Article

ಬದುಕನ್ನು ಗ್ರಹಿಸಿದ ಹಾಗೂ ವಾಸ್ತವದ ಅರಿವಿರುವ ಕವಿತೆಗಳ ಸಂಕಲನ ‘ಕಾಡ ಕತ್ತಲೆಯ ಮೌನ ಮಾತುಗಳು’

ಕವಿತೆ ನಮ್ಮೊಳಗೆ ಯಾವಾಗ ಹುಟ್ಟುತ್ತದೆ?

ಯಾವ ಕವಿಯೂ ಉತ್ತರಿಸಲಾಗದ ಪ್ರಶ್ನೆ ಇದು. ನಿಯತಿಯ ನಿಯಮದಂತೆ ಜಗವೆಲ್ಲ ನಡೆದಿರುವಾಗ ಆ ನಿಯಮವನ್ನೇ ಪರಿಕಿಸುವ, ಪ್ರಶ್ನಿಸುವ, ನಿಯತಿಯನ್ನೇ ತನ್ನಲ್ಲಿ ಪುನರ್ ಸೃಷ್ಟಿಸಿಕೊಳ್ಳುವಾಗ ಒಂದು ಶಬ್ದ ಹೊಮ್ಮುತ್ತದೆ. ಓಂಕಾರಕ್ಕಿಂತ ಕಿಂಚಿದೂನ ಆ ಶಬ್ದ ಯಾರಿಗೆ ಕೇಳುತ್ತದೋ ಅವ ಶಬ್ದದ ಬೆನ್ನು ಹತ್ತುತ್ತಾನೆ. ಅಕ್ಷರಗಳ ಏಣಿ ಹಿಡಿದು ಸರ್ರನೆ ಮೇಲೇರುವ ಈ ಹಾವು ಏಣಿ ಆಟದಲ್ಲಿ ಧುತ್ತನೇ ಎದುರಾಗುವುದು ಬದುಕು ಎಂಬ ಪೂರ್ವನಿರ್ಧಾರಿತ ನಿಯಮಗಳ ಹಾವು. ಸರ್ರನೇ ಏರಿದವರನ್ನೂ ಜರ್ರನೇ ಕೆಳಗಿಳಿಸುವ, ಬದುಕ ನೆಲೆ ನೆಲ ಪರಿಚಯಿಸುವ ಈ ಆಟದಲ್ಲಿ ಆ ಶಬ್ದವ ಮರೆಯದಂತೆ ಮತ್ತೆ ಮತ್ತೆ ಅಕ್ಷರದ ಏಣಿ ಹತ್ತುವಂತೆ ಮಾಡುವ ಹುಕಿ ಇದೆಯಲ್ಲಾ - ಅದು ಎಲ್ಲಾ ಬರಹಗಳ ಮೂಲ ಕಾರಣ. ಅಂತಹ ಹುಕಿ ಹುಟ್ಟುವ ಸಮಯವೇ ಕವಿತೆ ಎಂಬ ಗೀಜಗ ಬರೆವವನ ಎದೆಯಲ್ಲಿ ಅಕ್ಷರದ ಗೂಡು ಕಟ್ಟುತ್ತದೆ!

ಬಹುತೇಕ ಹರೆಯ ಹೊಮ್ಮುವಾಗ - ಮೀಸೆ ಮೊಲೆ ಮುಡಿ ಮೂಡುವಾಗ- ಎಲ್ಲರ ಎದೆಯಲ್ಲೂ ಗೀಜಗವೊಂದು ಕೊಕ್ಕ ತಿರುಗಿಸಿ ಗೂಡ ಹೆಣೆಯುವುದು ಸಹಜ. ಆದರೆ ಆ ಎಳೆ ಅಕ್ಷರದ್ದೇ ಆಗಬೇಕೆಂದಿಲ್ಲ. ಶೃತಿ ಬದ್ದವಾದ ಆ ಹೆಣೆವ ಕಾಯಕದಲ್ಲಿ, ಮಾತ ಮೀರಿದ ಮಾಯಕದಲ್ಲಿ ಆ ಶಬ್ದವೇ ರಾಗವಾಗಿ ಅನುರಾಗವಾಗಿ ಬಣ್ಣವಾಗಿ ಹಲವು ಬಣ್ಣಗಳ ಬಿಲ್ಲಾಗಿ ನೆಲ ಮುಗಿಲ ಸಂಧಿಸಿದ್ದಕ್ಕೆ ಅವರವರೇ ಸಾಕ್ಷಿ. ಅಂತಹ ಸಾವಿರಾರು ಸಾಕ್ಷಿಗಳಲ್ಲಿ ಕೆಲವು ಮಾತ್ರ ಅಕ್ಷರದ ಪೋಷಾಕು ತೊಟ್ಟುಕೊಳ್ಳುತ್ತದೆ. ಆಗ ಅದು ಕವಿತೆ, ಕತೆ,..... ಮೊದಲಾದ ರೂಪಗಳಲ್ಲಿ ಮೆರವಣಿಗೆ ಹೊರಡುತ್ತದೆ. ಹಾಗೆ ಮೆರವಣಿಗೆ ಹೊರಟ ಆ ದಿಬ್ಬಣದ ದಾರಿಯಲ್ಲಿ ನಾನೂ ಇದ್ದೆ. ನನ್ನೊಂದಿಗೆ ಹೆಜ್ಜೆ ಹಾಕಿದ್ದವರು ಹಲವರು. ಮುನ್ನ ತಲೆಮಾರುಗಳೇ ನಡೆದು ಮೂಡಿದ್ದ ಆ ಹಾದಿಯಲ್ಲಿ ಹೆಜ್ಜೆ ಮೂಡಿಸಿದ್ದವರಲ್ಲಿ ಕೆಲವರು ಮೈಲಿಗಲ್ಲೂ ನೆಟ್ಟಿದ್ದಾರೆ. ಹೆಜ್ಜೆಗಳಲ್ಲಿ ಗೆಜ್ಜೆಯ ಸದ್ದನ್ನು ಮೂಡಿಸಿದ್ದವರಲ್ಲಿ ಹಲವರು ಕಾಲಾಂತರದಲ್ಲಿ ಆ ಗೆಜ್ಜೆ ನಾದವನ್ನು ಕೇಳಿಸದಷ್ಟು ಮೆಲುವಾಗಿಸಿದ್ದಾರೆ, ಕೆಲವರು ಆ ಮೆಲು ನಾದದೊಂದಿಗೆ ತಾವೂ ಲುಪ್ತರಾಗಿದ್ದಾರೆ!

ಹಾಗೆ ದಿಟ್ಟ ಹೆಜ್ಜೆಗಳ ಗಟ್ಟಿ ಗೆಜ್ಜೆ ನಾದ ಮೂಡಿಸಿದ್ದವರಲ್ಲಿ ಅಂಜನಾ ಹೆಗಡೆ ದೊಡ್ಮನೆ ಯವರೂ ಒಬ್ಬರು. ೨೦೦೩ ರಲ್ಲಿ ಪ್ರಕಟವಾದ ಅವರ ಮೊದಲ ಕವನ ಸಂಕಲನ "ಕಾಡ ಕತ್ತಲೆಯ ಮೌನ ಮಾತುಗಳು" ಕೃತಿಯ ಕವಿತೆಗಳು ಹೊಸ ಕವಯತ್ರಿಯ ಮೊದಲ ಕವಿತೆಗಳಂತೆ ಭಾಸವಾಗಿರಲಿಲ್ಲ. ತುಸು ವಾಚಾಳಿ ಅನ್ನಿಸಿದರೂ ಪೋಣಿಸಿದ ಮಾತುಗಳಲ್ಲಿ ಅಡಕವಾಗಿದ್ದ ಆ ಮೌನದ ಗಹನತೆ ಮತ್ತು ಘನತೆ ಅಚ್ಚರಿ ಮೂಡಿಸುವಂತಹದು.

"ಹೊಸ ಜನಾಂಗ ಲೋಕವನ್ನು ಹೇಗೆ ಗ್ರಹಿಸುತ್ತಿದೆ ಹಾಗೂ ಅದಕ್ಕೆ ತನ್ನನ್ನು ಹೇಗೆ ತೆರೆದುಕೊಳ್ಳುತ್ತಿದೆ" ಎಂಬ ಕುತೂಹಲದಿಂದಲೇ ಹಿರಿಯ ತಲೆಮಾರುಗಳು ಹೊಸಬರನ್ನು ಓದುವ ಕೌತುಕ ಮತ್ತು ಜರೂರತ್ತಿನೊಂದಿಗೆ ಒಳ ಹೊಕ್ಕ ಮುನ್ನುಡಿಕಾರ್ತಿ ಹಿರಿಯ ಕವಯತ್ರಿ ಹೆಚ್ ಎಲ್ ಪುಷ್ಪ ರವರು ಗುರುತಿಸಿರುವ: ಅಂಜನಾರ ಕವಿತೆಗಳಲ್ಲಿ ಇರುವ ನಿರರ್ಗಳವಾದ ಮಾತುಗಾರಿಕೆ, ಮತ್ತು ಸಂವೇದನಾಶೀಲ ವ್ಯಕ್ತಿಯ ಸಹಜವಾದ ತಲ್ಲಣ, ಕಾಡುವ ವಿಷಾದ ಪ್ರತಿ ಕವಿತೆಯನ್ನೂ ಹೊಗುವಾಗ ಇದಿರಾಗುತ್ತವೆ.

'ಅಕ್ಕನಂತೆ ರಾತ್ರಿಯ ಕತ್ತಲಿಗೆ
ಕಣ್ಣು ಕೊಡಲಿಲ್ಲ'

ಎಂಬ ಕವಯತ್ರಿ

'ಅಮ್ಮ
ದಯವಿಟ್ಟು ಅಮ್ಮ…
ನನಗೆ ನೀನಾಗುವುದು ಬೇಕಿಲ್ಲ
ಆಗಸದಲ್ಲಿ ಹಾರಲು ಬಿಡು
ತೇಲುತ್ತಾ ತೇಲುತ್ತಾ ಮೇಲೇರಬೇಕು'
ಎಂದೂ ಹೇಳುತ್ತಾರೆ.

'ಅಕ್ಕ' ಎಂಬುದು ಕನ್ನಡ ಕಾವ್ಯ ಸಂದರ್ಭ ಮಹಾದೇವಿಯ ದಾರ್ಶನಿಕತೆಯನ್ನು ವಿಶದೀಕರಿಸಲು ಬಳಸುವ ಪ್ರತಿಮೆ. ಆದರೆ ಅಂಜನಾ ಆ ಪ್ರತಿಮೆಯನ್ನು ಸ್ವಕೀಯ ಮತ್ತು ಸಾರ್ವಕಾಲಿಕ ಅರ್ಥದಲ್ಲಿ ಬಳಸಿದ್ದಾರೆ. ಅಕ್ಕ ದಾರ್ಶನಿಕಳೂ ಹೌದು, ತನ್ನದೇ ತಲೆಮಾರಿನ ಹಿರಿಯಳೂ ಹೌದು. ಆಕೆ ರಾತ್ರಿಯ ಕತ್ತಲೆಗೆ ಕಣ್ಣು ಕೊಟ್ಟವಳು. ಈ ಕೊಡುವಿಕೆಯಲ್ಲಿ ಕೊಡುಗೆಯೂ ಇದೆ, ತ್ಯಾಗವೂ ಇದೆ. ಕಣ್ಣು ಕೊಟ್ಟರೂ ಕಾಣ ಬಯಸದ ಆ ಕತ್ತಲೆಯನ್ನು ಅರಿತ ಮನವೇ ಹಿರಿಯ ತಲೆಮಾರಿನ ಅಮ್ಮನಿಗೆ -ಪರಂಪರೆಯ ಪ್ರತಿನಿಧಿಗೆ- ನಿರಾಕರಣೆಯ ಅಹವಾಲು ಸಲ್ಲಿಸುತ್ತದೆ. ಹೊಸ ತಲೆಮಾರಿಗೆ ತನ್ನ ತಾಯಿಯಂತೆ ಆಗುವುದು ಬೇಕಿಲ್ಲ. ಅದು ಆಗಸದಲ್ಲಿ ಹಾರಬಯಸುವ ಸ್ವಾತಂತ್ರ್ಯದ, ತೇಲುತ್ತಾ ಮೇಲೇರಬಯಸುವ ಮುಕ್ತತೆಯನ್ನು ಬಯಸುವಂತಹದು. ಇಂತಹ ಹೊಸ ಯುಗದ ಅವಸರದ ಅಳಲಿಗೆ ಮನೆಯನ್ನು ಸ್ಥಾಪಿತ ನೆಲದ ಬದಲು ಬೇರೆಡೆ ಕಟ್ಟುವ ಹುಮ್ಮಸ್ಸು.

ಆದರೂ ಅಕ್ಕನ ಹಾದಿಯಲ್ಲೇ ನಡೆಯುವ ಅನಿವಾರ್ಯತೆಯ ಅರಿವಿರುವ ವಾಸ್ತವವಾದಿ ಕವಯತ್ರಿಗೆ "ಬದುಕಿಗೆ ಕವನಕ್ಕೆ ಎಲ್ಲಿಯ ಹೋಲಿಕೆ?" ಎಂಬ ಪ್ರಶ್ನೆಯ ಅಕ್ಕ 'ನೀನೂ ಕೂಡಾ ಇಲ್ಲಿಗೆ ಸೇರುವವಳು' ಎಂದಾಗ ಕಾವ್ಯದ ವಾಸ್ತವ 'ಕವನದಿಂದ ಹೊರಬರಲಾಗಲಿಲ್ಲ' ಎಂಬ ಅರಿವ ಮೂಡಿಸುವಂತಿದೆ. ಹಾಗಾಗಿ ಕವಿತೆಯ ಕೊನೆಗಿನ ಪ್ರಖರ ವಾಸ್ತವ-
" ಮಣ್ಣಿನ ವಾಸನೆಯೊಂದಿಗೆ ಚಿಗುರಿದ್ದಿಲ್ಲ
ಕಂಡಿದ್ದನ್ನೆಲ್ಲಾ ಕೊಯ್ದು ಬಿಡುವ ಆತುರದಲ್ಲಿ
ನಿದ್ದೆಗೆಟ್ಟಳೇನೋ ನಿಜ
ಅಕ್ಕನಂತೆ ರಾತ್ರಿಯ ಕತ್ತಲೆಗೆ
ಕಣ್ಣು ಕೊಡಲಿಲ್ಲ;
ಕತ್ತಲೆ ಕಲಿಸುವ ಪಾಠವನ್ನು ಕಲಿಯಲಿಲ್ಲ;
ಬೆಳಗನ್ನೂ ಸುಂದರವಾಗಿ ಅನುಭವಿಸಲಿಲ್ಲ.."
ಎಂಬ ವಾಸ್ತವ ಭಾವ ವಿಷಣ್ಣತೆ ಮೂಡಿಸುತ್ತದೆ.

ಹಾಗೆಂದು ನಿರಾಶೆಯೇ ಇಲ್ಲಿ ಕಾವ್ಯವಾಗಿಲ್ಲ. ಜಿನುಗುವ ದ್ರವಕ್ಕೊಂದು ಅಸ್ತಿತ್ವ, ಜೇಡನ ಸಾಮರ್ಥ್ಯ ಬಲ್ಲ ಈ ಜೀವನ ಪ್ರೀತಿಗೆ
'ಒಟ್ಟಿನಲ್ಲಿ ಪೂರ್ಣವಾಗಿದ್ದಕ್ಕೆ ಧನ್ಯತೆ' ಇದೆ. ಫಲ ನೀಡದೇ ಹರಿದು ಹೋದೀತು ಎಂಬ ಭಯವಿದ್ದರೂ ಪಟ್ಟು ಬಿಡದ ಯತ್ನ ಕಲಿಸುವ ಪಾಠಗಳಿವೆ. ಎಂದೇ ಕವಯತ್ರಿ
"ಮೂಲೆಯಲ್ಲಿ ಸ್ಥಾನ ಕಂಡರೂ
ಜೇಡನ ಬಲೆ
ಎದೆಯಲ್ಲಿ ಚಿಮ್ಮಿಸುತ್ತದೆ ಜೀವ ಸೆಲೆ"
ಎಂದಿದ್ದಾರೆ.

'ಬದುಕಿನ ರೇಖೆಗಳೇ ಹೀಗೆ' ಎನ್ನುವ ವಾಸ್ತವ ಎಂಬುದೂ ನೈರಾಶ್ಯದ ಮಡುವಿನಿಂದ ಹೊಮ್ಮಿದ್ದಲ್ಲ. ಬದಲಾಗಿ ಬಲವಿಲ್ಲದ ಛಲ ಹೊರಳುವ, ಹೊರಳುವಿಕೆಯಲ್ಲಿರುವ ನರಳುವಿಕೆಯನ್ನು ಅರಿತಿರುವಂತಹದು. ಎಂದೇ " ಬದುಕಿನ ಛಂದಸ್ಸುಗಳಿಗೆ
ಲಘು - ಗುರುಗಳೊಳಗಿನ ವ್ಯತ್ಯಾಸ
ಅರಿವಾಗುವ ಹೊತ್ತಿಗಾಗಲೇ
ಇನ್ನಷ್ಟು ವಕ್ರವಾಗುತ್ತವೆ
ಬಾಳ ರೇಖೆಗಳು"
ಬದುಕಿಗೊಂದು ಸಿದ್ಧ ಛಂದಸ್ಸಿದೆ. ಯಾರೋ ಹಾಕಿಟ್ಟ ಗುರು ಲಘು ಪ್ರಸ್ತಾರದಲ್ಲೇ ಬದುಕು ಅರಳಬೇಕಿದೆ. ಹಸ್ತ ಸಾಮುದ್ರಿಕದಂತೆ ಈ ಕೊರೆದ ಗೆರೆಗಳೇ ಬದುಕ ಬರಹವಾಗುವಾಗ ಅವುಗಳ ಸರಳತೆ ಅಳಿಸಿ ವಕ್ರತೆ ಒಡಮೂಡುವ ಗ್ರಹಿಕೆಯೂ ವಾಸ್ತವತೆಯ ವಿಷಣ್ಣತೆಯದು.

ಅಂಜನಾರ ಕವಿತೆಗಳಲ್ಲಿ ಬದುಕನ್ನು ಗ್ರಹಿಸಿದ ವಿಸ್ತಾರವಿದೆ, ಛಲವಿದೆ, ಸೋಲಿದೆ, ಕೊರಗಿದೆ, ವಾಸ್ತವದ ಅರಿವಿದೆ ಮತ್ತು ಪ್ರೀತಿ ಪ್ರೇಮದ ಜೀವನೋತ್ಸಾಹವೂ ಇದೆ.

"ಮಹಡಿಯ ಮೇಲೇ ಇದ್ದರೂ
ಕಾರಣವಿಲ್ಲದ ಈ ಜ್ವರದಿಂದ
ತಪ್ಪಿಸಿಕೊಳ್ಳಲಾಗುವುದಿಲ್ಲ" ಎಂಬುದು ಈ ಸಂಕಲನದ ನಿಶಿತ ವಾಸ್ತವ.

"ನಾ ಯಾಕಾಗಿ ಬರೆಯುತ್ತಿದ್ದೇನೆ?" ಎಂಬ ಪ್ರಶ್ನೆ ಕವಯತ್ರಿಯೇ ಕೇಳಿಕೊಳ್ಳುವಾಗ ವಾಚಾಳಿತನ ಬಂದ ಅರಿವು ಕವಯತ್ರಿಗೂ ಇದೆ.

ಆದರೆ "ವಸ್ತುವಿನ ಗ್ರಹಿಸುವ ಕ್ರಮ ಫ್ರೆಶ್ ಆಗಿದ್ದು ಅದನ್ನು ಕಟ್ಟಿಕೊಡುವ ಕ್ರಿಯೆಯಲ್ಲಿ ವಾಚಾಳಿತನ ಅಲ್ಲಲ್ಲಿ ಸಲೀಸುತನಕ್ಕೆ ನಡೆಯೊಡ್ಡುತ್ತದೆ" ಎಂದಿದ್ದಾರೆ ಮುನ್ನುಡಿಕಾರರು.

೨೦೦೩ ರ "ಕಾಡ ಕತ್ತಲೆಯ ಮೌನ ಮಾತುಗಳು" ಕವಿತೆಗಳಿಗೆ ಈಗಾಗಲೇ ಒಂದೂವರೆ ದಶಕವಾಗಿದೆ. ಅವೇ ಮಾತುಗಳು ಕಾಡಿನಿಂದ ಹೊರಟು ಕಾಂಕ್ರೀಟ್ ಕಾಡಿನ ಗ್ರಾನೈಟ್ ನೆಲದ ಮೇಲೆಯೂ ಹೊರಳಾಡಿವೆ.‌ ಆದರೆ ಕವಯತ್ರಿಯ ಅದೇ ಕಾವ್ಯ ದನಿ ಮತ್ತಷ್ಟು ಸ್ಪುಟವಾಗಿದೆ.

"ಕುತ್ತಿಗೆಯ ತುಸುಬಾಗಿಸಿ
ಬಿಳಿಯ ಸ್ಟ್ರೈಪ್ ಗಳೊಳಗೆ
ಬೆರಳುಗಳ ಬಂಧಿಸಿ
ದಿಟ್ಟಿಸಿದೆ;
ಕನ್ನಡಿಯೊಳಗಿನ ಪಾದಗಳ
ಮೇಲೆ ಹೊಳೆದವು
ಬಿಡಿಸಿಟ್ಟ ಬಿಳಿ ಹೂಗಳು!
ಕೊರೆದಿಟ್ಟ
ಪುಟ್ಟಪುಟ್ಟ ಹೃದಯಗಳೊಂದಿಗೆ
ಗುಲಾಬಿ ನಕ್ಷತ್ರಗಳು!
ಜೊತೆಯಾದವು

ಹೆಜ್ಜೆಗಳ ನೋವು ನಲಿವಿಗೆ;
ನೇಲ್ ಪಾಲಿಷ್ ಗಳ
ಕೂಡಿಟ್ಟ ಕನಸಿಗೆ!
ನನ್ನ ನಿದ್ದೆಗೆ ಆಕಳಿಸಿ
ಎದ್ದಾಗಲೊಮ್ಮೆ ಮೈಮುರಿದು
ಕೂಡಿಕೊಂಡವು
ಹಗಲು ರಾತ್ರಿಗಳಿಗೆ
ಬಾತ್ ರೂಮು ಬಾಲ್ಕನಿ ಟೆರೆಸು
ನಿರ್ಭಯವಾಗಿ ಅಲೆದೆವು

“ದೇವರಮನೆಗೆ ಪ್ರವೇಶವಿಲ್ಲ” ಎಂದೆ
ಮುನಿಸಿಕೊಂಡವು
“ಪ್ಲೀಸ್” ಎಂದು ಪಟಾಯಿಸಿದೆ
ಎಲ್ಲ ಸಲೀಸು
ಪ್ರೈಸ್ ಟ್ಯಾಗ್ ಇಲ್ಲದ ಪ್ರೀತಿ
ಮಾರಿದೆವು; ಖರೀದಿಸಿದೆವು
ಮನಸ್ಸೊಂದು ಫ್ಲೀ ಮಾರ್ಕೆಟ್ಟು"


ಮುದ್ದಾದ ಜೋಡಿ ಚಪ್ಪಲಿಯ ಪ್ರತಿಮೆಯ ಈ ಕವಿತೆ ಕವಯತ್ರಿ ಬೆಳೆದ ಪರಿಯನ್ನು ಹೇಳುತ್ತದೆ. ಆಧುನಿಕ ಜಗತ್ತಿನ ಮೌನದ ಮಾತುಗಳನ್ನೂ ನಿರ್ವಚಿಸುತ್ತಿದೆ. ಆದರೆ ಕವಯತ್ರಿಯ ವಾಚಾಳಿತನ ಹಾಗೇ ಇದೆ. ಅದು ಕವಿತೆಗಳಲ್ಲಿ ಸಾಂದ್ರವಾಗಿ ಹರಳುಗಟ್ಟುವ ಕಾಲ ಸಮೀಪದಲ್ಲಿದೆ. ಅದು ಸನ್ನಿಹಿತವಾಗಬೇಕಿದೆ. ಇದು ಆಶಯವಷ್ಟೇ ಅಲ್ಲ, ಅಂಜನಾರ ಕವಿತೆಗಳು ಕಟ್ಟಿಕೊಟ್ಟ ಭರವಸೆ ಕೂಡಾ.

ಆನಂದ್ ಋಗ್ವೇದಿ