Article

ಕೇದಿಗೆಯ ಕಂಪು : ಪ್ರಕೃತಿ ಕಾವ್ಯದ ಕುರಿತ ಆಲೋಚನಾ ಲಹರಿ.....

ಸಾಮಾನ್ಯವಾಗಿ ಸತ್ವಯುತ ಕವಿಗಳು ತಮ್ಮ ಜೀವನಾನುಭವಕ್ಕೆ ಹೆಚ್ಚು ಬಾಧಕವಾಗುವ ಪ್ರಕೃತಿ ಮತ್ತು ಮಾನವ ಸಂವೇದನೆಗಳ ಜೊತೆ ನಿರಂತರವಾಗಿ ಒಡನಾಟ ಇಟ್ಟುಕೊಳ್ಳುವುದು ಸಾಮಾನ್ಯ. ಪ್ರಕೃತಿಯ ಜೊತೆಗೇನೆ ಇದ್ದು ಅದರ ಹೋರಾಟದ ನಡುವೆಯೆ ಕಾವ್ಯದ ಬದುಕನ್ನು ಕಟ್ಟಿಕೊಳ್ಳುವ ಸ್ಥಿತಿ ಅವರದ್ದು.  ಅವರ ಈ ಅನುಭವ ಆಳಕ್ಕೆ ಹೋದಷ್ಟು ಹೆಚ್ಚೆಚ್ಚು ಕವಿತೆಗಳು ಪ್ರಕೃತಿ ಮತ್ತು ಮಾನವ ಸಂವೇದನೆಯ ವಿಶಿಷ್ಟ ಭಾಗವಾಗಿ ಹೊರಹೊಮ್ಮುವುದನ್ನು ನಾವು ಗಮನಿಸಬಹುದು. ಅಂತಹ ಕವಿತೆಗಳು ಶ್ರೇಷ್ಠ ಕವಿತೆಗಳ ಸಾಲಿಗೆ ಸೇರುತ್ತಲೇ ಇರುತ್ತವೆ. ಹೀಗೆ ಉನ್ನತ ಮಟ್ಟದ ಕವಿತೆಗಳು ಯಶಸ್ವಿಯಾಗುವುದೇ ಪ್ರಕೃತಿ ಮತ್ತು ಮಾನವ ಸಂವೇದನೆಯ ಸಮ್ಮಿಲನದಿಂದ. ಈ ರೀತಿಯ ಸಮ್ಮಿಲನದ ಕವಿತೆಗಳು ಓದುಗರನ್ನು ಮತ್ತಷ್ಟು ಪ್ರಕೃತಿಯೊಂದಿಗೆ ಒಳನೋಟವನ್ನು ಬೀರುವಂತೆ ಮಾಡುತ್ತಲೇ ಇರುತ್ತವೆ. ಕವಿತೆಗಳಲ್ಲಿ ಪುರುಷ ಮತ್ತು ಸ್ತ್ರೀಯರು  ಗ್ರಹಿಸುವ ವಿಚಾರಗಳಲ್ಲಿ ವ್ಯತ್ಯಾಸವಿದ್ದರೂ ಅವರಿಬ್ಬರ ಅಂತಿಮ ಹುಡುಕಾಟ ಒಂದೆಯಾಗಿರುತ್ತದೆ. 

ಈ ಅಂಶಗಳನ್ನು ಮನದಲ್ಲಿಟ್ಟುಕೊಂಡು ಹೇಳುವುದಾದರೆ ಕವಯತ್ರಿ ಅಕ್ಷತಾ ಕೃಷ್ಣಮೂರ್ತಿ ಕರಾವಳಿ ಪ್ರಾಂತ್ಯದ ಪ್ರಕೃತಿಯೊಡಗಿನ ತನ್ನ ಒಡನಾಟವನ್ನು ಮತ್ತು ಅದರ ಜೊತೆಗೆ ಮಾನವ ಸಂವೇದನೆಗಳನ್ನು ತುಂಬಾ ಚೆನ್ನಾಗಿ ಗ್ರಹಿಸಿ ಬರೆಯುವ ಭರವಸೆಯ ಲೇಖಕಿ. ಉತ್ತರಕನ್ನಡ ಜಿಲ್ಲೆಯ ಮೂಲಸತ್ವ, ಆಡುಭಾಷೆ, ಆಚರಣೆ, ಸಂಸ್ಕøತಿ, ಪ್ರಕೃತಿ ರಮ್ಯಲೋಕ, ಆಹಾರ-ವಿಹಾರ ಇನ್ನು ಹಲವು ವಿಚಾರಗಳನ್ನು ಕತೆ,ಕಾವ್ಯ, ಅಂಕಣ ಬರಹಗಳ ಮೂಲಕ ನಿರಂತರವಾಗಿ ಬರೆಯುವ ಪ್ರಯತ್ನವನ್ನು ಮಾಡುತ್ತಾ ಬಂದಿರುವುದನ್ನು ಕಾಣಬಹುದು. ಸಮಸ್ತ ಕರ್ನಾಟಕದ ಸಂವೇದನೆಯು ತಾನಿರುವ ಉತ್ತರಕನ್ನಡ ಜಿಲ್ಲೆಯಲ್ಲೇ ಇದೆ ಅನ್ನುವ ಯೋಚನಾ ಲಹರಿಯಲ್ಲಿ ಬರೆಯುವ ಅವರ ವಿಶಿಷ್ಟತೆ ಗಮನಸೆಳೆಯುತ್ತದೆ. 

ಹೊಸ ತಲೆಮಾರಿನ ಲೇಖಕರ ಸಾಲಿನಲ್ಲಿ ಬರುವ ಅಕ್ಷತಾ ಕೃಷ್ಣಮೂರ್ತಿ ತಮ್ಮ ಜಿಲ್ಲೆಯ ಈ ಹಿಂದಿನ ಹಿರಿಯ ಲೇಖಕರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಆಸಕ್ತಿಯನ್ನು ತೋರಿಸುತ್ತಿದ್ದಾರೆ.  ಈ ಹಿಂದೆ ಉತ್ತರಕನ್ನಡದ ಮೂಲಬೇರುಗಳನ್ನು ಇಟ್ಟುಕೊಂಡು ದೂರದ ಮುಂಬೈನಲ್ಲಿ ಕೂತು ಜಿಲ್ಲೆಯ ಪರಿಸರ ಮತ್ತು ಅಲ್ಲಿನ ಪಾತ್ರಗಳ ಸಂವೇದನೆಯನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದ ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿಯಂತಹ ಕೆಲವು ಲೇಖಕರು ಇದರ ನಡುವೆ ಇನ್ನೂ ವಿಭಿನ್ನವಾಗಿ ನಿಲ್ಲುತ್ತಾರೆ. ಕರಾವಳಿ ಜಿಲ್ಲೆಯಲ್ಲೇ ಇದ್ದು ಅಲ್ಲಿನ ಪರಿಸರ, ಜನಪದ ಮತ್ತು ಮಾನವ ಸಂವೇದನೆಗಳ ಜೊತೆ ನಿರಂತರವಾಗಿ ಸಂಪರ್ಕವಿಟ್ಟುಕೊಂಡವರಲ್ಲಿ ಡಾ.ಎನ್.ಆರ್.ನಾಯಕರು ಪ್ರಮುಖವಾಗಿ ಕಾಣಸಿಗುತ್ತಾರೆ. ಜಿಲ್ಲೆಯ ಜಾನಪದ ಸಂಪತ್ತಿನ ಬಹುಭಾಗವನ್ನು ಸಂಪಾದಿಸಿ ಕನ್ನಡನಾಡಿಗೆ ಅಮೂಲ್ಯ ಕೊಡುಗೆಯನ್ನಾಗಿ ನೀಡಿರುವ ನಾಯಕರು, ಉತ್ತರ ಕನ್ನಡ ಜಿಲ್ಲೆಯ ಜಾನಪದ ಸಂಪತ್ತಿನ ವಕ್ತಾರರಂತೆ ನಮಗೆ ಕಾಣುತ್ತಾರೆ. ಈಗಾಗಲೇ ತಿಳಿಸಿರುವಂತೆ ಜನಪದ ಜೊತೆಗೆ ಅಲ್ಲಿಯ ಪ್ರಕೃತಿಯ ಜೊತೆಗಿನ ತಮ್ಮ ನಿರಂತರ ಸಂಪರ್ಕ ಮತ್ತು ಆಂತರಿಕ ಸಂವೇದನೆಯನ್ನು ಸಮರ್ಥವಾಗಿ ಉಳಿಸಿಕೊಂಡು ಬಂದಿರುವುದರಿಂದ ನಾಯಕರು ಸುಮಾರು ಹದಿನೈದು ಕವನ ಸಂಕಲನಗಳನ್ನು ಬರೆಯಲಿಕ್ಕೆ ಸಾಧ್ಯವಾಗಿದ್ದು. ಅವರ ಸಮಗ್ರ ಕಾವ್ಯವು `ಬದುಕು ಮಹಾಕಾವ್ಯ' ಎಂಬ ಹೆಸರಿನಲ್ಲಿ ಮುದ್ರಣ ಕಂಡಿದೆ. ನಾಯಕರ ಸಮಗ್ರ ಕಾವ್ಯದ ಒಳನೋಟವನ್ನು ಗುರುತಿಸುವ ಕೆಲಸವನ್ನು ಅಕ್ಷತಾ ಕೃಷ್ಣಮೂರ್ತಿ ತಮ್ಮ `ಕೇದಿಗೆಯ ಕಂಪು' ಎಂಬ ವಿಮರ್ಶಾಕೃತಿಯ  ಮೂಲಕ ಮಾಡಿದ್ದಾರೆ. ಈಗಾಗಲೇ ಎನ್ ಆರ್ ನಾಯಕರ ಹಾದಿಯಲ್ಲೇ ಸಾಗುತ್ತಾ ಬಂದಿರುವ ಅಕ್ಷತಾ ಅವರು ಕಂಡ ಪ್ರಕೃತಿಯ ಸತ್ವವನ್ನು ವಿಮರ್ಶೆಯ ಚೌಕಟ್ಟಿನಲ್ಲಿ ಇನ್ನೊಂದು ನೋಟವನ್ನು ತೋರಿಸಿದ್ದಾರೆ. ಇದೊಂಥರ ಯುದ್ಧ ಕಾಣದ ಧೃತರಾಷ್ಟ್ರನಿಗೆ ಯುದ್ಧವನ್ನು ಬಣ್ಣಿಸಿ ಹೇಳುತ್ತಿದ್ದ ಸಂಜಯನ ಕೆಲಸದಂತೆ. ಡಾ.ಎನ್.ಆರ್.ನಾಯಕರ ಸಮಗ್ರ ಕಾವ್ಯವನ್ನು ಓದಲಾದವರು `ಕೇದಿಗೆಯ ಕಂಪು' ಕೃತಿಯ ಮೂಲಕ ನಾಯಕರ ಸಮಗ್ರ ಸಾಹಿತ್ಯಿಕ ದೃಷ್ಟಿಕೋನ ಮತ್ತು ಜಿಲ್ಲೆಯ ಪರಿಸರದೊಂದಿಗೆ ಅವರು ಎಷ್ಟು ಅನುರಕ್ತರಾಗಿ ಬೆರೆತು ಅದು ನೀಡಿದ ಅನುಭವಗಳನ್ನು ಕಾವ್ಯದ ಮೂಲಕ ಉಣಬಡಿಸಿದ ರೀತಿಯಂತಹ ಹಲವು ಅಂಶಗಳನ್ನು ಲೇಖಕಿ ತುಂಬಾ ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸಿದ್ದಾರೆ. 

ಡಾ.ಎನ್.ಆರ್.ನಾಯಕರೇ ಕೇದಿಗೆಯ ಕಂಪು ಕೃತಿಯ ವಿಮರ್ಶೆಯಲ್ಲಿ ತಿಳಿಸಿದಂತೆ "ಬದುಕು ಮಾಹಾಕಾವ್ಯದಲ್ಲಿ ಪ್ರಕೃತಿ ಸಮಾವೇಶದ ಹೆಜ್ಜೆಪಾಡುಗಳನ್ನು ಗುರುತಿಸಿ ಪ್ರಕೃತಿ ವ್ಯಾಪಾರ ಮಾನವ ಬದುಕಿನ ಮೇಲೆ ಬೀರಿದ ಪ್ರಭಾವ ಪ್ರೇರಣೆಗಳೆಡೆ ತೀಕ್ಷ್ಣ ಕಣ್ಣೋಟ ಕೀಲಿಸಿದ್ದಾರೆ. ಪ್ರಸ್ತುತ ಗ್ರಂಥದಲ್ಲಿ ಬದುಕು ಮಹಾಕಾವ್ಯದ ನಾಲ್ಕು ಸಂಪುಟಗಳಲ್ಲಿ ಚದುರಿ ಹೋದ ಪ್ರಕೃತಿ ಕಾವ್ಯದ ಬಿಡಿ ಬಿಡಿ ಭಾಗಗಳನ್ನು ಒಟ್ಟಾಗಿಸಿ ಪ್ರಕೃತಿ ಚಿತ್ರದ ತಮ್ಮದೇ ಆದ ತಾಜಾಮಹಲನ್ನು ಕಟ್ಟಿ ಮನೆಯಿರವಣಕ್ಕೆ ಕರೆದಿದ್ದಾರೆ". 

ಲೇಖಕಿ ಅಕ್ಷತಾ, ನಾಯಕರ ಸಮಗ್ರ ಕಾವ್ಯಗಳಲ್ಲಿ ಪ್ರಕೃತಿಗೆ ಸಂಬಂಧಿಸಿದ ಕವಿತೆಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿರುವುದನ್ನು ಕಾಣಬಹುದು. ಕವಿತೆಗಳಲ್ಲಿ ಜಿಲ್ಲೆಯ ಮಣ್ಣಿನ ವಾಸನೆ, ಜನಪದ ಸತ್ವ, ಅಂಕೋಲಾ-ಹೊನ್ನಾವರ ಸುತ್ತಲಿನ ಭಾಷೆಯ ಸೊಗಡು, ಹಸಿರು ಸೊಬಗಿನ ಆಂತರಿಕ ಮಾರ್ದವತೆ, ಹುಡುಕಾಟ, ವಿಸ್ಮಯ, ಪ್ರಕೃತಿ ಜೊತೆಗಿನ ಸಂವಾದ ಹೀಗೆ ಕವಿತೆಗಳ ಒಘದಲ್ಲಿ ತಾನು ಕಂಡ ಎಲ್ಲ ಅಂತಃಸತ್ವವನ್ನು ಗ್ರಹಿಸಿ ನಾಯಕರ ಸಮರ್ಥ ಕಾವ್ಯ ನೋಟವನ್ನೂ ಅವರ ಜೀವನ ಚರಿತ್ರೆಯನ್ನು ಪರಿಚಯಸಿದ್ದಾರೆ. `ಕೇದಿಗೆ ಕಂಪು' ಅಕ್ಷತಾ ಕೃಷ್ಣಮೂರ್ತಿಯವರ ವಿಶಿಷ್ಟ ಕೃತಿ. ಇದು ನಾಯಕರ ಕಾವ್ಯಸತ್ವವನ್ನು ತಿಳಿಸುವುದರ ಜೊತೆಗೆ ಲೇಖಕಿಯ ಕಾವ್ಯ ಸಂವೇದನೆಯನ್ನು ಕೂಡ ಮನವರಿಕೆ ಮಾಡಿಸುತ್ತದೆ. ಆ ಮೂಲಕ ಎನ್.ಆರ್.ನಾಯಕರ ಹಾದಿಯಲ್ಲೇ ಸಾಗುತ್ತಿರುವ ಲೇಖಕಿ ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಕಾವ್ಯದ ರಸದೌತಣವನ್ನು ಇನ್ನಷ್ಟು ಮುಂದಿನ ದಿನಗಳಲ್ಲಿ ನೀಡುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. 

ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀಧರ್ ಬನವಾಸಿ