Article

ಕಲ್ಯಾಣತ್ವದ ’ಬಸವ ಕಾಲಿನ ಜೋಡಿ ಮೆಟ್ಟು’

ಕಾವ್ಯ ಕವಿ ಕಣ್ಣೊಳಗಿನ ಕಂದಿಲಾಗಿ ಜಗವ ನೋಡುತ್ತಿದ್ದರೆ, ತನ್ನಡಿಯಲ್ಲೆ ಹುದುಗಿದ ಕತ್ತಲೆ ಬದುಕಿಗೆ ಬೆಳಕಾಗಲು ಹೋರಾಡಲೇ ಬೇಕಿದೆ. ಅಸಂಖ್ಯಾತ ಹೋರಾಟ ಮತ್ತು ತೀರ ಸಹಜ ಅನಿಸುವಷ್ಟು ಅಪಮಾನಗಳನ್ನು ಹಾಸಿ ಹೊದ್ದು ಕೊಂಡಿರುವ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಉಸಿರಾಟದ ಉಳುಮೆ "ಬಸವನ ಕಾಲಿನ ಜೋಡಿ ಮೆಟ್ಟು" ಕೃತಿಯಲ್ಲಿ ಕಾಣಬಹುದು. ಇಲ್ಲಿ ಕವಿ, ಪ್ರಜ್ಞೆ ತಪ್ಪಿದ ಸಮಾಜಕೆ ಎಚ್ಚರಿಕೆಯ ಗಂಟೆಯಾಗಿ ಧ್ವನಿಸಿದರೆ, ಮತ್ತೊಂದು ಕಡೆ ಜಗದ ಮೋಹಕ ಮೋಸದ ಮಾತಿನೆದುರು ಹರಿದ ಮಾತುಗಳ ಹೇಳಲಾಗದ ಅಸಹಾಯಕ ಮೌನಿಯಾಗಿ ನಿಂತ್ತಿದ್ದಾನೆ. 

"ಕಲ್ಯಾಣತ್ವದ ಪರಿಕಲ್ಪನೆ" ಕಾವ್ಯವಾಗಿಸುವಲ್ಲಿ ರವಿ ಯಶಸ್ಸಿಯಾಗಿದ್ದಂತು ಸುಳ್ಳಲ್ಲ. ಎಂದೋ ಹೊತ್ತಿಕೊಂಡ ಕಲ್ಯಾಣದ ಕಿಡಿ, ಈಗಲೂ ಕವಿ ಹೃದಯವನ್ನು ಬೇಯುವಂತೆ ಮಾಡಿದೆ ಎಂದರೆ, ಶರಣ ಸಂಸ್ಕೃತಿ ನೆಲ ಮೂಲದ ಸಂಸ್ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ!

ಇಲ್ಲಿನ ಬಹಳಷ್ಟು ಕವಿತೆಗಳು ಚಿತ್ರ ಕವಿತ್ವದ ಗುಣಗಳನ್ನು ಹೊಂದಿದೆ. ಬೀಜವೊಂದು ಮೊಳಕೆಯಾಗಿ ಹೂವಾಗಿ ಕಾಯಾಗಿ ಹಣ್ಣಾಗುವಂತೆ, ಕವಿತೆಗಳು ಹಣ್ಣಾಗುವಂತ ಸಾಗುತ್ತಿವೆ. ಪದಗಳ ಕುಂಚದಿಂದ ಚಿತ್ರಿಸಿದ ಕಾವ್ಯದಲ್ಲಿ ಕವಿಯ ಕಾವ್ಯ ಪ್ರತಿಭೆ ಮತ್ತು ಸಮಾಜ ಪ್ರಜ್ಞೆ ಎರಡೂ ಕೂಡ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿವೆ ಅನಿಸುತ್ತದೆ. ಕೆಲವು ಕಡೆ ಬಣ್ಣದ ವೈಯ್ಯಾರ ಹೆಚ್ಚಾಯಿತು ಅನಿಸಿದರು, ಚಿತ್ರದ ರೂಪಕ್ಕೇನೂ ಧಕ್ಕೆಯಾಗದಂತೆ ಕವಿ ಎಚ್ಚರ ವಹಿಸಿದ್ದಾನೆ.

ಗೆಳೆಯ ರವಿ ರಾಯಚೂರಕರ್ ಪ್ರತಿಮೆಗಳನ್ನು ಅಚ್ಚುಕಟ್ಟಾಗಿ ಕಟ್ಟಬಲ್ಲ ಕವಿ. ಆದರೆ ಶಬ್ದಾಡಂಬರದ ಗೋಜಿಗೆ ಹೋಗುವವನಲ್ಲ. 

" ಒಲೆಯಲ್ಲಿನ ಬೆಂಕಿ ಅರಚಿ

ಅನ್ನ ಬೂದಿಯಾದಾಗ...."

 " ಚಂದ್ರನ ಅಂಗಳದಲ್ಲಿ 

ಸೂರ್ಯನ ಮೊಟ್ಟೆಗಳು ಕೂಡ ಮರಿ ಹಾಕುತ್ತವೆ"

 "ಬೆಳಕಿನ ಮೌನವೊಂದು ಹೆರಿಗೆ

  ಮನೆ ಸೇರಿದಾಗ

  ಮಹಾ ಮನೆಯ ಕ್ರಾಂತಿಯ ಕಿಡಿಗಳ

  ಕಣ್ಣಲ್ಲಿ ಮಾತುಗಳ ಹುಟ್ಟುತ್ತವೆ.."

 "ಶಾಲೆಗಿಂತ ನಿನ್ನ ಕೆಂಪು ದೀಪದ ಕೇರಿಯೇ

  ವಾಸಿಯೆಂದು ಅಮ್ಮನಿಗೆ ತಿಳಿಸಿದೆ...." 

ಫ್ರೌಢ  ಪ್ರತಿಮೆಗಳನು ತೀರ ಸರಳವಾಗಿ ಹೆಣೆದು ಕಾವ್ಯದಲಂಕಾರವನ್ನು ಹೆಚ್ಚಿಸಲು ಶ್ರಮಿಸುತ್ತಾನೆ. ಬರೆದಿದ್ದೆಲ್ಲವೂ ಕಾವ್ಯವಲ್ಲ ಎಂಬ ಅರಿವಿನೊಂದಿಗೆ ತನ್ನ ಮತ್ತು ತನ್ನವರ ನೋವಿನಲ್ಲಿ ಪಾಲುಗಾರಿಕೆ ಪಡೆಯಲು ಹವಣಿಸುವ ಕವಿ, ಜನ ಸಾಮಾನ್ಯರ ನಡುವಿನ ನೆನಪಾಗಿ ಉಳಿಯಬಲ್ಲ. ಅಂಥ ನೆನಪುಗಳನ್ನು ದಾಖಲಿಸುವ ರವಿ ಸಂವೇದನಾತ್ಮಕ ಮತ್ತು ಕಲಾತ್ಮಕ ಕಾವ್ಯ ಕಟ್ಟುವ ಸಾಹಿತ್ಯದ ವಿದ್ಯಾರ್ಥಿಯಾಗಿದ್ದು, ಇನ್ನಷ್ಟು ಸಾಹಿತ್ಯದ ಗಂಭೀರ ಅಧ್ಯಯನದೊಂದಿಗೆ ಪದ ಸಂಪತ್ತಿನ ವಿಸ್ತರಣೆಯೊಂದಿಗೆ, ಲೋಕದ ನೋವಿಗೆ ಮುಲಾಗುವ ಸಾಂತ್ವನಿಯಾಗಲೆಂದು ಅಶಿಸುತ್ತೆನೆ. 

ಈ ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಚಾಂದ್ ಪಾಷಾ (ಕವಿಚಂದ್ರ)