Article

ಜಿನ್ನಾ: ಆಸಕ್ತಿದಾಯಕ ನಿರೂಪಣೆ

"ನೀವು ಪ್ರೀತಿಯಿಟ್ಟು ಕಳಿಸಿದ ಪುಸ್ತಕ ತಲುಪಿದೆ" ಎಂದು ಬರೆದ ಸಂದೇಶಕ್ಕೆ ತಕ್ಷಣವೇ,"ಓದಿ, ಜಗಳವಾಡೋಣ" ಎಂದು ಮಿತ್ರ ಬಿ. ಎಮ್. ಹನೀಫ್ ಪ್ರತಿಕ್ರಿಯಿಸಿದ್ದರು.

ಹನೀಫ್ ಅವರು 'ಜಿನ್ನಾ ಕೋಮುವಾದಿಯೇ?' ಎಂದು ಪುಸ್ತಕ ಬರೆದಿದ್ದಾರೆ. ಇತಿಹಾಸದ ವಿದ್ಯಾರ್ಥಿಯಾಗಿ ಆಧುನಿಕ ಭಾರತದ ಇತಿಹಾಸವನ್ನು ವ್ಯಾಪಕವಾಗಿಯೆ ಅಭ್ಯಾಸ ಮಾಡಿರುವ ನನಗೆ ಇದರಲ್ಲಿರುವ ವಸ್ತುವಿನ ಬಗ್ಗೆ ಆಸಕ್ತಿ ಇರಲಿಲ್ಲ. ಗಾಂಧೀಜಿಯ ರಾಜಕೀಯ ಪಟ್ಟುಗಳು, ಎದುರಾಳಿಯನ್ನು ಹಣಿಯುವ ವಿಧಾನಗಳು, ಜಿನ್ನಾ ಅವರ ಕುಟಿಲೋಪಾಯಗಳು, ಸೆಕ್ಯುಲರ್ ನೆಹರೂ ಸೆಕ್ಯುಲರ್ ಜಿನ್ನಾ ಮೇಲೆ ಮುಗಿಬೀಳುತ್ತಿದ್ದ ವಿಧಿ ವಿಧಾನಗಳು ಇವು ಯಾವುವೂ ನನಗೆ ಹೊಸ ವಿಷಯಗಳಲ್ಲ. ಆದರೆ ಇವೆಲ್ಲ ಗೊತ್ತಿಲ್ಲದವರಿಗೆ ಈ ಪುಸ್ತಕವು ವಸ್ತುವಾಗಿಯೆ ಬಹಳ ಉಪಯುಕ್ತವಾಗಿದೆ. ನನ್ನ ಆಸಕ್ತಿ ಇದ್ದದ್ದು ಈ ವಸ್ತುವನ್ನು ಹನೀಫ್ ಹೇಗೆ ನಿರೂಪಿಸಿದ್ದಾರೆ ಎಂಬ ಬಗ್ಗೆ.

ನಿರೂಪಣೆಯಲ್ಲಿ ಒಂದು ಸ್ಥಾವರ,ಇನ್ನೊಂದು ಜಂಗಮ. ಸ್ಥಾವರ ಯಾವುದೆಂದು ಕೇಳಿದರೆ ಅಂಬೇಡ್ಕರ್. ಯಾವುದೆ ಜಾತಿಯವರು, ಯಾವುದೆ ಧರ್ಮದವರು, ಯಾವುದೆ ಸಿದ್ಧಾಂತದವರು ಮತ್ತು ವಿಶ್ವದ ಯಾವುದೆ ಲೇಖಕರು ಅಂಬೇಡ್ಕರ್ ಅವರನ್ನು ವಿಮರ್ಶಿಸತಕ್ಕದ್ದಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಂಡಿರುವ ಧೋರಣೆ(ಕರ್ನಾಟಕದ ಮಟ್ಟಿಗೆ ಕುವೆಂಪು ಮತ್ತು ಭೈರಪ್ಪನವರ ಸಾಹಿತ್ಯ ಹಾಗೂ ಡಾ. ರಾಜ್ ಕುಮಾರ್ ಅವರ ಅಭಿನಯದ ಬಗ್ಗೆ ವಿಮರ್ಶೆಯನ್ನು ಸಾಂಸ್ಕೃತಿಕ ಲೋಕದಲ್ಲಿ ನಿಷೇಧಿಸಲಾಗಿದೆ). ಈ ನಿಲುವಿಗೆ ಬಿ. ಎಮ್. ಹನೀಫ್ ಕೂಡ ಬದ್ಧರಾಗಿದ್ದಾರೆ. ಆದರೆ ಈ ಕೃತಿಯೇ ಧ್ವನಿಸುವ ಹಾಗೆ,"ಒಬ್ಬರು ಹಿಂದೂಗಳ ನಾಯಕರಾಗಿದ್ದರೆ, ಮತ್ತೊಬ್ಬರು ಮುಸಲ್ಮಾನರ ನಾಯಕರಾಗಿದ್ದಾರೆ. ಇವರು ಇಂದಿನ ವೀರರು ಮತ್ತು ದೇವತಾ ಸ್ವರೂಪಿಗಳಾಗಿದ್ದಾರೆ"ಎಂದು ಅಂಬೇಡ್ಕರ್, ಗಾಂಧಿ ಮತ್ತು ಜಿನ್ನಾ ಬಗ್ಗೆ ಆಡುವ ಮಾತುಗಳು ಮತ್ತದರ ನಂತರದ ವಿಸ್ತರಣೆಯಲ್ಲಿ ಸತ್ಯಕ್ಕಿಂತ ಹೆಚ್ಚು ಇರುವುದು ವ್ಯಂಗ್ಯ. ನಿಜವಾಗಿ ಅತ್ಯಂತ ಸಮರ್ಪಕವಾದ ವಿಶ್ಲೇಷಣೆಯನ್ನು ಎಮ್. ಎನ್. ರಾಯ್ ಮಾಡಿರುವುದನ್ನು ಈ ಕೃತಿಯೇ ಹೇಳುತ್ತದೆ. ಆದರೆ ಎಮ್.‌ಎನ್. ರಾಯ್ ಅವರಿಗೆ ಹೆಸರಿಲ್ಲವಲ್ಲ.

ಇನ್ನೊಂದು ಜಂಗಮ ಸ್ವರೂಪವಿದೆ. "ಮುಸ್ಲಿಮರ ಹೆಸರಿನಲ್ಲಿ ಪ್ರತ್ಯೇಕ ದೇಶ ಕಟ್ಟಿಕೊಂಡು ಹೋದ ಜಿನ್ನಾ ಹೊಸ ದೇಶದ ಬಗ್ಗೆ ಕಟ್ಟಿಕೊಂಡಿದ್ದ ಕನಸುಗಳು ಯಾವುವೂ ಅಲ್ಲಿ ಸಾಕಾರಗೊಳ್ಳಲಿಲ್ಲ. ಪಾಕಿಸ್ಥಾನ ಇವತ್ತು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ, ಜಗತ್ತಿನ ಬಹುತೇಕ ದೇಶಗಳಿಂದ ತಿರಸ್ಕಾರಕ್ಕೆ ಒಳಗಾಗಿರುವ ದೇಶ" ಎನ್ನುತ್ತಾ ಜಿನ್ನಾ ಭಾರತೀಯ ಮುಸ್ಲಿಮರಿಗೆ ಅನ್ಯಾಯ ಮಾಡಿದವರು ಎಂದು ನಿರ್ದಾಕ್ಷಿಣ್ಯವಾಗಿ ಹನೀಫ್ ಹೇಳುತ್ತಾರೆ. ವರ್ತಮಾನದಲ್ಲಿ ಮುಸ್ಲಿಂ ಸಮುದಾಯದಿಂದ ಬಂದ ಲೇಖಕರು ಈ ರೀತಿಯೇ ಮಾತನಾಡಬೇಕು. ಆದರೆ ಈ ರೀತಿ ಮಾತನಾಡದೆ ತಮ್ಮವರ ತೆಕ್ಕೆಯಲ್ಲಿ ಅವಿತುಕೊಂಡು ಮುಸ್ಲಿಮರ ಎಲ್ಲ ತಪ್ಪುಗಳನ್ನೂ ಸಮರ್ಥಿಸುತ್ತಾ ಇತರರಲ್ಲಿ ಮುಸ್ಲಿಮರ ಬಗ್ಗೆ ಅನುಮಾನ ಹುಟ್ಟುವ ಹಾಗೆ ವರ್ತಿಸುವವರೇ ಜಾಸ್ತಿ. ಬಹುಶಃ ಮುಸ್ಲಿಮ್ ಸಮುದಾಯದಿಂದ ಬಂದ ಲೇಖಕರಿಗೆ ತಾವು ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎನ್ನಲು ಹನೀಫ್ ಅವರ ಈ ನಿಲುವು ಮಾರ್ಗದರ್ಶಿಯಾಗಬಲ್ಲುದು. ಹಾಗೆಂದು ಇದೊಂದು ತಂತ್ರಗಾರಿಕೆಯ ನಿಲುವಲ್ಲ. ನಿರೂಪಣೆಯ ವಿನ್ಯಾಸದಲ್ಲಿ ವೈಚಾರಿಕ ಪ್ರಾಮಾಣಿಕತೆ ಅರ್ಥವಾಗುತ್ತದೆ.

ಈ ಕೃತಿಯ ಅತ್ಯಂತ ಆಸಕ್ತಿದಾಯಕ ಅಂಶ ಗಾಂಧೀಜಿಯ ನಿರೂಪಣೆ. ಒಬ್ಬ ರಾಜಕಾರಣಿಯಾಗಿ ಗಾಂಧಿಯೂ ಎದುರಾಳಿಗಳನ್ನು ಹಣಿದವರೇ ಎಂಬುದು ನನಗೆ ಗೊತ್ತಿಲ್ಲದ ವಿಷಯವಲ್ಲ. ಅದೆಲ್ಲವನ್ನೂ ಹನೀಫ್ ವಾಚ್ಯವಾಗಿಯೂ, ಸೂಚ್ಯವಾಗಿಯೂ ಹೇಳಿದ್ದಾರೆ. ಸೆಕ್ಯುಲರ್ ಜಿನ್ನಾ ಮತೀಯ ರಾಷ್ಟ್ರವನ್ನೂ, ಧಾರ್ಮಿಕ ಗಾಂಧಿ ಸೆಕ್ಯುಲರ್ ರಾಷ್ಟ್ರವನ್ನೂ ನಿರ್ಮಿಸಿದ್ದರು. ಜಿನ್ನಾ ಕನಸು ಕಂಡ ರಾಷ್ಟ್ರ ನಿರ್ಮಾಣ ಜಿನ್ನಾ ಮರಣದೊಂದಿಗೆ ಮುಕ್ತಾಯವಾಗಿತ್ತು. ಗಾಂಧಿ ಕನಸು ಕಂಡ ರಾಷ್ಟ್ರದ ಆಶಯ ಇಂದಿರಾ ಗಾಂಧಿಯವರ ಹತ್ಯೆಯ ತನಕ ಕುಂಟುತ್ತಾ ಸಾಗಿದ್ದು ನಂತರ ಕಾಲು‌ ಮುರಿದು ಬಿದ್ದು ಹೋಯಿತು. ರಾಜಕಾರಣಿಗಳಾಗಿ ಜಿನ್ನಾ ಮತ್ತು ಗಾಂಧಿ ಇಬ್ಬರೂ ಈಗ ಅಪ್ರಸ್ತುತರೇ. ಆದರೆ ಗಾಂಧಿಯೊಂದಿಗೆ ಇರುವ ಋಷಿಯ ನೈತಿಕ ವರ್ಚಸ್ಸು, ತತ್ವಜ್ಞಾನಿಯ ಬೃಹತ್ ಜೀವನದೃಷ್ಟಿ ಗಾಂಧಿಯನ್ನು ಇನ್ನು ನೂರು ವರ್ಷಗಳ ಆಚೆಗೂ ಪ್ರಸ್ತುತರನ್ನಾಗಿ ಉಳಿಸುತ್ತದೆ. ಮತ್ತು ಗಾಂಧಿಯ ರಾಜಕಾರಣ ಅಪ್ರಸ್ತುತವಾದ ನಂತರವೂ ಗಾಂಧಿಗೆ ಗೊತ್ತಿರದ ದೇಶಗಳಲ್ಲಿ ಮತ್ತು ಭಾಷೆಗಳಲ್ಲಿ ಗಾಂಧಿಯ ಕುರಿತು ನಡೆಯುತ್ತಿರುವ ಅಧ್ಯಯನಕ್ಕೆ ಗಾಂಧಿಯ ಈ ವರ್ಚಸ್ಸು ಕಾರಣ. ಗಾಂಧಿಗಿರುವ ಈ ನೈತಿಕತೆಯ ವರ್ಚಸ್ಸಿನಿಂದಾಗಿ ಭಂಡರಲ್ಲದ ಯಾರಿಗೂ ಉಳಿದವರ ಬಗ್ಗೆ ಸಲೀಸಾಗಿ ಮಾತಾಡಿದ ಹಾಗೆ ಗಾಂಧಿಯ ಬಗ್ಗೆ ಮಾತನಾಡಲು ಬಿಡುವುದಿಲ್ಲ. ಗಾಂಧಿಯ ರಾಜಕೀಯ ತಂತ್ರಗಳನ್ನು ನಿರೂಪಿಸಿಯೂ ಗಾಂಧಿಯ ಕುರಿತ ಈ ಎಚ್ಚರವನ್ನು ಹನೀಫ್ ಅವರು ಪ್ರಜ್ಞೆಯ ಸ್ತರದಲ್ಲಿ ಕಾಪಾಡಿಕೊಳ್ಳುತ್ತಾ ಹೋಗುತ್ತಾರೆ.

ಇಡೀ ಕೃತಿ ದೇಶ ವಿಭಜನೆಯಲ್ಲಿ ಬ್ರಿಟಿಷರ ಪಾತ್ರ, ಜಿನ್ನಾ ಹಗೆತನ, ಗಾಂಧಿಯ ಪ್ರತಿಷ್ಠೆಯ ಪ್ರಶ್ನೆ, ಇತರ ನಾಯಕರ ಅಧಿಕಾರದಾಸೆ ಹೀಗೆ ಹಲವು ಮಗ್ಗುಲುಗಳನ್ನು ಹೇಳುತ್ತದೆ. ಗಾಂಧಿ ತನ್ನನ್ನು ಮುಸ್ಲಿಮರ ನಾಯಕ ಎಂದು ಒಪ್ಪಿಕೊಳ್ಳಬೇಕೆಂಬುದಷ್ಟೆ ಜಿನ್ನಾ ಅವರ ಆಸೆ. ಜಿನ್ನಾ ಅವರನ್ನು ಒಪ್ಪುವುದಿಲ್ಲ ಎನ್ನುವುದು ಗಾಂಧಿಯ ಹಠ. ಗಾಂಧಿ ಮೌಲಾನಾ ಅಜಾದ್ ರನ್ನು ಮುಸ್ಲಿಮರ ನಾಯಕ ಮಾಡಬಲ್ಲರು. ಆದರೆ ಜಿನ್ನಾ ಅವರನ್ನು ಒಪ್ಪುವುದಿಲ್ಲ. ಇದರಿಂದ ಜಿನ್ನಾ ಬೆಳೆಸಿಕೊಂಡ ಹಗೆತನ, ದ್ವೇಷ-ಇದೆಲ್ಲವನ್ನೂ ಯಶಸ್ವಿಯಾಗಿ ಬಳಸಿಕೊಂಡವರು ಬ್ರಿಟಿಷರು. ಬ್ರಿಟಿಷರೇ ರೂಪಿಸಿದ ವವೆಲ್ ಯೋಜನೆಯನ್ನು ಬಿದ್ದು ಹೋಗುವ ಹಾಗೆ ಮಾಡಿ;ಪಾಕಿಸ್ಥಾನವನ್ನು ನಾವು ಮಾಡಿಕೊಡುತ್ತೇವೆ ಎಂದು ಬ್ರಿಟಿಷ್ ಅಧಿಕಾರಿಗಳೇ ಜಿನ್ನಾ ಅವರಿಗೆ ಹೇಳುತ್ತಾರೆ. ಜಿನ್ನಾ ಒಂಟಿಯಾದದ್ದಲ್ಲ;ಜಿನ್ನಾ ಅವರನ್ನು ಒಂಟಿಯಾಗಿ ಮಾಡುತ್ತಾ ಹೋದದ್ದು ಹೇಗೆ ಎರಡು ರಾಷ್ಟ್ರಗಳ ದುರಂತವನ್ನು ರೂಪಿಸುತ್ತಾ ಹೋಯಿತು ಎಂಬುದನ್ನು ಕೃತಿ ಹೇಳುತ್ತದೆ.

ಒಂದು ಒಳ್ಳೆಯ ಕೃತಿ ಕೃತಿಕಾರನಿಗೇ ಗೊತ್ತಾಗದ ಹಾಗೆ ಒಂದು ಅನುಭವ ಶಿಲ್ಪವನ್ನು ನಿರ್ಮಿಸುತ್ತಾ ಹೋಗುತ್ತದೆ. ಈ ಕೃತಿಯಲ್ಲಿ ಮಾತ್ರವಲ್ಲ;ಸಾಮಾನ್ಯ ವಲಯದಲ್ಲೂ ದೇಶ ವಿಭಜನೆಯನ್ನು ತಡೆಯಬಲ್ಲವರು ಯಾರಿದ್ದರು ಎಂಬ ಪ್ರಶ್ನೆ ಜೀವಂತವಿದೆ. ಗಾಂಧಿ ತಡೆಯಬಲ್ಲವರಾಗಿದ್ದರು ಎನ್ನುವುದು ಇತಿಹಾಸದ ಅರಿವಿಲ್ಲದವರ ಗಾಂಧಿಯನ್ನು ಆರೋಪಿಸಲಿಕ್ಕಾಗಿ ಸೃಷ್ಟಿಸಿದ ಉತ್ತರ. ಜಗತ್ತಿನ ಯಾವ ದೇಶವೂ ಕಂಡರಿಯದ ಮಹಾನ್ ರಾಷ್ಟ್ರೀಯ ಚಳವಳಿ ದುರಂತದೆಡೆಗೆ ಸಾಗದಂತೆ ತಡೆಯಬಲ್ಲವರಿದ್ದದ್ದು ಗೋಪಾಲಕೃಷ್ಣ ಗೋಖಲೆ ಒಬ್ಬರೇ. "ಮುಸ್ಲಿಂ ಗೋಖಲೆ" ಎಂದು ಜನರಿಂದ ಕರೆಸಿಕೊಳ್ಳುವಷ್ಟು ಜಿನ್ನಾ ಗೋಖಲೆಯವರ ಅನುಯಾಯಿಯಾಗಿದ್ದರು. ಗಾಂಧಿಯೂ ಗೋಖಲೆಯವರ ಅನುಯಾಯಿಯೇ. ಗೋಖಲೆಯವರ ಸಾವು ಭಾರತದ ರಾಷ್ಟ್ರೀಯ ಚಳವಳಿಗೆ ದೊಡ್ಡ ಹೊಡೆತವಾಗಿತ್ತು. ದುರಂತದ ನಡುವೆಯೂ ಒಂದು ದೊಡ್ಡ ಬದುಕನ್ನು ನಿರ್ಮಿಸುವ ಶಕ್ತಿ ಗಾಂಧೀಜಿಯ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿಗೆ ಇತ್ತು. ಇದೇ ಈ ಕೃತಿಯ ಒಡಲಿನಿಂದ ಮೂಡಿ ಬರುವ ಅನುಭವ ಶಿಲ್ಪ.

ಕೃತಿಯ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: ಜಿನ್ನಾ ಕೋಮುವಾದಿಯೇ?

ಅರವಿಂದ ಚೊಕ್ಕಾಡಿ

Comments