Article

ಕಸ್ತೂರ್ ಬಾ ಜೀವನ ಕಥನ- ಒಂದು ಒಳನೋಟ

ಭಿನ್ನ ಆಲೋಚನೆ, ಭಿನ್ನ ನಿಲುವಿನ ಡಾ. ಎಚ್. ಎಸ್. ಅನುಪಮಾ ಏನು ಮಾಡಿದರೂ ಅದು ವಿಭಿನ್ನವೇ ಆಗಿರುತ್ತದೆ ಎಂಬ ಮಾತಿಗೆ ಕಸ್ತೂರ್ ಜೀವನ ಕಥನ ಒಂದು ಉದಾಹರಣೆ. ಮೈಸೂರಿನಲ್ಲಿ ಪುಸ್ತಕ ಲೋಕಾರ್ಪಣೆ ಮಾಡುತ್ತ ಮಮತಾ ಸಾಗರ್ ಹೇಳಿದ ಹಾಗೆ ಅನುಪಮಾ ಸ್ವತಃ ನಿವೇದಿಸಿದ ಪ್ರಸ್ತಾವನೆ ರೂಪದ ಬರಹವನ್ನು ಓದಿಯೇ ಪ್ರತಿ ಓದುಗ ಮುಂದೆ ಸಾಗಬೇಕು. ಕೃತಿ ರಚನೆಯ ಹಿನ್ನೆಲೆಯ ಜೊತೆಗೇ ಅದನ್ನು ಓದುವ ಕ್ರಮ ಹೇಗೆಲ್ಲ ಇರಬೇಕೆಂಬ ಸೂಕ್ಷ್ಮ ಸೂಚನೆ, ಸುಳಿವುಗಳು ಅಲ್ಲಿ ವಿಪುಲವಾಗಿ ಸಿಗುತ್ತವೆ. ಓದಿಗೆ ಒಂದು ದಿಕ್ಸೂಚಿ ದೊರಕುತ್ತದೆ.
ಮೊದಲೊಮ್ಮೆ ಬರೆದು ಮುಗಿಸಿದ ಬಳಿಕ ಅದು ಕಸ್ತೂರ್ ಕಥನವಾಗುವ ಬದಲಾಗಿ ಗಾಂಧಿ ನೆರಳಾಗಿ ಕಸ್ತೂರ್ ಕಥನ ಹಿಂಬಾಲಿಸಿದ ವಿಸ್ಮಯ, ಅದನ್ನು ಅಳಿಸಿ ಹಾಕಿ ಬೇರೆಯದೇ ಮತ್ತೊಂದು ವಿಶಿಷ್ಟ ಕ್ರಮದಲ್ಲಿ, ವಿಶಿಷ್ಟ ಒಳನೋಟದಲ್ಲಿ ತಾವು ಈ ಕೃತಿ ರಚನೆ ಮಾಡಿದ್ದನ್ನು ಲೇಖಕಿ ಹಂಚಿಕೊಳ್ಳುತ್ತಾರೆ. ಅವರಿಗೆ ಈ ಕಥನದ ಅನನ್ಯತೆ ಕುರಿತ ಸ್ಪಷ್ಟ ಕಲ್ಪನೆ, ನಿರೀಕ್ಷೆಗಳಿದ್ದವು ಎಂಬುದಕ್ಕೆ ಈ ಮಾತು ಸಾಕ್ಷಿ.

ಇಲ್ಲಿ ಮಾತನಾಡುವ ಎರಡು ಹೆಣ್ಣು ಜೀವಗಳಿವೆ..ಒಂದು, ಜಗತ್ತೇ ತನ್ನತ್ತ ತಿರುಗಿ ನೋಡಿ ವಿಸ್ಮಯಪಡುವಾಗ ತನ್ನನ್ನು ತಾನು ಶೋಧನೆಗಳಿಗೆ ಒಡ್ಡಿಕೊಳ್ಳುತ್ತಲೇ ಸಾಗಿದ ಮಹಾನುಭಾವನ ಹೆಂಡತಿ ಎನಿಸಿಕೊಂಡಾಗಲೂ ಕೊನೆವರೆಗೂ ತನ್ನತನವನ್ನು ಕಾಪಿಟ್ಟುಕೊಂಡ ಸಮತೂಕದ ಜೀವ ಕಸ್ತೂರ್...ಮತ್ತೊಂದು ತಾನು ಮಾಡುವ ಪ್ರತಿಯೊಂದು ಕೆಲಸದಲ್ಲಿ, ಓದಿನಲ್ಲಿ, ಬರವಣಿಗೆಯಲ್ಲಿ ಯಾವುದರಲ್ಲೇ ಆಗಲಿ ಮನುಜ ಪ್ರೇಮ, ಸಮಷ್ಟಿ ಪ್ರಜ್ಞೆ, ಘನತೆಯ ಬದುಕನ್ನು ಮಿಡಿಯುವ, ಅವಕಾಶ ಸಿಕ್ಕಿದಲ್ಲೆಲ್ಲ ಪಿತೃ ಸಂಸ್ಕೃತಿಯನ್ನು ತರಿಯುತ್ತ ಸಾಗುವ ಸೂಕ್ಷ್ಮ ಸಂವೇದನೆಯ ಬರಹಗಾರ್ತಿ..ಆಳದಲ್ಲಿ ಒಮ್ಮೊಮ್ಮೆ ‌ಅಖಂಡ ಹೆಣ್ಣು ಕುಲವೇ ಎದ್ದು ನಿಂತು ಪ್ರಶ್ನಿಸುತ್ತಿರುವಂತೆಯೂ ಭಾಸವಾಗುತ್ತದೆ. ನೇಯ್ಗೆಯ ಒಂದೊಂದು ಎಳೆಯೂ ಹೀಗೇ ಇರಬೇಕೆಂಬ ಲೇಖಕರ ಸಂವೇದನೆ ಸೂಕ್ಷ್ಮ ಓದಿಗೆ ದಕ್ಕುವ ಅಂಶವಾಗಿದೆ. ಒಬ್ಬ ಸಾಮಾನ್ಯ ಹೆಣ್ಣಿನ ರೂಪದಲ್ಲಿ ಕಸ್ತೂರ್ ತನ್ನನ್ನು ತಾನು ಬಿಡಿಸಿಡುತ್ತ ಹೋಗುವ ಕ್ರಮ ಲೇಖಕರ ಆಶಯಗಳ ಅನಾವರಣಕ್ಕೆ ವಿಸ್ತಾರವಾದ ಅವಕಾಶ ಒದಗಿಸುತ್ತ ಸಾಗುವ ರೀತಿಯೇ ಚಂದ. ಹೇಗಿದ್ದೀಯ ಮಗೂ ಎನ್ನುತ್ತ ಮಾತಿಗೆ ತೊಡಗುವ ಕಸ್ತೂರ್ "ಲೋಕದ ಮಾತು ಬಿಡು, ನಮ್ಮ ಪರಿಚಯ ನಮಗೇ ಇರಲ್ಲವಲ್ಲ..ನಮ್ಮ ಭಾಷೆ ಅಂಥದು" ಎಂದು ಬಿಡುತ್ತಾರೆ!  

ತವರ ಸೊಬಗನ್ನು, ಮೊರೆವ ಕಡಲನ್ನು ಬಣ್ಣಿಸುತ್ತಲೇ ಮದುವೆಯೆಂಬ ಆಟದ ನೆನಪುಗಳನ್ನು ಕೆದಕುತ್ತಾರೆ. ಮಗು ಹುಟ್ಟುತ್ತಲೂ 'ಹರಿಯ ಅಪ್ಪ' ದಕ್ಷಿಣ ಆಫ್ರಿಕೆಗೆ ಹೊರಟು ನಿಂತಾಗಿನ ಕಸ್ತೂರ್ ತಳಮಳ... ಸಂಗಾತಿಯನ್ನು ಮೋಕ ಸಂತೈಸುವ ರೀತಿಯಲ್ಲಿ ಯಾವುದೇ ಹೆಣ್ಣು ಜೀವ ತಾನು ಅನುಭವಿಸಲು ಬಯಸುವ ಆರ್ದ್ರ ಮಾಧುರ್ಯವನ್ನು ನಿರೂಪಿಸುವ ಸೊಗಸು ಆಪ್ತ. ಮಗುವಿಗೆ ಹಾಲೂಡುವ ಸೊಬಗಿನ ಜೊತೆಗೇ ತಾನು ಕಳೆದುಕೊಂಡ ಮೊದಲ ಮಗುವಿನ ನೆನಪಲ್ಲಿ ನಿದ್ರಿಸುವ ಈ ಮಗುವನ್ನು ಮುಟ್ಟಿ ಮುಟ್ಟಿ ನೋಡಲು ಬಯಸುವ ತಾಯಿಯ ವರ್ಣನೆಯಲ್ಲಿ ಓರ್ವ ವೈದ್ಯೆ, ತಾಯಿ ಇಬ್ಬರ ಬೆಚ್ಚಗಿನ ಭಾವಗಳೂ ಕಾಣಸಿಗುತ್ತವೆ. ತನ್ನ ಮೊದಲ ಕಡಲ ಯಾನದಲ್ಲಿ ತನಗೆ ಓದು,ಬರವಣಿಗೆ ಕಲಿಸುವ ಭಾಯಿ.. ಎರಡನೇ ಹೆರಿಗೆಯಲ್ಲಿ ಸ್ವತಃ ದಾದಿಯಾಗಿ ಸುಶ್ರೂಷೆಗೈಯುವ ಭಾಯಿ... ಸ್ವಚ್ಛತೆ, ಸರಳತೆ, ಸಮಾನತೆಯ ಪಾಠ ಹೇಳುವಾಗ ತನ್ನ ಮೋಕ ಭಾಯಿ ಆಗಿ ಬೆಳೆದ ಪರಿಗೆ ಕಸ್ತೂರ್ ಜೀವ ಹೆಮ್ಮೆ ಪಡುತ್ತದೆ. ಆದರೆ ಅದೇ ಭಾಯಿ ತಾನು ಪಂಚಮರ ಮಲದ ಕೊಡ ಎತ್ತಲು ನಿರಾಕರಿಸಿದಾಗ  ಅಪರಿಚಿತ ನಾಡಿನಲ್ಲಿ ತನ್ನನ್ನು ' ಇರುವುದಾದರೆ ಇರು, ಇಲ್ಲದಿದ್ದರೆ ಹೊರಟು ಹೋಗು' ಎಂದು ಬಿಡುವ ಮಾತಿನ ಕಟುತ್ವವನ್ನು ದಿಟ್ಟತನದಿಂದ ಎದುರಿಸಿದ ಗಳಿಗೆಯನ್ನು ತಣ್ಣಗೆ ನಿರೂಪಿಸುತ್ತಾರೆ.

ಭಾಯಿ ಮೇಲೆ ಟಾಲ್ಸ್ಟಾಯ್ ಎಂಬ 'ಋಷಿ'ಯ ಪ್ರಭಾವ.. ಅದರಿಂದ ಹೆಚ್ಚಿದ ಆಶ್ರಮವಾಸದ ತವಕ..ಸತ್ಯಾಗ್ರಹದ ಪರಿಕಲ್ಪನೆ.. ಎಲ್ಲದರ ಜಿಜ್ಞಾಸೆಗೆ ತೊಡಗುವ ಕಸ್ತೂರ್ ಮುಂದೆ ಗಾಂಧಿ ಆಗಿ ಹೊಮ್ಮಿದ ಭಾಯಿಯ ಶಕ್ತಿ ಇದ್ದುದು ಪ್ರಕೃತಿ ದತ್ತವಾಗಿ ಮನುಜರಿಗೆ ಪ್ರಾಪ್ತವಾದ ಸತ್ಯಕ್ಕಾಗಿ ಆಗ್ರಹಿಸುವ ಅವರ ನಿಲುವಿನಲ್ಲಿ ಎಂದು ಸ್ಪಷ್ಟವಾಗಿ ಗುರುತಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಜತೆಗೂಡುವ ಮಿಲಿ, ಸೋನ್ಯಾರಂಥ ಹೆಣ್ಮಕ್ಕಳು ಹೆಣ್ಣುಗಳನ್ನು ಗೆಳತಿಯಾಗಿ ನೋಡದ ಭಾರತೀಯ ಪುರುಷ ಮನಸ್ಥಿತಿಯನ್ನು ಪದೇ ಪದೇ ಪ್ರಶ್ನಿಸುವಾಗ ಭಾಯಿ ಮೇಲೆ ಆದ ಪರಿಣಾಮ.. ಅನಂತರದ ಹೋರಾಟಗಳಲ್ಲಿ ಮಹಿಳೆಯರನ್ನು ಹೋರಾಟದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡ ಭಾಯಿ ಮೇಲೆ ಅವರ ಸುತ್ತ ಇದ್ದ ಹೆಣ್ಣು ಮಕ್ಕಳ ದೊಡ್ಡ ಪಾತ್ರವಿತ್ತು ಎಂದು ವಿವರಿಸುತ್ತಲೇ ಇದರಿಂದ ಗಾಂಧಿಯಲ್ಲಿ ಮೈದಳೆದ ಹೆಣ್ಣುತನ, ಅವರ ಮಾತಿನಲ್ಲಿ ಕರುಣೆ, ಕಳಕಳಿಯನ್ನು ತುಂಬಿದ ಈ ಹೆಣ್ಮಕ್ಕಳ ಕುರಿತು ಅಭಿಮಾನ ವ್ಯಕ್ತಪಡಿಸುತ್ತಾರೆ ಕಸ್ತೂರ್.

ಸರಳ ಜೀವನದ ಸೂತ್ರಗಳಿಗೆ ಒಗ್ಗಿಕೊಳ್ಳುತ್ತಲೇ ತಾನು ಹೋರಾಟದ ದಾರಿ ತುಳಿಯುವ ಕಸ್ತೂರ್ ಭಾಯಿಯ ಸತ್ಯ ಶೋಧನೆಯ ದಾರಿಯಲ್ಲಿ ತನ್ನ ಆಂತರಿಕ ಹೊಯ್ದಾಟವನ್ನೂ ನಿರೂಪಿಸುತ್ತಾರೆ. ರೂಪಾಂತರಗೊಂಡ ತನಗೆ ಚರಕಾ ಎಂಬ ನಿತ್ಯ ಸಂಗಾತಿ ದೊರೆತ ಮೇಲೆ ಬದುಕಿನ ಗತಿಯೇ ಬದಲಾದುದನ್ನು ಬಣ್ಣಿಸುತ್ತಾರೆ.. "ನೂಲುವುದೆಂದರೆ ಧ್ಯಾನ.. ಚರಕಾ ತಿರುಗಿಸಿ ನೂಲು ತೆಗೆದಂತೆ ನಾವು ಸಹ ಹತ್ತಿಯಾಗಿ, ದಾರವಾಗಿ,ಲಡಿಯಾಗಿ,ಬಟ್ಟೆಯಾಗಿ ಬದುಕು ನಡೆಯುವುದು.." ಎಂಬ ಚರಕಾ ಫಿಲಾಸಫಿ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಈ ಮಾತಿಗೆ ಕಳಶವಿಟ್ಟಂತೆ  " ಮಣಿ ತಿರುಗಿಸುತ್ತ ಮಾಡುವ ಜಪಕ್ಕಿಂತ ನೂಲುವುದು ತುಂಬ ಒಳ್ಳೆಯ ಪೂಜೆ ... ಜಡಗೊಂಡದ್ದೆಲ್ಲ, ಜಡಗೊಂಡವರೆಲ್ಲ ತಿರುಗುವಂತೆ ಮಾಡುವ ಶಕ್ತಿ ಆ ಪುಟ್ಟ ಚಕ್ರಕ್ಕೆ, ಆ ಎಳೆಗೆ ಇದೆ" ಎಂಬ ಒಳನೋಟ.
ಸಬರಮತಿ ಆಶ್ರಮ... ಅಲ್ಲಿಂದ ಹೊರ ಬಂದ ನಂತರ ವರ್ಧಾ ಆಶ್ರಮ.. ಸೇಗಾಂವ್ ಎಂಬ ಕುಗ್ರಾಮದಲ್ಲಿ ಇಲ್ಲಗಳೆಲ್ಲ ಕಳೆದು ಇದೆ ಆಗುವ ವರೆಗಿನ ಕ್ರಮಣದಲ್ಲಿ ಭಾಯಿಗೆ ಜತೆಯಾದ ಎಳೆಯ ಜೀವಗಳು.. ಭಾಯಿಗೆ ಉಪವಾಸ ಕುರಿತು ಹೆಚ್ಚಿದ ನಂಬಿಕೆ.. ಹದಗೆಡತೊಡಗಿದ ತನ್ನ ಆರೋಗ್ಯ.. ಎಡೆಬಿಡದ ಭಾಯಿಯ ಪತ್ರ ವ್ಯವಹಾರ ಎಲ್ಲವೂ ಕಸ್ತೂರ್ ನೋಟಕ್ಕೆ ದಕ್ಕುತ್ತ ಸಾಗುತ್ತದೆ. ವಿನೋಬಾ, ರವೀಂದ್ರನಾಥ ಟಾಗೋರ್, ಬಾಬಾ ಸಾಹೇಬ್ ಅಂಬೇಡ್ಕರ್ ರಂಥವರೊಡನೆ ಭಾಯಿ ಒಡನಾಟದ ಸಂದರ್ಭ. ಬಾಬಾ ಸಾಹೇಬರ ಸಹವಾಸದಲ್ಲಿ ಅಸ್ಪೃಶ್ಯತೆ ಕುರಿತು ಅಮೂಲಾಗ್ರವಾಗಿ ಬದಲಾದ ತಮ್ಮ ಧೋರಣೆಯನ್ನು ನಿರೂಪಿಸುವ ಕಸ್ತೂರ್ ಹರಿಲಾಲ ಕುರಿತು ಹಂಚಿಕೊಳ್ಳುವ ನೋವು ಓದುಗರು ತಲ್ಲಣಿಸುವಂತೆ ಮಾಡಿ ಬಿಡುತ್ತದೆ. ಬಾಪು ಆಗಿ ಜಗತ್ತಿಗೇ ಮಾದರಿಯಾಗುವ ತನ್ನ ಭಾಯಿ ತಂದೆಯಾಗಿ‌ ಸೋತರೆಂದು ಕಸ್ತೂರ್ ಜೀವ ಮರುಗುತ್ತದೆ. ಹಾಗೆ ಹೇಳುವಾಗಲೂ ತಾಯಿಯಾಗಿ ತಾನು ನಿರ್ವಹಿಸಿದ ಪಾತ್ರದಲ್ಲೇ ಕೊರತೆ ಇತ್ತೇನೊ ಎಂದು ಕಳವಳಿಸುವ ಮಾತೃ ಹೃದಯದ ಹಿರಿಮೆಯೆದುರು ಲೋಕದ ಹಿರಿತನ ಮಂಡಿಯೂರುತ್ತದೆ. ಒಂದೊಂದಾಗಿ ಕಳಚಿಕೊಳ್ಳುತ್ತ ತಂದೆ ಸಾಗುವಾಗ ಮಗ ಎಲ್ಲ ಬಗೆಯ ವ್ಯಸನಗಳನ್ನೂ ಅಪ್ಪಿಕೊಳ್ಳುವುದು..ಮತಾಂತರ.. ನಿರುದ್ಯೋಗ.. ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನಿರೂಪಿಸುವ ಕಸ್ತೂರ್ 'ತಾಯಿ- ಹೆಂಡತಿ ಎರಡು ಪಾತ್ರಗಳ ನಡುವೆ ಸುಡುವ ಹೆಣ್ಣು ಜನ್ಮವೇ ಬೇಡ' ಎಂದು ನಿಟ್ಟುಸಿರುಗರೆವಾಗ 'ಮಾರು ಗೆಲ್ಲಬೇಕಾದವ ಮನೆಯಲ್ಲಿ ಸೋಲಲೇಬೇಕೆ' ಎಂಬ ಪ್ರಶ್ನೆಯೊಂದು ವಾಚಕರನ್ನು ಕಾಡತೊಡಗುತ್ತದೆ.
ಆಹಾರದಲ್ಲಿ ಸರಳತೆ ತರಲು ಹಂಬಲಿಸುವ ಭಾಯಿ ಅದನ್ನು ಒತ್ತಾಯಪೂರ್ವಕವಾಗಿ ಮಕ್ಕಳ ಮೇಲೆಯೂ ಹೇಳುವುದನ್ನು ಕಸ್ತೂರ್ ವಿರೋಧಿಸುತ್ತಾರೆ. ಅಷ್ಟೇ ಅಲ್ಲ ಹರಯ ಉಕ್ಕಿ ಹರಿಯುವ ಕಾಲದಲ್ಲಿ ಮಕ್ಕಳು ಸಹ ಬ್ರಹ್ಮಚರ್ಯ ಪಾಲಿಸಲಿ ಎಂದು ಬಯಸುವ 'ಗಾಂಧಿಗಿರಿ'
ಅಸಹಜ ಎನಿಸಲಾರಂಭಿಸುತ್ತದೆ. ಯಾವುದೆಲ್ಲವನ್ನು ತಾನು ಅನುಭವಿಸಿ ಉಂಡ ಬಳಿಕ ನಿರಾಕರಿಸಲು ನಿರ್ಧರಿಸಿದರೊ ಅಂಥದೇ ಅವಕಾಶವನ್ನು ಎಳೆಯರಿಂದ ಕಸಿದುಕೊಳ್ಳುವ ಗಾಂಧಿ ನಿಲುವು ಅನುಚಿತ ಎನಿಸುತ್ತದೆ.


ಉಪವಾಸಗಳ ಅಭಿಯಾನದ ಜೊತೆಗೇ 'ಇನ್ನು ಮೇಲೆ ನಾವಿಬ್ಬರೂ ದೂರ ಇರೋಣ' ಎಂದು ಘೋಷಿಸಿ ಬಿಡುವ ಗಾಂಧಿ ನಿರ್ಧಾರದ ಒಮ್ಮುಖತೆ... ತನ್ನ ಸಹಧರ್ಮಿಣಿಯ ಇಷ್ಟಾನಿಷ್ಟಗಳನ್ನು ಕೇಳುವ ಸೌಜನ್ಯವನ್ನೂ ತೋರದ ನಿರಂಕುಶತೆ... ಈ ಘಟನೆ ತನ್ನ ವ್ಯಕ್ತಿತ್ವಕ್ಕೆ ಎಸೆದ ಸವಾಲಿನಂತೆ ಎದುರಾದ ರೀತಿ... ಅದರೊಂದಿಗೆ ತಾನು ಹೊಂದಾಣಿಕೆ ಮಾಡಿಕೊಳ್ಳಲು ಹೆಣಗಾಡಿದ ಬಗೆ ಎಲ್ಲವೂ ಮನೋವೈಜ್ಞಾನಿಕ ಜಾಡಿನಲ್ಲಿ ಮೈದಳೆದು ವಾಚಕರು ಹಲವು ಬಗೆಯ ಪ್ರಶ್ನೆಗಳಿಗೆ ಮುಖಾಮುಖಿಯಾಗುವಂತೆ ಮಾಡುತ್ತದೆ. ಪ್ರೇಮ ಕಾಮಗಳನ್ನು ಬಾಪು ಬೇರೆ ಬೇರೆಯಾಗಿ ನೋಡಿದ್ದೇ ತಪ್ಪು.. ಅವು ಒಂದು ನಾಣ್ಯದ ಎರಡು ಮುಖಗಳು ಎಂಬ ನಿಲುವು ಒಂದರ ಇರುವಿಕೆಗೆ ಇನ್ನೊಂದರ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ. ಕಾಮವನ್ನು ಗೆಲ್ಲಲು ಹೊರಟಾತ ಸರಳಾದೇವಿ ಎಂಬ ರೂಪವತಿಗೆ ಮರುಳಾಗಿ ಅದರಿಂದ ಹೊರಬರಲು ಒದ್ದಾಡಿದ ಪರಿ ತತ್ವ ಆದರ್ಶಗಳ ಬೇರುಗಳನ್ನೇ ಅಲ್ಲಾಡಿಸುತ್ತದೆ.


ಸತ್ಯ ಶೋಧನೆ, ಸರಳ ಜೀವನ, ಸತ್ಯಾಗ್ರಹ, ಚಳುವಳಿ, ಹೋರಾಟದ ಜೀವನದಲ್ಲಿ ಗಾಂಧಿ ಕಳೆದು ಹೋಗುವಾಗ ಎಲ್ಲಕ್ಕಿಂತ ಹೆಚ್ಚು ಅವರನ್ನು ಅವರ ಮಕ್ಕಳು ಕಳೆದುಕೊಂಡರು ಎಂದು ಕನವರಿಸುವ ತಾಯೊಡಲು ಎಲ್ಲರ ಬಾಪು ಆಗಲು ನನ್ನ ಮಕ್ಕಳ ಬಾಪು ಮಾಯವಾದರು ಎಂಬ ನೋವನ್ನು ತಣ್ಣಗೆ ಹಂಚಿಕೊಳ್ಳುತ್ತಾರೆ. ಬಾಪು ದೇಶಕ್ಕಾಗಿ ಎಲ್ಲವನ್ನೂ ಬಿಟ್ಟರು... ನಾನು ಬಾಪುವನ್ನೇ ಬಿಟ್ಟು ಕೊಟ್ಟೆ ಎಂದು ಕಸ್ತೂರ್ ಬಾಯಲ್ಲಿ ಹೇಳಿಸಿ ಕಸ್ತೂರ್ ಎಂಬ ಜೀವ ಬಾಪುವಿಗಿಂತ ಅದು ಹೇಗೆ ಮೇಲು ಎಂದು ಸಾಬೀತು ಪಡಿಸಲು ತೊಡಗುತ್ತಾರೆ ಲೇಖಕಿ.
ಐತಿಹಾಸಿಕ ಘಟನೆಗಳನ್ನು ಕ್ರಮಬದ್ಧವಾಗಿ ಪೋಣಿಸುವಲ್ಲಿ ಲೇಖಕರು ತೋರಿಸುವ ಸೂಕ್ಷ್ಮತೆ ಅನನ್ಯ. ಸಹಜವಾಗಿ ರೂಪು ತಳೆಯುವ ರೂಪಕಗಳಂತೂ ಒಂದಕ್ಕಿಂತ ಒಂದು ಚಂದ. ' ಸಬರಮತಿ ನದಿಯ ನೀರು ಅವರ ಲೇಖನಿಯ ಶಾಯಿಯಾಗಿ ತುಂಬಿ ಅದು ಖಾಲಿಯೇ ಆಗುತ್ತಿಲ್ಲವೇನೊ ಎನಿಸುವಷ್ಟು ಪತ್ರಗಳನ್ನು ಬಾಪು ಬರೆಯುತ್ತಿದ್ದರು..' 'ತಂದೆ ಮಕ್ಕಳ ಸಂಬಂಧ ಅಳಿಸಿ ಬಿಡಲು ಸಾಧ್ಯವೇ? ಎಷ್ಟಿಲ್ಲ ಅಂದರೂ ಚರ್ಮದ ಹಾಗೆ ಅಂಟಿಕೊಂಡಿರುತ್ತದೆ..' - ಒಂದೆರಡು ಝಲಕು ಇವು. ತನ್ನವನ ಹೆಜ್ಜೆಯಲಿ ಹೆಜ್ಜೆ ಇರಿಸುತ್ತಲೇ ಸಾಗುವಾಗಲೂ ಆತನ ಗುಣ ಅವಗುಣಗಳನ್ನು ಒರೆಗೆ ಹಚ್ಚುತ್ತದೆ ಕಸ್ತೂರ್ ಜೀವ. ಲೋಕ ಆತನನ್ನು ಮಹಾತ್ಮನೆನ್ನುವಾಗ ಆತನಲ್ಲಿನ್ನೂ ಅಳಿಯದೇ ಉಳಿದ 'ನಾನು' ಇತ್ತು ಎಂಬುದನ್ನು ಆ ಜೀವ  ಗುರುತಿಸುತ್ತದೆ. ಇದೆಲ್ಲವೂ ಲೇಖಕಿ ತಮ್ಮ ನಿಲುವು,ನೋಟಗಳಿಗೆ ತೊಡಿಸುವ ಸುಂದರ ಹೊದಿಕೆ.‌


ಭೂಮಿಯ ಮೇಲೆ ಬೆಳೆದ ಮರದಂತೆ ಬಾಪು.. ನೆಲವನ್ನೇ ಆಶ್ರಯಿಸಿ ಬೆಳೆದ ಗರಿಕೆ ತಾನು..ಎರಡರ ಮಾಪನವೂ ಬೇರೆ.. ಎರಡರ ಸಾರ್ಥಕ್ಯ ಒಂದೇ ಎಂಬ ಷರಾದೊಂದಿಗೆ ಕಥನಕ್ಕೊಂದು ಪೂರ್ಣ ವಿರಾಮ ಇರಿಸುವ ಲೇಖಕಿ ಕೊನೆಯಲ್ಲಿ ಪ್ರಶ್ನೆಯೊಂದನ್ನು ತೂರಿ ಬಿಡುತ್ತಾರೆ -
'ಯಾವೆಲ್ಲ ಪ್ರಯೋಗಗಳನ್ನು ಗಾಂಧಿ ಮಾಡಿದರೊ.. ಯಾವುದಕ್ಕೆಲ್ಲ ತಾನು ಉರಿವ ದೀಪದ ಬತ್ತಿಯಾಗಿ ಸುಟ್ಟುಕೊಂಡೆನೊ ಅದೇ ತಿರುವು ಮುರುವಾಗಿದ್ದರೆ!! ಗಾಂಧಿಯಾಗಿ ರೂಪಾಂತರಗೊಂಡ ಮೋಕ ತನ್ನನ್ನು ಅದೇ ಶ್ರದ್ಧೆ, ನಿಷ್ಠೆಯಿಂದ ತನ್ನನ್ನು ಹಿಂಬಾಲಿಸುತ್ತಿದ್ದರೇ? '
ಹೆಣ್ಣು ಕುಲ ಎಂದಿನಿಂದ ಕೇಳುತ್ತಲೇ ಬಂದಿರುವ, ನಿಶ್ಯಬ್ದವೇ ಉತ್ತರವಾಗಿರುವ ಪ್ರಶ್ನೆ ಅದು. ಇಡಿಯಾಗಿ ಕಥಾನಕ ಪ್ರಸ್ತಾವನೆಯಲ್ಲಿ ಲೇಖಕಿ ತಾವೇ ಹೇಳಿರುವಂತೆ ಮಹಿಳಾ ದೃಷ್ಟಿಕೋನ, ಸಬಾಲ್ಟ್ರನ್ ದೃಷ್ಟಿಕೋನ, ದಲಿತ ದೃಷ್ಟಿಕೋನ, ಧಾರ್ಮಿಕ - ಆಧುನಿಕ ದೃಷ್ಟಿಕೋನ ಒಂದೊಂದು ಕೋನದಲ್ಲಿಯೂ ಬಾಪುವನ್ನು ವಿಮರ್ಶಿಸುತ್ತ ಬಾ ಬದುಕನ್ನು ಅಸದೃಶ್ಯ ಬಗೆಯಲ್ಲಿ ಕಟ್ಟಿಕೊಡುವಲ್ಲಿ ಯಶಸ್ಸು ಸಾಧಿಸುತ್ತದೆ. ಬಾ ಬದುಕನ್ನು ಕಸ್ತೂರ್ ಬದುಕಾಗಿ ನೋಡುವ ನೋಟ, ನಿರೂಪಿಸುವ ಲೇಖನಿ ಎರಡರ ಹಿಂದೆಯೂ ಅದ್ವಿತೀಯ ಓದು, ಪೂರ್ವಾಗ್ರಹಗಳಿಂದ ಹೊರತಾದ ಮನೋಭೂಮಿಕೆ, ಕವಿ ಹೃದಯ, ಸಂಗೀತದ ಮೋಡಿ, ಹೆಂಗರುಳಿನ ಅದಮ್ಯ ತುಡಿತ, ಸಂವೇದನೆಗಳು ಹದವಾಗಿ ಬೆರೆತಿವೆ. ಈ ಕಥಾನಕ ಆದಷ್ಟು ಶೀಘ್ರ ಅನುವಾದಕರ ಕಣ್ಣಿಗೆ ಬೀಳಬೇಕು. ಹೆಚ್ಚೆಚ್ಚು ಜನರನ್ನು ತಲುಪಬೇಕು. ಗಾಂಧಿ ಎಂಬ ಪದ ಮಾರುಕಟ್ಟೆಯ ಸರಕಿನಂತಾಗಿರುವ ಈ ದುರಿತ ಕಾಲದಲ್ಲಿ ಕಸ್ತೂರ್ ಕಣ್ಣಿನ ಮೂಲಕ ಬಾಪುವನ್ನು ಗ್ರಹಿಸುವಾಗ ಓದುಗರು ಗಾಂಧಿ ಎಂಬ ಮನುಷ್ಯನನ್ನು ಸಂಧಿಸಲು ಇರುವ ಒಂದು ಉತ್ತಮ ಸಾಧನ ಈ ಕಥನ, ಲೇಖಕರ ಇದುವರೆಗಿನ ಎಲ್ಲ ಕೃತಿಗಳಿಗಿಂತ ವಿಭಿನ್ನ, ಸಜೀವ, ಲಲಿತ.

ಅಷ್ಟೇ ಅಲ್ಲ,  ಒಟ್ಟಾರೆ ಸ್ತ್ರೀ ಅಸ್ಮಿತೆಯ ಹುಡುಕಾಟವೂ ಆಗಿರುವ, ಅಪಾರ ಓದು, ವಸ್ತುನಿಷ್ಟ ನಿರೀಕ್ಷಣೆ, ಕೌಶಲ್ಯಪೂರ್ಣ ಕಲೆಗಾರಿಕೆಯಲ್ಲಿ ಅರಳಿ ಸ್ವತಃ ಒಂದು ಹೃದ್ಯ ಸಂಶೋಧನಾ ಪ್ರಬಂಧದಂತಿರುವ ಈ ಕೃತಿ ಸಂಶೋಧನಾಸಕ್ತರಿಗೆ ಆಕರ ಗ್ರಂಥವಾಗಿದೆ.

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಂದ್ರಪ್ರಭಾ