Article

ಗೌರಿಲಂಕೇಶ್ ಕಂಡಹಾಗೆ ಲೋಕದ ನಡೆಗಳು

ಗೌರಿ ಲಂಕೇಶ್ ಅವರು ಪ್ರತಿವಾರ ಪತ್ರಿಕೆಗೆ ಬರೆದ ಸಂಪಾದಕೀಯ `ಕಂಡಹಾಗೆ’ ಸಂಗ್ರಹಗಳು. 2000 ದಿಂದ 2010 ರವರೆಗೆ ಮೂರು ಪುಸ್ತಕಗಳಲ್ಲಿ ಒಟ್ಟಾಗಿವೆ. ಒಟ್ಟು 129 ಆಯ್ದ ಬರಹಗಳನ್ನು ಈ ಸಂಗ್ರಹಗಳು ಒಳಗೊಂಡಿವೆ. ಅಂತೆಯೇ ಪತ್ರಿಕೆಯ ವೆಬ್ ಎಡಿಷನ್‍ನಲ್ಲಿ  2016 ರಿಂದ ಈತನಕದ 70 ಬರಹಗಳಿವೆ. ಇಲ್ಲಿ ಮೊದಲ ಸಂಗ್ರಹದಿಂದ ಮೂರನೆ ಸಂಗ್ರಹದವರೆಗೆ ವರ್ಷಗಳ ಸಂಖ್ಯೆ ಕಡಿಮೆಯಾಗಿ ಆಯ್ದ ಬರಹಗಳ ಸಂಖ್ಯೆ ಏರಿಕೆ ಕ್ರಮದಲ್ಲಿ ಬಂದಿದೆ. ಇದು ಗೌರಿಯವರ ಸಂಪಾದಕೀಯಗಳ ವಿಷಯವಾರು ಆಯ್ಕೆಯಲ್ಲಿನ ಗುಣಾತ್ಮಕತೆ ಮತ್ತು ವರ್ತಮಾನದ ಕಾಳಜಿಯ ತೀವ್ರತೆ ಹೆಚ್ಚುತ್ತಾ ಹೋಗಿರುವುದನ್ನು ಸಾಂಕೇತಿಸುವಂತಿದೆ. 

ಅಂತೆಯೇ ಈ ಬರಹದೊಳಗೆ ಮೈಪಡೆದ ಗೌರಿಯವರ ಆಲೋಚನೆ ಮತ್ತು ಕಾಳಜಿಯ ಎಳೆಗಳು ಕಾಣತೊಡಗಿದವು. ಈ ಬರಹಗಳು ಆಯಾ ವಾರದ ಅವಸರದಲ್ಲಿ ಬರೆಯಲ್ಪಟ್ಟಿದ್ದರೂ, ಅವರ ಕಾಳಜಿ ಮತ್ತು ಆತಂಕಗಳು ಮಾತ್ರ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿರುವುದರ ಬಗೆಗಿನ ಆತಂಕಗಳೇ ಆಗಿವೆ. ಹಾಗಾಗಿ ಈ ಬರಹಗಳನ್ನು ಮತ್ತೆ ಓದುವ ಪ್ರಸ್ತುತತೆ ಇದೆ. ಈ ಎಲ್ಲಾ ಬರಹಗಳ ಒಳಗೆ ಮೈಪಡೆದ ಸಮಾನ ಅಂಶಗಳನ್ನು ಗುರುತಿಸಲು ಪ್ರಯತ್ನಿಸಿರುವೆ.

ಬಂಡವಾಳಶಾಹಿ ಹುನ್ನಾರಗಳು

ಜಾಗತಿಕ ಹಿಂಸೆಯನ್ನು ವಿರೋಧಿಸಿ ಪರ್ಯಾಯಗಳ ಹುಡುಕಾಟ ಮಾಡುವುದು ಗೌರಿಯವರ ಬರಹಗಳ ಜೀವಾಳವಾಗಿದೆ. ಹಾಗಾಗಿ ಜಾಗತಿಕ ಬಂಡವಾಳಶಾಹಿ ಹುಟ್ಟಿಸುವ ತಲ್ಲಣಗಳನ್ನು ದಾಖಲಿಸುತ್ತಾರೆ. ಅದರಲ್ಲಿ ಅಮೆರಿಕಾದ ಯುದ್ಧದಾಹಿ ನೀತಿಗಳನ್ನು ಕಟುವಾಗಿ ವಿಮರ್ಶಿಸಿದ್ದಾರೆ. ಜಗತ್ತಿನ ಹಿಡಿತ ಸಾಧಿಸಲು ಮುಸ್ಲಿಂ ರಾಷ್ಟ್ರಗಳನ್ನು ಓಲೈಸಿ `ಬಯೋತ್ಪಾದಕ’ರನ್ನು ಉತ್ಪಾದಿಸಿ ಇಡೀ ಜಗತ್ತಿಗೆ ಅಮೆರಿಕಾ ಹೇಗೆ ಕಂಟಕವಾಗುತ್ತಿದೆ ಎನ್ನುವುದನ್ನು ಹೇಳುತ್ತಾರೆ. ಹಾಗಾಗಿಯೆ ಬಹುಪಾಲು ಮುಸ್ಲಿಂ ಬಯೋತ್ಪಾದಕ ಸಂಘಟನೆಗಳು ಅಮೇರಿಕಾ ಪ್ರಾಯೋಜಿತ ಬಲಿಪಶುಗಳು ಎಂದು ವಿವರಿಸುತ್ತಾರೆ. ಬುಷ್ ಆಡಳಿತದಲ್ಲಿ  ಇರಾಕ್ ಮೇಲಿನ ನಿರಂತರ ದಾಳಿಯನ್ನೂ, ಆತನ ಜೀವವಿರೋಧಿ ನಡೆಗಳನ್ನೂ, ಅಮೆರಿಕಾದ ಸುಳ್ಳುಗಳನ್ನು ಬಯಲುಗೊಳಿಸುವ ಹಲವು ಟಿಪ್ಪಣಿಗಳನ್ನು ಬರೆದಿದ್ದಾರೆ. 

 ಹೀಗಾಗಿ ಜಾಗತಿಕ ಹಿಂಸೆಯನ್ನು ವಿರೋಧಿಸುವ ವ್ಯಕ್ತಿಗಳನ್ನೂ, ಅಭಿವ್ಯಕ್ತಿಯ ಭಿನ್ನ ನೆಲೆಗಳನ್ನೂ ಆಯ್ದು ಅವುಗಳ ಬಗ್ಗೆ ಗಮನಸೆಳೆಯುತ್ತಾರೆ. ಭಾರತದಲ್ಲಿಯೂ ಬಂಡವಾಳಶಾಹಿಗಳು ಪ್ರಭುತ್ವವನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ ಎನ್ನುವುದನ್ನು ಪ್ರಧಾನಿಗಳಾದ ವಾಜಪೇಯಿ, ದೇವೇಗೌಡ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯವರ ಆಡಳಿತ ನೀತಿಗಳ ಒಳಹೊಕ್ಕು ವಿಮರ್ಶಿಸುತ್ತಾರೆ. ಸದ್ಯಕ್ಕಂತೂ ಮೋದಿ ಸರಕಾರ ಹೇಗೆ ಅಂಬಾನಿ, ಅದಾನಿಗಳ ಕೈಗೊಂಬೆಯಾಗಿದೆ ಎನ್ನುವುದನ್ನು ಪದೇಪದೇ ಬರೆದಿದ್ದಾರೆ. `ಈಗಾಗಲೇ ಜಾಗತೀಕರಣ ಉದಾರಿಕರಣ ಖಾಸಗೀಕರಣದ ಭರಾಟೆಗೆ ನಮ್ಮ ದೇಶದ ನೈಸರ್ಗಿಕ ಸಂಪತ್ತನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ವಿದ್ಯುಚ್ಛಕ್ತಿಯಿಂದ ಹಿಡಿದು ನೀರು ರಸ್ತೆ ಮತ್ತು  ಎಸ್‍ಇಜೆಡ್ ಗಳಿಗೆ ಸಾವಿರಾರು ಎಕರೆ ಕೃಷಿಭೂಮಿಯನ್ನು ಕೊಡುವ, ಖಾಸಗಿ ನಗರಗಳನ್ನೆ ನಿರ್ಮಿಸಿಕೊಳ್ಳುವ ತನಕ ಇಡೀ ದೇಶವನ್ನು, ಅದರ ಸಕಲ ಸಂಪತ್ತನ್ನು, ಬಿಡಿಬಿಡಿಯಾಗಿ ಬಿಕರಿಗಿಡಲಾಗಿದೆ’ ಎನ್ನುವ ಆತಂಕವನ್ನು ವ್ಯಕ್ತಪಡಿಸುತ್ತಾರೆ. 

ಹಿಂದುತ್ವದ ಅಪಾಯಗಳು

ಗೌರಿ ಬರಹದಲ್ಲಿ ಹೆಣೆದಿರುವ ಪ್ರಭಾವಿ ಎಳೆಗಳಲ್ಲಿ `ಹಿಂದುತ್ವ’ ಧೋರಣೆಯ ವಿರೋಧ ಮುಖ್ಯವಾಗಿದೆ. ದೇಶದ ಬಹುತ್ವವನ್ನು ನಾಶಮಾಡುವ ಧಾರ್ಮಿಕ ಮೂಲಭೂತವಾದವನ್ನು ಸ್ಪಷ್ಟವಾಗಿಯೂ, ಖಚಿತವಾಗಿಯೂ ಖಂಡಿಸಿದ್ದಾರೆ. ಅಂತೆಯೇ ಈ ಬಗ್ಗೆ ಜನಾಭಿಪ್ರಾಯ ಮೂಡಿಸಲು ನಿರಂತರವಾಗಿ ಬರಹವನ್ನೇ ಮಾಧ್ಯಮವನ್ನಾಗಿಸಿಕೊಂಡಿದ್ದಾರೆ. ಕೆಲವರು ಗೌರಿಯ ಸಾವನ್ನು ಸಂಭ್ರಮಿಸಿದ್ದು ಕೂಡ ಇದೇ ಕಾರಣಕ್ಕೆ ಎನ್ನುವುದನ್ನು ವಿವರಿಸಬೇಕಿಲ್ಲ. ಇಲ್ಲಿ ಮುಖ್ಯವಾಗಿ ಸಂವಿಧಾನಿಕ ಅಂಶಗಳನ್ನು ಎತ್ತಿಹಿಡಿಯುತ್ತಾ, ಈ ದೇಶ ಹೇಗೆ ಬಹುಸಂಸ್ಕøತಿಗಳ ಕೂಡುಬಾಳುವೆ ನಡೆಸಿದೆ ಮತ್ತು ಈ ಬಗೆಯ ಸೌಹಾರ್ಧತೆಯನ್ನು ಉಳಿಸುವ ಅಗತ್ಯವೇನಿದೆ ಎನ್ನುವುದರ ಬಗ್ಗೆ ಹಲವು ಬಾರಿ ಬರೆದಿದ್ದಾರೆ.  

ಬ್ರಾಹ್ಮಣದ ಗೋಭಕ್ಷಣೆಯ ಬಗ್ಗೆ ಪ್ರೊ.ಡಿ.ಎನ್ ಝಾ ಮತ್ತು ರೋಮಿಲಾ ಥಾಪರ್ ಸಂಶೋಧನೆಗಳನ್ನು ಉಲ್ಲೇಖಿಸಿ ಗೋಹತ್ಯೆ ವಿರೋಧದ ಹಿಂಸೆಯನ್ನು ಖಂಡಿಸುತ್ತಾರೆ. ಇತಿಹಾಸಜ್ಞ ಡಾ.ಕೆ.ಜಮಾನದಾಸ್ ಅವರ ಸಂಶೋಧನೆಯ ಮೂಲಕ ಹಿಂದೂ ಧರ್ಮ ವೇಶ್ಯಾವೃತ್ತಿಗೆ ಮಾನ್ಯತೆ ನೀಡಿದ್ದರಿಂದಾಗಿ ಜೈನ ಬೌದ್ಧ ಧರ್ಮಕ್ಕೆ ಮಹಿಳೆಯರು ವಲಸೆ ಹೋಗಿದ್ದರ ಬಗ್ಗೆ ಬರೆಯುತ್ತಾರೆ. ಇತಿಹಾಸಜ್ಞ ಡಾ. ಜಿ.ಎನ್ ಪಾಂಡೆ ಟಿಪ್ಪು ಸುಲ್ತಾನನ ಬಗೆಗೆ ಹಬ್ಬಿಸಿದ ಹಿಂದುತ್ವವಾದಿ ಸುಳ್ಳುಗಳನ್ನು ಬಯಲುಗೊಳಿಸಿದ ಬಗ್ಗೆ ಚರ್ಚಿಸುತ್ತಾರೆ. ಸಾವರ್ಕರ್‍ನ ನಿಜಚರಿತ್ರೆಯನ್ನು ತೆರೆದಿಡುತ್ತಾರೆ. `ಯಾವನು ಈ ಗೋಲ್ವಾಲ್ಕರ್’ ಎನ್ನುವ ಬರಹದಲ್ಲಿ ಆತನ ಜೀವವಿರೋಧಿ ಚಿಂತನೆಯನ್ನು ವಿಶ್ಲೇಷಿಸುತ್ತಾರೆ. 

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಎಲ್ಲಿಯೂ ಹಿಂದೂ ಧರ್ಮವನ್ನು ಕುರುಡಾಗಿಯೂ, ಏಕಮುಖವಾಗಿಯೂ ವಿರೋಧಿಸುವುದಿಲ್ಲ. ಬದಲಾಗಿ ಇತಿಹಾಸದ ಸಂಶೋಧನೆಗಳ, ಹಿಂದೂ ಧರ್ಮದ ಅಧ್ಯಯನಗಳ ನೆರವು ಪಡೆದು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. `ಜಾತಿಯತೆಯನ್ನು ಬೆಂಬಲಿಸುವ, ಇತರೆ ಧರ್ಮಗಳ ವಿರುದ್ಧ ಕಿಡಿಕಾರುವ, ಮಹಿಳೆಯರನ್ನು ಬೆಂಕಿಗೆ ದೂಡಿ ಸತಿಸ್ಥಾನ ನೀಡುವ, ಹಿಂದುಳಿದವರನ್ನು ಕಡೆಗಣಿಸುವ, ದಲಿತರನ್ನು ಅಸ್ಪೃಶ್ಯರೆಂದು ಕರೆಯುವ ಮನುವಾದಿ ಹಿಂದುತ್ವವಾದಿಗಳು ಇವತ್ತು ತಮ್ಮ ಇಂಥ ನಿಲುವುಗಳಿಂದ ಇಡೀ ದೇಶವನ್ನೇ ಅಸಹ್ಯವಾಗಿಸಿದ್ದಾರೆ’ ಎನ್ನುತ್ತಾರೆ. ಹೀಗೆ ಗೌರಿಯವರ ಕಂಡಹಾಗೆ ಬರಹಗಳ ಕಟ್ಟಲ್ಲಿ ಹಿಂದುತ್ವವಾದಿ ಸುಳ್ಳುಗಳನ್ನು ಒಡೆಯುವ ಬರಹಗಳ ಪಾಲು ದೊಡ್ಡದಿದೆ.

ಸೌಹಾರ್ದದ ಕನಸುಗಾರಿಕೆ

ಗೌರಿ `ಕರ್ನಾಟಕ ಕೋಮು ಸೌಹಾರ್ಧ ವೇದಿಕೆ’ಯ ಮುಖ್ಯ ಜೀವಾಳವಾಗಿದ್ದರು. ಅವರ ಬರಹಗಳಲ್ಲಿಯೂ ಮತ್ತೆ ಮತ್ತೆ ಕಾಣುವುದು ಸೌಹಾರ್ಧದ ಕನಸುಗಾರಿಕೆ. ಬಾಬಾಬುಡನ್ ಗಿರಿಯಲ್ಲಿ ಸೌಹಾರ್ಧ ನೆಲೆಸಲು ಗೌರಿಯ ಸಂಘಟಿತ ಶ್ರಮವನ್ನು ಎಲ್ಲರು ಬಲ್ಲರು. ಧಾರ್ಮಿಕ ಸಾಮರಸ್ಯದ ಹಲವು ಸಂಗತಿಗಳನ್ನು ಮಾನವೀಯವಾಗಿ ಚಿತ್ರಿಸುವ ಟಿಪ್ಪಣಿಗಳಿವೆ. ಅಸ್ಗರ್ ಅಲಿ ಎಂಜಿನಿಯರ್ ಬರೆದ ಧರ್ಮಗಳ ಗಡಿಗಳನ್ನು ಅಳಿಸಿಕೊಂಡು ಬದುಕುವ ಜೀವನ ಚಿತ್ರಣಗಳನ್ನು ವಿಸ್ತಾರವಾಗಿ ಉಲ್ಲೇಖಿಸಿ ಬರೆದಿದ್ದಾರೆ. ಅಂತೆಯೇ ಧರ್ಮಗಳ ಕೂಡುಬಾಳುವೆಯನ್ನು ಕಲಿಸುವ ಸೂಫಿ ಶರಣ ಸಂತರ ಉಲ್ಲೇಖಗಳನ್ನು ಹೆಚ್ಚು ತರುವ ಪ್ರಯತ್ನವನ್ನೂ ಮಾಡುತ್ತಾರೆ. ಶೋಷಣರಹಿತ ಸೌಹಾರ್ಧ ಸಹಬಾಳ್ವೆಗಾಗಿ ಶ್ರಮಿಸಿದ ಅಂಬೇಡ್ಕರ್, ಕನಕ, ಬಸವಣ್ಣ ಮೊದಲಾದವರನ್ನು ಹಿಂದುತ್ವವಾದಿ ರಾಜಕಾರಣ ಹೇಗೆ ಬಳಸುತ್ತಿದೆ ಎಂದು ಆಯಾ ಸಮುದಾಯಗಳಿಗೆ ಎಚ್ಚರಿಸುತ್ತಾರೆ.

ಅಹಿಂಸೆಯ ತುಡಿತ

ಗೌರಿಯವರನ್ನು ಕಾಡಿದ ಹಲವರಲ್ಲಿ ಗಾಂಧಿಯ ಪ್ರಭಾವ ದಟ್ಟವಾಗಿರುವುದು ಕಾಣುತ್ತದೆ. ಹಿಂಸೆ ದ್ವೇಶದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವ ಖಚಿತ ನಿಲುವು ಇವರ ಬರಹಗಳಲ್ಲಿದೆ. ಹಾಗಾಗಿಯೇ ಎಲ್ಲವನ್ನು ಮೀರುವ ಅದಮ್ಯ ಪ್ರೀತಿಯ ಕಥನಗಳನ್ನು ಓದುಗರೊಂದಿಗೆ ಹಲವುಬಾರಿ ಹಂಚಿಕೊಂಡಿದ್ದಾರೆ. ಗಾಂಧಿಯನ್ನು ಕೊಂದವರ ಬಗ್ಗೆ ಸದಾ ಕಿಡಿಕಾರುವ ಮನೋಧರ್ಮವನ್ನು ಬೆಳೆಸಿಕೊಂಡಿದ್ದು ಕೂಡ ಇದೇ ಕಾರಣಕ್ಕೆ. ಬಹುಶಃ ನಕ್ಸಲರಿಗೆ ಹಿಂಸೆಯನ್ನು ತೊರೆಯಿರಿ ಎನ್ನುವ ಮಾತುಕತೆ ಮಾಡಿದ್ದು ಕೂಡ ಇದರ ಫಲವೆ. ನಕ್ಸಲರ ಬೇಟಿ, ಸಾಕೇತ್ ರಾಜನ್ ಅವರೊಂದಿಗೆ ಮಾತುಕತೆ, ಆಂದ್ರದ ಕ್ರಾಂತಿಕಾರಿ ಕವಿ ವರವರರಾವ್ ಅವರ ಸಂದರ್ಶನ, ತೀರಾ ಈಚೆಗೆ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ ಅವರನ್ನು ನಕ್ಸಲ್ ಚಳವಳಿಯಿಂದ ಹೊರಬರುವಂತೆ ಮಾಡಲು ಮಧ್ಯಸ್ಥಿಕೆ ವಹಿಸಿದ್ದು ಎಲ್ಲವನ್ನೂ ಈ ನೆಲೆಯಲ್ಲಿ ನೋಡಬಹುದು. ಗೌರಿಯ ಬರಹದಲ್ಲಿ ಹಿಂದೂ ಮತ್ತು ಮುಸ್ಲೀಂ ಬಯೋತ್ಪಾದನೆ ಎರಡರ ವಿರೋಧವೂ ಇದೆ. ಅಂತೆಯೇ ಬಂಡವಾಳಶಾಹಿಗಳು ರೂಪಿಸುವ ಅಗೋಚರ ಹಿಂಸೆಯ ಬಗ್ಗೆಯೂ ಗಮನಸೆಳೆಯುತ್ತಾರೆ. 

ಬಿಹಾರದ ಪಶ್ಚಿಮದಲ್ಲಿರುವ ಕೈಮೂರ್ ಪರ್ವತ ಶ್ರೇಣಿಯಲ್ಲಿ ಬರುವ ಹಳ್ಳಿ ಬರ್ವಾನ್ ಕಲಾ ಎಂಬ ಗ್ರಾಮಕ್ಕೆ ರಸ್ತೆಯಿಲ್ಲದ ಕಾರಣ ಆ ಊರಿನ ಗಂಡಸರಿಗೆ ಹೆಣ್ಣನ್ನು ಕೊಡದೆ ಅಲ್ಲಿನವರು ಅವಿವಾಹಿತರಾಗಿಯೇ ಉಳಿದಿರುತ್ತಾರೆ. ಈ ಊರಿನ ಜನರೆಲ್ಲಾ ಸೇರಿ ತಾವೇ ರಸ್ತೆಯನ್ನು ಮಾಡಿಕೊಳ್ಳುವ ಸಂಕಲ್ಪಕ್ಕೆ ಬಂದು ರಸ್ತೆ ನಿರ್ಮಿಸುವುದು ಮತ್ತು ಈ ರಸ್ತೆ ರಕ್ಷಿತ ಅರಣ್ಯದಲ್ಲಿ ಬರುವ ಕಾರಣ ಪ್ರಭುತ್ವ ಇದನ್ನು ತಡೆಯುವುದು. ಹೀಗೆ  ಇಂತಹ ಅಹಿಂಸಾ ಹೋರಾಟಗಳ ಬಗ್ಗೆ ದಾಖಲಿಸುತ್ತಾರೆ.

ಮಹಿಳೆಯರ ಸಾಹಸಗಳು

ಕಂಡಹಾಗೆಯ ಬರಹಗ¼ಲ್ಲಿ ಮಹಿಳೆಯರ ಸಾಹಸ ಗಾಥೆಗಳು ಸೇರಿವೆ. ಗೌರಿ ತಾನೂಬ್ಬಳೆ ಒಂಟಿಯಾಗಿ ಜೀವಿಸಿದ್ದಕ್ಕೂ ತನ್ನಂತಹ ಒಂಟಿಮಹಿಳೆಯರ ಬಗ್ಗೆ ಹೆಚ್ಚು ಬರೆದದ್ದಕ್ಕೂ ಸಾಮ್ಯವಿರುವಂತೆ ಕಾಣುತ್ತದೆ. ಸೊಮಾಲಿಯಾದಲ್ಲಿ ಪರಿಸರ ಸಂರಕ್ಷಣೆಗೆ ಪಣತೊಟ್ಟ ಪಾತೀಮಾ ಜಿಬ್ರೆಲ್, ನಕ್ಷತ್ರಗಳನ್ನು ಅರಸುತ್ತಲೇ ಆಕಾಶದ ಚುಕ್ಕಿಯಾದ ಗಗನಯಾತ್ರಿ ಕಲ್ಪನಾ ಚಾವ್ಲಾ, ಜನಪರ ಅಹಿಂಸಾ ಚಳವಳಿಗಳಲ್ಲಿ ತೊಡಗಿಸಿಕೊಂಡ ಮೇದಾಪಾಟ್ಕರ್, ವಿಯೆಟ್ನಾಂ ಮೇಲೆ ಅಮೆರಿಕಾ ಯುದ್ಧ ನಡೆಸಿದಾಗ ವಿಯೆಟ್‍ಕಾಂಗ್ ಪರವಾಗಿ ಹೋರಾಡಿದ ಡಾಂಗ್ ಥುಯ್ ಟ್ರಾಮ್,  ಜೀವಚೈತನ್ಯದಿಂದ ಬದುಕಿದ ಯಹೂದಿ ಹುಡುಗಿ ಅನ್ನಾಪ್ರಾಂಕ್, ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ರಷ್ಯಾದ ದೈರ್ಯವಂತ ಪತ್ರಕರ್ತೆ ಅನ್ನಾಪೊಲಿಟ್ಕೋವ್‍ಸ್ಕಾಯ ಹೀಗೆ ಹಲವು ಛಲಗಾತಿ ಮಹಿಳೆಯರ ಬಗ್ಗೆ ಹೆಚ್ಚು ಬರೆದಿದ್ದಾರೆ.

 ಅಮೆರಿಕಾದ ದಿಟ್ಟ ಪತ್ರಕರ್ತೆ `ಹೆಲೆನ್’ರ ಪ್ರಾಮಾಣಿಕತೆ ಮತ್ತು ದೈರ್ಯದ ಬಗ್ಗೆ ಬರೆಯುತ್ತಾ, ಬುಷ್ ಮತ್ತು ಒಬಾರನ್ನು ತನ್ನ ನೈತಿಕ ಪ್ರಶ್ನೆಗಳಿಂದ ಹೇಗೆ ವಿಚಲಿತಗೊಳಿಸುತ್ತಿದ್ದಳು ಎಂದು ವಿವರಿಸುತ್ತಾರೆ.  ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರಕಾರದ ನಡೆಗಳನ್ನು ಜನರೆದುರು ಬಿಚ್ಚಿಡುವುದೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕರ್ತವ್ಯ ಎಂದು ಹೆಲನ್ ನಂಬಿದ್ದಳು. ಹಾಗೆಯೇ ಓರ್ವ ಚುನಾಯಿತ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಆತ ಸರ್ವಾಧಿಕಾರಿಯಾಗದಂತೆ ತಡೆಯುವುದು ಪತ್ರಿಕೋದ್ಯಮದ ಜವಾಬ್ದಾರಿ ಎಂಬುದು ಅವರ ನಿಲುವಾಗಿತ್ತು ಎಂದು ವಿಶ್ಲೇಷಿಸುತ್ತಾರೆ. ಈ ಸಂಗತಿಯನ್ನು ನೋಡಿದರೆ ಸ್ವತಃ ಗೌರಿಯ ಪತ್ರಿಕೋದ್ಯಮದ ನಿಲುವು ಕೂಡ ಇದೆ ಆಗಿತ್ತು ಎನ್ನುವುದನ್ನು ಗಮನಿಸಬೇಕು.

 `ಹೆಣ್ಣೆಂಬ ಮಾತ್ರಕ್ಕೆ..’ ಎನ್ನುವ ಟಿಪ್ಪಣಿಯಲ್ಲಿ ಶೋಭಾ ಕರಂದ್ಲಾಜೆಯ ಬಗ್ಗೆ ಬರೆಯುತ್ತಾ, ಕೇವಲ ಹೆಣ್ಣೆಂಬ ಕಾರಣಕ್ಕೆ ಶೋಭಾ ಸಚಿವ ಸ್ಥಾನದಿಂದ ಉಚ್ಚಾಟನೆಯಾದಳೆ? ಎನ್ನುವುದನ್ನು ತುಂಬಾ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾರೆ. ಲವ್ ಜಿಹಾದ್ ಎನ್ನುವ ಮನುವಾದಿಗಳ ಕುಂತಂತ್ರಕ್ಕೆ ಹೇಗೆ ಮಹಿಳೆಯರು ನಲುಗುತ್ತಾರೆ ಎನ್ನುವುದನ್ನು ಗ್ರಹಿಸುತ್ತಾರೆ. ನಟಿ ಜಯಮಾಲ ಶಬರಿಮಲೈನಲ್ಲಿರುವ ಅಯ್ಯಪ್ಪ ದೇವರ ವಿಗ್ರಹವನ್ನು ಮುಟ್ಟಿದಾಗ ಎದ್ದ ವಿವಾದದ ಸಂದರ್ಭದಲ್ಲಿ ಗೌರಿ `ಈಗ ನಡೆಯುತ್ತಿರುವ ಚರ್ಚೆಯಲ್ಲಿ ನನಗೆ ಎದ್ದು ಕಾಣುತ್ತಿರುವುದು ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ನೀಡಿರುವ ಸ್ಥಾನ. ಮಹಿಳೆಯೊಬ್ಬರು ಕಲ್ಲಿನ ವಿಗ್ರಹವನ್ನು ಮುಟ್ಟಿದ್ದಕ್ಕೆ ಅದಕ್ಕೆ ಕಳಂಕ ತಾಕಿತು ಎನ್ನುವ ಜನಕ್ಕೆ ತಲೆಯೂ ಇಲ್ಲ, ಮಾನವೀಯತೆಯೂ ಇಲ್ಲ. ಏಕೆಂದರೆ ಈ ಸಮಾಜದಲ್ಲಿ ಅಥವಾ ಧರ್ಮದಲ್ಲಿ ಕನಸು, ಮನಸು, ಆಶಯ, ಭಾವನೆ, ರಕ್ತ, ಮಾಂಸ ಹೊಂದಿರುವ ಹೆಣ್ಣು ಇದ್ಯಾವುದನ್ನೂ ಹೊಂದಿರದ ಕಲ್ಲಿಗಿಂತಲೂ ಕಡೆ ಎಂಬ ಮನೋಭಾವ ಅಡಗಿರುವುದು ಸ್ಪಷ್ಟವಾಗಿದೆ. ಇದನ್ನು ಧರ್ಮ ಎಂದು ಕರೆಯುವುದಾದರೂ ಹೇಗೆ?’ ಎಂದು ಪ್ರಶ್ನಿಸುತ್ತಾರೆ.

ಜೀವಪರ ಸಿನೆಮಾಲೋಕ

ಗೌರಿಯವರು ಗಂಭೀರ ವಿಷಯಗಳ ಮಧ್ಯೆ ವಿರಾಮದಂತೆಯೂ, ಸಮಾಜದ ನೋಟಕ್ರಮವನ್ನು ಬೇರೊಂದು ಮಾಧ್ಯಮದಲ್ಲಿ ತಡಕಾಡಿದಂತೆಯೂ ಹಲವು ಸಿನೆಮಾ ಸಾಕ್ಷ್ಯಚಿತ್ರಗಳ ಬಗ್ಗೆ ಬರೆಯುತ್ತಾರೆ. ಈ ಆಯ್ಕೆಗಳಲ್ಲಿ ಕಲಾತ್ಮಕ ಶ್ರೇಷ್ಠತೆಯನ್ನು ಮಾತ್ರ ಮಾನದಂಡವಾಗಿಸದೆ ವರ್ತಮಾನವನ್ನು ಭಿನ್ನವಾಗಿ ಕಟ್ಟಿಕೊಟ್ಟ ಸೂಕ್ಷ್ಮತೆಯನ್ನು ಮಾನದಂಡವಾಗಿಸಿಕೊಳ್ಳುತ್ತಾರೆ. ಮರ್ಯಾದ ಹತ್ಯೆಯ ದಾರುಣತೆಯನ್ನು ತಣ್ಣಗೆ ಕಟ್ಟಿಕೊಡುವ ಈಚಿನ ಮರಾಠಿ ಸಿನೆಮಾ ಸೈರಟ್ ತನಕ ಈ ಸಿನೆಮಾಗಳ ಹರವಿದೆ. ಚೀನಾದ ಜಾಂಗ್ ಯಿಮು ನಿರ್ದೇಶನದ `ರೋಡ್ ಹೋಮ್’ ಎಂಬ ಪ್ರೇಮಕಥಾನದಕ ಸಿನೆಮಾ ಬಗ್ಗೆ ಆಪ್ತವಾಗಿ ಬರೆಯುತ್ತಾರೆ. ಯುವ ಶಿಕ್ಷಕನೊಬ್ಬ ಗುಡ್ಡಗಾಡು ಪ್ರದೇಶದ ಹಳ್ಳಿಯೊಂದಕ್ಕೆ ಶಿಕ್ಷಕನಾಗಿ ಬರುವುದು, ಆ ಹಳ್ಳಿಯ ಹುಡುಗಿಯೊಬ್ಬಳು ಆತನನ್ನು ಗಾಢವಾಗಿ ಪ್ರೇಮಿಸುವುದು ಈ ಮಧ್ಯೆ ಇವರ ಪ್ರೀತಿಯೇ ಆ ಊರಿನ ಶಿಕ್ಷಣದ ಸೆಳೆತವನ್ನು ಹೆಚ್ಚಿಸುವುದು, ಇಂತಹ ನವಿರಾದ ಸಿನೆಮಾದ ಬಗ್ಗೆ ಆಪ್ತವಾಗಿ ಬರೆಯುತ್ತಾರೆ.

ಜಾಗತಿಕ ಪರಿಸರದಲ್ಲಿನ ಬದಲಾವಣೆಗಳು ಹೇಗೆ ಅಪಾಯಕಾರಿ ಎನ್ನುವುದನ್ನು ಕೇಂದ್ರೀಕರಿಸಿ ಭೂಮಿಯನ್ನು ಉಳಿಸಿಕೊಳ್ಳಬೇಕಾದ ಕಾಳಜಿ ಮೂಡಿಸುವ ಅಮೆರಿಕಾದ ಆಲ್‍ಗೋರ್ ನಟಿಸಿ ನಿರ್ದೇಶಿಸಿದ `ಆನ್ ಇನ್ ಕನ್ವಿನೆಂಟ್ ಟ್ರೂಥ್’, ಶವಗಾರವನ್ನು ಕಾಯುವ ಹೆಣ್ಣೊಂದರ ಒಳತೋಟಿಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಮಹಾಶ್ವೇತಾದೇವಿ ಕಥೆಯಾಧಾರಿತ ಚಿತ್ರಾ ಪಾಳೇಕರ್ ನಿರ್ದೇಶಿಸಿದ `ಮಾತಿಮಾಯ್’ ಮರಾಠಿ ಚಿತ್ರ, ಮನುಷ್ಯರು ಮಾನವಬಾಂಬ್‍ಗಳಾಗಿ ರೂಪಾಂತರ ಹೊಂದುವ ಬದುಕಿನ ಸೂಕ್ಷ್ಮಗಳನ್ನು ಕಟ್ಟಿಕೊಡುವ ಪ್ಯಾಲಿಸ್ತೇನಿ ಸಿನೆಮಾ `ಪ್ಯಾರಡೈಸ್ ನವ್’, ಅಗೋಚರವಾದ ಕೊಂಡಿಗಳು ಹೇಗೆ ಬದುಕನ್ನು ಬೆಸೆಯುತ್ತವೆ ಎನ್ನುವ ತರ್ಕವನ್ನು ದೃಶ್ಯೀಕರಿಸುವ ಮೆಕ್ಸಿಕೋದ ಅಲೆಚಾಂಡ್ರೋ ಇನಾರ್ರೀಟು ನಿರ್ದೇಶನದ `ಬೇಬಲ್, ನಾನು ನಾನಾರೆಂಬ ವೈದಾಟದಲ್ಲಿಯೇ ನಿಜ ಹೇಳಲಾರದ ಮನುಷ್ಯನ ಸಂದಿಗ್ಧತೆಯನ್ನು ಚಿತ್ರಿಸುವ ಪ್ರೆಂಚ್ ನಿರ್ದೇಶಕ ರಾಡು ಮಹೈಲಿಯ `ಲೈವ್ ಅಂಡ್ ಬಿಕಮ್’, ಕ್ರೌರ್ಯದ ಎದುರು ಮಾನವೀಯತೆಯ ಗೆಲುವನ್ನು ತೋರಿಸುವ ನಂದಿತಾದಾಸ್ ನಿರ್ದೇಶನದ `ಫಿರಾಖ್’, ಭಯೋತ್ಪಾದನೆಯ ಸಂಕೀರ್ಣತೆಯನ್ನು ಬಿಂಬಿಸುವ ನಿಶಿಕಾಂತ್ ಕಾಮತ್ ನಿರ್ದೇಶನದ `ಮುಂಬೈ ಮೇರಿಜಾನ್,  ಅಪಘಾನಿಸ್ಥಾನದ ಬದುಕಿನ ವೈರುಧ್ಯಗಳನ್ನು ಬಿಂಬಿಸುವ `ದಿ ಸೈಕಲಿಸ್ಟ್’ `ಕಂದಹಾರ್’, ಟಿವಿ ಮಾಧ್ಯಮಗಳು ಟಿಆರ್‍ಪಿಗಾಗಿ ಹಿಡಿದ ಕ್ರೌರ್ಯದ ನಡೆಗಳನ್ನು ಚಿತ್ರಿಸುವ `ಪೀಪ್ಲಿ ಲೈವ್’ ಹೀಗೆ ಹಲವು ಸಿನೆಮಾಗಳ ಚರ್ಚೆ ಮಾಡುತ್ತಾ ಆಯಾ ಸಮಸ್ಯೆಗಳ ಸದ್ಯದ ಸಂಗತಿಗಳ ಜತೆ ಮುಖಾಮುಖಿ ಮಾಡುತ್ತಾರೆ.

ನ್ಯಾಯಾಂಗ ಭ್ರಷ್ಟತೆಯ ಆತಂಕ

ಭೂಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಬಂದ ನ್ಯಾಯಾಲಯದ ತೀರ್ಪಿನ ಬಗೆಗೆ ಆತಂಕ ವ್ಯಕ್ತಪಡಿಸುತ್ತಾ, ಈ ತೀರ್ಪಿನ ಹಿಂದೆ `ಅಮೆರಿಕಾ’ದ ಪ್ರಭಾವವನ್ನು ವಿಶ್ಲೇಷಿಸಿ ನ್ಯಾಯಾಂಗ ಹೇಗೆ ಬ್ರಷ್ಟವಾಗಿದೆ ಎನ್ನುವುದನ್ನು ವಿವರಿಸುತ್ತಾರೆ. ಅಂತೆಯೇ ನರ್ಮದಾ ಡ್ಯಾಮಿನ ಎತ್ತರದ ಬಗೆಗಿನ ಸುಪ್ರಿಂ ಕೋರ್ಟನ ತೀರ್ಪಿನಲ್ಲಿ ನಿರಾಶ್ರಿತರ ಬಗ್ಗೆ ನ್ಯಾಯಂಗ ವ್ಯಕ್ತಪಡಿಸುವ ಅಮಾನವೀಯ ವರ್ತನೆಯನ್ನು ಖಂಡಿಸುತ್ತಾರೆ. ಹೀಗೆ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಹೇಗೆ ಬ್ರಷ್ಟಗೊಂಡಿದೆ ಎನ್ನುವ ಆತಂಕ ಹಲವು ಬರಹಗಳಲ್ಲಿ ಮತ್ತೆ ಮತ್ತೆ ಕಾಣುತ್ತದೆ.

ಒಬ್ಬ ಜನಪರ ನ್ಯಾಯಾದೀಶ ಹೇಗೆ ಜನರಲ್ಲಿ ನ್ಯಾಯಾಂಗದ ಮೇಲೆ ವಿಶ್ವಾಸವನ್ನು ಮೂಡಿಸುತ್ತಾರೆ ಎನ್ನುವುದನ್ನು ವಿವರಿಸಲು ದೆಹಲಿ ಹೈಕೋರ್ಟಿನ ಜಸ್ಟಿಸ್ ಅಜಿತ್ ಪ್ರಕಾಶ್ ಶಾ ಅವರ ಬಗ್ಗೆ ಬರೆಯುತ್ತಾರೆ. ಷಾ ಅವರು ದೆಹಲಿಯಲ್ಲಿ ಬಿಕ್ಷುಕರನ್ನು ಹೊರಹಾಕದ ತೀರ್ಪು, ಬಡವರ ಗುಡಿಸಲುಗಳನ್ನು ಕಿತ್ತಾಗ ಅವರಿಗೆ ಮನೆಗಳನ್ನು ಒದಗಿಸುವ ಆದೇಶ, ಸೆಕ್ಷನ್ 377 ಪ್ರಕಾರ ಸಲಿಂಗಕಾಮ ಅಪರಾಧವಲ್ಲ ಎಂಬ ಐತಿಹಾಸಿಕ ತೀರ್ಪು..ಹೀಗೆ ಜನಪರ ತೀರ್ಪುಗಳ ಬಗ್ಗೆ ವಿವರಿಸುತ್ತಾ ಇಂತಹ ಜನಪರ ಶಾ ಅವರಿಗೆ ಸುಂಪ್ರೀಂಕೋರ್ಟಿನ ನ್ಯಾಯಾಧೀಶರಾಗುವ ಅವಕಾಶವನ್ನು ವ್ಯವಸ್ಥೆ ಹೇಗೆ ತಪ್ಪಿಸಿತು ಎಂದು ದುಃಖದಿಂದ ಬರೆಯುತ್ತಾರೆ. 

ಅಲ್ಪಸಂಖ್ಯಾತಆದಿವಾಸಿ, ದಲಿತರ ಬಗೆಗಿನ ಜೀವಕಾರುಣ್ಯ

ಅಲ್ಪಸಂಖ್ಯಾತ, ಆದಿವಾಸಿ, ದಲಿತರ ಬಗೆಗಿನ ಜೀವಕಾರುಣ್ಯ

ಗೌರಿಯವರ ಬರಹಗಳಲ್ಲಿ ಮತ್ತೆ ಮತ್ತೆ ಎದುರುಗೊಳ್ಳುತ್ತದೆ. ಬಿರ್ಸಾ ಮುಂಡಾನ ಹೋರಾಟದ ಬಗೆಗೂ, ಲಾಲ್‍ಗಡ್ ಆದಿವಾಸಿಗಳ ದಂಗೆಯ ಬಗೆಗೂ, ಗಿರಿಜನರ ರಕ್ತ ಕೇಳುತ್ತಿರುವ ಪೋಲೀಸರ ಬಗೆಗೂ ಬರೆಯುವಾಗೆಲ್ಲಾ ಆದಿವಾಸಿಗಳ ಬದುಕಿನ ಬಿಕ್ಕಟ್ಟುಗಳ ಬಗ್ಗೆ ವಿಶ್ಲೇಷಿಸುತ್ತಾ ಪರ್ಯಾಯದ ಬಗ್ಗೆ ಚಿಂತಿಸುತ್ತಾರೆ. ಚತ್ತೀಸಘಡದ ದಾಂತೇವಾಡದಲ್ಲಿನ ಗಾಂದಿವಾದಿ ಹಿಮಾಂಶುಕುಮಾರ್ ಅವರ ಆಶ್ರಮವನ್ನು ಅಲ್ಲಿನ ಸರಕಾರ ದ್ವಂಸಮಾಡಿದಾಗ ಬರೆದ ಟಿಪ್ಪಣಿಯಲ್ಲಿ ಆದಿವಾಸಿಗಳ ಪರ ಇರುವ ಇಮಾಂಶು ಪರೋಕ್ಷವಾಗಿ ಆದಿವಾಸಿಗಳ ಬೆಂಬಲವಿರುವ ನಕ್ಸಲರ ಜತೆಯೂ ನಂಟಿದೆ ಎನ್ನುವ ಕಾರಣಕ್ಕೆ ಹಿಮಾಂಶು ಅವರನ್ನು ಹಿಂಸಿಸಲಾಗಿರುತ್ತದೆ. ಸರಕಾರ ಟಾಟಾ ಮತ್ತು ಎಸ್ಸಾರ್ ಕಂಪನಿಗೆ ಭೂಮಿ ಕೊಡಲು ಕಾಡಿನ ಮಧ್ಯದ ವ್ರೆಚ್ಚಾಪಾಲ್ ಎಂಬಲ್ಲಿ ನೆಲೆಸಿದ 140 ಮನೆಗಳ ಆದಿವಾಸಿಗಳನ್ನು ದ್ವಂಸ ಮಾಡಿದಾಗ ಇದೇ ಹಿಮಾಂಶು ಆದಿವಾಸಿಗಳ ಪರವಾಗಿ ನಿಂತು ಹೋರಾಡಿದ ಕಥನವನ್ನು ದಾಖಲಿಸುತ್ತಾ, ಈ ದೇಶದ ಆದಿವಾಸಿಗಳು ಹೇಗೆ ಪ್ರಭುತ್ವದ ದಮನಕ್ಕೆ ಒಳಗಾಗುತ್ತಿದ್ದಾರೆ ಎನ್ನುವುದನ್ನು ಅಂತಃಕರಣದಿಂದ ಬರೆಯುತ್ತಾರೆ. 

ಈಚೆಗೆ ಉತ್ತರ ಪ್ರದೇಶದ ಗೋರಖ್ ಪುರದ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 73 ಕಂದಮ್ಮಗಳು ಅಸುನೀಗಿದಾಗ, ಸಾಧ್ಯವಾದಷ್ಟು ಮಕ್ಕಳ ಪ್ರಾಣ ಕಾಪಾಡಲು ಯತ್ನಿಸಿದ ಕಫೀಲ್ ಖಾನ್ ಎಂಬ ನಿಷ್ಠಾವಂತ ವೈದ್ಯನ ವಿರುದ್ಧದ ಕುತಂತ್ರದ ಬಗ್ಗೆ ಬರೆದು ಮುಸ್ಲಿಂರ ಬಗೆಗಿನ ಲೋಕದ ದೃಷ್ಟಿಕೋನವನ್ನು ಚರ್ಚಿಸುತ್ತಾರೆ. ಸಫಾಯಿ ಕರ್ಮಚಾರಿಗಳ ದಯಾನೀಯ ಬದುಕಿನ ಬಗ್ಗೆ ಬರೆಯುತ್ತಾ ತಂತ್ರಜ್ಞಾನದ ಬೆಳವಣಿಗೆ ಇಂತಹ ಕೆಲಸದಿಂದ ದಲಿತರನ್ನು ಮುಕ್ತಿಗೊಳಿಸುವುದು ಯಾವಾಗ ಎಂದು ನೋಯುತ್ತಾರೆ, ಮೀಸಲಾತಿಯನ್ನು ವಿರೋಧಿಸುವ ಮನಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತಾ, `ಪರಿಸರಕ್ಕೂ, ಪ್ರತಿಭೆಗೆ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವೂ ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ. ಅಷ್ಟೇ ಅಲ್ಲ ಅವರ ನಿಲುವು ಅಮಾನವೀಯ ಜಾತಿಪದ್ಧತಿಯನ್ನು ಪೊರೆಯುವುದರಿಂದ ನಮ್ಮ ಸಂವಿಧಾನದ ವಿರುದ್ಧವೂ ಆಗಿದೆ. ಅಂದರೆ ಸಂವಿಧಾನ ಭಾಹಿರವೂ, ದೇಶದ್ರೋಹದ ಕೃತ್ಯವೂ ಆಗಿದೆ’ ಎನ್ನುತ್ತಾರೆ.

ಆತ್ಮಕಥನದ ತುಣುಕುಗಳು

ಗೌರಿಯವರು ಆತ್ಮಕಥನವನ್ನೇನು ಬರೆಯಲಿಲ್ಲ. ಆದರೆ ಅವರ ಕಂಡಹಾಗೆ ಸಂಪಾದಕೀಯಗಳಲ್ಲಿ ಹಲವು ಟಿಪ್ಪಣಿಗಳು ಆತ್ಮಕಥನದ ತುಣುಕುಗಳಂತಿವೆ. ಈ ಬರಹಗಳನ್ನೆಲ್ಲಾ ಒಟ್ಟಾಗಿಸಿದರೆ ಕೊಲಾಜ್ ಮಾದರಿಯ ಆತ್ಮಕಥನವೊಂದು ಸಿದ್ದವಾಗುತ್ತದೆ. ಬಿವಿಕಾರಂತರ ಬಗ್ಗೆ ನೆನಪಿಸಿಕೊಳ್ಳುವಾಗ ಗೌರಿ ಈಡಿಪಸ್ ನಾಟಕದಲ್ಲಿ ಗಿರೀಶ್ ಕಾರ್ನಾಡ್ ಅವರ ಮಗಳಾಗಿ ನಟಿಸಿದ್ದನ್ನು ಬರೆಯುತ್ತಾರೆ. ಅಂತೆಯೇ ರವೀಂದ್ರನಾಥ ಟ್ಯಾಗೂರ್ ಅವರ `ಇಸ್ಪೀಟು ರಾಜ್ಯದಲ್ಲಿ’ ನಾಟಕದಲ್ಲಿ ತಾನು ರಾಣಿ ಪಾತ್ರ ಮಾಡಿದ್ದನ್ನು ನೆನೆಯುತ್ತಾ, ಈ ನಾಟಕ ನೋಡಿದ ಅಪ್ಪ `ನಿನ್ನ ಒಂದು ಸಂಭಾಷಣೆಯೂ ಕೇಳಲಿಲ್ಲ, ಆದರೆ ಚೆನ್ನಾಗಿ ಕಾಣಿಸುತ್ತಿದ್ದೆ’ ಎಂದು ಪ್ರತಿಕ್ರಿಯಿಸುತ್ತಾರೆ. ಅಂದಿನಿಂದ ನಾಟಕ ಮಾಡುವುದನ್ನು ನಿಲ್ಲಿಸಿದೆ ಎನ್ನುತ್ತಾರೆ. 

`ಅಪ್ಪನೊಂದಿಗೆ ನಕ್ಷತ್ರವಾದ ಚೆನ್ನಿ’ ಎನ್ನುವ ಬರಹದಲ್ಲಿ ಲಂಕೇಶರ ಇಷ್ಟದ ನಾಯಿ ಚೆನ್ನಿಯು ಸಾವನ್ನಪ್ಪಿದಾಗ ಬರೆದ ಬರಹ ಮನಕಲಕುವಂತಿದೆ. ಅಂತೆಯೇ ಜೆರುಸಲೇಂನ ಪ್ರವಾಸ ಕಥನ, ಡಾ.ರಾಜ್ ಸಾವಿನ ಸಂದರ್ಭದಲ್ಲಿ ಬರೆದ `ಮುಗ್ಧ ಮುತ್ತುರಾಜ್‍ಗೆ ವಿದಾಯ’ ದಲ್ಲಿ ಮಗುತನದ ಸಹಜ ಮುಗ್ದತೆ ಮತ್ತು ಬೆರಗನ್ನು ಸೂಕ್ಷ್ಮವಾಗಿ ಬರೆದಿದ್ದಾರೆ. ರಾಷ್ಟ್ರಕವಿ ಪ್ರಶಸ್ತಿಗೆ ಆಯ್ಕೆಯಾದಾಗ ಜಿಎಸ್ ಶಿವರುದ್ರಪ್ಪ ಅವರ ಬಗ್ಗೆ ಬರೆದ ಆಪ್ತ ಬರಹ. ಕಿರಂ ನಾಗರಾಜ ಅವರ ಪ್ರೇಮಪ್ರಕರಣ ವಿವಾಹದಲ್ಲಿ ಮುಕ್ತಾಯವಾದ ನವಿರು ಕಥನ, `ಮೂಡಿಗೆರೆ ಪೋಸ್ಟ್’ ಕುರಿತ ಬರಹದಲ್ಲಿ ತೇಜಸ್ವಿ ಜತೆಗಿನ ಸಂವಾದ, ಬಾಬಾಬುಡನ್ ಗಿರಿ ಸೌಹಾರ್ಧ ಸಾಮಾವೇಶದ ಸಂದರ್ಭದಲ್ಲಿ ಜೈಲುವಾಸಿಯಾದ ಅನುಭವಗಳು ಹೀಗೆ ಗೌರಿಯವರ ಆತ್ಮಕಥಾನಕನ ಎಳೆಗಳು ಇಲ್ಲಿನ ಹಲವು ಸಂಪಾದಕೀಯಗಳಲ್ಲಿ ಪೋಣಿಸಿಕೊಂಡಿವೆ. ಈ ಬರಹಗಳು ವೈಚಾರಿಕ ಬರಹದಲ್ಲಿನ ಸಿಟ್ಟು ಆಕ್ರೋಶ ಒರಟುತನಕ್ಕಿಂತ, ಪ್ರೀತಿ ಮಮತೆ ಸಹನಶೀಲ ಗುಣಗಳಿಂದ ಆಪ್ತವಾಗುತ್ತವೆ.

ತಾಯ್ತನದ ಅಂತಃಕರಣ 

ಈಚಿನ ಬರಹಗಳಲ್ಲಿ ತಾಯ್ತನದ ಅಂತಃಕರಣ ಎದ್ದು ಕಾಣುತ್ತಿತ್ತು. ಜೆಎನ್‍ಯು ಘಟನೆಯ ನಂತರ ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದ ಕನ್ನಯ್ಯ ಕುಮಾರನನ್ನು, ಗುಜರಾತಿನ ದಲಿತ ಅಸ್ಮಿತೆಯ ಹೋರಾಟದ ಭಾಗವಾಗಿದ್ದ ನಾಯಕ ಜಿಗ್ನೇಶ್ ಮೇವಾನಿಯನ್ನು ತನ್ನ ಮಕ್ಕಳೆಂದು ಸಂಭ್ರಮಿಸಿದರು. ಅವರು ಎಲ್ಲಿಯೇ ಮಾತನಾಡಲಿ ಆ ಮಾತುಗಳನ್ನು ಹಂಚಿಕೊಂಡು ಮಕ್ಕಳ ನಡೆ, ನುಡಿಗಳ ಬಗ್ಗೆ ಹೆಮ್ಮೆಯಿಂದ ಬರೆದುಕೊಳ್ಳುತ್ತಿದ್ದರು. 2017 ರ ಆಗಷ್ಟ್ 23 ಸಂಚಿಕೆಯಲ್ಲಿ ಕನ್ನಯ್ಯ ಕುಮಾರನನ್ನು ಬೇಟಿಯಾದ ಆಪ್ತವಾದ ಬರಹ ಬರೆದಿದ್ದಾರೆ. ಕನ್ನಯ್ಯ ಮನೆಗೆ ಬರುವ ಮುಂಚಿನ ಸಂಬ್ರಮ, ಮನಗೆ ಬಂದಾದ ನಂತರದ ಹಾರೈಕೆ ಎಲ್ಲವೂ ಮನಸ್ಸನ್ನು ಮುದಗೊಳಿಸುವಷ್ಟು ಆಪ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವದ ವಿಷ ತುಂಬಿಕೊಂಡ ಹುಡುಗರು ಎಷ್ಟೇ ನಿಂದನಾತ್ಮಕವಾಗಿ ಕಾಮೆಂಟಿಸಿದರೂ ಅವರೆಲ್ಲ ನನ್ನ ದಾರಿತಪ್ಪಿದ ಮಕ್ಕಳು ಎನ್ನುವಷ್ಟು ಮಾಗಿದ್ದರು.

**

ಅನೇಕ ಕಡೆಗಳಲ್ಲಿ ಗೌರಿ ತಂದೆ ಲಂಕೇಶರ ಬರಹಗಳನ್ನು ನೆನಪಿಸಿಕೊಳ್ಳುತ್ತಾ, ಅವುಗಳ ವಿಸ್ತರಣೆಯಾಗಿಯೂ, ಕೊಂಡಿಯಾಗಿಯೂ ಬರೆದಿದ್ದಾರೆ. ಇದೊಂದು ರೀತಿ ಎರಡು ತಲೆಮಾರುಗಳ ಸಂವೇದನೆಯ ಕೂಡು ಸಂಬಂಧವನ್ನು ಕಾಣಿಸುತ್ತದೆ. ಲಂಕೇಶರ ಇಷ್ಟದ ಲೇಖಕನಾದ `ಕ್ಯಾಚರ್ ಇನ್ ದ ರೈ’ ಕಾದಂಬರಿಯ ಖ್ಯಾತಿಯ ಜೆ.ಡಿ. ಸ್ಯಾಲಿಂಜರ್ ತೀರಿದಾಗ ಲಂಕೇಶರ `ಮರೆಯುವ ಮುನ್ನ’ ಬರಹವನ್ನು ಉಲ್ಲೇಖಿಸಿ ಈ ಲೇಖಕ ನನಗೂ ಹೇಗೆ ಪ್ರಿಯವಾಗಿದ್ದ ಎಂದು ವಿವರಿಸುತ್ತಾರೆ. ಖುಷವಂತ್ ಸಿಂಗ್ ಬಗ್ಗೆ ಲಂಕೇಶರ ಟೀಕೆಟಿಪ್ಪಣಿಯನ್ನು ನೆನೆಪಿಸಿಕೊಳ್ಳುತ್ತಾ, ಕೋಮುವಾದಿಗಳ ಪ್ರಸ್ತುತ ಹಟ್ಟಹಾಸಗಳನ್ನು ಕಂಡು ಅವರು ಬರೆದ `ದಿ ಎಂಡ್ ಆಫ್ ಇಂಡಿಯಾ’ ಕೃತಿಯ ಬಗ್ಗೆ ಪರಿಚಯಿಸುತ್ತಾರೆ. ಕೊನೆಗೆ ಖುಷವಂತ್ ಅವರು ತಾಳುವ ನಿಲುವಾದ `ನಮ್ಮ ದೇಶಕ್ಕೆ ಬೇಕಾಗಿರುವ ಹೊಸ ಧರ್ಮದ ತಳಹದಿ `ವರ್ಕ್ ಎಥಿಕ್’ (ಕಾರ್ಯ ಸಿದ್ಧಾಂತ) ಆಗಿರಬೇಕು, ಮಾತ್ರವಲ್ಲ ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬ ವ್ಯಕ್ತಿಗೆ  ಜೀವವಿರುವ ಯಾವುದೇ ಪ್ರಾಣಿಗೆ ನೋವುಂಟು ಮಾಡಬಾರದು. ಹಾಗೂ ತನ್ನ ಪರಿಸರ ಕಾಪಾಡುವುದು ಮುಖ್ಯವಾಗಬೇಕು. ಅಹಿಂಸೆಯೇ ಎಲ್ಲಕ್ಕಿಂತ ಉತ್ಕøಷ್ಟ ಧರ್ಮ ಹಾಗೂ ಅಸಭ್ಯತೆಯ ಅಂತಿಮ ರೂಪವೇ ಹಿಂಸೆ’ ಉಲ್ಲೇಖಿಸಿ ಸಹಮತ ತಾಳುತ್ತಾರೆ. 

`ಯಾವುದೇ ರೂಢಿಗತ ನಿಯಮವನ್ನು ಪ್ರಶ್ನಿಸಿದರೆ ಹಿಂದೂ ಧರ್ಮ ವಿರೋಧಿಗಳೆಂಬ, ಜಾತ್ಯಾತೀತತೆಯ ಬಗ್ಗೆ ಹೇಳಿದರೆ Pseudo secular ಗಳೆಂಬ, ಜನರ ಸಮಸ್ಯೆಗಳ ಬಗ್ಗೆ ಚಕಾರವೆತ್ತಿದರೆ ನಕ್ಸಲ್ ವಾದಿಗಳೆಂಬ ಆರೋಪಗಳಿಗೆ ಗುರಿಯಾಗಬೇಕಿದೆ. ಇವತ್ತು ಸ್ವತಂತ್ರ ಚಿಂತನೆ, ಭಿನ್ನ ನಿಲುವು, ಜನಪರ ಕಾಳಜಿ ಹೊಂದುವುದೇ ಹಲವರಿಗೆ ಪ್ರಶ್ನಾರ್ಹವಾಗಿ ಕಾಣುತ್ತಿದೆ’ ಎಂದು ಗೌರಿ ಸದ್ಯದ ಬಿಕ್ಕಟ್ಟನ್ನು ಗುರುತಿಸುತ್ತಾರೆ. `ಸದಾ ವ್ಯವಸ್ಥೆಯ ವಿರುದ್ಧ ಹೋರಾಡುವ ಪತ್ರಕರ್ತರು ದಿಟ್ಟತನ ಹೊಂದಿರಲೇಬೇಕು. ಏಕೆಂದರೆ ಅಂತಹ ಪತ್ರಕರ್ತರನ್ನು ಸೆದೆಬಡಿಯಲು ವ್ಯವಸ್ಥೆ ಹೊಂಚುಹಾಕಿ ಕಾದಿರುತ್ತದೆ’ ಎನ್ನುವ ಗೌರಿಯವರ ಮಾತಿಗೆ ಅವರೇ ಸಾಕ್ಷಿಯಾದರು.

**

 ಗೌರಿಯವರು 2006, ಸೆಪ್ಟಂಬರ್-27 ರ ಸಂಚಿಕೆಯಲ್ಲಿ `ಸೌಹಾರ್ಧದ ಗಿರಿಯಲ್ಲಿ ನಿಸರ್ಗದ ನೀಲಿಗ್ಯಾನ' ಎನ್ನುವ ಸಂಪಾದಕೀಯ ಬರೆದಿದ್ದಾರೆ. ಇದು ನೀಲಕುರುಂಜಿ ಹೂ ಬಗ್ಗೆ ಬರೆದ ಬರಹ ಅಹ್ಲಾದಕರವಾಗಿದೆ. ಈ ಬರಹ ಹೀಗೆ ಆರಂಭವಾಗುತ್ತದೆ,  ಒಂದು ನಿಮಿಷ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನಾನು ವಿವರಿಸಲಿರುವ ದೃಶ್ಯವನ್ನು ಕಲ್ಪಿಸಿಕೊಳ್ಳಿ...ನೀವು ಒಂದು ಬೆಟ್ಟದ ಮೇಲಿದ್ದೀರಿ. ಅಲ್ಲಿನ ತಂಪು ವಾತಾವರಣ. ಕೈಗಳಿಗೆ ಎಟುಕದೆ ತೇಲಿ ಹೋಗುತ್ತಿರುವ ಮೋಡಗಳು..ನಿಮ್ಮ ಸುತ್ತ ಕಂಗೊಳಿಸುತ್ತಿರುವ ನೀಲಿ ಹೂಗಳು...ಹೌದು ನೀವು ಕಣ್ಣು ಹಾಯಿಸಿದಷ್ಟೂ ದೂರ ಹರಡಿರುವ ಲಕ್ಷಾಂತರ ನೀಲಿ ಹೂಗಳು..! ಎಲ್ಲಿ ನೋಡಿದರಲ್ಲಿ ಕಂಗೊಳಿಸುವ ನೀಲಿ ಹೂಗಳು..ಹನ್ನೆರಡು ವರ್ಷಕ್ಕೊಮ್ಮೆ ಅರಳಿ ಕಂಗಳಿಗೆ ಆನಂದ ನೀಡುವ ನೀಲಿ ಹೂಗಳು !

ಸ್ವರ್ಗ ಹೀಗೆ ಇರಬಹುದು ಅನ್ನಿಸಿತಲ್ಲವೇ ನಿಮಗೆ? ಆದರೆ ನಾನು ಈ ದೃಶ್ಯವನ್ನು ಕಲ್ಪಿಸಿಕೊಂಡು ಹೇಳುತ್ತಿಲ್ಲ. ಯಾವುದೋ ಪೇಂಟಿಂಗ್ ಅಥವಾ ಯುರೋಪಿನಲ್ಲಿ ಕಂಡದ್ದನ್ನು ವಿವರಿಸುತ್ತಿಲ್ಲ..ಬದಲಾಗಿ ನಮ್ಮ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ನೋಡಿದ್ದನ್ನು ನಿಮಗೆ ಹೇಳುತ್ತಿದ್ದೇನೆ...ಬಾಬಾಬುಡನ್ ಗಿರಿಯಲ್ಲಿ ಕಂಡ ಅದ್ಭುತ ದೃಶ್ಯವಿದು’ ಎಂದು ಆರಂಬಿಸಿ ನೀಲಕುರುಂಜಿ ಹೂವಿನ ನೆಲೆ ಚರಿತ್ರೆ ಪುರಾಣ ವರ್ತಮಾನವನ್ನು ಬೆಸೆದು ಬರೆಯುತ್ತಾ, ಕೊನೆಗೆ ಗಿರಿಗಳನ್ನೇ `ನೀಲಿ'ಯಾಗಿಸಿರುವ ಈ ಕುರಿಂಜಿಯ ಅದ್ಭುತ ಲೋಕವನ್ನು ನೋಡಬೇಕೆಂದಿದ್ದರೆ, ಈಗಲೇ ನೀವೂ ಹೋಗಿ ಬರುತ್ತೀರಾ...ಎಂದು ಬರಹ ಮುಗಿಸುತ್ತಾರೆ.

ಅಂದ್ಹಾಗೆ ಈ ಬರಹ ಬರೆದು ಇಲ್ಲಿಗೆ 11 ವರ್ಷವಾಯಿತು. ಬಹುಶಃ ಬರುವ ವರ್ಷ ಬಾಬಾಬುಡನ್ ಗಿರಿ ಬೆಟ್ಟದಲ್ಲಿ ನೀಲಕುರಿಂಜಿ ಅರಳಬಹುದು. ಈ ಹೂಗಳ ಮರುಬೇಟಿ ಮಾಡಲು ಗೌರಿ ಈಗಿಲ್ಲ. ಆದರೆ ಆಗ ಅರಳುವ ನೀಲಕುರಿಂಜಿ...`ಕಳೆದಬಾರಿ ನಮ್ಮನ್ನೆಲ್ಲ ನೋಡಲು ಆಹ್ವಾನವಿತ್ತ ನೀನೇ ಈ ಬಾರಿ ಇಲ್ಲವಲ್ಲೆ' ಬಾ ನೋಡು 12  ವರ್ಷದ ಬಳಿಕ ನಾವು ಮತ್ತೆ ಅರಳಿ ನಿಂತಿದ್ದೇವೆ’ ಎನ್ನಬಹುದು. ಅಥವಾ ಅವಳಿಲ್ಲದ ನಿಜವರಿತ ಹೂಗಳು `ಇರಲಿ ಬಿಡು..ನಾನು ಗೌರಿ ಎನ್ನುವ ಕೂಗನ್ನು ನಾವೂ ಧ್ವನಿಸುತ್ತೇವೆ...ಇದೀಗ ನಾವು `ಗೌರಿಕುರಿಂಜಿ’ ಎನ್ನಬಹುದು ಅನ್ಸುತ್ತೆ.

ಮುಗಿಸುವ ಮುನ್ನ ನನ್ನದೊಂದು ಪುಟ್ಟ ಪದ್ಯ:

ಬುದ್ಧನೇ ಸಾವಿಲ್ಲದ 

ಸಾಸಿವೆಯ ಸತ್ಯ ನುಡಿದೆ ನೀ..

ಹೌದು...

ಗೌರಿಗೂ ಸಾವುಂಟು,

ಆದರೆ ನಮ್ಮೆದೆಯೊಳಗೆ 

ಗೌರಿಯೆಂಬ 

ಸಾವಿಲ್ಲದ ಸಾಸಿವೆಗಳು ಮೊಳೆಯುತ್ತಿವೆ...

ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ- https://www.bookbrahma.com/book/kandahaage

ಅರುಣ್ ಜೋಳದಕೂಡ್ಲಿಗಿ