Article

ಹವ್ಯಕರ ಬದುಕಿನ ಪ್ರಪಂಚ ತೆರೆದಿಡುವ ‘ಮೃಗಶಿರ’

ಇತ್ತೀಚೆಗಿನ ಓದೆಲ್ಲ ನಾವು ಬದುಕುತ್ತಿರುವ ಈ ಕಾಲದ ವಿಚಿತ್ರ ತಳಮಳಗಳನ್ನೂ, ಸ್ಥಿತ್ಯಂತರ ಗಳನ್ನೂ ವಿವರಿಸುತ್ತ ವಾಸ್ತವದ ಚಿತ್ರಣಗಳನ್ನೇ ಮತ್ತಷ್ಟು ದಟ್ಟವಾಗಿ ಹೇಳುತ್ತ, ಕಾಡುತ್ತ, ನಮ್ಮನ್ನೂ ಒಂದುರೀತಿಯ ತುದಿಬೆರಳಿನ ಮೇಲೆ ನಿಲ್ಲಿಸುವ ಬರಹಗಳೇ ಹೆಚ್ಚಾಗಿವೆ. ಬಹುಶಃ ನಾಡಿನ ಓದುಗರು ಇನ್ನೂ ಕಾರಂತರು , ಭೈರಪ್ಪನವರು, ತ.ರಾ.ಸು, ಕುವೆಂಪು,ಅವರ ಕಾದಂಬರಿಗಳ ಲೋಕದಲ್ಲೇ ಮುಳುಗಿದ್ದಾರೆಂದರೂ ತಪ್ಪಿಲ್ಲ. ವರ್ಷ ವರ್ಷವೂ ಮುದ್ರಣಗೊಳ್ಳುತ್ತಿರುವ ಪುಸ್ತಕಗಳ ಮರು ಓದು ಶ್ಲಾಘನೀಯ ಕೂಡ. ಆದರೆ ನಮ್ಮ ಕಾಲದ ಅತ್ಯುತ್ತಮ ಪುಸ್ತಕಗಳನ್ನ ಓದುಗರ ಚಿಂತನೆಗೆ ಚರ್ಚೆಗೆ ನಾವು ಎತ್ತಿಕೊಳ್ಳದೇ ಹೋದರೆ ಅದು ನಮ್ಮ ಓದಿಗೆ ನಾವೇ ಮಾಡಿಕೊಳ್ಳುವ ಅನ್ಯಾಯ.
ಒಂದು ಒಳ್ಳೆಯ ಪುಸ್ತಕ ಚರ್ಚೆಗೆ ಒದಗದೇ ಹಾಗೇ ಉಳಿದುಬಿಡುವುದು ಇನ್ನಷ್ಟು ಅತ್ಯುತ್ತಮವಾದುದರ ನಿರೀಕ್ಷೆಯನ್ನು ಕೊಲ್ಲುತ್ತದೆ. ಬಹುಶಃ ಹೊಸ ಬರಹಗಾರರು ಇಂತಹ ಗೊಂದಲಗಳಲ್ಲಿ ಸಿಲುಕಿಕೊಂಡರೆ ಅವರಲ್ಲಿಯ ಬರಹಗಾರ ಕಳೆದುಹೋಗಬಹುದು‌.‌ಆದರೆ ಶ್ರೀಯುತ ಶ್ರೀಧರ್ ಬಳಗಾರ ರಂತ. ಅದ್ಭುತ ಸಾಹಿತಿಗಳು ಯಾವುದೇ ಒತ್ತಡಗಳಿಗೆ ಒಳಗಾಗದೇ ಎಷ್ಟೆಲ್ಲ ಒಳ್ಳೆಯದನ್ನು ಬರೆಯುತ್ತಲೇ ಇದ್ದಾರೆ. ನಮ್ಮ‌ನಡುವೆ ನಮ್ಮದೇ ಚರಿತ್ರೆಯ ಪುಟಗಳ ಕತೆಯನ್ನು ಕಾದಂಬರಿಯನ್ನು ಪುಸ್ತಕರೂಪದಲ್ಲಿ ಓದುವ ಖುಷಿಯೇ ಅದಮ್ಯ.

ಮೃಗಶಿರ ನಮ್ಮ ಹವ್ಯಕರ ಅದೂ ಉತ್ತರಕನ್ನಡದ ಹವ್ಯಕರ ಬದುಕಿಗೆ ತೀರ ತೀರ ಹತ್ತಿರವಾದ ಕಾದಂಬರಿಯಾಗಿದ್ದು ಇಲ್ಲಿ ಪ್ರತಿ ಊರಲ್ಲೂ ಒಬ್ಬ ಸುಬ್ಬರಾಯ, ನೂರಾರು ಅಂತೆಯರು ಅಲ್ಲಲ್ಲಿ ಪುಟ್ಟಣ್ಣಂದಿರು ಬೇಕಾದಷ್ಟು ಕಾಣಸಿಗುತ್ತಾರೆ. ಹಾಗೆ ನೋಡಿದರೆ ಹೊಸದಲ್ಲದ ಕತೆಯಿದು‌. ಶಂಕ್ರ ಇಲ್ಲದ ಒಂದೇ ಹಳ್ಳಿ ನಮ್ಮಲ್ಲಿ ಇಲ್ಲವೇನೋ ಅನ್ನುವಷ್ಟು ದಟ್ಟ ಜೀವನಾನುಭವದ ಕಾದಂಬರಿ ಇದು. ಹವ್ಯಕ ಹಾಗೂ ಈ ನೆಲದ ಕತೆಯಾಗಿದ್ದರಿಂದ ನನಗೆ ಇನ್ನಷ್ಟು ಆಪ್ತ ಎನ್ನಿಸರಲೂಬಹುದು. ಆದರೆ ಕಾದಂಬರಿ ಶತಮಾನಗಳಷ್ಟು ಹಳೆಯ ಕತೆಯನ್ನು ಹೇಳುತ್ತದೆ. ಸ್ವಾತಂತ್ರ್ಯ ಪೂರ್ವದ ಕತೆ ಯಾದರೂ ಸ್ವಾತಂತ್ರ್ಯ ಹೋರಾಟಗಾರನ ಕತೆಯಾದರೂ ಇದು ಇದು ಬದುಕಿನ ಹೋರಾಟದ ಕತೆಯೇ ವಿನಃ ಸ್ವಾತಂತ್ರ್ಯ ಹೋರಾಟದ ಕತೆಯಲ್ಲ. ಲೇಖಕರೇ ಹೇಳುವಂತೆ ಸೋತವರ ಕತೆ ಇದು.

ಅಂತೆಯ ಬದುಕಿನ ಚಿತ್ರಗಳಂತೂ ಬಹಳ ಮಾರ್ಮಿಕವಾಗಿದೆ. ಸರಿ ತಪ್ಪು ಗಳ ಆಚೆಗೆ ಕುಟುಂಬ ವ್ಯವಸ್ಥೆ ಮತ್ತು ಕೌಟುಂಬಿಕ ನೆಲೆಗಟ್ಟಿನ ಮಹತ್ವ ಎಷ್ಟು ಮುಖ್ಯ ಅನ್ನುವುದು ಇವತ್ತಿಗೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಪ್ರತೀ ಮನೆಯಲ್ಲೂ ಒಂದು ಡೈವೋರ್ಸ್ ಕಾಣಿಸಿಕೊಳ್ಳುತ್ತಿರುವ ಸ್ವಾತಂತ್ರ್ಯ ದ ಪರಮಾವಧಿಯ ದಿನಗಳಲ್ಲಿ ಅಂತೆಯ ತ್ಯಾಗ ಎಷ್ಟು ದೊಡ್ಡದು ಎಂಬುದು ಅರ್ಥವಾಗುತ್ತದೆ. ಅನ್ಯಾಯ ಅನ್ನುವ ಪದಕ್ಕೆ ಎಲ್ಲೂ ದಂಗೆಯೇಳದ ಅಂತೆ ಅದೆಷ್ಟು ಗಟ್ಟಿಯಾಗಿ ಜೀವನ ನಡೆಸುತ್ತಾಳೆ ಅನ್ನುವುದು ಆದರ್ಶವಾಗುತ್ತದೆ. ಒಬ್ಬಳು ಓದು ಬರಹ ಇಲ್ಲದ ಹೆಣ್ಣು ಬದುಕನ್ನು ದಿಟ್ಟವಾಗಿ ಬಂದಂತೆ ಎದುರಿಸುವ ಪರಿಯೇ ಅಚ್ಚರಿಯದು. ಮತ್ತೆ ಇಲ್ಲಿ ಬದುಕಿ ಬಾಳಿದ ಬಾಳುತ್ತಿರುವ ಹೊಸ್ಮನೆ ಗಡಿಮನೆಯಂತ ಅದೆಷ್ಟೋ ಮನೆತನಗಳ ಉಳಿಯುವಿಕೆಗೆ ಈ ನೆಲದ ಹೆಣ್ಣುಗಳೇ ಕಾರಣ ಎಂಬ ಸೂಕ್ಷ್ಮತೆ ಯೂ ನಮ್ಮನ್ನು ತಟ್ಟದಿರದು.

ಒಂದೊಂದು ಪಾತ್ರಗಳಿಗೂ ಅದರದೇ ಸತ್ಯಗಳು. ಅದರದೇ ನೋಟಗಳು. ಅಷ್ಟಕ್ಕೆ ಪೂರ್ಣ ಅವು. ನಿರೂಪಕನ ಹೇರುವಿಕೆಯೇ ಇಲ್ಲದ ಕತೆಯೊಂದು ಆಗಾಗ ಪರಿಸರವನ್ನು ಬಹಳ ಚಂದವಾಗಿ ಕಟ್ಟಿಕೊಡುತ್ತ ಓದುವ ಹೊತ್ತಲ್ಲಿ ಅಲ್ಲೆಲ್ಲೋ ಕಾರಂತರನ್ನೂ ನೆನಪಿಸುತ್ತ ಕೆಲವು ಪ್ಯಾರಾಗಳನ್ನು ಮತ್ತೆ ಮತ್ತೆ ಓದಿಸಿಕೊಂಡೇ ಮುಂದೆ ಸಾಗುವ ಮೃಗಶಿರ ಕಾದಂಬರಿ ಆಳದಲ್ಲಿ ಒಂದಿಷ್ಟು ಜಿಜ್ಞಾಸೆ ಯನ್ನು ಬಿತ್ತುತ್ತದೆ.
ಪ್ರಶ್ನೆಗಳನ್ನು ಉಳಿಸುತ್ತದೆ. ಉತ್ತರವಿಲ್ಲದ ಪ್ರಕೃತಿಯಂತೇ ಅಗಾಧ ಬದುಕಿನ ವಿಸ್ಮಯಕ್ಕೆ ಬಿಟ್ಟು ತೆರಳುತ್ತದೆ. ಅಂತೆ ಕಾಡುತ್ತಾಳೆ ಹಾಗೇ ತುಂಗಕ್ಕ, ಮೇನಕೆ, ಕೂಡ ಉಳಿದುಹೋಗುತ್ತಾರೆ.

ಗಮಯನ ಗೋಲೆ ಎನ್ನುವ ಪ್ರತಿಮೆಯೊಂದು ಇಡೀ ಕಾದಂಬರಿಯಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಕೆರೆಮೂಲೆ, ದಣಪೆ, ಭತ್ತ ದ ಕುತ್ರಿ, ಕವಳ, ಬಿಡೇ, ಬ್ರೇಸ್ತ್ವಾರ,ಇಂತಹ ನೂರಾರು ಪ್ರಾದೇಶಿಕ ಭಾಷೆಯ ಶಬ್ದಗಳು ಹೇರಳವಾಗಿ ದೊರೆಯುತ್ತವೆ. ಮತ್ತು ಅವೆಲ್ಲ ಕತೆಯೊಂದಿಗೆ ಎಷ್ಟು ಪೂರಕವಾಗಿವೆ ಎಂದರೆ ಇಲ್ಲಿಯ ನೆಲದ ಕಂಪನ್ನು ದಟ್ಟವಾಗಿ ಕಟ್ಟಿಕೊಡುತ್ತವೆ. ಮತ್ತು ಸಾಕ್ಷಾತ್ ಈ ನೆಲದ ಇತಿಹಾಸಕ್ಕೆ ನಮ್ಮನ್ನು ಕರೆಯೊಯ್ಯುತ್ತದೆ.

ಇಡೀ ಕಾದಂಬರಿಯಲ್ಲಿ ಘಟನೆಗಳನ್ನೋ ಮಾತುಗಳನ್ನೋ ಉದಾಹರಿಸಹೊರಟರೆ ಯಾವುದು ಬಿಡುವುದು ಯಾವುದು ಮುಖ್ಯ ಅಂತೆಲ್ಲ ತಲೆ ಕೆಡುವುದರಿಂದ ಪುಸ್ತಕ ಓದುಗರ ಆಸಕ್ತಿಗೆ ಖುಶಿಗೆ ಬಿಡುವುದೇ ಸೂಕ್ತ‌. ಕತೆಯ ಓಘಕ್ಕೆ ಸ್ವಲ್ಪಮಟ್ಟಿಗೆ ಮತ್ತೆ ಮತ್ತೆ ಬರುವ ಹೊಸ್ಮನೆಯ ಇತಿಹಾಸದ ವಿವರಗಳು ತಡೆ ಎನಿಸಿದರೂ ಒಂದೊಂದು ಮನೆಗೂ ಮನೆತನಕ್ಕೂ ಇಂತಹ ಇತಿಹಾಸವಿದೆ ಎನ್ನುವುದು ಅದನ್ನು ಹೇಳುವ ವೈಭವದಲ್ಲೇ ಅಡಗಿದೆ.

ಕಾದಂಬರಿಯಲ್ಲಿ ಮೇನಕೆಯನ್ನು ಒಂದು ಪಾತ್ರವಾಗಿ ತಂದಿದ್ದರೂ ಅವಳ ಒಳಗಿ‌ನ ನೋಟವಿಲ್ಲದೇ ಹೋದುದು ಯಾಕೆ ಅನ್ನಿಸದಿರದು. ಸುಬ್ರಾಯರ ಬದುಕಿನ ಕತೆಯಲ್ಲಿ ಬಂದವರೆಲ್ಲರೂ ಒಳಗಣ್ಣು ತೆರೆದು ಮಾತನಾಡಿರುವಾಗ ಬಹುಮುಖ್ಯ ಭಾಗವಾದ ಮೇನಕೆಯ‌ ಬಗೆಗೆ ಹೆಚ್ಚು ವಿವರಗಳಿಲ್ಲದೇ ಹೋಗಿರುವುದು ಒಂದಿಷ್ಟು ಪ್ರಶ್ನೆಗಳೊಂದಿಗೇ ಉಳಿದು ಹೋಗುವ ಹೊತ್ತಿಗೆ, ಕತೆ ಸುಬ್ರಾಯರದ್ದೇ ಆದರೂ ಇದು ಅಂತೆಯದೇ ಕತೆ ಅನ್ನಿಸಿಬಿಡುತ್ತದೆ.

ತುಂಬ ದಟ್ಟವಾದ ಓದಿನ ಅನುಭವ ಕೊಡಬಲ್ಲ ಈ ಕಾದಂಬರಿ ಕನಿಷ್ಟ ಹವ್ಯಕರಂತೂ ಓದಲೇಬೇಕು. ಇತ್ತೀಚೆಗೆ ಹವ್ಯಕರದ್ದೇ ಬದುಕಿನ ಕತೆಗಳು ಕಾದಂಬರಿಗಳಾಗಿ ಸಾಹಿತ್ಯ ಪ್ರಪಂಚದಲ್ಲಿ ಛಾಪು ಮೂಡಿಸುತ್ತಿರುವ ಹೊತ್ತಿನಲ್ಲಿ ಇನ್ನಷ್ಟು ಪ್ರಾದೇಶಿಕತೆ ಹೊತ್ತು ಜನಪದವನ್ನು ತುಂಬಿಕೊಂಡು ನೆಲದ ಜಲದ ಕಾಡಿನ ಕನಸಿನ ಕತೆಗಳು ಜನ್ಮತಾಳಲಿ

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಿಯಾ ಭಟ್