Article

ಗದ್ಧಲಗಳ ಮಧ್ಯೆ ಕೈಹಿಡಿದು ಓದಿಸುವ ‘ಕಥಾಗತ’

ಸಣ್ಣ ಕಥೆಗಳು ಓದದೆ ಬಿಟ್ಟು ಬಹಳ ದಿನಗಳಾಗಿತ್ತು. ಬದುಕಿನ ಗದ್ದಲಗಳ ಮಧ್ಯೆ ಮೌನವಾಗಿ ಕೈಹಿಡಿದು ಓದಿಸಿದ ಕಥಾಸಂಕಲನವಾಗಿ ನನಗೆ ಕಥಾಗತ ಕಾಣುತ್ತಿದೆ.

ಕಥಾಸ್ಪರ್ಧೆಗಳ ನೆಪದಲ್ಲಿ ಹೊಟ್ಟೆಪಾಡಿಗಾಗಿಯೇ ಕಥೆ ಬರೆದೆನೆಂದು ಹೇಳುವ ಮಂಜುನಾಥ ಲತಾ ಅವರ ಪ್ರಾಮಾಣಿಕತೆ ಇಷ್ಟವಾಯ್ತು. "ಬಡತನದ ಹಿನ್ನೆಲೆಯಿಂದ ಬಂದ ಬಹುತೇಕ ಪ್ರತಿಭಾವಂತ ಬರಹಗಾರರಿಗೆ ಇಂತಹ ಪ್ರಶಸ್ತಿಗಳೆ ಆಸರೆಯಂಬಂತೆ ಒದಗಿವೆ "- ನಟರಾಜ್ ಹುಳಿಯಾರ್.

ಇಲ್ಲಿ ನಾ ಓದಿದ ಕಥೆಗಳೆಲ್ಲವೂ, ಕಥೆಗಾರ ತನ್ನ ಕಥೆಗಳ ಮೂಲ ಸೆಲೆಯಾದ ತನ್ನ ಹಟ್ಟಿಯೊಳಗೆ ನಿಂತು ಅಥವಾ ಒಮ್ಮೊಮ್ಮೆ ಅದರಾಚೆ ಜಿಗಿದು ಸೂಕ್ಷ್ಮವಾಗಿ ತನ್ನ ಪರಂಪರೆಯೊಂದಿಗೆ ಸಂವಾದಿಸುತ್ತಾ, ಹೊರಗಿನ ಕಣ್ಣಿನೊಂದಿಗೆ ಒಳಮನೆ ನೋಡುತ್ತಾ, ಒಳಮನೆಯ ಕಣ್ಣಿನೊಂದಿಗೆ ಹೊರ ಜಗತ್ತು ನೋಡುತ್ತಿರುವುದು ಈ ಕಥೆಗಳಲ್ಲಿ ಕಾಣಬಹುದಾಗಿದೆ. ಆ ಕಾರಣಕ್ಕಾಗಿಯೇ ಈ ಕಥೆಗಳು ರಚನೆಯ ದೃಷ್ಟಿಯಿಂದಲೂ ಸಹ ನನಗೆ ಹೊಸ ಕಲಿಕೆಗಳಂತೆ ಕಾಣುತ್ತಿವೆ.

ಇಲ್ಲಿನ ಎಲ್ಲಾ ಕಥೆಗಳು ಒಂದಕ್ಕೊಂದು ಅಂಟಿಕೊಂಡು ಬೇರೆಯಾಗಿ ಬದುಕಲು ಸಾಧ್ಯವೆ ಇಲ್ಲದಂತಿವೆ. ಒಳಗಲ ಜೋತಿಯ ಕಥೆ ಓದಿದವನಿಗೆ ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು ಒಂದು ರೀತಿಯಲ್ಲಿ ಮುಂದುವರಿಕೆಯ ತಂತು ಎನಿಸುತ್ತದೆ. ಒಳಗಲ ಜೋತಿಯ ಕಥೆಯ ಮಿಣುಕಿ, ಜವರಿ, ಸಿಡಿಯ, ದ್ಯಾವಪ್ಪ, ಯೋಗೀಶ ಎಲ್ಲರೂ ಒಂದೊಂದು ನೆಲೆಯಲ್ಲಿ ನಿಂತು ಅಲ್ಲಿಂದ ಜಿಗಿಯುವ, ನಿರಾಳರಾಗುವ ಒದ್ದಾಟದಲ್ಲಿರುವಂತೆ ಕಾಣುತ್ತದೆ.ಈ ಕಥೆ ನನಗೆ ಒಂದು ಜಾನಪದ ಕಾವ್ಯದಂತೆ ಓದಿಸಿಕೊಂಡಿತು.

" ಈ ಕಥೆಯೇ ಓ ಕಥೆಯೇ...ಹಿಂದಕೆ ಹೋಗು...ಸಿಡಿಯನ ಅಪ್ಪ ದಡಕಯ್ಯನು ದ್ಯಾವಪ್ಪನ ಅಪ್ಪ ಸಾಂತಪ್ಪನ ಕಾಲದಲ್ಲಿ ಆ ಹಟ್ಟಿಯ ಜೀತಗಾರನಾದ ಕಾಲದ ದಂಡೆಗೆ ಹೋಗು...ಈ ಕಥೆಯೇ ಓ ಕಥೆಯೇ ...ಈ ಕಾಲದಿಂದ ಆ ಕಾಲಕೆ ಹೋಗು"-ಈ ಸಾಲುಗಳು ಓದುವಾಗ ಒಟ್ಟಾರೆ ಕಥೆ ತಿಳಿದುಕೊಳ್ಳಲು ದಾರಿ ತೋರಿಸಿದಂತೆ ಭಾಸವಾಯಿತು. ಇಲ್ಲಿ ದ್ವಾವಪ್ಪ, ಅವನ ಮಗ, ಜವರಿ ಮಿಣುಕಿಯ ಸೆರಗುಗಳಲ್ಲಿ ಬಿದ್ದಿರುವಾಗ ಸಿಡಿಯನ ಮಗನಿಗೆ ಇದು ಸೇಡಿನ ರೂಪ ಪಡೆದರೆ. ಸಿಡಿಯನಿಗೆ ಹೊಸ ಬದುಕು ಕಟ್ಟಿಕೊಳ್ಳುವ ಒದ್ದಾಟ ಮತ್ತು ಮೂಲದಿಂದಾಚೆ ಜಿಗಿಯುವ ಸಮಸ್ಯೆ. ಕೊನೆಗೆ ಧಣಿ ದ್ಯಾವಪ್ಪನ ಮನೆ ಬೆಳಕಾಗುವ ಈ ಸಿಡಿಯನ ಕುಟುಂಬದ ಮನೆಮಂದಿಯ ಮಮತೆ ಜಾನಪದದ ಕಥೆಗಳಂತೆ ಬೆಳಕಿನೊಂದಿಗೆ ಮುಕ್ತಾಯವಾಗುತ್ತದೆ. ಈ ಕಥೆ ನನ್ನ ಮೊದಲ ಓದಿಗಿಷ್ಟು ಕಂಡಿದೆ. ಅಂದ್ರೆ ಇದರೊಳಗೆ ಅದೆಷ್ಟೋ ಉಪಕಥೆಗಳು, ಬೆರಗುಗೊಳಿಸುವ ಕಾವ್ಯ ಸಾಲುಗಳು ಅನಂತವಾಗಿವೆ.

ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು : ಯಾರೇ ಊರಲ್ಲಿ ಸತ್ತರೂ ಅಲ್ಲಿ ಹಾಡಲು ಸಿದ್ಧರಿರುವ ಚೆನ್ನಮಲ್ಲನು, ಕುಮಾರಸ್ವಾಮಿ ತಂಡದ ಕಥೆ ಇದು. ಪರಂಪರಾಗತವಾಗಿ ಬಂದ ನುಡಿಗಳು ಹಾಡಿ ಅಲ್ಲೇ ಉಳಿದು ಬಿಡುವ ಮತ್ತು ಬದುಕು ಹಸಿವಿಗೆ ತೆರೆದಿಟ್ಟು ಓಡಾಡುವ ಚೆನ್ನಮಲ್ಲ ಒಂದು ಕಡೆಯಾದರೆ, ನೆಲ ಮೂಲದ ಹಾಡುಗಳಿಗೆ ಬೆನ್ನು ಮಾಡಿ ಹೊಸ ಕಾಲದ ರಂಜನೀಯ ಹಾಡುಗಳಿಗೆ ಜಿಗಿದು ಹೊಟ್ಟೆ ತುಂಬಾ ಊಟ, ಮನೆ ಕಾಣುತ್ತಿರುವ ಕುಮಾರಸ್ವಾಮಿಯ ಕಥೆ ಒಂದು ಕಡೆ. ಕಾಲದ ಬದಲಾವಣೆಯಲ್ಲಿ ಹಳೆ ಕಾಲದ ನುಡಿಗಳು ಬಂದು ನಿಂತಿರುವ ಅಥವಾ ಅವು ಹೊಸ ಕಾಲದ ಅನಿವಾರ್ಯತೆಗಳಿಗೆ ಪ್ರಿಯವಾಗುವವೆ ಅಥವಾ ಅವುಗಳನ್ನೇ ನಂಬಿಕೊಂಡಿರುವವರ ಬದುಕು ಸಾಗಿಸಬಲ್ಲವೇ? ಎನ್ನುವ ನೂರಾರು ಪ್ರಶ್ನೆಗಳು ತಲೆಯಲ್ಲಿ ಈ ಕಥೆ ಬಿಡುತ್ತದೆ.

ಹಸಿರು ಗಾಜಿನ ಬಳೆ ಕಥೆಯೂ ರಚನೆಯ ದೃಷ್ಟಿಯಿಂದಲೂ ಮತ್ತು ಕಥನ ತಂತ್ರ ಹಾಗೂ ನಿರೂಪಣಾ ಶೈಲಿಯಿಂದಲೂ ತುಂಬಾ ಗಮನ ಸೆಳೆದ ಕಥೆ. ಮುಟ್ಟಾದ ಹೆಣ್ಣು, ಪಾವಿತ್ರ್ಯತೆ, ಮಡಿ- ಮೈಲಿಗೆ, ಹಸಿದ ಮನುಷ್ಯ ನಾಯಿಗಳ ನಾಲಿಗೆ ಚಪಲ, ಕುಟ್ಟಿ ಚೂರಾದ ಬಳೆಗಳು, ಕೆಂಡಗಳ ಪ್ರತಿರೋಧ, ಹೀಗೆ ಈ ಕಥೆ ಒಂದೇ ಚೌಕಟ್ಟಿನಲ್ಲಿ ಸಿಲುಕಿಸಲಾಗದ, ಅಲ್ಲಿಂದ ನಿರಂತರವಾಗಿ ಏನೇನೋ ಆಗಿ ಬೆಳೆಯುವ ಈ ಕಥೆ ಒಂದೆರಡು ಓದಿಗೆ ದಕ್ಕುವುದು ಕಷ್ಟ.

ನಗೆ ಕುಲದ ದೇವರು ಕಥೆ ಊರ ಹಾದರಗಳೆಲ್ಲ ಮುಕ್ತವಾಗಿ ಮರ ಹತ್ತಿ ಹೇಳುವ ಒಂದು ಪರಂಪರೆ ಕಾಲಾಂತರದಲ್ಲಿ ಅದು ಪ್ರತಿಷ್ಠೆಯ ಕೊಳ್ಳಿಯಾಗಿ, ಬದುಕಿನ ಅನಿವಾರ್ಯತೆಯಿದ್ದವನ ಬುಡಕ್ಕೆ ಬೆಂಗಿ ತಗುಲಿಸುವ ಈ ಕಥೆಯ ಕಲ್ಪನೆ ಭಿನ್ನ ಅನಿಸಿತು.

ಸನ್ ಆಫ್ ಸಿದ್ದಪ್ಪಾಜಿ ಕಥೆ ನನಗೆ ಈ ಕಾಲಘಟ್ಟದಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತಿದೆ. ಹೋರಾಟದ ಮುಖವಾಡದ ಹಿಂದೆ ತನ್ನದೇ ಜನರಿಗೆ ತುಳಿಯುವ ಕಾಲುಗಳು, ಹುಸಿ ಹೋರಾಟಗಳು ನಂಬಿಕೊಂಡು ಹಸಿವಿನಿಂದ ನರಳುವ ಜೀವಗಳು ಎಲ್ಲವೂ ಸಹ ಈ ಕಥೆಯಲ್ಲಿ ಸೂಕ್ಷ್ಮವಾಗಿ ನಮಗೆ ಕಾಣಿಸಿದ್ದಾರೆ ಕಥೆಗಾರರು.

"ಒಳಗಲ ಜೋತಿಯು" ಹಸಿರು ಗಾಜಿನ ಬಳೆ ಇವು ಎರಡು ಕನ್ನಡದ ಶ್ರೇಷ್ಠ ಕತೆಗಳ ಸಾಲಲ್ಲಿ ನಿಲ್ಲಬಲ್ಲವು - ರಹಮತ್ ತರೀಕೆರೆ.

ತರಿಕೇರೆ ಸರ್ ಅವರ ಮಾತುಗಳಂತೆ ನನಗೆ ಈಗಲೂ ಕೈಗೆ ಸಿಗದೆ ಜಾರುತ್ತಿರುವ, ಬೆಳೆಯುತ್ತಿರುವ, ಒಡಲೊಳಗಿನ ಧ್ವನಿ ಎನಿರಬಹುದೆಂದು ಪೀಡಿಸುತ್ತಿರುವ ಈ ಹಸಿರು ಗಾಜಿನ ಬಳೆ ಕಥೆ ನನಗೆ ಕೆಡವಿ ಪೀಡಿಸುತ್ತಲೆ ಇದೆ...

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಪಿಲ ಪಿ. ಹುಮನಾಬಾದೆ