Article

ಕನ್ನಡ ಗಜಲ್ಗಳ 

ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ ವಿಜಯಪುರ ಇವರ ಈ ಮೂರನೇ ಗಜಲ್ ಸಂಕಲನದಲ್ಲಿ ಒಟ್ಟು 30 ಗಜಲ್ ಗಳಿವೆ, ಗಜಲ್ ಗಳಿಗೆ ಹೊಂದುವಂತಹ ಸುಂದರವಾದ ಚಿತ್ರಗಳು ಸಹ ಇದ್ದು ಇವು ಸಂಕಲನಕ್ಕೆ ಮೆರಗು ತಂದಿವೆ. ಇಲ್ಲಿಯವರೆಗೆ ಕವನ ಸಂಕಲನ, ಆಧುನಿಕ ವಚನಗಳು, ಸಂಪಾದನೆ, ಪ್ರವಾಸಕಥನ, ಪ್ರಬಂಧ ಹೀಗೆ ವೈವಿಧ್ಯಮಯವಾದ ಬರಹ ಮಾಡಿ ಸುಮಾರು ಹದಿನೈದು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಶ್ರೀಮತಿ ಪ್ರಭಾವತಿ ದೇಸಾಯಿಯವರು ವಯಸ್ಸಿನಿಂದಲೂ ಹಾಗೂ ಬರವಣಿಗೆಯಿಂದಲೂ ಸಹ ನಮಗೆಲ್ಲ ಹಿರಿಯ ಲೇಖಕಿ ಯಾಗಿದ್ದದ್ದು ಹೆಮ್ಮೆಯ ಸಂಗತಿಯಾಗಿದೆ.

2-07-1947ರಲ್ಲಿ ರಾಯಚೂರಿನಲ್ಲಿ ಜನಸಿದ ಈ ಲೇಖಕಿ ಶ್ರೀಮತಿ ಪ್ರಭಾವತಿ ದೇಸಾಯಿಯವರು ನೆಲದ ಮಣ್ಣಿನ ಗುಣಕ್ಕೆ ಪ್ರಭಾವಿತರಾದಂತೆ ಗಜಲ್ ಬರವಣಿಗೆಗೆ ತೊಡಗಿಸಿಕೊಂಡಿದ್ದಾರೆ. ಕನ್ನಡ ಗಜಲ್ ಪರಂಪರೆಗೆ ರಾಯಚೂರು ಜಿಲ್ಲೆಯ ಕೊಡುಗೆ ದೊಡ್ಡದಿದ್ದು ನಾಡೋಜ ಶ್ರೀ ಶಾಂತರಸರಂತಹ ಹಿರಿಯ ಗಜಲ್  ಕವಿ ಇಲ್ಲಿಯವರು. ಅವರು ನಂತರದ ಪೀಳಿಗೆಯ ಲೇಖಕರು ಈ ದಿಸೆಯಲ್ಲಿ ತೊಡಗಲು ಪ್ರೇರಣೆಯಾಗಿದ್ದಾರೆಂದರೆ ಉತ್ಪ್ರೇಕ್ಷೆಯಲ್ಲ. ಶ್ರೀಯುತರಾದ ಜಂಬಣ್ಣ ಅಮರಚಿಂತ,ಮುಕ್ತಾಯಕ್ಕ, ಚಿದಾನಂದ ಸಾಲಿ, ಅಲ್ಲಾ ಗಿರಿರಾಜ, ದಸ್ತಗಿರಸಾಬ ದಿನ್ನಿ, ಡಾ.ಕಾಶಿನಾದ ಅಂಬಲಗೆ, ಗಿರೀಶ ಜಾಕಾಪುರೆ, ಈರಣ್ಣ ಬೆಂಗಾಲೆ, ಪ್ರೇಮ ಹೂಗಾರ, ಡಾ.ಮಕ್ತುಂಬಿ ಮುಲ್ಲಾ ಬೀದರ ಹೀಗೆ ಸಾಲು ಸಾಲು ಅನೇಕ ಕವಿಗಳು 'ಗಜಲ್' ಗೆ ಹೊಸ ಶಕ್ತಿ ತುಂಬಿದ್ದಾರೆ. ಹೊಸ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಆ ಸಾಲಿನಲ್ಲಿ ರಾಯಚೂರಿನಲ್ಲಿ ಹುಟ್ಟಿದ ಈ ಲೇಖಕಿ ಪ್ರಭಾವತಿ ದೇಸಾಯಿಯವರು ವಿಜಯಪುರ ಕಾರ್ಯ ಕ್ಷೇತ್ರವಾದರೂ ಸಹ ಮೂಲ ದ್ರವ್ಯವಾದ ರಾಯಚೂರು ನೆಲದ ಮಣ್ಣಿನ ಪ್ರಭಾವಕ್ಕೆ ಗಜಲ್ ಗಳನ್ನು ಇಂದಿಗೂ ಬರೆಯುತ್ತಿರುವದು ಹೆಮ್ಮೆ ಅಭಿಮಾನದ ಸಂಗತಿಯಾಗಿದೆ.

ಹೃದಯ ಕದವ ತೆರೆ ಮನ ಒಪ್ಪಿ ಒಪ್ಪಿಕೋ ಗೆಳೆಯಾ

ಕನಸು ಗರಿ ಬಿಚ್ಚಿ ನೆನಪು ಕಾಡಿದೆ ತಬ್ಬಿಕೋ ಗೆಳೆಯಾ

ಕಾದ ಮೈ ಮನ ಸುಳಿ ಒಲವು ಕಾದು ಕಾವೇರಿಸಿ ದಣಿದಿದೆ

ಮುಸ್ಸಂಜೆ ಬಾನು ರಂಗೇರಿದೆ ಬಾಚಿಕೋ ಗೆಳೆಯಾ

 

ಇರುಳು ಅಧರ ಮುತ್ತು ಜಾರಿತು ಸಾಕಿ ಸುರಿದ ಮಧುವಲಿ

ಬಟ್ಟಲು ತುಂಬಿ ಸೋರುತಿದೆ ಹೀರಿಕೋ ಗೆಳೆಯಾ

 

ಗಾಳಿ ಪಿಸುಮಾತು ಮುಡಿಮಲ್ಲಿಗೆ ಕಂಪು ತಂಬೆಲರು

ಯೌವನ ಒನಪು ಲಜ್ಜೆಗೇರಿದೆ ದೋಚಿಕೋ ಗೆಳೆಯಾ

 

ಮುಗಿಲ ನಕ್ಷತ್ರಗಳ ದಿಬ್ಬಣ ಸಂಭ್ರಮದ ಪಯಣ

ಚಂದ್ರ" ಪ್ರಭೆ" ಇಳೆಯ ತೊಡೆಗೇರಿದೆ ಅಪ್ಪಿಕೋ ಗೆಳೆಯಾ." 

ಈ ಸುಂದರವಾದ ಬೆನ್ನುಡಿಯ ಗಜಲ್ ಪುಸ್ತಕ ಕೈಗೆ ತೆಗೆದುಕೊಂಡ ತಕ್ಷಣ ಮನಕೆ ಮುದನೀಡುತ್ತದೆ.

 ಕವಿಯತ್ರಿ ಪ್ರೇಮಾ ಹೂಗಾರ ಎಂಬವವರ (ಗಜಲ್ ಗಳ ಪಿಎಚ್ಡಿ ಅಧ್ಯಯನಕ್ಕಾಗಿ ಸಂಶೋಧನೆಯಲ್ಲಿ ತೊಡಗಿರುವ) ಮಾತುಗಳು ಸಹ ಈ ಸಂಕಲನದ ಒಳಗಿದ್ದು ಅವರು ತುಂಬಾ ಸುಂದರವಾಗಿ ಇಲ್ಲಿಯ ಗಜಲ್ ಗಳನ್ನು ಪರಿಚಯಿಸಿದ್ದು ಅವು ಹೀಗಿವೆ.

" ಮುನಿದು ಹೋದವ ನೀ ಬಂದೇ ಬರುವಿಯೆಂದು ಕಂಗಳು ಕಾಯುತಿವೆ

ಬೆಳಗಾದರೂ ಹಚ್ಚಿದ ಒಲವಿನ ಸಾಲು ದೀಪಗಳು ಉರಿಯುತಿವೆ

ನಿನ್ನ ಈ ಮೌನ ಹೊದ್ದು ನಾ ಹೇಗೆ ಮಲಗಲಿ ಒಂಟಿಯಾಗಿ

ಅಂಗಳ ರಂಗೋಲಿ ಚುಕ್ಕಿಗಳು ನಿನ್ನ ದಾರಿ ನೋಡುತಿವೆ"

( ಗಜಲ್ 25) 

 ಇವರ ಮೊದಲ ಗಜಲ್ ಸಂಕಲನ ’ಮೌನ ಇಂಚರ’ ಮತ್ತು ಎರಡನೇ ಗಜಲ್ ಸಂಕಲನ ’ಮಿಡಿತ’ ಈ ಎರಡು ಕೃತಿಗಳು ಹಾಗೂ ಈ  ’ನಿನಾದ’ ಕೃತಿ ಬಹು ಗಟ್ಟಿಯಾಗಿ ಎದೆಯೊಳಗೆ ನಾದ ನಿನಾದ ಮೂಡಿಸುವಂತಿದೆ.

ಭಾಷೆ ಯಾವದಾದರೇನು ? ಭಾವ ಮುಖ್ಯ. ಯಾವುದೇ  ಬರಹ ಮನಕಾಡುವ ಹಾಗೆ ಕಾಲಿಗೆ ಸುತ್ತಿದ ಬಳ್ಳಿಯಾಗಿ ಪದೇ ಪದೇ  ಕಾಡಬೇಕು ,ಅಂತಹ ಕಾಡುವ ಅನೇಕ ಗಜಲ್ ಗಳು ಈ ’ನಿನಾದ’ ಸಂಕಲನದಲ್ಲಿವೆ ಎಂದು ಈ ಸಂಕಲನದ ಬಗ್ಗೆ ಮೆಚ್ಚಿಗೆಯ ಮಾತಾಡಿದ್ದು ಅದೇ ಗಜಲ್ ಗಾತಿ೯ ಪ್ರೇಮಾ ಹೂಗಾರ ಈ ಸಂಕಲನದಲ್ಲಿ.

 ಈ  ಕೃತಿಗೆ ಮುನ್ನುಡಿ ಮಾತುಗಳನ್ನು ಬರೆದಿರುವ ಹಿರಿಯ ಗಜಲ್ ಲೇಖಕರಾದ ಶ್ರೀ ಸಿದ್ಧರಾಮ ಹಿರೆಮಠರು ಗಜಲ್  ಕಾವ್ಯ ಪ್ರಕಾರದ ಬಗ್ಗೆಯು ಬರೆದು ಗಜಲ್ ರಚನೆಯ ನಾಲ್ಕು ಅಂಗಗಳಾದ ಮತ್ಲಾ,ಕಾಫಿಯಾ, ರದೀಫ್, ಮುಕ್ತಾಗಳ ಕುರಿತು ವಿವರವಾಗಿ ಹೇಳಿದ್ದಾರೆ.

 ಗಜಲ್ ಕುರಿತು ಮತ್ತೆ ಮತ್ತೆ ಹೇಳಬೇಕಾದ ವಿಚಾರವೆಂದರೆ ಪ್ರೀತಿ ಪ್ರೇಮ ಎಂದು ಬರೆದ ಕವನಗಳೆಲ್ಲಾ ಅಥವಾ ಅಂತ್ಯ ಪ್ರಾಸವಿರುವವೆಲ್ಲಾ ಗಜಲ್ ಗಳಾಗುವದಿಲ್ಲ ಎಂಬುದು.ಆದರೆ ಗಜಲ್ ಮೋಡಿಗೆ ಒಳಗಾದವರು ಅಂತ್ಯ ಪ್ರಾಸವೊಂದಿದ್ದರೆ ಹಾಗು ಪ್ರೀತಿ, ಪ್ರೇಮ,ಪ್ರಣಯದ ಬಗ್ಗೆ ಬರೇದಾಕ್ಷಣ ಅದು ಗಜಲ್ ಎಂದಾಗುತ್ತದೆಂದು ತಿಳಿದಿರುವರು.ಗಜಲ್ ಮೂಲ ಉದ್ದೇಶ ಹಾಗೂ ಅದರ ಭಾವವನ್ನು ತಿಳಿಯದ ಯಾರೇ ಆಗಲಿ ಇಂತಹ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆಂದು ಸ್ಪಷ್ಟ ಪಡಿಸುತ್ತಾರೆ.

ಗಜಲ್ ದ್ವಿಪದಿಯಲ್ಲಿರುತ್ತದೆ. ಒಂದು ಗಜಲ್ ನಲ್ಲಿ 5ರಿಂದ 25 ಶೇರ( ದ್ವಿಪದಿ) ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ, ಗಜಲ್ ನ ಒಂದು ಚರಣಕ್ಕೆ  ’ಮಿಶ್ರ’ ಎನ್ನುತ್ತಾರೆ, ದ್ವಿಪದಿಗೆ ’ಶೇರ್’ ಎನ್ನುತ್ತಾರೆ. ಉರ್ದು ಸಾಹಿತ್ಯ ,ಸಂಸ್ಕೃತಿಯಿಂದ ಗಜಲ್ ಬಂದಿದೆ ಯಾದ್ದರಿಂದ ನಮ್ಮ ಕನ್ನಡ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಉದು೯ ಸಾಹಿತ್ಯ ದ ಮಧುಶಾಲೆ, ಸಾಕಿಗಳ ಬಗ್ಗೆಯು ಇಲ್ಲಿ ಚಚಿ೯ಸಿದ್ದಾರೆ.

ಮಧ್ಯ ಮಾರುವ ಅಂಗಡಿಗೆ ಮಧುಶಾಲೆ ಎಂದು ಬಳಿಸಿದರೂ ಸಹ ಅಲ್ಲಿ ಅದಕ್ಕೆ ಒಂದು ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು. ಪ್ರಜ್ಞೆ ಯನ್ನು ಕಳೆದುಕೊಳ್ಳಬಾರದು. ಕವಿಗಳು ಮಧುಪಾನ ಮಾಡುತ್ತಾ, ಮಾತಾಡುವ,ಚಿಂತಿಸುವ ಒಂದು ಕೂಟವಾಗಿರುತ್ತದೆ. ಇನ್ನು ಸಾಕಿ ಅಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಅಥವಾ ಕೊಡುವವಳು ಎಂದರ್ಥವಿದೆ. ಸಾಕಿ ಗಂಡು ಅಥವಾ ಹೆಣ್ಣು ಆಗಿರಬಹುದು. ಕೆಲವು ಕಡೆ ಸಾಕಿ ಎಂದರೆ ದೇವರ ರೂಪಕವಾಗಿಯೂ ಪ್ರಯೋಗಿಸಿದ್ದಾರೆ. ಒಟ್ಟಾರೆ ಇಲ್ಲಿ ಸಿದ್ಧರಾಮ ಹಿರೇಮಠರವರು ಈ ಸಂಕಲನದಲ್ಲಿ ಗಜಲ್ ಬಗ್ಗೆ ಮೇಲಿನಂತೆ ಪರಿಚಯಿಸಿದ್ದಾರೆ.ಶಾಂತರಸರ ಮದಿರೆ ಮತ್ತು ಯೌವ್ವನ ಕೃತಿಯಲ್ಲಿಯು ಈ ಗಜಲ್ಗಗಳ ವ್ಯಾಪಕ ಅರ್ಥವಿವರಣೆ ಹಾಗೂ ಹಲವಾರು ಉರ್ದು ಗಜಲ್ ಲೇಖಕರ ಸುಂದರ ಉದಾಹರಣೆಗಳಿವೆ. ಒಟ್ಟಾರೆಯಾಗಿ ಪ್ರಭಾವತಿ ದೇಸಾಯಿಯವರು ಈ  'ನಿನಾದ' ಸಂಕಲನದಲ್ಲಿ ಗಜಲ್ ಪ್ರಕಾರದ ಎಲ್ಲಾ ಲಕ್ಷಣಗಳನ್ನು, ನಿಯಮಗಳನ್ನು ಒಗ್ಗಿಸಿಕೊಂಡು ಅತ್ಯಂತ ಸಮರ್ಥವಾಗಿ 30 ಗಜಲ್ ಗಳನ್ನು ರಚಿಸಿದ್ದಾರೆ.

"ಈ ಪರಿ ರೋಧನ ತರವಲ್ಲ ಅಬಲೆ ಎನ್ನುವದು ಈ ಲೋಕ

ಬಿಕ್ಕಳಿಕೆ ಅದುಮಿ ಬುಸುಗುಡು ಒಮ್ಮೆ ಹೆದರುವದು ಈ ಲೋಕ"

ಎಂದು ಮಹಿಳಾ ಸಂವೇದನೆಗೆ ,ಬಂಡಾಯಕ್ಕೆ ಪ್ರೇರೇಪಿಸುವ ಸಾಮರ್ಥ್ಯವನ್ನು ಸಹ ಈ ಗಜಲ್ ತುಂಬುತ್ತವೆ.

 ಕೇವಲ ಮಧುಶಾಲೆ, ಸಾಕಿ ಹೀಗೆ ಇವೆರಡನ್ನೆ ಇಟ್ಟುಕೊಂಡು ಗಜಲ್ ರಚಿಸುವ ಪರಂಪರೆಯನ್ನು ಮುರಿದು ಸಹ ಹಲವಾರು ಹೊಸ ಲೇಖಕರು ಗಜಲ್ ರಚಿಸುತ್ತಾರೆ. ಆ ಉರ್ದು ಸಾಹಿತ್ಯ ಸಂದರ್ಭದಲ್ಲಿ ಅನುಭಾವವಾಗಿ ಮುಂದುವರಿಸುವವರ ಜೊತೆ ಮಧುಶಾಲೆಯ ಜಾಗದಲ್ಲಿ ಈ ಬದುಕಿನ ಒಟ್ಟು ರಂಗ ಸ್ಥಳವನ್ನು ಕಲ್ಪಿಸಿಕೊಂಡು ಸಾಕಿ ಎಂಬುದರ ಜಾಗದಲ್ಲಿ ’ಸಾಕ್ಷಿಪ್ರಜ್ಞೆ’ ಯಾಗಿ ತಮಗಿಷ್ಟವಾದ ಶರಣ, ಸಂತ, ಸೂಫಿ, ದೇವರು ಹೀಗೆ ಇಟ್ಟುಕೊಂಡು ಅವನ ಎದುರಲ್ಲಿ ತಮ್ಮ ಗಜಲ್ ರಚನೆಯ ಹಿಂದಿನ ಕಾವ್ಯದ ಧೋರಣೆಯನ್ನು, ವಸ್ತುವನ್ನು ಚಿತ್ರಿಸುವುದು ಸಹ ನಡೆದಿದೆ. ಅಮಲು ಅಂದರೆ ನಶೆ. ಆದರೆ ಸೂಫಿಗಳು ಅಥೈಸುವಿಕೆಯಲ್ಲಿ ಪರವಶತೆ, ತನ್ನನ್ನು ತಾ ಮರೆಯುವದು, ಪ್ರೇಮೊನ್ಮಾದದಲ್ಲಿ ಲೀನವಾಗುವದು, ಸುಖದ ಶಿಖರ ತಲುಪುವುದಾಗಿರ ಬಹುದಾಗಿದೆ.

ಒಟ್ಟಾರೆ ಕವಿ, ಲೇಖಕ ತನ್ನ ಸೃಜನಶೀಲತೆಯ ಕುರಿತಾದ ಒಂದು ಸುಖದ ಅಥವಾ ದುಃಖದ,ಅಥವಾ ತನ್ನ ಧೋರಣೆಯ ಅನುಭವವನ್ನು ಚಿತ್ರಿಸುವಾಗ ತನ್ನನ್ನೇ ತಾನು ಮರೆಯುವದು ಸಹಜ .ಅಂತಹ ಪರಕಾಯ ಪ್ರವೇಶವನ್ನು ’ಮಧುಶಾಲೆ’ ನೀಡುತ್ತದೆ.ಅದಕ್ಕೆ ಸಾಕ್ಷಿಯಾಗಿ ಸಾಕಿ ಅಲ್ಲಿ ಇರಬಹುದೆನಿಸುತ್ತದೆ.

ಅಂತಹ ಎಲ್ಲಾ ಲಕ್ಷಣಗಳನ್ನು ಪ್ರಜ್ಞಾಪೂರ್ವಕವಾಗಿ ಗಮನದಲ್ಲಿಟ್ಟುಕೊಂಡು ಈ ಗಜಲ್ ಲೇಖಕರು ಬರೆಯುತ್ತಾರೆ. ಏನು ಬರೆದರೆ ಏನೋ, ಎಲ್ಲಿ ಹಾಸ್ಯಾಸ್ಪದ ಆಗುತ್ತೇವೋ ಎಂದು ಬಹುತೇಕರು ಈ ಗಜಲ್ ತಂಟೆಯೇ  ಬೇಡವೆಂದು ತಮತಮಗೆ ಒಲಿದಂತೆ ಕಾವ್ಯ ರಚಿಸುತ್ತಾರೆ. ಯಾಕೆಂದರೆ ಗಜಲ್ ರಚನೆ ಸುಲಭವಲ್ಲ ಎಂದು ಈಗಾಗಲೇ ಬಿಂಬಿತವಾಗಿದೆ.ಹಿಂದಿನ ಕಾವ್ಯ ಪರಂಪರೆಯನ್ನು ಮುರಿದು ನವ್ಯಕಾವ್ಯ,ದಲಿತ ಬಂಡಾಯ ಕಾವ್ಯ ಬಂದಂತೆ ಈ ಗಜಲ್ ಗೂ ಒಂದು ಹೊಸದಿನ ಹೊಸಬರಿಂದ ಬಂದಿತು ಅನಿಸುತ್ತದೆ.ಅದು ಆರಂಭವು ಆಗಿದೆ.

ಆದರೆ ಗಜಲ್ ರಚನೆ ಒಂದು ಕುಸುರಿ ಕಲೆಯ ಹಾಗೆ ಅನಿಸುತ್ತದೆ. ಅದು ಕೊಡುವ ಮೋಹಕತೆ, ಮುದ, ಸುಖ, ನೆಮ್ಮದಿ, ನವಿರಾದ ಭಾವ, ಕೋಮಲತೆ, ಖುಷಿಯನ್ನು ಇತರ ಬರಹಗಳು ತಕ್ಷಣ ಕೊಡುವದು ಕಡಿಮೆ.ಆ ಹಿನ್ನೆಲೆಯಲ್ಲಿ ನಮ್ಮ ಭಾಗದಲ್ಲಿ ಇತ್ತೀಚಿಗೆ ಗಜಲ್ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಬರಹದ ಕಡೆ ತೊಡಗಿದ್ದಾರೆ. ಈ ’ನಿನಾದ’ ಕೃತಿಯ ಮೂಲಕ ಪ್ರಭಾವತಿ ದೇಸಾಯಿಯವರು ಅಂತಹ ಒಂದು ಮೂಲ ಪರಂಪರೆಯ ಮುಂದುವರಿಕೆಯ ಭಾಗವಾಗಿ ಈ ಸಂಕಲನದ ಬಹುತೇಕ ಗಜಲ್ ಗಳು ಯಶಸ್ವಿಯಾಗಿ ಓದುಗರ ಹೃದಯ ತಟ್ಟುತ್ತವೆ ಮತ್ತು ಮನ ಮುಟ್ಟುತ್ತವೆ. ಗಜಲ್ ಲೋಕ ಗಂಭೀರವಾಗಿ ಪರಿಗಣಿಸಬಹುದಾದ ಕೃತಿ ಇದು.

ಸಿದ್ಧರಾಮ ಹೊನ್ಕಲ್‌