Article

ಹಾದಿಗಲ್ಲಿನ ‘ಕಾಂಟ್ರಾಸ್ಟುಗಳು’

ಹಿರಿಯ ಅಧಿಕಾರಿಗಳೊಬ್ಬರು ತಮ್ಮ ಆತ್ಮವೃತ್ತಾಂತ ಬರೆದಿದ್ದಾರೆ, ಮೂರು ಮುದ್ರಣ ಕಂಡಿದೆ ಆದರೂ ಅದರ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ ಎಂಬ ಸಂಗತಿ ಕೆ. ಎ ದಯಾನಂದ ಅವರ “ಹಾದಿಗಲ್ಲು” ಪುಸ್ತಕವನ್ನು ತರಿಸಿಕೊಂಡು ಓದುವುದಕ್ಕೆ ಮೂಲ ಪ್ರೇರಣೆ. ನಿನ್ನೆ ರಾತ್ರಿಗೆ ಓದಿ ಮುಗಿಸಿದೆ. ಈ ಪುಸ್ತಕದ ಕುರಿತು ನನಗೆ ಹೇಳಲಿಕ್ಕಿರುವುದು ಇಷ್ಟು:

ಪುಸ್ತಕ ಸ್ಪಷ್ಟವಾಗಿ ಎರಡು ವಿಭಾಗ ಆಗಿದೆ. ಲೇಖಕ ಸರ್ಕಾರಿ ಸೇವೆಗೆ ಸೇರುವ ತನಕದ್ದು ಮತ್ತು ಆ ಬಳಿಕದ್ದು. ನನಗೆ ಬಹಳ ಕುತೂಹಲಕರ ಅನ್ನಿಸಿದ್ದು, ಆರಂಭದ ಹಳ್ಳಿಯ ಬದುಕನ್ನು ದಯಾನಂದ ಅವರು ಕಟ್ಟಿಕೊಡುವ ರೀತಿ. ಅದು ಬಹಳ ಭಾವತೀವ್ರತೆ, ಸ್ಪಷ್ಟ ಚಿತ್ರಗಳು ಮತ್ತು ಒಟ್ಟು ಪರಿಸ್ಥಿತಿಯ ವಿವರಣೆಗಳ ಮೇಲೆ ಸಂಪೂರ್ಣ ಹಿಡಿತದೊಂದಿಗೆ ಮೂಡಿಬಂದಿವೆ. ಪುಸ್ತಕದ ಹೈಲೈಟ್ ಕೂಡಾ ಅದೇ. ಪುಸ್ತಕದ ಬಗ್ಗೆ ಬರೆದಿರುವ ಎಲ್ಲರೂ ಎತ್ತಿ ಆಡುತ್ತಿರುವುದು ಕೂಡ ಅದನ್ನೇ.

ಆದರೆ, ಒಮ್ಮೆ ಸರ್ಕಾರಿ ಸೇವೆಗೆ ಸೇರಿದ ಬಳಿಕದ ಚಿತ್ರಣಗಳು ಬಹಳ ಮೇಲ್ಪದರದ, ಒಳನೋಟಗಳು ಹೆಚ್ಚೇನೂ ಇರದ ಒಣ ಸರ್ಕಾರಿ ನೌಕರರ ಚರ್ಚೆಗಳಂತೆ ಕಾಣಿಸುತ್ತವೆ. ಇದು ಪುಸ್ತಕದ ಮಿತಿ. ಆದರೆ, ಅಂತಹದೊಂದು ಚಿತ್ರಣ ಕೊಡಬಲ್ಲ ಶಕ್ತಿ ಲೇಖಕರಲ್ಲಿ ಇರುವುದರಿಂದ ಹೆಚ್ಚಿನಂಶ ಮುಂದಿನ ಚರಣದಲ್ಲಿ ಅದು ಹರಳುಗಟ್ಟಿ ಕಾಣಿಸಿಕೊಳ್ಳಬಹುದೆಂಬ ನಿರೀಕ್ಷೆ ಇದೆ. ಇದಕ್ಕೆ ಎರಡು ಕಾರಣಗಳಿರಬಹುದು. ಒಂದು, ಲೇಖಕರು ವೃತ್ತಿ ಬರಹಗಾರರಲ್ಲದಿರುವುದು ಮತ್ತು ಇನ್ನೊಂದು ಅವರಿನ್ನೂ ಸೇವೆಯಲ್ಲಿರುವುದರಿಂದ ಆ ರೀತಿಯ ಬರಹಗಳು ಅವರಿಗೆ ಮತ್ತು ಅವರ ಸುತ್ತಲಿರುವವರಿಗೆ ಮುಜುಗರಕ್ಕೆ ಕಾರಣ ಆಗಬಹುದು.

ಲೇಖಕರು ಅಂತಹ ಒಳನೋಟ ಕೊಡಲು ಶಕ್ತರು ಎಂಬುದಕ್ಕೆ ಒಂದು ಉದಾಹರಣೆ ಮೇಲೆ ಅಂಟಿಸಿದ್ದೇನೆ. “ನಮ್ಮ ಯೋಜನೆಗಳು ಮತ್ತು ಎಲೆ ಅಡಿಕೆ” ಅಧ್ಯಾಯದಲ್ಲಿ ಅವರು ಜನಪ್ರತಿನಿಧಿಗಳ ದೂರದರ್ಶಿತ್ವ ದಿನಕಳೆದಂತೆ ಕಾಣೆ ಆಗುತ್ತಿರುವುದನ್ನು ಸಶಕ್ತವಾಗಿ ಗುರುತಿಸುತ್ತಾರೆ. ಈ ರೀತಿಯ ಒಳನೋಟಗಳು ಸಮಕಾಲೀನ ಆಡಳಿತ ವ್ಯವಸ್ಥೆಯ ಬಗ್ಗೆ ಇನ್ನಷ್ಟು ಸಿಗುವಂತಾಗಿದ್ದರೆ, ಈ ಪುಸ್ತಕ ಬಹಳ ಅದ್ಭುತ ಪುಸ್ತಕ ಆಗುತ್ತಿತ್ತು.

ನನಗೆ ಈ ಪುಸ್ತಕ ಓದಿದ ಬಳಿಕ ಬಲವಾಗಿ ಅನ್ನಿಸಿದ ಇನ್ನೊಂದು ಸಂಗತಿಯ ಬಗ್ಗೆ ಹೇಳಬೇಕು: ಇ-ಆಡಳಿತದ ಹಲವಾರು ಪ್ರಯೋಗಗಳಿಗೆ ತಾವು ಕಾರಣರಾದದ್ದರ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ನಾನು ಗಮನಿಸಿದಂತೆ ಈ ಇ-ಆಡಳಿತ ಎಂಬುದು ನಮ್ಮ ಆಡಳಿತ ವ್ಯವಸ್ಥೆಗೆ ಕೈಯಲ್ಲಿ ಮಾಡುವುದನ್ನು ಕಂಪ್ಯೂಟರಿನಲ್ಲಿ ಮಾಡುವ ವ್ಯವಸ್ಥೆ ಆಗಿದೆಯೇ ಹೊರತು ಆಡಳಿತ ಸುಧಾರಣೆ ಆಗಿಲ್ಲ. ಹಾಗಾಗಿಯೇ ಡೇಟಾಎಂಟ್ರಿಯ ಹೊರೆಯನ್ನು ಔಟ್ ಸೋರ್ಸ್ ಮಾಡುವುದೇ ಅವರ ದೊಡ್ಡ ಸವಾಲು. ಒಬ್ಬ ಜನಸಾಮಾನ್ಯ ಯಾವುದೇ ಅರ್ಜಿ ಕೊಟ್ಟರೆ, ಅದರಲ್ಲಿ ಅನಗತ್ಯವಾದ ಮಾಹಿತಿಗಳನ್ನು ಕೇಳುವ ಪರಿಪಾಠ ಇನ್ನೂ ಕಡಿಮೆ ಆಗಿಲ್ಲ. ಜನ ಅರ್ಜಿ ಸಲ್ಲಿಸುವುದೇ ವ್ಯವಸ್ಥೆಯಿಂದ ಸತಾಯಿಸಿಕೊಳ್ಳಲು ಎಂಬ ನಂಬಿಕೆಯಲ್ಲೇ ಇಡಿಯ ಸಿಸ್ಟಮ್ ಕೆಲಸ ಮಾಡುತ್ತದೆ. ಅದನ್ನು ತೇಜಸ್ವಿಯವರು ಸರ್ಕಾರಿ ಇಲಾಖೆಯ ಮುಖಕ್ಕೆ ಹಿಡಿದ ಪ್ರಸಂಗವೊಂದನ್ನೂ ಲೇಖಕರು ಇಲ್ಲಿ ಪ್ರಸ್ತಾಪಿಸುತ್ತಾರೆ. ಅದು ಬಹಳ ಕುತೂಹಲಕರವಾಗಿದೆ. ಅದನ್ನೂ ಇಲ್ಲಿ ಅಂಟಿಸಿದ್ದೇನೆ.

ಇಂದು ಆಧಾರ್ ನಂಬರ್ ಇರುವುದರಿಂದ, ಆ ನಂಬರ್ ಆಧರಿಸಿ ವ್ಯಕ್ತಿಯ ಎಲ್ಲ ದಾಖಲೆಗಳೂ ಸರ್ಕಾರದ ಬಳಿಯೇ ಡೇಟಾಬೇಸ್ ನಲ್ಲಿ ಲಭ್ಯ ಇರುವುದರಿಂದ ಜಾತಿ – ಆದಾಯ ಸರ್ಟಿಫಿಕೇಟುಗಳಂತಹ ಜನಸಾಮಾನ್ಯರ ಸತಾಯಿಸುವಿಕೆಗೆ ಕಾರಣ ಆಗುವ ನೂರಾರು ದಾಖಲೆಗಳನ್ನು ಒಂದೇ ಸ್ಟ್ರೋಕ್ ನಲ್ಲಿ ರದ್ದುಮಾಡುವ ಸಾಧ್ಯತೆ ನನ್ನ ಪ್ರಕಾರ ನಿಜವಾದ “ಇ-ಆಡಳಿತ.” ಅಂತಹ ಕ್ರಮಗಳು ಆಡಳಿತವನ್ನು ನಿಜಕ್ಕೂ ಕಾಗದರಹಿತಗೊಳಿಸಬಲ್ಲವು. ನಿಯಮಗಳು ಸರಳವಾಗಿದ್ದಷ್ಟೂ ಆಡಳಿತ ಪರಿಣಾಮಕಾರಿ. ಹಲವು ಮುಂದುವರಿದ ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಇದೆ.

ಸರ್ಕಾರಿ ಮಷಿನರಿಗೆ ಪೀಳಿಗೆಯಿಂದ ಬಂದಿರುವ ದೋಷಗಳು, ಭ್ರಷ್ಟಾಚಾರ, ಪಕ್ಷಪಾತ, ಒಡ್ಡುತನ ಇತ್ಯಾದಿಗಳನ್ನು ಲೇಖಕರು ಬಹಳ ಸಾಮಾನ್ಯ ಸಂಗತಿಗಳೆನ್ನಿಸುವಂತೆ ಪುಸ್ತಕದ ದ್ವಿತೀಯಾರ್ಧದಲ್ಲಿ ವಿವರಿಸುತ್ತಾ ಹೋಗುತ್ತಾರೆ. ಅದು ಬಹುತೇಕ ಸರ್ಕಾರಿ ನೌಕರರ ಕಾಡುಹರಟೆ ಆಗಿಯೇ ಸಾಗುತ್ತದೆ. ಮೊದಲರ್ಧದಲ್ಲಿ ಬಡತನವನ್ನು ಮತ್ತು ಅದರ ಪರಿಣಾಮಗಳನ್ನು ವಿವರಿಸುವಾಗ ಇರುವ ತೀವ್ರತೆಯಾಗಲೀ ವಿಚಾರದ ಮೇಲಿನ ಹಿಡಿತವಾಗಲೀ ದ್ವಿತೀಯಾರ್ಧದಲ್ಲಿ ಕಾಣಿಸುವುದಿಲ್ಲ ಎಂಬುದು ನನಗೆ ಪುಸ್ತಕದಲ್ಲಿ ತೀರಾ ನಿರಾಸೆ ಉಂಟುಮಾಡಿದ ಸಂಗತಿ.

ಆ ಎತ್ತರದಿಂದ ಸರ್ಕಾರಿ ವ್ಯವಸ್ಥೆಯನ್ನು ಗಮನಿಸುವ, ಗಮನಿಸಿದರೂ ಅಕ್ಷರಕ್ಕಿಳಿಸುವ ಸಾಮರ್ಥ್ಯ ಇರುವವರು ಕನ್ನಡದಲ್ಲಿ ಬಹಳ ಜನ ಇಲ್ಲ. ಹಾಗಾಗಿ ನಾನು ಲೇಖಕರ ಆತ್ಮವೃತ್ತಾಂತದ ಮುಂದಿನ ಚರಣವನ್ನು (ಹೆಚ್ಚಿನಂಶ ಅವರು ನಿವೃತ್ತರಾದಮೇಲೆ ಬರೆಯುವ) ಕುತೂಹಲದಿಂದ ಎದುರುನೋಡುತ್ತಿದ್ದೇನೆ.

ರಾಜಾರಾಂ ತಲ್ಲೂರು

Comments