Article

ಜನಪದ ಸಾಹಿತ್ಯದಲ್ಲಿ ತವರುಮನೆ  ಹುಡುಕಿದ ಮುಮ್ತಾಜ್ ಬೇಗಂ

ಹೆಣ್ಣನ್ನು ಬಿಟ್ಟು ಜನಪದವಿಲ್ಲ. ಜನಪದ ಎಂದರೇನೇ ಅದೊಂದು ಹೆಣ್ಣಿನ ಜಗತ್ತು. ಹೆಣ್ಣೇ ಇಲ್ಲದ ಜನಪದವನ್ನು ಕಲ್ಪಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. `ಜನಪದ ಸಾಹಿತ್ಯದಲ್ಲಿ ತವರುಮನೆ’ ಹುಡುಕಲು ಹೊರಟಿರುವ ಗಂಗಾವತಿಯ ಡಾ.ಮುಮ್ತಾಜ್ ಬೇಗಂ ವಿಶಿಷ್ಟ ರೀತಿಯಲ್ಲಿ ಪುಸ್ತಕವೊಂದನ್ನು ಹೊರತಂದಿದ್ದಾರೆ. ಹಾಗೆ ನೋಡಿದರೆ, ಜನಪದ ಸಾಹಿತ್ಯದಲ್ಲಿ ತವರುಮನೆ ಬಹಳಷ್ಟು ಮಹತ್ವದ ಜಾಗ ಪಡೆದಿದ್ದರೂ ಆ ಬಗ್ಗೆ ಸಂಶೋಧನೆಗಳು ಆಗಿರುವುದು ಅಪರೂಪ. ಅಂಥದ್ದೊಂದು ಆಯಾಮದಲ್ಲಿ ಈ ಪುಸ್ತಕವನ್ನು ನೋಡಿದರೆ ಇದೊಂದು ಮಹತ್ವದ ಹೆಜ್ಜೆಗುರುತು. 

ಜನಪದ ಸಾಹಿತ್ಯ ಎಂಬುದು ಸಮುದ್ರವಿದ್ದಂತೆ. ಆ ಸಮುದ್ರಕ್ಕೆ ಅದೆಲ್ಲೋ ತುತ್ತ ತುದಿಯಲ್ಲಿ ಈ ತವರುಮನೆಯ ನಂಟು ಬೆಳೆದಿದೆ. ಲೇಖಕರೇ ಹೇಳುವಂತೆ, ಹೆಣ್ಣು ಹುಟ್ಟಿ ಬೆಳೆದ ಪರಿಸರದಿಂದ ಮದುವೆ ಎನ್ನುವ ಬಂಧನಕ್ಕೆ ಒಳಗಾದ ನಂತರ ಬೇರೊಂದು ಪರಿಸರದಲ್ಲಿ ಬದುಕು ಸಾಗಿಸುವ ಅನಿವಾರ್ಯತೆಯನ್ನು ಪುರುಷಪ್ರಧಾನ ವ್ಯವಸ್ಥೆಯ ಲಕ್ಷಣವಾಗಿಯೇ ಕಾಣುತ್ತದೆ. ತವರುಮನೆ ಮತ್ತು ಗಂಡನ ಮನೆ ಎಂಬ ಎರಡು ಸಾಂಸ್ಕೃತಿಕ ಪರಿಸರದಲ್ಲಿ ಬದುಕುವ ಹೆಣ್ಣಿನ ಜೀವನದಲ್ಲಿ ತವರುಮನೆ ಎಂಬುದೇ ಮಹತ್ವದ ಪಾತ್ರ ವಹಿಸುತ್ತದೆ. ಅದು ಸಿರಿವಂತರಿಗೂ, ಬಡವರಿಗೂ ಏಕರೀತಿಯಲ್ಲಿ ಸಿಗುವ ಸುಖದಂತಿದೆ. ತಮ್ಮ ಪುಸ್ತಕದ ಕುರಿತು ಒಂದಿಷ್ಟು ಟಿಪ್ಪಣ  ಮಾಡಿಕೊಂಡಿದ್ದಾರೆ ಲೇಖಕರು. ಜಾನಪದ ಸಂಸ್ಕೃತಿಯಲ್ಲಿ ತವರುಮನೆಗೆ ಮಹತ್ವದ ಸ್ಥಾನವಿದೆ ಎಂದೇ ನಂಬಿಕೊಂಡಿರುವ ಲೇಖಕಿ ಡಾ.ಮುಮ್ತಾಜ್ ಆ ನಂಬಿಕೆಯ ಆಧಾರದ ಮೇಲೆಯೇ ಜನಪದ ಜಗತ್ತಿನಲ್ಲಿ ಸಂಚರಿಸಿದ್ದಾರೆ. ಅಲ್ಲಿ ತವರುಮನೆಯ ಲಿಂಕುಗಳನ್ನು ಹುಡುಕಿ ಕೂಡಿಸಿದ್ದಾರೆ. ಬಹಳ ಕುತೂಹಲಕಾರಿಯಾಗಿ ಈ ಪುಸ್ತಕ ಓದಿಸಿಕೊಂಡು ಹೋಗುತ್ತದೆ. 

ಅಕ್ಷರ ಎಂಬುದು ಏನೆಂದೇ ಗೊತ್ತಿರದ ಸಂದರ್ಭದಲ್ಲಿ ಹುಟ್ಟಿಕೊಂಡ ಜಾನಪದ ಜಗತ್ತು ಬದುಕಿನ ಅನುಭವಗಳನ್ನೇ ಅಡಿಗಲ್ಲಾಗಿ ಮಾಡಿಕೊಂಡಿದೆ. ತಮ್ಮ ಪಾಡಿಗೆ ತಾವು ಪಟ್ಟ ಪಾಡುಗಳನ್ನು ಜನಪದದ ಬಳ್ಳಿಯಲ್ಲಿ ನೇತು ಹಾಕಿದ್ದಾರೆ ಜನ. ಅಂತಹ ಜನಪದದಲ್ಲಿ `ತವರುಮನೆ’ ಯನ್ನು ಹುಡುಕಿರುವ ಡಾ.ಮುಮ್ತಾಜ್ ತಮಗೆ ಸಿಕ್ಕಷ್ಟು ಅಂಶಗಳನ್ನು ಮುಂದಿಟ್ಟುಕೊಂಡೇ ಸಂಶೋಧಿಸಿದ್ದಾರೆ. ಅದೊಂದು ಮಿತಿ ಎಂಬಂತೆ ಕಂಡರೂ ಇಲ್ಲಿನ ಪರಿಮಿತಿಯೂ ಹೌದು. ಆನಪದ ಹೆಣ್ಣು ಮತ್ತು ತವರುಮನೆ ಎಂಬ ಅಧ್ಯಾಯದಲ್ಲಿ ಜನಪದ ಹೆಣ್ಣಿನ ಜೀವನಕ್ರಮವನ್ನು ಬರೆಯುತ್ತಾ ಹೋಗುತ್ತಾರೆ. ಆನಂತರ, ಅದೇ ಜನಪದ ಹೆಣ್ಣಿನ ಸ್ಥಾನಮಾನಗಳ ಕುರಿತು ಸಂಶೋಧಿಸುತ್ತಾರೆ. 

ನಾಕು ಮಕ್ಕಳ ಕೊಟ್ಟು ಸಾಕು ಮಾಡೋ ಶಿವನೇ

ನಾಕರ ಮ್ಯಾಲೆ ಆರತಿ ಹಿಡಿಯೋಕೆ

ನಾರಿಯ ಕೊಟ್ಟು ಕಡೆ ಮಾಡೋ

- ಜನಪದದ ಜನಕ್ಕೆ ನಾರಿಯ ಮೇಲಿನ ಪ್ರೀತಿ ಎಷ್ಟಿತ್ತು ಎಂಬುದಕ್ಕೆ ಈ ಮೂರು ಸಾಲುಗಳು ಸಾಕೇನೋ ಉತ್ತರ ಹೇಳಲು. ಅದೇ ಜನಪದ ಜಗತ್ತಿನಲ್ಲಿ ಆ ಹೆಣ್ಣಿನ ಮೂಗುದಾರ ಹಾಕಿ, ಅವಳ ಸಂವೇದನೆಗಳನ್ನು ಸಂಕೋಲೆಗಳಲ್ಲಿ ಬಂಧಿಸಿಟ್ಟಂತೆ ಕಾಣುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ... 

ಅತ್ತೆಯ ಮನೆಯಾಗ ಮುತ್ತಾಗಿ ಇರಬೇಕ

ಹೊತ್ತಾಗಿ ನೀಡಿದರ ಉಣಬೇಕ

ಮಗಳೇ, ಹೆತ್ತವರ ಹೆಸರ ತರಬೇಕ

ದಾಂಪತ್ಯದ ಜವಾಬ್ದಾರಿ ಹೆಣ್ಣಿನ ಮಾತ್ರ ಸೀಮಿತ ಎಂಬಂತೆ ಹೊರೆ ಹೊರಿಸಿರುವಂತೆ ಇಲ್ಲಿ ಭಾಸವಾಗುತ್ತೆ. ಇಂತಹ ಸಾಲುಗಳನ್ನೇ ಮುಂದಿಟ್ಟುಕೊಂಡು ಲೇಖಕಿ ಡಾ.ಮುಮ್ತಾಜ್ ಸಮಾಜದ ಮೌಲ್ಯಗಳ ಜೊತೆ ಹೇಗೆ ಹೆಣ್ಣು ಜನಪದವಾಗಿ ಅರಳಿದಳು, ಹೇಗೆ ಅದೇ ಹೆಣ್ಣು ಜನಪದದ ತವರುಮನೆಯ ಸಿರಿಸಂಪತ್ತಾದಳು ಎಂಬುದನ್ನು ವಿಮರ್ಶಿಸಿದ್ದಾರೆ. 

ಹೀಗೆ, ವಿಮರ್ಶಿಸುತ್ತಲೇ ಜನಪದ ಸಾಹಿತ್ಯದಲ್ಲಿ ತವರುಮನೆಯ ಹುಡುಕಾಟ ಶುರುಮಾಡುತ್ತಾರೆ. ತವರುಮನೆಯ ಪರಿಕಲ್ಪನೆ ಹೇಗಿದೆ ಎಂಬುದರಿಂದ ಲೇಖಕಿ ಶೋಧ ಆರಂಭವಾಗುತ್ತದೆ. ಮೌಖಿಕ ಪದ್ಯ ಸಾಹಿತ್ಯದಲ್ಲಿ ತವರುಮನೆಯ ಅಗಾಧತೆಯನ್ನು ಲೇಖಕಿ ಕಾಣುವ ಪ್ರಯತ್ನ ಮಾಡುತ್ತಾರೆ. ತವರುಮನೆಯ ಗರತಿ ಹಾಡು, ಮದುವೆ ಹಾಡು, ಜನಪದ ಗೀತೆಗಳು, ಬೀಸುವ ಕಲ್ಲು ಹಾಡು, ಸೋಬಾನೆ ಪದಗಳು, ಮಳೆರಾಯನ ಹಾಡು, ಜನಪದ ಕಥನಗೀತೆ, ತಾಯಿ ಇಲ್ಲದ ತವರುಮನೆ, ಹೆಣ್ಣಿನ ಹಾರೈಕೆ, ಕ್ಷಣ ಕತೆ ಎಂದೆಲ್ಲಾ ದಾರಿಗಳನ್ನು ಹಿಡಿದುಕೊಂಡು ಹೊರಡುವ ಲೇಖಕಿ ಅಂತಿಮವಾಗಿ ಮತ್ತೆ ಬಂದು ತಲುಪುವುದು ಅದೇ ತವರುಮನೆಯ ಕೇಂದ್ರಬಿಂದುಗೆ. ಮೌಖಿಕ ಗದ್ಯ ಸಾಹಿತ್ಯದಲ್ಲಿ ಒಡಪುಗಳು, ಗಾದೆಮಾತು, ಒಗಟುಗಳು ಹೇಗೆ ತವರುಮನೆಯ ಸಂಬಂಧ ಇಟ್ಟುಕೊಂಡಿವೆ ಎಂಬುದರ ಹುಡುಕಾಟವನ್ನು ಕೂಡ ಲೇಖಕಿ ಮುಮ್ತಾಜ್ ಕುತೂಹಲಭರಿತವಾಗಿ ಮಾಡುತ್ತಾ ಹೋಗುತ್ತಾರೆ. 

ತವರುಮನೆ ಎಂದಮೇಲೆ ಅಲ್ಲಿ ಜನಪದ ಆಚರಣೆಗಳು ಇಲ್ಲದಿರುತ್ತವೆಯೇ? ತವರುಮನೆಯ ಆಷಾಢಮಾಸ, ಗೌರಿಹುಣ್ಣಿಮೆ, ನಾಗರ ಪಂಚಮಿ, ಗುಳ್ಳವ್ವದಂತಹ ಆಚರಣೆಗಳನ್ನು ಕೂಡ ಸಂಶೋಧಿಸಿ ದಾಖಲಿಸುವ ಪ್ರಯತ್ನವನ್ನು ಇಲ್ಲಿ ಪ್ರಶಂಶಿಸಬಹುದು. ಅಂತಿಮ ಅಧ್ಯಾಯ ಸ್ಥಿತ್ಯಂತರ ಬದುಕು ಮತ್ತು ತವರುಮನೆಯ ಕುರಿತು ಇದೆ. ಲೇಖಕಿ ಜನಪದ ಜಗತ್ತನ್ನು ಸುತ್ತಿಕೊಂಡು, ಅಲ್ಲಿರುವ ಅಸಂಖ್ಯ ತವರುಮನೆಗಳ ಕಷ್ಟಸುಖ ಕೇಳಿಕೊಂಡು ಹೃದ್ಯಗೊಳ್ಳುತ್ತಾರೆ. ಹೆಣ್ಣು ಮತ್ತು ಆಧುನಿಕತೆಯ ಕುರಿತು ಬರೆಯುತ್ತಾರೆ. ಜನಪದದ ತವರುಮನೆ ನೋಡಿದ್ದಾಯ್ತು, ಆಧುನಿಕ ಜಗತ್ತಿನ ತವರುಮನೆ ಹೇಗಿದೆ ಎಂಬುದನ್ನು ಕೂಡ ತೋರಿಸುವ ನಿರ್ಧಾರಕ್ಕೆ ಲೇಖಕಿ ಈ ಕೃತಿಯಲ್ಲಿ ಬಂದಿದ್ದಾರೆ. ಅಂತಿಮವಾಗಿ ಲೇಖಕಿಗೆ ದುಃಖವೇ ದಕ್ಕಿತಾ? ತವರಿನ ಸಂಬಂಧಗಳ ಶಿಥಿಲತೆಯನ್ನು ಆದ್ರ ರೀತಿಯಲ್ಲಿ ಡಾ.ಮುಮ್ತಾಜ್ ವಿವರಿಸುತ್ತಾರೆ.

ಅಲ್ಲಲ್ಲಿ ಒಂದಿಷ್ಟು ಹೊಳಹುಗಳನ್ನು ಮೂಡಿಸುತ್ತಾ ಹೋಗುವ ಲೇಖಕಿ, ರಾಗಿಕಲ್ಲು ಅಥವಾ ಬೀಸುವ ಪದಗಳನ್ನು ಕಟ್ಟಿದವರಲ್ಲಿ ನೂರಕ್ಕೆ ತೊಂಭತ್ತು ಜನ ಹೆಣ್ಣು ಮಕ್ಕಳೆಂದೇ ತೋರುತ್ತದೆ ಎಂಬಂತಹ ಸಾಲುಗಳನ್ನು ಬರೆದು ಅದರ ಸಂಶೋಧನೆಗೆ ಇಳಿಯುತ್ತಾರೆ. ಹೆಣ್ಣು ಮಳೆಗೆ ಹೇಗೆ ಸ್ಪಂದಿಸುತ್ತಾಳೆ ಎಂಬುದನ್ನು ಜನಪದರು ಬಹಳ ವಿಶೇಷವಾಗಿಯೇ ದೃಶ್ಯ ಕಟ್ಟಿಕೊಟ್ಟಿದ್ದಾರೆ. 

ಮೂಡುಸೀಮೆಗೆ ಹೋಗಿ ಬಾರೋ ಮಳೆರಾಯ

ಕಗ್ಗಲೀನ ನನ ತವರೀನ ಮುಂದೆ

ಜಗ್ಗೀಸಿ ಹುಯ್ಯೋ ಮಳೆರಾಯ

ಎಂದು ಹಾಡುತ್ತಲೇ ತನ್ನ ತವರುಮನೆ ಕೂಡ ಮಳೆಯಿಂದ ನೆನೆಯಬೇಕೆಂದು ಆಶಿಸುವ ಹೆಣ್ಣು ಇಲ್ಲಿ ವಿಶೇಷವಾಗಿ ದಾಖಲಿಸಲ್ಪಟ್ಟಿದ್ದಾರೆ. ಇಂತಹ ಹತ್ತುಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಯಾತ್ರೆ ಆರಂಭಿಸುವ ಲೇಖಕಿ ಡಾ.ಮುಮ್ತಾಜ್, ಇಡೀ ಪುಸ್ತಕವನ್ನು ಜೀವಂತಸ್ಥಿತಿಯಲ್ಲಿ ಇಟ್ಟಿರುವುದು ಗಮನಕ್ಕೆ ಬರುತ್ತದೆ. 

ಜಾತ್ಯಾತೀತ ತತ್ವದಡಿಯಲ್ಲಿ ಜೀವನ ಸಾಗಿಸುತ್ತಿರುವ ಡಾ.ಮುಮ್ತಾಜ್ ಬೇಗಂ `ಪಿಂಜಾರರು ಒಂದು ಜಾನಪದೀಯ ಅಧ್ಯಯನ’ ಎನ್ನುವ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಂತಧರ್ಮೀಯ ವಿವಾಹವಾಗಿದ್ದಾರೆ. ಟಿವಿ-9 ವಾಹಿನಿಯ ಹಿರಿಯ ವರದಿಗಾರ ಸಿದ್ದು ಬಿರಾದಾರ ಜೊತೆಗೆ ಸಂಸಾರ ಹಾಗೂ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಡಾ.ಮುಮ್ತಾಜ್ ಬೇಗಂ ಈಗಾಗಲೇ ಕಬಂಧ ಬಾಹುಗಳು ಬೇಕಿಲ್ಲ ಎಂಬ ಕವನ ಸಂಕಲನವನ್ನು, ಬರದ ಭೂಮಿಯ ಚಿಗುರು ಎಂಬ ಸಂಪಾದಿತ ಕೃತಿಯನ್ನು, ಕೃತಿಬಿಂಬ ಎಂಬ ವಿಮರ್ಶ ಪುಸ್ತಕವನ್ನು ಈಗಾಗಲೇ ಹೊರತಂದಿದ್ದಾರೆ. 

ಪುರುಷ ಪ್ರಧಾನ ವ್ಯವಸ್ಥೆಯ ವಾಹಕರಾದ ಪುರಾಣಕಾರರು, ಕೀರ್ತನಕಾರರು, ಕತೆ, ಉಪಕತೆಗಳ ಮೂಲಕ ಹೆಣ್ಣನ್ನು ಕೀಳಾಗಿ ಚಿತ್ರಿಸಿದ್ದಾರೆ. ತಾಯ್ತನ ವೈಭವೀಕರಿಸಿದ್ದಾರೆ. ತಾಯ್ತನ ಹೆಣ್ಣಿಗೆ ಅನಿವಾರ್ಯ ಎಂಬುವಂತೆ ವ್ಯವಸ್ಥೆ ರೂಪಿಸಿ ಮಕ್ಕಳಾಗದ ಹೆಣ್ಣನ್ನು ಬಂಜೆ ಎಂದು ಹೀಯಾಳಿಸಿ ಅಪಮಾನಿಸುತ್ತಲೂ ಬಂದಿದ್ದಾರೆ. ಇಂತಹ ಅಸಂಖ್ಯ ನೋವು ಸಂಕಟಗಳನ್ನು ಕಟ್ಟಿ, ಹಾಡಾಗಿಸಿ ಹಾಡಿರುವ ಜನಪದ ಹೆಣ್ಣು ಮಕ್ಕಳ ಮತ್ತೊಂದು ಮುಖವನ್ನು ಈ ಪುಸ್ತಕದಲ್ಲಿ ಡಾ.ಮುಮ್ತಾಜ್ ಬಿಡಿಸಿಟ್ಟಿದ್ದಾರೆ. 

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿ.ಜು ಪಾಶ