Article

ಗ್ರಾಮೀಣ ಬದುಕಿನ ಕತೆ ‘ಕುಡಿಯರ ಕೂಸು’

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಸುಬ್ರಹ್ಮಣ್ಯ, ಧರ್ಮಸ್ಥಳ ಕಾಡು ಪ್ರದೇಶದಲ್ಲಿ ಮಲೆಕುಡಿಯರು ಇದ್ದರು, ಈಗಲೂ ಇದ್ದಾರೆಯೋ ಇಲ್ಲವೋ ತಿಳಿಯದು. ಶಿವರಾಮ ಕಾರಂತರ ಕುಡಿಯರ ಕೂಸು ಕಾದಂಬರಿಯಿಂದ ಅವರು ಮಲೆಕುಡಿಯರ ಬಗ್ಗೆ ನಮಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಕಾದಂಬರಿಯನ್ನು ಓದಿದರೆ ನಮಗೆ ಅರ್ಥವಾಗುತ್ತದೆ ಅವರ ಜೀವನ ಹೇಗಿತ್ತೆಂಬುದು.

ಕಿರಿಮಲೆ ಮತ್ತು ಹಿರಿಮಲೆ ಎಂಬ ಎರೆಡು ಗ್ರಾಮದಲ್ಲಿ ನಡೆಯುವ ಕಥೆಯನ್ನು ಇಲ್ಲಿ ಕಾಣಬಹುದು. ಮಲೆಕುಡಿಯರಿಗೆ ತಮ್ಮ ಪ್ರದೇಶವನ್ನು ಬಿಟ್ಟು ಇತರ ಮನುಷ್ಯ ಸಂಪರ್ಕವು ತೀರಾ ಕಡಿಮೆ. ಅವರು ವಾಸಿಸುವುದು ಕಾಡಿನಲ್ಲೆ. ಆ ಮಲೆಗೆ ಒಬ್ಬ ಗುರಿಕಾರನನ್ನು (ಮುಖ್ಯಸ್ತ) ನೇಮಕ ಮಾಡಿರುತ್ತಾರೆ. ಯಾವುದೇ ವಿಷಯದಲ್ಲಾಗಲಿ ಗುರಿಕಾರನ ಸಲಹೆ ಪಡೆಯುತ್ತಿದ್ದರು, ಆ ಸಲಹೆಯನ್ನು ಗೌರವಿಸುತ್ತಿದ್ದರು. ಇಲ್ಲಿ ಬರುವ ಕೆಂಚ ಹಾಗು ಕೆಂಚ ತೀರಿಹೋದ ನಂತರ ತನ್ನ ಮೊಮ್ಮಗ ಕರಿಯ ಒಳ್ಳೆಯ ಗುರಿಕಾರರಾಗಿದ್ದರು. ಆದರೆ ಕೆಲವರಲ್ಲಿ ದ್ವೇಷ,ಅಸೂಹೆ ಇರುವುದು ಸಹಜ, ಗುರಿಕಾರತ್ವವನ್ನು ಹೇಗಾದರೂ ವಷ ಪಡಿಸಿಕೋಬೇಕೆಂಬ ಹಂಬಲ ತುಕ್ರನಿಗೆ ಅದಕ್ಕೆ ಮಲೆಯ ಧನಿಗಳಾದ ತಿರುಮಲ ಭಟ್ಟರ ನೆರವೂ ಇರುತ್ತದೆ, ತುಕ್ರನಿಗೆ ಗುರಿಕಾರತ್ವ ಬಂದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ.

ಅವರು ಆರಾಧಿಸುವ ದೇವರು ಕಲ್ಕುಡ, ಮಲೆರಾಯ ಹಾಗು ಕುಕ್ಕೆ ಸುಬ್ರಹ್ಮಣ್ಯ. ಕರಡಿ, ಚಿರತೆ, ಹುಲಿಯನ್ನು ಬೇಟೆಯಾಡುವುದು ಅವರ ವಾಡಿಕೆ ಕರಿಯನು ಒಳ್ಳೆಯ ಹುಲಿ ಬೇಟೆಗಾರನಾಗಿರುತ್ತಾನೆ. ಮಲೆಯಲ್ಲಿ ಏಲಕ್ಕಿ ಬೆಳೆಯುವುದು, ಧನಿಗಳಿಗೆ ಏಲಕ್ಕಿ ಮಾರಿ ಅವರಿಂದ ಸಿಗುವ ದವಸಿ ಧಾನ್ಯಗಳಿಂದ ಹಾಗು ಮೊಲ,ಕರಡಿ, ಜಿಂಕೆಯನ್ನು ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದೇ ಅವರ ಜೀವನ. ಅವರಾಯಿತು ಅವರ ಮಲೆಯರ ಗುಂಪಾಯಿತು. ಇತರ ಮನುಷ್ಯರ ಜೊತೆ ಸಂಪರ್ಕವೇ ಕಡಿಮೆ. ಆ ಮಲೆಯಲ್ಲಿ ಚಿನ್ನಿಯಂತಹ ಒಳ್ಳೆಯ ಹೆಂಗಸು, ಗಿಡ್ಡಿ,ಕೆಂಪಿಯಂತಹ ಕೆಟ್ಟ ಹೆಂಗಸರೂ ಇದ್ದರು. ಬೂದನನ್ನು ಮದುವೆಯಾದ ಕೆಂಪಿಗೆ ಧನಿಗಳ ವೇಷಭೂಷಣಗಳನ್ನು ಕಂಡು ಅದಕ್ಕೆ ಮಾರುಹೋಗಿ ಅಕ್ರಮ ಸಂಬಂಧವನ್ನು ಬೆಳೆಸುತ್ತಾಳೆ, ಕಡೆಯಲ್ಲಿ ಆಕೆ ಖಾಯಿಲೆಯಿಂದ ಸಾಯುತ್ತಾಳೆ. ನಮ್ಮ‌ ಸಮಾಜದಲ್ಲಿ ಕೆಂಪಿಯಂತಹ ಎಷ್ಟೋ ಹೆಂಗಸರಿದ್ದಾರೆ ದುಡ್ಡು, ಚಿನ್ನ, ಕಾಮ  ಇವುಗಳಿಗೆ ಮಾರುಹೋಗಿ ತಮ್ಮ ಜೀವನವನ್ನೇ ನಾಶಮಾಡಿಕೊಂಡಿರುವವರನ್ನು ಹಾಗೆಯೇ ಧನಿಗಳಂತೆ ಸದಾ ಕಾಮವನ್ನು ಬಯಸುವ ಗಂಡಸರನ್ನೂ ಕಾಣಬಹುದು.

ಮತ್ತೂಂದು ಆಶ್ಚರ್ಯಕರವಾದ ಸಂಗತಿಯಂದರೆ ಕಲ್ಕುಡನನ್ನು ಆರಾಧಿಸುವುದು. ಪ್ರತಿ ವರ್ಷವೂ ಕಲ್ಕುಡನಿಗೆ ಪೂಜೆಯಾಗಲೇ ಬೇಕು ಆತನಿಗೆ ಮಾಂಸದ ನೈವೇದ್ಯ ಅರ್ಪಿಸಲೇಬೇಕು. ಪೂಜೆ ನಡೆಸದಿದ್ದಲ್ಲಿ ಕಲ್ಕುಡ ಅಲ್ಲಿರುವ ಯಾರನ್ನಾದರೂ ಬಲಿತೆಗೆದುಕೊಳ್ಳುತ್ತಿತ್ತು. ಅಲ್ಲಿರುವ ಜನರ ನಂಬಿಕೆಯೇ ಹೀಗೆ ಕಲ್ಕುಡನಿಗೆ ವರ್ಷ ವರ್ಷ ಪೂಜೆ ಮಾಡಿದರೆ ಯಾವ ಅಪಾಯ ವಿರಲಾರರೆಂದು ತಪ್ಪಿದರೆ ಏನಾದರೂ ಅಪಶಕುನಗಳು ಎದುರಾಗುತ್ತವೆಂದು ಅವರ ನಂಬಿಕೆ. ಪೂಜೆಯನ್ನು ಅವರು ಕೋಲ ಎಂದು ಕರೆಯುವುದುಂಟು. ಕೋಲದ ದಿನ ಪೂಜಾರಿಯ ಮೇಲೆ ಕಲ್ಕುಡ ಬರುವುದು, ಇವರು ಕೇಳುವ ಪ್ರಶ್ನೆಗೆ ಉತ್ತರ ಕೊಡುತ್ತಿತ್ತು. ಕಲ್ಕುಡನಿಗೆ ಯಾರು ತಪ್ಪು ಮಾಡಿದರು ತಿಳಿಯುತ್ತಿತ್ತು, ತಪ್ಪು ಮಾಡಿದವರಿಗೆ ಕಾಣಿಕೆ ಕೊಟ್ಟು ತಮ್ಮ ತಪ್ಪನ್ನು ಪರಿಹಾರ ಮಾಡಿಕೊಳ್ಳಬೇಕೆಂದು ಆದೇಶಿಸುತ್ತಿತ್ತು. ಕಲ್ಕುಡನೆಂದರೆ ಎಲ್ಲಿಲ್ಲದ ಭೀತಿ. ಇದು ಎಷ್ಟು ನಿಜವೋ ಸುಳ್ಳೋ ಅವರ ನಂಬಿಕೆ ಅದು.

ಇಲ್ಲಿ ಬರುವ ಕರಿಯನ ಪಾತ್ರ ಸೊಗಸಾಗಿದೆ, ಆತನಿಗೆ ಚಿಕ್ಕ ವಯಸ್ಸಿನಿಂದಲೇ ಬೆಟ್ಟ ಹತ್ತಬೇಕು, ಜೇನು ಗೂಡು ಕಂಡರೆ ಅದನ್ನು ಹೇಗಾದರೂ ಹಿಡಿದು ಸವಿಯಬೇಕು, ಆನೆಯನ್ನು ಫಳಗಿಸಬೇಕು, ಹುಲಿ ಚಿರತೆಯನ್ನು ಭೇಟೆಯಾಡಬೇಕು ಇನ್ನು ಹಲವಾರು ಕೋರಿಕೆಗಳು. ಅದು ಫಲಿಸುತ್ತದೋ ವಿಫಲಿಸುತ್ತದೋ ಎಂಬುದು ಈ ಕಾದಂಬರಿಯ ಮುಖ್ಯ ಉದ್ದೇಶ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕೇಯ ಭಟ್‌