Article

ಕನ್ನಡ ಕಥಾ ಸಾಹಿತ್ಯದ ಭರವಸೆ `ಫೂ ಮತ್ತು ಇತರ ಕಥೆಗಳು’

ಕಾವ್ಯದಂತೆಯೇ ಕನ್ನಡ ಸಣ್ಣ ಕಥಾ ಸಾಹಿತ್ಯಕ್ಕೂ ಇತ್ತೀಚೆಗೆ ನೆರೆ ಬಂದಂತಿದೆ. ವಿಭಿನ್ನ ಮಜಲುಗಳನ್ನು ತೆರೆದು ತೋರುತ್ತ ಸಮೃದ್ಧವಾಗಿ ಬೆಳೆಯುತ್ತಿರುವ ಕಥಾ ಬೆಳೆ ಬೆರಗನ್ನೂ ಸಂತೋಷವನ್ನೂ ಉಂಟು ಮಾಡುತ್ತದೆ. ಕನ್ನಡ ಸಾಹಿತ್ಯದ ಅಕಾಡೆಮಿಕ್ ಅಧ್ಯಯನದ ಹೊರಗಿದ್ದುಕೊಂಡೂ ತುಂಬಾ ಚುರುಕಾಗಿಯೂ ಪರಿಣಾಮಕಾರಿಯಾಗಿಯೂ ಬರೆಯುತ್ತಿರುವ ಹೊಸ ತಲೆಮಾರಿನ ಕಥೆಗಾರರ ಕಥೆಗಳನ್ನು ಓದಲು ಮತ್ತು ಅವುಗಳ ಕುರಿತು ಮಾತಾಡಲು ಖುಷಿಯಾಗುತ್ತದೆ. ಮಂಜುನಾಯಕ ಚಳ್ಳೂರ ಅವರ `ಫೂ ಮತ್ತು ಇತರ ಕಥೆಗಳು' ಓದಿದಾಗ ಅನಿಸಿದ್ದೂ ಹಾಗೆಯೇ.

ಇಲ್ಲಿನ ಕಥೆಗಳನ್ನು ಕಥೆಗಾರ ಹೇಳಿದ್ದಾನೆನ್ನುವುದಕ್ಕಿಂತ ಕಥೆಗಳೇ ಕಥೆಗಾರನಿಂದ ಹೇಳಿಸಿಕೊಂಡಿವೆ ಎನಿಸಿಬಿಡುವಷ್ಟು ಸಹಜವಾಗಿದೆ ನಿರೂಪಣೆ. ತಂತ್ರದ ಭಾರಕ್ಕೆ ಕುಗ್ಗದೇ ವಿಡಂಬನಾತ್ಮಕ ಹಾಸ್ಯದ ದಾರದಲ್ಲಿ ಸನ್ನಿವೇಶಗಳನ್ನು ಪೋಣಿಸಿದ ನೈಪುಣ್ಯತೆ ಅಚ್ಚರಿ ಮೂಡಿಸುತ್ತದೆ. ಗ್ರಾಮೀಣ ಭಾಗದಲ್ಲಿ ಹೆಣ್ಣಮಗಳೊಬ್ಬಳ ಮೇಲಾಗುವ ದೌರ್ಜನ್ಯವನ್ನು ಮಗುವಿನ ನಿರೂಪಣೆಯಲ್ಲಿ ಸಾಧ್ಯವಾಗಿಸುವ `ಫೂ', ಧಾರ್ಮಿಕ ವಿಧಿ ಆಚರಣೆಗಳು ಹಿಂದೂ ಅಥವಾ ಮುಸ್ಲಿಂ ಎಂಬ ಗೆರೆಗಳಾಗದೇ ಅದೊಂದು ಏಕ ಸಂಸ್ಕೃತಿಯ ಭಾಗವಾಗೇ ದಕ್ಕುವ ಗ್ರಾಮೀಣ ಬದುಕಿನ ಚಿತ್ರಣ ಮತ್ತು ಅಲ್ಲಿನ ಜನ ತಮಗರಿವಿಲ್ಲದೇ ಆ ಗೆರೆಗಳನ್ನೂ ದಾಟಿ ಕೇವಲ ಮನುಷ್ಯರು ಮಾತ್ರವೇ ಆಗಿ ನಿಲ್ಲುವ ಪರಿಯನ್ನು ಪರಿಣಾಮಕಾರಿಯಾಗಿ ಹೇಳುವ “ಖತಲ್ ರಾತ್ರಿ”, ಲೌಕಿಕ ಅಲೌಕಿಕಗಳ ತೊಡಕಿನಲ್ಲಿ ಸಿಕ್ಕಿಕೊಳ್ಳುತ್ತ, ಬಿಡಿಸಿಕೊಳ್ಳುತ್ತ ಮನುಷ್ಯನ ಎಲ್ಲ ಸಣ್ಣತನಗಳನ್ನೂ ತಮಾಷೆಯಾಗಿಯೇ ಬಿಚ್ಚಿಡುತ್ತ ಹಗೂರವಾಗಿ ಸಾಗುವ “ತೇರು ಸಾಗಿತಮ್ಮ ನೋಡಿರೇ”, ಅಸಹಜತೆಗೆ ತಿರುಗುತ್ತಿರುವ ದೇಸೀ ಬದುಕಿನ ದುರಂತಗಳನ್ನು ಸಮರ್ಪಕವಾಗಿ ಕಟ್ಟಿ ಕೊಡುವ `ವಜ್ರಮುನಿ', ಹೆಣ್ಣು ತಾಯಾಗುವ ಮನುಷ್ಯ ಮಗುವಾಗುವ ಸೋಜಿಗವನ್ನು ಬಿಡಿಸಿಡುವ “ ಕನಸಿನ ವಾಸನೆ”, ಪರಿಶುದ್ಧ ಪ್ರೀತಿಗೆ ಜಾತಿ, ಧರ್ಮ, ಅಷ್ಟೇ ಏಕೆ ವಯಸ್ಸೂ ಗೋಡೆಯಾಗುವುದಿಲ್ಲ ಎಂಬುದನ್ನು ಪರಿಣಾಮಕಾರಿಯಾಗಿ ಹೇಳುವ “ಪಾತಿ” ತುಂಬಾ ಉತ್ತಮ ಕಥೆಗಳು
ಮಂಜು ಅವರ ಕಥೆಗಳ ಅಂತ್ಯವನ್ನು ಕುರಿತು ಒಂದು ಮಾತು ಹೇಳಲೇಬೇಕು.
ಇಲ್ಲಿನ ಎಲ್ಲಾ ಕಥೆಗಳ ಅಂತ್ಯ ಓದುಗನ ನಿರೀಕ್ಷೆಯಂತೆ ಭಾರವಾಗಿರುವುದಿಲ್ಲ. ನಾವು ನಿರೀಕ್ಷಿಸಿದಂತೆ ಮುಗಿಯದೇ ಇನ್ನೊಂದೇ ರೀತಿಯಲ್ಲಿ ಮುಗಿದು ಹೃದಯವನ್ನು ಹಗುರಾಗಿಸಿ, ಕಣ್ತುಂಬಿಸಿ ಮುಖದಲ್ಲೊಂದು ಮಂದಹಾಸ ಮೂಡಿಸಿಬಿಡುತ್ತದೆ. ಕಥೆಗಳ ಅಂತ್ಯ ಇನ್ನೊಂದು ಆರಂಭದಂತಿರುತ್ತದೆ.
ಮನಸ್ಸಿನಲ್ಲಿ ಬಹುಕಾಲ ಉಳಿಯುವ ಇಂಥ ಉತ್ತಮ ಕಥೆಗಳ ಕರ್ತೃ ಮಂಜು ಅವರನ್ನು ಮತ್ತು ಇಂಥದೊಂದು ಸಾರ್ಥಕ ಕೃತಿಯನ್ನು ಪ್ರಕಟಿಸಿದ ಅಹರ್ನಿಶಿ ಪ್ರಕಾಶನವನ್ನು ಹೃತ್ಪೂರ್ವಕ ಅಭಿನಂದಿಸುತ್ತೇನೆ. ಮಂಜು ಕನ್ನಡ ಕಥಾ ಸಾಹಿತ್ಯದ ಭರವಸೆ..
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಾರುತಿ ದಾಸಣ್ಣವರ