Article

ಹಲವು ಆಲೋಚನೆಗಳ ‘ದೂರ ಸರಿದರು’

ಕಾದಂಬರಿಯನ್ನು ಓದುವಾಗ ಹಲವಾರು ಭಾರಿ ದೂರ ಸರಿದೆ, ಅವರ ಇತರ ಕಾದಂಬರಿಗಳನ್ನು ಓದಿ ಮುಗಿಸಿದ ನನಗೆ ಇದೊಂದು ಮಾತ್ರ ಉಳಿಯುತ್ತಲೇ ಇತ್ತು. ಈ ಭಾರಿ ಪಟ್ಟು ಹಿಡಿದು ಓದಿದೆ. ಇಲ್ಲಿ ಬರುವ ಎಲ್ಲಾ ಪಾತ್ರಗಳೂ ಒಳ್ಳೆಯವೇ, ಅವರವರ ಅಭಿಪ್ರಾಯದ ಪ್ರಕಾರ ಯೋಚಿಸಿದರೆ ಅವರ ನಿರ್ಧಾರಗಳು ಒಮ್ಮೊಮ್ಮೆ ಸರಿ ಅನಿಸುತ್ತದೆ ಒಮ್ಮೊಮ್ಮೆ ತಪ್ಪನಿಸುತ್ತದೆ. ಅವರುಗಳ ನಿರ್ಧಾರದಿಂದ ಅವರ ಜೀವನದಲ್ಲಾಗುವ ಬದಲಾವಣೆಗಳನ್ನು ಆನಂದ, ವಿನುತ, ವಸಂತ, ಉಮ, ರಮೆ, ಜಗದಾಂಬ ಈ ಪಾತ್ರಗಳ ಮೂಲಕ ಭೈರಪ್ಪನವರು ಅದ್ಭುತವಾಗಿ ವಿವರಿಸಿದ್ದಾರೆ. ಪ್ರೀತಿ ಇದ್ದಲ್ಲಿ ಧೈರ್ಯವಿರಬೇಕು, ತಾಳ್ಮೆಯಿರಬೇಕು, ಒಮ್ಮತ ಅಭಿಪ್ರಾಯಗಳಿರಬೇಕು ಹಾಗೂ ಇನ್ನೂ ಹಲವಾರು ಅಂಶಗಳ ಬಗ್ಗೆ ಇವರ ಪಾತ್ರದ ಮೂಲಕ ತಿಳಿಸಿದ್ದಾರೆ.

ಆನಂದನು ಓದಿನಲ್ಲಿ ಪ್ರವೀಣನು, ಒಳ್ಳೆಯ ಸಾಹಿತಿಗಾರನೂ ಸಹ. ಇಡೀ ಕಾಲೇಜಿಗೆ ಆನಂದನು ಪ್ರಸಿದ್ಧನಾಗಿರುತ್ತಾನೆ,ತನ್ನ ಸಹಪಾಟಿಗಳಿಗೆ ಆನಂದನ ಬಗ್ಗೆ ತಿಳಿದಿರುವಷ್ಟು ಆನಂದನಿಗೆ ತನ್ನ ಸಹಪಾಟಿಗಳ ಬಗ್ಗೆ ಅಷ್ಟು ಯಾಕೆ ಕೆಲವರ ಹೆಸರುಗಳು ಅವನಿಗೆ ತಿಳಿದಿರುವುದಿಲ್ಲ ಅಷ್ಟು ಮಗ್ನತೆ ತತ್ವಶಾಸ್ತ್ರ ದಲ್ಲಿ ಹಾಗು ಸಾಹಿತ್ಯದಲ್ಲಿ, ರಮೆ ಮತ್ತು ವಿನತೆಯರು ಅವನಿಗೆ ಪರಿಚಯವಾಗುತ್ತಾರೆ ಪ್ರತಿಸಲ ಭೇಟಿಯಾದಾಗಲೆಲ್ಲ ಬರೀ ಓದುವ ಬಗ್ಗೆ ಸಾಹಿತ್ಯದ ಬಗ್ಗೆ ಮಾತಾನಾಡುತಿದ್ದರು. ಆನಂದ ಮತ್ತು ವಿನತೆಯ ಸ್ನೇಹವು ಪ್ರೀತಿಗೆ ಪರಿವರ್ತನೆಗೊಳ್ಳುತ್ತದೆ. ರಮೆಗೆ ಆನಂದನ ಮೇಲೆ ಪ್ರೀತಿ ಬೆಳೆಯುತ್ತದೆ, ಅದನ್ನು ಆನಂದನಿಗೆ ವ್ಯಕ್ತಪಡಿಸಿದಾಗ ಆನಂದನು ನಿರಾಕರಿಸುತ್ತಾನೆ ಕಾರಣ ವಿನುತೆಯ ಮೇಲೆ ಪ್ರೀತಿಎಂಬ ಬೇರು ಬೆಳೆದುಬಿಟ್ಟುರುತ್ತದೆ ರಮೆಯು ತುಂಬ ದುಃಖ್ಖಿತಳಾಗುತ್ತಾಳೆ.

ವಿನತೆಯ ತಾಯಿಯು ಹೇಗೆಂದರೆ ಹಣವೇ ಮುಖ್ಯ, ಹಣದ ಮುಂದೆ ಬೇರೊಂದಿಲ್ಲವೆಂಬುದು ಅವರ ಅಭಿಪ್ರಾಯ. ಅವರ ಹಿರಿಯ ಮಗಳು ವಿಜಯಾ ವಾಸನ್ ನನ್ನು ಮದುವೆಯಾಗಿರುತ್ತಾಳೆ, ವಾಸನ್ ಕುಟುಂಬದವರು ಶ್ರೀಮಂತರೆ. ಆದರೇ ಇವರು ಕದ್ದು ಮದುವೆಯಾಗಿರುತ್ತಾರೆ ಅದಕ್ಕೆ ಆನಂದ ಹಾಗು ವಿನುತೆ ಸಹಾಯ ಮಾಡಿರುತ್ತಾರೆ, ಆ ಕಥೆಯನ್ನು ಹೇಳುವುದಕ್ಕಿಂತ ಓದಿದರೆ ಉತ್ತಮ. ಆನಂದನು ಶ್ರೀಮಂತನಲ್ಲ ಆದರೆ ಅವನಲ್ಲಿ ಒಳ್ಳೆಯ ಗುಣವಿದೆ. ವಿನುತೆಯ ತಾಯಿಯು ಇವರ ಪ್ರೇಮಕ್ಕೆ ಅಡ್ಡಿಯಾಗುತ್ತಾರೆ. ಆನಂದನು ತನ್ನ ಪ್ರೀತಿಯನ್ನು ವಿನುತೆಗೆ ವ್ಯಕ್ತಪಡಿಸಿದಾಗ ಆಕೆಗೆ ಆಗುವಷ್ಟು ಸಂತೋಷ ಹೇಳತೀರದು ಏಕೆಂದರೆ ಆಕೆಯ ಮನಸ್ಸಿನಲ್ಲಿ ಇರುವುದು ಆನಂದನೆ, ಆದರೆ ತನ್ನ ತಾಯಿಯು ಒಪ್ಪದಿರುವುದನ್ನು ತಿಳಿಸಿ ಆಕೆಯನ್ನು ಎದುರಿಸಲು ಅಸಾಧ್ಯವೆಂದು ಅವನಿಂದ ದೂರ ಹೋಗುತ್ತಾಳೆ. ವಿನುತೆಯ ಸ್ನೇಹಿತೆ ಜಗದಾಂಬ ಇವರನ್ನು ಒಟ್ಟುಗೂಡಿಸಲೆಂದು ಎಷ್ಟು ಪ್ರಯತ್ನಪಟ್ಟರೂ ಅದು ವ್ಯರ್ಥವಾಗುತ್ತದೆ. ರಮೆ ತಾನಾಗಿ ಬಂದು ಪ್ರೀತಿಯನ್ನು ವ್ಯಕ್ತಪಡಿಸಿದಾಗ ಆಕೆಯನ್ನು ನಿರಾಕರಿಸಿದ್ದು ಆಕೆಗಾದ ದುಃಖದ ಬೆಲೆ ಆನಂದನಿಗೆ ಅರಿವಾಗುತ್ತದೆ. ತನ್ನ ಮನಸ್ಸನ್ನು ಹತೋಟಿಗೆ ತಂದುಕೊಳ್ಳಲು ಬಾಬಾಬುಡಂಗಿರಿ,ಮುಳಳಯ್ಯನಗಿರಿಯಲ್ಲಿ ಕೆಲವು ಕಾಲ ಇದ್ದು ಎಲ್ಲವನ್ನೂ ಮರೆತು ಪುನಃ ಓದಲು ಶುರುಮಾಡುತ್ತಾನೆ.ಇಲ್ಲಿ ಬಾಬಾಬುಡಂಗಿರಿ,ಮುಳ್ಳಯ್ಯನಗಿರಿಯಲ್ಲಿ ಪರಿಸರದ ಸೊಬಗನ್ನು ಅದ್ಭುತವಾಗಿ ವರ್ಣನೆ ಮಾಡಿದ್ದಾರೆ.

ವಿನುತೆಗೆ ಕೆಲಸ ಸಿಕ್ಕಿ ನರಸೀಪುರಕ್ಕೆ ಹೋಗುತ್ತಾಳೆ ತನಗೆ ಬರುವ ಸಂಬಳದಿಂದ ತನ್ನ ತಮ್ಮಂದಿರನ್ನು ಓದಿಸುತ್ತಿರುತ್ತಾಳೆ. ಆನಂದನು ಧಾರವಾಡದಲ್ಲಿ ಇರುತ್ತಾನೆ. ಆನಂದನು ವಿನುತೆಯನ್ನು, ವಿನುತ ಆನಂದವನನ್ನು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ವಿನುತೆಯ ಪ್ರೀತಿ ನಿಜವಾದುದು,ಆದರೆ ಅವಳು ನಿಸ್ಸಹಾಯಕಳು,ತಾಯಿಗೆ ಬಹಳ ಹೆದರುತ್ತಾಳೆ ಹಾಗೂ ಪ್ರೀತಿಸುತ್ತಾಳೆ ಅವಳದೊಂದು ಅಸಡ್ಡೆಯ ಸ್ವಭಾವವೆಂದು ಹಲವಾರು ಭಾರಿ ಜಗದಾಂಬಗೆ ತಿಳಿಸಿರುತ್ತಾನೆ. ಆನಂದನ ತಾಯಿಯ ಬಲವಂತದಿಂದ ಸೀತೆಯನ್ನು ಮದುವೆಯಾಗುತ್ತಾನೆ ಆದರೆ ದೂರ ಸರಿದ ವಿನುತೆಯನ್ನು ಮರಿಯದೇ ಅವಳ ನೆನಪು ಮಾತ್ರ ಉಳಿಯುತ್ತದೆ. ಆನಂದ ತನಗೆ ದೊರಕಿಲ್ಲವೆಂಬ ಕೊರಗಿನಲ್ಲಿ ತಾನೊಬ್ಬಹೇಡಿ, ತಾಯಿಯನ್ನು ಒಪ್ಪಿಸೋ ಪ್ರಯತ್ನಪಟ್ಟಿದ್ದರೂ ಆನಂದನನನ್ನು ಪಡೆಯಬಹುದಿತ್ತೇನೋ ಎಂಬ ಕೊರಗಲ್ಲೇ ಸಾಯುತ್ತಾಳೆ. ಇದನ್ನು ತಿಳಿದ ಆನಂದ ತಾನು ಸಹ ಅವಳನ್ನು ನಿರಾಕರಿಸದೆ ಆಕೆಯನ್ನು ಮದುವೆಯಾಗಿದ್ದರೆ ಅವಳು ಸುಖವಾಗಿ ಇರುತ್ತಿದ್ದಳೆಂದು ದುಃಖ್ಖಿತನಾಗುತ್ತಾನೆ.ನಿರ್ಧಾರಗಳು ತೊಗೊಳುವ ಮುಂಚೆ‌ ಹಲವಾರು ಸಲ ಯೋಚಿಸಿದರೆ ಉತ್ತಮ.

ಮತ್ತೂಂದು ಕಡೆಯಲ್ಲಿ ವಸಂತ ಹಾಗು ಉಮೆಯರ ಕಥೆ ನಡೆಯುತ್ತಿರುತ್ತದೆ‌. ವಸಂತ ಉಮೆ ಒಬ್ಬರಿಗೊಬ್ಬರು ಪ್ರೀತಿಸುತ್ತಿರುತ್ತಾರೆ. ಅದರ ಬಗ್ಗೆ ಅವರ ತಂದೆ ತಾಯಂದಿರಿಗೂ ತಿಳಿದು ಇವರ ಮದುವೆಗೆ ಒಪ್ಪಿರುತ್ತಾರೆ. ಅವರವರ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆಂದು ಮದುವೆಯ ಪ್ರಸ್ತಾಪ ಬಂದಾಗಲೆಲ್ಲೂ ವಸಂತನು ಮದುವೆಯನ್ನು ಮುಂದೂಡಿಸುತ್ತಾನೆ. ಯಾವುದೇ ಚರ್ಚೆಯಾದರೂ ಅವರವರ ಅಭಿಪ್ರಾಯಗಳೆ ಬೇರೆ. ಎಲ್ಲಾವಾದದಲ್ಲೂ ವಸಂತನ ಅಭಿಪ್ರಾಯವೇ ಬೇರೆ ಉಮೆಯದೇ ಬೇರೆ. ಇದರಿಂದ ವಸಂತನಿಗೆ ಖೇದವಾಗುತ್ತದೆ ತಾನು ಮದುವೆಯಾಗುವ ಹೆಣ್ಣೆ ತನ್ನ ಅಭಿಪ್ರಾಯವನ್ನು ಒಪ್ಪದಿದ್ದರೇ ಹೇಗೆ ಎಂದು ಯೋಚಿಸುತ್ತಾನೆ. ಉಮೆಗೆ ಹಲವಾರು ಭಾರಿ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಲು ಹೇಳಿದಾಗ ಆಕೆಯು ಒಪ್ಪುವುದಿಲ್ಲ. ಹೀಗೆ ಮಂದೂಡಿದ ಮದುವೆಯ ಫಲಿತ ತಮ್ಮ ಅಭಿಪ್ರಾಯದಲ್ಲಿ ಯಾವ ಬದಲಾವಣೆಯಿಲ್ಲದಲ್ಲಿ ಉಮೆಗೆ ವಸಂತನನ್ನು ಮದುವೆಯಾದರೆ ತಮ್ಮ ದಾಂಪತ್ಯ ಜೀವನವು ಸುಖಕರವಾಗಿರುವುದಿಲ್ಲವೆಂದು ನಿರ್ಧರಿಸಿ ವಸಂತನನ್ನು ನಿರಾಕರಿಸುತ್ತಾಳೆ. ಹೀಗೆ ಆನಂದ ವಿನುತೆ, ವಸಂತ ಉಮೆ, ದೂರಸರಿಯುತ್ತಾರೆ. ಉತ್ತಮ ಕಾದಂಬರಿ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕೇಯ ಭಟ್‌