Article

ನಾಯಕ-ನಿರೂಪಕನ ಅನುಭವಲೋಕವನ್ನು ಅನಾವರಣಗೊಳಿಸಿದ ಕೃತಿ ‘ಹಾಣಾದಿ’

‘ಮಾಂತ್ರಿಕ ವಾಸ್ತವವಾದ’ ತಂತ್ರಗಾರಿಕೆಯನ್ನು ಅತ್ಯಂತ ಫಲಪ್ರದವಾಗಿ ಬಳಸಿಕೊಂಡ ಈ ಕಾದಂಬರಿ ಲೇಖಕನ ಮೊದಲ ಪ್ರಯತ್ನ ಎಂದು ನಂಬಲಾರದಷ್ಟು ಪರಿಪೂರ್ಣವಾಗಿದೆ. ಇಲ್ಲಿನ ನಿರೂಪಕ ನಾಯಕನ ಅನುಭವ ಲೋಕದ ಅನಾವರಣಕ್ಕೆ ಹೇಳಿ ಮಾಡಿಸಿದ ತಂತ್ರಗಾರಿಕೆ ಇದಾಗಿದೆ. ನಾಯಕ ಎರಡು ವಿಶಿಷ್ಟ ಲೋಕಗಳ ಮಧ್ಯೆ ಲಾಳಿ ಹೊಡೆದಾಡುತ್ತಿದ್ದಾನೆ. ನಾಯಕ-ನಿರೂಪಕನ ಅನುಭವ ಲೋಕ ಓದುಗನನ್ನು ಕುತೂಹಲದ ಅಗ್ಗಿಯ ಮೇಲೆ ನಿಲ್ಲುವಂತೆ ಮಾಡುತ್ತದೆ.

ಮರಣ ಶಯ್ಯೆಯ ಮೇಲೆ ಮಲಗಿ ನಾಯಕನನ್ನು ನಾಸ್ಟಾಲ್ಜಿಯಕ್ಕೆ ಸೆಳೆಯುವ ಭೂತದ ಗ್ರಾಮಲೋಕ ಒಂದಾದರೆ, ನಾಯಕನ ಕ್ರಿಯಾಶಕ್ತಿಗೆ ಹೆಪ್ಪುಹಾಕಿ ನಿಷ್ಕ್ರಿಯಗೊಳಿಸುವ ಶುಷ್ಕಭಾವದ ಯಾಂತ್ರಿಕ ನಗರಲೋಕ ಇನ್ನೊಂದು. ಈ ಎರಡೂ ಲೋಕಗಳ ನಡುವಿನ ಸೆಳೆತ ಸೃಷ್ಟಿ ಮಾಡುವ ಕರ್ಷಣದಲ್ಲಿ ನಾಯಕ ಹೊಸ ಅರಿವನ್ನು ಮೂಡಿಸಿಕೊಳ್ಳುತ್ತಾನೆ. ತನ್ನ ಸುತ್ತಲಿನ ಪರಿಸರದೊಂದಿಗಿನ ಸಾವಯವ ಸಂಬಂಧವನ್ನು ಕಳೆದುಕೊಂಡ ಇಲ್ಲಿನ ಅಗ್ರೇರಿಯನ್ ಭಾರತದ ಮನುಷ್ಯರು ಸಕಲ ಜೀವರಾಶಿಯಲ್ಲಿ ದಯೆ ತೋರಿಸುವಲ್ಲಿ ವಿಫಲರಾಗಿದ್ದಾರೆ. ಅಗ್ರೇರಿಯನ್ ಲೋಕದ ತೊಗರಿ ಕಟ್ಟಿಗೆಯ ತುದಿಗೆ ಬೆಂಕಿ ಹೊತ್ತಿಸಿ ಅದನ್ನು ಹೆಡ್‍ಲೈಟ್‍ವುಳ್ಳ ಲಾರಿ ಎಂದು ಭಾವಿಸಿ ಪರಿಸರದ ಜೀವರಾಶಿಯನ್ನು ನಾಶಮಾಡುವ ಆಟವನ್ನು ಹಳ್ಳಿಯ ಮಕ್ಕಳು ಆಡುತ್ತಿದ್ದಾರೆ. ಕರುಳಬಳ್ಳಿಯ ಸಂಬಂಧಗಳು ಎಣ್ಣೆಯಿಲ್ಲದ ಚಿಮಣಿಯೊಂದರ ಒಣಗಿ ನಿಂತ ಬಟ್ಟೆಯ ಬತ್ತಿಯಂತೆ ತೋರುತ್ತವೆ. ಶ್ರದ್ಧೆ ಎನ್ನುವುದು ಇಲ್ಲಿಂದ ಗುಳೆ ಕಿತ್ತುಕೊಂಡು ಹೋಗಿ ಬಹುದಿನಗಳೇ ಸಂದಿವೆ.

ಪಾರಮಾರ್ಥ ಎನ್ನುವುದು ತೋರಿಕೆಯ ವಿಷಯವಾಗಿ ಮಾರ್ಪಟ್ಟು ಗ್ರಾಮಲೋಕದ ಪುಟ್ಟಪುಟ್ಟ ಗುಡಿಗಳು ಶಿಥಿಲಾವಸ್ಥೆ ತಲುಪಿವೆ. ಪಾರಮಾರ್ಥದ ಜಾಗೆಯಲ್ಲಿ ಹುಸಿ ಪವಾಡಗಳು ಸೃಷ್ಟಿಯಾಗಿ ಆಕಾಶದಲ್ಲಿ ಓಡುವ ಕುದುರೆಯನ್ನು ಕಾಣುವ ಬೂಟಾಟಿಕೆ ಮುಂಚೂಣಿಗೆ ಬಂದಿದೆ. ಮಾತುಗಳಿಗೆ ರೆಕ್ಕೆಕಟ್ಟಿ ಕೇಳುಗನನ್ನು ಭ್ರಮಾಲೋಕಕ್ಕೆ ತಳ್ಳಲಾಗುತ್ತಿದೆ. ಹುಲ್ಲು ಇಲ್ಲದಿದ್ದರೂ ಸುಮ್ಮನೆ ನೆಲ ನೆಕ್ಕುತ್ತ ನಿಲ್ಲುವ ಒತ್ತಡದಲ್ಲಿ ಸಿಲುಕಿದ ಪಶುವಿನ ಹಾಗೆ ಇಲ್ಲಿನ ಮನುಷ್ಯರು ಬದುಕುವಂತಾಗಿದೆ. ಉಣ್ಣುವ ಅನ್ನಕ್ಕೆ, ಸಹಜವಾಗಿ ಬೆಳೆದ ಗಿಡಕ್ಕೆ ಸೂತಕವನ್ನು ಆರೋಪಿಸಲಾಗಿದೆ. ತನ್ನ ಪರಿಸರದಲ್ಲಿನ ಜೀವಜಗತ್ತಿನೊಂದಿಗೆ ಸಾವಯವ ಸಂಬಂಧ ಬೆಳೆಸಿಕೊಂಡು ಬದುಕಲು ಹೊರಟ ಅಪ್ಪನಂಥವರನ್ನು ಮತಿಭ್ರಮೆಗೆ ತುತ್ತಾದವರೆಂದು ಅಪಹಾಸ್ಯ ಮಾಡಲಾಗಿದೆ. ಕಂಟಿ ಎಂಬ ಹೊಲೆಯನನ್ನು ಹೂಳಲು ತನ್ನ ಹೊಲದಲ್ಲಿಯೇ ಜಾಗೆ ಮಾಡಿಕೊಟ್ಟ ಅಪ್ಪ ಹಾಗೂ ಅಂಗಳದಲ್ಲಿ ಬೆಳೆದ ಬಾದಾಮಿ ಮರಕ್ಕೆ ದೆವ್ವಗಳ ಅಡಗುತಾಣದ ಪಟ್ಟಗಟ್ಟಿದಾಗ ತಳಮಳಗೊಳ್ಳುವ ಅಪ್ಪ , ನಾಶದ ಅಂಚಿನಲ್ಲಿರುವ ಅಗ್ರೇರಿಯನ್ ಲೋಕದಲ್ಲಿ ಹುಚ್ಚನಂತೆ ಅಲೆಯುವಂತಾಗುತ್ತದೆ. 

ಇಂಥದ್ದೊಂದು ಸಂಕೀರ್ಣ ತಳಮಳದ ಲೋಕವನ್ನು ಅದರ ಎಲ್ಲ ತಾಜಾತನದೊಂದಿಗೆ ಹೊಸ ತಲೆಮಾರಿಗೆ ದರ್ಶಿಸುವ ಕೆಲಸವನ್ನು ಈ ಕಾದಂಬರಿಯಲ್ಲಿ ಗುಬ್ಬಿ ಆಯಿ ಮಾಡುತ್ತಾಳೆ. ಅಪ್ಪನ ಬಹುಪಾಲು ಗುಣಲಕ್ಷಣಗಳು ಅವಳಲ್ಲಿವೆಯಾದರೂ ತನ್ನ ಸುತ್ತಲಿನ ಅವಘಡಗಳಿಗೆ ಅವಳು ತೋರುವ ಪ್ರತಿಕ್ರಿಯೆ ಲೋಕಜ್ಞಾನದಲ್ಲಿ ಅರಳಿದಂತಹುದಾಗಿದೆ. ಹಳೆ ಹಾದಿಯಲ್ಲಿ ತಿರುಗಾಡಿಸುತ್ತಲೇ ಹಳೆ ಹಾದಿಯ ಮೇಲೆ ತಿರುಗಾಡಿದ ಪಾದಗಳ ಹೊಸಕತೆಯನ್ನು ಗುಬ್ಬಿ ಆಯಿ ಹೇಳುತ್ತಾಳೆ. ಕತೆ ಕೇಳಲು ಬಂದ ಹಾಗೆ ತೋರುವ ನಿರೂಪಕ-ನಾಯಕನು ಪಡಸಾಲಿಯಲ್ಲಿ ಹಚ್ಚಿಟ್ಟ ಚಿಮಣಿಯ ಬೆಳಕಿನಂಥ ಗುಬ್ಬಿ ಆಯಿಯ ತತ್ವಜ್ಞಾನದಲ್ಲಿ ಹೊಸ ಹಾದಿಯನ್ನು ಶೋಧಿಸಿಕೊಳ್ಳುತ್ತಾನೆ.

ಗುಬ್ಬಿ ಆಯಿ ತಡೆರಹಿತವಾದ ಮಹಾಮಾರ್ಗದ ಪಯಣಕ್ಕಿಂತಲೂ ಸದಾ ಸವಾಲೊಡ್ಡುವ ‘ಹಾಣಾದಿ’ಯ ಪಯಣದ ಸುಖವನ್ನು ಅಪೇಕ್ಷಿಸುವಂತೆ ಮಾಡುತ್ತಾಳೆ. ವೃತ್ತವೊಂದರ ಸುತ್ತಲೂ ಸದಾ ತಿರುಗುತ್ತ ಸಂವೇದನೆ ಕಳೆದುಕೊಂಡ ನಗರದ ಕಾಲುಗಳಿಗೆ ‘ಹಾಣಾದಿ’ಯ ಮೂಲಕ ಚಲಿಸುವ ನಿರಂತರ ಸುಖದ ಪರಿಚಯ ಮಾಡಿಸುತ್ತಾಳೆ. ಗುಬ್ಬಿ ಆಯಿಯ ಕತೆ ಕೇಳಿದ ನಿರೂಪಕ ನಾಯಕ ಸುಖದ ಸುಖ ಅರಸುವ ಬದಲು ಕಷ್ಟದ ಸುಖ ಅರಸಲು ಪ್ರೇರೇಪಿತನಾಗುತ್ತಾನೆ. ಒಂದು ಹಗಲು ಒಂದು ರಾತ್ರಿಯ ‘ಹಾಣಾದಿ’ಯೊಳಗಿನ ಇಲ್ಲಿನ ಪಯಣ, ಅವನ ಅರಿವಿನ ಲೋಕದ ವಿಸ್ತಾರವನ್ನು ಹಿಗ್ಗಿಸುತ್ತದೆ. ಓದುಗ ಕೂಡ ನಿರೂಪಕ-ನಾಯಕನೊಳಗೆ ಕಾಯ ಪ್ರವೇಶ ಪಡೆದು ಸಹಪಯಣಿಗನಾಗುತ್ತಾನೆ.

ಚನ್ನಪ್ಪ ಕಟ್ಟಿ