Article

ಹಾಣಾದಿಯ ಅಂತರಂಗ

ಅಪ್ಪ...ಅಂದರೆ ನನಗೆ ಈಗಲೂ ಸಹ ಎದೆಯೊಳಗೆ ಅಗಾಧವಾದ ಒಲವು ತುಂಬಿಕೊಂಡ ಹೃದಯವಂತ! ಅವನ ಭುಜದ ಮೇಲೆ ಕಾಲಿಳಿಬಿಟ್ಟು ಕಾಲು ತೂಗುತ್ತಾ ಕೂತಿದ್ದೆ. ಅವ ಎಲ್ಲವನ್ನು ಬೆರಳು ಮಾಡಿ ತೋರಿಸುತ್ತಿದ್ದ. ಅಂತಹದೊಂದು ಭಾವವನ್ನು ಅಕ್ಷರಗಳಲ್ಲಿ ಹಿಡಿದು ಕಥೆ ಕಟ್ಟಿಕೊಡುವುದು ಅಸಾಧಾರಣ ಕೆಲಸವೆ ಹೌದು.! 

ಹಾಣಾದಿ...

ಶುರುವಾಗೋದು ಸಹ ಅಂತಹ ಒಲವಿನ ಮಳೆಯಲಿ ನೆಂದ ಮಣ್ಣಿನ ಘಮಲೊಳಗೆ! ಒಂದು ಹಳ್ಳಿಯ ಸೊಗಡನ್ನು ಅಕ್ಷರಗಳಲ್ಲಿ ಹೆಣೆಯುವುದು ಅಷ್ಟು ಸುಲಭದ ಮಾತಲ್ಲ. ಅಲ್ಲಿ ಅನುಭವವಿರಬೇಕು , ಅಪಾರವಾದ ಹಳ್ಳಿ ಜೀವ - ಜೀವನದ ಮೇಲೆ ಒಲವಿರಬೇಕು.! ಅಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು ಕಪಿಲ. ಬಾಲ್ಯವನ್ನು ವಿಸ್ತಾರಗೊಳಿಸುತ್ತಾ ಹೋದಷ್ಟು ಹದಕ್ಕೆ ಬರುವಂತ ಭಾವ. ಅಲ್ಲಿ ರೆಕ್ಕೆ ಮುರಿದ ಚಿಟ್ಟೆ ಇದೆ , ಸಾಲು ಇರುವೆ ಶಿಸ್ತಿದೆ , ಆಡಿ ಬೆಳೆದ ಅಂಗಳಿದೆ , ಊರು ಬೀದಿಯ ತಿರುವಿದೆ , ಗುಬ್ಬಿ ಗಿಳಿಯ ನಾದವಿದೆ , ದೆವ್ವ - ಭೂತದ ಕಥೆಯಿದೆ , ಹೆಲಿಕ್ಯಾಪ್ಟರ್ ಥರಹದ ಚಿಟ್ಟೆ ಇದೆ , ಪೊರಕೆ ಕಡ್ಡಿಯ ಪತಂಗವಿದೆ ಹೀಗೆ ಬಾಲ್ಯ ಏರಿದಷ್ಟು ಎತ್ತರಕ್ಕೆ ಏರುತ್ತಲೆ ಹೋಗಿ ಒಂದು ಹಂತಕ್ಕೆ ದೊಡ್ಡವರೆಂದು ನಿರ್ಧರಿಸಿ ಅಪ್ಪನಿಗೆ ತಿಂಗಳಿಗೊಂದಿಷ್ಟು ದುಡಿದ ಪಗಾರದ ರೊಕ್ಕ ಕಳಿಸಿದರೆ ಸಾಕು ಜವಾಬ್ದಾರಿ ಮುಗಿತು ಎನ್ನುವಂತ ಯುವಕರ ಪಟ್ಟ ಕಟ್ಟಿಕೊಂಡುಬಿಡುತ್ತೆವೆ.!

ಎಂದಿಗೂ...

"ಅವಶ್ಯಕತೆಗಿಂತ ಹೆಚ್ಚು ಮಾತಾಡಿದವನಲ್ಲ. ಆದರೂ ಅವನ ಕಣ್ಣುಗಳು ಲೆಕ್ಕವಿಲ್ಲದಷ್ಟು ಮಾತುಗಳು ಪಟಪಟನೆ ಆಡುತ್ತಿದ್ದವು, ಓದಬೇಕಿತ್ತಷ್ಟೆ. ಕೆಲವು ಸಲ ಕಾದಂಬರಿಗಳು ಸಹ ಅವನ ಕಣ್ಣೆದುರು ಬೋರು ಹೊಡೆಸುತ್ತಿದ್ದವು. ಅವನಿಗೆ ನನ್ನ ಬಗ್ಗೆ ಹಲವು ಕಾರಣಕ್ಕೆ ಅಸಮಾಧಾನವಂತೂ ಇತ್ತು. ಆದರೆ ಪ್ರೀತಿ ಕಮ್ಮಿಯಾಗಿರಲಿಲ್ಲ. ಅವನಿಗೆ ಕೆಲಸ ಒಂದೆ ಖುಷಿ ಕೊಡುವ ಸಂಗತಿ. ಎಂದಿಗೂ ಬೇಸರಗೊಂಡವನಲ್ಲ. ಹೀಗೆ ಅಪ್ಪನ ಬಗ್ಗೆ ಎದೆಗಿಳಿಸುವ ಭಾವವನ್ನು ಹೆಣೆಯುತ್ತ ಸಾಗುವ ಕಥೆ ಬಹಳ ಕುತೂಹಲದಿಂದ ಸಾಗುತ್ತದೆ.! 

ಕಥೆ...

ಓದುವಾಗ ಕಾರಂತರ ಮೂಕಜ್ಜಿ ನೆನಪಾದರೆ ತಪ್ಪೇನಿಲ್ಲ! ಸುಕ್ಕುಗಟ್ಟಿದ ಚರ್ಮ , ನಡುಗುವ ಕೈಯೊಳಗೊಂದು ಕೋಲು , ಗುಬ್ಬಿ ಆಯಿ ಹಾಣಾದಿಯುದ್ದಕ್ಕೂ ಕಥೆ ಹೇಳುತ್ತಾ ಸಾಗುತ್ತಾಳೆ. ಅಲ್ಲಿ ವಾಸ್ತವ ಸಮಾಜದ ಮೌಢ್ಯದ ಬಗ್ಗೆ ಧ್ವನಿ ಎತ್ತಿ ಮಾತಾಡುತ್ತಾಳೆ! " ಜನರು ಮಾತುಗಳಿಗೆ ರೆಕ್ಕೆ ಕಟ್ಟುತ್ತಾರೆ  " ಅವರಿಗೊಂದು ಸುದ್ದಿ ಬೇಕು ಹುಟ್ಟಿಸುತ್ತಾರೆ. ಇನ್ನೊಂದು ಬಂತೋ ಹಳೆಯದಕ್ಕೆ ಸಂದೂಕಿನಲ್ಲಿಟ್ಟಿರುತ್ತಾರೆ. ಬೇಸರವಾಯಿತೋ ತೆಗೆಯುತ್ತಾರೆ. ಇದೆಲ್ಲಾ ಅವರ ಕಾಡು ಹರಟೆಗಳು ಎನ್ನುತ್ತಾ ತನ್ನ ನೋವನ್ನು ಸಹ ಹಂಚುತ್ತಾ ಹೋಗುವ ಗುಬ್ಬಿ ಆಯಿ ಕೋಪದ - ತಾಪದ - ಅಳಲನ್ನು ಬಿಚ್ಚಿಡುತ್ತಾಳೆ. ಗಂಡನೆಂಬುವನು ಮನುಷ್ಯನೇ ಆಗಿರಲಿಲ್ಲ ಬಳಸುವವರೆಗೆ ಬಳಸಿ ಬಿಸಾಕಿ ಹೋದ, ದೇವರ ದಯೆಯಿಂದ ಮಕ್ಕಳಾಗಲಿಲ್ಲ ನೋಡು. ಇಲ್ಲದಿದ್ದರೆ ಹೊಟ್ಟೆಗಳು ಹೆಚ್ಚಾಗುತ್ತಿದ್ದವು. ನನಗೆ ಹೊಟ್ಟೆಗಳ ಚಿಂತೆಯಿಲ್ಲ. ಆ ಶಿವ ಮಗು ಕೊಟ್ಟಿದ್ದಾರೆ ರಟ್ಟಿ ಬಲ ಹೆಚ್ಚಾಗುತ್ತಿತ್ತು. ಅವ ಕೊಡಲಿಲ್ಲ ನಾನು ಬೇಡಲಿಲ್ಲ.! 

ಬದಾಮಿ...

ಗಿಡಕ್ಕಂಟಿ ಚಿಗುರುವ ಕಥೆ ಅದರ ಅಡಿಯ ಬೇರಿನಿಂದ ಹಿಡಿದು ಕೊನೆಯ ಮುಡಿಯ ಚಿಗುರಿನವರೆಗೂ ದಿನೆ ದಿನೆ ಬೆಳೆಯುತ್ತಲೆ ಹೋಗುತ್ತೆ! " ಉಣ್ಣೊ ಅನ್ನಕ , ದೇವರು ಬೆಳೆಸಿದ ಗಿಡಕ ಎಲ್ಲಿಂದ ಜಾತಿ ಅದ " ಅಂತಿದ್ದ ಅಪ್ಪ ಹೇಳಿದ ಸೂಕ್ಷ್ಮ ಮಾತುಗಳು ಆಗಾಗ ಓದುಗನನ್ನು ಬಡೆದೆಬ್ಬಿಸುತ್ತವೆ. ಲೇಖಕ ಎಲ್ಲಾ ಪಾತ್ರಗಳಿಗೂ ಜೀವ ತುಂಬಲು ಸೈ ಎನಿಸಿಕೊಂಡಿದ್ದಾರೆ. " ಸತ್ತ ಹೆಣಗೊಳಿಗೆ ಏನ ಆಸಿ ಇರತಾವ ಹೇಳ? ಜೀವ ಒಂದ ಸಲ ಹಾರಿಹೋಯಿತು ಅಂದ್ರ ಮುಗಿತು. ನನಗ ಅದು ಬೇಕು ಇದು ಬೇಕು ಅಂತ ಕೇಳಲ್ಲ , ಈ ಜಿಂದಾ ಇದ್ದ ಮಂದಿನೇ ನೋಡು ತಮ್ಮ ಸಲ್ಯಾಕ ದೆವ್ವ ಗಿವ್ವ ಅಂತ ಸುದ್ದಿ ಎಬ್ಬಸತಾವ " ಇಂತಹ ಸಾಲು ಸಾಲು ಸಾಹಿತ್ಯವೆ ಸಾಕು ಲೇಖಕನ ಪ್ರೌಢತೆ ಅರಿಯಲು.! 

ಇನ್ನು...

ಈ ಕತ್ತಲು - ನಸುಗತ್ತಲು - ಕಗ್ಗತ್ತಲಿನ ಬಗ್ಗೆ ವಿಶೇಷ ಕುತೂಹಲ ಕಪಿಲನಿಗೆ.! ಉಪಮೇಯ - ಉಪಮಾನ - ಸಮಾನಧರ್ಮವನ್ನು ನಿಯತ್ತಾಗಿ ಹಂಚಿ ಲೇಖನಿಯ ಭಾರ ಇಳಿಸಿಕೊಂಡಿದ್ದಾರೆ.! ಓದುವಾಗ ಒಮ್ಮೊ ಮ್ಮೆ ಥಟ್ ನೆ ಜಯಂತ ಕಾಯ್ಕಿಣಿ ಅವರ ಬರಹಳೊ ಕಾರಂತರ ಬರಹಗಳೊ ನೆನಪಾದರೆ ಅವರದಲ್ಲದ ಅವರದೆ ಶೈಲಿಯ ಸಾಲೊಂದು ಬಿಕ್ಕು ಹಿಡಿದು ಬಿಕ್ಕಳಿಸಿ ನಿಮ್ಮ ಗಂಟಲೊಳಗೆ ಬಿಟ್ಟುಕೊಂಡಿದೆ ಎಂಥಲೆ ಅರ್ಥ! ಕಥೆ ಅರ್ಥಪೂರ್ಣವಾಗಿ ಬಾಲ್ಯ - ಭೂತ - ವಾಸ್ತವ - ಅಪ್ಪ - ಹಳ್ಳಿ - ಬಾದಾಮಿ ಗಿಡ - ಗುಬ್ಬಿ ಆಯಿ ಎಲ್ಲರನ್ನು ಎಲ್ಲವನ್ನೂ ಬೆಸೆಯುತ್ತಾ ಸಾಗುತ್ತದೆ.! ಸಮಕಾಲೀನ ಓದುಗರಿಗೆ ಒಂದೊಳ್ಳೆ ಕಾದಂಬರಿ ಕೈಗಿತ್ತ ಕೀರ್ತಿ ಕಾವ್ಯಮನೆ ಪ್ರಕಾಶನದ್ದು! ಶುಭವಾಗಲಿ.

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೌನೇಶ ಕನಸುಗಾರ