದ್ದು ಹೊಸ ನಡೆ ಸ್ವೀಕಾರ ಮನೋಭಾವ ಹಿಡಿಸಿತು.

'ತುಪ್ಪದ ಬಣ್ಣ' ಈ ಸಾಲು ಅದ್ಭುತ ಕಲ್ಪನೆ ಇದು ಹೊಸ ಶಬ್ದದ ಪ್ರಯೋಗ ಅನಿಸುತ್ತೆ ನನ್ನ ಮಟ್ಟಿಗೆ, ಇದನ್ನು ಇದುವರೆಗೂ ನಾನು ಎಲ್ಲಿಯೂ ಗಮನಿಸಿಲ್ಲ. ಹುಡುಗರು ಸಿನಿಮಾ ಪೋಸ್ಟರ್ ನೋಡಿಬರುವಂತೆ, ಹುಡುಗಿಯರು ಆ ವಯಸ್ಸಿನಲ್ಲಿ ಟೈಲರ್ ಹೊಲಿದು ಹಾಕಿದ್ದ ಲಂಗಾ ನೋಡಿ ಖುಷಿಪಡುವ ರೂಪಕವಾಗಿ ಚೆನ್ನಾಗಿದೆ, ಸಹಜವಾಗಿದೆ. ಕಾವೇರಿ ಎಸ್. ಎಸ್. ಬರಹದಲ್ಲಿ ಅಣ್ಣನ ಬಗ್ಗೆ ಇರುವ ಪ್ರೀತಿಯು ಅಲ್ಲಲ್ಲಿ ಕಂಡುಬರುತ್ತದೆ. ಅದು ಬಹುತೇಕ ಲೇಖನಗಳಲ್ಲಿ ಪುನರಪಿ ಆಗಿದೆ. ಅದರಿಂದಾಗಿ ಅಣ್ಣನ ಪ್ರೀತಿ ಎಂತಹ ಗಾಢ ಎನ್ನುವ ಭಾವ ಪ್ರತಿ ಸಾಲಿನಲ್ಲೂ ಅನಾವರಣಗೊಂಡಿದೆ. ಪದವಿಯಲ್ಲೂ ಪ್ರೌಢಶಾಲೆಯ ಕಾಲಮಾನದ ಡ್ರೆಸ್ಗಳನ್ನು ಬಳಸಿದ್ದು ಒಂದಡೆಯಾದರೆ ದೇಹದ ಶಿಸ್ತು ಸೂಕ್ಷ್ಮವಾಗಿ ಹೇಳುತ್ತೆ ಆ ಪ್ರಸಂಗ.

ಡಾ:ರಾಜಕುಮಾರ್ ಅವರ ಡ್ರೆಸ್ಸಿನ ಅಳತೆ ಕೊನೆವರೆಗೂ ಅದೇ ಇದ್ದಂತೆ ಅದನ್ನ ನೆನಪಿಗೆ ಬಂತು ಓದುವಾಗ. ಘಾಸಿಗೊಂಡ ಚಿಕ್ಕಂದಿನ ಆಸೆಗಳ ಮೇಲೆ ಕಾವೇರಿ ಎಸ್. ಎಸ್. ಅವರು ತೀರಿಸಿಕೊಳ್ಳುವ ಗುಣಾತ್ಮಕ ಸೇಡು ಪರಿಯಂತೂ ಅನುಕರಣೀಯ. ಅದು ಸ್ವಸ್ಥ ಮನಸ್ಸಿನ ಗಟ್ಟಿತನ, ಶ್ರೇಷ್ಠತನ ಓದುಗನಿಗೆ ಕಟ್ಟಿಕೊಡುತ್ತದೆ. ಇನ್ನು ಪ್ರವಾಸದ ಅನುಭವಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದ ಬರಹವಿದೆ, ಅದರಲ್ಲೂ ಮಹಿಳೆಯರು ಇಂದಿಗೂ ಅನುಭವಿಸುತ್ತಿರುವ 'ಜಲಭಾದೆ' ಕುರಿತು ಬಹಿರಂಗವಾಗಿ ಬರೆದುಕೊಂಡಿದ್ದು ಕಡಿಮೆ, ಸಹಸಹಜವೆಂದು ಸರಳೀಕರಿಸುವರೆ ಹೆಚ್ಚು ಆದರೆ ದಾಖಲಿಸಿದ್ದು ಬಹಳ ಕಡಿಮೆ, ಈ ಹಿಂದೆ ಜಲಬಾಧೆ ಕುರಿತು ದಾಖಲಿಸಿದ್ದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಒಮ್ಮೆ ಶೃಂಗಸಭೆಯಲ್ಲಿ ಪಾಲ್ಗೊಂಡು, ಅಲ್ಲಿಂದ ಪುನಃ ಭಾರತಕ್ಕೆ ಬಂದು ಸಂಘಟಕರಿಗೆ ಒಂದು ಪತ್ರ ಬರೆದರಂತೆ ಅದರಲ್ಲಿ ಅವರು ಅಲ್ಲಿ ಅನುಭವಿಸಿದ ಜಲಬಾಧೆಯನ್ನು ವಿವರಿಸಿದ್ದರಂತೆ, ಎಂದು ಓದಿದ್ದೆ. ಆ ನಂತರ ಜಲಭಾದೆಯ ತೊಂದರೆ ಕುರಿತು ಓದಿದ್ದು ಕಾವೇರಿ ಎಸ್ ಎಸ್ ಅವರ ಬರಹದಲ್ಲೇ. ಇನ್ನೂ ಮಹಿಳೆ 100ರೂಪಾಯಿ ಕೇಳುವ ಹಂತಕ್ಕೆ ಸಮಾಜ ದೂಡಿದ್ದಕ್ಕೆ ಕಾವೇರಿ ಎಸ್‌ ಎಸ್ ಅವರ ಸ್ಪಂದನೆ , ಅವರ ಸಾಮಾಜಿಕ ಕಳಕಳಿ ಎಂತಹದೆಂದು ಆ ಬರಹದ ಸಾಲು ಸಾಲು ಸಮಾಜಕ್ಕೆ ಕೂಗಿ ಕೂಗಿ ಹೇಳುತ್ತೆ.

ಓದುಗರ ಗಮನಕ್ಕೆ ತರಬೇಕಾದ ವಿಷಯವೇನೆಂದರೆ, ಈ ಪುಸ್ತಕದಲ್ಲಿನ ಬರಹಗಳು ಅನುಭವಗಳ ಮೂಸೆಯಿಂದ ಅರಳಿದಂತವು, ಇದನ್ನು ಬಹುತೇಕ ಆತ್ಮಕತೆಯ ಪೀಠಿಕೆ ಎಂದು ನಾನು ಭಾವಿಸಿದ್ದೇನೆ, ಓದಿದಾಗ ಖಂಡಿತ ನಿಮಗೂ ಹಾಗೇ ಅನಿಸುತ್ತೆ, ಅದರೆ ಸದರಿ ಪುಸ್ತಕ ಅಂತಿಮ ಗೊಳಿಸುವಾಗ ಬಾಲ್ಯದಿಂದ.... ಕ್ರಮವಾಗಿ ಬರಹಗಳು ಅನುಕ್ರಮವಾಗಿ ಜೋಡಿ ಸಬೇಕಿತ್ತು ಅದರಿಂದ ಇನ್ನೂ ಓದುಗರಿಗೆ ಖುಷಿ ಕೊಡುತ್ತಿತ್ತು, ಮರುಮುದ್ರಣ ದಲ್ಲಾದರೂ ಸರಿಪಡಿಸಲಿ. 'ಮಳೆಯ ಹೆಜ್ಜೆ ಗುರುತ”, 'ಓದುತ್ತಾ ಲಂಕೇಶ್ ಅವರ ಸಾಲು’, ’ಮನಕೆ ಕಾರಂಜಿಯ ಸ್ಪರ್ಶ'ದಂತೆ ಭಾಸವಾಯಿತು. ಬಸ್ಸಿನಲ್ಲಿ ಒಂದು ಭಾವನಾಲೋಕ ಅನಾವರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಾ ಕಾವೇರಿ ಎಸ್ ಎಸ್ ಅವರು, ಹಾಗೆ ಪ್ರಯಾಣದಲ್ಲಿ ಬಹುದಿನಗಳಿಂದ ಮಹಿಳೆಯರು ಅನುಭವಿಸುತ್ತಿರುವ ದೊಡ್ಡ ಸಮಸ್ಯೆ,' ಬ್ಯಾಡ ಟಚ್' ಅದು ಪುರುಷರು ಸೃಷ್ಟಿಸುವ ಕೃತಕ ಸಮಸ್ಯೆ, ಇದು ಎಲ್ಲಾ ಕಾಲದಲ್ಲೂ ಎಲ್ಲಾ ಕಡೆಯೂ ಬಹುತೇಕ ಕಂಡು ಬರುವ ರೋಗ, ಎಂತಹ ಧರ್ಮದ ಏಟು ನೀಡಿದರು.

ದೂರದಿಂದ ಕಣ್ಣಿನಿಂದಲೇ ನೆಕ್ಕುವರ ಬ್ಯಾಡ್ ಸಿಯಿಂಗ್' ರೂಪಾಂತರ ಗೊಂಡಿದೆ.... ಇನ್ನು ವಧು-ವರರ ಕುರ್ಚಿಗಳಲ್ಲಿ ಜೀವಂತಿಕೆ ಕಂಡ ತಮ್ಮ ಆಲೋಚನೆ ಲಹರಿಗೆ ಅಭಿನಂದನೆಗಳು, ಹಾಗೂ ಅಣ್ಣನ ನೆನಪಿನಂತೆ ನಿದ್ರಾದೇವತೆ ಆಲಿಂಗನ ,'ಮದುವೆ ಹಿನ್ನೆಲೆಯಲ್ಲಿ ' ಬರಹದಲ್ಲಿ ಅಣ್ಣನ ಪ್ರೀತಿ ಒಡನಾಟ ಮುಂದುವರೆದಿದೆ. ಬರಹದ ಕೊನೆಯಲ್ಲಿ ಕಾವೇರಿ ಅವರು ಬರದಂತೆ, ’ಪ್ರೀತಿ ವಿಶ್ವಾಸದ ಕೊರತೆ ಇದ್ದಂತೆ, ಅಪ್ರಿಯ ವಿಷಯಗಳನ್ನ ಹೆಚ್ಚು ’ ಎನ್ನುವ ಸಾಲು ನನಗೆ ಹಿಡಿಸಿತು. ಈ ಪುಸ್ತಕದ ಭಾಗ -೨ ರಲ್ಲಿ ಗಂಭೀರವಾದ ವಿಚಾರಗಳನ್ನು ಮನಮುಟ್ಟುವಂತೆ ಬರೆದಿದ್ದಿರಾ, ಎಲ್ಲಾ ಬರಹಗಳು ಇಷ್ಟವಾದವು ಕಾರಣ ಸಮಾನ ಮನಸ್ಕತೆ. ಒಟ್ಟಾರೆ ಹೇಳುವುದಾದರೆ ,' ಒಡಲ ಖಾಲಿ ಪುಟ' ಓದ ಬಹುದಾದ ಪುಸ್ತಕ .ಇನ್ನೂ ನನಗೆ ಯಾಕ ಇಷ್ಟವಾಯಿತೆಂದರೆ ಬರೆಯಬೇಕು ಎಂದು ಕುಳಿತು, ಬರೆದ ಬರಹಗಳಿಲ್ಲ ಇಲ್ಲಿರುವುದು ಕೇವಲ ಭಾವ ಜನ್ಯ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ವಿಜಯ ಅಮೃತರಾಜ್