Article

ಜೀವಸತ್ಯದ ಬೆಳಕಿನ ಕಿರಣಗಳು 'ಫೆಮಿನಿಸ್ಟ್ ಮ್ಯಾನಿಫೆಸ್ಟೊ'

ಚಿಮಮಾಂಡ ಎನ್ಗೋಜಿ ಅಡಿಚಿಯೆ ನೈಜೀರಿಯಾದ ಖ್ಯಾತ ಲೇಖಕಿ, ಚಿಂತಕಿ, ಕತೆ, ಕಾದಂಬರಿ, ನಾಟಕಗಳಿಗಾಗಿ ಜಾಗತಿಕ ಪ್ರಶಸ್ತಿಗಳಿಗೆ ಭಾಜನಳಾದವಳು. ಸುಸಂಸ್ಕೃತ ತುಂಬು ಪರಿವಾರದಲ್ಲಿ ಜನಿಸಿ ವೈದ್ಯಕೀಯ ಅಧ್ಯಯನವನ್ನು ತೊರೆದು ಲೇಖಕಿಯಾಗಿ, ಅಪರೂಪದ ಚಿಂತಕಿಯಾಗಿ ಹೊರಹೊಮ್ಮಿದವಳು.

"ಫೆಮಿನಿಸ್ಟ್ ಮ್ಯಾನಿಫೆಸ್ಟೊ" ಆಕೆಯ ಪ್ರಚಲಿತ ಕೃತಿ. ತನ್ನ ಗೆಳತಿಗಾಗಿ ಆಕೆ ಸೂಚಿಸಿದ 'ಮಗಳನ್ನು ಬೆಳೆಸಲು 15 ಸಲಹೆಗಳು'. ಪುಸ್ತಕ ಎನ್ನುವುದಕ್ಕಿಂತ ಅದೊಂದು ಸುದೀರ್ಘ ಲೇಖನ. ಅಸ್ಮಿತೆಯ ಕುರಿತಾದ ಅತ್ಯಂತ ಮಹತ್ವಪೂರ್ಣ, ಮೂಲಭೂತ ಪ್ರಶ್ನೆಗಳನ್ನು ಆಕೆ ಇಲ್ಲಿ ಎತ್ತುತ್ತಾಳೆ.. ನಿರಾಕರಿಸಲು ಸಾಧ್ಯವೇ ಇಲ್ಲದಂತಹ ಅಂಶಗಳನ್ನು ಅತ್ಯಂತ ಪ್ರಬುದ್ಧವಾಗಿ ಮಂಡಿಸುತ್ತಾಳೆ. ಸಮಾನತೆ, ಸಹಭಾಗಿತ್ವ, ಸ್ವಾತಂತ್ರ್ಯ ಇತ್ಯಾದಿ ಕುರಿತು ತೋರಿಕೆಗೆ ಮೀರಿದ ನೈಜ ಪರಿಕಲ್ಪನೆಗಳನ್ನು ನಿರೂಪಿಸುತ್ತಾಳೆ.

ಎಲ್ಲರನ್ನೂ ಮೆಚ್ಚಿಸುವುದು ಅವಳ ಕೆಲಸವಲ್ಲ.

*ಅವಳ ದೇಹ ಅವಳಿಗೆ ಮಾತ್ರ ಸೇರಿದ್ದು..ಇಷ್ಟವಿಲ್ಲದ ಯಾವುದಕ್ಕೂ ಆಕೆ ಒಪ್ಪಿಗೆ ನೀಡುವ ಅಗತ್ಯವಿಲ್ಲ.

*ತನಗೆ ಬೇಡದಿರುವುದನ್ನು ಬೇಡ ಎನ್ನುವುದು ಆಕೆಗೆ ಹೆಮ್ಮೆಯ ಸಂಗತಿಯಾಗಿರಲಿ.

*ಋತುಚಕ್ರ ಅಸಹ್ಯವಾದರೆ ಅದೊಂದು ಪವಿತ್ರವಾದ ಅಸಹ್ಯ.. ಅದಿಲ್ಲದಿದ್ದರೆ ಮನುಕುಲವೇ ಇರುತ್ತಿರಲಿಲ್ಲ.

*ಪ್ರೀತಿಸುವುದೆಂದರೆ ಕೇವಲ ಕೊಡುವುದಲ್ಲ...ಪಡೆದುಕೊಳ್ಳುವುದೂ ಸಹ.

*ಬೇಕಾದ್ದನ್ನೆಲ್ಲ ಒದಗಿಸುವುದು ಕೇವಲ ಗಂಡಸಿನ ಕೆಲಸವಲ್ಲ.

*ಯಾವುದೇ ಮಹಿಳೆ ಎಂದು ತಾನು ಸ್ತ್ರೀವಾದಿ ಅಲ್ಲ ಎಂದು ಸಾಧಿಸಿದರೆ ಅದು ಪಿತೃಪ್ರಧಾನತೆಯ ಯಶಸ್ಸನ್ನು ಮತ್ತು ಸಮಸ್ಯೆಯ ಹರವನ್ನು ಎತ್ತಿ ತೋರಿಸುತ್ತದೆ.

*ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ...ಭಿನ್ನತೆ ಸಹಜ ಗುಣ..ಅದನ್ನು ಗೌರವಿಸಬೇಕು.

ಲೇಖನದಲ್ಲಿ ಪ್ರಸ್ತಾಪಿತ ಕೆಲವು ಅಂಶಗಳಿವು. ಚಿನುವಾ ಅಚಿಬೆ ನಂತರದ ಆಫ್ರಿಕಾದ ಪ್ರಸಿದ್ಧ ಲೇಖಕಿ ಎಂದೇ ಖ್ಯಾತಿವೆತ್ತ ಚಿಮಮಾಂಡಳ ಈ ಕೃತಿಯನ್ನು ಕನ್ನಡಕ್ಕೆ ತಂದವರು ಕಾವ್ಯಶ್ರೀ ಎಚ್. ಹಿರಿಯ ವಿಮರ್ಶಕಿ ಎಂ ಎಸ್ ಆಶಾದೇವಿರವರು ಮುನ್ನುಡಿಯಲ್ಲಿ ಈ ಸಲಹೆಗಳನ್ನು "ಜೀವಸತ್ಯದ ಬೆಳಕಿನ ಕಿರಣಗಳು" ಎಂದು ಬಣ್ಣಿಸಿದ್ದು ಅರ್ಥಪೂರ್ಣವೂ ಸರ್ವಸಮ್ಮತವೂ ಆಗಿದೆ. ಲಡಾಯಿ ಪ್ರಕಾಶನದ ಈ ಪುಟ್ಟ ಪುಸ್ತಕ ಪ್ರತಿಯೊಬ್ಬರೂ ಅಗತ್ಯವಾಗಿ ಓದಲೇಬೇಕಾದ ಪುಸ್ತಕ.

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಂದ್ರಪ್ರಭಾ