Article

ಜೀವ ಬರಿಸುವ ಕವಿತೆಗಳ ‘ಜೀವ ಮಿಡಿತದ ಸದ್ದು’

'ಜೀವ ಮಿಡಿತದ ಸದ್ದು' ಹೆಸರೇ ಹೇಳುವಂತೆ ಇಲ್ಲಿನ ಪ್ರತಿ ಕವಿತೆಗಳೂ ಇಂದಿಗೂ ಮಿಡಿಯುತ್ತಾ ಸದ್ದು ಮಾಡುತ್ತವೆ. ಅವುಗಳನ್ನು ಓದುತ್ತಾ ಕೇಳಿಸಿಕೊಳ್ಳಬೇಕಾದ ಭಾವವಿರಬೇಕಷ್ಟೇ. ಇಲ್ಲಿನ ಕವಿತೆಗಳ ಮೂಲಕ ಮಾತನಾಡುವ ರೀತಿ ಕಂಡು ಕವಯಿತ್ರಿಯ ಭಾವ ಇಷ್ಟು ಸೂಕ್ಷ್ಮತೆಯಿಂದ ಕೂಡಿರಲು ಹೇಗೆ ಸಾಧ್ಯವೆಂದು ಅರೆ ಕ್ಷಣ ಅನಿಸಿದ್ದು ಸುಳ್ಳಲ್ಲ. ಬಾಲ್ಯದ ಭಾವಗಳ ಬುತ್ತಿ ಬಿಚ್ಚುವ ಪರಿಯಂತೂ ಅಚ್ಚರಿ. 'ಲ್ಯಾವಿಗಂಟಿನ ಸುತ್ತ' ಕವಿತೆಯ ಮೂಲಕ ಅದೆಷ್ಟು ಎಳಸಿನ ನೆನಪುಗಳನ್ನು ಸರಳವಾಗಿ ಆಸ್ವಾದಿಸಲು ಕಟ್ಟಿಕೊಡಲಾಗಿದೆ.

'ನಾನು ಮುಟ್ಟಾದ ಮೊದಲ ದಿನ

ಉಟ್ಟ ಸೀರೆಯಲ್ಲಿ

ಆಹಾ! ಎಷ್ಟೊಂದು ಕಲೆಗಳು

ನನ್ನ ಲಜ್ಜೆಯ ಕಲೆ, ನನ್ನ ಗಾಬರಿಯ ಕಲೆ

ಕುಡಿಯೊಡೆದ ನನ್ನ ಕನಸುಗಳ ಕಲೆ'

ಈ ಸಾಲುಗಳಂತೂ ಆಗ ತಾನೆ ಹದಿಹರೆಯದ ಹೃದಯ ಹೂಡುವ ಕನಸುಗಳ ಮೂಲವನ್ನು ತೆರೆದಿಡುತ್ತದೆ. ತನ್ನನ್ನು ಮೌನಿಯಾಗಿರಲು ಬಿಡಿ ಎಂದು ಹೇಳುತ್ತಲೇ ಕವಯಿತ್ರಿ ಈ ಸಮಾಜದೊಂದಿಗೆ ಸಂವಾದಕ್ಕಿಳಿಯುತ್ತಾಳೆ. ಹೆಪ್ಪುಗಟ್ಟುತ್ತಿರುವ ಮೃದು ಪ್ರೀತಿಯ ಉಳಿವಿಗೆ ಮೋಹ ತೊರೆದ ಆಕ್ಕ, ಮೀರಾ, ರಾಧೆಯರನ್ನು ತನ್ನೊಳಗೆ ಸೆಳೆದುಕೊಳ್ಳುತ್ತಾಳೆ.

'ಜೀವ ಮಿಡಿತದ ಸದ್ದು' ಕವಿತೆಯಲ್ಲಂತೂ ಅವ್ವನೊಂದಿಗೆ ನಡೆವ ಮಗಳ ಸಂವಾದ ಇಡೀ ಹೆಣ್ಣು ಕುಲವನ್ನು ಪ್ರತಿನಿಧಿಸುವಂತಿವೆ.

'ಹೌದವ್ವ

ನಾವೆಲ್ಲೋ ಎಡವಿದ್ದೇವೆ,

ಏನನ್ನೋ ಬಚ್ಚಿಟ್ಟುಕೊಳ್ಳಲು

ಹೋಗಿ ಪೂರ್ತಿ ಬೆತ್ತಲಾಗಿದ್ದೇವೆ!

ಅನುಭವಿಸಿದ್ದನ್ನೆಲ್ಲ ದಾಖಲಿಸದೇ

ಬೇರೆಯದೇ ಭ್ರಮೆಯಲ್ಲಿ

ಬದುಕುತ್ತ ಬಂದಿದ್ದೇವೆ!.'

ತೀರಾ ಸರಳತೆಯ ಈ ಸಾಲುಗಳು ಮಹಿಳಾ ಲೋಕದ ಅನುಭವ ಕಥನಗಳಂತೆ ಕಾಣುತ್ತವೆ.

'ಊರ್ಮಿಳೆಯ ಸ್ವಗತ'ದಲ್ಲಿ ಹೆಣ್ಣು ಜೀವವೊಂದು ಇನಿಯನ ಪ್ರತಿ ಮಾತುಗಳನ್ನು ಹುಂಬುತನದಿಂದ ನಂಬಿ ಕೂರುವ ಜೊತೆಯಲ್ಲೇ 'ಪ್ರೀತಿ ನನಗೀಗ ಕೊನೆಯಿಲ್ಲದ ಒಂದು ಹುಡುಕಾಟ'ವೆಂದು ಹೇಳುವ ರೀತಿ ಪ್ರೀತಿಯ ಅದಮ್ಯ ಹುಡುಕಾಟದ ಪ್ರತೀಕವೇ ಸರಿ.

"ಚಿತ್ತ ಕಲಕಿದ ಚಿಟ್ಟೆ ಹಾಗೂ ಪುಟ್ಟಿ" ಕವಿತೆಯಲ್ಲಿ ಪುಟ್ಟ ಮಗುವೂ ತನ್ನನ್ನು ಮೆಚ್ಚಿಕೊಳ್ಳಲಿ ಎಂದು ಆಶಿಸುವ ಪರಿ ಜೊತೆಗೆ ಹಿಡಿದ ಚಿಟ್ಟೆಗೆ ನೋವಾದೀತೆಂದ ಮಗುವಿನ ಭಾವಕ್ಕೆ ಮನಸೋತು ಬಿಡಲು ಹಾರಿ ಹೋದ ಚಿಟ್ಟೆ ಕಂಡು ಖುಷಿಪಡುವ ಆ ಮಗು ಮನಸ್ಸು ಕವಯಿತ್ರಿಯದೂ ಆಗಿದೆ.

"ಕಡಲ ವಿಸ್ತಾರದ ಒಡಲು" ಕವಿತೆಯಲ್ಲಿ ಆಧ್ಯಾತ್ಮದ ಬೆರಗನ್ನು ಗುರುತಿಸಬಹುದು.

'ಬದುಕಿನ ಗುರಿಗೆ ನೂರೆಂಟು ದಾರಿಗಳಿದ್ದರೇನು?

ನಿನಗೆ ನೀ ತುಳಿದದ್ದೇ ದಾರಿ

ನೀ ಕಂಡುಕೊಂಡದ್ದೇ ಗುರಿ

ನಿನ್ನ ಹಾದಿಗೆ ನೀನೆ ಬೆಳಕು'

ಎನ್ನುವಲ್ಲಿ ಆತ್ಮಸ್ಥೈರ್ಯದ ಜೊತೆಗೆ 'ನಿನಗೆ ನೀನೆ ಬೆಳಕು' ಎಂದ ಬುದ್ಧನ ಮಾತು ಎದ್ದು ಕಾಣುತ್ತದೆ.

ಇನ್ನುಳಿದ 'ನಿನ್ನ ಪ್ರೀತಿ', 'ಏಕಾಂತ ಸಂಜೆ', 'ಧ್ಯಾನ', 'ನೀನಿಲ್ಲವೆಂದರೆ', 'ಬರಿದಾಗದ ಕಣಜ', 'ಪ್ರೀತಿ', 'ಉಸಿರು', 'ಪ್ರತೀಕ್ಷೆ', ಕವಿತೆಗಳಲ್ಲಿ ಪ್ರೇಮದ ನವಿರು ಭಾವನೆಗಳು, ಉತ್ಕಟ ಅನುಭಾವಗಳು, ಸಮಾಜದೊಂದಿಗೆ ಸಂವಾದಗಳು, ಏಕಾಂತಕ್ಕೆ ಜೊತೆಯನ್ನರಸುವ ಭಾವಗಳ ಕಣಜವನ್ನೇ ಇಲ್ಲಿ ಸವಿಯಬಹುದಾಗಿದೆ.

ಇಡೀ ಸಂಕಲನದ ಕವಿತೆಗಳನ್ನು ಆಸ್ವಾದಿಸಿದ ಕೊನೆಯಲ್ಲಿರುವ ಮೂರು ಅನುಬಂಧಗಳನ್ನು ಓದಿ ಹೃದಯ ಭಾರವಾಗಿ, ಶೂನ್ಯ ಭಾವಕ್ಕೆ ಒಳಗಾಗಿ ಕಣ್ಣ ಹನಿ ಜಿನುಗಿದವು. ವಿಭಾ ಇಂದು ದೈಹಿಕವಾಗಿ ಇಲ್ಲವಾದರೂ ತನ್ನ ಭಾವ ಪ್ರಪಂಚದ ಮೂಲಕ ಇಂದಿಗೂ ನಮ್ಮೊಂದಿಗೆ ಸಂವಾದಿಸುತ್ತಲೇ ಇರುವರು ಎಂದರೆ ಅತಿಶಯೋಕ್ತಿಯಾಗಲಾರದು.

ಸ್ನೇಹಲತಾ ಗೌನಳ್ಳಿ