Article

ಗ್ರಾಮೀಣ ಬದುಕಿನ ಸೊಗಡನ್ನು ತುಂಬಿಕೊಂಡಿರುವ ಕತಾಸಂಕಲನ ‘ಒಂದು ಹೆಣದ ಸುತ್ತಮುತ್ತ’

ಪ್ರೊ.ವೀರಭದ್ರ ಕೌದಿಯವರು ಸಮಕಾಲೀನ ಲೇಖಕರಲ್ಲಿ ಬಹಳ ಮಾನವೀಯ ಮುತುವರ್ಜಿಯ ಲೇಖಕಕರಲ್ಲಿ ಒಬ್ಬರು. ಯಾವುದೇ ಪ್ರೊಫೆಸರ್ ಗಿರಿಯ ಯಾವ, ಗತ್ತು ಗಮ್ಮತ್ತಿಗೆ ಒಳಗಾಗದೇ ತಮ್ಮ ನೆಲದಲ್ಲಿಯ ಸತ್ವವನ್ನು ಹೀರಿಕೊಂಡು ತಾವು ಹುಟ್ಟಿದ ಮತ್ತು ನಿಂತ ನೆಲದ ಬಗೆಗೆ ಮತ್ತು ಬದುಕಿನ ಬಗೆಗೆ ಸದಾ ಕಾತರವನ್ನು ಇಟ್ಟುಕೊಂಡೇ ಬಂದವರು. ಹಳ್ಳಿಯ ಭಾಷೆ, ಆ ಸೊಗಡು ಮತ್ತು ಸೊಗಸು ಅಲ್ಲದೇ ಮುಗ್ಧತೆಯನ್ನು ಕಾಪಾಡಿಕೊಂಡು ಆ ಗ್ರಾಮೀಣತೆಯನ್ನು ಅನುಭವಸಿ ಅಭಿವ್ಯಕ್ತಿಸುವ ವಿಶೇಷ ಕಾಳಜಿವುಳ್ಳ ಬರಹಗಾರ. 

'ಬರ ಮತ್ತು ಹತ್ತು ಕಥೆಗಳು' ಪೊ. ವೀರಭದ್ರ ಕೌದಿಯವರ ಮೊದಲ ಕಥಾ ಸಂಕಲನ. ಈಗ ಎರಡನೆಯ ಕಥಾ ಸಂಕಲನವಾಗಿ 'ಒಂದು ಹೆಣದ ಸುತ್ತಮುತ್ತ' ಕಥಾ ಸಂಕಲನವನ್ನೂ ತರುವ ಮೂಲಕ ತಮ್ಮ ಬರಹಗಾರಿಕೆಯ ಛಾಪನ್ನು ಮುಂದುವರಿಸಿದ್ದಾರೆ. ಈ ಎರಡೂ ಕಥಾ ಸಂಕಲನಗಳು ವಿವಿಧ ಪ್ರಶಸ್ತಿ, ಪುರಸ್ಕಾರವನ್ನು ಹೊಂದಿರುವುದು ಸಹಜವಾಗಿಯೇ ಇದೆ. ಇವರ ಈ ಎರಡೂ ಕಥಾ ಸಂಕಲನಗಳು ಗ್ರಾಮೀಣ ಬದುಕಿನ ವೈವಿಧ್ಯಮಯ ಚಿತ್ರಣವೇಯಾಗಿವೆ. ಈ ಕಥೆಗಳಲ್ಲಿಯ ಮಾನವತೆ, ಏಕತೆ, ತಾವು ಬೆಳೆದ ನೆಲದ ಜನರ ನಂಬಿಕೆ ಮತ್ತು ಆಚರಣೆಗಳು ಅವು ಬದುಕನ್ನು ವ್ಯಾಪಿಸಿಕೊಂಡ ರೀತಿ-ರಿವಾಜುಗಳನ್ನು ಹೇಳುವಲ್ಲಿ ಪೊ.ವೀರಭದ್ರ ಕೌದಿಯವರು ನಮ್ಮೆಲ್ಲರ ಗಮನ ಸೆಳೆಯುತ್ತಾರಷ್ಟೇಯಲ್ಲ ಅಭಿವ್ಯಕ್ತಿಯಲ್ಲಿ ನಿರೂಪಣೆಗಾರನ ಅತೀ ಸೂಕ್ಷ್ಮ ಮನಸ್ಸಿನ ತೀಕ್ಷ್ಣ ದೃಷ್ಟಿ, ಸಹೃದಯತೆ, ಸಂವೇದನಾ ಶೀಲ ಮನಸ್ಸು ಮತ್ತು ಮುಗ್ಧತೆ ಆಮೂಲಾಗ್ರವಾಗಿ ಗ್ರಹಿಸಿ ಕಥೆ ಕಟ್ಟುವಲ್ಲಿನ ಪ್ರೊ.ವೀರಭದ್ರ ಕೌದಿಯವರ ಪ್ರತಿಭೆಯನ್ನು ಮೇಲ್ಪಂಕ್ತಿಯಲ್ಲಿ ನಿಲ್ಲುಸುತ್ತದೆ.

ಪ್ರೊ.ವೀರಭದ್ರ ಕೌದಿಯವರು ತಾವು ಹುಟ್ಟಿ, ಬೆಳದ ನೆಲದ ಭಾಷೆಯನ್ನೇ ತಮ್ಮ ಸಾಹಿತ್ಯದ ಆಧಾರವಾಗಿಟ್ಟುಕೊಂಡಿರುವುದು ಅವರ ಮೇಲಿನ ಮಮಕಾರವನ್ನು ದ್ವಿಗುಣಗೊಳಿಸುತ್ತದೆ. ಉದ್ಯೋಗವಾಗಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ತಾಳಿಕೋಟಿಯ ಭಾಷೆಯನ್ನು ‌ತಮ್ಮ ಬರವಣಿಗೆಯ ಉದ್ದಕ್ಕೂ ಕಾಣಬಹುದು ನಾವು. ಅಲ್ಲದೇ ಪ್ರೊ. ವೀರಭದ್ರ ಕೌದಿಯವರು ತಾಳಿಕೋಟೆಯ ಖಾಸ್ಗತೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲೀಷ ಪ್ರಾದ್ಯಪಕರಾಗಿ ಹಾಗೂ ಮುದ್ದೇಬಿಹಾಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ಬೈಲಹೊಂಗಲದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಪ್ರೊ.ವೀರಭದ್ರ ಕೌದಿಯವರ 'ಒಂದು ಹೆಣದ ಸುತ್ತ ಮುತ್ತ' ಕಥಾಸಂಕಲನದ ಓದಿನ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಈ ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಎಲ್ಲ ಕಥೆಗಳೂ ಪ್ರಶಸ್ತಿ ವಿಜೇತ ಕಥೆಗಳಾಗಿರುವುದು ಮತ್ತೊಂದು ವಿಶೇಷವಾಗಿದೆ.

ಇಲ್ಲಿಯ ಬಹುಪಾಲು ಎಲ್ಲ ಕಥೆಗಳಲ್ಲಿ ದೇಸಿ ಬಾಷೆಯ ಸೊಗಡು ಎದ್ದು ಹೊಡೆಯುತ್ತದೆ. ಬೈಲಹೊಂಗಲದ ಸುತ್ತಮುತ್ತಲಿನ ಆಡುಭಾಷೆಯ ಸೊಗಸು- ಸೊಗಡು ಕಥಾಸಂಕಲನದ ಜೀವಾಳವಾದಿದೆ. ಈ ಎಲ್ಲ ಕಥೆಗಳೂ ಹಳ್ಳಿಗಳಲ್ಲಿಯೇ ಹುಟ್ಟಿ ಹಳ್ಳಿಗಳಲ್ಲಿಯೇ ಮುಕ್ತಾಯವಾಗುತ್ತವೆ. ಇದಕ್ಕೆ ಕಾರಣ ಅವರು ಹುಟ್ಟಿ ಬೆಳೆದ ಪರಿಸರ ಕಾರಣ. ಕಥೆಗಾರ ವೀರಭದ್ರ ಕೌದಿಯವರು ಬಾಲ್ಯದಲ್ಲಿ ತಾವು ಕಂಡ ಹಲವಾರು ಘಟನೆಗಳನ್ನು ಮರೆಯದೇ ಕಾಪಿಟ್ಟುಕೊಂಡು ಅವುಗಳ ಮೂಲತನಕ್ಕೆ ಭಂಗಬಾರದಂತೆ ದೊಡ್ಡವರಾದ ಮೇಲೂ ಅವುಗಳಿಗೆ ಕಥೆಯ ಚೌಕಟ್ಟು ನೀಡಿದ್ದು ಅವರ ಹೆಗ್ಗಳಿಕೆ. ಈ ಕಥಾಸಂಕಲನದ ಮೊದಲ ಕಥೆ ಒಂದು ಹೆಣದ ಸುತ್ತಮುತ್ತ ಕಥೆ ಅತ್ಯಂತ ಶಕ್ತಿಯುತವಾಗಿದೆ. ಗ್ರಾಮೀಣ ಬದುಕಿನಲ್ಲಿ ಸಹಜವೆಂಬಂತೆ ಜೀವಂತವಿರುವ ಸಮುದಾಯಿಕ ಪ್ರಜ್ಞೆಯು ತನ್ನ  ಆಕೃತಿಯಲ್ಲಿ ಗೋಚರಿಸುತ್ತದೆ. ಕೆಂಚಪ್ಪನೆಂಬ ಊರ ಹಿರಿಯನ ಸಾವಿನ ಸುದ್ದಿಯೊಂದಿಗೆ ಕಥೆ ಪ್ರಾರಂಭವಾಗುತ್ತದೆ. ಮುಂದೆ ನಡೆಯುವ ಘಟನೆಗಳು ಸ್ವಯಂ ಚಾಲಿತವೆಂಬಂತೆ ಘಟಿಸುತ್ತವೆ. ಎಲ್ಲೂ ಕೃತಕತೆ ನುಸುಳೋದಿಲ್ಲ. 

ಆ ಕಾರಣವಾಗೇ ಹೆಣದ ಮನೆ ಸೂತಕದ ಮನೆಯಾಗಿ ಗೋಚರಿಸುವುದಿಲ್ಲ. ಸ್ಮಶಾನದ ಛಾಯೆ ಬಿದ್ದು ಗವ್ವೆನ್ನುವುದಿಲ್ಲ. ಸಾವು ಇಲ್ಲಿನ ಜನರನ್ನು ಸೃಜನಶೀಲರನ್ನಾಗಿಸುತ್ತದೆ. ಯಾರೂ ಯಾರಿಗೂ ಹೇಳದೆ ಕೇಳದೆ ಆಯಾ ಸಂದರ್ಭಕ್ಕೆ ತಕ್ಕಂತೆ ಮಾಡಬೇಕಾದ ಕೆಲಸಗಳನ್ನು ತಾವೇ ಖುದ್ದಾಗಿ ಮಾಡುತ್ತಾರೆ.ಒಂದಿಬ್ಬರು ಕಾಳು, ಕಡಿ ತುಂಬಿದ ಚೀಲಗಳನ್ನು ಜೋಡಿಸಿಟ್ಟರೆ ಇನ್ನಿಬ್ಬರು ಮನೆಯ ಹಾಸಿಗೆ, ಕೌದಿಗಳನ್ನು ಮಡಚುತ್ತಾರೆ. ಒಬ್ಬಳು ಅಳುವ ಮಕ್ಕಳಿಗೆ ಒಲೆ ಹೊತ್ತಿಸಿ ಚಹಾ ಇಟ್ಟರೆ, ಇನ್ನೊಬ್ಬಳು ಹೆಣ ತೊಳೆಯಲು ನೀರು ಇಡುತ್ತಾಳೆ. ಒಂದಿಬ್ಬರು ಗಟ್ಟುತನವುಳ್ಳವರು ಹೆಣವನ್ನು ಶುಬ್ರವಾಗಿ ತೊಳೆದು ಧೋತರ, ಅಂಗಿ, ರುಮಾಲು ಉಡಿಸಿ ವಿಬೂತಿ ಹಚ್ಚಿ ಮನೆಯ ನಡುವಿನ ಅಂಕಣದಲ್ಲಿ ಡೊಳ್ಳಾರಿಯ ಮೇಲೆ ಕೂಡಿಸುತ್ತಾರೆ. 

ಬಜನಿ ಮ್ಯಾಳದ ಬಸಣ್ಣ ಪೇಟಿಯ ಬಾತಿ ಹಾಕಿ ಸೂರು ಹಿಡಿದು ಆಲಾಪ ಸುರು ಮಾಡುತ್ತಾನೆ. ಕೆಂಚಪ್ಪನ ಬಾಲ್ಯ ಸ್ನೇಹಿತ ಮಾಂತಜ್ಜ ಸತ್ತ ಸುದ್ದಿಯನ್ನು ಹೇಳಲು ಬೀಗರು ಬಿಜ್ಜರ ಊರಿಗೆ ಆಳು ಕಳಿಸುತ್ತಾನೆ. ಪರ ಊರಿನಿಂದ ಬಂದವರಿಗೆಂದು ಚೂಡಾ, ಉಸುಳಿ ವ್ಯವಸ್ಥೆ ಮಾಡುತ್ತಾನೆ. ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಿದ್ದರೂ ತಾವು ಏನೋ ಮಹತ್ತರವಾದ ಕೆಲಸ ಮಾಡುತ್ತಿದ್ದೇವೆ ಏನ್ನುವ ಅಹಮ್ಮಿಕೆ ಯಾರಲ್ಲೂ ಸುಳಿಯೋದಿಲ್ಲ. ಎಲ್ಲವೂ ಇಲ್ಲಿ ಸಹಜ ಕ್ರಿಯೆಯಾಗಿರುತ್ತದೆ. ಇದು ಕಥೆಗಾರಿಕೆಯ ಅಹಮ್ಮಿಕೆಯ ಸುಳಿವು. 

ಇನ್ನೂ ಕಥೆಗಳನ್ನು ಓದಿಯೇ ಆನಂದಿಸಬೇಕು.

೧) ತೇರು ಎಳೆಯಲಿಲ್ಲ

೨) ಅವ್ವ ಮತ್ತು ಅಜಾರಿ

೩) ಬೆಸೆಯುವವರು

೪) ಇಂದ್ರಾನಗರದ ಈರೇಶನೆಂಬ ಡಿಸಿ

೫)/ನೆಲನಾಳ್ದವ ಹೆಣವಾದ ಕಥೆ

ಇನ್ನೂ ಮುಂತಾದ 10 ಪುಷ್ಟಿಕರವಾದ ಕಥೆಗಳಿವೆ.

ಹಾಗೆಯೇ ಇನ್ನೊಂದು ಮಾತು. ಒಟ್ಟಾರೆಯಾಗಿ ಇಲ್ಲಿ ಎಲ್ಲ ಕಥೆಗಳನ್ನೂ ಎಲ್ಲರೂ ಓದಲೇಬೇಕಾದ ಕಥಾಸಂಕಲನವಿದು ಎಂದು ಹೇಳುತ್ತಾ ನನ್ನ ಅನಿಸಿಕೆಗಳ ಮಾತು ಮುಗಿಸುತ್ತೇನೆ.

ಶಿವು ಕೆ. ಲಕ್ಕಣ್ಣವರ