Article

ಕೃಷ್ಣೆ ಹರಿದಳು: ಬದುಕಿನ ವಾಸ್ತವತೆಗಳಿಗೆ ಕನ್ನಡಿಯಾಗಲು ಹಂಬಲಿಸಿದ ಕಥನ

ಕನ್ನಡ ಕಾದಂಬರಿ ಪರಂಪರೆಯನ್ನು ಚಾರಿತ್ರಿಕವಾಗಿ ಗಮನಿಸಿದರೆ, ಅದು ಮೊದಲಿನಿಂದಲೂ ಬದಲಾಗುತ್ತಿರುವ ಗ್ರಾಮೀಣ ಜಗತ್ತಿನ ಸಂಕೀರ್ಣತೆಗಳನ್ನು ಅದರೆಲ್ಲ ಸೂಕ್ಷ್ಮತೆಗಳೊಂದಿಗೆ ಹಿಡಿದಿಡುವ ಗಂಭೀರ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. ಕೆಲವು ಕಾದಂಬರಿಗಳು ಒಂದು ಗ್ರಾಮವನ್ನೇ ಮುಖ್ಯ ಭೂಮಿಕೆಯನ್ನಾಗಿ ಮಾಡಿಕೊಂಡು, ಅಲ್ಲಿಯ ಜನಸಮುದಾಯಗಳ ದೈನಂದಿನ ಬದುಕಿನ ಪಲ್ಲಟಗಳನ್ನು ಹಲವು ಆಯಾಮಗಳ ಮುಖಾಂತರ ಶೋಧಿಸಲು ಯತ್ನಿಸಿವೆ. ರಾವಬಹಾದ್ದೂರರ ಗ್ರಾಮಾಯಣ ಕಾದಂಬರಿಯನ್ನು ಓದಿದವರಿಗೆ ಥಟ್ಟನೆ ಪಾದಳ್ಳಿ ಎಂಬ ವಿಸ್ಮಯ ಲೋಕ ಕಣ್ಮುಂದೆ ಸುಳಿಯುತ್ತದೆ. ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ ಕಾದಂಬರಿಯ ಕ್ರಿಯಾ ಜಗತ್ತು ಕಂಬಳ್ಳಿಯಲ್ಲಿ ತರೆದುಕೊಳ್ಳುತ್ತದೆ. ಪೂರ್ಣಚಂದ್ರ ತೇಜಸ್ವಿಯವರ ಚಿದಂಬರ ರಹಸ್ಯ ಕಾದಂಬರಿಯ ಕಥಾನಕಗಳು ನಡೆಯುವ ಕೆಸರೂರು, ಅವನತಿಯ ದಾರಿ ಹಿಡಿದ ಯಾವುದೇ ಊರಿಗೆ ಸಾಕ್ಷಿಯಾಗುತ್ತದೆ; ಇವೆಲ್ಲ ಕೃತಿಗಳು ಒಂದು ನಿರ್ದಿಷ್ಟ ಪ್ರದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಆಧುನಿಕತೆಯ ಭಾಗವಾಗಿ ಬಂದ ಕಾದಂಬರಿಯ ರೂಪದಲ್ಲಿ ಚಿತ್ರಿಸುತ್ತವೆ. ಈ ನಿಟ್ಟಿನಲ್ಲಿ ಕನ್ನಡದ ಪ್ರಸಿದ್ಧ ಲೇಖಕರಾದ ಬಾಳಾಸಾಹೇಬ ಲೋಕಾಪುರ ಅವರ ಇತ್ತೀಚಿನ ಕೃಷ್ಣೆ ಹರಿದಳು ಎಂಬ ಕಾದಂಬರಿಯಲ್ಲಿ ಶಿರಿಹಾಡಿ ಎಂಬ ಊರು ಅದರ ಮುಖ್ಯ ನೆಲೆಗಟ್ಟಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಗಡಿ ಪ್ರದೇಶದ ಭೂಮಾಲಿಕ ವ್ಯವಸ್ಥೆ ತಂದೊಡ್ಡುವ ಅವಾಂತರಗಳನ್ನು ಹಾಗೂ ಅಲ್ಲಿಯ ಜನ ಸಮುದಾಯಗಳು ಬದುಕಿಗಾಗಿ ನಡೆಸುವ ಸೆಣಸಾಟಗಳನ್ನು ಈ ಕಾದಂಬರಿ ಬಹುತೇಕವಾಗಿ ವಾಸ್ತವತೆಯ ರೂಪದಲ್ಲಿಯೇ ನಿರೂಪಿಸಿದೆ.
    ಶಿರಿಹಾಡಿ ಗ್ರಾಮದ ಹಲವು ವಿವರಣೆಗಳು ಬಾಳಾಸಾಹೇಬರ ಎರಡನೆಯ ಕಾದಂಬರಿ ಹುತ್ತದಲ್ಲಿಯೇ ಕಾಣುತ್ತೇವೆ; ಅದರ ಕಥಾ ಚೌಕಟ್ಟಿನಲ್ಲಿ ಕೃಷ್ಣಾ ನದಿಯ ನೆನಪುಗಳೂ ಪ್ರಾಸಂಗಿಕವಾಗಿ ಸೇರಿದ್ದವು. ಆದರೆ ಕೃಷ್ಣೆ ಹರಿದಳು ಕಾದಂಬರಿಯಲ್ಲಿ ಎಲ್ಲ ಬಗೆಯ ಘಟನೆ ಮತ್ತು ಸನ್ನಿವೇಶಗಳಿಗೆ ಕೃಷ್ಣಾ ನದಿಯು ಪ್ರತ್ಯಕ್ಷ ಸಾಕ್ಷಿ ಪ್ರಜ್ಞೆಯಾಗಿರುವುದಷ್ಟೇ ಅಲ್ಲ, ಕಾದಂಬರಿಯಲ್ಲಿ ಅದು ಕೂಡ ಪ್ರಧಾನ ಪಾತ್ರವೇ ಆಗಿದೆ; ಮನುಷ್ಯ ಪಾತ್ರಗಳಂತೆಯೇ ಸಹಜವಾಗಿ ಚಿತ್ರಣಗೊಂಡಿದೆ; ಅಲ್ಲಿಯ ಜನರ ಬದುಕಿನ ಏಳು ಬೀಳುಗಳಲ್ಲಿ ಈ ಹೊಳೆಯೂ ಹಾಸು ಹೊಕ್ಕಾಗಿದೆ. ಕಾದಂಬರಿಯ ಶೀರ್ಷಿಕೆಯು ನದಿಯನ್ನು ಬರಿ ನೀರನ್ನಾಗಿಯಲ್ಲದೇ, ಅದನ್ನೊಂದು ಹೆಣ್ಣಾಗಿ, ತಾಯಿಯಾಗಿ, ಜೀವರಾಶಿಯನ್ನು ಪೊರೆಯುವ ಶಕ್ತಿಯಾಗಿ, ಊರನ್ನು ರಕ್ಷಿಸುವ, ಮುಳುಗಿಸುವ ಆರಾಧ್ಯ ದೈವವಾಗಿ, ಅಲ್ಲಿಯ ಜನಜೀವನದ ಉಸಿರಾಗಿರುವುದನ್ನು ಧ್ವನಿಸುತ್ತದೆ. ಕೃಷ್ಣೆಯು ಯಾರ ಹಂಗಿಗೂ ಒಳಪಡದೆ, ನಿರಂತರ ಚಲನಶೀಲವಾಗಿರುವವಳು; ಕಾಲ ದೇಶಗಳನ್ನು ಮೀರಿ ಬದಲಾವಣೆಯೇ ಜಗದ, ಪ್ರಕೃತಿಯ ನಿಯಮ ಎಂಬುದನ್ನು ಸಾರುತ್ತದೆ. ಸಾಮಾನ್ಯವಾಗಿ ಭಾರತೀಯರು ನದಿಗಳನ್ನು ಹೆಣ್ಣಾಗಿಯೇ ಪರಿಭಾವಿಸಿಕೊಂಡಿರುವುದನ್ನು ಕಾಣುತ್ತೇವೆ. ಹೆಣ್ಣಿಗೆ ನೀರೆ ಎಂದೂ ಕರೆಯಲಾಗುತ್ತದೆ. ನದಿಯಂತೆಯೇ ಹೆಣ್ಣು ಕೂಡ ಸೃಷ್ಟಿಶೀಲಳಾಗಿರುವುದರಿಂದ ಮತ್ತು ಆಕೆ ಪಾಲನೆ, ಪೋಷಣೆಗಳನ್ನು ಮಾಡುವವಳು ಎಂಬ ಆಶಯವೂ ಇದರೊಂದಿಗೆ ತಳಕು ಹಾಕಿಕೊಂಡಿದೆ; ತಾಯಿಯಲ್ಲಿ ಇಂತಹ ಗುಣಗಳಿರುವುದರಿಂದ ನದಿಯನ್ನು ತಾಯಿಯ ರೂಪದಲ್ಲಿ ಆರಾಧಿಸುವ ಪರಿಪಾಠ ಬೆಳೆದಂತೆ ತೋರುತ್ತದೆ. ಈ ಹಿನ್ನೆಲೆಯಲ್ಲಿ ಕಾದಂಬರಿಯು ಜೀವ ಸಂಜೀವಿನಿಯಾಗಿ ಹರಿವ ಹಿರಿಹೊಳೆ ತಾಯಿ ಕೃಷ್ಣಾ ನದಿಗೆ ಎಂದು ಅರ್ಪಿತವಾಗಿರುವುದು ಕೂಡ ಇದನ್ನೇ ಸಮರ್ಥಿಸುವಂತಿದೆ.  
     ಕಾದಂಬರಿ ಮುಖ್ಯವಾಗಿ, ಶಿರಿಹಾಡಿ ಗ್ರಾಮದೊಳಗೆ ಭೂಮಾಲಿಕ ವ್ಯವಸ್ಥೆಯ ಪ್ರತಿಷ್ಠೆ, ಗೌರವ, ಮತ್ತು ಅಧಿಕಾರಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಗುರುಪಾದಪ್ಪಗೌಡ ಹಾಗೂ ದೇಸಾಯಿ ಮನೆತನಗಳ ನಡುವಿನ ಅಸೂಯೆ, ದ್ವೇಷ, ಜಿದ್ದಾಜಿದ್ದಿಗಳ ಸಂಘರ್ಷಗಳನ್ನು ನಿರೂಪಿಸುತ್ತದೆ. ಈ ಈರ್ಷೆಯಲ್ಲಿ ದೇಸಾಯಿಯ ಖೂನಿಯಾಗುತ್ತದೆ; ಆದರೆ ತಂತಮ್ಮ ವೈಯಕ್ತಿಕ ಕಾರಣಕ್ಕಾಗಿ ಗಿರೆವ್ವ, ಜಿಂಗಾಡಿ ಭೀಮ, ಪಾಚಂಗಿ ಮತ್ತು ಸಣ್ಣೀರಪ್ಪ, ಇವರೆಲ್ಲ ಸೇರಿಕೊಂಡು ದೇಸಾಯಿಯ ಹತ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಗಿರೆವ್ವಳನ್ನು ಹೊರತುಪಡಿಸಿ ಉಳಿದವರು ಜೇಲು ಸೇರುತ್ತಾರೆ; ನಂತರದಲ್ಲಿ ಸೂಕ್ತ ಸಾಕ್ಷಿ ಆಧಾರಗಳಿಲ್ಲದೆ ಶಿಕ್ಷೆಯಿಂದ ಇವರ ಖುಲಾಸೆಯೂ ಆಗುತ್ತದೆ. ದೇಸಾಯಿಯ ಹೆಂಡತಿಯಾದ ಸುಮಿತ್ರಾಬಾಯಿಯ ತಮ್ಮನಾದ ರಾಕೇಶ್ ಈ ಕುಟುಂಬದ ಹೊಣೆಯನ್ನು ಹೊತ್ತುಕೊಂಡು ಮಹಾದೇವಪ್ಪ ಮತ್ತು ಗೋಪಾಲರಾವ ಕುಲಕರ್ಣಿ ಇವರ ಜೊತೆ ಸೇರಿಕೊಂಡು ಊರಿನ ರಾಜಕಾರಣದಲ್ಲಿ ತಲೆ ಹಾಕುತ್ತಾರೆ; ದೇಸಾಯಿ ಕೃತ್ಯಗಳನ್ನೇ ಮುಂದುವರೆಸಲು ಹಲವು ಪಿತೂರಿಗಳನ್ನು ನಡೆಸುತ್ತಾರೆ. ದೇಸಾಯಿ ಖೂನಿಯೇ ಕಾದಂಬರಿಯ ಕೇಂದ್ರ ಘಟ್ಟವಾಗಿದ್ದು, ಅದೇ ಕೃತಿಯನ್ನು ಕೊನೆಯವರೆಗೂ ಮುನ್ನಡೆಸುತ್ತದೆ. ಆದರೆ ಕಾದಂಬರಿಯಲ್ಲಿ, ಇವುಗಳಿಗೆ ಪೂರಕವಾಗಿ, ಸಮಾನಾಂತರವಾಗಿ, ಅನಿರೀಕ್ಷತವಾಗಿ ಅನೇಕ ಸಣ್ಣಪುಟ್ಟ ಘಟನೆಗಳು ಸಂಭವಿಸುತ್ತವೆ. ಅವು ಒಂದರೊಳಗೊಂದು ಸೇರಿಕೊಂಡು ಕಾದಂಬರಿಯ ವಿನ್ಯಾಸಕ್ಕೆ ಒಂದು ವಿಸ್ತೃತವಾದ ಹರವನ್ನು ನೀಡಿವೆ; ಮೇಲ್‌ನೋಟಕ್ಕೆ ಸರಳವಾಗಿ ಕಾಣುವ, ಗ್ರಾಮೀಣ ಲೋಕದ ವ್ಯವಹಾರ, ನೋವು, ಸಂಕಟಗಳು, ಆಳದಲ್ಲಿ ವೈರುಧ್ಯಗಳಿಂದ ಕೂಡಿಕೊಂಡು ಸಂಕೀರ್ಣತೆಯ ಕಡೆಗೆ ಚಲಿಸುವುದನ್ನು ಕಾಣುತ್ತೇವೆ.
    ಈ ಕಾದಂಬರಿಯ ಪಾತ್ರಗಳು ವೈವಿಧ್ಯಮಯವಾಗಿವೆ; ಅಷ್ಟೇ ವೈರುಧ್ಯಗಳಿಂದಲೂ ಓದುಗರ ಗಮನ ಸೆಳೆಯುತ್ತವೆ. ಕಾದಂಬರಿಯ ಹೆಣ್ಣು ಪಾತ್ರಗಳು ಪುರುಷ ಪಾತ್ರಗಳಿಗಿಂತ ಗಟ್ಟಿಯಾಗಿವೆ. ಗಿರೆವ್ವಳ ಪಾತ್ರವು ದೇವನೂರ ಮಹಾದೇವರ ಒಡಲಾಳ ಕಾದಂಬರಿಯ ಸಾಕವ್ವನಂತೆ, ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ನೀಳ್ಗತೆಯ ದಾನಮ್ಮಳಂತೆ ಜಿಗುಟುತನದಿಂದ ಮತ್ತು ವಿಚಿತ್ರ ಕೆಚ್ಚಿನಿಂದ ಕೂಡಿದ ಪಾತ್ರವಾಗಿದೆ. ದೇಸಾಯಿ ತನ್ನನ್ನು ಅತ್ಯಾಚಾರ ಮಾಡಿದ್ದನ್ನು ಆತನ ಖೂನಿ ಮಾಡಿಯೇ ತನ್ನ ಸೇಡನ್ನು ತೀರಿಸಿಕೊಳ್ಳುವಷ್ಟು ಧೈರ್ಯವನ್ನು ಪ್ರದರ್ಶಿಸುತ್ತಾಳೆ; ಗುರುಪಾದಪ್ಪನ ಹೆಂಡತಿ ಇಂದ್ರಾಯಣಿಯೇ ಮನೆತನವನ್ನು ಸಂಭಾಳಿಸುವ ಛಾತಿಯನ್ನು ತೋರುತ್ತಾಳೆ. ವಿವಾಹಿತ ಸುಂದರಾ ಪೋಸ್ಟ್‌ಮನ್ ಸಿದ್ರಾಮನೊಂದಿಗೆ ಓಡಿ ಹೋಗಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಎದೆಗಾರಿಕೆಯನ್ನು ತೋರುತ್ತಾಳೆ. ಮುಂಬಯಿಯಲ್ಲಿ ಗಂಗವ್ವ ಪ್ರಕಾಶನ ಜೀವನದಿಂದ ಹೊರಬಂದು ಸ್ವತಂತ್ರವಾಗಿ ಬದುಕಲು ಇಚ್ಛಿಸುತ್ತಾಳೆ. ರಾಕೇಶನ ಹೆಂಡತಿ ಪತ್ರ ಬರೆದಿಟ್ಟು ತಾನಿದ್ದ ವಾಡೆಯನ್ನು ತೊರೆದು ಬೇರೊಬ್ಬ ಹುಡುಗನೊಂದಿಗೆ ಹೋಗಿಬಿಡುತ್ತಾಳೆ. ಇವರೆಲ್ಲ ನಿಜವಾಗಿಯೂ ತಾವು ಇಟ್ಟ ಹೆಜ್ಜೆಗಳಲ್ಲಿ ಸಫಲರಾದರೋ ಇಲ್ಲವೋ ಅನ್ನುವುದು ಮುಖ್ಯವಲ್ಲ; ಆದರೆ ತಮ್ಮ ಚೈತನ್ಯವನ್ನು ಬಂಧಿಸಿಡುವ ಪುರುಷ ನಿರ್ಮಿತ ಚೌಕಟ್ಟುಗಳನ್ನು ಮತ್ತು ಸ್ಥಾಪಿತ ಮೌಲ್ಯಗಳನ್ನು ಮೀರಲು ಪ್ರಯತ್ನಿಸುತ್ತಾರೆ; ಮಹಿಳೆಯರು ಬದುಕಿನ ಬವಣೆಗಳನ್ನು ದಿಟ್ಟತನದಿಂದ ಎದುರಿಸುತ್ತಾರೆ. ಸಾಮಾನ್ಯವಾಗಿ ಹೆಣ್ಣಿಗೆ ನಿಷೇಧವಾಗಿರುವ ಸಾಮಾಜಿಕ ಕಟ್ಟುಪಾಡುಗಳನ್ನು ದಾಟುವ ಆತ್ಮವಿಶ್ವಾಸವನ್ನು ಹೊಂದಿದ್ದಾರೆ.
    ಬಾಳಾಸಾಹೇಬರ ಎಲ್ಲ ಕಾದಂಬರಿಗಳಲ್ಲೂ ವಿವಾಹೇತರ ಗಂಡು ಹೆಣ್ಣಿನ ಸಂಬಂಧಗಳು ಹೇರಳವಾಗಿ ಬರುತ್ತವೆ. ಕೃಷ್ಣೆ ಹರಿದಳು ಕಾದಂಬರಿಯಲ್ಲಿಯೂ ಇಂತಹ ಸಂಬಂಧಗಳಿಗೆ ಹಂಬಲಿಸುವ ಪುರುಷರಿದ್ದಾರೆ; ಮಹಿಳೆಯರೂ ಇದ್ದಾರೆ. ಆದರೆ ಇಂತಹ ಗಂಡು ಮತ್ತು ಹೆಣ್ಣಿನ ಮಿಲನದ ಪ್ರಸಂಗಳು ಬಂದಾಗಲೆಲ್ಲ ಕಾದಂಬರಿಯ ನಿರೂಪಣೆಯ ಭಾಷೆಯು ಹೆಣ್ಣಿನ ಅಂಗಾಂಗಗಳನ್ನು ಅಪ್ಪಿತಪ್ಪಿಯೂ ವರ್ಣಿಸುವುದಿಲ್ಲ; ಆ ಸಂದರ್ಭದಲ್ಲಿ ನಿರೂಪಣೆಯ ಭಾಷೆಯು ಇದ್ದಕ್ಕಿದ್ದಂತೆ ಸಂಗೀತದ ಕಡೆಗೋ ಅಥವಾ ನಿಸರ್ಗದ ಮಳೆ, ಮೋಡ, ಗುಡುಗು, ಸಿಡಿಲುಗಳ ವರ್ಣನೆಯ ಕಡೆಗೆ ಹೊರಳುತ್ತದೆ. ಇದು ಕಾದಂಬರಿಕಾರರ ಸೌಂಧರ್ಯ ಪ್ರಜ್ಞೆಯ ಬಗ್ಗೆ ಓದುಗರಲ್ಲಿ ಮೆಚ್ಚುಗೆಯ ಭಾವವನ್ನು ಮೂಡಿಸುತ್ತದೆ. ಕೆಲವು ಪ್ರಗತಿಶೀಲ ಕಾದಂಬರಿಗಳು ಹೆಣ್ಣಿನ ಅಂಗಾಂಗಗಳನ್ನು ಯಾವ ಕನಿಷ್ಠ ಲಜ್ಜೆಯೂ ಇಲ್ಲದೇ, ಓದುಗರು ಬಾಯಿ ಚಪ್ಪರಿಸುವಂತೆ ವರ್ಣಿಸುತ್ತಿದ್ದವು; ಅನೇಕ ನವ್ಯ ಕಾದಂಬರಿಗಳು ಕೂಡ ಇದರಿಂದ ಹೊರತಾಗಿಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕುವೆಂಪು ಅವರ ಎರಡೂ ಕಾದಂಬರಿಗಳಲ್ಲಿ ಗಂಡು ಮತ್ತು ಹೆಣ್ಣುಗಳ ಲೈಂಗಿಕ ವಿವರಣೆ ಅಥವಾ ವರ್ಣನೆಗಳು ಮೇಲ್ನೋಟಕ್ಕೆ ವಾಚ್ಯ ಎನ್ನಿಸಿದರೂ ಅವು ನಿಸರ್ಗ ಸಹಜತೆಯಿಂದ ಕೂಡಿದ್ದಲ್ಲದೆ, ಸೌಂಧರ್ಯಾತ್ಮಕ ಪ್ರಜ್ಞೆಯ ಭಾಗವಾಗಿ ಬರುತ್ತವೆ. ಈ ಹಿನ್ನೆಲೆಯಲ್ಲಿ ಬಾಳಾಸಾಹೇಬರ ಕಾದಂಬರಿಗಳಲ್ಲಿ ಮಹಿಳೆಯರು ನಿಜವಾಗಿಯೂ ಘನತೆ ಮತ್ತು ಗೌರವದ ಪಾತ್ರಗಳಾಗಿ ಬರುತ್ತಾರೆ.
      ಕಾದಂಬರಿಯನ್ನು ಓದಿದ ಮೇಲೆ ನನಗೆ ಮತ್ತೆ ಮತ್ತೆ ನೆನಪಾಗಿ ಕಾಡುವ ಎರಡು ಪಾತ್ರಗಳಿವೆ; ಮೊದಲನೆಯದಾಗಿ, ಕಾದಂಬರಿಯ ಕೊನೆಕೊನೆಯ ಭಾಗದಲ್ಲಿ ಅನಾಮಧೇಯ ಅವಧೂತನೊಬ್ಬ ಶಿರಿಹಾಡಿಗೆ ಬರುತ್ತಾನೆ; ಆತನ ಪೂರ್ವಾಪರಗಳ ಯಾವುದೇ ವಿವರಗಳೂ ಕೃತಿಯಲ್ಲಿ ಇಲ್ಲ; ಆತ ಆ ಊರಿನ ಜನರೊಂದಿಗೆ ಇದ್ದೂ ಇಲ್ಲದಂತೆ ತನ್ನ ಪಾಡಿಗೆ ತಾನು ಇರುತ್ತಾನೆ. ಮೌನವೇ ಹೊದ್ದುಕೊಂಡು ಜೀವಿಸಿದವನು. ಒಂದು ದಿನ ಗಿರೆವ್ವ ತುಂಬಿದ ಹೊಳೆಯನ್ನು ಈಜಿ ದಡವನ್ನು ಸೇರುವ ಸಂದಂರ್ಭದಲ್ಲಿ ಕೊಚ್ಚಿಕೊಂಡು ಹೋಗುತ್ತಿರುತ್ತಾಳೆ. ದಡದಲ್ಲಿ ನಿಂತ ಜನರು ಅನುಕಂಪದಿಂದ ನೋಡುತ್ತಿರುತ್ತಾರೆ; ಈ ಅವಧೂತ, ಲೋಕಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಇದ್ದವನು, ತನ್ನ ಜೀವವನ್ನು ಪಣಕ್ಕಿಟ್ಟು, ಹೊಳೆಗೆ ಹಾರಿ, ಮುಳುಗುತ್ತಿದ್ದ ಗಿರೆವ್ವಳನ್ನು ಹೊತ್ತುಕೊಂಡು ದಡಕ್ಕೆ ತಂದು ಬಿಡುತ್ತಾನೆ; ತನ್ನ ಪಾಡಿಗೆ ತಾನು ಅಲ್ಲಿಂದ ಹಿಂದಿರುಗಿಯೂ ನೋಡದೇ ಹೋಗಿಬಿಡುತ್ತಾನೆ. ಕಾದಂಬರಿಯಲ್ಲಿ ಈ ಅವಧೂತನಿಗೆ ಅಂತಹ ಯಾವ ಮಹತ್ವವೂ ಇಲ್ಲ; ಆದರೆ ಊರಿನ ಉಳ್ಳವರ ವರ್ಗವೊಂದು ಕೊಲೆ, ಸುಲಿಗೆ, ದ್ವೇಷ, ಅತ್ಯಾಚಾರಗಳಲ್ಲಿ ಮುಳುಗಿರುವಾಗ ಈ ಅವಧೂತ ಜೀವಪರವಾಗಿ ನಿಲ್ಲುವುದರಿಂದ ಓದುಗರ ಸಹಾನುಭೂತಿಗೆ ಪಾತ್ರನಾಗುತ್ತಾನೆ. 
      ಎರಡನೆಯದಾಗಿ, ಸುಂದರಾ ಶಿರಿಹಾಡಿಯನ್ನು ತೊರೆದು ರಸ್ತೆ ಬದಿಯ ಗುಡಿಯೊಂದರಲ್ಲಿ ರಾತ್ರಿಹೊತ್ತಿನಲ್ಲಿ ಸಿದ್ರಾಮನಿಗೆ ಕಾಯುತ್ತಿರುತ್ತಾಳೆ; ರಾಕೇಶನ ಗ್ಯಾಂಗಿನವರು ಜೀಪಿನಲ್ಲಿ ಹೋಗುತ್ತಿರುವಾಗ ಸುಂದರಾ ಇವರ ಕಾಮದ ಕಣ್ಣಿಗೆ ಅಸಾಧರಣ ಸೌಂದರ್ಯವತಿಯಾಗಿ ಕಾಣುತ್ತಾಳೆ. ಇನ್ನೆನು ಅತ್ಯಾಚಾರ ನಡೆಯಿತು ಎನ್ನುವಷ್ಟರಲ್ಲಿ ಓದುಗರ ನಿರೀಕ್ಷೆಗೂ ಮೀರಿದ ಪ್ರಸಂಗವೊಂದು ನೆಡೆದುಹೋಗುತ್ತದೆ. ಗುಡಿಯಲ್ಲಿದ್ದ ತ್ರಿಶೂಲವನ್ನು ಎತ್ತಿಕೊಂಡ ಸುಂದರಾ ಅವರ ಮುಂದೆ ತನ್ನ ದೇಹವನ್ನೇ ಬೆತ್ತಲೆಗೊಳಿಸಿ ನಿಂತು ಬಿಡುತ್ತಾಳೆ; ಅವರೆಲ್ಲ ಬೆಚ್ಚಿ ಪರಾರಿಯಾಗಿಬಿಡುತ್ತಾರೆ. ಆ ಗಳಿಗೆಯಿಂದ ಅವಳು ಆ ಗುಡಿಯ ಜೀವಂತ ಹುಚ್ಚಮಲ್ಲವ್ವಳಾಗುವ ಪವಾಡವೇ ನಡೆಯುತ್ತದೆ. ಸಾಮಾನ್ಯ ಹೆಣ್ಣಾಗಿದ್ದ ಆಕೆ ಸಿದ್ರಾಮನೊಂದಿಗೆ ಓಡಿ ಹೋಗಿ ಸಂಸಾರ ನಡೆಸುಲು ತೀರ್ಮಾನಿಸಿದ್ದವಳು, ಅಲ್ಲಿಯ ಜನರ ಸಮಸ್ಯೆಗಳನ್ನು ಪರಿಹರಿಸುವ, ನೋವುಗಳನ್ನು ಕಿವಿಗೊಟ್ಟು ಆಲಿಸುವ ಹಾಗೂ ನಂಬುಗೆಯ ದೈವವಾಗಿ ರೂಪಾಂತರ ಪಡೆಯುತ್ತಾಳೆ. ಇನ್ನೂ ವಿಚಿತ್ರವೆಂದರೆ, ಊರಲ್ಲಿ ಜನರು ಅವಧೂತನನ್ನು ಪವಾಡ ಪುರುಷನಂತೆ ಕಂಡಿರುತ್ತಾರೆ; ಅದರೆ, ಅದೇ ಅವಧೂತ ಈ ಹುಚ್ಚಮಲ್ಲವ್ವನ ಮುಂದೆ ತನ್ನ ಮನದ ಕಳವಳದ ಪರಿಹಾರಕ್ಕೆ ಕೈಯೊಡ್ಡಿ ಕೂರುವುದು ವೈರುಧ್ಯದ ಪರಾಕಾಷ್ಠೆಯಾಗಿದೆ. ಈ ಎರಡು ಪಾತ್ರ ಪ್ರಸಂಗಳು ವಾಸ್ತವವೋ, ಕಾಲ್ಪನಿಕವೋ ಇದ್ದಿರಬಹುದು; ಕಾದಂಬರಿಕಾರರನ್ನು ಮರೆತು ಓದುವಷ್ಟು ಈ ಪಾತ್ರಗಳು ಮತ್ತು ಅವು ಎದುರುಗೊಂಡ ಪ್ರಸಂಗಗಳು ಶಕ್ತಿಶಾಲಿಯಾಗಿವೆ. ಟರ್ಕಿ ದೇಶದ ನೋಬೆಲ್ ಪುರಸ್ಕೃತ ಕಾದಂಬರಿಕಾರನಾದ ಒರ್ಹಾನ್ ಪಾಮುಕ್ ತನ್ನ ಲೇಖನವೊಂದರಲ್ಲಿ ನಾವು ಕಾದಂಬರಿಯ ಯಾವ ಭಾಗಗಳಲ್ಲಿ ಲೇಖಕನನ್ನು ಪೂರಾ ಮರೆಯುತ್ತೇವೆಯೋ ಅಲ್ಲಿ ಅವನು ಅತ್ಯಂತ ಪ್ರಬಲನಾಗಿ ಇರುತ್ತಾನೆ ಎಂಬುದು ಕಾದಂಬರಿಯ ಒಂದು ಮುಖ್ಯ ಲಕ್ಷಣ. ಯಾಕೆಂದರೆ ನಾವು ಲೇಖಕನನ್ನು ಮರೆತಿರುವಾಗ ಕಾಲ್ಪನಿಕ ಜಗತ್ತೇ ನಿಜ ಜಗತ್ತು ಎಂದು ನಂಬಿಕೊಂಡಿರುತ್ತೇವೆ. ಲೇಖಕನ ಕನ್ನಡಿ ಅತ್ಯಂತ ಪರಿಪೂರ್ಣ, ಸಹಜ ಕನ್ನಡಿ ಎಂದು ಭಾವಿಸಿರುತ್ತೇವೆ. ನಿಜವೇನೆಂದರೆ ಪರಿಪೂರ್ಣ ಕನ್ನಡಿ ಇಲ್ಲ, ನಮ್ಮ ನಿರೀಕ್ಷೆಗಳಿಗೆ ಹೊಂದುವ ಕನ್ನಡಿಗಳಿರುತ್ತವೆ. ಕಾದಂಬರಿಯನ್ನು ಓದಬಯಸುವವರು ತಮ್ಮ ಅಭಿರುಚಿಗೆ ತಕ್ಕ ಕನ್ನಡಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದು ನೆನಪಾಯಿತು. ಪಾಮುಕ್‌ನ ಈ ಹೇಳಿಕೆಯು ಕಾದಂಬರಿಯ ಈ ಎರಡು ಪಾತ್ರಗಳ ವಿಷಯದಲ್ಲಿ ನಿಜವೆಂದು ಅನ್ನಿಸಿದೆ. 
      ಕಾದಂಬರಿಯ ಆರಂಭದಲ್ಲಿ ಲೇಖಕರು ಇಲ್ಲಿ ಕತೆಯೊಂದೇ ಮುಖ್ಯ, ಕತೆ ಅಲ್ಲದೆ ಮತ್ತೇನಿಲ್ಲ, ಬದುಕೆಂದರೆ ಕತೆ... ಎಂದು ಹೇಳಿಕೊಂಡಿದ್ದಾರೆ. ಇದು ಕತೆಯ ಬಗ್ಗೆ ಅವರ ಗಾಢವಾದ ನಂಬಿಕೆಯನ್ನು ಸೂಚಿಸುತ್ತದೆ. ಕಾಲ ದೇಶಬದ್ಧವಾಗಿ ಕತೆಗಳು ಸರ್ವಾಂತರಯಾಮಿಯಾದವು; ಕತೆಗಳಿಲ್ಲದೇ ಮನುಷ್ಯ ಲೋಕ ಬದುಕಲಾರದೆಂದು ತೋರುತ್ತದೆ. ಪ್ರತಿಯೊಂದು ಸಮುದಾಯಗಳು ತಮ್ಮ ಬದುಕಿಗೆ ಬೇಕಾದಂತೆ ಕತೆಗಳನ್ನು ಕಟ್ಟಿಕೊಳ್ಳುತ್ತವೆ. ಹಾಗಿಯೇ ಪ್ರತಿಯೊಬ್ಬ ಲೇಖಕರು ಸಹ ತಮ್ಮ ಕಾಲಮಾನಕ್ಕೆ ಸಲ್ಲುವ ಕತೆಗಳನ್ನು ಪುನರ್ ಸೃಷ್ಟಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಾಳಾಸಾಹೇಬರಿಗೆ ಕಾದಂಬರಿಯಲ್ಲಿ ಕತೆಯನ್ನು ನಿರೂಪಿಸುವುದಕ್ಕಿಂತ ಕತೆಯನ್ನು ಹೇಳುವುದರಲ್ಲಿ ಹೆಚ್ಚಿನ ಉತ್ಸಾಹ ಮತ್ತು ಆಸಕ್ತಿಯಿದೆ. ಕಾದಂಬರಿಯಲ್ಲಿ ವಾಚಕರನ್ನು ಉದ್ದೇಶಿಸಿ ಮಾತನಾಡುವ ಲೇಖಕರು ಈ ಕತೆಯನ್ನು ಕೇಳಿಸಿಕೊಳ್ಳಬೇಕೆಂದು ಮತ್ತೆ ಮತ್ತೆ ಕೋರಿಕೊಳ್ಳುತ್ತಾರೆ. ಕತೆ ಹೇಳುವುದು ಜಾನಪದ, ತೋಂಡಿ ಸಂಪ್ರದಾಯದ ಪ್ರತೀಕವಾಗಿದೆ. ನಮ್ಮ ಮಹಾ ಕಾವ್ಯಗಳನ್ನು ಕಣ್ಣೋಟದ ಓದಿಗಿಂತ ಕಿವಿಯಿಂದ ಕೇಳಿಸಿಕೊಳ್ಳುವುದೇ ಮುಖ್ಯವಾಗಿತ್ತು. ಅಷ್ಟೇ ಅಲ್ಲದೇ, ವಚನಗಳು, ಕೀರ್ತನೆಗಳು, ಅನುಭಾವಿ ತತ್ವಪದಗಳು, ಬಯಲಾಟಗಳ ಸಂಭಾಷಣೆ, ಇವೆಲ್ಲವೂ ಕೇಳಿಸಿಕೊಳ್ಳಬೇಕಾದ ಪರಂಪರೆಗೆ ಸೇರಿದ್ದವು. ಕನ್ನಡ ಭಾಷೆಗೆ ಇಪ್ಪತ್ತನೆಯ ಶತಮಾನದಲ್ಲಿ ವಸಾಹತುಶಾಹಿಯ ಮೂಲಕ ಕಾಲಿಟ್ಟ ಕಾದಂಬರಿ ಪ್ರಕಾರವು ಕಣ್ಣೋಟದ ಓದನ್ನು ಪ್ರಧಾನವನ್ನಾಗಿಸಿತು; ಇದರಿಂದ ನಮ್ಮ ಪ್ರಾಚೀನ ಕಾವ್ಯ ಪರಂಪರೆಯು ಆಧುನಿಕ ಕಾಲಘಟ್ಟದಲ್ಲಿ ಅನಾದರಕ್ಕೆ ಒಳಗಾದವು; ಅವು ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಿಗೆ ಸೀಮಿತಗೊಂಡವು. ಈ ನಿಟ್ಟಿನಲ್ಲಿ ದೇವನೂರ ಕುಸುಮಬಾಲೆ ಕಾದಂಬರಿಯನ್ನು ಓದುವುದಕ್ಕಿಂತ ಕೇಳಿಸಿಕೊಳ್ಳುವ ಕಾವ್ಯಾತ್ಮಕ ಧಾಟಿಯಲ್ಲಿ ರಚನೆಯಾಗಿರುವುದನ್ನು ಗಮನಿಸಬಹುದು. 
     ಆದರೂ ಇಂದಿನ ಸಮಕಾಲೀನ ಸಂದರ್ಭದಲ್ಲಿ ಕಾದಂಬರಿ ಅತ್ಯಂತ ಜನಪ್ರಿಯ ಪ್ರಕಾರವಾಗಿದೆ. ಆದ್ದರಿಂದ ಕಾದಂಬರಿಯಲ್ಲಿ ಕಥಾನಕವನ್ನು ವಿವರಿಸುವ ಅಥವಾ ವರ್ಣಿಸುವ ಭಾಷಿಕ ವಿನ್ಯಾಸವು ಮುಖ್ಯವಾಯಿತು; ಅಂತಹ ಭಾಷಿಕ ನಿರೂಪಣೆಗಳ ಹಿಂದಿರುವ ಧೋರಣೆಗಳ ಸ್ವರೂಪವನ್ನು ಕನ್ನಡ ವಿಮರ್ಶಾಲೋಕ ಹುಡುಕಲು ಯತ್ನಿಸಿದೆ. ಕಾದಂಬರಿಯು ಬೇರೆ ಸಾಹಿತ್ಯ ಪ್ರಕಾರಗಳಿಗಿಂತ ಭಿನ್ನವಾದುದು. ಪ್ರತಿಯೊಬ್ಬ ಕಾದಂಬರಿಕಾರರು ತಮ್ಮದೇ ದೃಷ್ಟಿಕೋನ ಮತ್ತು ರಚನಾ ಕೌಶಲಗಳನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಬಾಳಾಸಾಹೇಬರು ಕಾದಂಬರಿಯಲ್ಲಿ ಕೆಲವು ಘಟನೆ ಮತ್ತು ಸನ್ನಿವೇಶಗಳನ್ನು ನಿರ್ಮಿಸುತ್ತಾರೆ. ನಂತರದಲ್ಲಿ ಅವುಗಳ ಜಾಡು ಹಿಡಿದು ವಿವರಿಸುವ ಮತ್ತು ಅವುಗಳಿಗೆ ಪೂರಕವಾಗಬಲ್ಲ ಅಥವಾ ತದ್ವಿರುದ್ಧವಾದ ಪಾತ್ರ, ಕತೆಗಳನ್ನು ಪೋಣಿಸುತ್ತ ಹೋಗುತ್ತಾರೆ. ಎಲ್ಲಿಯೂ ಪಾತ್ರಗಳ ಬದುಕು ಹಾಗೂ ಅವು ತೆಗೆದುಕೊಳ್ಳುವ ನಿಲುವುಗಳ ಕುರಿತು ಜಡ್ಜ್‌ಮೆಂಟ್ ಕೊಡಲು ಹೋಗುವುದಿಲ್ಲ. ನದಿಯಂತೆ ಹರಿದು ಹೋಗುವ ಬದುಕನ್ನು ದಂಡೆಯಲ್ಲಿ ನಿಂತು ಕಣ್ಣಿಗೆ ಕಂಡಷ್ಟು ವರ್ಣಿಸುವ ವಿಧಾನವೊಂದು ಬಾಳಾಸಾಹೇಬರ ಎಲ್ಲ ಕಾದಂಬರಿಗಳಲ್ಲೂ ಕಂಡು ಬರುವ ಅಂಶವಾಗಿದೆ; ಮನುಷ್ಯ ಬದುಕಿನ ಗತಿಯನ್ನು ಹೀಗೆಯೇ ಎಂದು ನಿರ್ಣಯವನ್ನು ಅವರು ಹೊರಡಿಸಲಾರರು; ಅದೆಲ್ಲವನ್ನೂ ಓದುಗರ ಅವಗಾಹನೆಗೆ ಬಿಟ್ಟಿರುತ್ತಾರೆ. ಓದುಗರು ತಮಗೆ ಹೊಳೆದ ಅರ್ಥ ಸಾಧ್ಯತೆಗಳನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯವಂತು ಇದ್ದೇ ಇರುತ್ತದೆ.
    ಸದರಿ ಕಾದಂಬರಿಯಲ್ಲಿ ಆಧುನಿಕ ಶಿಕ್ಷಣವನ್ನು ಪಡೆದ ಹೊಸ ತಲೆಮಾರಿನ ಆಸೆ ಆಕಾಂಕ್ಷೆಗಳು ಏನು ಎಂಬುದು ತಿಳಿಯಲಾರದು; ಯಾಕೆಂದರೆ ಕಾದಂಬರಿಯಲ್ಲಿ ಗುರುಪಾದಪ್ಪನ ಮನೆತನದ ಚರಿತ್ರೆಯ ನಿರೂಪಣೆಯೇ ಮುಕ್ಕಾಲು ಪಾಲು ಜಾಗವನ್ನು ಆಕ್ರಮಿಸಿಕೊಂಡಿರುವುದರಿಂದ ಹೊಸ ಪೀಳಿಗೆಯ ಶಿವಲಿಂಗೇಗೌಡ, ಗೌರಿ, ಬಾಪು ಒಂದೆರಡು ಸಲವಷ್ಟೇ ಬಾಲ್ಯದ ಶಾಲಾ ದಿನಗಳು ದಾಖಲಾಗುತ್ತವೆ. ಬಾಳಾಸಾಹೇಬರ ಕಾದಂಬರಿಗಳಲ್ಲಿ ಮಕ್ಕಳ ಜಗತ್ತು ಇಲ್ಲವೇ ಇಲ್ಲವೆಂಬಷ್ಟು ಗೈರುಹಾಜರಾಗಿದೆ. ಕಾದಂಬರಿಯ ಕೊನೆಯಲ್ಲಿ ಬಾಪು ಇದ್ದಕ್ಕಿದಂತೆ ಪ್ರತ್ಯಕ್ಷವಾಗಿ ನಮಗ ಬೇಕಾಗಿದ್ದು ಸಾಮಾಜಿಕ ಕ್ರಾಂತಿಯೇ ಹೊರತು ವೈಯಕ್ತಿಕ ಕ್ರಾಂತಿ ಅಲ್ಲ ಎಂದು ಹೇಳಿ ಗಾಂಧಿ ಆಶ್ರಮವನ್ನು ಕಟ್ಟಿಸಲು ಓಡಾಡುವುದು ತಿಳಿಯುತ್ತದೆ. ಶಿವಲಿಂಗೇಗೌಡನಿಗೆ ತನ್ನ ಬಾಲ್ಯದ ಸಹಪಾಠಿ ಗೌರಿಯನ್ನು ಬೆಂಗಳೂರಿನಲ್ಲಿ ಕಂಡ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗಿ ಆಕೆಯ ಹೆಗಲ ಮೇಲೆ ಕೈಹಾಕುವಷ್ಟು ಆಪ್ತರಾಗುತ್ತಾರೆ; ಮುಂದಿನ ಅಧ್ಯಾಯದಲ್ಲಿ ಒಮ್ಮಲೇ ಮದುವೆಯಾಗಿ ಶಿರಿಹಾಡಿಗೆ ಬಂದು ಬಿಡುತ್ತಾರೆ! 
     ಕಾದಂಬರಿ ದಲಿತ ಜಗತ್ತನ್ನು ಅನಾವರಣ ಮಾಡುವುದರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹೆಸರಿಗಷ್ಟೇ ದಲಿತ ಪಾತ್ರಗಳು ಬರುತ್ತವೆ; ಇದಕ್ಕೆ ಯಮನಪ್ಪ ಕೊಂಚ ಅಪವಾದವೇ. ಆದರೆ ಗುರುಪಾದಪ್ಪನ ಮನೆಯಲ್ಲಿ ಆತ ನಲವತ್ತು ವರ್ಷಗಳಿಂದ ಜೀತಕ್ಕಿರುವುದರ ಬಗ್ಗೆ ನೋವು, ಸಂಕಟ ಏನೂ ಕಾಡಲಿಲ್ಲವೇ? ಆತನ ಮೊಮ್ಮಗಳು ಗೌರಿ ಓದಿನಲ್ಲಿ ಮುಂದಿದ್ದವಳು; ಮುಂದೆ ಆಕೆ ಬೆಂಗಳೂರಿನಲ್ಲಿ ಶಿಕ್ಷಣವನ್ನು ಪಡೆದುಕೊಂಡು ಬಂದಾಗಲೂ ಆಕೆಗೆ ಊರಿನಲ್ಲಿ ಅನುಭವಿಸಿದ ಅಸ್ಪೃಶ್ಯತೆ, ಜಾತಿಯ ಅವಮಾನಗಳು ಕಾಡಲಿಲ್ಲವೇ? ತನ್ನ ತಾತನ ಬಗ್ಗೆ ಆಕೆಯ ನಿಲುವುಗಳೇನು? ಇಂತಹವುಗಳ ಬಗ್ಗೆ ಕಾದಂಬರಿ ದಿವ್ಯ ಮೌನ ತೋರಿದೆ; ಗೌರಿ ಶಾಲೆಗೆ ಹೋಗುವ ಒಂದೆರಡು ಸನ್ನಿವೇಶಗಳಿವೆ; ಆಕೆ ಪುನಃ ಕಾದಂಬರಿಯ ಕೊನೆಯಲ್ಲಿಯೇ ಪ್ರತ್ಯಕ್ಷಳಾಗುತ್ತಾಳೆ! ಗುರುಪಾದಪ್ಪನ ಮನೆತನ ಮತ್ತು ಮೇಲ್ವರ್ಗದ ಇತರೆ ಪಾತ್ರಗಳ ವಿವರಣೆಗಳಗೆ ಕಾದಂಬರಿ ಮೀಸಲಾಗಿರುವುದರಿಂದ, ಸಹಜವಾಗಿಯೇ ದಲಿತ ಪಾತ್ರಗಳು ಅಂಚಿಗೆ ಸರಿದುಬಿಟ್ಟಿವೆ. ಕಾದಂಬರಿಯಲ್ಲಿ ಯಾವುದೇ ಮೇಲ್ವರ್ಗದ ಪಾತ್ರಗಳ ಹೆಸರಿನ ಹಿಂದೆ ಜಾತಿ ಸೂಜಕ ಸಂಬೋಧನೆಗಳು ಬಳಕೆಯಾಗುವುದಿಲ್ಲ; ಅದೇ ದಲಿತ ಪಾತ್ರಗಳು ಮತ್ತು ಶ್ರಮಿಕ ಸಮುದಾಯಗಳ ಪಾತ್ರಗಳು ಬಂದಾಗಲೆಲ್ಲ ಅವರ ಹೆಸರಿನ ಹಿಂದೆ ಜಾತಿ ಸೂಚಕಗಳು ನಿರಾಯಾಸವಾಗಿ ಬಳಸಲ್ಪಡುತ್ತವೆ. ಅಷ್ಟೇ ಅಲ್ಲದೇ ಹೆಸರುಗಳು ಕೂಡ ಅಪಭ್ರಂಶಗೊಳ್ಳುತ್ತವೆ. ಇವೆಲ್ಲ ಕಾದಂಬರಿಯ ನಿರೂಪಣೆಯ ಮುಖಾಂತರ ನಡೆಯುವ ಸಾಂಸ್ಕೃತಿಕ ರಾಜಕಾರಣವಷ್ಟೇ ಅಲ್ಲ, ಸೃಜನಶೀಲವಾಗಿ ಪಾತ್ರಗಳಿಗೂ ಲೇಖಕ ಅನ್ಯಾಯ ಮಾಡಿದಂತೆಯೇ ಸರಿ. ಲೇಖಕರಿಗೆ ದಲಿತ ಸಮುದಾಯದ ನೋವು ನಲಿವುಗಳನ್ನು ಒಳ ಹೊಕ್ಕು ನೋಡಲು ಸಾಧ್ಯವಾಗಿಲ್ಲ. ಕಾದಂಬರಿಯಲ್ಲಿ ದಲಿತ ಲೋಕದ ಹಿಂದಿನ ಸಾಂಸೃತಿಕ ವಿವರಗಳೇ ಸಂಪೂರ್ಣವಾಗಿ ಗೈರುಹಾಜರಾಗಿವೆ.
    ಶಿರಿಹಾಡಿಯಲ್ಲಿ ಮತ್ತು ಅದರ ಸುತ್ತಮುತ್ತ ವಾಸಿಸುತ್ತಿರುವ ದಲಿತರು ಜಾತಿ, ಅಸ್ಪೃಶ್ಯತೆ, ಬಡತನ, ಅವಮಾನಗಳಿಂದ ಕುದ್ದು ಹೋದವರೇ ಆಗಿದ್ದಾರೆ. ಆದರೆ ಕೆಲವು ದಲಿತರಿಗೆ ಅಲ್ಲಿ ಭೂಮಿಯ ಒಡೆತನವೂ ಇದೆ; ಭೂರಹಿತ ದಲಿತರು ಅಲ್ಲಿಯ ಭೂಮಾಲಿಕ ವರ್ಗದೊಂದಿಗೆ ಹಲವು ಬಗೆಯ ಸಂಘರ್ಷಗಳನ್ನು ನಡೆಸುವುದು ಅನಿವಾರ್ಯವೇ ಆಗಿದೆ. ಆದರೆ ಕಾದಂಬರಿ ಇವುಗಳನ್ನೆಲ್ಲ ಮರೆಮಾಚಿ ಸಾಮಾಜಿಕ ಕ್ರಾಂತಿಯಾಗಬೇಕೆಂದು ಕರೆ ನೀಡುವುದು ಹಾಸ್ಯಾಸ್ಪದವೇ ಆಗಿದೆ. ಕಾದಂಬರಿಯಲ್ಲಿ ಗಾಂಧಿ ಆಶ್ರಮ ನಿರ್ಮಾಣವಾಗುತ್ತದೆ; ಗಾಂಧಿಜಿಯ ಗ್ರಾಮ ಭಾರತದ ಮೌಲ್ಯಗಳು ನಾಶವಾದ್ದರ ಬಗ್ಗೆ ಕಾದಂಬರಿ ವಿಷಾದದಿಂದ ನಿರೂಪಿಸುತ್ತದೆ. ಆದರೆ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಈ ಪ್ರದೇಶವು,  ತೀರ ಸಮೀಪದಲ್ಲಿಯೇ ಎಲ್ಲ ಬಗೆಯ ಅಸಮಾನತೆಯ ವಿರುದ್ಧ ಸಂಘರ್ಷಗಳನ್ನು ನಡೆಯಿಸಿ, ಸಮಾನತೆ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ, ಛತ್ರಪತಿ ಶಾಹು ಮಹಾರಾಜ, ಅಂಬೇಡ್ಕರ್ ಅವರುಗಳ ಯಾವ ಪ್ರಭಾವವೂ ಕಾದಂಬರಿಯಲ್ಲಿ ಸುಳಿಯದಿರುವುದು ಸೋಜಿಗದ ಸಂಗತಿಯಾಗಿದೆ. ಈ ಕಾದಂಬರಿಯು ಉದಾರವಾದಿ ಗಾಂಧಿ ಪ್ರಣೀತ ತಾತ್ವಿಕತೆಯ ಧೋರಣೆಗಳಿಂದ ರಚನೆಯಾಗಿದ್ದು ಇದಕ್ಕೆ ಕಾರಣವಾಗಿದ್ದಿರಬಹುದು. ದಲಿತ ಲೋಕದ ಮೂಲಭೂತ ಸಮಸ್ಯೆಗಳನ್ನು ಕಾದಂಬರಿ ಸಂಪೂರ್ಣವಾಗಿ ಬದಿಗಿಟ್ಟಿದೆ. 

ಕೃಷ್ಣೆ ಹರಿದಳು ಜೈನ ಸಮುದಾಯದ ಆಂತರಿಕ ಕಲಹಗಳು, ಪಿತೂರಿಗಳು, ಅಸೂಯೆ, ಹಿಂಸೆ, ಕ್ರೌರ್ಯಗಳನ್ನು ನಿರ್ಭಿಡೆಯಾಗಿ ತೆರೆದಿಡುತ್ತದೆ. ಅದೇ ಸಮುದಾಯದಿಂದ ಬಂದಿರುವ ಲೇಖಕರು ಆ ಲೋಕವನ್ನು ಅತ್ಯಂತ ಹತ್ತಿರದಿಂದ ಕಂಡವರು; ಅದರೊಳಗಿನ ಚೈತನ್ಯಶೀಲತೆಯ ಜೊತೆಯಲ್ಲಿಯೇ ಢಾಂಬಿಕತೆ ಮತ್ತು ಪೊಳ್ಳುತನಗಳನ್ನು ಸಂಯಮದಿಂದ ಬೆತ್ತಲುಗೊಳಿಸಿದ ಕಾರಣಕ್ಕೆ ಇದು ಕನ್ನಡದ ಮಹತ್ವದ ಕಾದಂಬರಿಯಾಗಿದೆ. ನಾ. ಡಿಸೋಜ ಅವರು ನದಿಯಿಂದ ನಿರ್ವಸಿತವಾಗುವ ಊರಿನ ಕಥನಗಳನ್ನು ದ್ವೀಪ ಮತ್ತು ಮುಳುಗಡೆ ಕಾದಂಬರಿಗಳಲ್ಲಿ ಕಟ್ಟಿಕೊಟ್ಟಂತೆ ಬಾಳಾಸಾಹೇಬರ ಕೃಷ್ಣೆ ಹರಿದಳು ಕೂಡ ಮುಳುಡೆಯಾಗುವ ಊರ ಜನರ ತಲ್ಲಣಗಳನ್ನು ಮತ್ತು ಸಂಕಟಗಳನ್ನು ಸಮರ್ಥವಾಗಿ ಸಾಂಸ್ಕೃತಿಕ ಕಥನವನ್ನಾಗಿಸಿದೆ. ಇದು ಬದುಕಿನ ವಾಸ್ತವತೆಗಳಿಗೆ ಕನ್ನಡಿಯಾಗಲು ಹಂಬಲಿಸಿದ ಕಥನವೂ ಆಗಿದೆ. ಕಾದಂಬರಿ ಗ್ರಾಮ್ಯ ಸೊಗಡಿನ ವಿಶಿಷ್ಟ ಭಾಷೆಯಿಂದ ಮತ್ತು ಆಪ್ತವಾದ ನಿರೂಪಣೆಯ ವಿಧಾನದಿಂದ ಸರಾಗವಾಗಿ ಓದಿಸಿಕೊಳ್ಳುವ ಹಾಗೂ ಹಲವು ಬಗೆಯ ವಾಗ್ವಾದಗಳಿಗೆ ಆಹ್ವಾನಿಸುವ ಕೃತಿಯಾಗಿದೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಭಾಷ ರಾಜಮಾನೆ

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events