Article

ಗ್ರಾಮ ಬದುಕಿನ ವಿಸ್ಮಯಗಳ ಅನಾವರಣ

ಹಿರಿಯ ಕಥೆಗಾರ ಚನ್ನಪ್ಪ ಕಟ್ಟಿ ಅವರ 'ಏಕತಾರಿ' ಕಥಾಸಂಕಲನವು ಗ್ರಾಮಲೋಕದ ಲೌಕಿಕ ಮತ್ತು ಅಲೌಕಿಕ ಬದುಕಿನ ವ್ಯಾಪಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ, ಇಲ್ಲಿರುವ ಕಥೆಗಳು ಕಾಲಾಂತರದಲ್ಲಿ ಏನಕೇನ ಕಾರಣವಾಗಿ ರೂಪುಗೊಳ್ಳುವ ಮನುಷ್ಯನ ವಿಕಾರ ಮನಸ್ಥಿತಿಯು ಪರೋಕ್ಷವಾಗಿ ಅಂತ್ಯದಲ್ಲಿ ಮುರಿದು ಹೋದ ಸಂಬಂಧಗಳನ್ನು ಹೇಗೆಲ್ಲ ಮರು ಜೋಡಣೆ ಮಾಡುತ್ತದೆ ಎಂಬುದನ್ನು ವಿವರಿಸುತ್ತವೆ.                               

ಪ್ರಸ್ತುತ, 'ರತ್ನಾಗಿರಿ ಎಂಬ ಮಾಯೆ'  ಕಥೆ, ನಗರೀಕರಣ ಪ್ರಕ್ರಿಯೆ ಸೃಷ್ಟಿಸಿರುವ ಆಧುನಿಕ ಭೋಗ ಜಗತ್ತಿನಲ್ಲಿ ಸುಖವಿಲ್ಲ; ಗ್ರಾಮ ಜಗತ್ತಿನ ಸಾಂಪ್ರದಾಯಿಕವಾದ ಕೃಷಿ ಬದುಕಿನಲ್ಲಿ ಸುಖವಿದೆ- ಎಂಬರ್ಥವನ್ನು ಧ್ವನಿಸುತ್ತದೆ! ಇಲ್ಲಿ, ಕಥೆಗಾರ ಮನೋ ಹಳವಂಡಗಳನ್ನು ಹಂಚಿಕೊಳ್ಳುತ್ತಲೇ ಗ್ರಾಮ ಲೋಕದಲ್ಲಿನ ಭೂಮಿ ಮತ್ತು ಮನುಷ್ಯರ ನಡುವಿನ ಸಂಬಂಧದ ಆಳ ಅಗಲವನ್ನು ಅನಾವರಣ ಮಾಡುತ್ತ ಹೋಗುತ್ತಾರೆ.     

ನೌಕರಿ ನಿಮಿತ್ತವಾಗಿ ಪಟ್ಟಣದಲ್ಲಿ ವಾಸಿಸುತ್ತಿದ್ದ ಕಥೆಗಾರನಿಗೆ ಹಳ್ಳಿಯಲ್ಲಿ ನಾಲ್ಕು ಎಕರೆ ಜಮೀನಿನ ಕುರಿತಾಗಿ ಉಳಿಸಿಕೊಳ್ಳಬೇಕೋ, ಇಲ್ಲ ಮಾರಾಟ ಮಾಡಬೇಕೋ ಎಂಬ ಗೊಂದಲದಲ್ಲಿರುವಾಗಲೇ ಆ ಗೊಂದಲಕ್ಕೆ ಪೂರಕವಾಗಿರುವಂಥ ಇನ್ನೊಂದು ಪ್ರಸಂಗ ತೆರೆದುಕೊಳ್ಳುತ್ತದೆ. ತನ್ನ ಮನೆಗೆ ಕಾಯಿಪಲ್ಲೆ ಮಾರಾಟ ಮಾಡಲು ಬರುತ್ತಿದ್ದ ಅರವತ್ತರ ಆಸುಪಾಸಿನ ಅಜ್ಜಿ, ಇದುವರೆಗೂ ತಾನು ದಾಟಿ ಬಂದ ಬದುಕಿನ ದಾರಿಯನ್ನು ಕಥೆಗಾರನ ಮುಂದೆ ತೆರೆದಿಟ್ಟಾಗ ಆತ ತನ್ನದೇ ಬದುಕಿನ ಪರಾಮರ್ಶೆಗಿಳಿಯುತ್ತಾನೆ! ಅಜ್ಜಿಯ ನಾಲ್ಕು ಜನ ಮಕ್ಕಳು, ಹೆಂಡಿರ ಮಾತು ಕೇಳಿ ತಮ್ಮ ಭೂಮಿಯನ್ನು ತೊರೆದು ದುಡಿಯಲೆಂದು ರತ್ನಾಗಿರಿಗೆ  ಹೋಗುವುದು ಒಂದು ರೀತಿ ಅವರೆಲ್ಲ ನಗರೀಕರಣ ಪ್ರಕ್ರಿಯೆಯು ಸೃಷ್ಟಿಸಿರುವ ಭ್ರಾಮಕ ಜಗತ್ತಿನ ತತ್ಕಾಲದ ಸುಖವನ್ನು ಅರಸಿ ಹೋಗುತ್ತಿರುವರೇನೋ ಎಂದೆನಿಸುತ್ತದೆ! ಇದೆಲ್ಲವೂ ಒಂದರ್ಥದಲ್ಲಿ ಆಧುನಿಕ ಜಗತ್ತಿನ ಸೆಳೆತಕ್ಕೆ ಸಿಲುಕಿರುವ ಮನುಷ್ಯ, ಒಂದು ಕಾಲದ ಸಾಂಪ್ರದಾಯಿಕವಾದ ಗ್ರಾಮ ಜಗತ್ತಿನ ನಿಜದ ಸುಖದಿಂದ ವಂಚಿತನಾಗುತ್ತಿದ್ದಾನೆ ಎಂಬ ಮಾತಿಗೆ ಪ್ರತಿಮೆಯಂತೆ ಕಥೆಯಲ್ಲಿ ಮೂಡಿ ಬಂದಿವೆ.

ಇಲ್ಲಿ, ರೈಲು ನಿಲ್ದಾಣದಲ್ಲಿ ಕಥೆಗಾರನಿಗೆ ಎದುರಾಗುವ, ಸದಾ ಚಡಪಡಿಕೆಯಲ್ಲಿದ್ದಂತೆ ತೋರುತ್ತಿದ್ದ ಅನಾಮಿಕ ವ್ಯಕ್ತಿಯು ಯಾವುದೋ ಕಲ್ಪನೆಯ ಬೃಂದಾವನದ ಸೆಳೆತಕ್ಕೆ ಸಿಲುಕಿ ಹೊರಬರಲಾಗದ ಸಂದಿಗ್ಧ ಸ್ಥಿತಿಯಲ್ಲಿರುವಂಥ ಮುಗ್ಧನಂತೆ ಓದುಗನನ್ನು ಆವರಿಸುತ್ತಾನೆ.

ಇನ್ನು, ಕಥೆಗಾರರು ಕಥೆಯುದ್ದಕ್ಕೂ ಅಲ್ಲಲ್ಲಿ ಬಳಸಿರುವ ಸಾಲುಗಳು, ಇಡಿಯಾಗಿ ಕಥೆಯ ಆಶಯವನ್ನು ಅನೂಹ್ಯ ಅರ್ಥದಲ್ಲಿ ಧ್ವನಿಸುತ್ತಿವೆ ಏನೋ ಎಂದೆನಿಸುತ್ತದೆ! 

ಈ ಸಾಲುಗಳನ್ನು ನೋಡಿ: '..ಸ್ಟೇಶನ್ನಿನ ಗದ್ದಲ ನನಗೆ ಒಂದು ರೀತಿಯ ನಾದದಂತೆ ತೋರುತ್ತದೆ. ಅದರ ಗುಂಗಿನಲ್ಲಿ ತಪಸ್ವಿಯೊಬ್ಬನಿಗೆ ಏಕಾಂತದಲ್ಲಿ ದೊರೆಯುವಂಥ ಏಕಾಗ್ರತೆ ಮೂಡುತ್ತದೆ..' - ಈ ಸಾಲುಗಳು ಸಮೂಹದೊಂದಿಗೆ ಒಡನಾಡುವುದರಲ್ಲಿ ಸಿಕ್ಕುವ ಸುಖ ಏಕಾಂಗಿತನದಲ್ಲಿ ಸಿಕ್ಕದು ಎಂಬ ಮಾತಿಗೆ ಪ್ರತಿಮೆಯಂತಿವೆ. ಇದನ್ನು ಮೀರಿ ಬಹುತ್ವವನ್ನು ಪ್ರತಿಪಾದಿಸುತ್ತವೆ!

ಹಾಗೆಯೇ, 'ಊರ್ಧ್ವರೇತ' ಕಥೆ, ತಾನು ಧ್ವನಿಸುವ ಅನೂಹ್ಯವಾದ ಅರ್ಥದಿಂದಾಗಿ ಓದುಗನ ಅಂತರಂಗವನ್ನು ಕದಡಿ ಬಿಡುತ್ತದೆ. ಇಲ್ಲಿ, ಕಥೆಯ ಮುಖ್ಯ ಪಾತ್ರ ಇತಿಹಾಸ ಪ್ರಾಧ್ಯಾಪಕ ಡಾ.ರಂಗರಾಜ ಅವರು ಚರಿತ್ರೆಯನ್ನು ನೋಡುವ ಕ್ರಮ ಕಾಲಾಂತರದಲ್ಲಿ ಅವರ ಬದುಕಿನಲ್ಲಿ ಮಹತ್ತರವಾದ ಪಲ್ಲಟವನ್ನುಂಟು ಮಾಡುತ್ತದೆ! ಕಥೆಯುದ್ದಕ್ಕೂ ಹಟಯೋಗಿಯಂತೆ ಗೋಚರಿಸುವ ಅವರು ವಾಸ್ತವದಲ್ಲಿನ ತಮ್ಮ ಇರುವಿಕೆಯನ್ನು ಕಾಲಕ್ರಮದಲ್ಲಿ ನಿರಾಕರಿಸುತ್ತ ಬರುವುದಕ್ಕೂ ಒಂದು ಕಾರಣವಿದೆ. ಇತಿಹಾಸ ಪ್ರಾಧ್ಯಾಪಕ ಡಾ.ರಂಗರಾಜ ಅವರಿಗೆ ಸಹಜವಾಗಿಯೇ ಶಿಲ್ಪಕಲೆಯಲ್ಲಿ ಇದ್ದ ಆಸಕ್ತಿಯ ಕಾರಣವಾಗಿಯೇ ಗಂಡು ಹೆಣ್ಣಿನ ನಡುವಿನ ದೇಹ ಸಂಬಂಧಿ ವಿಚಾರಗಳ ಕುರಿತಾಗಿ ಇನ್ನಿಲ್ಲದಂತೆ ಆಲೋಚಿಸುವಂತೆ ಮಾಡುತ್ತದೆ.

ಇದು ಪರೋಕ್ಷವಾಗಿ ಆರೋಗ್ಯದ ನೆಪದಲ್ಲಿ ಅವರು ಯೋಗದಲ್ಲಿ ಆಸಕ್ತಿ ತಳಿಯುವಂತೆ ಮಾಡುವುದು ಸಹಜವಾಗಿದೆ. ಆದರೆ, ಬರೀ ಎಂದೋ ಕೆತ್ತಿದ ಬೆತ್ತಲೆ ಕಲ್ಲು ಗೊಂಬೆಗಳನ್ನು ಬಿಟ್ಟು ಇನ್ನಾವುದರಲ್ಲೂ ಕುತೂಹಲವನ್ನು ಹೊಂದಿರದ ಡಾ.ರಂಗರಾಜರಿಗೆ ಗಂಡು ಹೆಣ್ಣಿನ ನಡುವಿನ ದೇಹ ಸಂಭಂದದಂಥ ವಿಚಾರವನ್ನು ಮೀರಿ, ಆ ಬೆತ್ತಲೆ ಕಲ್ಲು ಬೊಂಬೆಗಳು ಆತನನ್ನು ಆತ್ಮಸಾಧನೆಗೆ ಪ್ರಚೋದಿಸುವುದು ಅತಿಶಯೋಕ್ತಿ ಎನಿಸಲಾರದು! ಇದೆಲ್ಲ, ಕಥೆಯ ಕೊನೆಯಲ್ಲಿ ಡಾ.ರಂಗರಾಜರಿಂದ ಗರ್ಭಧರಿಸುವ ಇಚ್ಛೆಯನ್ನು ವ್ಯಕ್ತಪಡಿಸುವ ಡಾ.ಸೇವಂತಿಗೆ ಆತ ನೀಡುವ ಉತ್ತರದಿಂದ ವ್ಯಕ್ತವಾಗುತ್ತದೆ!

ಇಡಿಯಾಗಿ ಕಥೆ, ಆಧ್ಯಾತ್ಮದ ಹಿನ್ನಲೆಯಲ್ಲಿ ಗಂಡು ಹೆಣ್ಣಿನ ಮಿಲನಕ್ರಿಯೆ ಮತ್ತು ಅದರ ಪರಿಣಾಮದಿಂದ ಉಂಟಾಗುವ ಫಲವಂತಿಕೆ- ಇವೆಲ್ಲ  ಆತ್ಮಸಾಧನೆಯ ದಾರಿಯಲ್ಲಿ ಸಾಧಕನ ಮೆಟ್ಟಿಲುಗಳು; ಅವು ಒಂದಕ್ಕೊಂದು ಬೆಸೆದುಕೊಂಡಿವೆ ಎಂಬರ್ಥವನ್ನು ಧ್ವನಿಸುತ್ತದೆ.

ಇನ್ನು, ಈ ಸಂಕಲನದ ಶೀರ್ಷಿಕೆಯೂ ಆಗಿರುವ 'ಏಕತಾರಿ'  ಕಥೆ, ಈ ಲೋಕದ ಸಕಲ ಜೀವಾತ್ಮಗಳಿಗೆ ಹಸಿವಿನಷ್ಟೇ ಅನಿವಾರ್ಯವಾದ ಗಂಡು ಹೆಣ್ಣಿನ ನಡುವಿನ ದೇಹ ಸಂಬಂಧಿಯಾದ ಕ್ರಿಯೆಯೊಂದಿದೆ. ಅದು ಇರುವುದರಿಂದಲೇ ಆ ಸಕಲ ಜೀವಾತ್ಮಗಳ ಉಸಿರು ಚಲನೆಯಲ್ಲಿದೆ ಎಂಬ ಅರ್ಥವನ್ನು ಧ್ವನಿಸುತ್ತದೆ! 

ಈ ಕಥೆಯ ಮುಖ್ಯ ಪಾತ್ರ ಚಂದ್ರವ್ವನಾದರೂ ಏನಕೇನ ಕಾರಣಗಳಿಂದಾಗಿ ದೇಹ ಸುಖದ ರುಚಿ ಕಾಣದ ಹೆಂಗಸು. ಆಕೆಯ ಗಂಡ ಚಂದ್ರಪ್ಪನಿಗೆ ದೇಹ ಸುಖದಲ್ಲಿರುವ ನಿರಾಸಕ್ತಿಯ ಕಾರಣದಿಂದಾಗಿ ಮದುವೆಯಾದ ಹೊಸದರಲ್ಲಿ ಪ್ರಸ್ತದ ದಿನವೇ ಆಕೆ ನಿರಾಶೆಯ ಮಡುವಿಗೆ ತಳ್ಳಲ್ಪಡುವುದಕ್ಕೆ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಆಚರಣೆಯಲ್ಲಿರುವ ಅಂಧ ಶ್ರದ್ಧೆಯೂ ಒಂದು ರೀತಿಯಲ್ಲಿ ಕಾರಣವಾಗುತ್ತದೆ! ಮದುವೆ, ಗಂಡ, ಮಕ್ಕಳು ಎಂದರೆ ಏನೆಂದು ತಿಳಿಯದಂಥ ವಯಸ್ಸಿನಲ್ಲಿ ಚಂದ್ರವ್ವನನ್ನು ಇಂಥದರಲ್ಲಿ ಆಸಕ್ತಿಯೇ ಇಲ್ಲದ ಚಂದ್ರಪ್ಪನ ಕೊರಳಿಗೆ ಕಟ್ಟಿ ಕೈತೊಳೆದುಕೊಳ್ಳುವುದರ ಮೂಲಕ ಆಕೆಯನ್ನು ವೈವಾಹಿಕವಾಗಿ ಶೋಷಣೆಗೀಡು ಮಾಡುತ್ತದೆ, ಈ ಕುಟುಂಬ ವ್ಯವಸ್ಥೆ!

ಆದರೆ, ಹೀಗೆ ದಾರವೂ ಇಲ್ಲದ, ಸೂತ್ರವೂ ಇಲ್ಲದ ಗಾಳಿಪಟದಂತಾದ ಆಕೆಯ ಸ್ಥಿತಿಗೆ ಮೇಲ್ನೋಟಕ್ಕೆ ಚಂದ್ರಪ್ಪನ ಹೊಣೆಗೇಡಿತನವೇ ಕಾರಣವೆನಿಸಿದರೂ ಅದರ ಆಳದಲ್ಲಿ ಸಮಾಜ ರೂಪಿಸಿರುವ ಕಟ್ಟುಪಾಡುಗಳ ಕಾರಣವಾಗಿ ತನ್ನ ಗಂಡನಿಂದ ಸಿಗಬೇಕಾದ ದೇಹ ಸುಖವನ್ನು ಅನ್ಯ ಗಂಡಸಿನಿಂದ ಆಕೆ ಪಡೆಯಲಾಗದೆ ಇರುವುದೇ ನಿಜದ ಕಾರಣವಾಗಿದೆ! ಕಡೆಗೂ ಹಸಿವಿನಷ್ಟೇ ಅನಿವಾರ್ಯವಾದ ಗಂಡು ಹೆಣ್ಣಿನ ನಡುವಿನ ದೇಹ ಸಂಬಂಧಿ ಕ್ರಿಯೆಯೇ ಈ ಜೀವ ಜಗತ್ತನ್ನು ಮುನ್ನಡೆಸುತ್ತಿದೆ ಎಂಬ ಸತ್ಯ ಶೋಧನೆಗಿಳಿಯುತ್ತದೆ, ಕಥೆ!

ಇದು ಕಡೆಗೂ ಚಂದ್ರವ್ವ ಸಿಡಿದೆದ್ದು, ತನ್ನ ತವರುಮನೆ ನಿಲೋಗಲ್ಲಿನಲ್ಲಿರುವ ಕಿತ್ಲಿ ನೀಲಪ್ಪನ ಮೂಲಕ ಸುಖ ಉಣ್ಣಲು ಬಯಸುವುದು ಗಂಡು ಹೆಣ್ಣಿನ ನಡುವಿನ ದೇಹ ಸಂಬಂಧದ ವಿಚಾರದಲ್ಲಿ ಸಮಾಜ ರೂಪಿಸಿರುವ ಕಟ್ಟಳೆಗಳನ್ನು ಮೀರುವುದೇ ಆಗಿದೆ. ಏಕೆಂದರೆ, ಸಮಾಜ ರೂಪಿಸಿರುವ ಕಟ್ಟಳೆಗಳನ್ನು ಮೀರಿ ನಿಸರ್ಗ ರೂಪಿಸಿರುವ ಸಂಬಂಧಗಳ ತೀವ್ರತೆ ಅಗಾಧವಾದುದು ಎಂಬ ಮಾತಿಗೆ ಕಥೆಯೊಳಗೆ ಬರುವ ಈ ಘಟನೆ ಪ್ರತಿಮೆಯಂತಿದೆ!

ಅಷ್ಟಕ್ಕೂ, ಚಂದ್ರಪ್ಪ  ತನ್ನಿಂದಾಗದ ಕೆಲಸದಿಂದ ನೈತಿಕತೆಯ ಪಾತಳಿಯ ಮೇಲೆಯೇ ಜಾರಿಕೊಳ್ಳಲು ಚಂದ್ರವ್ವನ ವಿಚಾರದಲ್ಲಿ ಇನ್ನಿಲ್ಲದ ಸುದ್ದಿ ಹರಡುವುದು, 'ಚಂದಾಲಿಂಗಿ ಗೀಗೀ ತಂಡ' ಸೇರಿ ಊರೂರು ಸುತ್ತುತ್ತ ಮಾಳವ್ವನೊಂದಿಗೆ ಕೂಡಿಕೆ ಸಂಬಂಧ ಇಟ್ಟುಕೊಂಡಂತೆ ಸುದ್ದಿಯನ್ನು ಸೃಷ್ಟಿಸುವುದು- ಇಂಥ ವಿಲಕ್ಷಣ ಕ್ರಿಯೆಗಳಲ್ಲಿ ಆತ ತೊಡಗುವುದು ಒಂದರ್ಥದಲ್ಲಿ ಹೆಣ್ಣಿನ ಮೇಲಿನ ಗಂಡಿನ ದೌರ್ಜನ್ಯಕ್ಕೆ ಕನ್ನಡಿ ಹಿಡಿಯುತ್ತವೆ! 

ಇದೆಲ್ಲವನ್ನೂ ಮೀರಿ ಇಡಿಯಾಗಿ ಕಥೆ, ಗಂಡು ಹೆಣ್ಣಿನ ದೇಹ ಸಂಬಂಧಿ ವಿಚಾರವನ್ನು ತಾತ್ವಿಕತೆಯ ಹಿನ್ನೆಲೆಯಲ್ಲಿ ಶೋಧಿಸಲು ಪ್ರಯತ್ನಿಸುತ್ತದೆ!

ಈ ಸಂಕಲನದಲ್ಲಿ ಓದುಗನನ್ನು ಸಂಬಂಧಗಳ ಕುರಿತಾಗಿ ಇನ್ನಿಲ್ಲದಂತೆ ಚಿಂತನೆಗೀಡು ಮಾಡುವ ಕಥೆಯೊಂದಿದೆ. ಅದು, ನಗರ ಜೀವನದ ವ್ಯಾಮೋಹಕ್ಕೆ ಒಳಗಾದ ಸುಶಿಕ್ಷಿತ ವ್ಯಕ್ತಿಯೊಬ್ಬ ತನ್ನ ಗ್ರಾಮ ಬದುಕಿನ ನೆಲಮೂಲ ಸಂಸ್ಕ್ರತಿಯಿಂದ ವಿಮುಖನಾಗಿ ಸಂಬಂಧಗಳಿಗೆ ಬೆಲೆ ಕೊಡದ ಸದಾ ಹೊಸತನ್ನು ಬಯಸುವ ನಗರ ಜೀವನದತ್ತ ಮುಖ ಮಾಡುವುದು ಮತ್ತು ಇತ್ತ ಸಂಬಂಧಗಳನ್ನು ಕಾಪಿಟ್ಟುಕೊಳ್ಳುವ ಹಳ್ಳಿ ಮೂಲ ಸಂಸ್ಕೃತಿಗೂ ಸಲ್ಲದೆ, ಅತ್ತ ಸಂಬಂಧಗಳ ಅರ್ಥವೇ ಗೊತ್ತಿರದ ನಗರ ಜೀವನದ ಧಾವಂತದ ಬದುಕಿಗೂ ಸಲ್ಲದೆ ಗೊತ್ತು ಗುರಿಯಿಲ್ಲದೆ ಗಾಳಿಯಲ್ಲಿ ಅಂಡಲೆಯುವ ಪ್ರೇತಾತ್ಮದಂತಾಗುವ ಆತನ ಮನೋಭೂಮಿಕೆಯ ಕುರಿತಾಗಿ ಮಾತನಾಡುವ  'ಸುಖದ ನಾದ ಹೊರಡಿಸುವ ಕೊಳಲು' ಎಂಬ ಕಥೆ!

ಈ ಕಥೆಯಲ್ಲಿ ಬರುವ ರೆಬಕವ್ವ ಮುದುಕಿ ನಮ್ಮ ಭಾರತೀಯ ಪುರಾಣೇತಿಹಾಸದಲ್ಲಿ ನಂಬಿಕೆಯಿಟ್ಟಿರುವ ಅಮಾಯಕ ಹೆಂಗಸು. ಇಲ್ಲಿ, ಕಥೆಗಾರರು ಈಕೆಯ ಬದುಕನ್ನು ಒಂದು ಪ್ರದೇಶದ ಕಾಲಘಟ್ಟವೊಂದರಲ್ಲಿ ಜನಜನಿತವಾದ, ಪುರಾಣದಲ್ಲಿ ಬರುವಂಥ ಊರು ಕಾಯುವ ದೇವರಾದ ಅರಣ್ಯಸಿದ್ಧನ ಲೌಕಿಕ ಬದುಕಿನೊಂದಿಗೆ ಸಮೀಕರಿಸಿ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ರೆಬಕವ್ವ ಮುದುಕಿ, ಜಾತ್ರೆಯಲ್ಲಿ ಆರಣ್ಯಸಿದ್ಧ ದೇವರಿಗೆ ಮಡಿಯಿಂದ ಚೆಮ್ಮಾವುಗೆಯನ್ನು ಮಾಡಿಕೊಡುವ ಮಾದರ ಜಾತಿಗೆ ಸೇರಿದವಳು. ಆಕೆಯ ಒಬ್ಬನೇ ಮಗ ಅರಣ್ಯಸಿದ್ಧ ಅಕ್ಷರ ಕಲಿತು ನೌಕರಿ ನಿಮಿತ್ತ ನಗರ ಸೇರಿದ ಮೇಲೆ ಹಳ್ಳಿಯ ಸಂಸ್ಕ್ರತಿಯಿಂದ ಸಂಪೂರ್ಣ ವಿಮುಖನಾಗಿ ಬಿಡುತ್ತಾನೆ. ಇದು ಒಂದರ್ಥದಲ್ಲಿ ನಗರೀಕರಣ ಪ್ರಕ್ರಿಯೆಯು ನಗರ ಬದುಕನ್ನು ಅರಸಿ ಹೋಗುವ ಮುಗ್ಧ ಹಳ್ಳಿ ಜನರ ಮೇಲೆ ಅದೆಂಥ ಘೋರ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.

ಕಡೆಗೂ ಒಂದು ದಿನ ಹಳ್ಳಿಗೆ ಬರುವ ಆಕೆಯ ಮಗ ಅರಣ್ಯಸಿದ್ಧನಲ್ಲಿ ಅಗಾಧವಾದ ಬದಲಾವಣೆಯಾಗಿರುತ್ತದೆ! ತನ್ನ ಹೆಸರನ್ನು ಅರುಣಕುಮಾರ ಎಂದು ಬದಲಿಸಿಕೊಂಡಿದ್ದ ಆತ, ತನ್ನ ಜಾತಿ ಸಂಸ್ಕೃತಿಯನ್ನೂ ಮರೆಯುವುದರ ಮೂಲಕ ರೆಬಕವ್ವ ತನ್ನ ಮಗನ ವಿಚಾರದಲ್ಲಿ ಕಟ್ಟಿಕೊಂಡಿದ್ದ ಕನಸನ್ನು ನುಚ್ಚುನೂರು ಮಾಡುತ್ತಾನೆ. ತನ್ನ ಪೂರ್ವಜರು ಆರಣ್ಯಸಿದ್ಧನಿಗೆ ಜಾತ್ರೆಯಲ್ಲಿ ಮಡಿಯಿಂದ ಮಾಡುತ್ತಿದ್ದ ಚೆಮ್ಮಾವುಗೆ ಸೇವೆಗೆ ಆಧುನಿಕತೆಯ ಸ್ಪರ್ಶವನ್ನು ನೀಡುತ್ತಾನೆ. ನಗರದಿಂದ ಬರುವಾಗ ತಂದಿದ್ದ ರೆಡಿಮೇಡ್ ಚಪ್ಪಲಿಗಳನ್ನೇ ಮೆರವಣಿಗೆಯಲ್ಲಿ ಹೋಗಿ ದೇವರಿಗೆ ಅರ್ಪಿಸುತ್ತಾನೆ. ಇದು ರೆಬಕವ್ವನ ನಂಬಿಕೆಗಳನ್ನೇ ಅಪವಿತ್ರ ಮಾಡುತ್ತದೆ!

ಕಡೆಗೆ, ಆತ ಪೌಳಿಯಲ್ಲಿದ್ದ ಕನೇರಿ ಬಾವಿಯನ್ನು ತೋಡಿಸಲು ಮುಂದಾದಾಗ ಊರ ಜನರು ವಿರೋಧ ವ್ಯಕ್ತಪಡಿಸುತ್ತಾರೆ. ಅವರ ನಂಬಿಕೆಯಲ್ಲಿ ಕನೇರಿ ಬಾವಿಯನ್ನು ತೋಡಿ ನೀರು ಬರಿಸುವುದೆಂದರೆ ಅರಣ್ಯಸಿದ್ಧನ ತಾಯಿ ಜನ್ನವ್ವನ ಕಣ್ಣಲ್ಲಿ ನೀರು ಬರೆಸಿದಂತೆಯೇ ಸರಿ ಎಂದಾಗಿರುತ್ತದೆ‌! ಇದು, ನಮ್ಮ ಭಾವನೆಗಳನ್ನು ನಂಬಿಯೇ ಪೋಷಿಸುತ್ತದೆ ಎಂಬುದಕ್ಕೆ ಪ್ರತಿಕ್ರಿಯೆಯಂತಿದೆ. ಇಡಿಯಾಗಿ ಕಥೆ  ಪುರಾಣಗಳಿಗೆ ಸಂಬಂಧಿಸಿದ ಸಂಗತಿಯೊಂದು ವರ್ತಮಾನದ ವಿಚಾರವನ್ನು ಅರಿವಿಗೆ ತರುವಂತೆ ಕಥೆಗಾರರು ವಸ್ತುವನ್ನು ನಿರ್ವಹಿಸಿದ್ದಾರೆ.

ತಮ್ಮ ಸುತ್ತಲಿನ ಜಗತ್ತನ್ನು ಅವಲೋಕಿಸುವ ಕಲೆಯನ್ನು ರೂಢಿಸಿಕೊಂಡಿರುವ ಕಥೆಗಾರ ಚನ್ನಪ್ಪ ಕಟ್ಟಿ ಅವರು, ವರ್ತಮಾನ ಸಂದರ್ಭದ ರಾಜಕೀಯ ವಿದ್ಯಮಾನಗಳನ್ನು ವಿಭಿನ್ನ ನೆಲೆಯಲ್ಲಿ ಅರ್ಥೈಸುತ್ತಾರೆ. ಈ ಸಂಕಲನದಲ್ಲಿರುವ 'ರಾಯಪ್ಪನ ಬಾಡಿಗೆ ಸಾಯಿಕಲ್ಲು'  ಅಂಥದೊಂದು ಕಥೆಯಾಗಿದ್ದು, ವರ್ತಮಾನ ಸಂದರ್ಭದಲ್ಲಿನ ರಾಜಕೀಯ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ, ನಮ್ಮ ರಾಜಕಾರಣಿಗಳು ಸ್ವಾರ್ಥ ಸಾಧನೆಗಾಗಿ ಮುಗ್ಧ ಜನರನ್ನು ಹೇಗೆಲ್ಲ ಬಳಸಿಕೊಂಡು ಶೋಷಿಸುತ್ತಾರೆ ಎಂಬ ಸೂಕ್ಷ್ಮ ವಿಚಾರವನ್ನು ಅರಿವಿಗೆ ತರುತ್ತದೆ.

ಇಲ್ಲಿ, ಈ ಕಥೆಯ ಮುಖ್ಯ ಪಾತ್ರ ರಾಯಪ್ಪ, ಇಡಿಯಾಗಿ ಈ ದೇಶದ ಪ್ರಜೆಗಳನ್ನು ಪ್ರತಿನಿಧಿಸುತ್ತಾನೆ. ತಾನಿರುವ ಹಳ್ಳಿಯೊಂದರ  ಹೊಲದಲ್ಲಿ ದುಡಿದು ತಿನ್ನುವ ಸಾಮಾನ್ಯ ರೈತನಾದ ಆತನನ್ನು ಮೈಕಿನ ಸೌಂಡ್ ಇದೆಯಲ್ಲ. ಅದು ಥಟ್ಟನೆ ತನ್ನತ್ತ ಸೆಳೆದುಕೊಳ್ಳುವ ಕ್ರಿಯೆಯೇ ವಿಸ್ಮಯವನ್ನುಂಟು ಮಾಡುತ್ತದೆ! ಆತನ ಮನಸ್ಥಿತಿಯೊಳಗೆ ಪಲ್ಲಟವನ್ನುಂಟು ಮಾಡುವ ಈ ಕ್ರಿಯೆ ವಾಸ್ತವದಲ್ಲಿ ನಮ್ಮ ರಾಜಕಾರಣಿಗಳು ಜನರ ಮನಸ್ಥಿತಿಯನ್ನು ಹೇಗೆಲ್ಲ ನಿಯಂತ್ರಿಸುತ್ತಾರೆ ಎಂಬುದಕ್ಕೆ ಪ್ರತಿಮೆಯಂತಿದೆ.

ಮುಂಬರುವ ಎಂಎಲ್ಎ ಚುನಾವಣೆಯಲ್ಲಿ ಟಿಕೆಟ್ ಸಿಕ್ಕದೆ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿರುವ ತೀರ್ಥಪ್ಪ ಗೌಡನು ಹೈಕಮಾಂಡ್ ಮೇಲೆ ಒತ್ತಡ ಹೇರಿ ಟಿಕೆಟ್ ಪಡೆಯಲು ತನ್ನ ಭಂಟ ನಾಗಪ್ಪನ ಮೂಲಕ ರೂಪಿಸಿದ ತಂತ್ರಕ್ಕೆ ರಾಯಪ್ಪನು ಬಲಿಯಾಗುವುದು ಒಂದು ತೆರದಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿದೆ! ಹೊಲದಲ್ಲಿ ಗೊಬ್ಬರ ಹಾಕುವ ಕೆಲಸದಲ್ಲಿ ಮಗ್ನನಾಗಿದ್ದ ರಾಯಪ್ಪನನ್ನು ಮೈಕ್ ಸೌಂಡ್ನ ಮೂಲಕ ತಮ್ಮತ್ತ ಸೆಳೆದು ತಂದು, ಸೆರೆ ಕುಡಿಸಿ, ಉರುಳು ಸೇವೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುಲಗಂಜಿ ಮಠಕ್ಕೆ ಬರಲು ಬಾಡಿಗೆ ಸೈಕಲ್ ಕೊಡಿಸುವ ನಾಗಪ್ಪ, ಪರೋಕ್ಷವಾಗಿ ಆತನನ್ನು ಸಮಸ್ಯೆಗಳ ಸುಳಿಗೆ ಸಿಲುಕಿಸಿ ಬಿಡುತ್ತಾನೆ! ನಶೆಯ ಗುಂಗಿನಲ್ಲಿ ಹೋಗುವ ಭರದಲ್ಲಿ ಸೈಕಲ್ ಮುರಿದು ಛಿದ್ರವಾಗುತ್ತದೆ. ಇದು ಇಡಿಯಾಗಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ  ಸ್ವಾರ್ಥ ರಾಜಕಾರಣಿಗಳಿಂದಾಗಿ ಛಿದ್ರಗೊಂಡ ಕನ್ನಡಿಯಂತಾಗಿರುವುದನ್ನು ನೆನಪಿಸುತ್ತದೆ.

ಈ ಸಂಕಲನದಲ್ಲಿ ಈ ಕಥೆಗಳ ಹೊರತಾಗಿ ಬಹು ಮುಖ್ಯವಾದ ಇನ್ನೂ ನಾಲ್ಕು ಕಥೆಗಳಿವೆ. ಅವುಗಳಲ್ಲಿ, 'ಜುಮ್ಮಣ್ಣನ ಕಂಚಿನ ಮೂರ್ತಿ' ಕಥೆ, ಮನುಷ್ಯ ಬದುಕು ಅದೆಷ್ಟು ಸಂಕೀರ್ಣ ಮತ್ತು ಅದು ನಮಗೆ ಒದಗಿ ಬಂದಂತೆಯೇ ಅದನ್ನು ಅನುಭವಿಸಬೇಕಾದ ಅನಿವಾರ್ಯತೆಯ ಬಗ್ಗೆ ಮಾತನಾಡುತ್ತದೆ! ಹಾಗೆಯೇ, 'ಅಟ್ಟ' ಎಂಬ ಕಥೆಯಲ್ಲಿನ ಮುಖ್ಯಪಾತ್ರ, ಕೆಂಚನ ಭಾವನೆಗಳ ಮೂಲಕ ಅಧ್ಯಾತ್ಮ ಪ್ರಪಂಚವನ್ನು ತೆರೆದಿಟ್ಟರೆ, 'ಹೊಸ್ತಿಲೊಳಗಣ ಹುತ್ತ' ಕಥೆ, ಗ್ರಾಮ ಬದುಕಿನಲ್ಲಿ ಮನುಷ್ಯನೊಳಗಿನ ಹೆಪ್ಪುಗಟ್ಟಿರುವ ದ್ವೇಷಪೂರಿತ ಮನಸ್ಥಿತಿಯನ್ನು ಅನಾವರಣ ಮಾಡುತ್ತದೆ.

ಅಂದ ಹಾಗೆ, ಈ ಸಂಕಲನದಲ್ಲಿರು ಬಹುತೇಕ ಕಥೆಗಳು ಓದುಗನ ಕಣ್ಮುಂದೆ ಲೌಕಿಕ ಮತ್ತು ಅಲೌಕಿಕ ಬದುಕಿನ ಕುರಿತಾದ ವಿಚಾರಗಳನ್ನು ಗ್ರಾಮಲೋಕದ ಲ್ಲಿನ ನಂಬಿಕೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳ ಹಿನ್ನೆಲೆಯಲ್ಲಿ ತೆರೆದಿಡುತ್ತವೆ. ಅಂದರೆ, ಚನ್ನಪ್ಪ ಕಟ್ಟಿ ಅವರ 'ಏಕತಾರಿ' ಕಥಾಸಂಕಲನವು ಸಂಬಂಧಗಳ ಅರ್ಥವೇ ಗೊತ್ತಿರದ  ನಗರೀಕರಣ ಪ್ರಕ್ರಿಯೆಯ ವ್ಯಾಮೋಹಕ್ಕೆ ಒಳಗಾಗುತ್ತಿರುವ ಮನುಷ್ಯನಿಗೆ ಸಂಬಂಧಗಳ ಮೇಲೆಯೇ ನಿಂತಿರುವ ಗ್ರಾಮ ಬದುಕಿನ  ಮಹತ್ವದ ಕುರಿತಾಗಿ ಅರಿವು ಮೂಡಿಸುವ ಮಹತ್ತಾದ ಕೃತಿ ಎಂದೇ ಅರ್ಥ!

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಏಕತಾರಿ

ಕಲ್ಲೇಶ್ ಕುಂಬಾರ್

Comments