Article

ಹರಳುಗಟ್ಟುವ ದೃಷ್ಟಿಯಿಂದ ಒಂದು ಘನವಾದ ಕಾದಂಬರಿ

ಪ್ರಿಯ ಶ್ರೀ ರಾಘವೇಂದ್ರ ಪಾಟೀಲರೇ,

ನೀವು ಕಾದಂಬರಿ ಕಳುಹಿಸಿ ಹತ್ತಿರ ಹತ್ತಿರ ತಿಂಗಳಾಗಿದೆ. ಬಂದ ಕೂಡಲೇ ಕೈಗೆತ್ತಿಕೊಂಡು ಸಾವಧಾನವಾಗಿ ಒಂದು ವಾರದಲ್ಲಿ ಓದಿ ಮುಗಿಸಿದೆ. ಆ ಗುಂಗಿನಲ್ಲೇ ನಿಮಗೆ ಬರೆಯ ಬೇಕೆಂದುಕೊಂಡಿದ್ದೆ. ಆದರೆ ಅನಾರೋಗ್ಯವಾಗಿ 8-10ದಿನ ಹಾಸಿಗೆ ಹಿಡಿದು ಮಲಗಿ ಬಿಟ್ಟಿದ್ದೆ. ಈಗ ಪರವಾಗಿಲ್ಲ. ಆದ್ದರಿಂದ ತಡವಾಗಿ ಬರೆಯುತ್ತಿದ್ದೇನೆ. ಕ್ಷಮಿಸಿ. ನಿಮ್ಮ ಬಹುತೇಕ ಕಥೆ, ಕಾದಂಬರಿಯಂತೆ ಸ್ತ್ರೀಕೇಂದ್ರಿತ ಅಂತಃಕರಣವನ್ನು ಮೂಲದನಿಯಾಗುಳ್ಳ `ಗೈರಸಮಜೂತಿ’ ನನಗೆ ತುಂಬ ಇಷ್ಟವಾಯಿತು, ಆಪ್ತವಾಯಿತು ಕೂಡಾ! ಒಂದು ಘನವಾದ ಕಾದಂಬರಿ. ಎರಡು ತಲೆಮಾರುಗಳ ಒಂದು ಕುಟುಂಬದ ಕಥನವನ್ನು ರಾಷ್ಟ್ರ ಕಥನದೊಂದಿಗೆ ಸಮೀಕರಿಸುತ್ತಲೇ ತಾತ್ವಿಕವಾಗಿಯೂ ಹರಳುಗಟ್ಟುವ ದೃಷ್ಟಿಯಿಂದ ಒಂದು ಘನವಾದ ಕಾದಂಬರಿ.

19-20ನೇ ಶತಮಾನದ ಕಾಲಘಟ್ಟದ ಒಂದು ಸಂಪ್ರದಾಯಸ್ಥ ಕೌಟುಂಬಿಕ ನೆಲೆಯಲ್ಲೇ ಸತ್ಯಬೋಧಾಚಾರ್ಯರು, ರಾಧಾ ಕಾಕು ಮತ್ತು ವಚ್ಚಕ್ಕರು ಬೆಳೆದು, ಮಾಗಿ ಸಮಾಜಕ್ಕೆ `ಬೆಳಕಾ’ಗುವ ಪರಿ, ಪ್ರಕ್ರಿಯೆಗಳಲ್ಲಿ ಕಾದಂಬರಿಯ ನೈತಿಕ ವಿಜಯವಿದೆ. 

ಗೈರ ಸಮಜೂತಿ ಎನ್ನುವುದು ಇಲ್ಲಿ ಹಲವರ, ಹಲವು ನೆಲೆಗಳಲ್ಲಿ ಮತ್ತೆ ಮತ್ತೆ ಪ್ರಕಟಗೊಳ್ಳುತ್ತಾ, ಢಾಳವಾಗುತ್ತ ನಮ್ಮ ಸಮಾಜದ ಹಿಂದಿನ – ಇಂದಿನ ಎಲ್ಲ ಪ್ರಮಾದಗಳಿಗೆ, ಬಿಕ್ಕಟ್ಟುಗಳಿಗೆ, ಭವರೋಗಗಳಿಗೆ ರೂಪಕವಾಗುತ್ತ, Allegaryಯಾಗುತ್ತ ನಮ್ಮನ್ನು ಕಾಡಲಾರಂಭಿಸುತ್ತದೆ. ಕೊನೆಗೆ ಇದರಿಂದ ನಾವಿಂದು - ಪ್ರಸ್ತುತ ಸನ್ನಿವೇಶದಲ್ಲಂತೂ - ಬಿಡುಗಡೆ ಪಡೆಯಬೇಕೆಂಬ ಅರಿವನ್ನು ಓದುಗರಲ್ಲಿ ಮೂಡಿಸುವುದು ನಿಮ್ಮ ಕಾದಂಬರಿಯ ಎರಡನೆಯ ಯಶಸ್ಸೆಂದು ಭಾವಿಸಿದ್ದೇನೆ. ಹೀಗಾಗಿ ಇದು ಪ್ರಾಚೀನ ಜ್ಞಾನ ವರ್ತಮಾನಕ್ಕೆ ಹಿಡಿದ ಕನ್ನಡಿಯೂ ಹೌದು. ವರ್ತಮಾನ ಪ್ರಾಚೀನ ಜ್ಞಾನದ ಬೆಳಕಿಗೆ ತೆರೆದುಕೊಳ್ಳಬೇಕಿದೆ ಎಂಬ ಪಲಕುಗಳೂ ಇವೆ – ಕುರುಡು ನಂಬಿಕೆಯಿಂದಲ್ಲ, ಆತ್ಮಜ್ಞಾನದಿಂದ.

ಗುರು ಚರಿತ್ರೆಯಂತೂ `ಸಮಜೂತಿ’ಯತ್ತ ದಿಗ್ದರ್ಶನ ಮಾಡಿಸುವ ಅದ್ಭುತ ಕಥನ – ಕಾದಂಬರಿಯ ಅತ್ಯುತ್ಕøಷ್ಟ ಭಾಗವಿದು. ನಿಮ್ಮ ಭಾಷೆಯಂತೂ ಬುದ್ಧಿ-ಹೃದಯಗಳೆರಡನ್ನೂ ಸಮ್ಮೋಹಿಸುವಷ್ಟು ಕಾವ್ಯಮಯವಾಗಿಯೂ ವಿಚಾರಪ್ಲುತವಾಗಿಯೂ ಸೃಜನಶೀಲತೆಯ ಗರಿಷ್ಠವನ್ನು ಮೆರೆದಿದೆ. ಕೆಲವು ಭಾಗಗಳಂತೂ ತುಂಬ ಕಾವ್ಯಮಯವಾಗಿವೆ. ಉದಾ : ಅಚ್ಯುತನ ಶ್ರಾದ್ಧ ಮುಗಿಸಿಕೊಂಡು ವಚ್ಚಕ್ಕ ಮತ್ತು ಅಂಬಕ್ಕ ಐನಾಪುರಕ್ಕೆ ವಾಪಸಾಗುವ ಪಯಣದ ಹಾದಿಯಲ್ಲಿ ಎದುರಾಗುವ ಘಟಪ್ರಭಾನದಿ, ಹೊಲಗಳು – ತೋಟಗಳು, ಸೂರ್ಯಪಾನದ ಹೊಲಗಳು ಇತ್ಯಾದಿ ಪ್ರಕೃತಿಯ ವರ್ಣನೆ, ಅವುಗಳನ್ನು ವಚ್ಚಕ್ಕ ವ್ಯಾಖ್ಯಾನಿಸುವ ಪರಿ ಮನೋಜ್ಞವಾಗಿದೆ. ಆ ನದಿ, ಆ ಬೆಳೆ, ಆ ಬೆಟ್ಟ, ಆ ಬಯಲು ಅವುಗಳ ಮಧ್ಯೆ ಎರಡು ಹೆಂಗರಳುಗಳ ಮನೋಮಿಡಿತಗಳು, ವಿಚಾರಗಳು ಇವೆಲ್ಲವೂ ಪ್ರತಿಮೆ-ಪ್ರತೀಕಗಳಾಗಿ, ರೂಪಕಗಳಾಗಿ ಬದುಕಿನ ಗೂಢ-ನಿಗೂಢಗಳಿಗೆ ತಾಕಿಸುತ್ತ, ಅರ್ಥಗಳನ್ನು ಹೊಳೆಯಿಸುತ್ತ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವಂತೆ ನಮ್ಮೆದೆಯಲ್ಲಿ ರಸೋದ್ದೀಪನ ಉಂಟು ಮಾಡುತ್ತದೆ.

ಕಾದಂಬರಿಯು ಅಲ್ಲಿನ ಪರಿಸರ ಮತ್ತು ಪರಿಭಾಷೆಗಳಿಂದಾಗಿ ನನಗೆ ತುಂಬ ಆಪ್ತವಾಯಿತು. ಕೆಲವು ಆಚರಣೆಗಳು, ಆಡುವ ಮಾತುಗಳು ನಾನು 8-10 ವರ್ಷದವನಿದ್ದಾಗಿನ ನಮ್ಮ ಮನೆಯ ಪರಿಸರವನ್ನೂ ಭಾಷೆಯನ್ನೂ ನೆನಪಿಗೆ ತಂದು ಸ್ವಲ್ಪ ಕಾಲ ನಾನು ಬಾಲ್ಯದೊಳಗೆ ಕಳೆದುಹೋದೆ. ಇನ್ನು ನೀವು ಸಾಧಿಸಿರುವ ಆಯುರ್ವೇದ ಜ್ಞಾನ, ಅವುಗಳು ವಚ್ಚಕ್ಕನ ಮೂಲಕ ಪ್ರಕಟಗೊಂಡಿರುವ, ಕೂಷ್ಮಾಂಡ ಲೇಹ್ಯ ತಯಾರಿಕೆ ಇವೆಲ್ಲವೂ ಆಪ್ತವಾಗಲು ಇನ್ನೊಂದು ಕಾರಣ, ನನ್ನ ತಂದೆಯವರೂ ಆಯುರ್ವೇದ ವೈದ್ಯರಾಗಿದ್ದು. ಅವರು ಮನೆಯಲ್ಲೇ ಲೇಹ್ಯ, ತೈಲ, ಅರಿಷ್ಠ, ಕಾಢಾಗಳನ್ನು ತಯಾರಿಸುತ್ತಿದ್ದರು. ನನ್ನ ತೀರ್ಥರೂಪರ ಆದಿನದ ಈ ಚಟುವಟಿಕೆಗಳೂ ನೆನಪಾಗಿ ಈ `ಸಮಜೂತಿ’ ನಮ್ಮದೇ ಎನ್ನಿಸುವಷ್ಟು ಆಪ್ತವಾಗಿಬಿಟ್ಟಿತು.

ಇಂಥದೊಂದು ಅಭಿಜಾತ ಕೃತಿಯನ್ನು (ಕ್ಲಾಸಿಕ್) ಕೊಟ್ಟದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು, ಅಭಿವಂದನೆಗಳೂ ಕೂಡ.

ಕೃತಿಯ ಕುರಿತು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಗೈರ ಸಮಜೂತಿ

ಜಿ.ಎನ್. ರಂಗನಾಥ ರಾವ್

Comments