Article

ಗ್ರಾಮೀಣ - ಜಾಗತೀಕರಣದ ಬಿಂಬ ‘ಪಕ್ಕಿ ಹಳ್ಳದ ಹಾದಿಗುಂಟ’

'ಪಕ್ಕಿ ಹಳ್ಳದ ಹಾದಿಗುಂಟ'. ಓದಲು ಶುರು ಮಾಡುವಾಗ ಒಂದೇ ರಾತ್ರಿ ಓದಿ ಮುಗಿಸಬಲ್ಲೆ ಎನ್ನುವ ಅಹಂನ್ನು ಕಾದಂಬರಿಯ ಹರಹು ಇಲ್ಲದೆ ಮಾಡಿತು. ನನ್ನೂರಿನ ಬರಹಗಾರರು ಎನ್ನುವ ಪ್ರೀತಿ ದೈನಂದಿನ ಒತ್ತಡದ ನಡುವೆಯೂ ಓದಿ ಮುಗಿಸಲೇ ಬೇಕು ಅನ್ನುವ ಕಾಳಜಿಗೂ ಕಾರಣವಾಯಿತು.

.ಮುಖ್ಯವಾಗಿ ಮೂರು ತಲೆಮಾರುಗಳ ಕತೆಯನ್ನೊಳಗೊಂಡ ಕಾದಂಬರಿಯು ಆ ಕಾರಣದಿಂದಲೇ ಕಳೆದುಹೋದ ಬದುಕೊಂದನ್ನು ಜೀವಂತವಾಗಿಯೇ ತೆರೆದಿಡುತ್ತದೆ.ಹಾಗಾಗಿಯೇ ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿಯೂ ಕಾದಂಬರಿಯ ಓದು ಮುಖ್ಯವಾಗುತ್ತದೆ.

ಗ್ರಾಮೀಣ ಪರಿಸರದೊಂದಿಗೆ ಸಂಬಂಧವನ್ನು ಕಡಿದುಕೊಳ್ಳದೆ ನಗರೀಕರಣದ ಅಪಾಯದಾಚೆಗೂ ವಿಸ್ತರಿಸಿಕೊಳ್ಳುವ ಕತೆ ಬಲ್ಲಾಳ ಮನೆತನ ಮತ್ತು ರಾಮಶರ್ಮರ ಮನೆತನದ ಸಂಬಂಧದ ವಿವಿಧ ನೆಲೆಗಳನ್ನು ಸ್ಪರ್ಶಿಸುತ್ತಲೇ ಬೆಳವಣಿಗೆಯನ್ನು ಪಡೆಯುತ್ತದೆ.

ಮೊದಲ ಭಾಗದಲ್ಲಿ ಗೋಪಾಲಕೃಷ್ಣ ಪೈ ಗಳ 'ಸ್ವಪ್ನ ಸಾರಸ್ವತ' ದ ಓದನ್ನು ಎಲ್ಲೋ ನೆನಪಿಸುವಂತೆ ಕೊನೆಯ ಭಾಗ 'ಸುಬ್ಬಣ್ಣ' ಕಾದಂಬರೀಯನ್ನೂ ನೆನಪಿಸುತ್ತದೆ. 332 ಪುಟಗಳನ್ನು ಒಳಗೊಂಡ ಈ ಕಾದಂಬರಿಯಲ್ಲಿ ಮೂರು ಭಾಗಗಳಿವೆ. ಕಾಸರಗೋಡಿನ ಕನ್ನಡ ಹೋರಾಟ,ಕಮ್ಯೂನಿಸ್ಟ್ ಚಿಂತನೆ, ಮೊದಲ ಭಾಗದಲ್ಲಿದ್ದರೆ ಕೊನೆಯ ಭಾಗವಿಡೀ ಎಂಡೋಸಲ್ಫಾನ್ ದುರಂತದ ದಟ್ಟ ಛಾಯೆಯನ್ನೊಳಗೊಂಡಿದೆ. ಅಸ್ಪ್ರಶ್ಯತೆ , ದಾರಿದ್ರ್ಯ, ಬ್ರಾಹ್ಮಣ್ಯ, ಇವೆಲ್ಲವನ್ನು ಒಳಗೊಂಡು ಅಂಬೇಡ್ಕರ್, ಗಾಂಧಿವಾದ ಇವನ್ನೂ ನೆನಪಿಸುವ ಕಾದಂಬರಿ ಭೂಮಾಲೀಕತ್ವದ ಬಗೆಗೂ ಬೆಳಕು ಚೆಲ್ಲುತ್ತದೆ.

ಒಂದೇ ವೇದಿಕೆಯಲ್ಲಿ ಹಲವು ಪಾತ್ರಗಳು ಮಿಂಚಿ ಮರೆಯಾಗುವಂತೆ ಹಲವು ಪಾತ್ರಗಳು ಮತ್ತೆ ಎಲ್ಲಿಯೂ ಕಾಣಲು ಸಿಗುವೂದಿಲ್ಲ. ವಾಸುದೇವನನ್ನು ಕೊಲೆಮಾಡುವಾಗೊಮ್ಮೆ ಬರುವ ಮನೆಬಿಟ್ಟು ಹೋದ ರಾಮಶರ್ಮರ ಮಗ ಈಶ್ವರ ಮತ್ತೆ ಎಲ್ಲಿ ಹೋದ, ಏನಾದ ಎನ್ನುವುದಕ್ಕೆ ಕತೆ ಉತ್ತರ ನೀಡುವುದಿಲ್ಲ. ಕಮ್ಯೂನಿಸ್ಟ್ ಕ್ರಾಂತಿಯ ಆರಂಭದ ಹೆಜ್ಜೆಗಳನ್ನು ದಾಖಲಿಸುವ ಕಾದಂಬರಿಯು ಅದರ ಮುಂದಿನ ನೆಲೆಗಳ ಬಗೆಗೆ ಪ್ರಸ್ತಾಪಿಸುವುದಿಲ್ಲ.

ಜಯಂತನ ಬದುಕಿನ ಅಭ್ಯುದಯಕ್ಕಾಗಿ ತನ್ನ ಸುಖ ಸಂತೋಷವನ್ನು ಹತ್ತಿಕ್ಕುವ ಹರಿಣಾಕ್ಷಿ ಪಕ್ಕಿ ಹಳ್ಳದಲ್ಲಿ ಮನಸ್ವೇಚ್ಛೆಯಾಗಿ ಈಜಾಡೋದು, ಎಂಡೋ ಪೀಡಿತ ಜಯಂತನನ್ನು ಬಿಟ್ಟು ಮುಕ್ತತಾಯಿ ಜತೆಗೆ ಹೋಗುವುದು ಇಂತಹ ಬೆಳವಣಿಗೆಗಳು ವ್ಯವಸ್ಥೆಯ ವಿರುದ್ಧದ ಧ್ವನಿಯಾಗಿ ಕಾಣಬೇಕಾಗುತ್ತದೆ. ರಾಧಮ್ಮ, ಮುಕ್ತಬಾಯಿ, ಹರಿಣಾಕ್ಷಿ ಪಾತ್ರಗಳ ಮೂಲಕ ಮಹಿಳಾವಾದದ ನೆಲೆಯಿಂದಲೂ ನೋಡಬಹುದಾದ ಅವಕಾಶವನ್ನೂ ಕಾದಂಬರಿಯು ಒದಗಿಸಿಕೊಡುತ್ತದೆ.

ಗ್ರಾಮೀಣ ಇಲ್ಲವೇ ಪ್ರಾದೇಶಿಕ ಜಗತ್ತನ್ನು ಆವರಿಸಿಕೊಳ್ಳುವ ಜಾಗತೀಕರಣವು ಬದುಕಿನ ವಿವಿಧ ಪಲ್ಲಟಗಳಿಗೆ ಹೇಗೆ ಕಾರಣ ಆಗಿವೆ ಎನ್ನುವುದನ್ನು ಮುಖ್ಯ ವಾಹಿನಿಯಲ್ಲಿ ಚಿತ್ರಿಸುವ ಕಾದಂಬರಿಯು ಇದರೊಂದಿಗೆ ವಿವಿಧ ಹೋರಾಟಗಳನ್ನು, ಎಂಡೋಸಲ್ಫಾನ್ ದುರಂತವನ್ನು,ವಿವಿಧ ಸಿದ್ದಾಂತಗಳನ್ನೂ ,ಜಾತೀಯತೆಯನ್ನೂ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಕಟ್ಟಿಕೊಡುತ್ತದೆ.

ಪಕ್ಕಿಹಳ್ಳದಲ್ಲಿರುವ ವಿವಿಧ ಔಷಧೀಯ ಸಸ್ಯಗಳು, ಅದರ ಬಳಕೆ ಬಲ್ಲ ಪಾರ್ವತಕ್ಕ ಒಂದು ಪ್ರದೇಶದ ಸಂಪತ್ತು.ಅಂತಹ ಪಾರ್ವತಕ್ಕ ನೆಲಮೂಲ ಸಂಸ್ಕ್ರತಿಯ ಪ್ರತಿನಿಧಿ. ವೈದ್ಯಕೀಯ ವಲಯಕ್ಕೂ ಸವಾಲಾದ ಹಲವು ರೋಗಗಳನ್ನು ಪಕ್ಕಿ ಹಳ್ಳದ ಮೂಲಿಕೆಗಳಿಂದ ವಾಸಿಮಾಡುವ ಪಾರ್ವತಕ್ಕ ಕೊನೆಗೆ ಮದ್ದು ನೀಡಲು ನಿರಾಕರಿಸುವಲ್ಲಿ ಒಂದು ಸಂಸ್ಕೃತಿಯ ಅವನತಿಗೆ ಮೌನವಾಗಿ ಸರಿದದ್ದನ್ನು ನೆನಪಿಸುವಲ್ಲಿ ಕಾದಂಬರಿಯು ಯಶಸ್ವಿಯಾಗುತ್ತದೆ.

ಒಂದೇ ಊರಿನಲ್ಲಿದ್ದು ವಿವಿಧ ಕಾರಣಗಳಿಂದ ಪಕ್ಕಿಹಳ್ಳದಿಂದ ದೂರವಾಗುವ ಶಿವರಾಮನಂತವರು ,ಮತ್ತು ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳುವ ಶೇಖರನಂತವರ ಮೂಲಕ ಎರಡು ವಿಭಿನ್ನ ಜಗತ್ತಿನ ಮುಖಾಮುಖಿ ನಡೆಯುತ್ತದೆ. ಮನುಷ್ಯ ಸಂಬಂಧಗಳ ವಿವಿಧ ಆಯಾಮಗಳನ್ನು ಚಿತ್ರಿಸುತ್ತಲೇ ಬದುಕಿನ ಅರ್ಥವೇನೆಂಬ ಪ್ರಶ್ನೆಗೂ ಕಾರಣವಾಗುತ್ತದೆ. ಮೊದಲ ಕಾದಂಬರಿಯ ಹಿಂದಿನ ಶ್ರದ್ದೆ, ಶ್ರಮ ಕಾಳಜಿ ,ಪ್ರೀತಿ ಎಲ್ಲದಕ್ಕೂ ಅನುಪಮಾ ಪ್ರಸಾದ್ ಅವರಿಗೆ ಅಭಿನಂದನೆಗಳು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸೌಮ್ಯ ಪಿ.