Article

ಹತ್ತು ಪುಸ್ತಕಗಳ ನಡುವಿದ್ದರೂ ಕೈಬೀಸಿ ಕರೆಯುವಷ್ಟು ಆಕರ್ಷಕ ಪುಸ್ತಕ- ರಂಗ ಕೈರಳಿ

’ರಂಗ ಕೈರಳಿ’ – ಹತ್ತು ಪುಸ್ತಕಗಳ ನಡುವಿದ್ದರೂ ಕೈಬೀಸಿ ಕರೆಯುವಷ್ಟು ಆಕರ್ಷಕ ಪುಸ್ತಕ. ಪುಸ್ತಕದ ಹೂರಣದ ಬಗ್ಗೆ ಮಾತ್ರವಲ್ಲ, ಇದರ ಕಣಕದ ಬಗ್ಗೆಯೂ ಮಾತನಾಡಲೇಬೇಕು. ಪುಸ್ತಕದ ವಿನ್ಯಾಸ, ಪ್ರತಿ ಅಧ್ಯಾಯದ ಪ್ರಾರಂಭದಲ್ಲಿರುವ ಮುದ್ದಾದ ರೇಖಾಚಿತ್ರಗಳು, ಮನಸ್ಸೆಳೆಯುವ ಫೋಟೋಗಳು, ಕಣ್ಣುಗಳಿಗೆ ತಂಪೆನ್ನಿಸುವ ಅಕ್ಷರ ವಿನ್ಯಾಸ ಪುಸ್ತಕವನ್ನು ಓದುವುದಕ್ಕೂ ಮೊದಲೇ ಇಷ್ಟವಾಗಿಸುತ್ತಿದೆ.

ರಂಗಭೂಮಿಯ ಬಗೆಗೆ ಹುಚ್ಚಿರುವವರೆಲ್ಲರೂ ಓದಬೇಕಾದ ಪುಸ್ತಕ ಇದು. ಇಲ್ಲಿ ನಾನು ಬೇಕೆಂದೇ ’ಹುಚ್ಚು’ ಎನ್ನುವ ಪದವನ್ನು ಬಳಸುತ್ತಿದ್ದೇನೆ. ಪ್ರತಿ ಭಾನುವಾರ ರೈಲಿನಲ್ಲಿ ಹೋಗುತ್ತಾ ಒಂದೂವರೆ ಗಂಟೆ, ಬರುತ್ತಾ ಒಂದೂವರೆ ಗಂಟೆ ವ್ಯಯಿಸಿ ಎರಡು, ಎರಡೂವರೆ ಗಂಟೆಗಳ ನಾಟಕ ನೋಡುವುದೆಂದರೆ ಅದು ಪ್ರೀತಿಯ ಮುಂದಿನ ಹಂತ, ಹುಚ್ಚು ಎಂದೇ ಹೇಳಬೇಕು! ಕಿರಣ್ ಭಟ್ ಹೊನ್ನಾವರ ಅವರು ಕೇರಳದಲ್ಲಿ ನೋಡಿದ ನಾಟಕಗಳ ಬಗ್ಗೆ ಇಲ್ಲಿ ಬರೆದಿದ್ದಾರೆ. ಸ್ವತಃ ರಂಗಕರ್ಮಿಯೂ ಆಗಿರುವ ಅವರು ತಾವು ನೋಡಿದ ನಾಟಕಗಳನ್ನಷ್ಟೇ ಅಲ್ಲ, ರಂಗ ವಿನ್ಯಾಸ, ರಂಗ ಸ್ಥಳ, ರಂಗ ಪ್ರಕಾರ, ರಂಗಭೂಮಿಗೆ ಸಮುದಾಯ ಮತ್ತು ಸಮುದಾಯಕ್ಕೆ ರಂಗಭೂಮಿಯ ಕೊಡುಕೊಳ್ಳುವಿಕೆಗಳನ್ನು, ನಾಟಕ ನೋಡುವಾಗಿನ ಪಯಣದ ಅನುಭವಗಳನ್ನು, ಆ ಪಯಣದ ಸಹಯಾತ್ರಿಕರನ್ನೂ ನಮ್ಮೆದಿರು ನಿಲ್ಲಿಸುತ್ತಾರೆ. ಪುಸ್ತಕಕ್ಕೆ ರಂಗಕರ್ಮಿ ಶ್ರೀಪಾದ್ ಭಟ್ ಓದಿಗೆ ಮತ್ತು ಅರ್ಥೈಸಿಕೊಳ್ಳುವಿಕೆಗೆ ಪೂರಕವಾದ ಮುನ್ನುಡಿಯನ್ನು ಬರೆದಿದ್ದಾರೆ. ರಂಗಭೂಮಿಯ ಬಗ್ಗೆ ಬರೆಯುತ್ತಾ ಅವರು ’ಇಲ್ಲಿ ’ನನ್ನ’ ಬೆರಳಿನ ಗಾಯಗಳ ಕುರಿತು ಮಾತನಾಡಿಕೊಳ್ಳುವ ಅಂದುಕೊಂಡರೂ ಅದು ’ಏಕಲವ್ಯ’ನ ಬೆರಳಿನ ಗಾಯದ ಕತೆಯಾಗಿ ಮಾರ್ಪಡುತ್ತದೆ’ ಎಂದು ಬರೆದ ಮಾತು ರಂಗಭೂಮಿಯ ಅಪಾರ ಸಾಧ್ಯತೆಗೆ ಸಾಕ್ಷಿ.

ರಾಷ್ಟ್ರೀಯ ಮಟ್ಟದ ರಂಗೋತ್ಸವಗಳಲ್ಲಿ ಕೇರಳದ ನಾಟಕಗಳೆಂದರೆ, ಅಲ್ಲಿನ ಪಪೆಟ್ ಶೋ ಎಂದರೆ ನನಗೆ ಹಬ್ಬ. ಅವರ ನಾಟಕದಷ್ಟೇ ಮುಖ್ಯವಾದದ್ದು ರಂಗಭೂಮಿಯನ್ನು ಅವರು ಬಳಸಿಕೊಳ್ಳುವ ರೀತಿ. ಇಲ್ಲಿ ಕಿರಣ್ ಭಟ್ಟರು ವಿಶೇಷವಾಗಿ ಕೇರಳದ ರಂಗಭೂಮಿಯ ಬಗ್ಗೆಯೇ ಬರೆಯುತ್ತಾರೆ, ಅಲ್ಲಿರುವ ಬಾಕ್ಸ್ ಮಾದರಿ ರಂಗ ಸ್ಥಳದಿಂದ ಹಿಡಿದು, ಥೆಯ್ಯಂ, ITFOK, ಚವಿಟ್ಟು ನಾಡಕಂ, ವೈಶಾಲಿ, ಹೆಮ್ಮಿಂಗ್ ವೆ, ನಾಗಮಂಡಲದ ಹಾವಿನಾಕಾರದ ರಂಗ ಸಜ್ಜಿಕೆ, ಕಥಕ್ಕಳಿ, ಕಲಾಮಂಡಲಂ, ದಿನಕ್ಕೊಂದು ನಾಟಕ ಎಲ್ಲದರ ಬಗ್ಗೆ ಬರೆಯುವಾಗ ಅದಮ್ಯವಾದ ಬೆರಗಿನ ಜೊತೆಜೊತೆಯಲ್ಲಿಯೇ ಇನ್ನಿಲ್ಲದ ಹೊಟ್ಟೆಕಿಚ್ಚು ಸಹ ಆಯಿತು. ’ರಂಗಯಾತ್ರೆ’ ಗೆಂದೇ ಹೊರಟು ಕೇರಳದ ಉದ್ದಗಲಕ್ಕೂ ಓಡಾಡಬೇಕು ಅನ್ನಿಸುವಷ್ಟು ಅಸೂಯೆ!

ಕೇರಳದ ನೆಲದ ಮೂಲಗುಣದಲ್ಲಿಯೇ ಬೆರೆತಂತಿರುವ ಸಾಮುದಾಯಿಕತೆ ಅಲ್ಲಿನ ರಂಗಭೂಮಿಯನ್ನೂ ಎಷ್ಟು ಫಲವತ್ತಾಗಿಸಿದೆ! ಅಲ್ಲಿನ ಸಂಗೀತ ನಾಟಕ ಅಕಾಡೆಮಿಯ ಯೋಜನೆಗಳ ಬಗ್ಗೆ ಓದಿದಾಗಲಂತೂ ಎಲ್ಲಾ ರಾಜ್ಯಗಳೂ ಅಲ್ಲಿಗೆ ತಮ್ಮ ನಿಯೋಗವನ್ನು ಯಾಕೆ ಕಳಿಸಬಾರದು ಅನ್ನಿಸಿತು. ಅಲ್ಲಿನ ನಾಟಕಗಳ ಭವ್ಯತೆ ಮತ್ತು ಕಸುಬುದಾರಿಕೆಗಳನ್ನು ಕಿರಣ ಅವರ ಚಿತ್ರಗಳು ಸಮರ್ಥವಾಗಿ ನಮ್ಮ ಮುಂದಿಡುತ್ತವೆ. ಮುಸ್ಲಿಂ ಕೊಚ್ಚುಣ್ಣಿಗೆ ಕಟ್ಟಿದ ದೇವಸ್ಥಾನ, ಪದ್ಮಶ್ರೀ ಪುರಸ್ಕಾರ ಪಡೆದ ಆನೆ, ಕಸದ ರಕ್ಕಸನ ಕಥೆ, 50 ಲಕ್ಷ ಪ್ರೊಡಕ್ಷನ್ ವೆಚ್ಛದ ’ಮ್ಯಾಕ್ ಬೆತ್’, ಹತ್ತು ದಿನಕ್ಕೆ ಸುಮಾರು ಐವತ್ತು ನಾಟಕಗಳನ್ನು ಆಯೋಜಿಸುವ ನಾಟಕದ ಹಬ್ಬಗಳು....ಈ ಪುಸ್ತಕದಲ್ಲಿ ಏನುಂಟು ಎನಿಲ್ಲ. ಓದಿ ತಿಳಿದುಕೊಳ್ಳಲು ಮಾತ್ರವಲ್ಲ, ನಮ್ಮ ರೆಫರೆನ್ಸ್ ಗಾಗಿಯೂ ನಮ್ಮ ಬಳಿ ಇರಬೇಕಾದ ಪುಸ್ತಕ ಇದು.

ಪುಸ್ತಕದಲ್ಲಿ ನಾಟಕದ ’ಮಾರ್ಗ’ಗಳ ಬಗ್ಗೆ ಮಾತನಾಡುವಾಗ ಲೇಖಕರು ’ದೇಸಿ’ಯತೆಯನ್ನು ಮರೆಯುವುದಿಲ್ಲ, ನಾಟಕದ ಜೊತೆಜೊತೆಯಲ್ಲಿಯೇ ಮಾನವೀಯ ಸಂಬಂಧಗಳನ್ನು ಅವರು ಬೆಸೆಯುತ್ತಾ ಹೋಗುವುದರಿಂದಲೇ ನಾಟಕ ಒಂದೇ ಕಾಲಕ್ಕೆ ವಿಚಾರ ಮತ್ತು ಮನಸ್ಸು ಎರಡನ್ನೂ ತಾಕುತ್ತದೆ. ’ಬಹುರೂಪಿ. ಅತ್ಯಂತ ಪ್ರೀತಿಯಿಂದ ಈ ಪುಸ್ತಕವನ್ನು ತಂದಿದ್ದಾರೆ ಎನ್ನುವುದು ಪುಸ್ತಕ ನೋಡಿದ ಕೂಡಲೇ ಅರಿವಾಗಿಬಿಡುತ್ತದೆ.

ರಂಗಪ್ರೀತಿಯಿರುವವರು ತಮ್ಮ ಬಳಿ ಇಟ್ಟುಕೊಳ್ಳಲೇ ಬೇಕಾದ ಪುಸ್ತಕ ಇದು. ಒಂದು ನಾಟಕ ನೋಡಿ ಮೂರು ತಿಂಗಳಾಗುತ್ತಾ ಬಂತು ಎನ್ನುವ ಸಂಕಟವನ್ನು ತೀರಿಸುತ್ತಲೇ, ಹೆಚ್ಚು ಮಾಡಿದ ಪುಸ್ತಕ ಇದು.

ಪುಸ್ತಕದ ಕುರಿತಾದ ಮಾಹಿತಿಗಾಗಿ ಬುಕ್ ಬ್ರಹ್ಮಗೆ ಭೇಟಿ ನೀಡಿ- https://www.bookbrahma.com/book/ranga-kairali

ಸಂಧ್ಯಾರಾಣಿ