Article

ಕಾಳೇಗೌಡ ನಾಗವಾರರ 'ಮಂಗಳಕರ ಚಿಂತನೆ'ಯ ಧ್ಯಾನ..!

ಪ್ರೊ.ಕಾಳೇಗೌಡ ನಾಗವಾರರ 'ಮಂಗಳಕರ ಚಿಂತನೆ' ಪುಸ್ತಕವೊಂದು ನನಗೆ ಅವರ ಸಾಹಿತ್ಯದ ಎಲ್ಲ ಮಗ್ಗಲುಗಳ ಚಿಂತನೆ, ಅವರ ಸಮಕಾಲೀನ ಬದುಕಿನ ಸಂವಾದದ ಸಾಹಿತ್ಯಕ ಚಿಂತನೆ, ಬಂಡಾಯ, ಪ್ರಗತಿಪರತೆಯ ಹೋರಾಟದ ಸಾಹಿತ್ಯದ ಒಟ್ಟು ಚಿಂತನೆ, ಹೀಗೆಯೇ ಸಾಹಿತ್ಯದ ಮತ್ತು ಹೋರಾಟದ ಎಲ್ಲ ಮಗ್ಗಲುಗಳ ಒಟ್ಟು ಸಾರದಂತೆ ಭಾಸವಾಯಿತು ನನಗೆ...

ಈ 'ಮಂಗಳಕರ ಚಿಂತನೆ'ಯಲ್ಲಿ ಅನೇಕ ವಿಭಾಗಗಳಿವೆ. ಅವರ ವೈಚಾರಿಕ ಲೇಖನಗಳು, ಅವರ ಸಾಹಿತ್ಯ ವಿಮರ್ಶೆ, ಅವರೊಂದಿಗೆ ನಡೆಸಿದ ಸಂದರ್ಶನಗಳು, ಅವರು ಬರೆದ ಮುನ್ನುಡಿಗಳು, ವಿಚಾರವಾದ ಮತ್ತು ನಾನಾ ಬಗೆಯ ಹೋರಾಟಗಾರರ ವ್ಯಕ್ತಿಗತ ಲೇಖನಗಳು, ಜಾನಪದ ಪರಂಪರೆಯ ವೈಚಾರಿಕ ಲೇಖನಗಳು, ಅಲ್ಲದೇ ವ್ಯಕ್ತಿತ್ವ ಕುರಿತ ಲೇಖನಗಳು, ಅವರ ಸಂದರ್ಶನಗಳು, ಅವರ ಬರಹದ ಬಗೆಗಿನ ಲೇಖನಗಳು ಮತ್ತು ಪ್ರೊ.ಕಾಳೇಗೌಡ ನಾಗವಾರರು ಹಲವಾರು ಹೋರಾಟಗಾರರ, ಸಾಹಿತಿಗಳೊಂದಿಗೆ ನಡೆಸಿದ ಪತ್ರ ವ್ಯವಹಾರ ಮತ್ತು ಅವರ ಬದುಕಿನ ಹೆಜ್ಜೆಗಳು ಹೀಗೆಯೇ ಹಲವು ಹತ್ತು ಬಗೆಯ ಲೇಖನಗಳಿವೆ...

ಈ ಬಿಡಿ ಲೇಖನ ಮಾಲಿಕೆಯ ಸಂಗ್ರಹದಲ್ಲಿ ಆಯಾ ಕಾಲಘಟ್ಟದ ಲೇಖನಗಳಾಗಿವೆ. ಅಲ್ಲದೇ ಇಲ್ಲಿ ವಿವಿಧ ಸ್ತರದ ಆಯಾಮಗಳನ್ನು ಕಾಣಬಹುದಾಗಿದೆ. ಅದ್ದರಿಂದ 'ಮಂಗಳಕರ ಚಿಂತನೆ' ಲೇಖನ ಮಾಲೆಯ ಪ್ರತಿಯೊಂದು ಲೇಖನವನ್ನೂ ಬಿಡಿಯಾಗಿಯೇ ಪರಿಚಯಾತ್ಮಕ ಲೇಖನ ಬರೆಯಬೇಕಾದ್ದರಿಂದ ಒಟ್ಟು ಕೃತಿಯ ಬಿಡಿಬಿಡಿಯಾದ ಪರಾಮರ್ಶೆ ಮಾಡಿದ್ದೇನೆ.

'ಶ್ರಮಜೀವಿಗಳ ಋಣದ ಮಕ್ಕಳು' ಎನ್ನುವ ಲೇಖನದಲ್ಲಿ ಸಾಂಪ್ರದಾಯಿಕ ನಂಬಿಕೆ, ಆಚರಣೆಗಳು ಮತ್ತು ಮಾಮೂಲಿಯಾದ ಜಡತ್ವವೇ ಮಡುಗಟ್ಟಿದ ರೀತಿಯ ಈ ಸಮಾಜದಲ್ಲಿನ ಪುರೋಹಿತಶಾಹಿ ಮತ್ತು ಸರ್ವಾಧಿಕಾರಿ ಧೋರಣೆಗಳು ಕಿಂಚಿತ್ತಾದರೂ ಅಲುಗಾಡಲು ಆರಂಭಿಸಿವೆ. ಈ ಅಲುಗಾಟವು ಇನ್ನಷ್ಟು ಪರಿಣಾಮಕಾರಿಯಾಗಿವೂ ಆದ ಬಗೆಬಗೆಯ ರೀತಿಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ನಿರಂತರವಾಗಿ ಆಗುತ್ತಿರಲಿ. ಎಂಬ ಆಶಯವೂ ಲೇಖಕರದ್ದಾಗಿದೆ.

'ಬುದ್ದ ದೇವನ ವಿಶ್ವಜ್ಞಾನ'ದಲ್ಲಿ ಭಾರತೀಯ ಪರಂಪರೆಯಲ್ಲಿ ಕಂಡುಬರುವ ಅತ್ಯಂತ ಹೆಚ್ಚಿನ ಜೀವಪರ ಕಾಳಜಿಗಳನ್ನು ಕಾಣಿಸಿದ್ದಾರೆ. ಅಂಬೇಡ್ಕರ್, ಲೋಹಿಯಾ, ಪೆರಿಯರ್ ಕುರಿತ ಲೇಖನದಲ್ಲಿ ಆಧುನಿಕ ಭಾರತ ಕಂಡ ಅಸಾಧಾರಣ ಹೋರಾಟಗಾರರ ಕುರಿತು ಲೇಖನ ಬರೆಯಲಾಗಿದೆ. ಲೇಖನ ಹೆಣ್ಣು- 'ಸ್ತ್ರೀಚೈತನ್ಯ'ದಲ್ಲಿ 'ಗಂಧವತಿಪೃಥ್ವಿ' ಎಂದು ಕರೆಯಲ್ಪಟ್ಟ ಭೂಮಿ ಕುರಿತ ಲೇಖನದಲ್ಲಿ ಸ್ತ್ರೀ ಚೈತನ್ಯದ ಅಗಾಧವಾದ ಶಕ್ತಿ ಮತ್ತು ಈ ಸೃಷ್ಟಿಯ ಬಗೆಗೆ ಗಹನವಾದ ವಿವರಣೆಯಾಗಿದೆ.

'ಪ್ರಜಾಪ್ರಭುತ್ವದ ಒಡಲ ತಾಯ್ತನ' ಲೇಖನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ನಡೆಸುತ್ತಿರುವ ದಲಿತ ಸಾಹಿತ್ಯದ ಮೊದಲ ತಲೆಮಾರಿನ ಲೇಖಕರ ಕುರಿತ ಮಹತ್ವ ಪೂರ್ಣವಾದುದು.'ಕೊಡಗಿನ ಘನತೆಗೆ ತಕ್ಕುದಲ್ಲದ ನಡತೆ' ಲೇಖನದಲ್ಲಿ ಅನೇಕ ಕಾರಣಗಳಿಗಾಗಿ ನಮ್ಮ ನಾಡಿನ, ರಾಷ್ಟ್ರೀಯ ಸುಂದರ ಭೂಪ್ರದೇಶಗಳಲ್ಲಿ ಒಂದಾದ ಕೊಡಗು ಪ್ರಮುಖವಾದುದು. 'ಜನರ ನೋವಿಗೆ ಮಿಡಿವ ಪ್ರಾಣಮಿತ್ರ' ಲೇಖನದಲ್ಲಿ ಬಂಡಾಯ ಸಾಹಿತ್ಯ- ಸಂಘಟನೆ ಅನಿವಾರ್ಯತೆಯನ್ನು ಹೇಳುತ್ತಾರೆ. ಸಾಹಿತ್ಯ ವಿಮರ್ಶೆ' ವಿಭಾಗದಲ್ಲಿ 9 ಅಧ್ಯಾಯಗಳಿವೆ. ಅವುಗಳಲ್ಲಿ ಹರಿಹರ, ಸರ್ವಜ್ಞ, ಆತ್ಮಗೌರವದ ಪ್ರತೀಕಗಳು, ಬೆಚ್ಚನೆಯ ಸಂವೇದನೆ, ಜೀವನ ಪ್ರೀತಿ, ಸಾಹಿತ್ಯದ ಜವಾಬ್ದಾರಿ, ಸಾಹಿತ್ಯದಿಂದ ಏನು ಪ್ರಯೋಜನ, ಹೀಗೆ ಕೆಲವೊಂದಿಷ್ಟು ಲೇಖನಗಳಿವೆ. .

ಅಂತಯೇ ಪ್ರೊ. ಕಾಳೇಗೌಡ ನಾಗವಾರರು ಕೆಲವು ಪುಸ್ತಕಗಳಿಗೆ ಬರೆದ ಮುನ್ನುಡಿಗಳಿವೆ. ''ಪಯಣದ ಹಾದಿಯಲ್ಲಿ' ಅಧ್ಯಾಯದಲ್ಲಿ ಕೆಲ ವ್ಯಕ್ತಿ ಚಿತ್ರಣ ಬರೆದಿದ್ದಾರೆ. 'ಬೇಕಾದ ಸಂಗಾತಿ" ಎಂಬ ಈ ಕೃತಿಯು ವಾಸ್ತವವಾಗಿ ಜನಸಮುದಾಯದ ಒಟ್ಟು ಬದುಕಿನ ಚಿತ್ರಣವಿದೆ. 

ಹೀಗೆಯೇ ಕಾಳೇಗೌಡ ನಾಗವಾರರು ತಮ್ಮ ಜಾನಪದ ಕ್ಷೇತ್ರದ ಅನುಭವವನ್ನು 'ಕ್ಷೇತ್ರಕಾರ್ಯದ ಅನುಭವ' ಅಧ್ಯಾಯದಲ್ಲಿ ಹಂಚಿಕೊಂಡಿದ್ದಾರೆ. ಹಾಗೇ 'ಲಕ್ಕಮ್ಮಜಿಯೊಡನೆ ಸಂದರ್ಶನ'ಯೂ ಇದೆ... ಪ್ರೊ.ಕಾಳೇಗೌಡ ನಾಗವಾರರನ್ನು ಅವರ ಕೆಲ ಬರಹಗಳ ಕುರಿತು ಕೆಲವರು ಮಾಡಿದ ಸಂದರ್ಶನಗಳು ಇವೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವು ಕೆ. ಲಕ್ಕಣ್ಣವರ