Article

ಕಣ್ಣು ತೆರೆಸುವ ‘ಉಲ್ಟಾ ಅಂಗಿ’

ಓದು ಬರಹ ಬರದ ಕೆಲ ವಿದ್ಯಾರ್ಥಿಗಳನ್ನು ಹೇಗಾದರೂ ಮಾಡಿ ಕಲಿಸಲೇಬೇಕೆಂಂಬ ಆರ್ದ್ರತೆಯಿಂದ ಹಂಬಲಿಸುವ ಶಿಕ್ಷಕ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಒಳಹೊಕ್ಕು, ಅವರಿಗೆ ಗೊತ್ತಿರುವ ಕಥೆಗಳನ್ನು ಕೇಳುವ ಮೂಲಕ, ಅವರವರ ಕೌಟುಂಬಿಕ ವ್ಯವಹಾರವನ್ನು ಗಣಿತ ವಿಷಯಕ್ಕೆ ಅನ್ವಯಿಸಿಕೊಳ್ಳುವ ಮೂಲಕ, ಪರಿಸರ ಮಾಲಿನ್ಯ ಜಾಗೃತಿಗಾಗಿ ಗಣೇಶ ವಿಸರ್ಜನೆಯನ್ನು ಬಳಸಿಕೊಳ್ಳುವದರ ಮೂಲಕ, ಹುಟ್ಟು ಹಬ್ಬದ ದಿನ ಚಾಕಲೇಟ್ ಹಂಚಲಾಗದ, ಬಡ ಮಗುವಿನ ಬ್ಯಾಗನಲ್ಲಿ ಗೊತ್ತಾಗದಂತೆ ಚಾಕಲೇಟ್ ಇರಿಸುವ ಮೂಲಕ, ಕೆಲ ಮಕ್ಕಳಿಗೆ ಆಗಾಗ ಬಣ್ಣ, ಪೆನ್ಸಿಲ್, ಪೆನ್ನು, ಹಾಳೆಗಳನ್ನು ನೀಡುತ್ತಾ ಮಕ್ಕಳ ನೆತ್ತಿ ನೇವರಿಸಿ, ಚೂರು ಹೆಗಲ ಮೇಲೆ ಕೈಯಾಡಿಸಿ ಹುರಿದುಂಬಿಸುವ ತುಂಬು ಅಂತಃಕರಣದ ಓರ್ವ ಆದರ್ಶ ಶಿಕ್ಷಕ ‘ಉಲ್ಟಾ ಅಂಗಿ’ ಕಥಾ ಸಂಕಲನದ ಹಲವು ಕಥೆಗಳಲ್ಲಿ ಓದುಗರ ಹೃದಯವನ್ನು ತಟ್ಟುತ್ತಾರೆ.

ಮಲೆನಾಡಿನ ಮಕ್ಕಳ ಓಡಾಟ, ಬಡತನ, ಗ್ರಾಮೀಣ ಸಂವೇದನೆಯ ವಾಸ್ತವಗಳು ಇವರ ಕತೆಗಳಲ್ಲಿ ಅರ್ಥಪೂರ್ಣವಾಗಿ ಧ್ವನಿಸಿವೆ. ಕೇವಲ ಮಕ್ಕಳ ಸಾಹಿತ್ಯವೆಂದು ಸೀಮಿತ ಪರಿಧಿಯಲ್ಲಿಟ್ಟು ನೋಡುವ ಬದಲು, ‘ಉಲ್ಟಾ ಅಂಗಿ’ಯಲ್ಲಿರುವ ಕಥೆಗಳನ್ನು ಮುಖ್ಯವಾಗಿ ಶಿಕ್ಷಕರು ಹಾಗೂ ಪೋಷಕರು ಓದುವ ತುರ್ತಿದೆ. ಮಕ್ಕಳ ಮೇಲಿರುವ ಮಮತೆ, ಮಾನವೀಯ ಸಂಬಂಧಗಳನ್ನು ತುಂಬುವ ತಮ್ಮಣ್ಣ ಬೀಗಾರವರ ಜೀವಪ್ರೀತಿ ಅನನ್ಯವಾಗಿದೆ. ಮಕ್ಕಳಿಗೆ ಕಥೆ ಬರೆಯುವ, ಚಿತ್ರ ಬರೆಯುವ, ಭಿನ್ನವಾಗಿ ಆಲೋಚಿಸುವ ಹೊಸಹೊಸ ಹೊಳುಹುಗಳನ್ನು ಹೇಳುವ ಬರೆಯುವ ಇವರ ಕ್ರಮವನ್ನು ಖುದ್ದು ಅವರ ಶಾಲೆಗೆ ಹೋಗಿ ನೋಡಿ ಬಂದಿರುವೆ. ಬರೆದಂತೆಯೇ ಬದುಕುತ್ತಿರುವ ನನ್ನ ಅಪರೂಪದ ಬರಹಗಾರರಲ್ಲಿ ತಮ್ಮಣ್ಣ ಬೀಗಾರವರು ಓರ್ವರಾಗಿದ್ದಾರೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆ.ಬಿ.ವೀರಲಿಂಗನಗೌಡ್ರ