Article

ಹುಸಿ ನೈತಿಕತೆ, ಪ್ರತಿಷ್ಟೆಯಲ್ಲಿ ಕೊಚ್ಚಿಹೋಗುವ ’ಅನ್ನಾ ಕರೆನಿನ’ ಪ್ರೇಮಕಾವ್ಯ...

ಅನ್ನಾ ಕರೆನಿನಾ ಟಾಲ್‍ಸ್ಟಾಯ್ ರವರು ಬರೆದಿರುವ, ತೇಜಶ್ರೀಯವರು ಅನುವಾದಿಸಿರುವ ಒಂದು ಸುಂದರವಾದ ದುರಂತ ಪ್ರೇಮಕಾವ್ಯ.. 1875ರ ಕಾಲಘಟ್ಟದ ರಷ್ಯಾದ ಶ್ರೀಮಂತ ಕುಟುಂಬಗಳ ಒಣಪ್ರತಿಷ್ಟೆ, ಹುಸಿ ನೈತಿಕತೆ, ಹುಸಿ ಆದರ್ಶಗಳಿಗೆ ವಿರುದ್ಧವಾಗಿ ಅವೆಲ್ಲವನ್ನೂ ಗಾಳಿಗೆ ತೂರಿ ತನ್ನ ವೈಭೋಗದ ವೈವಾಹಿಕ ಸ್ಥಾನಮಾನವನ್ನು ತೊರೆದು ಪ್ರೀತಿಯ ಸೆಳೆತದಲ್ಲಿ ಕೊಚ್ಚಿಹೋದ ಅನ್ನಾ ಕರೆನಿನಾಳ ದುರಂತ ಕಾವ್ಯ.. ಎರಡು ಶತಮಾನಗಳು ಕಳೆದರೂ ಇಂದಿನ ವಾಸ್ತವದಲ್ಲೂ ತನ್ನ ಪ್ರಸ್ತುತತೆಯನ್ನು ಪ್ರತಿಪಾದಿಸುವ ಮೂಲಕ ಸಾರ್ವಕಾಲಿಕ ಕಹಿಸತ್ಯಗಳಾಗಿ ನಮ್ಮೆದುರು ನಿಲ್ಲುತ್ತದೆ. ಗಂಡು ಹೆಣ್ಣಿನ ಸಂಬಂಧಗಳನ್ನು ಬೆಸೆಯುವ ತೀವ್ರತರನಾದ ಪ್ರೀತಿ ವಾಂಛೆಗಳು, ಸಮಾಜ ವಿಧಿಸಿದ ಚೌಕ‌ಟ್ಟಿನೊಳಗೆ ಹೊಂದಿಕೆಯಾಗದೆ ಅನ್ನಾ ಅನುಭವಿಸುವ ತಲ್ಲಣ ಬೇಗುದಿಗಳೇ ಕಾದಂಬರಿಯ ಮುಖ್ಯ ತಿರುಳು. ಈ ಪಾತ್ರಗಳ ಸುತ್ತಲೂ ಪರಿಭ್ರಮಿಸುವ ಹೆಣ್ಣಿನ ಸ್ವಾತಂತ್ರ್ಯ, ಹಕ್ಕುಗಳು, ಶ್ರೀಮಂತ ಕುಟುಂಬಗಳ ಒಣಪ್ರತಿಷ್ಟೆಗಳ , ನೈತಿಕತೆಯ ಪಾಠಗಳು ಕಾದಂಬರಿಯ ದಿಕ್ಕನ್ನು ರೂಪಿಸುವುದರೊಂದಿಗೆ ಅವತ್ತಿನ ಕಾಲಘಟ್ಟವನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತವೆ. ಅನ್ನಾಳ ಪ್ರೀತಿಯು ಅನುಮಾನ, ಕೋಪ, ದ್ವೇಷವಾಗಿ ಬದಲಾಗುವ ಹಂತಗಳು; ತನ್ನ ಕೊನೆಯ ತೀರ್ಪು ಎನ್ನುವಂತೆ ಸ್ವಯಂ ಹತ್ಯೆಗೊಳಗಾಗುವ ಮೂಲಕ ಕುಲೀನತೆಯ ವ್ಯಸನದಲ್ಲಿದ್ದ ತನ್ನ ಸಮಾಜಕ್ಕೆ ಪ್ರತಿಭಟನೆಯನ್ನು ತೋರುವಂತೆ ಕಾಣುತ್ತಾಳೆ.

ತನ್ನ ಸಾವಿನ ಮೂಲಕ ಸೇಡು ತೀರಿಸಿಕೊಳ್ಳಲು ಹೊರಟಿದ್ದು ಕೇವಲ ತನ್ನ ಪ್ರಿಯಕರನ ವಿರುದ್ಧ ಮಾತ್ರವಲ್ಲ. ಬದಲಿಗೆ ಪ್ರತಿಷ್ಟೆಯ ಅಮಲಿನಲ್ಲಿ ಭಾವನಾತ್ಮಕ, ಸಂವೇದನೆಯನ್ನು ಕಳಕೊಂಡ ತನ್ನ ಸುತ್ತಲಿನ ಸಮಾಜದ ಮೇಲೆ ಮತ್ತು ಸ್ವತಹ ತನ್ನ ಮೇಲೆ. ಟಾಲ್‍ಸ್ಟಾಯ್ ಅನ್ನಾಳ ಮೂಲಕ ಹೆಣ್ಣಿನ ಸೂಕ್ಷ್ಮ ಸಂವೇದನೆಯನ್ನು ಒದಗಿಸಿಕೊಟ್ಟು ಓದುಗರು ಅವಳ ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡುವಂತೆ ಮಾಡಿದ್ದಾರೆ... ಅಂದಿಗೂ ಇಂದಿಗೂ ಶತಮಾನಗಳು ಕಳೆದರೂ ಕೌಟಂಬಿಕ ಮತ್ತು ಸಾಮಾಜಿಕ ಪರಿಸರದಲ್ಲಿ ಹೆಣ್ಣಿನ ಆಯ್ಕೆಗೆ ಮುಕ್ತ ಅವಕಾಶ ನೀಡದೆ ತನ್ನ ಅಂಕೆಯಲ್ಲಿ ಇರಿಸಿಕೊಳ್ಳುವ ಪ್ರಯತ್ನದಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ ಅದು ಇಂದಿಗೂ ಮುಂದುವರಿದಿದೆ.. ಅಂದಿನ ಶ್ರೀಮಂತರ ಸಂಪ್ರದಾಯಬದ್ಧ ಸಮಾಜದಲ್ಲಿ ಈ ಕೃತಿ ಹೊಸ ತಲ್ಲಣವನ್ನು, ಸಂಚಲನವನ್ನು ಸೃಷ್ಟಿಸುವ ಮೂಲಕ ಟಾಲ್‍ಸ್ಟಾಯ್ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದವರು. ಅತ್ಯುತಮವಾಗಿದೆ ಕೃತಿ ಅವಕಾಶ ಮಾಡಿಕೊಂಡು ಓದಿ.

ಕೃತಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾವೇರಿ ಹೆಚ್. ಎಂ