Article

ಕವಿ- ಕವಿತೆಯ ನಡುವಿನ ಸಂಘರ್ಷ

ಆಸೆ ಪಟ್ಟಿದ್ದೆಲ್ಲಾ ಸಿಗುವಂತಾದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಹಾಗೆಯೇ, ತೋಚಿದ್ದೆಲ್ಲಾ ಗೀಚಿದಾಗ ಕವಿತೆಗಳಾಗಿಬಿಟ್ಟರೆ ಅದಕ್ಕಿಂತ ದೊಡ್ಡ ಆನಂದವೇನಿರುತ್ತದೆ? ಎಸ್.ಕೆ.ಗಜೇಂದ್ರಸ್ವಾಮಿ ಓರ್ವ ಕವಿಮನಸಿನ ಮನುಷ್ಯರಾಗಿದ್ದಾರೆ. ಈ ಕವಿಮನಸು ಈಗ ‘ತೋಚಿದ್ದು- ಗೀಚಿದ್ದು’ ಎಂಬ ಕವಿತಾ ಸಂಕಲನದ ಮೂಲಕ ಬೆತ್ತಲಾಗುತ್ತಿದೆ. ಇಲ್ಲಿ ಅವರು ಗೀಚಿದ್ದೆಲ್ಲವೂ ಕವಿತೆ ಆಗುವ ಪ್ರಯತ್ನದಲ್ಲಿವೆ ಎಂಬುದೇ ವಿಶೇಷವಾದ ಸಂಗತಿ.

ಹಲವು ವರ್ಷಗಳಿಂದ ಮಿತ್ರರಾಗಿರುವ ಪತ್ರಕರ್ತ ಎಸ್. ಕೆ. ಗಜೇಂದ್ರಸ್ವಾಮಿಯವರು ಇದೇ ಮೊದಲ ಬಾರಿಗೆ ಸ್ವತಂತ್ರವಾಗಿ ತಮ್ಮದೇ ಕವಿತಾ ಸಂಕಲನವನ್ನು ಹೊರ ತಂದಿದ್ದಾರೆ. ಈ ಹಿಂದೆ ಸಂಪಾದಿತ ಸಂಕಲನಗಳನ್ನು ತಂದಿರುವ ಅನುಭವ ಗಜೇಂದ್ರಸ್ವಾಮಿಯವರಿಗಿದೆ. ತುಂಗಾ ತರಂಗ ಪತ್ರಿಕೆಯನ್ನು ಹೊರ ತರುತ್ತಲೇ ಅಲ್ಲಲ್ಲಿ ನಿಂತು-ಕುಂತು ಕವಿತೆಗನ್ನು ಸಂದರ್ಭಾನುಸಾರವಾಗಿ ಗೀಚುತ್ತಲೇ ಬಂದ ಗಜೇಂದ್ರಸ್ವಾಮಿಯವರು ಈ ಗೀಚುವಿಕೆಯನ್ನು ಯಾವುದೋ ಹಾಳೆಗಳಲ್ಲಿ ಮಡಚಿಡದೇ ಸಾಮಾಜಿಕ ಜಾಲತಾಣಗಲ್ಲಿ ಹರಿಯಬಿಡುತ್ತಿದ್ದರು. ಒಂದೊಂದು ಕವಿತೆಯು ನೂರೆಂಟು ಲೈಕುಗಳನ್ನು ಪಡೆದು, ಗಜೇಂದ್ರಸ್ವಾಮಿಯವರ ಗೀಚುವಿಕೆಗೆ ಇನ್ನಷ್ಟು ಉತ್ತೇಜನ ನೀಡಿದಂತಿದೆ. ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ಹುಟ್ಟುವ ಕವಿತೆ ಅಲ್ಲಿಯೇ ಹರಿದಾಡಿ ಕೊನೆಗಾಣುವುದು, ವರ್ಷಕ್ಕೊಮ್ಮೆ ಮತ್ತೆ ನೆನಪಾಗಿ ಶೇರ್ ಕೇಳುವುದು ನಡೆಯುತ್ತಿರುತ್ತದೆ. ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಹಲವು ಕವಿತೆಗಳನ್ನು ಒಟ್ಟುಮಾಡಿ ಸಂಕಲನ ರೂಪಕ್ಕೆ ಎತ್ತಿ ತಂದು ಅದನ್ನು ಪ್ರಕಾಶಿತಗೊಳಿಸುವುದು ಸುಮ್ಮನೆಯ ಮಾತಲ್ಲ. ಇಂತಹ ಕೆಲಸಕ್ಕೆ ದೊಡ್ಡ ಸ್ಫೂರ್ತಿಯೂ ಬೇಕಾಗುತ್ತದೆ. ಅಂತಹ ಕೆಲಸಕ್ಕೆ ಕೈಹಾಕಿ ‘ತೋಚಿದ್ದು- ಗೀಚಿದ್ದು’ ಸಂಕಲನವನ್ನು ನಮ್ಮ ಮುಂದಿಟ್ಟಿದ್ದಾರೆ.

ಫೇಸ್‌ಬುಕ್ಕಿನಲ್ಲಿ, ವ್ಯಾಟ್ಸಪ್, ಟ್ವಿಟರ್‌ಗಳಲ್ಲಿ ಗಜೇಂದ್ರಸ್ವಾಮಿಯವರ ನೂರಾರು ಕವಿತೆಗಳಿವೆ. ಯಾವುದೋ ಸಮುದ್ರದಲ್ಲಿ ಎಲ್ಲಾ ರೀತಿಯ ಜೀವಿಗಳಿರುವಂತೆ ಈ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಭಾವ ಹೊತ್ತ ಗಜೇಂದ್ರಸ್ವಾಮಿಯವರ ಕವಿತೆಗಳು ಕಾಣಬರುತ್ತವೆ. ತೋಚಿದ್ದೆಲ್ಲವನ್ನೂ ಗೀಚಿದ್ದೇನೆ ಎಂದು ಹೇಳಿಕೊಳ್ಳುವ ಗಜೇಂದ್ರಸ್ವಾಮಿ ನಿಜವಾಗಲೂ ಆ ಕೆಲಸ ಮಾಡಿಲ್ಲ. ಅಲ್ಲಿಯೂ ಒಂದಿಷ್ಟು ಲಿಮಿಟ್ಟುಗಳನ್ನು ಹಾಕಿಕೊಂಡು, ಕವಿತೆಯಾಗಬಹುದಾದ ಭಾವಗಳನ್ನು ಹೊತ್ತುಕೊಂಡು ಈ ಕವನ ಸಂಕಲನ ಪ್ರಕಟಿಸಿದ್ದಾರೆ. ಅಯ್ಯ ಎಂಬ ಕವಿತೆಯ ಮೂಲಕ ಆರಂಭವಾಗುವ ಇವರ ಗೀಚುವಿಕೆಯಲ್ಲಿ ಜನುಮದಾತನ ಸ್ಫೂರ್ತಿಯ ಚಿಲುಮೆ ಇದೆ-

’ಭುವಿಗೆ ಬಂದಾಗ ಅಮ್ಮ ಎಂಬ ಆಂತರ್ಯವಿದೆ

ಕಣ್ಣು ಬಿಟ್ಟಾಗ ಬೆಳಕಿನೊಂದಿಗೆ ಕಂಡ

ನನ್ನುಸಿರೇ ನನ್ನಯ್ಯ...’

ಅವರ ‘ಆತ್ಮಕ್ಕೆ ಹತ್ಯೆ’ ಎಂಬ ಕವಿತೆಯಲ್ಲಿ ಸಾಕಷ್ಟು ಕಾಡುವ ಸಾಲುಗಳಿವೆ. ಒಮ್ಮೆ ಬಂದೇ ಬರುವ ಸಾವಿಗೇಕೆ ಭಯ? ಎಂದು ಪ್ರಶ್ನಿಸುತ್ತಲೇ ಗೀಚಲು ಆರಂಭಿಸುತ್ತಾರೆ ಗಜೇಂದ್ರಸ್ವಾಮಿ. ಇದ್ದಕ್ಕಿದ್ದ ಹಾಗೆ ಮಗುವಾಗಲು ಆಸೆಪಟ್ಟು ತಮ್ಮನ್ನು ತಾವೇ ಕೂಸಾಗಿಸಿಕೊಳ್ಳುವ ಪ್ರಯತ್ನದಲ್ಲೂ ಮುಂದಾಗುತ್ತಾರೆ. ತಾವೂ ಒಬ್ಬ ರೈತರಾಗಿರುವ ಗಜೇಂದ್ರಸ್ವಾಮಿ ‘ಭಗವಂತನಿಗಿಂತ ಮಿಗಿಲು ಅನ್ನದ ಕೂಗು’ ಎಂದು ಸಾರುತ್ತಾರೆ. ಕಲಿಯುವ ಶಾಲೆಯಲ್ಲಿ ಜೊತೆಗಿಟ್ಟ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಲೇ ಲಂಗ ತೊಡುತ್ತಿದ್ದವಳ ಭಾವ ಆವಾಹಿಸಿಕೊಳ್ಳುತ್ತಾರೆ. ಕೃಷ್ಣಸುಂದರಿ, ಬಿಳಿಸುಂದರಿ ಎಂದೆಲ್ಲಾ ಮನಸ್ಸನ್ನು ಹರಿಯಬಿಟ್ಟು, ಯಾರದೀ ಪಾಪಿ ಪಿಂಡ? ಎಂದು ಪ್ರಶ್ನಿಸುತ್ತಲೇ ಹಗುರಾಗಿಬಿಡುವ ಗಜೇಂದ್ರಸ್ವಾಮಿ, ಹೊಲಸು ಮನಸುಗಳ ವಿರುದ್ಧವೂ ಗೀಚುತ್ತಾರೆ. ದುಡಿಮೆಯ ಖುಷಿಯೊಂದಿಗೆ, ಬದಲಾದ ಗೆಳತಿಯ ಭಾವದೊಂದಿಗೆ, ತೆರೆದ ಮನದ ಲೋಕದಲ್ಲಿ, ನೇಸರನ ಬೇಸರ ಅನುಭವಿಸುತ್ತಲೇ, ನೋವಿನಾಳದ ಚೂರಿಯನ್ನು ಕಲ್ಪಿಸಿಕೊಳ್ಳುತ್ತಾ, ಮತ್ತೆ ಬಂಧಿಯಾಗಲು ಪ್ರಶ್ನಿಸುತ್ತಾ, ಬೆಲ್ಲದ ಬದಲು ತನಗೆ ಬೇವೇ ಇರಲಿ ಎಂದು ಆಶಿಸುತ್ತಾ, ಕಳೆದುಹೋದ ತನ್ನತನದ ಬಗ್ಗೆ ದುಃಖಿಸುತ್ತಾ, ಅವಳು ನೀನೇನಾ? ಎಂದು ಕೇಳುತ್ತಾ, ಭಾವನೆಗಳಿಲ್ಲದ ಬದುಕಿನ ಬಗ್ಗೆ ಮಾತನಾಡುತ್ತಾ, ಸೆಳೆದವಳ ಬಗ್ಗೆ ಅಕ್ಷರ ಕಟ್ಟುತ್ತಾ, ಮದುವೆಯೊಂದ ನೋಡಿದೆ ಎಂದು ಕುಣಿಯುತ್ತಾ ಸಾಗುವ ಮಿತ್ರ ಗಜೇಂದ್ರಸ್ವಾಮಿ ಗೀಚುವಿಕೆ ಸಾಕಷ್ಟು ಕುತೂಹಲವನ್ನೂ ಕೆರಳಿಸುತ್ತದೆ.

ಅಲ್ಲಲ್ಲಿ ಛಕ್ಕನೆ ಎದುರಾಗುವ ಸಾಲುಗಳು ಅಚ್ಚರಿ ಮೂಡಿಸುತ್ತವೆ;

’ಬೆಳಗಿನ ವಾಕಿಂಗೇ ಹಾಗೆ

ಇಕ್ಕಟ್ಟು ಜನಸಾಗರ

ಸುತ್ತಾಡಲು ಇಷ್ಟೇ ಸಾಲುಗಳೆಂಬ ಲೆಕ್ಕ’ 

ಕವಿ ಇಲ್ಲಿ ಧ್ಯಾನಕ್ಕೆ ನೆಟ್ಟಗೆ ಕುಳಿತುಬಿಟ್ಟಿದ್ದರೆ ಇದೊಂದು ಒಳ್ಳೆಯ ಕವಿತೆಯಾಗುವ ಲಕ್ಷಣಗಳಿದ್ದವು. ಇಡೀ ಕವಿತೆ ಮನಸ್ಸಿಗೆ ಕವಿಯಬೇಕಾದರೆ ಅಲ್ಲಿ ಕವಿ ಮೊದಲು ತಾಯ್ತನ ಅನುಭವಿಸಿರಬೇಕು. ಆಗ ಮಾತ್ರ ಕವಿತೆಯ ಕೂಸು ಸುಂದರ ಘಟ್ಟ ತಲುಪಬಹುದು.

ಈ ಕವಿತಾ ಸಂಕಲನದ ವಿಶೇಷತೆ ಇರುವುದು ಕವಿಯೂ ಅದೆಷ್ಟೋ ಜನ ಸಾಹಿತಿಗಳಿಗೆ ಮೇಷ್ಟ್ರೂ ಆಗಿರುವ ಶ್ರೀಕಂಠ ಕೂಡಿಗೆಯವರ ಸುಂದರ ಮುನ್ನುಡಿ. ಈ ಮುನ್ನುಡಿ ಅವರ ಸುಂದರ ಹಸ್ತಾಕ್ಷರದಲ್ಲೇ ಪ್ರಕಟವಾಗಿರುವುದು. ಕವಿ ಅಕ್ಷರಗಳನ್ನು ಬರೆಯುವ ಮಟ್ಟಿಗಾದರೂ ತಪ್ಪೆಸಗಬಾರದು ಎಂಬಂತಿದೆ ಈ ಮುನ್ನುಡಿ.’ಕವಿತೆ ಅವತರಿಸುವಾಗ ಅದು ತನ್ನ ಅಂತರಾರ್ಥವನ್ನು ತಾನೇ ಬಿಟ್ಟುಕೊಡಬೇಕೇ ಹೊರತು ವ್ಯಾಖ್ಯಾನ ಅಥವಾ ಅಡಿಟಿಪ್ಪಣಿ ಅಗತ್ಯವೆನಿಸುವುದಿಲ್ಲ ಎಂದೇ ಕೂಡಿಗೆಯವರು ಇಲ್ಲಿ ಪ್ರತಿಪಾದಿಸುತ್ತಾರೆ.

ಭಾವನೆಗಳಿಂದ ಬದುಕು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಕೇವಲ ಗೀಚುವಿಕೆಯಿಂದ ಕವಿತೆ ಮೂಡಿಸಲು ಸಾಧ್ಯವಾಗುವುದಿಲ್ಲ. ಆದರೆ, ಗೀಚುವಿಕೆಯ ಜೊತೆಗೆ ಭಾವನೆ ಹಾಗೂ ಪರಿಸರವನ್ನು ಲೇಪಿಸಿರುವ ಗಜೇಂದ್ರಸ್ವಾಮಿ ಇಲ್ಲಿ ಭಿನ್ನ ಕವಿಯಾಗಿ ಕಾಣಸಿಗುತ್ತಾರೆ. ಅವರ ಈ ಗೀಚುವಿಕೆ ಇನ್ನಷ್ಟು ಲವಲವಿಕೆಯಿಂದ, ಅರ್ಥಪೂರ್ಣವಾಗಿ, ಮತ್ತಷ್ಟು ಕಾವ್ಯಾತ್ಮಕ ಸಾಲುಗಳ ಮೂಲಕ ಮುಂದುವರೆಯಲಿ.

ಶಿ.ಜು ಪಾಶ