Article

ಕಾಡುವ 'ಮಲೆ‌ನಾಡಿನ ರೋಚಕ ಕಥೆಗಳು'

ರೈತ ಬದುಕು ಜೀವ‌ಪರ. ತಾನು ಬದುಕಿಕೊಂಡು , ಒಂದಷ್ಟು ಪ್ರಾಣಿ, ಸಸ್ಯಗಳಿಗೂ ಜೀವ ತುಂಬುವ ಅದ್ಭುತ ಸೃಷ್ಟಿ. ಎಲ್ಲೋ ನೆನಪುಗಳು ಮಣ್ಣಾಗಿ ಹೋಗಬೇಕಿದ್ದ ಮಲೆನಾಡಿನ‌ ಕಥೆಗಳನ್ನು ಮೇಲಿನ‌ ,‌ಕೆಳಗಿನ ಎಲ್ಲಾ ಕನ್ನಡಿಗರಿಗೆ ಅಕ್ಷರಗಳಲ್ಲಿ ದುಡಿಸಿಕೊಳ್ಳುವ ಗಿರಿಮನೆ ಶ್ಯಾಮರಾವ್ ಕೃತಿಯಲ್ಲಿ ಪೂರ್ತಿ ಆವರಿಸಿಕೊಳ್ಳುತ್ತಾರೆ. ಓದಿ ಮುಗಿದ ತಕ್ಷಣ "ಚಿಂಟಿ" ಯ ನೆನಪುಗಳು ಬಹುವಾಗಿ ಕಾಡುತ್ತದೆ. ಅಕ್ಕನ‌ ಮಗಳು ಮನೆಯಲ್ಲಿ ಇದ್ದಷ್ಟೂ ದಿನ ನನ್ನನ್ನೇ ಹಚ್ಚಿಕೊಂಡು " ಕಾಕ" ಅಂತ ಕರೆಯುತ್ತಾ ಹಿಂದೆ ನಡೆಯುವುದು‌ ನೆನಪಾಗುತ್ತದೆ. ದಿನವೂ ಮಲಗುವಾಗ ನನ್ನದೇ ಹೆಸರೆತ್ತಿ ಕೊನೆಯಲ್ಲಿ 'ಕಾಕ' ಅಂತ ಸೇರಿಸಿ ಕಾಪಾಡಲು ' ಅಲ್ಲಾಹನಲ್ಲಿ' ಬೇಡಿಕೊಳ್ಳುತ್ತಾಳಂತೆ. ಹಾ, ಇವಿಷ್ಟು ಸಾಕು.

ಇದೆಲ್ಲಾ ಯಾಕೆ ಹೇಳಿದನೆಂದರೆ,ಚಿಂಟಿ ನೆನಪುಗಳು ನಮ್ಮನೆಯ 'ಅಮ್ಮು' ವಿನಂತೆ ರೂಪ ತಳೆದು ಮತ್ತೆ ಬರುವಷ್ಟೂ ಆಪ್ತವಾಗುವುದರಿಂದ. ಕಥೆಯಲ್ಲಿ ಪರಿಸರದ ಮಾಹಿತಿ, ಕೃಷಿ ತಂತ್ರಜ್ಞಾನ, ಜೀವ ವೈವಿಧ್ಯ ಹಾಸುಹೊಕ್ಕಾಗಿದೆ.

ಕೆಂಪು ಕಂಡರೆ ಎಗರಾಡುವ ' ಲಕ್ಷ್ಮಿ' ಎಂಬ ದನ ಮತ್ತು ಅಮ್ಮ,  ತದ್ವತ್ತಾಗಿ ನಮ್ಮನೆಯಂತೆ ಹೋಲುತ್ತದೆ. ಕಾಡ ಮಧ್ಯೆ ಕರು ಹಾಕಿದ ನಮ್ಮ ದನ ಹುಡುಕಿ ತರಲು ಹೋದ ನಮ್ಮನ್ನಟ್ಟಿಸಿಕೊಂಡ ಬಂದ ದನ, ಅಮ್ಮನೆದುರು ಮುಗ್ಧ ಮಗುವಿನಂತೆ ಶಾಂತವಾದದ್ದು ನೆನೆಯುವಾಗ‌ ಅದೇ ನೆನಪುಗಳನ್ನು ಸರಿದೂಗಿಸುತ್ತದೆ.

ತಿಮ್ಮನ ಆತ್ಮಹತ್ಯೆ, ಅತೀ ದುಃಖದ ಅಧ್ಯಾಯ. ಪ್ರೇತಾತ್ಮ ಬಲಿ ತೆಗೆಯುವ ಬಗೆ ಸಿನಿಮೀಯ ಶೈಲಿಯಂತೆ ಭಾಸವಾಗುತ್ತದೆ. ತಪ್ಪು ಮಾಡಿದ ಎಲ್ಲರಿಗೂ ಕಾಲವೇ ಬುದ್ಧಿ ಕಲಿಸುತ್ತದೆ ಎಂಬರ್ಥದಲ್ಲಿ ಕಥೆ ಸಾಗುತ್ತದೆ. ಇದು ಸತ್ಯ ಕಥೆಯೆಂದು ಊಹಿಸಲಾಗದಷ್ಟು ಮಟ್ಟಿಗೆ ಕಾಲ್ಪನಿಕದಂತೆ ಗೋಚರವಾಗುವುದು ಸುಳ್ಳಲ್ಲ.

ಬನಿಯನ್ ಒಳಗೆ ಹಾವು ಸೇರುವ ಸಂಧರ್ಭ ಮಾತ್ರ ಈ ಪುಸ್ತಕವನ್ನು ನೆನಪಿಡುವಂತೆ ಮಾಡುವ ಅದ್ಭುತ ಕ್ಷಣ.  ಮಲೆನಾಡಿನ ರೋಚಕ ಕಥೆಗಳು ಪುಸ್ತಕದ ಬಗ್ಗೆ ಯಾರೂ ಕೇಳಿದರೂ ಈ ಬಗ್ಗೆ ಖಂಡಿತಾ ವಿವರಿಸುತ್ತಾರೆಂಬುವಷ್ಟು ರೋಚಕವಾಗಿದೆ. ಕಾಫಿ ತೋಟ, ಏಲಕ್ಕಿ, ಕಿತ್ತಳೆ ಹಣ್ಣು ತಮ್ಮ ಸುಪರ್ದಿಗಿರುವ ಎಲ್ಲಾ ಜಾಗಗಳನ್ನು ಓದುಗರಿಗೇ ಜ್ಞಾಪಕವಿರುವಷ್ಟು ಅದ್ಭುತವಾಗಿ ಲೇಖಕರು ಪರಿಚಯಿಸುತ್ತಾರೆ. ಆನೆಯ ದೌರ್ಬಲ್ಯ, ಫಾರೆಸ್ಟಿನವರ ದಂಧೆ, ಕಳ್ಳ ಭಟ್ಟಿ ಸರಾಯಿ ಮನುಷ್ಯನ ಪರಿಸರದ ಮೇಲಿನ ಹೇರಿಕೆಯನ್ನು ಪ್ರತಿಬಿಂಬಿಸುತ್ತದೆ. ನಡುವೆ ಬರುವ ಹೆಜ್ಜೇನಿನ ಕಥೆ, ಹಾವು ಮುಂಗುಸಿಗಳ ಹೋರಾಟ, ಮೊಸಳೆಯ ಭಯ ಕೃತಿಯ ರೋಚಕತೆಗೆ ತೋರಣ ಕಟ್ಟುತ್ತದೆ.

ಮಲೆನಾಡಿನ ಚಿತ್ರಣಗಳು ಪಡಿ ಮೂಡಿದ ಮೇಲೆ , ಅಲ್ಲಿನ ಚಳಿಯ ಅನುಭವಿಸಿದ ಬಳಿಕ " ಗಟ್ಟದ ಜನರು ಖಂಡಿತಾ ಸೋಮಾರಿಗಳಲ್ಲ" ಎಂಬ ಪಶ್ಚಾತಾಪದ ನುಡಿಯೊಂದು ನಿಟ್ಟುಸಿರಿನೊಂದಿಗೆ ಹೊರ ಹೊಮ್ಮುತ್ತದೆ.

ಮುನವ್ವರ್ ಜೋಗಿಬೆಟ್ಟು