Article

ಹಂಗಿಲ್ಲದ ಹಾದಿಯ ಓದಿನ ಹಂಗಿನಲಿ 

ಭೂಮಿಯ ಮಡಿಲಿಗೆ ಬಿದ್ದ ಬೀಜ ಮೊಳಕೆಯಾಗಲು, ರೆಕ್ಕೆ ಬಲಿತ ಹಕ್ಕಿ ಬಾನಲ್ಲಿ ಹಾರಲು, ಸಮುದ್ರದಲ್ಲಿಯೇ ಹುಟ್ಟಿ ಬೆಳೆವ ಮೀನಿಗೆ ಅದರ ಆಳದಲ್ಲಿ ಈಜಲು ಯಾರ ಹಂಗ್ಯಾಕೆಬೇಕು? ಎಂಬ ಅವರದೇ ಪ್ರಶ್ನೆಯೊಂದಿಗೆ ನಿರ್ಭಯದಿಂದ ಯಾರಹಂಗಿಲ್ಲದೆ ನಡೆಯಲು ಸಿದ್ಧರಾಗಿರುವ ಕವಯತ್ರಿ ಜಹಾನ್ ಅರಾ ಅವರು ತಮ್ಮ "ಹಂಗಿಲ್ಲದ ಹಾದಿ"ಯಲ್ಲಿ ಪ್ರಯಾಣ ಹೊರಟಿದ್ದಾರೆ. ಇದು ಜಹಾನ್ ಆರಾ ಅವರ ಎರಡನೇ ಕವನಸಂಕಲನವಾಗಿದ್ದು ಇಲ್ಲಿ ಬದುಕಿನ ಬಹಳಷ್ಟು ತಿರುವುಗಳನ್ನು, ಅನುಭವಗಳನ್ನು, ಮತ್ತು ಸಮಾಜದ ವಿವಿಧ ಮುಖಗಳನ್ನು ಪರಿಚಯಿಸುತ್ತಾರೆ. ಈ ’ಹಂಗಿಲ್ಲದ ಹಾದಿ’ ಕವನಸಂಕಲನದ ಎದೆಯಲ್ಲಿ 50 ಭಿನ್ನ ವಿಭಿನ್ನವಾದ ಹಾದಿಗಳ ಪರಿಚಯ ಓದುಗನಿಗೆ ದಕ್ಕುತ್ತದೆ.

ಕವನಸಂಕಲನದ ಪ್ರವೇಶವನ್ನು ಅವರ ಸಾಮಾಜಿಕ ಕಳಕಳಿ ಮತ್ತು ಹೆಣ್ಣಿನ ಅಂತರಾಳದ ನೋವುಗಳನ್ನು ಬಿಂಬಿಸುವ, ಮತ್ತು ಮಹಿಳಾಪರ ದ್ವನಿಯನ್ನು ಹೊರಹಾಕುವ 'ಅವಳ ಕಡೆ' ಎಂಬ ಕವನದಮೂಲಕ ಪ್ರಾರಂಭಿಸುತ್ತಿದ್ದೇನೆ. ವಯಕ್ತಿಕವಾಗಿ ಇದು ನನಗಂತು ತುಂಬಾ ಇಷ್ಟವಾದ ಕವಿತೆ. 

ಹೆಗಲಿಗೆ ಆಸೆಗಳ ಜೋಳಿಗೆ

ತಲೆಮೇಲೆ ಜವಾಬ್ದಾರಿ ಪೆಟ್ಟಿಗೆ

ಸೆರಗಿನ ಅಂಚು ಮಾತ್ರ ನೆರಳು

ಅವಳ ಬಗಲಿನ ಹಸುಗೂಸಿಗೆ

....

ಇಂಥಹ ನೂರಾರು ಸಹೊದರಿಯರತ್ತ

ಇಲ್ಲ ನಮ್ಮನಿಮ್ಮ ದೃಷ್ಠಿ

ಸುಖ ಕಂಡವರ ಬಾಳಲಿ

ಸಬಲೀಕರಣದ ಸೃಷ್ಠಿ..

ಬದುಕನ್ನು ಬೀದಿಯಲ್ಲಿಯೇ ಬದುಕುತ್ತ ಬೀದಿಯಲ್ಲೆ ಬದುಕಿನ ಕನಸನ್ನು ಕಾಣುತ್ತ ಬದುಕುತ್ತಿರುವ ಅವಳ ಕಡೆಗೆ ನೋಡಿದ ಕವಯತ್ರಿಯವರ ದೃಷ್ಠಿ ನಿಜಕ್ಕೂ ವಿಭಿನ್ನವಾಗಿ ಕಂಡುಬರುತ್ತದೆ. ಕಣ್ಮುಂದಿರುವ ಎರಡು ಮಕ್ಕಳು, ಕುಡುಕ ಗಂಡ, ಹಸಿವಿನ ದಾಹ, ಸೂರಿಲ್ಲ, ಸ್ವಾತಂತ್ರ್ಯವಿಲ್ಲ, ಕಾಮುಕರ ಕಾಟ ತಪ್ಪಿಲ್ಲ ಇಂಥವರಿಗೆ ಸಬಲೀಕರಣದ ಯಾವ ನೆರಳೂ ತಲುಪುತ್ತಿಲ್ಲ. ಅಬಲೆಯಲ್ಲ ಸಬಲೆ ಎಂಬುದು ನಿಜವಾಗಬೇಕಾದರೆ ಹೆಣ್ಣು ಬೀದಿಯಿಂದ ಬದುಕನ್ನು ತೊರೆಯಬೇಕು. ಅವಳಿಗೂ ರಕ್ಷಣೆ ಸಿಗಬೇಕು ಎಂಬ ಕವಯತ್ರಿಯವರ ಆಶಯ ಕವಿತೆಯಲ್ಲಿ ತುಂಬಾ ಮುಖ್ಯವಾಗುತ್ತದೆ. ಮತ್ತು ಇದು ಅವರ ಮಹಿಳಾಪರವಾದ ಮಮತಾಮಯಿ ಮನಸಿನ ಮಧುರತೆಯನ್ನೂ ಅಂತಃಕರಣವನ್ನು ಕೂಡಾ ಕವಿತೆ ಇಲ್ಲಿ ಬಿಚ್ಚಿಡುತ್ತದೆ.

ಬದುಕಿನಿಂದ 'ಬಿಡುವು' ಕೇಳಿ ಬಾಲ್ಯದ ಅಂಗಳದಲ್ಲಿ ಆಡಿಬರಲು ಹವನಿಸುವ ಕವಯತ್ರಿಯವರು

ಬದುಕಲು ದುಡುಮೆಯೇ? 

ಇಲ್ಲ ದುಡಿಮೆಯೇ ಬದುಕೇ? ಎಂದು ಪ್ರಶ್ನಿಸಿಕೊಂಡು ಎರಡೂ ಅಲ್ಲ ಇಲ್ಲಿ ಬಾಲ್ಯ ಮುಖ್ಯ ಆ ಬಾಲ್ಯದ ಕ್ಷಣಗಳು ಬದುಕನ್ನು ಕಟ್ಟಿಕೊಡುವ ಮತ್ತು ಬದುಕನ್ನು ಚಿತ್ರಿಸುವ ಒಂದು ಮಾಯಾಲೋಕವೇ ಹೌದು ಮತ್ತೆ ಮತ್ತೆ ಮಗುವಾಗಬೇಕೆಂಬುವ ಹಂಬಲ ಕವಯತ್ರಿಯಲ್ಲಿ ಕಾಣುತ್ತದೆ. ಹೆಣ್ಣಿನ ಬಗ್ಗೆ ಅವರಿಗಿರುವ ಅಪಾರ ಗೌರವ ಮತ್ತು ಕಾಳಜಿ ಮತ್ತು ಪ್ರೀತಿಯನ್ನು ಈ ಕವನಸಂಕಲನದ ಕವಿತೆಗಳಲ್ಲಿ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ.. 'ನಾನು'. ಎನ್ನುವ ಕವಿತೆಯಲ್ಲಿ ನಾನು ಹೆಣ್ಣು ಆದರೆ, ಸೀತೆಯಲ್ಲ, ಮೀರಾ ಅಲ್ಲ, ಶಾಂತಲೆಯಲ್ಲ, ಜೂಲಿಯೆಟ್ ಅಲ್ಲ, ಅನಾರ್ಕಲಿಯಲ್ಲ, ಲೈಲಾಳೂ ಅಲ್ಲ ಸಮುಲ್ಲಾಸದ ಬೆಸುಗೆಯಲಿ ಪ್ರೀತಿಪೂರಣವ ತೃಪ್ತಿಯಲಿ ಉಣಬಡಿಸಬಲ್ಲ ಪ್ರೇಮಿ ಮಾತ್ರ ನಾನು ಎನ್ನುತ್ತಾರೆ. ನಿಜವೂ ಹೌದು ಪ್ರೀತಿಗೆ ಹೆಣ್ಣು ಹೆಣ್ಣಿಗೆ ಪ್ರೀತಿ ಒಂದಕ್ಕೊಂದು ಜೊತೆಗಿರಲೇಬೇಕು ಹೆಣ್ಣಿನಲಿ ಪ್ರೀತಿಯೊಂದಿದ್ದರೇ ಮಾತ್ರ ತಾಯಾಗಲು ಸಾಧ್ಯ ಆ ತಾಯಿಯೇ ಪ್ರೀತಿಯ ಪ್ರತಿರೂಪವಾಗುತ್ತಾಳೆ. ಮುಂದುವರೆದು ನಾನು ಹೆಣ್ಣು ಅರ್ಧಾಂಗಿ ಹೌದು ಗುಲಾಮಳಲ್ಲ, ಸೃಷ್ಟಿಯ ಪ್ರತಿರೂಪ ಭೋಗದ ವಸ್ತುವಲ್ಲ, ನಾನು ಮಡದಿ, ಮಗಳು, ತಂಗಿ, ಸ್ನೇಹಿತೆ ಎಲ್ಲವೂ ಹೌದು ನಿನ್ನ ಷರಾಬಿನ ಅಮಲಲ್ಲ, ಗಂಡಿನ ಬದುಕನ್ನು ಪೂರ್ಣಗೊಳಿಸುವವಳು ನಾ ತಕ್ಕಳಿಗೊಂದಿಲ್ಲ, ಕೇವಲ ಅಲಂಕಾರಕೆ ಸೀಮಿತಳಲ್ಲ ಅಸ್ತ್ರಭೂಷಿಣಿಯೂ ಹೌದು ಎಂದು ತುಂಬಾ ಮಾರ್ಮಿಕವಾಗಿ 'ಹೆಣ್ಣು' ಕವಿತೆಯಲ್ಲಿ ಹೆಣ್ಣಿನ ಬಗ್ಗೆ ಹೇಳುತ್ತಾರೆ. ಇವರ 'ನನ್ನೊಳಗಿನ ಹೆಣ್ಣು' ಕವಿತೆಯಲ್ಲಿ ಹೆಣ್ಣು ಮತ್ತಷ್ಟು ವಿಭಿನ್ನವಾಗಿ ಓದುಗರಿಗೆ ವಿಶಾಲತೆಯ ಆಗರವಾಗಿ, ಅಂತರಂಗದ ಸಖಿಯಾಗಿ, ಸ್ಪೂರ್ತಿಯ ಸೆಲೆಯಾಗಿಯೂ ಕಾಣಸಿಗುತ್ತಾಳೆ..

ಬದುಕಿನ ಹೋರಾಟದಲ್ಲಿ ಬದುಕನ್ನು ಹಗುರವಾಗಿ ಪರಿಗಣಿಸದೇ ಬದುಕುವ ಹಸಿವನ್ನು ತಣಿಸಿಕೊಂಡು ಸಾಗುವಾಗ.. ಬದುಕನ್ನೆ ತೊರೆದು ಹೊರಟು ನಿಂತ ಬುದ್ಧನನ್ನು ಎದುರಾಗೊಳ್ಳಲೇಬೇಕು. ಈ ಹಂಗಿಲ್ಲದ ಹಾದಿಯಲ್ಲಿ ಕವಯತ್ರಿ ಜಹಾನ್ ಅರಾ ಅವರು ಬುದ್ಧನನ್ನು ಎಳೆದುತಂದು ಬದುಕಿನ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಧೈರ್ಯ ಮಾಡುತ್ತಾರೆ. ಬುದ್ಧನನ್ನು ಅರಿತಮೇಲೆ ಶರಣಾಗತರಾಗಿ ಬುದ್ಧನನ್ನು ಆರಾಧಿಸುತ್ತಾರೆ. ಇವರ ಕವಿತೆಗಳಲ್ಲಿ ಬುದ್ಧ ತುಂಬಾ ಪ್ರಶ್ನೆಗಳಿಗೆ ಗುರಿಯಾಗಿದ್ದಾನೆ ಮತ್ತು ಅಷ್ಟೇ ತುಂಬಾ ಪ್ರಶ್ನೆಗಳಿಗೆ ಉತ್ತರವೂ ಆಗಿದ್ದಾನೆ. ಒಮ್ಮೆ ಬುದ್ಧನನ್ನು ಪ್ರಶ್ನೆಯಾಗಿ ಪರಿಗಣಿಸಿ ಯಶೋದರೆಯನ್ನು ಉತ್ತರವಾಗಿ ಮುಂದಿಡುವುದರ ಜೊತೆಗೆ ಯಶೋದರೆಯಾಗಿಯೇ ಪ್ರಶ್ನಿಸಲು ಶುರುಮಾಡುತ್ತಾರೆ. ಮತ್ತೆ ಬುದ್ಧನ ಜಗತ್ತಿಗೆ ಪ್ರವೇಶಿಸಿದಾಗ ಎಲ್ಲ ಹಂಗುಗಳನ್ನು ತೊರೆದು ಬುದ್ಧನಂತೆ ಪ್ರತಿಷ್ಟಾಪಿಸಲ್ಪಡುತ್ತಾರೆ. ಇದು ಬುದ್ಧನಬಗ್ಗೆ ಬರೆದ ಮತ್ತವನೊಂದಿಗೆ ನಡೆಸಿದ ಅನುಸಂಮಧಾನಕ್ಕೆ ಅವರ

'ಡಿಯರ್ ಬುದ್ಧ' ಕವಿತೆಯ

ಸಾಸಿವೆಯಷ್ಟೂ ಪ್ರೀತಿ ಇಲ್ಲದ ಜನ

ಆಸೆಗಳ ಹಿಂದೆ ಓಡೋಡಿ

ದುಃಖದ ಮರದಡಿಯಲ್ಲಿ

ಉಸ್.. ಎಂದು ಕುಂತುಬಿಟ್ಟಿದ್ದಾರೆ..

ನಿನ್ನ ಬಿಡುವಿನಲ್ಲಿ ನಂಗಿಷ್ಟು ಸಮಯಕೊಡು

ಹಿತವಚನಕ್ಕಾಗಿ ಕಾಯುತ್ತಿರುವೆ

ಅನೇಕ ಕಟ್ಟುಪಾಡುಗಳ ಆಚೆ..

ಎಂಬ ಸಾಲುಗಳು..

, 'ಅವಳ ನೆನಪುಗಳ ವ್ಯಾಕರಣ' ಕವಿತೆಯ

ಬ್ರಹ್ಮನ ಮುಖದಿಂದ ಬ್ರಾಹ್ಮಣರು

ತೋಳುಗಳಿಂದ ಕ್ಷತ್ರಿಯರು

ಹೊಟ್ಟೆಯಿಂದ ವೈಶ್ಯರು

ಪಾದಗಳಿಂದ ಶೂದ್ರರು ಬಂದವರಂತೆ

ಸ್ತ್ರೀಯರು..!??

ಬ್ರಹ್ಮನ ಯಾವ ಬಾಗದಿಂದ ಬಂದವರು?

ಎಂಬ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ.

ಈ ಪ್ರಶ್ನೆ ಕಾಡಲಿಲ್ಲವೇ ಅವನನ್ನು?

ಎನ್ನುವ ಸಾಲುಗಳು

, 'ಹೇಳು ಒಮ್ಮೆ' ಕವಿತೆಯ

ಏಕೆ ಯೋಚಿಸಲಿಲ್ಲ ಆ ವೃದ್ಧ ತಂದೆಯ ಬಗ್ಗೆ

ಏಕೆ ತಡೆಯಲಿಲ್ಲ ನಿನ್ನ ಸತಿಯ ಪ್ರೇಮದ ಬುಗ್ಗೆ

ನೆನಪಾಗಲಿಲ್ಲವೇ ಆ ಪುಟ್ಟ ಕಂದನ ಮುಗ್ಧ ನಗು

ಕಣ್ಣಮುಂದಿನ ಸತ್ಯ ತಿಳಿಯದೇ ಏಕೆ ಬಿಟ್ಟುಹೋದೆ!

ಇದು ನ್ಯಾಯವೇ??

ಹೇಳು ಒಮ್ಮೆ ಅರಮನೆಯ

ಅರಸೊತ್ತಿಗೆ ಧಿಕ್ಕರಿಸಿ

ಎಷ್ಟು ದೂರ ನಿನ್ನ ನಡಿಗೆ??

ಎಂಬ ಸಾಲುಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ಕವನಸಂಕಲನದ ಇನ್ನೊಂದು ಆಯಾಮದಲ್ಲಿ

ಒಲವಿನ ತೊಳಲಾಟ, ಒಲವಿನ ವಿರಹ, ಒಲವಿನ ಹುಡುಕಾಟ, ಒಲವಿನ ಆಲಿಂಗನ, ಒಲವಿನ ಒಲವಿಗಾಗಿ ಕವಯತ್ರಿ ತುಂಬಾ ಮಧುರವಾದ ಭಾವಗಳನ್ನು ಹೆಣೆದಿದ್ದಾರೆ. ಮನಕದ್ದವನ ಬಗ್ಗೆ 'ಮನಕದ್ದವ' ಎಂಬ ಕವಿತೆಯಲ್ಲಿ

ಕೇಳು ಮನದನ್ನ

ಹೆಜ್ಜೆಗೆ ಗುರುವಾದವನು ನೀನು

ಲಜ್ಜೆಯಲಿ ಲಹರಿ ಹಾಡಿ

ಪ್ರೇಮದಡವಿಯಲಿ ಅಲೆದು

ನಡೆದು ಬಾಚಿ ಬಾಚಿ ತಬ್ಬಿ

ಈ ಮಲ್ಲಿಗೆಗೆ ಮುಗುಳುನಗೆ

ತಂದವನು ನೀನು..

ಎನ್ನುತ್ತಾರೆ.

ಸರಸ ವಿರಸ ಅಚಿತ

ಸಮರಸ ಅನುಭವಿಸಿದ್ದೇನೆ

ಬೇಕು ಬೇಡಗಳ ಬೇಡಿಕೆಗಳ

ವೇದಿಕೆ ಹಂಚಿಕೊಂಡಿದ್ದೇನೆ

ಕೋಪಕ್ಕೆ ಕೆಂಡವಾಗಿದ್ದೇನೆ

ತಾಪಕ್ಜೆ ಕಡಲಾಗಿದ್ದೇನೆ

ಯಾಕೋ ಏನೊ ಇನ್ನೂ ಅವನ

ಪ್ರೀತಿಗೆ ಮಡಿಲಾಗಲಿಲ್ಲ..

ಎಂಬ ತೊಳಲಾಟವನ್ನು 'ಹೆಜ್ಜೆ ಮೂಡದ ಹಾದಿ' ಕವಿತೆಯಲ್ಲಿ ಮೂಡಿಸಿದ್ದಾರೆ. ಪ್ರೇಮದ ಪ್ರೇಮಿಯ ಬರುವಿಕೆಗಾಗಿ ಹಪಹಪಿಸುವ ಮನಸ್ಸು ಕೊನೆಯ ಕ್ಷಣದಲ್ಲೂ ಅವನ ಪ್ರೀತಿಗಾಗಿಯೇ ಹಂಬಲಿಸುತ್ತಿರುತ್ತದೆ ಎಂಬುದನ್ನು ತಮ್ಮ 'ಬಂದು ಹೋಗು ಗೆಳೆಯ' ಕವಿತೆಯಲ್ಲಿ

ಬಂದು ಹೋದರು ಬಂಧುಗಳೆಲ್ಲ

ಬರಲಿಲ್ಲ ನೀನು

ಬಹಳ ಸಮಯವಿಲ್ಲ ಇನ್ನು

ನಿನ್ನ ನೋಡಿ ಮುಚ್ಚಬೇಕೆಂದು

ಉಸಿರು ಕಣ್ಣಲ್ಲಿ ನಿಂತಿದೆ

ನಾಲ್ವರ ಹೆಗಲಮೇಲೆ ನನ್ನ ಪಲ್ಲಕ್ಕಿ ಹೊರಟಿದೆ

ತೂರಿಬಿಡು ಒಂದುಗುಲಾಭಿ ನನ್ನ ಮೇಲೆ

ಬೆಚ್ಚಗೆ ನಿನ್ನೆದೆಯ ಗೂಡುಸೇರದ ಮೈಮನಕ್ಕೆ

ಪ್ರೇಮದಿ ಅಪ್ಪಿಕೊಳ್ಳಲಿ ಊರ್ವಿ

ತಂಪಾಗಿ ಮೌನವಾಗಲಿ ನೇಸರ..

ಎಂದು ಹೇಳುವುದರ ಮೂಲಕ ಓದುಗರ ಎದೆಯನ್ನು ಝಲ್ ಎನ್ನುವಂತೆ ಮಾಡುತ್ತಾರೆ. ಬದುಕಿಗಂಟಿದ ಕಷ್ಟ ಸುಖಗಳಂತೆ ಹೆಣ್ಣಿನ ಕೈಗಂಟುವ ಮದರಂಗಿಯದ್ದು ಒಂದು ಪ್ರಮೂಖ ಪಾತ್ರವೇ ಹೌದು. ಆ ಮದರಂಗಿ ಬದುಕಿಗೆ ರಂಗನ್ನೂ ನೀಡಬಹುದು. ಬದುಕನ್ನು ರಕ್ತಗತವಾಗಿಯು ಚಿತ್ರಿಸಬಹುದು. ಕವಯತ್ರಿ ಮದರಂಗಿ ಅಂದರೆ ಮೆಹಂದಿಯೊಂದಿಗೆ ಮೊಹಬ್ಬತ್ತಿಗೆ ಇಳಿದುಬಿಡುತ್ತಾರೆ. ಅದು ಚಿತ್ರಿಸುವ ರಕ್ತಸಿಕ್ತವಾದ ಚಿತ್ರವನ್ನೂ ಮತ್ತು ಅದರ ಸಹಜ ಸೌಂದರ್ಯದ ರಂಗನ್ನೂ ಸಮನಾಗಿ ಪ್ರೀತಿಸುವಲ್ಲಿ ಯಶಸ್ವಿಯಾಗಿ ಕವಿತೆಗಳನ್ನು ಕಟ್ಟಿಕೊಡುತ್ತಾರೆ ಅದಕ್ಕೆ ಸಾಕ್ಷಿಯಾಗಿ

ತನ್ನ ಸಾರವ ನನ್ನ ಕೈಗಿಳಿಸಿ

ಉದುರಿ ಸತ್ತು ಹೋಗುವಾಗ

ಕೊನೆ ಆಸೆಯಂತೆ ಅದಕ್ಕೂ

ಅವನ ಮೈಗಂಟಿ ಮುದ್ದಾಡಲು

ಸಿಗದ ಅವಕಾಶಕ್ಕೆ

ನನಗೆ ಪ್ರತಿಬಾರಿಯೂ ಶಾಪ ಹಾಕಿದರೂ

ಕೆಂಪು ರಂಗೇರಿ ಕಂಪು ಹರಡುತ್ತಿತ್ತು.

ಎಂಬ ಸಾಲುಗಳು ಮೊಹಬ್ಬತ್ತಿನ ಚಿತ್ತಾರವಾಗಿ ಕವಿತೆಯಲ್ಲಿ ಅರಳಿ ನಿಂತಿವೆ. ಹೀಗೆ ಪ್ರೀತಿಯ ಜಾಡನ್ನು ಹಿಡಿದು ಹೊರಟಾಗ, 'ಅವನಿಗಷ್ಟೇ ಆಹ್ವಾನ', 'ನೀನೆಂದರೆ', 'ನನ್ನೊಲವೇ ಬಾ' , 'ನೀ ಕಂಡ್ರ ಸಾಕು' , 'ನಿನಗಾಗಿ' ಕವಿತೆಗಳು ಪ್ರೇಮಭಾವದ ಸುಧೆಯನ್ನೇ ಸುರಿಸುತ್ತವೆ. ಇನ್ನುಳಿದಂತೆ 'ಮೌನವಾದೆಯಾ ಮಹಾತ್ಮ' , 'ನಾ ಹೋಗಿ ಬರುತ್ತೇನೆ' , 'ವೃಕ್ಷಾನುಸಂಧಾನ' , 'ಒಂದಾಗೋಣ ಬನ್ನಿ' , ಕವಿತೆಗಳು ಯುವ ಮನಸ್ಸುಗಳನ್ನು ಎಚ್ಚರಿಸುವ, ಯುವಮನಸ್ಸುಗಳಲ್ಲಿ ಕಿಚ್ಚನ್ನು ಹಬ್ಬಸುವ, ಮತ್ತು ದೇಶದ ಭಾಷೆಯ ದೇಶಿಯ ನೆಲೆಯಲ್ಲಿ ಮನಸುಗಳನ್ನು ಒಗ್ಗೂಡಿಸುವಲ್ಲಿ ಮತ್ತು ದೇಶಪ್ರೇಮದ ಸೆಲೆಯನ್ನು ಹರಿಸುವಲ್ಲಿ ವಿಭಿನ್ನವಾಗಿ ನಿಲ್ಲುತ್ತವೆ.

ಗಾಢ ಕತ್ತಲೆಗಂಜಿ ಚಿಟ್ಟನೆ ಚೀರಿದೆ

ಮತ್ತೆ ತಬ್ಬಿ ಮಬ್ಬಿನಲಿ ತೇಲಿದೆ

ಮರಳಿ ನಗೆಯೊಡನೆ ತೇಲಿದೆ

ನಿದ್ರೆಯನು ಕದ್ದ ಎವೆಗಳು

ಹೊಸ ಕನಸುಗಳ ನೀಡಿವೆ ನನ್ನುಸಿರಲಿ

ಪದ್ಯವೊಂದು ಹುಟ್ಟಿದೆ...

ಎಂದು ಹೇಳುವುದರ ಮೂಲಕ ಕವಿತೆ ನನ್ನುಸಿರು ನನ್ನ ಭಾವ, ನನ್ನ ಜೀವ ಎಂಬುದನ್ನು ಕವಯತ್ರಿ ನಿರೂಪಿಸುತ್ತಾರೆ. ಇದಕ್ಕೆ ಸಾಕ್ಷಿಯಂಬಂತೆ "...ಬರಹಕ್ಕಿಂತ ಬದುಕು ಮುಖ್ಯ ಎಂಬ ಅರಿವಿನ ಕಾವ್ಯದ ಕುಸುರಿಯಿಂದ ಮಿಂದೆದ್ದವರು. ಜಾತಿ ಮತ ಪಂಗಡಗಳ ಗಡಿದಾಟಿದ ಪರಿಶುದ್ಧ ಮಾನವೀಯ ಮನಸ್ಸುಳ್ಳವರು ಎಂದು ಕವಯತ್ರಿಯ ಕುರಿತು ಬೆನ್ನುಡಿಯಲ್ಲಿ ಬರೆದ ಸಾಲುಗಳು ಸಾಕ್ಷಿಯಾಗುತ್ತವೆ. ಕವನ ಸಂಕಲನದ ಕವಿತೆಗಳನ್ನು ಅವಲೋಕಿಸಿದಾಗ ಮುನ್ನುಡಿಯಲ್ಲಿ ಬೇಂದ್ರೆಯವರ 'ಒಣಗಿದ ರವದಿಯ ಸಾಕ ಕವಿತೆ ಬರಿಲಾಕ' ಎಂಬ ಮಾತನ್ನು ಉಲ್ಲೇಖಿಸಿ ಕಾವ್ಯ ಬೆಳಕಿಗಿಂತ ಬೆಳ್ಳಗಾಗಿ, ಗಾಳಿಗಿಂತ ತೆಳ್ಳಗಾಗಿ, ನಮ್ಮೊಳಗೆ ಇಳಿಯಬೇಕು. ಜಡೆಯಿಂದ ಗಂಗೆ ಧುಮುಕಿದಂತೆ ನಮ್ಮ ವೈಚಾರಿಕತೆಗೆ ಇಂಬು ನೀಡುವಂತಿರಬೇಕು. ಈ ಕೆಲಸವನ್ನು ಜಹಾನ್ ಆರಾ ಅವರು ಮಾಡಿದ್ದಾರೆ ಎನ್ನುತ್ತಾರೆ ಶ್ರೀ ವಿದ್ಯಾಧರ ಮುತಾಲಿಕ್ ದೇಸಾಯಿಯವರು. ಹೀಗೆ ಹಂಗಿಲ್ಲದ ಹಾದಿಯಲ್ಲಿ ಹೊರಟ ಓದುಗನ ಸಂಚಾರ ಮುಗಿದಾಗ ಒಂದು ನಿರ್ಲಿಪ್ತ ಹಾಗು ಆಶಾಭಾವದ ತುತ್ತತುದಿಗೆ ಬಂದು ನಿಲ್ಲುವುದರೊಂದಿಗೆ ಬದುಕಿನ ಹಂಗನ್ನೇ ತೊರೆದು ಬದುಕನ್ನು ಬದುಕಬೇಕೆನ್ನಿಸದೇ ಇರದು..

ನೀವು ಒಮ್ಮೆ ಓದಿ ಹೆಂಗೆಂಗೊ ಬದುಕುವ ಬದುಕಿನಲಿ ಹಂಗಿಲ್ಲದ ಹಾದಿಯನು. ಓದಿಗೆ ಯಾರ ಹಂಗೂ ಬೇಡ...

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುರೇಶ ಎಲ್. ರಾಜಮಾನೆ