Article

ಕೌಟಂಬಿಕ ನೆಲೆಯ ಮಹತ್ವದ ಕೃತಿ ‘ನಾದದ ನೆರಳು’

ಎನ್.ಎಸ್.ಶ್ರೀಧರ ಮೂರ್ತಿ ಅವರ ‘ನಾದದ ನೆರಳು’ ಕಾದಂಬರಿ ನಾನು ಇತ್ತೀಚೆಗೆ ಓದಿದ ಗಮನಾರ್ಹ ಕೃತಿ. ಅವರ ಬೇರೆ ಬೇರೆ ರೀತಿಯ ಬರವಣಿಗೆಗಳನ್ನು ಓದುತ್ತಾ ಬಂದಿದ್ದರೂ ಕಾದಂಬರಿ ಓದಿನ ಮೂಲಕ ಅವರ ಬರಹದ ಸ್ವರೂಪ ಇನ್ನಷ್ಟು ಸ್ವಷ್ಟ ಎನ್ನಿಸಿದ್ದೂ ಒಂದು ಇದಕ್ಕೆ ಕಾರಣ. 
ಒಂದೊಂದು ಸಾಹಿತ್ಯ ಪ್ರಕಾರವೂ ಜೀವನರಂಗವನ್ನು ವಿಶಿಷ್ಟವಾದ ರೀತಿಯಲ್ಲಿ ಗ್ರಹಿಸಿ ಅಭಿವ್ಯಕ್ತಿಸುತ್ತದೆ. ಕಾದಂಬರಿಕಾರನಿಗೆ ದಕ್ಕಬೇಕಾದ ‘ಜೀವನರಂಗ’ ಶ್ರೀಧರ ಮೂರ್ತಿ ಅವರಿಗೆ  ಚೆನ್ನಾಗಿ ಸಿಕ್ಕಿದೆ. ನಾಲ್ಕು ಗೋಡೆಯೊಳಗಿನ ಬದುಕು, ಅಂತರಂಗದ ಬದುಕು, ನಗರಗಳ ಬದುಕಿನ ಲಯ ಹೀಗೆ ಹಲವು ಪ್ರಕಾರಗಳು ಕಾದಂಬರಿಯಲ್ಲಿ ಸಮರ್ಥವಾಗಿ ಅಭಿವ್ಯಕ್ತಿಗೊಂಡಿವೆ. 
ಕೌಟಂಬಿಕ ಜೀವನ, ಗ್ರಾಮೀಣ ಅನುಭವ, ಮಹಾನಗರಗಳಲ್ಲಿ ಕುಟುಂಬ ವಿಕಾಸವಾಗುವ ರೀತಿ, ಮಾಧ್ಯಮ ಪ್ರಪಂಚದ ಒಳಹೊರಗು ಎಲ್ಲವನ್ನೂ ಅವರು ವಸ್ತುನಿಷ್ಟವಾಗಿ ನೋಡಿದ್ದಾರೆ.  ಹೀಗಿದ್ದರೂ ಮಲೆನಾಡು, ಅಲ್ಲಿನ ಜನಜೀವನ ಅವರ ಹೆಣಗಾಟ ಈ ಕಾದಂಬರಿಯಲ್ಲಿ ಹೆಚ್ಚು ತೀವ್ರವಾಗಿ ಮೂಡಿ ಬಂದಿದೆ. 
ಮಂಗಳಾ ಮೂಲಕ ಕಾದಂಬರಿಯನ್ನು ನೋಡುವ ಬದಲು, ಮಂಗಳಾ ಬದುಕನ್ನು ಯಾವ ರೀತಿ ಎದುರಿಸುತ್ತಾ ಕಲಿಯುತ್ತಾ ಹೋದಳು ಎನ್ನುವ ಕಡೆ ಅವರ ಗಮನವಿರುವುದು ಸರಿಯಾಗಿದೆ. ಹಾಗಾಗಿ ಕಾದಂಬರಿಗೆ ಬೇರೆಯವರ ದೃಷ್ಟಿಕೋನವೂ ಸೇರಿ ಬಹುಮಖಿ ವ್ಯಾಪ್ತಿ ದೊರಕಿದೆ. 
ಕಾದಂಬರಿಯ ಎಲ್ಲಾ ಪಾತ್ರಗಳು ಎಲ್ಲೂ ಕಪ್ಪು-ಬಿಳುಪಿನದಾಗದೆ ಸಂಕೀರ್ಣವಾಗಿ ಮೂಡಿ ಬಂದಿವೆ. ಮನೋಹರ ಮತ್ತು ಸವಿತಾ ಅವರ ಪಾತ್ರಗಳ ಸಂಕೀರ್ಣತೆ ಇಷ್ಟವಾಯಿತು. ಮಲೆನಾಡಿನ ಕೌಟಂಬಿಕ ಪಾತ್ರಗಳು ಮೈದುಂಬಿ ಕೊಂಡಿವೆ. ಮಾಧ್ಯಮದ ಒಡೆಯರು, ರಾಜಕೀಯ ಪ್ರಪಂಚದ ವಿವರಗಳು ಅಧಿಕೃತವಾಗಿವೆ. ಆದರೆ ಕಾದಂಬರಿ ಧ್ವನಿಗೆ ಅದು ಹೆಚ್ಚಿನದನ್ನು ಸೇರಿಸುವುದಿಲ್ಲ. ಮಂಗಳಾಳ ಪಾತ್ರ ವಿನ್ಯಾಸ ಚೆನ್ನಾಗಿದೆ. ಅನುಭವಗಳಿಂದ ಅವಳು ಕಲಿಯುತ್ತಾ ಹೋಗುವ ಕ್ರಮ ಬಹಳ ಸಹಜವಾಗಿ ಬಂದಿದೆ. ಕೊನೆಯ ಭಾಗದಲ್ಲಿ ಅವಳು ಓದುಗರ ಹೆಚ್ಚಿನ ಅನುಕಂಪ-ಪ್ರೀತಿಗೆ ಅರ್ಹಳು ಎನ್ನುವ ಧಾಟಿಯಿಂದ ಬರವಣಿಗೆ ಮುಕ್ತಾಯವಾಗಿದೆ. ಓದುಗರಿಗೆ ಫೀಲ್ ಗುಡ್ ಭಾವನೆ ಬರಲೆಂದು ಹೀಗೆ ಮಾಡಿರ ಬಹುದು ಎನ್ನುವ ಅನುಮಾನವೂ ಬಂತು. ಎರಡನೆಯ ಓದಿನಲ್ಲಿ ಇದು ಹೆಚ್ಚು ಶಾಂತವಾಗ ಬಹುದು. 
ಕಾದಂಬರಿಯಲ್ಲಿನ ಸಂಗೀತ ಲೋಕದ ವಿವರಗಳ ಅಧಿಕೃತತೆ, ಸಂಗೀತದ ಕುರಿತ ಕಾದಂಬರಿಕಾರರ ಪರಿಣತಿಯನ್ನೂ ಒಪ್ಪಿಯೂ ಇದನ್ನು ನಾನು ಕೌಟಂಬಿಕ ಕಾದಂಬರಿ ಎಂದೇ ಕರೆಯುತ್ತೇನೆ. ಕಾರಣ ಮಂಗಳಾ ಸಂಗೀತ ಕಲಿಯದೆ ಬೇರೆ ವೃತ್ತಿ ಹಿಡಿದಿದ್ದರೂ ಕಾದಂಬರಿಯ ಧ್ವನಿ ಬದಲಾಗುತ್ತಿರಲಿಲ್ಲ. ಶ್ರೀಧರ ಮೂರ್ತಿ ಅವರಿಗೆ ಜೀವನದ ವೈವಿಧ್ಯಮಯ ಮುಖಗಳು ಅವುಗಳ ಆಳ ಗೊತ್ತಿರುವುದರಿಂದ ಒಂದೇ ಕತೆಯನ್ನು ಒಂದೇ ಕೇಂದ್ರ ಪಾತ್ರವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಾದಂಬರಿಯಲ್ಲಿ ಪಾತ್ರಗಳು, ಕಥೆಗಳು ತುಂಬಿವೆ. ತೀರಾ ನೇರ ನಿರೂಪಣೆ, ಕೇಂದ್ರ ಪಾತ್ರವನ್ನು ನಿರೀಕ್ಷಿಸುವ ಸಾಂಪ್ರದಾಯಿಕ ಕಾದಂಬರಿ ಓದುಗರಿಗೆ ಇದು ಕಿರಿ ಕಿರಿಯನ್ನು ಉಂಟು ಮಾಡ ಬಹುದು. ಆದರೆ ಬರವಣಿಗೆಯ ಈ ಕ್ರಮ ನನಗೆ, ನನ್ನ ಬರವಣಿಗೆಯ ರೀತಿಗೆ ಹತ್ತಿರವಾದದ್ದು. ರಂಗಕರ್ಮಿ ಶ್ರೀಪತಿ ಮಂಜನಬೈಲು ಅವರು ಸರಿಯಾಗಿ ಗುರುತಿಸಿರುವಂತೆ ಇದನ್ನು ಒಂದು ಸಂಕಥನ ಎಂದು ಪರಿಗಣಿಸಿ ಓದುವುದೇ ಹೆಚ್ಚು ಸೂಕ್ತವೇನೋ. ನಿರೂಪಣೆಗಿಂತ ಜisಛಿouಡಿse  ಕಡೆ ಅವರ ಗಮನವಿದೆ. ಶ್ರೀಪತಿಯವರು ಈ ಸೂಕ್ಷ್ಮವನ್ನು ಗುರುತಿಸಿದ್ದಾರೆ. 
ಜೀವನದ ತಿಳುವು, ಪಾತ್ರವಿನ್ಯಾಸದಲ್ಲಿನ ವಸ್ತುನಿಷ್ಟತೆ, ಬರವಣಿಗೆಯ ಹರಹು ಈ ಕಾರಣಗಳಿಂದ ನಾನು ಇತ್ತೀಚೆಗೆ ಓದಿದ ಮಹತ್ವದ ಕಾದಂಬರಿಗಳ ಸಾಲಿಗೆ ಇದನ್ನು ಸೇರಿಸುತ್ತೇನೆ. ‘ನಾದದ ನೆರಳು’ ಕಾದಂಬರಿಯ  ಕಥಾವಸ್ತು ವಿಶಿಷ್ಟವಾಗಿದೆ, ಗಮನಾರ್ಹವಾಗಿದೆ. ನೂರಾರು ಆಸಕ್ತಿ-ಚಟುವಟಿಕೆಗಳಲ್ಲಿ ಹಂಚಿ ಹೋಗಿರುವ ಶ್ರೀಧರ ಮೂರ್ತಿ ಅವರ ಅಭಿವ್ಯಕ್ತಿಗೆ ಕಾದಂಬರಿ ಪ್ರಕಾರದ ಮೂಲಕ ಕೇಂದ್ರ ಸಿಕ್ಕಲಿ, ಅವರ  ಮುಂದಿನ ಕಾದಂಬರಿ ಆದಷ್ಟು ಬೇಗ ಬರಲಿ. 

ಕೆ.ಸತ್ಯನಾರಾಯಣ