Article

ಗಂಡು ಹೆಣ್ಣನ ಸಂಬಂಧ ಅನಾವರಣ ‘ಸಮುದ್ಯತಾ’

"ಶಾಂತಲಾ" ದಂತಹ ಅದ್ಭುತ ಐತಿಹಾಸಿಕ ಕೃತಿಯನ್ನು ಓದಿದವರು ಕೆ.ವಿ ಅಯ್ಯರ್ ಅವರನ್ನು ಮರೆಯುವುದುಂಟೆ?
ತಿಂಗಳುಗಳು ಕಳೆದರೂ ಶಾಂತಲೆಯ ಓದಿನ ಮಧುರಾನುಭೂತಿ, ಅಚ್ಚರಿಯಿಂದ ಹೊರ ಬಂದೇ ಇಲ್ಲವೆನ್ನಿಸುತ್ತದೆ. ಕೆ.ವಿ ಅಯ್ಯರ್ ಅವರು ಕಥೆಗಳನ್ನು ಕಟ್ಟಿಕೊಡುವ ಬಗೆ ಬಹುಕಾಲದವರೆಗೆ ನೆನಪಿನಲ್ಲುಳಿದು ಕಾಡುವುದಷ್ಟೇ ಅಲ್ಲದೇ ತನ್ಮಯತೆಯಿಂದ ಓದಿಸಿಕೊಂಡು ಹೋಗುತ್ತವೆ.

ಅರವತ್ತರ ದಶಕದ ಆಸುಪಾಸಿನಲ್ಲಿ ಬರೆಯಲ್ಪಟ್ಟ ಈ ಕಥೆಗಳು ಅಂದಿನ ಸಾಮಾಜಿಕ ಜೀವನದ ಹರಿವು ಯಾವ ತೆರನಾಗಿತ್ತು ಎನ್ನುವುದರ ಜೊತೆಗೆ ನೈತಿಕತೆ, ಸತ್ಯಸಂಧತೆ, ಪ್ರಮಾಣಿಕತೆ, ನಿಷ್ಟೆ, ಅತಿಯಾದ ಒಳ್ಳೆಯತನಕ್ಕೆ ಕಟ್ಟುಬೀಳುತಿದ್ದ ಮನುಷ್ಯ ಸಂಬಂಧಗಳನ್ನು ಸೂಕ್ಷ್ಮವಾಗಿ ಬಣ್ಣಿಸುತ್ತವೆ.

ನಂಬಿಕೆ ತುಂಬಾ ದೊಡ್ಡದು. ಅದು ಹೇಗೂ ಇರಲಿ ಒಮ್ಮೆ ನಂಬಿದ್ದೇವಾದರೆ ಅದರಿಂದ ಸುಲಭವಾಗಿ ಕಳಚಿಕೊಳ್ಳಲಂತೂ ಸಾಧ್ಯವಿಲ್ಲ. ಘಟಿಸಿ ಹೋಗುವ ಅನಿರೀಕ್ಷಿತಗಳಿಗೆಲ್ಲಾ ನಮಗೆ ಬೇಕಾದಂತೆ ಸಮರ್ಥನೆಯನ್ನು ಕೊಟ್ಟುಕೊಳ್ಳಬಹುದು. ಸಿಕ್ಕ ಯಾವುದೊ ವ್ಯಕ್ತಿ ಅಚ್ಚರಿ, ಅಸಾಧ್ಯದ ರೀತಿಯಲ್ಲಿ ನಮ್ಮಲ್ಲಿ ಬೆರೆತು ಹೋದಾಗ ಹಿಂದಿನ ಜನ್ಮದ ಬಂಧವೆಂದೇ ನಂಬುತ್ತೇವೆ.

ಇಲ್ಲಿರುವ ಸಮುದ್ಯತಾ ಕಥೆಯೂ ಅಂಥದ್ದೇ ನಂಬಿಕೆಯ ಮೇಲೆ ನಿಲ್ಲುವಂತದ್ದು. ಭ್ರಮೆ ಎನ್ನಿಸಿಕೊಳ್ಳಬಹುದಾದ ಐವತ್ತು ವರ್ಷಗಳ ಹಿಂದಿನ ಘಟನೆಗಳು ಮತ್ತೆ ಮರುಕಳಿಸಿ, ಎಲ್ಲವೂ ನಿಜದ ನೆಲೆಯ ಮೇಲೆ ವಾಸ್ತವವಾಗುತ್ತವೆ. ಅಲ್ಲಿಗೆ ಕಥೆ ಮುಗಿಯುವುದಿಲ್ಲ. ಪ್ರತಿ ಐವತ್ತು ವರ್ಷಗಳಿಗೊಮ್ಮೆಯಂತೆ ಮತ್ತೆ ಅದೇ ಸಮುದ್ಯತಳ ಪತ್ರ, ಅದೇ ಮರದ ಟೇಬಲ್ಲಿನಲ್ಲಿ ಮತ್ತಿನ್ಯಾರಿಗೋ ಸಿಕ್ಕು....ಹೀಗೆ ಮುಂದುವರೆಯುತ್ತಲೇ ಹೋಗುತ್ತವೆ.

ಬಾಹ್ಯ ಸೌಂದರ್ಯದ ಬೆಡಗು ಬಿನ್ನಾಣಗಳು ಕ್ಷಣದಲ್ಲೇ ಗಮನ ಸೆಳೆಯುತ್ತವೆ. ಆಂತರ್ಯದ ಸೌಂದರ್ಯ ಹಾಗಲ್ಲ. ಅಷ್ಟು ಸುಲಭಕ್ಕೆ ಕಾಣುವುದೂ ಇಲ್ಲ. ಅದನ್ನು ನೋಡಲು ಒಳಗಿನ ಕನ್ನಡಿ ಚೊಕ್ಕವಿರಬೇಕು ಆಗ ಮಾತ್ರ ಅದರ ಚೆಲುವು ಕಾಣಲು ಸಾಧ್ಯ. ವಿಪರ್ಯಾಸವೆಂದರೆ ಒಳಗಿನ ಒಳ್ಳೆಯತನ ಇಂದು ಯಾರಿಗೂ ಬೇಕಿದ್ದಂತಿಲ್ಲ. ಹೊರಗಿನ ರೂಪಕ್ಕೇ ಬೆಲೆ ಹೆಚ್ಚು. ಹೊರಗಿನ ಕುರೂಪ ಕಣ್ಣಿನ ಬೆಳಕು ಕಳೆದುಕೊಂಡು ಮನಸ್ಸಿನ ಬೆಳಕನ್ನು ಬೆಳೆಸಿಕೊಂಡವರಿಗೆ ಮಾತ್ರ ಕಾಣುತ್ತದೇನೋ?

ನಮ್ಮ ದೌರ್ಬಲ್ಯತೆಗಳೇ ನಮಗೆ ಶತ್ರು. ಅದನ್ನು ದುರುಪಯೋಗ ಪಡಿಸಿಕೊಳ್ಳುವವರೂ ನಮ್ಮವರೇ ಅಂದಾಗ ದುಃಖವಾಗುತ್ತದೆ. ಅದೇ ಇಲ್ಲಿರುವ ಚೇಳು ಮತ್ತು ಅಜ್ಜನ ಕಥೆ.

ತನ್ನ ಧೈರ್ಯವನ್ನು ಅತಿಯಾಗಿ ನಂಬುವ ಮತ್ತು ದೆವ್ವಗಳಲ್ಲಿ ಎಳ್ಳಷ್ಟೂ ನಂಬಿಕೆ ಇರದ ಹುಡುಗ ತನ್ನ ಅಂಗಿಯ ತುದಿಯನ್ನು ಸೇರಿಸಿ ಮೊಳೆ ಹೊಡೆದುಕೊಂಡು ದೆವ್ವದ ಭಯಕ್ಕೆ ಸಾಯುವ ಕಥೆಯನ್ನು ಓದಿದ್ದಿರಲ್ಲ?
ರಾತ್ರಿ ಹುಗಿದ ಶವ ಬೆಳಿಗ್ಗೆ ಎದ್ದಾಗ ಮತ್ತೆ ಅದೇ ಸ್ಥಾನದಲ್ಲಿ ಕುಳಿತು ಕಾಡಿಸಿ ಕೊನೆಗೆ ಆ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಾನೆ. ಅಸಲಿಗೆ ಸತ್ತ ಹೆಣ ಎದ್ದು ಕುಳಿತುಕೊಳ್ಳುವುದೆಂದರೇನು? ಅದರ ಹಿಂದಿನ ರಹಸ್ಯವನ್ನು ಬಿಡಿಸಿಟ್ಟ ಕಥೆಯನ್ನೂ ಕೇಳಿರಬಹುದು..
ಈ ಎರಡೂ ಕಥೆಗಳ ಪೂರ್ಣ ರೂಪ ಇಲ್ಲಿವೆ.

ಕಷ್ಟಗಳು ಬರುವುದೂ ಒಳ್ಳೆಯದಕ್ಕೇ, ಆಗುವುದೆಲ್ಲಾ ಒಳ್ಳೆಯದಕ್ಕೇ ಎಂದುಕೊಳ್ಳುವ ಸಂಯಮದ ಬದುಕು ಎಷ್ಟು ಜನರ ಪಾಲಿಗಿದೆಯೋ? ಇಲ್ಲಿರುವ ಜೆನ್ನಿ ಕಥೆ ಬದುಕಿಗೆ ಬಂದೆರಗುವ ಅನಿರೀಕ್ಷಿತಗಳಿಗೆ ನಿರ್ಲಿಪ್ತಿಯಿಂದಲೇ ಸಹಿಸುವ ತಾಳ್ಮೆಯನ್ನು ಕೊಂಚವಾದರೂ ಕಲಿಸದೇ ಇರದು.

ಮನುಷ್ಯನಿಗೆ ಅಸಾಧ್ಯವೆನ್ನುವುದು ಇರುವುದೇ ಇಲ್ಲ. ತನ್ನ ಗುರಿಯತ್ತ ಸಂಪೂರ್ಣ ಭರವಸೆ ಇಟ್ಟು ಮುನ್ನಡೆಯುವುದಾದರೆ. ಹಾಗೇ ಮೋಸ ಮಾಡಲು ಕೂಡ. ಒಬ್ಬ ಅಧಿಕಾರಿಯನ್ನು ತಮ್ಮ ಚಾಣಾಕ್ಷತನದಿಂದ ಮೂರ್ಖನನ್ನಾಗಿ ಮಾಡುವ ಇನ್ಪೆಕ್ಟರ್ ಗಧಾ ಕಥೆ ನವಿರಾದ ಹಾಸ್ಯದ ಮೂಲಕ ನಿರೂಪಿತವಾಗಿದೆ. ಇಲ್ಲಿರುವ ಎಲ್ಲಾ ಕಥೆಗಳೂ ಬಹುಕಾಲದವರೆಗೆ ನೆನಪಿನಲ್ಲಿರುತ್ತವೆ. ಮತ್ತೆ ಮತ್ತೆ ಓದಬೇಕೆನ್ನಿಸುತ್ತವೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕವಿತಾ ಭಟ್‌