Article

ಹನುಮಗನ್ನಡಿಯಲ್ಲಿ ರಾಮಾಯಣ ದರ್ಶನ

ಪಂಪನ ‘ಆದಿಪುರಾಣ’ ಮಹಾಕಾವ್ಯದ ಒಂಬತ್ತನೇ ಆಶ್ವಾಸದಲ್ಲಿ ಬರುವ ‘ನೀಲಾಂಜನೆಯ ನೃತ್ಯ ಪ್ರಸಂಗ’ ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಮತ್ತೆ ಮತ್ತೆ ಚರ್ಚಿಸಲ್ಪಡುತ್ತಿರುವ, ಉದಾಹರಿಸಲ್ಪಡುತ್ತಿರುವ, ಉಲ್ಲೇಖಿಸಲ್ಪಡುತ್ತಿರುವ ಒಂದು ವಿಶಿಷ್ಟವಾದ ಮತ್ತು ಸುಪ್ರಸಿದ್ಧವಾದ ಪ್ರಸಂಗ. ಅಯೋಧ್ಯಾ ಸಿಂಹಾಸನಾಧೀಶ್ವರನಾದ ಪುರುಪರಮೇಶ್ವರ ಮತ್ತೆ ಹುಟ್ಟುವ ಮತ್ತೆ ಸಾಯುವ ಜನ್ಮ ಜನ್ಮಾಂತರಗಳ ಬಂಧನವನ್ನು ಕಳಚಿಕೊಂಡು ಮುಕ್ತಿ ಸೋಪಾನವನ್ನೇರುವ ಸಮಯ ಸನ್ನಿಹಿತವಾಗಿದ್ದರೂ ಅದರ ಅರಿವೇ ಇಲ್ಲದಂತೆ ಸುಖಭೋಗಗಳಲ್ಲಿ ಮುಳುಗಿಹೋಗಿದ್ದಾನೆ. ಜೀವನದ ನಶ್ವರತೆಯನ್ನು ಅವನ ಮನಸ್ಸಿಗೆ ತೀವ್ರವಾಗಿ ತಟ್ಟುವಂತೆ ಮಾಡಬೇಕಾಗಿದೆ. ವೈರಾಗ್ಯಭಾವ ಆವರಿಸಿ ರಾಜ್ಯತ್ಯಾಗ ಮಾಡಿ ತಪಸ್ಸಿಗೆ ಹೊರಡಬೇಕಾಗಿದೆ. ಅದಕ್ಕಾಗಿ ದೇವೇಂದ್ರ ಸಂಗೀತ, ನೃತ್ಯದ ಮನರಂಜನೆಯ ಸೇವೆಗೆ ಸನ್ನದ್ಧನಾಗಿದ್ದಾನೆ. ಪುರುದೇವನನ್ನು ಜೀವನಮುಖಿಯಾಗಿಸುವ ದೇವೇಂದ್ರನ ತಂತ್ರಗಾರಿಕೆಯ ಪ್ರಕಟರೂಪವೇ ‘ನೀಲಾಂಜನೆಯ ನೃತ್ಯ’. ದೇವತೆಗಳ ವಾದ್ಯವಾದನವನ್ನೂ ಅಪ್ಸರೆಯರ ಸಂಗೀತವನ್ನೂ ಆಲಿಸಿ ಆ ತುಂಬಿದ ಸಭೆ ಆನಂದತುಂದಿಲವಾಗಿ "ಅಹಹಾ ವಾದ್ಯಧ್ವನಿಯೇ, ಅಹಹಾ ಸಂಗೀತವೇ" ಎಂದು ಸಂಭ್ರಮದಿಂದ ಉದ್ಗರಿಸುತ್ತಿರಬೇಕಾದರೆ, ದೇವ ನರ್ತಕಿಯ ರೂಪು ಲಾವಣ್ಯಗಳನ್ನು ಬಣ್ಣಿಸಲು ಸಾವಿರ ನಾಲಗೆಯ ಧರಣೇಂದ್ರನಿಗೂ ಸಾಧ್ಯವಿಲ್ಲವೆನಿಸುವಂಥ ಚೆಲುವಿನ ಖನಿ ನೀಲಾಂಜನೆ ನಾಟ್ಯರಂಗ ಪ್ರವೇಶಕ್ಕೆ ಮುನ್ನ ಕೆಲವು ಕ್ಷಣಗಳ ಕಾಲ ಪರದೆಯ ಮರೆಯಲ್ಲಿ ನಿಲ್ಲುತ್ತಾಳೆ. ಹಾಗೆ ನಿಂತವಳ ಸೌಂದರ್ಯಾತಿಶಯವನ್ನು ಪಂಪ ವರ್ಣಿಸಿರುವುದು ಹೀಗೆ: “ನಿಲ್ತುವು ರಸಂಗಳಲ್ಲಿ ಮಡಲ್ತೆನೆ, ಭಂಗಿಯೊಳನಂಗಜಂಗಮ ಲತೆವೊಲ್ ನಿಲ್ತು, ಜವನಿಕೆಯ ಮರೆಯೊಳ್ ಪೋಲ್ತಳವಳ್ ಮುಗಿಲ ಮರೆಯ ವಿದ್ಯುಲ್ಲತೆಯಂ”. ಅಂದರೆ ಕಾವ್ಯ, ನಾಟ್ಯ, ಸಂಗೀತದಂಥ ಕಲಾಪ್ರಕಾರಗಳು ಸೊಗಯಿಸಲು ಅಲ್ಲಿ ನವರಸಗಳು ಸಂದರ್ಭೋಚಿತವಾಗಿ ತುಂಬಿ ತುಳುಕಬೇಕು. ನೀಲಾಂಜನೆ ಮುಂದೆ ಪ್ರದರ್ಶಿಸಲಿರುವ ನಾಟ್ಯವು ಸಂಗೀತದ ಹಿಮ್ಮೇಳನದಿಂದಲೂ ಕೂಡಿರುವಂಥದ್ದು. ಆ ನಾಟ್ಯ ಮತ್ತು ಸಂಗೀತಗಳಲ್ಲಿ ಹೊಮ್ಮಬೇಕಾದ ನವರಸಗಳು ಮಡುಗಟ್ಟಿ ನಿಂತಿವೆ, ಇನ್ನು ಭೋರ್ಗರೆಯುವುದೊಂದೇ ಬಾಕಿ ಎನಿಸುವಂಥ ಮೋಹಕ ಭಂಗಿಯಲ್ಲಿ ಅವಳು ನಿಂತಿದ್ದಾಳೆ. ಜೀವ ಬಂದು ಓಡಾಡುತ್ತಿರುವ ಮನ್ಮಥನ ಬಳ್ಳಿ ಕ್ಷಣಕಾಲದ ವಿರಾಮಕ್ಕಾಗಿ ನಿಂತಂತಿದೆ. ಆ ಸೌಂದರ್ಯರಾಶಿ ಮೋಡದ ಮರೆಯಲ್ಲಿರುವ ಬಳ್ಳಿಮಿಂಚನ್ನು ಹೋಲುತ್ತಿದ್ದಾಳೆ. ಮಿಂಚಿನ ಕೋರೈಸುವಿಕೆಗೆ ಅನ್ವರ್ಥವಾಗುವಂತೆ ಅವಳ ಅಸಾಧಾರಣ ಚೆಲುವು ರಸಿಕರ ಕಣ್ಣು ಕುಕ್ಕಲು ಸನ್ನದ್ಧವಾಗಿದೆ!
ನೀಲಾಂಜನೆಯ ನೃತ್ಯಪ್ರಸಂಗದ ಒಂದು ಪದ್ಯದ ಅರ್ಥವನ್ನು ವಿವರವಾಗಿ ಬಗೆದು ಮಂಡಿಸಲು ನಿರ್ದಿಷ್ಟ ಕಾರಣವಿದೆ. ಮುಂದೆ ನೀಲಾಂಜನೆ ರಂಗಪ್ರವೇಶ ಮಾಡಿದ ಕ್ಷಣದಿಂದ ಅದೃಶ್ಯಳಾಗುವವರೆಗೆ ಪುರುದೇವನೂ ಸೇರಿದಂತೆ ಸಭೆಯಲ್ಲಿದ್ದ ಸರ್ವರನ್ನೂ ರೆಪ್ಪೆ ಬಡಿಯಲು ಸಾಧ್ಯವಾಗದಂತೆ ತನ್ನ ಒನಪು ಒಯ್ಯಾರ, ಬೆಡಗು ಬಿನ್ನಾಣ, ವಿಲಾಸ ವಿಭ್ರಮಾದಿಗಳಿಂದ ತನ್ನತ್ತ ಸೆಳೆದು ಅವರನ್ನು ಭಾವಪರವಶರಾಗಿಯೂ ಆನಂದಪರವಶರಾಗಿಯೂ ಮಾಡಿ, ರಸರೋಮಾಂಚನಗೊಳಿಸುವುದು ಇದ್ದೇ ಇದೆ. ಅಂಥ ಅಮೋಘವಾದದ್ದು ಏನೋ ಸಂಭವಿಸಲಿದೆ ಎನ್ನುವ ಪೂರ್ವಸೂಚನೆ ದೊರೆಯುವಂತೆ, ಅವಳು ಪರದೆಯ ಮರೆಯಲ್ಲಿ ಕ್ಷಣಕಾಲ ನಿಂತ ಭಂಗಿಗೆ ‘ನವರಸಗಳು ಮಡುಗಟ್ಟಿ ನಿಂತವು’ ಎನ್ನುವ ಹೋಲಿಕೆಯನ್ನು ಕೊಡಲಾಗಿದೆ.
ಮಹಾಕಾವ್ಯಗಳನ್ನು ರಚಿಸುವ ಕಾಲ ಮುಗಿದುಹೋಯಿತು ಎಂದು ಘೋಷಿಸುತ್ತಿದ್ದ, ಭಾವಿಸುತ್ತಿದ್ದ ಆಧುನಿಕ ಕನ್ನಡ ಸಾಹಿತ್ಯ ಘಟ್ಟದಲ್ಲಿ ಯುಗನಿರ್ಮಾಣ ಪ್ರತಿಭೆಯಾಗಿ ಅವತರಿಸಿ, ಪಂಪ ಕುಮಾರವ್ಯಾಸರ ಮಹಾಕಾವ್ಯಗಳಿಗೆ ಹೆಗಲೆಣೆಯೆನಿಸುವಂತೆ ಕುವೆಂಪು ಅವರು ರಚಿಸಿದ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಓದುವುದು ಎಂದರೇನೆ, ಅಲ್ಲಿ ಮಡುಗಟ್ಟಿರುವ ನವರಸಗಳಲ್ಲಿ ಮಿಂದಂಥ ಅನುಭೂತಿಯನ್ನು ಪಡೆಯುವುದೇ ಆಗಿದೆ. ಓದುವುದು ಎಂದರೆ ಸಂಧಿ, ಸಮಾಸಗಳನ್ನು ಬಿಡಿಸಿಕೊಂಡು ಕಣ್ಣೋಡಿಸುವುದಲ್ಲ, ಅರ್ಥದ ಆಳ ವಿಸ್ತಾರಗಳಲ್ಲಿ ವಿಹಾರ ಮಾಡುತ್ತಾ ಆನಂದಿಸುವುದು; ವಿರಾಮಾಯಣವಾಗಿರುವ ರಾಮಾಯಣವನ್ನು ವರ್ತಮಾನಕ್ಕೆ, ಅಲ್ಲಿಂದ ನಮ್ಮ ಕುಟುಂಬಕ್ಕೆ ಮತ್ತು ನಮ್ಮಲ್ಲಿಗೆ ತಂದುಕೊಳ್ಳುವುದು. ರಾಮಾಯಣ ದರ್ಶನವನ್ನು ಆಸ್ವಾದಿಸಬೇಕಾದರೆ ಹಳಗನ್ನಡ ಮತ್ತು ಸಂಸ್ಕೃತ ಶಬ್ದಗಳ ಪರಿಚಯ, ವ್ಯಾಕರಣ ಛಂದಸ್ಸು ಅಲಂಕಾರಗಳನ್ನು ಕುರಿತ ಪ್ರಜ್ಞೆ ಬೇಕೇ ಬೇಕು. ಇಲ್ಲವಾದರೆ “ನೀನೇರಬಲ್ಲೆಯ ನಾನೇರುವೆತ್ತರಕೆ, ನೀನಿಳಿಯಬಲ್ಲೆಯ ನಾನಿಳಿಯುವಾಳಕ್ಕೆ” ಎಂದು ಕವಿ ಹಾಕುವ ಸವಾಲಿಗೆ “ಉಹೂಂ.. ಉಹೂಂ...” ಎಂದು ಹಿಂದೆ ಸರಿಯಬೇಕಾಗುತ್ತದೆ. ಕವಿ-ಕಾವ್ಯದ ಬಗೆಗೆ ಪ್ರೀತಿ, ಗೌರವ, ಭಕ್ತಿ, ಅನುರಕ್ತಿ ಇದ್ದಾಗ ಮಾತ್ರ ಕಾವ್ಯಾರ್ಥದ ಜಾಡುಹಿಡಿದು ಆನಂದಿಸುತ್ತ ಮುಂದೆ ಸಾಗುವುದು ಸಾಧ್ಯವಾಗುತ್ತದೆ.
ಆಧುನಿಕ ಕಾಲಘಟ್ಟದಲ್ಲೂ ಕುವೆಂಪು ಮಹಾಕಾವ್ಯ ರಚನೆಗೆ ರಾಮಾಯಣವನ್ನೇ ಯಾಕೆ ಆಯ್ಕೆಮಾಡಿಕೊಂಡರು? ಆರುನೂರು ವರ್ಷಗಳ ಹಿಂದೆಯೇ ಕುಮಾರವ್ಯಾಸ ಎಷ್ಟೊಂದು ರಾಮಾಯಣಗಳು, ಎಷ್ಟು ಮಂದಿ ರಾಮಾಯಣದ ಕವಿಗಳು, ಸಾಕಪ್ಪ ಇದರ ಸಹವಾಸ ಎಂದು ನಮಸ್ಕಾರ ಮಾಡಿ ಮಹಾಭಾರತ ಬರೆದು ಸೈ ಎನಿಸಿಕೊಂಡಿದ್ದರೂ ಆ ರಾಮಾಯಣದ ಕಡೆಗೇ ಕುವೆಂಪು ಅವರಿಗೆ ಯಾಕೆ ಮೋಹ? ಸಹೃದಯರ ಮನದಲ್ಲಿ ಅಲೆಯೇಳಬಹುದಾದ ಇಂಥ ಪ್ರಶ್ನೆಗಳಿಗೆ ಕುವೆಂಪು ಅವರೇ ಒಂದು ಕಡೆ ಸ್ಪಷ್ಟೀಕರಣ ನೀಡಿದ್ದಾರೆ: “ವಾಲ್ಮೀಕಿ ರಾಮಾಯಣದ ಚೌಕಟ್ಟಿನಲ್ಲಿ ಮೈದಳೆದಿರುವ ನನ್ನ ಅನುಭವ ಆಲೋಚನೆ ದರ್ಶನಗಳಿಗೆ ರೂಪುಕೊಡಲು ಒಂದು ಸಾಧನ ಬೇಕಾಗಿತ್ತು. ಆ ಸಾಧನವೂ ಆ ದರ್ಶನದಷ್ಟೇ ಮಹತ್ವಪೂರಿತವಾದುದಾಗಿರಬೇಕಿತ್ತು. ಅದಕ್ಕೆ ರಾಮಾಯಣವೇ ಸರಿಯೆಂದು ನನಗೆ ತೋರಿತು. ಏಕೆಂದರೆ ರಾಮಾಯಣ ಇಂದಿನದಲ್ಲ, ಹಿಂದಿನದಲ್ಲ; ಅದು ಅನಾದಿಯಾದುದು, ಅನಂತವಾದುದು. ಸಾವಿರಾರು ವರ್ಷಗಳಿಂದ ಅದು ಭಾರತೀಯರನ್ನು ಉದ್ಧರಿಸುತ್ತಿದೆ. ಸಾವಿರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಸಂಸ್ಕಾರ ರಾಮ, ಸೀತೆ, ಆಂಜನೇಯ, ಊರ್‍ಮಿಳೆ, ರಾವಣ, ಮಂಡೋದರಿ, ವಿಭೀಷಣ ಮೊದಲಾದ ಪದಗಳಲ್ಲಿ ಪ್ರವಹಿಸುತ್ತಿದೆ. ಅತಿಮಾನಸ ಲೋಕದ ಅನುಭವಗಳನ್ನು ವ್ಯಕ್ತಪಡಿಸಲು ಆ ಕತೆಯೇ ಸರಿಯಾದ ಸಾಧನ". ಕುವೆಂಪು ಈ ಸಂಗತಿಯನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ‘ಶ್ರೀ ವೆಂಕಣ್ಣಯ್ಯನವರಿಗೆ’ ಎನ್ನುವ ಅರ್ಪಣಾಭಾಗದಲ್ಲಿ ‘ಇದು ಹಿಂದೆ ವಾಲ್ಮೀಕಿ ಹೇಳಿರುವ ಕಥೆಯಾದರೂ, ಕನ್ನಡದಲ್ಲಿ ಬೇರೆಯದೇ ಕಥೆ ಎನ್ನುವಂತೆ, ಬೇರೆ ದೇಹವನ್ನೇ ಧಾರಣೆ ಮಾಡಿದಂತೆ, ಮರುಹುಟ್ಟು ಪಡೆದಂತೆ ಈ ಕಾವ್ಯ ಮೂಡಿದೆ’ ಎಂದಿದ್ದಾರೆ. ‘ಶ್ರೀ ಸಂಪುಟ’ ಅಧ್ಯಾಯದ ‘ಅಭಿಷೇಕ ವಿರಾಡ್‌ದರ್ಶನಂ’ ಸಂಚಿಕೆಯಲ್ಲಿ ಈ ಆಶಯವನ್ನು ಮತ್ತಷ್ಟು ಸ್ಫುಟಗೊಳಿಸಿ “ಇದು ಇತಿಹಾಸವಲ್ಲ, ಬರಿಯ ಕಥೆಯಲ್ಲ, ಕಥೆಯೆನ್ನುವುದು ನಿಮಿತ್ತ ಮಾತ್ರ. ಆತ್ಮಕ್ಕೆ ಶರೀರ ಹೇಗೋ ಹಾಗೆಯೇ ರಾಮನ ಕಥೆಯ ಪಂಜರದಲ್ಲಿ ರಾಮರೂಪದ ಪರಾತ್ಪರ ಪುರುಷೋತ್ತಮನ ಲೋಕಲೀಲಾ ದರ್ಶನ ಇಲ್ಲಿ ಮೈ ಪಡೆದಿದೆ" ಎಂದು ಹೇಳಿದ್ದಾರೆ.

ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೊಸತು ಎಂಬಂತೆ ಸೃಷ್ಟಿಯಾದ ‘ಶ್ರೀರಾಮಾಯಣ ದರ್ಶನಂ’ ಎನ್ನುವ ವಿಶಿಷ್ಟವೂ ಅದ್ಭುತವೂ ಆದ ಕಾವ್ಯದ ಸ್ವಾರಸ್ಯವನ್ನು ಒಳಹೊಕ್ಕು ಸವಿಯುವುದು ಹಳಗನ್ನಡವೇ ಎನಿಸುವಂಥ ಭಾಷಾ ಪ್ರಯೋಗದ ದೃಷ್ಟಿಯಿಂದ ಅಷ್ಟೊಂದು ಸುಲಭವಲ್ಲ. ಮಹಾಕಾವ್ಯದ ಶೈಲಿಗೆ ಹೊಂದಿಕೊಳ್ಳುವಂಥ, ಇಂಗ್ಲಿಷ್‌ನಲ್ಲಿ ಬ್ಲಾಂಕ್‌ವರ್ಸ್ ಎಂದು ಕರೆಯುವ ಅಪ್ರಾಸ ಛಂದಸ್ಸಿನ ಸರಳ ರಗಳೆಯನ್ನು ಕುವೆಂಪು ಪ್ರಯೋಗಿಸಿದ್ದೇ, ಸಾಕಷ್ಟು ಪೂರ್ವಸಿದ್ಧತೆ ಮತ್ತು ಅಧ್ಯಯನವಿಲ್ಲದೆ ರಾಮಾಯಣ ದರ್ಶನಕ್ಕೆ ಪ್ರವೇಶಿಸಿದವರು ಬಹುಬೇಗ ಅಲ್ಲಿಂದ ಹೊರಬರಲೂ ಕಾರಣವಾಯಿತು. ಅಂಥವರನ್ನೂ ಈ ಮಹಾಕಾವ್ಯದ ಮಹತ್ವ, ಸ್ವಾರಸ್ಯದತ್ತ ಆಕರ್ಷಿಸಬೇಕು, ಓದು ಮತ್ತು ಗ್ರಹಿಕೆಯ ಮೂಲಕ ಉದ್ದೇಶಿತ ದರ್ಶನ ದೀಪ್ತಿ ಅವರಲ್ಲಿ ಬೆಳಗುವಂತೆ ಮಾಡಬೇಕು, ಯುಗ ಚೈತನ್ಯದ ಸಮಷ್ಟಿಪ್ರಜ್ಞೆಯ ಸೃಷ್ಟಿಯಾಗಿ ರಾಮಾಯಣ ದರ್ಶನ ಆವಿರ್ಭವಿಸಿದೆ ಎನ್ನುವ ಅರಿವು ಮೂಡಬೇಕು ಮುಂತಾದ ಆಲೋಚನೆಗಳಿಂದ ಪ್ರೇರಿತರಾದ ಕೆಲವು ವಿದ್ವಾಂಸರು ದರ್ಶನಮೂಲದ ಮಹತ್ವಕ್ಕೆ ಭಂಗಬಾರದಂತೆ ಹೊಸಗನ್ನಡದಲ್ಲಿ ನಿರೂಪಿಸಿ ಪುಸ್ತಕಗಳನ್ನು ಹೊರತಂದರು. ಅವುಗಳಲ್ಲಿ ಮೊದಲನೆಯದು, ದೇಜಗೌ ಅವರ ‘ಶ್ರೀರಾಮಾಯಣ ದರ್ಶನಂ ವಚನ ಚಂದ್ರಿಕೆ’. ನಂತರದಲ್ಲಿ ನಿ. ರಾಜಶೇಖರ ಅವರ ‘ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಗದ್ಯಾನುವಾದ’, ಟಿ. ಭೀಮಯ್ಯ ಮಾರೇನಹಳ್ಳಿ ಅವರ ‘ಶ್ರೀರಾಮಾಯಣ ಸಂದರ್ಶನ’ ಕೃತಿಗಳು ಪ್ರಕಟವಾದವು. ಈ ಮೂರು ಪುಸ್ತಕಗಳಷ್ಟು ಸಮಗ್ರ ಅಲ್ಲದಿದ್ದರೂ ಒಂದು ನಿರ್ದಿಷ್ಟ ಉದ್ದೇಶ ಇರಿಸಿಕೊಂಡು, ಜಿ. ಕೃಷ್ಣಪ್ಪ ಅವರು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಎಲ್ಲೆಲ್ಲಿ ಹನುಮಂತನ ಚಿತ್ರಣ ಬರುತ್ತದೋ ಅವುಗಳನ್ನೆಲ್ಲ ಅನುಕ್ರಮವಾಗಿ ಜೋಡಿಸಿ, ಸರಳ ಗದ್ಯದಲ್ಲಿ ವಿವರಣೆ ನೀಡಿದ್ದಾರೆ. ರಾಮಾಯಣ ದರ್ಶನದೊಳಗೆ ‘ಹನುಮದ್ದರ್ಶನ’ ಮತ್ತು ಹನುಮದ್ದರ್ಶನದಿಂದ ರಾಮಾಯಣದರ್ಶನ ಆಗುವಂತೆ ಮಾಡಿದ್ದಾರೆ. ಮೇಲೆ ಉಲ್ಲೇಖಿಸಿದ ಗದ್ಯಾನುವಾದ ಕೃತಿಗಳ ಉಪಯುಕ್ತತೆಯನ್ನು ಅಲ್ಲಗಳೆಯದೆ, ರಾಮಾಯಣ ದರ್ಶನದ ಫಲ ಪಡೆದುಕೊಳ್ಳಲು ಕಾರಣವಾಗಿರುವ ಮಹದುಪಕಾರವನ್ನು ಮರೆಯದೆ ಹೇಳುವುದಾದರೆ ಕಾವ್ಯದಲ್ಲಿ ಕುವೆಂಪು ಅವರ ಭಾಷಾ ಪ್ರಯೋಗದ ಸೌಂದರ್‍ಯ, ಲಾವಣ್ಯ, ಬೆಡಗು, ಸೊಗಡು, ಮೋಹಕತೆ ಇತ್ಯಾದಿ ಏನೇನು ಇದೆಯೋ ಅದನ್ನೆಲ್ಲ ಗದ್ಯರೂಪದಲ್ಲಿಯೇ ಹಿಡಿದುಕೊಟ್ಟಿದ್ದಾರೆ ಕಾವ್ಯ ಎನ್ನುವುದು ಪದ್ಯರೂಪಕ್ಕಷ್ಟೇ ಸೀಮಿತವಾಗಿರಬೇಕೆಂದಿಲ್ಲ, ಅದು ಗದ್ಯರೂಪದಲ್ಲೂ ಇರಬಹುದೆಂದು ತೋರಿಸಿಕೊಟ್ಟಿದ್ದಾರೆ. ‘ಹನುಮದ್ದರ್ಶನ’ ಗದ್ಯಾನುವಾದದ ಅತ್ಯಂತ ಸೊಗಸಾದ ಮಾದರಿಯಾಗಿದ್ದು ನಾವು ಓದುತ್ತಿರುವುದು ಪದ್ಯರೂಪದಲ್ಲೋ ಗದ್ಯರೂಪದಲ್ಲೋ ಎಂದು ಅನುಮಾನ ಉಂಟಾಗುವಷ್ಟು ಕಾವ್ಯಾತ್ಮಕ ಸರಳ ಗದ್ಯದಲ್ಲಿ, ಆದಷ್ಟು ಮಟ್ಟಿಗೆ ಮೂಲದ ಶಬ್ದಗಳನ್ನು ಉಳಿಸಿಕೊಂಡು, ರಸಾರ್ದ್ರ ಸನ್ನಿವೇಶಗಳ ಮಾಧುರ್ಯಕ್ಕೆ ಓದುಗರು ತಲೆದೂಗುವಂತೆ, ರುಚಿಕಟ್ಟಾದ ಪದಾರ್ಥವನ್ನು ಚಪ್ಪರಿಸಿ ಆಸ್ವಾದಿಸುವಂತೆ ಆಹ್ಲಾದಕರವಾಗಿ ನಿರೂಪಿಸಿದ್ದಾರೆ. ೧೬೪ ಪುಟಗಳ ಈ ಸರಳ ಗದ್ಯಾನುವಾದವನ್ನು ಓದಿ ಮುಗಿಸುವ ಹೊತ್ತಿಗೆ ಸಹೃದಯರ ಮನದಲ್ಲಿ ಎರಡು ತೆರನಾದ ಭಾವಪ್ರಚೋದನೆ ಉಂಟಾಗಬಹುದು. ಒಂದು- ರಾಮಾಯಣ ದರ್ಶನದ ಮುಖ್ಯ ಘಟ್ಟಗಳಲ್ಲಿ ಹನುಮಂತ ಕಾಣಿಸಿಕೊಂಡಿದ್ದಾನೆ, ಆ ಭಾಗಗಳ ಸವಿಯನ್ನೇನೋ ಕೃಷ್ಣಪ್ಪನವರು ಸರಳ ಗದ್ಯದಲ್ಲಿ ಉಣಬಡಿಸಿದ್ದಾರೆ, ನಾವು ಮನತಣಿಯುವಂತೆ ಅದನ್ನು ಸವಿ ನೋಡಿದ್ದಾಯಿತು, ಹಾಗೆಯೇ ಇಡೀ ಮಹಾಕಾವ್ಯ ಸರಳ ಗದ್ಯದಲ್ಲಿದ್ದರೆ ಅದನ್ನೂ ಓದಿ ಸಂಪೂರ್ಣ ತೃಪ್ತಿ ಪಡೆಯಬಹುದಿತ್ತು. ಎರಡು-ರಾಮಾಯಣ ದರ್ಶನದ ಹೆಸರು ಗೊತ್ತಿದ್ದರೂ, ಅದರ ಮಹತ್ವವೇನೆನ್ನುವ ತಿಳುವಳಿಕೆಯಿದ್ದರೂ ಅದು ಓದಿಗೆ ಕಠಿಣ ಎನ್ನುವ ತಪ್ಪು ತಿಳುವಳಿಕೆಯೋ ಬೇರೆಯವರು ಹಾಗೆ ಹೇಳಿದ್ದರ ಮೇಲಿನ ನಂಬಿಕೆಯೋ ಕಾರಣವಾಗಿ ದೂರದಿಂದಲೇ ನಮಸ್ಕಾರ ಮಾಡುತ್ತಿದ್ದವರು, ಸ್ಪರ್ಶಸುಖ ಮಾತ್ರ ಅನುಭವಿಸುತ್ತಿದ್ದವರು ‘ಹನುಮದ್ದರ್ಶನ’ ಓದಿ ಸವಿದಮೇಲೆ, ಕಾವ್ಯ ರೂಪದಲ್ಲೇ ಓದಿಬಿಡೋಣ ಎನ್ನುವ ಧೈರ್ಯೋತ್ಸಾಹ ಮೂಡಿ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನೇ ಕೈಯಲ್ಲಿ ಹಿಡಿದುಕೊಂಡು ಬಿಡಬಹುದು! ಈ ಎರಡೂ ರೀತಿಯ ಭಾವಪ್ರಚೋದನೆಗಳಿಗೆ ‘ಹನುಮದ್ದರ್ಶನ’ ಕಾರಣವಾಗಬಹುದು ಎನ್ನುವುದಾದರೆ ಈ ಕೃತಿಯ ಮಹತ್ವ ಎಂಥದ್ದೆಂಬುದನ್ನು ಸಹೃದಯರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ.
‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ‘ಶ್ರೀರಾಮನ ಮನದ ಬಾಳ್ಗೆಳೆಯ’ ಸಂಚಿಕೆಯಿಂದ ಪ್ರಾರಂಭವಾಗಿ ‘ಶ್ರೀರಾಮದೂತ ಆಂಜನೇಯ’ ಸಂಚಿಕೆಯವರೆಗೆ ಹದಿನೇಳು ಸಂಚಿಕೆಗಳಲ್ಲಿ ಹನುಮದ್ದರ್ಶನವಾಗುತ್ತದೆ. ಇಲ್ಲೆಲ್ಲ ದರ್ಶನ ಎನ್ನುವುದು ಎಲ್ಲೋ ಒಂದು ಕಡೆ ಸುಮ್ಮನೆ ಕಣ್ಣಿಗೆ ಕಾಣಿಸಿಕೊಳ್ಳುವುದಲ್ಲ, ಹನುಮಂತನೇ ಪರಮ ಪ್ರಧಾನವಾಗಿ ನಿಲ್ಲುವುದು. ಕಾವ್ಯಕ್ಕೆ ವಸ್ತು ರಾಮಾಯಣದ ಕಥೆಯಾದರು, ಹೆಸರು ‘ರಾಮಾಯಣ’ ಎಂದಿಲ್ಲ. ಅದರೊಂದಿಗೆ ‘ದರ್ಶನ’ ಸೇರಿಕೊಂಡಿದೆ. ಕುವೆಂಪು ಅವರ ದೃಷ್ಟಿಯಿಂದಲೇ ಹೇಳುವುದಾದರೆ, ದರ್ಶನ ಎನ್ನುವುದು ಕವಿಯ ಅನುಭವ, ಆಲೋಚನೆ, ಅಧ್ಯಯನ, ಧ್ಯಾನ, ತಪಸ್ಸು ಮತ್ತು ಸಂಸ್ಕಾರಗಳಿಂದ ಸಾಧ್ಯವಾಗುವ ಲೋಕಗ್ರಹಿಕೆ ಮತ್ತು ಅದರಿಂದ ಸಿದ್ಧವಾಗುವ ಒಂದು ಮನೋಧರ್ಮ. ಕುವೆಂಪು ಅವರು ಇಪ್ಪತ್ತನೇ ಶತಮಾನದ ವಿಜ್ಞಾನ, ತತ್ವಜ್ಞಾನ, ವೇದಾಂತ ವಿಜ್ಞಾನಗಳ ಹಿನ್ನೆಲೆಯಲ್ಲಿ ರಾಮಾಯಣದ ಕಥಾವಸ್ತುವನ್ನು ವ್ಯಾಖ್ಯಾನಿಸಿರುವ ಕ್ರಮದಲ್ಲಿಯೇ ಅವರ ‘ದರ್ಶನ’ವನ್ನು ಗುರುತಿಸಬಹುದಾಗಿದೆ. “ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್ ವ್ಯೂಹರಚನೆಯೊಳ್”; “ನನ್ನ ಕೃತಿ ಕೇವಲ ನನ್ನ ಸೃಷ್ಟಿ ಅಲ್ಲ, ಭಗವಂತನ ಅವತಾರ"; “ಒಂದು ಮಹಾಶಕ್ತಿಯು ಅನ್ನಮಯ ಪ್ರಪಂಚದಿಂದ ಆನಂದಮಯ ಪ್ರಪಂಚಕ್ಕೇರಿದ ಆತ್ಮದ ಪ್ರಯಾಣದ ಕಥೆ"; “ಶ್ರೀರಾಮನಾಲೋಕದಿಂದವತರಿಸಿ ಬಂದು ಈ ಲೋಕಸಂಭವನೆಯನೆಮ್ಮ ಭೂಜಾತೆಯಂ, ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ ಮರ್ದಿಸುತೆ, ಸಂವರ್ಧಿಪೋಲ್ ಚಿಚ್ಛಕ್ತಿಯಂ ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ, ತನ್ನ ತಮದಿಂ ಮುಕ್ತಮಪ್ಪುದು ದಿಟಂ” ಎನ್ನುವ ಮಾತುಗಳಲ್ಲಿ ಕುವೆಂಪು ‘ದರ್ಶನ’ದ ಸ್ವರೂಪವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ರಾಮಾಯಣ ದರ್ಶನದಲ್ಲಿ ಅನ್ನಮಯದಿಂದ ಆನಂದಮಯಕ್ಕೆ ಏರುವ ಮಹಾಶಕ್ತಿಯ ಸ್ವರೂಪವಾಗಿಯೇ ಹನುಮಂತನನ್ನು ಚಿತ್ರಿಸಲಾಗಿದೆ. ದರ್ಶನದ ಹನುಮಂತ ರಾಮಾಯಣದ ವಾನರನೋ ಕೋತಿಯೋ ಅಲ್ಲ; ಅವನು ತುಂಬಾ ವಿವೇಚನಾಶಾಲಿ, ಪರ್ವತೋಪಮ ಸ್ಥೈರ್ಯಶಾಲಿ, ನಯ ವಿನಯ ಕೋವಿದ, ಸಂಸ್ಕೃತಿ ಪೋಷಕ, ಯೋಗಾನುಭವಿ, ಮಹಾವೀರ, ಶಾಂತಮೂರ್ತಿ, ಸಾತ್ವಿಕ, ಧ್ಯಾನ ಸೇವೆ ಭಕ್ತಿಸಂಗಮವಾದ ಬ್ರಹ್ಮಚಾರಿ ಎನ್ನುವ ರಾಮಾಯಣ ದರ್ಶನದ ಬಿಂಬವನ್ನು ಯಥಾರೂಪದಲ್ಲಿ, ಯಥಾಶಕ್ತಿಯಲ್ಲಿ ಕೃಷ್ಣಪ್ಪನವರು ‘ಹನುಮದ್ದರ್ಶನ’ದಲ್ಲಿ ಹಿಡಿದುಕೊಟ್ಟಿದ್ದಾರೆ. ಈಗ ‘ಹನುಮದ್ದರ್ಶನ’ದಲ್ಲಿ ಬರುವ ಜಿ. ಕೃಷ್ಣಪ್ಪನವರ ಸರಳ ಗದ್ಯ ನಿರೂಪಣೆಯ ಚಂದ ಮತ್ತು ಸ್ವಾರಸ್ಯವನ್ನು ಸವಿಯೋಣ.
ಪತಿ ಅನಾಚಾರಿ, ದುರಾಚಾರಿ, ಅತ್ಯಾಚಾರಿ ಎಂದು ಗೊತ್ತಿದ್ದರೂ ಅನೇಕ ಹೆಣ್ಣುಮಕ್ಕಳು ಅವನ ನಡವಳಿಕೆಯ ವಿಚಾರದಲ್ಲಿ ಚಕಾರವೆತ್ತದೆ, ಅಸಹನೆ ತೋರದೆ, ಪ್ರತಿಭಟಿಸದೆ, ಮನೆ ಹೊರಗಿನ ವಿಚಾರದಲ್ಲಿ ಕೈ ಹಾಕುವುದು ತರವಲ್ಲ ಎನ್ನುವ ಸಂಪ್ರದಾಯ ಜಡ ತಿಳುವಳಿಕೆಯಲ್ಲಿ ತೆಪ್ಪಗಿದ್ದು ಮುಂದೊಂದು ದಿನ ಅನಾಹುತ ಸಂಭವಕ್ಕೆ ಕಾರಣರಾಗಿಬಿಡುತ್ತಾರೆ. ಸೀತೆಯನ್ನು ಮೊದಲಿಗೆ ಚೆಲುವಿಗೆ ಒಲಿದು ಅಪಹರಿಸಿಕೊಂಡು ಬಂದು ಅಶೋಕವನದಲ್ಲಿಟ್ಟು ಕೆಲವು ದಿನಗಳಲ್ಲಿ ಸರಿಹೋಗುತ್ತಾಳೆ ಎಂದು ನಿರೀಕ್ಷಿಸಿದ್ದ ರಾವಣನಿಗೆ ಅವಳು ಆಹಾರ, ಸ್ನಾನ ತೊರೆದು ಸೌಂದರ್ಯ ಹಾಳುಗೆಡವಿಕೊಂಡು ವ್ರತದಲ್ಲಿ ತೊಡಗುವುದು ಆಘಾತವನ್ನುಂಟು ಮಾಡಿದಾಗ ಛಲಕ್ಕಾಗಿ ಅವಳನ್ನು ಮೋಹಿಸತೊಡಗುತ್ತಾನೆ. ಸೀತೆಯನ್ನು ಹೊತ್ತು ತಂದು, ಒಲಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡುತ್ತಿರುವ ಗಂಡನ ಬಗೆಗೆ ಮಂಡೋದರಿಯಲ್ಲಿ ಕೋಪ, ಬೇಸರ, ಅಸಹನೆ, ಅಸಮಾಧಾನಗಳು ಒಳಗೊಳಗೇ ಕುದಿಯತೊಡಗುತ್ತವೆ. ಅಪಹರಣ, ದಿಗ್ಬಂಧನ, ಕಾಮಪೀಡನೆಗೊಳಗಾಗಿರುವ ಇನ್ನೊಂದು ಹೆಣ್ಣಿನ ಒಡಲಾಳದ ಸಂಕಟವನ್ನು ಅರ್ಥಮಾಡಿಕೊಂಡು ಮರುಗುತ್ತಾಳೆ. ವಿನಾಶದ ದಾರಿಯಲ್ಲಿ ಅವಿವೇಕದ ಹೆಜ್ಜೆ ಇಡುತ್ತಿರುವ ಗಂಡನೊಂದಿಗೆ ಜಗಳ ಮಾಡಿದರೆ ಅವನು ಮತ್ತಷ್ಟು ಮೊಂಡನಾಗುತ್ತಾನೆ. ಪ್ರೀತಿ, ಅನುನಯದಲ್ಲೇ ಅವನ ವಿವೇಕವನ್ನು ಎಚ್ಚರಿಸಬೇಕೆಂದು ನಿರ್ಧರಿಸಿ ಸೂಕ್ತ ಸಮಯಕ್ಕಾಗಿ ಕಾಯುತ್ತಾಳೆ. ಅಂಥ ಸಮಯ ಒದಗಿಬಂದಾಗ ಗಂಡನ ಕಾಮರೋಷವನ್ನು ಶಮನಗೊಳಿಸುವಂತೆ ಮಂಡೋದರಿ ಆಡುವ ವಿವೇಕದ ಮಾತುಗಳು ಮೂಲದ ಎಲ್ಲ ಚೆಲುವನ್ನು ತುಂಬಿಕೊಂಡು ಕೃಷ್ಣಪ್ಪನವರ ಸರಳ ಗದ್ಯದಲ್ಲಿ ಮೂಡಿರುವುದು ಹೀಗೆ- “ರಾಜೇಂದ್ರ, ಬೇಡ ಬೇಡೀ ಹಠದ ಸಾಹಸ. ರುಚಿಗೆಂದು ಕೈಕೊಂಡಿದ್ದನ್ನು ಛಲದಿಂದ ಮುಂದುವರಿಸುವುದು ಸುಖವೇ? ಸರಸವೆ? ಸಚ್ಚರಿತವೆ? ಪತಿವ್ರತೆಯ ವ್ರತದ ಮಹಿಮೆಯಿಂದ ಸಂಯಮ ದೊರೆತರೆ ಬುದ್ಧಿವಂತರು ಅದನ್ನು ಸೋಲೆಂದು ಕರೆಯುತ್ತಾರೆಯೇ? ಮಂಗಳಕ್ಕೆ ತಲೆಬಾಗಿದರೆ ಅದು ಸೋಲೆ? ಆ ಗೆಲುವನ್ನು ಮೀರಿಸಿದ ಗೆಲುವು ಬೇರೆ ಇದೆಯೆ? ಇಂದ್ರನನ್ನು ಜಯಿಸಿದವನಿಗಿಂತ ನೂರು ಮಡಿ ವಿಕ್ರಮಿ ಇಂದ್ರಿಯವಿಜಯಿ ಅಲ್ಲವೆ? ಹುಸಿ ಪ್ರತಿಷ್ಠೆಯನ್ನು ಬಿಡು. ಸತ್ಯಕ್ಕೆ ಸೋಲಲು ಅದೇ ನಮಗೆ ಗೆಲುವು. ಧರ್ಮಕ್ಕೆ ಸೋಲಲು ಅದೇ ನಮ್ಮ ಗೆಲುವು. ಆ ಗೆಲುವೇ ನಮ್ಮ ಸಾಮ್ರಾಜ್ಯದ ಸಂಪತ್ತು”. ಸೀತೆಯನ್ನು ಗೆದ್ದೇ ತೀರುವೆನೆಂಬ ಹಠದಲ್ಲಿರುವ ರಾವಣನ ಮೇಲೆ ಈ ಮಾತುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತವೆಂದರೆ, ಅವನು ಮನದನ್ನೆಯ ಭಾವಭಾರಕ್ಕೆ ನಸು ಬಾಗುತ್ತಾನೆ. ಮನಸ್ಸು ಕರಗುತ್ತದೆ. ಕಾಲುಗಳನ್ನು ಹಿಡಿದು ತಲೆ ಮೇಲೆತ್ತಿದ್ದ ಮಂಡೋದರಿಯ ಮುಖದ ಮೇಲೆ ಅವನ ನೇತ್ರದ ಬಿಸುಗಂಬನಿ ಉದುರುತ್ತದೆ. ಈ ಪ್ರಸಂಗವನ್ನು ಸೂಕ್ಷ್ಮರೂಪದಲ್ಲಿದ್ದು ನೋಡುತ್ತಿದ್ದ ಆಂಜನೇಯನಿಗೆ ಲಂಕೇಶ್ವರನ ಬಗ್ಗೆ ಮೊದಲಿದ್ದ ಕೋಪದ ಕಾವು ಸ್ವಲ್ಪ ಆರುತ್ತದೆ. ಅವನ ಹೃದಯದಲ್ಲಿ ಕನಿಕರ ಮೂಡುತ್ತದೆ. ಇಂದ್ರಿಯ ದೌರ್ಬಲ್ಯದಿಂದ ತೇಜಸ್ಸಿಗೆ ಎಂಥ ಗತಿ ಬರುತ್ತದೆಂದು ಆಲೋಚಿಸುತ್ತಾನೆ.
ರಾಮಾಯಣ ಕಾಲದಲ್ಲಿ ಹೆಚ್ಚಾಗಿದ್ದ, ಕುವೆಂಪು ಅವರ ಮಲೆನಾಡಿನಲ್ಲಿ ಇನ್ನೂ ಉಳಿದಿದ್ದ ಎಷ್ಟೋ ಪಕ್ಷಿಗಳನ್ನು ಅವುಗಳ ಹೆಸರು, ಕೂಗು, ಹಾವಭಾವ, ಬೆಡಗು ಬಿನ್ನಾಣ, ವಿಲಾಸ ಹಾರಾಟಗಳೊಂದಿಗೆ ರಾಮಾಯಣ ದರ್ಶನದಲ್ಲಿ ಕವಿ ತಂದಿದ್ದಾರೆ. ದರ್ಶನಕ್ಕೆ ಮೊದಲೂ ನಂತರವೂ ಪ್ರಕಟವಾದ ಕವನ ಸಂಕಲನಗಳ ಅನೇಕ ಕವಿತೆಗಳಲ್ಲಿ ಪಕ್ಷಿಗಳು ಜೀವಂತಿಕೆಯಿಂದ ನಲಿದಾಡುತ್ತವೆ. ಕುವೆಂಪು ನಿಸರ್ಗ ವರ್ಣನೆ ಶುರು ಮಾಡಿದರು ಎಂದರೆ ಅಲ್ಲಿಗೆ ಎಲ್ಲಿಂದಲೋ ಪಕ್ಷಿಗಳು ಹಾರಿ ಬರುತ್ತವೆ. ಪಕ್ಷಿ ಸ್ವನ, ಸೌಂದರ್ಯ, ಹಾರುವ ವಿನ್ಯಾಸ ಬಣ್ಣಿಸುತ್ತಾ ಕವಿ ಮೈಮನ ಮರೆಯುತ್ತಾರೆ. ‘ವನಮಂ ಪೊಕ್ಕನಶೋಕಮಂ’ ಸಂಚಿಕೆಯಲ್ಲಿ “ಹನುಮಂತ ಸೀತೆಯಿರುವ ನೆಲೆಯನ್ನು ತಿಳಿದು ಅವಳಿದ್ದ ಪರ್ಣಕುಟಿಯ ಹತ್ತಿರದ ಎತ್ತರದ ಮರದ ನೆತ್ತಿಯಲ್ಲಿ ಹೊತ್ತು ಮೂಡುವ ಸಮಯಕ್ಕಾಗಿ ಕಾಯುತ್ತ ಕುಳಿತುಕೊಳ್ಳುತ್ತಾನೆ. ಕುಟೀರದ ಒಳಗಿಂದ ಬರುತ್ತಿದ್ದ ಅಬಲಾ ರೋದನಕ್ಕೆ ಬೆಚ್ಚುತ್ತಾನೆ. ಪೂಜ್ಯೆ ಪ್ರತ್ಯಕ್ಷಳಾದರೂ ಅವಳೇ ಸೀತೆ ಎಂದು ಹೇಗೆ ಗುರುತಿಸಲಿ? ಹೇಗೆ ಕಾಣಿಸಿಕೊಳ್ಳಲಿ? ಹೇಗೆ ಮಾತನಾಡಿಸಲಿ? ಎಂದು ಅನುಮಾನಿಸುತ್ತ, ಚಿಂತಿಸುತ್ತ ಇರಬೇಕಾದರೆ ಮಂಜು ಗಿರಿನೆತ್ತಿಯಿಂದ ಕಣಿವೆಗೆ ಇಳಿಯತೊಡಗುತ್ತದೆ. ಸೂರ್‍ಯೋದಯದ ಸೂಚನೆ ನೀಡುವಂತೆ ಉಷೆಯ ಮಂದಹಾಸ ತೋರುತ್ತದೆ. ಬೆಳಗಾಗುತ್ತಿರುವ ಸೂಚನೆ ಸಿಗುತ್ತಿದ್ದಂತೆ ಆ ವನ ವಾತಾವರಣ ಪಕ್ಷಿ ಕಲರವದಿಂದ ತುಂಬಿಹೋಗುತ್ತದೆ. ಮಡಿವಾಳ ಹಕ್ಕಿ ಸಿಳ್ಳು ಹಾಕಿ ನಿಶ್ಶಬ್ದತೆಯನ್ನು ಇರಿಯುತ್ತದೆ. ಗೋರಂಟಿ ಮರದಿಂದ ಪ್ರತ್ಯುತ್ತರದಂತೆ ಒಂದು ಹಕ್ಕಿ ಹಾಡುತ್ತದೆ. ಅದರ ಒಡನಾಡಿ ಮುತ್ತುಗದ ಮರವನ್ನೇರಿ ಕರೆಯುತ್ತದೆ. ಗೀಜಗನ ಹಕ್ಕಿ ದೂರದಿಂದ ಆಲಾಪನೆ ಮಾಡುತ್ತದೆ. ಬಿದಿರ ತುದಿಯಿಂದ, ನಂದಿಮರದಿಂದ, ತೆಂಗು ಕೌಂಗುಗಳ ಗರಿ ತುದಿಗಳಿಂದ ಪಕ್ಷಿಗಳಿಂಚರ ತುಂಬಿ ಹರಿಯುತ್ತದೆ. ಅಶೋಕವನಿಕಾಲಕ್ಷ್ಮಿ ಲಕ್ಷ ಪಲ್ಲವಿ ಉಲಿಯುವ ಪಕ್ಷಿಗಳ ಅಕ್ಷತೆಯನ್ನು ಎರಚಿದಳು. ಗಿಳಿ ಪಿಕಳಾರ ಕಾಮಳ್ಳಿಗಳು ಹಿಂಡು ಹಿಂಡಾಗಿ ಹಾಡುತ್ತ, ಗುಂಪು ಗುಂಪೆದ್ದು ಹಾರಾಡಿದವು”. ಕಾವ್ಯದಲ್ಲಿರುವ ಸ್ವಾರಸ್ಯಪೂರ್ಣವಾದ ಭಾಗವನ್ನು ಕೃಷ್ಣಪ್ಪನವರು ಅಷ್ಟೇ ಚಂದವಾಗಿ ಸರಳ ಗದ್ಯದಲ್ಲಿ ತಂದಿರುವ ರೀತಿ ಇದು.
ರಾವಣ ಸೀತೆಯನ್ನು ಅಪಹರಿಸಿ ಅಶೋಕವನದಲ್ಲಿಟ್ಟು ಅವಳ ಮನಸ್ಸನ್ನು ಒಲಿಸಿಕೊಳ್ಳಲು ನಾನಾ ತೆರನಾದ ಉಪಾಯಗಳನ್ನು ಪ್ರಯೋಗಿಸುತ್ತಾನೆ. ಅವುಗಳಲ್ಲಿ ಸೀತೆ ನಂಬಿಬಿಡುವಂಥ ಸುಳ್ಳುಗಳನ್ನು ಸತ್ಯದಂತೆ ನಾಜೂಕಾಗಿ ಹೇಳುವುದೂ ಒಂದು. ಒಂದು ದಿನ ಮುಂಬೆಳಗಿನಲ್ಲಿಯೇ ರಾವಣ ಸೀತೆಯಿರುವಲ್ಲಿಗೆ ಹೋಗಿ, ವ್ರತ ಉಪವಾಸಗಳಿಂದ ಅವಳು ಕೃಶವಾಗಿರುವುದಕ್ಕೆ ಉರಿದೆದ್ದು ಕೂಗಾಡಿ, ನಂತರ ಅತಿಯಾದ ವಿನಯದಿಂದ “ಬುದ್ಧಿವಂತಳಾದ ಸೀತೆಯೇ, ವಿವೇಕಕ್ಕೆ ಶರಣಾಗು. ನನ್ನ ಮಾತುಗಳನ್ನು ಕೇಳಿಸಿಕೋ. ದೇವತೆಗಳಿಗೂ ಅಸಾಧ್ಯವಾದ ಮಹಾಸಾಗರವನ್ನು ನಿನ್ನ ರಾಮ ಹೇಗೆ ತಾನೇ ದಾಟಿ ಬರುತ್ತಾನೆ? ಅವನು ಯಾರನ್ನೋ ಕೂಡಿ ಕಿಷ್ಕಿಂಧೆಯಲ್ಲಿ ಸುಖವಾಗಿದ್ದಾನೆ. ಈ ಸಮಾಚಾರ ಗೂಢಾಚಾರರ ಮೂಲಕ ನನ್ನ ಕಿವಿಗೆ ಬಿದ್ದಿದೆ. ನಿನ್ನನ್ನು ಮರೆತಿರುವ ಆ ಕೃತಘ್ನನನ್ನು, ನಿಷ್ಪ್ರಯೋಜಕನನ್ನು ನೆನೆನೆನೆದು ಹೂವಿನಂಥ ನಿನ್ನ ಜೀವನವನ್ನು ವೃಥಾ ವ್ಯರ್ಥಗೊಳಿಸಿಕೊಳ್ಳುವೆಯೇಕೆ? ಅವನು ಹರಧನಸ್ಸನ್ನೆತ್ತಿ ಮುರಿದ ಮಾತ್ರದಿಂದ ನಿನ್ನ ಪತಿಯಾಗಿದ್ದರೆ, ನಾನು ಅದಕ್ಕಿಂತ ನೂರು ಮಡಿ ಕಾರ್ಯವನ್ನು ನಿನಗೆ ಮಾಡಿ ತೋರಿಸುತ್ತೇನೆ" ಎಂದು ಹೇಳಿದಾಗ, ಅಶೋಕವೃಕ್ಷದ ಮೇಲೆ ಕುಳಿತು ಈ ಹಸಿಸುಳ್ಳಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಹನುಮಂತನಿಗೆ ರಾವಣನನ್ನು ಕೊಲೆ ಮಾಡಿಬಿಡುವಷ್ಟು ಕೋಪ ಕುದಿಯುತ್ತದೆ. ಆದರೆ ಸೀತೆ ಬಿಕ್ಕಿಬಿಕ್ಕಿ ಅಳುತ್ತ, ಅದೇ ಆಶೋಕವೃಕ್ಷದ ಬುಡಕ್ಕೆ ಕುಸಿದುಬಿದ್ದು, ತ್ರಿಜಟೆಯ ಸಹಾಯದಿಂದ ಅಲ್ಲಿಯೇ ಮುದ್ದೆಯಂತೆ ಮುದುರಿ ಕುಳಿತುಕೊಳ್ಳುತ್ತಾಳೆ. ಮತ್ತೆ ರಾವಣ ಸೀತೆಯನ್ನು ತನ್ನತ್ತ ಸೆಳೆಯಲು ಮಾತಿನ ಜಾಲವನ್ನು ಬೀಸತೊಡಗಿದಾಗ ಭೀತಿಯನ್ನು ಪಕ್ಕಕ್ಕೆ ಸರಿಸಿ, ದುಃಖವನ್ನು ಮೆಟ್ಟಿ, ಕೋಪದಿಂದ ಬುಸುಗುಡುತ್ತ, ರಾವಣನಿಗೆ ಹೇಳಬೇಕಾದ ಮಾತುಗಳನ್ನು ತ್ರಿಜಟೆಯನ್ನುದ್ದೇಶಿಸಿ ಹೇಳುತ್ತಾಳೆ: “ಹೇಳು ತ್ರಿಜಟೆ, ಕತ್ತೆಯು ಕತ್ತೆಯ ತತ್ವವನ್ನು ಕತ್ತೆಗೆ ಉಪದೇಶಿಸಬೇಕಲ್ಲದೆ, ರಘು ಕುಲೋತ್ತಮನ ಸತಿಯ ಮುಂದೆ ಅದನ್ನು ಬಡಬಡಿಸಿದರೆ ಪ್ರಯೋಜನವೇನು? ಈ ಅಲ್ಪಾಯುವು ಪ್ರತ್ಯುತ್ತರವನ್ನು ಕೊಡುವುದಕ್ಕೂ ಅರ್ಹನಲ್ಲ! ಮರುಕ, ಕರುಣೆ, ವಿನಯ, ಸೌಜನ್ಯಗಳನ್ನು ನಟಿಸುವ ಈ ನಟನ ನಾಯಿವರ್ತನೆಗೆ ಧಿಕ್ಕಾರ! ಸುಳ್ಳು ಹೇಳುವ ನಾಲಗೆಗೆ ಧಿಕ್ಕಾರ! ಇವನ ಹೊಲಸು ಸಿರಿಗೆ ಲಕ್ಷ ಲಕ್ಷ ಧಿಕ್ಕಾರ! ಈತನಿಗೆ ಹೇಸಿ ಆ ದಿಕ್ಕಿಗೆ ಎಂಜಲು ಎಸೆಯೆ, ಆ ಉಗುಳು ಅಪವಿತ್ರವಾಗುತ್ತದೆ! ಎಲ್ಲಿರಲಿ, ಎಂತಿರಲಿ ಶ್ರೀರಾಮಚಂದ್ರನೇ ನನಗೆ ಪತಿ! ಸತ್ತು ಆತನೊಡನೆ ಸೇರುತ್ತೇನೆ. ಇಂತಹವರಿರುವ ಜಗದಲ್ಲಿ ಬದುಕು ಅಸಹ್ಯಕರವೆಂಬುದು ನಿಜ. ಭೀಮವಿಕ್ರಮ ರಾಮನ ಮಹಿಮೆ ಈ ನಾಯಿಗೇನು ಗೊತ್ತು, ನನಗೆ ಗೊತ್ತು”. ಈ ಸಂದರ್ಭವೇ ವಿಶೇಷವಾದದ್ದಾಗಿದೆ. ಕಾಮಪಿಶಾಚಿಗಳ ಕೈಯಲ್ಲಿ ಆಕಸ್ಮಿಕವಾಗಿ ಸಿಲುಕಿಕೊಂಡ ಹೆಣ್ಣುಮಕ್ಕಳು ನಾನಾ ತೆರನಾದ ಕಷ್ಟ ಕ್ಲೇಶ ಕ್ರೌರ್ಯ ಹಿಂಸಾಚಾರಗಳಿಗೆ ಗುರಿಯಾದರೂ ಇಂದಲ್ಲ ನಾಳೆ ಒಳಿತಾಗುತ್ತದೆಂಬ ಭರವಸೆಯನ್ನು ತುಂಬಿಕೊಂಡು, ಮನೋಸ್ಥೈರ್ಯವನ್ನು ಇರಿಸಿಕೊಂಡು, ಸವಾಲುಗಳನ್ನು ದಿಟ್ಟತನದಿಂದ ಎದುರುಗೊಳ್ಳುವ ಬಗೆಯನ್ನು ಇಲ್ಲಿ ಚಿತ್ರಿಸಲಾಗಿದೆ. ಬಲಿಷ್ಠ, ಮಾಯಾವಿ, ಕಾಮುಕ, ಕೆಟ್ಟ ಹಠದವನು ಎಲ್ಲವೂ ಆಗಿರುವ ರಾವಣ ಎದುರಿಗೆ ನಿಂತಿರುವಾಗಲೂ ಒಳಗೆ ಉಕ್ಕುತ್ತಿರುವ ಸಾತ್ವಿಕ ರೋಷವನ್ನು ಹತ್ತಿಕ್ಕದೆ, ಅಂಜಿಕೆ ಅಳುಕುಗಳಿಲ್ಲದೆ ಅವನ ಮುಖದ ಮೇಲೆ ಓತಪ್ರೋತವಾಗಿ ಚೆಲ್ಲುವ ಮಾತುಗಳಿಗೆ ರಾವಣನೇ ಅಲ್ಲಾಡಿ ಹೋಗುವಂಥ ಶಕ್ತಿಯಿದೆ. ಕಾಮುಕರನ್ನು, ದುಷ್ಟರನ್ನು ಹಿಮ್ಮೆಟ್ಟಿಸಲು ಬೇಕಾದ ಶಕ್ತ್ಯಾಯುಧದಂತೆ ಅವು ಪ್ರಯೋಗಿಸಲ್ಪಟ್ಟಿವೆ. ಇವತ್ತಿಗೂ ಬೇಕಾಗುವ ಅಂಥ ಮಾತುಗಳನ್ನು ಸರಳ ಗದ್ಯದಲ್ಲಿ ಓದಿಕೊಳ್ಳುವ ಹೆಣ್ಣುಮಕ್ಕಳಿಗೆ ಹೊಸದೊಂದು ಚೈತನ್ಯವನ್ನೋ ಆಪತ್ಕಾಲಕ್ಕೆ ಬೇಕಾದ ನಿಧಿಯನ್ನೋ ಕೃಷ್ಣಪ್ಪನವರು ಒದಗಿಸಿಕೊಟ್ಟಂತೆ ಆಗಿದೆ.
ಇಂದ್ರಜಿತುವಿನ ಐಂದ್ರಜಾಲದ ತಂತ್ರವನ್ನು ಭೇದಿಸಲಾಗದೆ ಲಕ್ಷ್ಮಣನು ಅಪಮೃತ್ಯುವಿಗೆ ತುತ್ತಾದಾಗ ವಾನರ ಮಹಾವೈದ್ಯ ಸುಷೇಣ “ಇದು ಅಭೌತಶಕ್ತಿಯ ಆಘಾತವಾದ್ದರಿಂದ ಮಂತ್ರಕ್ಕೆ ಔಷಧದ ಸಹಾಯ ಬೇಕಾಗುತ್ತದೆ. ಆ ಔಷಧಿ ಮೃತಸಂಜೀವಿನಿ ಲತೆಯ ಬೇರುಗಳಲ್ಲಿದೆ. ಅದನ್ನು ತರಲು ಹಿಮವತ್ ಪರ್ವತ, ಕೈಲಾಸ ಪರ್ವತ, ವೃಷಭ ಪರ್ವತಗಳನ್ನು ದಾಟಿ ಓಷಧಿ ಪರ್ವತಕ್ಕೆ ಹೋಗಬೇಕು. ಅದನ್ನು ತುರ್ತಾಗಿ ತರುವ ಶಕ್ತರು ಯಾರು?” ಎಂದು ಸುತ್ತ ನೋಡಲು, ಹನುಮಂತನು ಸಮುದ್ರದಂತೆ ಉಬ್ಬಿ, ಗಿರಿಯಂತೆ ಬೆಳೆದು, ಗಗನದಂತೆ ವಿಸ್ತಾರಗೊಂಡು ‘ನಾನು ತರುತ್ತೇನೆ’ ಎಂದು ಘೋಷಿಸಿ ಹೊರಡುತ್ತಾನೆ. ಪಯಣದ ನಡುವೆ ಅನ್ನಮಯ, ಪ್ರಾಣಮಯ ಭೂಮಿಕೆಗಳನ್ನು ತುಂಬಿ, ಅಂತರ್ಮುಖಿಯಾಗಿ, ಅದಕ್ಕೂ ಅತೀವವಾದ ಮನೋಮಯ ದರ್ಶನಕ್ಕೊಳಗಾಗಿ ರಸವಶನಾಗುತ್ತಾನೆ. ಆಗ ಅವನ ಅಹಂಭಾವದ ಬುದ್ಧಿ ಉದ್ದೀಪನೆಗೊಂಡು, ನಿಶ್ಚಿತ ಕಾರ್ಯಕ್ಕೆ ತೊಡಕಾಗುವಂಥ ಭಯಂಕರ ಅನುಭವ ಎದುರಾಯಿತು. “ಅವನ ಎದುರು ರಾಮಾಯಣದ ಮಹಿಮೆಯನ್ನು ಮಂಕಾಗಿಸುವ ಜೀವನೋದ್ದೇಶಗಳು, ಜೀವನ ಚರಿತ್ರೆಗಳು, ಸಾಹಸಗಳ ಆತ್ಮಗಳು ಮತ್ತು ಸಿದ್ಧಿ ಸಾಧನೆಗಳು ರಾರಾಜಿಸಿದವು! ಅವುಗಳ ಎದುರು ತಾನು ಮತ್ತು ತನ್ನ ಸಾಹಸೋದ್ಯೋಗವು ಕಿರಿದಾಗಿಯೂ ಕೀಳಾಗಿಯೂ ಅನಿಲಜನಿಗೆ ತೋರಿತು. ಅವನ ಮನಸ್ಸು ಬೇಸರದಿಂದ ವೈರಾಗಿಯಂತಾಯಿತು. ‘ಭೂಮವಾದುದು ಇರಲು ಅಲ್ಪ ಸಾಹಸಕ್ಕೆ ಆತ್ಮವನ್ನು ನಿವೇದಿಸುವ ನನ್ನ ಈ ಮೂರ್ಖತೆಗೆ ಧಿಕ್ಕಾರ! ಅಲ್ಪವನ್ನು ತೊರೆಯುತ್ತೇನೆ, ಭೂಮ ಸಾಧನೆಗಳಲ್ಲಿ ಒಂದು ಉತ್ತಮವಾದುದನ್ನು ಕೈಗೊಳ್ಳುತ್ತೇನೆ’ ಎಂದುಕೊಂಡ ಅವನ ಆತ್ಮಸಿದ್ಧಿಯ ಲೋಭವು ಹೀಗೆ ಪ್ರಲೋಭನಕ್ಕೆ ಒಳಗಾಯಿತು. ಆಗ ಆತ್ಮಬುದ್ಧಿಯ ವಿವೇಕವು ಜನ್ಮಧರ್ಮದ ಕರ್ತವ್ಯ ಕರ್ಮವನ್ನು ಎಚ್ಚರಿಸಿತು. ‘ಈ ಇಹಲೋಕ ಲೀಲೆಗೆ ಒಪ್ಪಿ ಇಲ್ಲಿಗೆ ಬಂದಮೇಲೆ, ಅದು ಕೊನೆಗೊಳ್ಳುವ ಮೊದಲೆ ಇಲ್ಲಿಂದ ಅನ್ಯಲೋಕಕ್ಕೆ ಹೋಗಲು ನಿತ್ಯಬದ್ಧನು ಆಶಿಸುವನೆ? ಲೋಕವು ಯಾವುದಾದರೆ ಏನು? ಸಚ್ಚಿದಾನಂದದ ಈ ಲೀಲಾ ವಿನೋದದಲ್ಲಿ ಯಾವುದೂ ಹೆಚ್ಚು ಕಡಿಮೆಯಲ್ಲ!’ ಎಂಬ ಆತ್ಮವಾಣಿಯ ಬೋಧೆಗೆ ಒಳಗಾಗಿ ರಾಮದೂತನ ಪ್ರಜ್ಞೆ ಎಚ್ಚೆತ್ತುಕೊಂಡಿತು. ತನ್ನ ಈ ಮುನ್ನಿನ ಅಜ್ಞಾನಕ್ಕೆ ನಾಚಿದನು. ತಾನು ಹೊತ್ತು ನಿರ್ವಹಿಸಬೇಕಾದ ಕೆಲಸದತ್ತ ಮುನ್ನಡೆದನು”. ಲಕ್ಷ್ಮಣನನ್ನು ಬದುಕಿಸುವ ಸಲುವಾಗಿ ಮೃತಸಂಜೀವಿನಿ ತರಲು ಮನೋಮಯ ಮಾರ್ಗದಲ್ಲಿ ಸಂಚಾರ ಕೈಗೊಂಡ ಹನುಮಂತನಿಗೆ ಎದುರಾದ ವಿಘ್ನಗಳು, ಅವುಗಳನ್ನು ಹನುಮಂತ ಪರಿಹರಿಸಿಕೊಂಡು ಗುರಿಯತ್ತ ಮುನ್ನುಗ್ಗಿದ ಬಗೆ ಇವುಗಳನ್ನೆಲ್ಲ ನಮ್ಮ ಕಲ್ಪನೆಗೆ ಎಟುಕುವಂತೆ ಕೃಷ್ಣಪ್ಪನವರ ತಿಳಿಗನ್ನಡ ಹಿಡಿದಿಟ್ಟಿದೆ. ಅದನ್ನು ಓದಿ ಹನುಮಂತನ ದರ್ಶನ ರಸವಶತೆಯಲ್ಲಿ ನಾವೂ ಕೆಲಕಾಲ ಮುಳುಗಿ ಏಳುವ ಬೆರಗನ್ನು ಅನುಭವಿಸುತ್ತೇವೆ. ಆದರೆ ಭಾವಕ್ಕೆ ತಕ್ಕ ಮತ್ತು ಸಂದರ್ಭೋಚಿತ ಎನಿಸುವಂಥ ಭಾಷೆಯನ್ನು ಪ್ರಯೋಗ ಮಾಡಿರುವ ರಾಮಾಯಣ ದರ್ಶನದಲ್ಲಿ ಅದನ್ನು ನಿಲುಕಿಸಿಕೊಳ್ಳುವುದು ಪಂಡಿತರಿಗೂ ಕಷ್ಟ ಎನಿಸುವಾಗ ಪಾಮರರ ಪಾಡೇನು? ವೇದೋಪನಿಷತ್ತುಗಳನ್ನು ಆಳವಾಗಿ ಅಭ್ಯಾಸ ಮಾಡಿ ಅವುಗಳ ಸಾರ ಸತ್ವವನ್ನು ಮನನ ಮಾಡಿಕೊಂಡು ಅಧಿಕಾರಯುತವಾಗಿ ವ್ಯಾಖ್ಯಾನ ಮಾಡಬಲ್ಲ ಶಕ್ತಿಯನ್ನು ಸಂಪಾದನೆ ಮಾಡಿಕೊಂಡ ಮತ್ತು ಸಾಂಖ್ಯ ಯೋಗ ನ್ಯಾಯ ವೈಶೇಷಿಕ ಮೀಮಾಂಸಾ ವೇದಾಂತ ಎನ್ನುವ ಷಡ್ದರ್ಶನಗಳನ್ನು ವಿಸ್ತಾರವಾಗಿ ಗ್ರಹಿಸುವ ಕುವೆಂಪು ಅಂಥವುಗಳನ್ನು ಅನುಭವವೇದ್ಯವಾಗಿಸಿಕೊಂಡು ಬರವಣಿಗೆಯಲ್ಲಿ, ಅದೂ ಕಾವ್ಯರೂಪದಲ್ಲಿ ಬಣ್ಣಿಸುವಾಗ ಅದನ್ನು ನೀರುನೀರಾಗಿಸುವುದು ಸಾಧ್ಯವೇ ಇಲ್ಲ. ಹನುಮಂತನ ದರ್ಶನಾನುಭೂತಿಯನ್ನು, ಅದರ ಔನ್ನತ್ಯವನ್ನು ಕಾವ್ಯದಲ್ಲಿ ಹಿಡಿದಿಡುವ ಭಾಷೆ ಅದು ಹಾಗೇ ಇರಬೇಕು. ಆ ದರ್ಶನದ ಅನುಭೂತಿ ಸಾಧ್ಯವಾಗದಿದ್ದರೂ ಅನುಭವವನ್ನಾದರೂ ನಾವು ಪಡೆದುಕೊಳ್ಳಲು ಕೃಷ್ಣಪ್ಪನವರಂಥ ರಸಸೇತುವೆಗಳು ಬೇಕು.
‘ರಾಮ-ರಾವಣರ ಮಹೋಗ್ರ ಸಂಗ್ರಾಮ’ ಭಾಗದಲ್ಲಿ ರಾವಣ ಸೇನಾನಿಗಳನ್ನೂ ಕಲಿಗಳನ್ನೂ ಸಮರ ಪ್ರವೀಣರನ್ನೂ ಉದ್ದೇಶಿಸಿ ‘ಲಂಕಾದೇವಿಯ ಆಜ್ಞೆಯಂತೆ ಇಂದು ತಾನೊಬ್ಬನೇ ಅಸಹಾಯಶೂರನಾಗಿ ವೈರಿಯನ್ನು ಎದುರಿಸುವುದಾಗಿಯೂ ಯಾರೂ ಶಸ್ತ್ರಾಸ್ತ್ರಗಳೊಂದಿಗೆ ಯುದ್ಧಭೂಮಿಗಿಳಿಯದೆ ಸುರಕ್ಷಿತ ದೂರದಲ್ಲಿ ಸಾಕ್ಷಿಗಳಾಗಿ ಇದ್ದು ನೋಡಬೇಕೆಂದೂ ಇಂಥ ಯುದ್ಧ ಹಿಂದಿಲ್ಲ, ಮುಂದೆಯೂ ಇರುವುದಿಲ್ಲವೆಂದೂ’ ಘೋಷಿಸಿ, ಯುದ್ಧಕ್ಕಿಳಿಯುವ ಮುನ್ನ ಉತ್ಸಾಹಿತನಾಗಿ ಕೆಲವು ಮಾತುಗಳನ್ನು ಆಡುತ್ತಾನೆ. ಅವು ಸ್ವಪ್ರಶಂಸೆಯಿಂದಲೂ, ಶತ್ರುವಿನ ಶಕ್ತಿಯನ್ನು ನಿರ್ಲಕ್ಷಿಸಿದಂತೆಯೂ, ಅತಿಯಾದ ವಿಶ್ವಾಸದಿಂದಲೂ ದುರಭಿಮಾನದಿಂದಲೂ ಕೂಡಿದ್ದು ಸ್ವತಃ ಕೇಡನ್ನು ತಂದುಕೊಳ್ಳಲು ಸಿದ್ಧನಾಗಿರುವಂತೆ ತೋರಿಸುತ್ತವೆ. ಅಜೇಯ ಎನಿಸುವಂಥ ಶಕ್ತಿ ಅವನೊಳಗೆ ತುಂಬಿಕೊಳ್ಳಲು ಕಾರಣವಾದ ದೈವವನ್ನೇ ಧಿಕ್ಕರಿಸಿ ಮಾತನಾಡುತ್ತ, ಅನೂಹ್ಯ ದುರಂತಕ್ಕೆ ರಾವಣ ಒಳಗಾಗಲಿದ್ದಾನೆ ಎನ್ನುವುದನ್ನು ಆ ಸಂದರ್ಭವೇ ಸ್ಪಷ್ಟವಾಗಿ ಸೂಚಿಸುತ್ತದೆ. ಕೃಷ್ಣಪ್ಪನವರ ಸರಳ ಗದ್ಯವು ಮೂಲದ ಬನಿಯನ್ನು ಹೀಗೆ ಕಂಡರಿಸಿದೆ: “ನನ್ನ ಜೀವನಕ್ಕಾಗಿ ಚಿಂತಿಸಬೇಡಿ. ವಿಧಿಯ ವಜ್ರಹಸ್ತದಲ್ಲಿರುವ ಉತ್ತಮ ಲೋಹದ ಕಂಬಿಗಳಿಂದ ಮಾಡಲಾದ ಪಂಜರದಲ್ಲಿರುವ ಪಕ್ಷಿಯಾದ ನಾನು ಯಾವಾಗಲೂ ಸುರಕ್ಷಿತ, ಸುಕ್ಷೇಮಿ. ನನ್ನ ತಪಸ್ಸಿಗೆ ಮೆಚ್ಚಿದ ಬ್ರಹ್ಮನು ವರಬಲಗಳಿಂದ ನನ್ನನ್ನು ಅಜೇಯನನ್ನಾಗಿಸಿದ್ದಾನೆ. ದಿವ್ಯ ರಥ, ದಿವ್ಯ ಅಶ್ವ, ದಿವ್ಯ ಧನುಸ್ಸು, ದಿವ್ಯ ಖಡ್ಗ, ದಿವ್ಯ ಕವಚ, ಮಂತ್ರಾಸ್ತ್ರ ಶಸ್ತ್ರಗಳಿಂದ ನನ್ನನ್ನು ಯಾರೂ ಸೋಲಿಸಲಾರರು. ರುದ್ರನೇ ತೋಳು ತಟ್ಟಿ ಬಂದರೂ ಜಯಿಸಲಾರನು!’ ಜೊತೆಗೆ ಕಾಳಿಗೆ ಅರ್ಪಿಸಲು ಒಂದು ಉರುಳಲು ಇನ್ನೊಂದು ಎಂಬಂತೆ ಹತ್ತು ತಲೆಗಳಿವೆ. ಯುದ್ಧಕ್ಕೆ ಲೆಕ್ಕದಲ್ಲಿ ನಾನೊಬ್ಬನೆ ಹೋದರೂ, ಶಕ್ತಿಯಿಂದ ಅಸಂಖ್ಯನು!”.
ರಾವಣವಧೆಯ ನಂತರ ಸೀತೆಗೆ ಮಂಗಳಸ್ನಾನ ಮಾಡಿಸಿ, ದಿವ್ಯವಾದ ಅಂಗಲೇಪನಗಳಿಂದ ಸುಮಗಂಧದಿಂದ ಶೃಂಗರಿಸಿ ಶ್ರೀರಾಮಸನ್ನಿಧಿಗೆ ಕರೆತರುವಂತೆ ಹನುಮಂತ ವಿಭೀಷಣನಲ್ಲಿ ಬಿನ್ನಹ ಮಾಡಿಕೊಳ್ಳುತ್ತಾನೆ. ಅದರಂತೆ ರಾಮಸನ್ನಿಧಿಗೆ ಬಂದ ಸೀತೆಯನ್ನು ವಾನರಸೈನ್ಯ ನೋಡಿ ಕಣ್ಣುಗಳಲ್ಲಿ ನೀರು ತುಂಬಿಸಿಕೊಳ್ಳುತ್ತದೆ. ಬಾಯ್ಬಿಟ್ಟು ಹರ್ಷ ವ್ಯಕ್ತಪಡಿಸಿ ಹಿಗ್ಗುತ್ತದೆ. ಆದರೆ ಎಲ್ಲರಿಗಿಂತ ಮಿಗಿಲಾದ ಸಂತೋಷವನ್ನು ಪ್ರಕಟಿಸಬೇಕಾಗಿದ್ದ ರಾಮನ ರಾಗರಹಿತ ಶವಭಾವವನ್ನು ಕಂಡು ಹನುಮಂತ ಜಾಂಬವ ಲಕ್ಷ್ಮಣ ಮುಂತಾದವರು ಭೀತಿಗೊಳಗಾಗುತ್ತಾರೆ. ಬಾಗಿ ನಮಸ್ಕರಿಸಿದ ಸೀತೆ ವಿನಯರಹಿತ ಪತಿಯ ತಿರಸ್ಕಾರದಿಂದ ಮುದುಡಿಹೋಗುತ್ತಾಳೆ. ಕಣ್ಣೀರು ಕಡಲಾಗಿ ಹರಿಯುತ್ತದೆ. ಆಗ ರಾಮ ನಿಟ್ಟುಸಿರುಬಿಟ್ಟು ಸೀತೆಯನ್ನು ದುರುದುರನೆ ನೋಡುತ್ತ ನುಡಿಖಡ್ಗವನ್ನು ಝಳಪಿಸುತ್ತ ಆಡುವ ಮಾತುಗಳು ಸೀತೆಗೆ ಮಾತ್ರವಲ್ಲ, ಅಲ್ಲಿ ನೆರೆದ ಜನತೆಗೂ ರಾಮಾಯಣ ದರ್ಶನದ ಓದುಗ ಕೇಳುಗರಿಗೂ ಅನಿರೀಕ್ಷಿತ ಆಘಾತವನ್ನು ಉಂಟುಮಾಡುವಂತಿರುವುದನ್ನು ಕೃಷ್ಣಪ್ಪನವರ ಸರಳ ಗದ್ಯ ಹೀಗೆ ಚಿತ್ರಿಸಿದೆ: “ಚತುರೆಯೆ, ನಿನ್ನ ಕಪಟ ನಟನೆಯನ್ನು ನಿಲ್ಲಿಸು. ಕುಲತೇಜವನ್ನು ಮತ್ತು ನನ್ನ ಪುರುಷ ಸಾಹಸವನ್ನು ಉಳಿಸಿಕೊಳ್ಳಲು ದಶಗ್ರೀವನನ್ನು ಕೊಂದೆನು, ನನ್ನ ಪ್ರತಿಜ್ಞೆ ನೆರವೇರಿತು, ನಿನ್ನನ್ನು ಪಡೆಯಲು ಅಲ್ಲ. ದಶಾನನನು ಇಂದ್ರಿಯಗಳ ಹತೋಟಿ ಇಲ್ಲದವನು. ನೀನು ವಿಶೇಷ ಅರಿವುಳ್ಳವಳು. ನಾನು ಹೇಳಿದ ವಾಕ್ಯದ ಅರ್ಥವನ್ನು ತಿಳಿದುಕೊಂಡರೆ ತಿಳಿದುಕೊ. ಇಲ್ಲದಿದ್ದರೆ ತೊಲಗು, ನಡೆ. ಮೂರ್ಖಳೆ ನೀನು ಎಲ್ಲಿಗಾದರೂ ಹೋಗು. ನನ್ನ ಕಣ್ಮುಂದೆ ನಿಲ್ಲಬೇಡ”. ಪತಿಯ ಮಾತಿನ ಶೂಲದ ಒರಟು ತಿವಿತದಿಂದ ದಿಗ್ಭ್ರಮೆಗೊಳಗಾದರೂ ಕೂಡಲೇ ಚೇತರಿಸಿಕೊಂಡ ಸೀತೆ ಮುಂದಿನ ದಾರಿಯನ್ನು ನಿರ್ಧರಿಸಿ, ಪ್ರಿಯನ ಮುಖವನ್ನು ನೇರವಾಗಿ ನೋಡುತ್ತ, ಕೈ ಮುಗಿದು ಗದ್ಗದ ಧ್ವನಿಯಲ್ಲಿ ಕೊಡುವ ಉತ್ತರ ಮೂಲಕಾವ್ಯದಲ್ಲಿ ‘ರಾಕ್ಷಸಂ ಮುಟ್ಟಿದನೆ? ನಾನಲ್ತು, ದೈವಮಪರಾಧಿ’ ಎಂದು ಪ್ರಸಿದ್ಧವಾಗಿದೆ. ಸೀತೆಯಂತೆ ಆಧುನಿಕ ಸಂದರ್ಭದಲ್ಲೂ ಹೆಣ್ಣುಮಕ್ಕಳು ಅವರು ಹೆಣ್ಣು ಎನ್ನುವ ಕಾರಣದಿಂದಾಗಿಯೇ ಗಂಡನೆದುರು, ಕುಟುಂಬದೆದುರು, ಪೊಲೀಸರೆದುರು, ಪಂಚಾಯ್ತಿದಾರರೆದುರು, ನ್ಯಾಯವಾದಿ ನ್ಯಾಯಾಧೀಶರೆದುರು ಅಪರಾಧಿ ಸ್ಥಾನದಲ್ಲಿ ನಿಂತು ನಿರಪರಾಧಿ ಎಂದು ಸಾಬೀತುಪಡಿಸುವ, ಸಮರ್ಥಿಸಿಕೊಳ್ಳುವ ಸಂಕಟಕ್ಕೆ, ಸತ್ವಪರೀಕ್ಷೆಗೆ ಗುರಿಯಾಗುತ್ತಲೇ ಇದ್ದಾರೆ. ಅಂಥ ದಾರುಣ ಸನ್ನಿವೇಶದಲ್ಲೂ ಅವಳ ಆತ್ಮಸ್ಥೈರ್ಯ ಮತ್ತು ದಿಟ್ಟತನಗಳೇ ಅವಳನ್ನು ಕಾಪಾಡುವ ಅಸ್ತ್ರಗಳಾಗುತ್ತವೆ. ಸೀತೆ ಆ ಮರ್ಮಭೇದಕ ಸಂದರ್ಭವನ್ನು ಅರ್ಥಮಾಡಿಕೊಂಡು ಎದುರಿಸಲು ಸಿದ್ಧಳಾದಾಗ ಅವಳ ಪ್ರತಿಕ್ರಿಯೆಯಾಗಿ ಹೊರಹೊಮ್ಮುವ ಮಾತುಗಳು ಆ ರೀತಿಯ ಸಂಕಟದಲ್ಲಿ ಸಿಲುಕಿಕೊಂಡ ಎಲ್ಲ ಹೆಣ್ಣುಮಕ್ಕಳಿಗೆ ಆದರ್ಶವಾಗುವಂತಿವೆ. ಎಲ್ಲ ನೋವುಗಳನ್ನು ತಾಳಿಕೊಂಡೇ, ಮಾತಾಡಬೇಕಾದಾಗಲೂ ಮೌನಗೌರಿಯಾಗಿದ್ದುಕೊಂಡೇ ಪುರುಷ ದಬ್ಬಾಳಿಕೆ, ದೌರ್ಜನ್ಯಗಳಿಗೆ ತುತ್ತಾಗುತ್ತ ನಿತ್ಯ ನಿರಂತರ ಶೋಷಿತೆಯಾಗುತ್ತಿರುವ ಮಹಿಳೆಯರನ್ನು ಎಚ್ಚರಿಸುವ, ಸೀತೆಯ ಒಳಗಿನ ತುಡಿತದ ಸ್ಫೋಟಕ ಮಾತುಗಳು ಹೀಗಿವೆ: “ಉತ್ತಮ ಕುಲದಲ್ಲಿ ಹುಟ್ಟಿದ ನೀನು ಅನಾಗರಿಕರು ಅನಾಗರಿಕ ಸ್ತ್ರೀಯರನ್ನು ಬಯ್ಯುವ ರೀತಿಯಲ್ಲಿ ತರವಲ್ಲದ, ಕಿವಿಯಿರಿಯುವ ಮಾತುಗಳನ್ನೇಕೆ ಆಡಿದೆ? ರಾಕ್ಷಸನು ನ್ನನ್ನು ಮುಟ್ಟಿದನೆ? ದೈವವು ಅಪರಾಧಿ, ನಾನಲ್ಲ. ಮೈಯನ್ನಲ್ಲದೆ ಅವನು ಮನವನ್ನು ಮುಟ್ಟಿದನೆ? ನಿನ್ನ ಹರಿತವಾದ ಬಾಣದಂತೆಯೇ ನನ್ನನ್ನು ಮುಟ್ಟಲಾರದೆಯೂ ಅವನು ಸುಟ್ಟು ಸೀದುಹೋದ. ಬಾಲ್ಯದಲ್ಲಿ ನೀನು ನನ್ನ ಕೈ ಹಿಡಿದಾಗಿನಿಂದಲೂ ನಾವು ಬಾಳಿನಲ್ಲಿ ಒಂದಾಗಿ ಬೆಸೆದುಕೊಂಡು ಅಗಲದೆ ಒಟ್ಟಾಗಿ ಬೆಳೆದವು. ಆ ಬಾಳಿನ ನನ್ನ ಚಾರಿತ್ರ್ಯ, ಭಕ್ತಿ, ಪ್ರೇಮನಿಷ್ಠೆ, ಶೀಲವನ್ನು ಇಂದು ನಾನು ನಿನಗೆ ತೋರಿಸದಿದ್ದರೆ ನಾನೆಂದಿಗೂ ಕೆಟ್ಟಂತೆ. ಈ ಸಂಶಯ ನಿವಾರಣೆಗೆ ವೃಥಾ ವಾದವೇಕೆ?” ಈ ರೀತಿ ರಾಮನ ಪುರುಷಾಹಂಕಾರಕ್ಕೆ ಸೀತೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದು ಎಷ್ಟು ಪರಿಣಾಮಕಾರಿಯಾಯಿತು ಎಂದರೆ, ಸೀತೆ ತನ್ನ ಶೀಲಶುದ್ಧತೆಯನ್ನು ಸಾಬೀತುಪಡಿಸಲು ಧಗಧಗಿಸುವ ಉಜ್ವಲ ಚಿತಾಗ್ನಿಯನ್ನು ಹೊಕ್ಕಾಗ ರಾಮನೂ ಅಗ್ನಿಮಧ್ಯಕ್ಕೆ ಪ್ರವೇಶಿಸಿ, ಪಾವನ ಅಗ್ನಿಯಲ್ಲಿ ಸ್ನಾನ ಮಾಡಿದ ಸೀತೆಯನ್ನು ಕಿಚ್ಚಿನ ಉರಿಯಿಂದ ಕಾಯುವ ರೀತಿಯಲ್ಲಿ ನಿಧಾನವಾಗಿ ಹೊರಗೆ ಕರೆದುಕೊಂಡು ಬರುತ್ತಾನೆ.
ಬೇಂದ್ರೆ ಮತ್ತು ಕುವೆಂಪು ಆಧುನಿಕ ಕನ್ನಡ ಕಾವ್ಯಾರಾಮದ ಎರಡು ಕಣ್ಣುಗಳಾದರೆ, ಅವರಿಬ್ಬರನ್ನೂ ಅತ್ಯಂತ ಪ್ರೀತಿ, ಗೌರವ, ಭಕ್ತಿ, ಶ್ರದ್ಧೆಗಳಿಂದ ಓದಿ ಸಂತೋಷಪಟ್ಟವರು ಜಿ. ಕೃಷ್ಣಪ್ಪ. ಕನ್ನಡದ ಇಬ್ಬರು ದೊಡ್ಡ ಕವಿಗಳ ಕಾವ್ಯವನ್ನು ಕುರಿತ ಬಂದ ಬರಹಗಳನ್ನು ಓದಿದಾಗ ಕೃಷ್ಣಪ್ಪನವರನ್ನು ಅತೃಪ್ತಿ ಕಾಡಿತು. ಬರೆದವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಅರ್ಥೈಸಿಕೊಂಡ ವಿಧಾನ ಸರಿಯಾಗಿಲ್ಲ, ಬರವಣಿಗೆಯಲ್ಲೇ ಅಪಕ್ವತೆ ಇದೆ, ನಾನು ಬರೆದದ್ದೇ ಸರಿ ಎನ್ನುವ ಅಹಂಕಾರವಿದೆ ಅನ್ನಿಸಿತು. ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳಲು, ಮೊದಲು ಬೇಂದ್ರೆ ಕಾವ್ಯದ ಆಳಕ್ಕೆ ಇಳಿದು ಅಧ್ಯಯನ ಮಾಡಿ ಆನಂದಿಸಿದರು. ಈವರೆಗೆ ಬೇಂದ್ರೆ ಮತ್ತವರ ಕಾವ್ಯವನ್ನು ಅರ್ಥಮಾಡಿಕೊಂಡಿರುವುದು ಅಲ್ಪ, ಅರ್ಥಮಾಡಿಕೊಳ್ಳಬೇಕಾಗಿರುವುದು ಅಗಾಧ ಅಂತ ಖಚಿತವಾದಾಗ ಬೇಂದ್ರೆ ಕಾವ್ಯ ಕುರಿತ ಮುಂದಿನ ಅಧ್ಯಯನಗಳಿಗೆ ದಾರಿದೀಪವಾಗುವಂಥ ಕೃತಿಗಳನ್ನು ಒಂದರ ಹಿಂದೆ ಒಂದರಂತೆ ತಂದರು. ’ಬೇಂದ್ರೆ ಕಾವ್ಯದಲ್ಲಿ ಸ್ತ್ರೀ’ ಎನ್ನುವ ವಿಷಯದಲ್ಲಿ ಪಿಎಚ್.ಡಿ. ಅಧ್ಯಯನ ನಡೆಸಿ ಡಾಕ್ಟರೇಟನ್ನೇ ಪಡೆದರು. ‘ಬೇಂದ್ರೆ ಕಾವ್ಯಕೂಟ’ ಪ್ರಾರಂಭಿಸಿ ತರುಣ ಪೀಳಿಗೆಗೆ ಬೇಂದ್ರೆ ಕಾವ್ಯದ ರುಚಿ ತೋರಿಸಿದರು. ಬೇಂದ್ರೆಯವರ ಬಗೆಗೆ ಎಣೆಯಿಲ್ಲದ ಅಭಿಮಾನ ತೋರಿದ ಕೃಷ್ಣಪ್ಪನವರನ್ನು ಜನ ಪ್ರೀತಿಯಿಂದ ‘ಬೇಂದ್ರೆ ಕೃಷ್ಣಪ್ಪ’ ಎಂದೇ ಕರೆದರು.
ಈಗ ಕೃಷ್ಣಪ್ಪನವರ ಆಸಕ್ತಿ ಕುವೆಂಪು ಕಾವ್ಯಕ್ಕೆ ಸರಿಯಾದ ನ್ಯಾಯ ದೊರಕಿಸುವ ಕಡೆಗೆ ಹೊರಳಿದೆ. ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಸೌಂದರ್ಯ ಮತ್ತು ಮಹತ್ವವನ್ನು ವಿವೇಚಿಸುವ ಬಿಡಿಬಿಡಿ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇಲ್ಲಿ ಮಹಾಕಾವ್ಯದ ಸ್ವಾರಸ್ಯ ಮತ್ತು ಮೌಲ್ಯಗಳನ್ನು ಪಾಮರರು ತಿಳಿದು ಆನಂದಿಸಬೇಕೆನ್ನುವ ದೃಷ್ಟಿಯಿಂದ ಸರಳ ಗದ್ಯದಲ್ಲಿ ‘ಹನುಮದ್ದರ್ಶನ’ ಮಾಡಿಸಿದ್ದಾರೆ. ಇದು ಹನುಮನ ಮೂಲಕ ರಾಮನನ್ನು, ರಾಮಾಯಣವನ್ನು ದರ್ಶಿಸುವ ಪ್ರಯತ್ನ. ಹನುಮಗನ್ನಡಿಯಲ್ಲಿ ಕುವೆಂಪು ರಾಮಾಯಣ ದರ್ಶನ ಮಾಡಿ ಪುಳಕಿತರಾದವರಿಗೆ ಇದೇ ರೀತಿ ಕಾವ್ಯದ ಸಮಗ್ರ ದರ್ಶನವನ್ನೇ ಮಾಡಬೇಕೆನ್ನುವ ಆಸೆ ಸಹಜವಾಗಿ ಹುಟ್ಟುತ್ತದೆ. ಅದಕ್ಕೆ ಬೇಕಾದ ಸಾಮರ್ಥ್ಯ ಕೃಷ್ಣಪ್ಪನವರಿಗೆ ಸಿದ್ಧಿಸಿದೆ ಎನ್ನುವುದಕ್ಕೆ ಈ ‘ಕುವೆಂಪು ಹನುಮದ್ದರ್ಶನ’ವೇ ನಿದರ್ಶನ. ಹಾಗೆಯೇ, ಬೇಂದ್ರೆ ಕಾವ್ಯವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗುವ ‘ಬೇಂದ್ರೆ ಕಾವ್ಯ: ಪದ ನಿರುಕ್ತ’ ತಂದಂತೆ ‘ಕುವೆಂಪು ಕಾವ್ಯ: ಪದನಿರುಕ್ತ’ ತರುವ ಸಾಹಸಕ್ಕೂ ಅವರು ಸಂಕಲ್ಪ ಮಾಡಬೇಕೆಂದು ಆಶಿಸುತ್ತೇನೆ. ಚಂದ್ರನಾಥ ಆಚಾರ್ಯರ ಮುಖಪುಟ ಕಲೆ ಮತ್ತು ಒಳಪುಟದ ಚಿತ್ರಗಳು ಕೃತಿಯ ಸೌಂದರ್ಯ ಮತ್ತು ಮೌಲ್ಯವನ್ನು ಹೆಚ್ಚಿಸಲು ಕಾರಣವಾಗಿವೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ಬೈರಮಂಗಲ ರಾಮೇಗೌಡ