Article

ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ: ಕನ್ನಡದ ಕನ್ನಡಿಯಲ್ಲಿ ಜಗತ್ತಿನ ಹಲವು ಮುಖಗಳು

ಎಸ್. ದಿವಾಕರ್ ನವ್ಯೋತ್ತರ ಕನ್ನಡದ ಪ್ರಸಿದ್ಧ ಕಥೆಗಾರ, ಲಲಿತ ಪ್ರಬಂಧಕಾರ, ಅನುವಾದಕ, ಅಂಕಣಕಾರ ಮತ್ತು ವಿಮರ್ಶಕರು. ಕನ್ನಡ-ಇಂಗ್ಲಿಷ್ ಭಾಷೆಗಳ ಆಳವಾದ ಅಧ್ಯಯನ, ಜಾಗತಿಕ ಸಾಹಿತ್ಯದ ಗಾಢವಾದ ಪ್ರೀತಿಯನ್ನಿಟ್ಟುಕೊಂಡು ಅನುವಾದ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಎಸ್. ದಿವಾಕರ್ ನವ್ಯೋತ್ತರ ಕನ್ನಡ ಸಣ್ಣಕಥೆಯ ಚೌಕಟ್ಟನ್ನು ವಿಸ್ತರಿಸಿದ ಪ್ರತಿಭಾನ್ವಿತ ಕಥೆಗಾರರು. ಅವರು ಕಳೆದ ಮೂರು ದಶಕಗಳಿಂದ ಇಂಗ್ಲಿಷಿನ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಬಂದಿದ್ದಾರೆ. ಸಾಹಿತ್ಯದಲ್ಲಿ ಸಹಜವಾಗಿಯೇ ಅವರ ಓದು ವಿಸ್ತಾರ, ಆಸಕ್ತಿ ಆಳವಾದದ್ದು. ಜೊತೆಗೆ ಅವರಿಗೆ ಇತರ ಕಲೆಗಳಲ್ಲಿ ಜೀವಂತವಾದ ಆಸಕ್ತಿ. ಆಂಗ್ಲ ಭಾಷೆ ಮತ್ತು ಸಾಹಿತ್ಯದ ಮೇಲೆ ಪ್ರಭುತ್ವ ಪಡೆದ ಕೆಲವೇ ಲೇಖಕರಲ್ಲಿ ಎಸ್. ದಿವಾಕರ್ ಒಬ್ಬರೆನ್ನುವ ಮಾತಿಗೆ ವಿದ್ವಜ್ಜನರಲ್ಲಿ ಎರಡು ಮಾತಿಲ್ಲ. ಅವರು ಕನ್ನಡದಿಂದ ಇಂಗ್ಲಿಷಿಗೆ, ಇಂಗ್ಲಿಷಿನಿಂದ ಕನ್ನಡಕ್ಕೆ ನೀರು ಹರಿದಂತೆ ಸಮರ್ಥವಾಗಿ ಭಾಷಾಂತರ ಮಾಡಬಲ್ಲರು. ಅವರು ಕನ್ನಡ-ಇಂಗ್ಲಿಷ್ ಎರಡೂ ಭಾಷೆಗಳ ಸೂಕ್ಷ್ಮ ಪರಿಜ್ಞಾನದ ಜೊತೆ ವಿಮರ್ಶಕನ ತೀಕ್ಷ್ಣ ಒಳಗಣ್ಣನ್ನು ಅಧ್ಯಯನ, ಅನುಭವಗಳಿಂದಾಗಿ ಬೆಳೆಸಿಕೊಂಡಿದ್ದಾರೆ. ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿನ ಅವರ ಪರಿಣತಿ ಓದುಗರನ್ನು ಬೆರಗುಗೊಳಿಸುತ್ತದೆ.

ರಾಬರ್ಟ್ ಲೂಯಿ ಸ್ಟೀವನ್‍ಸನ್ ಇಂಗ್ಲಿಷ್ ಸಾಹಿತ್ಯದಲ್ಲಿ ಸಣ್ಣ ಕಥೆಯನ್ನು ಒಂದು ಗಮನಾರ್ಹ ಮಾಧ್ಯಮವಾಗಿ ನೆಲೆಗೊಳಿಸುವುದರೊಂದಿಗೆ ಅದಕ್ಕೆ ವಿಶಿಷ್ಟ ಮೂರ್ತ-ಸ್ವರೂಪಕೊಟ್ಟನು. ಇಂಗ್ಲಿಷ್ ಸಣ್ಣ ಕಥೆಯನ್ನು ಒಂದು ಸಮರ್ಥ ಅಭಿವ್ಯಕ್ತಿ ವಾಹಕವನ್ನಾಗಿಸಿದ ಕೀರ್ತಿ ಆರ್. ಎಲ್. ಸ್ಟೀವನ್‍ಸನ್‍ನಿಗೆ ಸಲ್ಲುತ್ತದೆ. ಇಪ್ಪತ್ತನೆಯ ಶತಮಾನದಲ್ಲಿ ಸಣ್ಣ ಕಥೆಗಳನ್ನು ಬರೆದವರು ಕಡಿಮೆ. ಕಾದಂಬರಿಯ ನಂತರದ ಜನಪ್ರೀಯತೆಯನ್ನು ಪಡೆದ ಸಾಹಿತ್ಯ ಪ್ರಕಾರವೆಂದರೆ ಸಣ್ಣ ಕಥಾ ಕ್ಷೇತ್ರ. ಇಂಗ್ಲಿಷ್ ಸಣ್ಣ ಕಥೆಯ ಇತಿಹಾಸ ಬಹುಮಟ್ಟಿಗೆ ಇಂಗ್ಲಿಷ್ ಕಾದಂಬರಿ ಇತಿಹಾಸವನ್ನೇ ಹೊಂದಿದೆ. ಇಂಗ್ಲಿಷ್ ಸಣ್ಣ ಕಥೆ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿ ಮೂಡಿಬಂದದ್ದು ಮೊದಲನೆಯ  ಮಹಾಯುದ್ಧದ ಸಂದರ್ಭದಲ್ಲಿ. ಇಪ್ಪತ್ತನೆಯ ಶತಮಾನದಲ್ಲಿ ಸಣ್ಣ ಕಥೆಯು ಹಲವಾರು ಪ್ರಭಾವಗಳಿಗೆ ಒಳಗಾಯಿತು. ಎರಡು ಜಾಗತಿಕ ಮಹಾಯುದ್ಧಗಳು ಸಹಜವಾಗಿ ಹಲವು ಕೃತಿಗಳನ್ನು ಪ್ರಚೋದಿಸಿದವು. ಸಣ್ಣ ಕಥೆಯನ್ನೇ ಮುಖ್ಯ ಮಾಧ್ಯಮವಾಗಿ ಮಾಡಿಕೊಂಡ ಬರಹಗಾರರು ಕಡಿಮೆ. ಹಲವಾರು ಕಾದಂಬರಿಕಾರರು ಸಣ್ಣ ಕಥೆಯನ್ನು ಕಾದಂಬರಿಗೆ ಮಾರ್ಗವನ್ನಾಗಿ ಮಾಡಿಕೊಂಡರು, ಇಲ್ಲವೇ ಕಾದಂಬರಿಗಳೊಡನೆ ಸಣ್ಣ ಕಥೆಗಳನ್ನು ಬರೆದರು. ಬಹುಮಟ್ಟಿಗೆ, ಅವರ ಕಾದಂಬರಿಗಳ ಲಕ್ಷಣಗಳೇ ಅವರ ಕಥೆಗಳಲ್ಲಿ ಕಾಣ ಸಿಕೊಂಡವು. ಈ ಅವಧಿಯಲ್ಲಿ ಪತ್ರಿಕೆಗಳ ಸಂಖ್ಯೆ ಹೆಚ್ಚಾದಂತೆ, ಸಣ್ಣ ಕಥೆಗಳಿಗೆ ಬೇಡಿಕೆಯೂ ಸಹಜವಾಗಿ ಹೆಚ್ಚಿತು. ಸಣ್ಣ ಕಥೆಯ ವೈವಿಧ್ಯ ಬೆಳೆಯಿತು. ಥಾಮಸ್ ಹಾರ್ಡಿ, ಬಟ್ಲರ್, ಹೆನ್ರಿ ಜೇಮ್ಸ್, ಡಿ.ಎಚ್. ಲಾರೆನ್ಸ್, ಜಾರ್ಜ್ ಲೂಯಿಸ್ ಬೋರ್ಹೆಸ್, ಕಿಪ್ಲಿಂಗ್, ಕಾಥರೀನ್ ಮ್ಯಾನ್ಸ್‍ಫೀಲ್ಡ್, ಎಚ್.ಜಿ.ವೆಲ್ಸ್, ಸಿ.ಎಸ್. ಫಾರ್‍ಸ್ಟರ್, ಗಾಲ್ಸ್‍ವರ್ದಿ, ಚಾಲ್ರ್ಸ್ ಬೋದಿಲೇರ್, ಆಂತೊನೆ ಚೆಕಾಫ್, ವರ್ಜೀನಿಯಾ ವೂಲ್ಫ್, ಸೋಮರ್‍ಸೆಟ್ ಮಾಮ್- ಮೊದಲಾದ ಪ್ರಸಿದ್ಧ ಲೇಖಕರು ಇಂಗ್ಲಿಷಿನಲ್ಲಿ ಸಣ್ಣ ಕಥೆಗಳನ್ನು ಬರೆದರು. ಇವರು ಇಂಗ್ಲಿಷಿನಲ್ಲಿ ಸಣ್ಣ ಕಥಾ ಸಾಹಿತ್ಯವನ್ನು ಬಹು ಜನಪ್ರೀಯಗೊಳಿಸುವುದರೊಂದಿಗೆ,ಅದನ್ನು ಸಮೃದ್ಧವಾಗಿ ಬೆಳೆಸಿದರು. ಹಾಗೆಯೇ ಈ ಲೇಖಕರು ಪತ್ರಿಕೆಗಳ ಗಾತ್ರಕ್ಕೆ ತಕ್ಕ ಕಥೆಗಳನ್ನು ಬರೆಯುತ್ತ, ಅವುಗಳ ಸ್ವರೂಪವನ್ನು ಬದಲಾಯಿಸುತ್ತ ತಮ್ಮ  ಕಸಬುಗಾರಿಕೆ ಮತ್ತು ಆಶಯಗಳನ್ನು ಉಳಿಸಿಕೊಂಡರು.

ಇಂದಿನ ಉಸಿರು ಕಟ್ಟುವಂತಹ ಬದುಕಿನಲ್ಲಿ ಲೇಖಕ-ಓದುಗರಿಗೆ ಬಿಡುವು ಕಡಿಮೆ. ಅಂತೆಯೇ ಅವಸರದ ಬರೆಹ, ಅವಸರದ ಓದು, ಅವಸರದ ಮರೆವು! ಕವಿತೆ, ಕಥೆ, ನಾಟಕ- ಎಲ್ಲದಕ್ಕೂ ಹೊಸತನದ ಕಳೆ ಬಂದಿರುವಂತೆ ಸಣ್ಣತನದ ಹೊಗೆಯೂ ಬಡಿದುಕೊಂಡಿರುವುದು ಆಶ್ಚರ್ಯಕರ ಬೆಳವಣಿಗೆ. ಇತ್ತೀಚೆಗೆ ಕನ್ನಡ-ಇಂಗ್ಲಿಷ್ ಈ ಎರಡೂ ಭಾಷೆಗಳಲ್ಲಿ ವಾರ ಪತ್ರಿಕೆ, ಮಾಸ ಪತ್ರಿಕೆಗಳ ಸಂಪಾದಕರ ಕರೆಗೆ ಓಗೊಟ್ಟು ಬಹುಃಶ ಪ್ರತಿಫಲಕ್ಕೆ ಒಳಗಾಗಿ ಅನೇಕ ಸಣ್ಣ ಕಥೆಗಾರರು ಸತ್ವಹೀನವಾದ ಕಥೆಗಳನ್ನು ಬರೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಅನುವಾದ ಕೃತಿಗಳು ಸಹ ಸ್ವತಂತ್ರವೆಂಬುದಾಗಿ ಮೆರೆಯುತ್ತಿವೆ. ಕಲೆಯ ಅಗ್ಗತನಕ್ಕೆ ಚಿತ್ರಪಟಗಳಂತೆ ಸಣ್ಣ ಕಥೆಗಳೂ ಮಾದರಿಯಾಗತೊಡಗಿವೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನೆಲ್ಲ ಪುಸ್ತಕ ರೂಪದಲ್ಲಿ ಹೊರತರುವ ಪ್ರವೃತ್ತಿ ಹೆಚ್ಚು ಬೆಳೆಯುತ್ತಿದೆ. ಆದರೆ ಕಥೆಗಳ ಸಂಖ್ಯೆ ಹೆಚ್ಚಿದಂತೆ ಅವುಗಳ ಗುಣಮಟ್ಟ ಹೆಚ್ಚದಂತೆ ಆಗಿದೆ. ವಿಷಯ, ತಂತ್ರ, ಶೈಲಿ, ದೃಷ್ಟಿ-ಇವುಗಳ ವೈವಿಧ್ಯವು ಸಣ್ಣ ಕಥೆಯಲ್ಲಿ ಪ್ರಕಟವಾಗಬೇಕು.

ಪ್ರಸ್ತುತ ‘ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ’ ಎಸ್. ದಿವಾಕರ್ ಅವರ ಅನುವಾದಿತ ಮೂರನೆಯ ಕಥಾಸಂಕಲನ. ಇಲ್ಲಿಯ ಅತಿ ಸಣ್ಣ ಕಥೆಗಳನ್ನು ಜಗತ್ತಿನ ಬೇರೆ ಬೇರೆ ದೇಶಗಳಿಂದ ಆಯ್ದು ಅನುವಾದಿಸಲಾಗಿದೆ. ಈ ಸಂಕಲನದಲ್ಲಿ ಒಟ್ಟು ಅರವತ್ತಾರು ಅತಿ ಸಣ್ಣ ಕಥೆಗಳಿವೆ. ಇದು ಮನುಷ್ಯ ಸ್ವಭಾವದ ವೈವಿಧ್ಯ ವೈಚಿತ್ರಗಳಿಗೆ, ತೇಜಸ್ಸು ಔನತ್ಯಗಳಿಗೆ ಮತ್ತು ಅಧಃಪತನಗಳಿಗೆ ಕನ್ನಡಿ ಹಿಡಿಯುವ ಕೃತಿ. ಹುಟ್ಟು, ಸಾವು, ಸತ್ಯ, ಹಿಂಸೆ, ಅಹಿಂಸೆ, ಯಾತನೆ, ಅಪಮಾನ, ಪತನ, ಕೊಲೆ,ಏಕಾಕಿತನ, ಏಕಾಗ್ರತೆ, ಪ್ರೀತಿ, ಪ್ರೇಮ, ನಂಬಿಕೆ, ವಿಶ್ವಾಸ, ಸವಾಲು, ಅಹಂ, ದುಃಖ, ನಿರಾಸೆ, ಸಂತೋಷ, ಸೌಂದರ್ಯ, ಮಹತ್ವಾಕಾಂಕ್ಷೆ, ಪ್ರಾರ್ಥನೆ, ಆತ್ಮಸಾಕ್ಷಿ, ಮೋಸ, ವಂಚನೆ, ತ್ಯಾಗ, ಶೋಷಣೆ, ಕಾಮ, ಸ್ವಾರ್ಥಪರತೆ, ಕೋಮುಗಲಭೆ, ಪರೋಪಕಾರ- ಹೀಗೆ ದೈನಿಕದ ಹಲವು ಸಂಗತಿಗಳೇ ಇಲ್ಲಿ ಪುಟ್ಟ ಪುಟ್ಟ ಕಥೆಗಳಾಗಿವೆ. ಎಲ್ಲ ಕಥೆಗಳಲ್ಲಿನ ಸಾಮಾನ್ಯ ಅಂಶ ಬೆರಗು. ಆಯಾ ಕಾಲದ ಏರಿಳಿತ, ಕಥಾ ಸಾಹಿತ್ಯದ ವಿವಿಧತೆ, ಪರಿವರ್ತನೆ, ಸಮಕಾಲೀನತೆ ಇದರಲ್ಲಿ ಓದುಗರು ಕಾಣಬಹುದು. ಸಂಕಲನದ ಬೇರೆ ಬೇರೆ ಕಥೆಗಳು ಓದುಗರಿಗೆ ಭಿನ್ನ ಭಿನ್ನವಾದ ಅನುಭವವನ್ನು ನೀಡುತ್ತವೆ. ಈ ಸಂಕಲನದ ಎಲ್ಲ ಕಥೆಗಳಲ್ಲೂ ಏನಾದರೂ ಒಂದು ಹೊಸ ಝಲಕ್‍ನ್ನು ತೋರಿಸುವ ಪ್ರಯತ್ನ ಇಲ್ಲಿದೆ. ಹಲವು  ಸಣ್ಣ ಕಥೆಗಳು ಇಲ್ಲಿ ನಿರೂಪಣೆಗೊಂಡಿವೆ. ಈ ಕೃತಿ ಹಲವು ರೀತಿಗಳಲ್ಲಿ ಒಂದು ಗಣ . ಸಂಕಲನದ ಕೆಲವು ಕಥೆಗಳಲ್ಲಿ ಹೊರ ಜಗತ್ತನ್ನು ಪಾತ್ರಗಳ ಮನಸ್ಸಿನಿಂದ ನೋಡುವ ಪ್ರಯತ್ನವಿದೆ. ಅನೇಕ ಕಥೆಗಳಲ್ಲಿ ವೈವಿಧ್ಯವಿದೆ. ಆದರೆ ಎಸ್. ದಿವಾಕರ್ ಆರಿಸಿದ ಮಿತಿಯಲ್ಲಿ ಒಳ್ಳೆಯ ಸಣ್ಣ ಕಥೆಗಳನ್ನು ಕೊಟ್ಟಿದ್ದಾರೆ.

ಪಾಶ್ಚಾತ್ಯ ಸಾಹಿತ್ಯವನ್ನು –ವಿಶೇಷವಾಗಿ ಇಂಗ್ಲಿಷ್ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಎಸ್. ದಿವಾಕರ್ ಅವರು ಜಗತ್ತಿನ ಹಲವು ದೇಶಗಳ ಲೇಖಕರ ಅತಿ ಸಣ್ಣ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅನುವಾದಕರು 176 ಪುಟಗಳಲ್ಲಿ  66 ಕಥೆಗಳನ್ನು ಸೇರಿಸಿದ್ದಾರೆ. ಫ್ರಾನ್ಸ್, ರಷ್ಯಾ, ಇಂಗ್ಲೆಂಡ್, ಇಟಲಿ, ಬೆಲ್ಜಿಯಂ, ಸ್ವೀಡನ್, ಅಮೆರಿಕ, ಬ್ರೆಜಿಲ್, ಜರ್ಮನಿ, ಕ್ಯೂಬಾ, ಚೆಕೋಸ್ಲೋವಾಕಿಯ, ಇಸ್ರೇಲ್, ಚೀನಾ, ಹಂಗೇರಿ, ಎಲ್ ಸಾಲ್ವದೋರ್, ಗ್ರೀಸ್,ಉರುಗ್ವೆ, ದಕ್ಷಿಣ ಆಪ್ರೀಕ, ನಿಕರಾಗುವ, ಜಿಂಬಾಬ್ವೆ, ಅರ್ಜೆಂಟೀನಾ, ಪ್ಯಾಲೆಸ್ಟೈನ್, ಪನಾಮ, ಕೆನಡಾ, ಈಜಿಪ್ಟ್, ಗ್ವಾಟೆಮಾಲಾ, ಚಿಲಿ, ನ್ಯೂಜಿಲೆಂಡ್, ಭಾರತ, ಸಿರಿಯಾ –ಮೊದಲಾದ ದೇಶಗಳ ಅತಿ ಸಣ್ಣ ಕಥೆಗಳು ಈ ಸಂಕಲನದಲ್ಲಿವೆ. ಹೀಗಾಗಿ ಒಂದು ಓದಿನಲ್ಲಿ ಅಮೆರಿಕ, ಜರ್ಮನ್, ರಷ್ಯಾ, ಚೀನಾ, ಉರುಗ್ವೆ, ಭಾರತ, ಫ್ರೆಂಚ್,ಕೆನಡಾ, ಕ್ಯೂಬಾ, ಸ್ವೀಡನ್, ಪನಾಮಾ -ಹೀಗೆ ವಿವಿಧ ದೇಶಗಳ ಭಾಷೆಗಳಲ್ಲಿ ಜರುಗಿದ ಪ್ರಯೋಗಗಳ ಪರಿಚಯವಾಗುತ್ತದೆ.

ಇಂಗ್ಲಿಷ್ ಲೇಖಕರಾದ  ಚಾಲ್ರ್ಸ್ ಬೋದಿಲೇರ್, ಆಂತೊನ್ ಚೆಕಾಫ್, ವರ್ಜೀನಿಯಾ ವೂಲ್ಫ್, ಮಾರ್ಸೆಲ್ ಬೆಯಾಲು, ಕಾರೆಲ್ ಚಾಪಕ್,  ಸೋಮರ್‍ಸೆಟ್ ಮಾಮ್, ಹೆನ್ರಿ ಮಿಶೊ, ಪಾರ್ ಲಾಗರ್‍ಕ್ವಿಸ್ತ್, ಮೌಸೀರ್ ಸ್ಕ್ಲೀರ್, ಗಿಯೆರ್ಮೊ ಕಬ್ರೇರ ಇನ್‍ಫಾಂತೆ, ಅಮೋಸ್ ಓಝ್, ರಿಚರ್ಡ್ ಬ್ರಾಟಿಗನ್-ಮೊದಲಾದ ಜಗತ್ತಿನ ಬೇರೆ ಬೇರೆ ದೇಶಗಳ ಪ್ರಮುಖ ಕಥೆಗಾರರ ಅತಿ ಸಣ್ಣ ಕಥೆಗಳು ಈ ಸಂಕಲನದಲ್ಲಿವೆ. ಇಲ್ಲಿರುವ ಕಥೆಗಳು ಸುದೀರ್ಘ ಕಥೆಗಳಲ್ಲ, ಕಿರುಗತೆಗಳು. ಈ ಲೇಖಕರ ಕಥೆ ಕಟ್ಟುವ ರೀತಿಯನ್ನು, ಕಲೆಗಾರಿಕೆ ಮತ್ತು ವೈಶಿಷ್ಟ್ಯವನ್ನು ಈ ಕಥೆಗಳು ಪರಿಚಯ ಮಾಡಿಕೊಡುತ್ತವೆ. ಇಲ್ಲಿನ ಎಲ್ಲಾ ಕಥೆಗಳು ಆ ಲೇಖಕರ ಪ್ರಾತಿನಿಧಿಕ ಅಥವಾ ಮಹತ್ವದ ಕಥೆಗಳಲ್ಲ. ಆದರೆ ಪ್ರತಿಯೊಂದೂ ಪ್ರಯೋಗಶೀಲವಾದವು. ಹೊಸ ಬಗೆಯಿಂದ ಕಥನ ಕಲೆಯನ್ನು ನೋಡಿರುವಂಥವು. ಭಿನ್ನ ವಸ್ತು, ಶೈಲಿಯ ಬರಹಗಳು ಅವು. ಎಸ್. ದಿವಾಕರ್ ಅವರ ಸ್ಫಟಿಕಶುಭ್ರ ಭಾಷೆಯಲ್ಲಿ ಮೂಡಿದ ಅನುವಾದದಿಂದಾಗಿ ಕಥೆಗಳು ಅಧಿಕ ಆಪ್ತವೆನಿಸುತ್ತವೆ. ಹಾಗೆಯೇ ಆ ಕಥೆಗಾರರ ಇನ್ನಿತರ ಬರಹಗಳ ಬಗ್ಗೆ ಓದುಗರು ಕುತೂಹಲ ತಾಳುವಂತೆ ಮಾಡುತ್ತವೆ.

ಈ ಸಂಕಲನದ ಆಂತೊನ್ ಚೆಕಾಫ್‍ನ ‘ನಾನೂ ಮದುವೆಯಾದೆ ಕಾನೂನಿನಂತೆ’, ಮಾರ್ಸೆಲ್ ಬೆಯಾಲುವರ ‘ಸುಕ್ಕುಗಳನ್ನು ಮಾಡುವವನು’, ದೀನೊ ಬುತ್ಸಾತಿಯ ‘ಬೀಳುತ್ತಿದ್ದಾಳೆ ಹುಡುಗಿ ಮೇಲಿಂದ ಕೆಳಕ್ಕೆ’,  ಕ್ಯಾಥರಿನ್ ಆ್ಯನ್ ಪೋರ್ಟರ್‍ರ ‘ವಶೀಕರಣ’, ಕ್ಲಾರೀಸ್ ಲೀಸ್ಪೆಕ್ತರ್‍ರ ‘ಐದನೇ ಕಥೆ’, ಮ್ವೋಸೀರ್ ಸ್ಕ್ಲೀರ್‍ರ ‘ಕರೋಲಾ’, ಮುರೀಲೊ ರುಬಿಆವೊನ ‘ಯಾರವನು?’, ಸೆರ್ಗಿಯೊ ರಮೀರೆಝ್‍ರ ‘ಹೆಣದ ವಾಸನೆ’, ಯ್ವೋನ್ನೆ ವೇರಾರ ‘ಸ್ವತಂತ್ರ ದಿನಾಚರಣೆ’- ಮೊದಲಾದ ಲೇಖಕರ ಸಣ್ಣ ಕಥೆಗಳು ಮನುಷ್ಯ ಸ್ವಭಾವದ ಎಲ್ಲೆಗಳನ್ನು ಸ್ಪರ್ಶಿಸಿ, ದರ್ಶಿಸುತ್ತವೆ. ಕಥೆಯನ್ನು ಎಲ್ಲೂ ವಿವರವಾಗಿ ಹೇಳಲು ಹೋಗದಿರುವುದು ಈ ಕಥೆಗಾರ ಕಥೆಗಳ ವೈಶಿಷ್ಟ್ಯ. ವ್ಯಕ್ತಿಗಳ ಮಾನಸಿಕ ತುಮುಲ, ಅವರ ಬದುಕಿನ ಸ್ಪಂದನದ ಕಂಪನಗಳನ್ನು ನಿಖರವಾದ ಸಂಕ್ಷಿಪ್ತ ಮಾತುಗಳಲ್ಲಿ ದಾಖಲಿಸುವುದು ಅವರು ಅನುಸರಿಸುವ ಕಥನ ಕ್ರಮವಾಗಿರುವುದು ಕಂಡುಬರುತ್ತದೆ.

ಚಾಲ್ರ್ಸ್ ಬೋದಿಲೇರ್‍ನ ‘ಕನ್ನಡಿ’, ವರ್ಜೀನಿಯಾ ವೂಲ್ಫ್‍ಳ ‘ಒಂದು ಚಿತ್ರ’, ಕಾರೆಲ್ ಚಾಪೆಕ್‍ನ ‘ಶೂಲ’, ಜಿ.ಕೆ. ಚೆಸ್ಟರ್‍ಟನ್‍ರ ‘ಬ್ಯಾಬೆಲ್ ಗೋಪುರ’, ಸೋಮರ್‍ಸೆಟ್ ಮಾಮ್‍ನ ‘ಸಾವೂ ಮಾತಾಡುತ್ತೆ’, ಹೆನ್ರಿ ಮಿಶೊನ ‘ನನ್ನ ದೊರೆ’, ಪಾರ್ ಲಾಗರ್ ಕ್ವಿಸ್ತ್‍ನ ‘ಮೂಳೆಗಳು’,  ಕ್ಯಾರೊಲಿನ್ ಫೋರ್ಷೆಯ ‘ಕರ್ನಲ್’, ಮೌಸೀರ್ ಸ್ಕ್ಲೀರ್‍ರ ‘ಒಂದು ಒಗಟು’, ಗ್ರೇಸ್ ಪೇಲಿಯ ‘ತಾಯಿ’, ಝಾಂಗ್ ಐರ್ಲಿಂಗ್‍ರ ‘ಪ್ರೀತಿ’, ಮಾರ್ಗರೀತ್ ದ್ಯೂರಾರ ‘ಬೊನಾರ್ಡ್,’ ಕ್ಲಾದಿಯೊ ದಿ ಕ್ಯಾಸ್ಟ್ರೊನ ‘ಊಸರವಳ್ಳಿ’, ರೋಡ್ರಿಗೊ ರೇಯಿ ರೋಸರ ‘ಪುಸ್ತಕ’-ಮುಂತಾದ ಲೇಖಕರ ಸಣ್ಣ ಕಥೆಗಳ ಶಿಲ್ಪ ಸುಂದರವಾಗಿದೆ. ಆದರೆ ಈ ಸಣ್ಣ ಕಥೆಗಳಲ್ಲಿ ಮಾತಿನ ಬಳಕೆ ಮಿತವಾಗಿದೆ. ಇದು ಮಿಂಚು ಒಮ್ಮೆ ಹೊಳೆದು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಕ್ಷಣ ಕಾಣ ಸಿ ಮರೆಯಾದಂತೆ.

 ಈ ಸಂಕಲನದ ಆಂತೊನ್ ಚೆಕಾಫ್‍ನ ‘ನಾನೂ ಮದುವೆಯಾದೆ ಕಾನೂನಿನಂತೆ’, ಮಾರ್ಸೆಲ್ ಬೆಯಾಲುವರ ‘ಸುಕ್ಕುಗಳನ್ನು ಮಾಡುವವನು’, ದೀನೊ ಬುತ್ಸಾತಿಯ ‘ಬೀಳುತ್ತಿದ್ದಾಳೆ ಹುಡುಗಿ ಮೇಲಿಂದ ಕೆಳಕ್ಕೆ’,  ಕ್ಯಾಥರಿನ್ ಆ್ಯನ್ ಪೋರ್ಟರ್‍ರ ‘ವಶೀಕರಣ’, ಕ್ಲಾರೀಸ್ ಲೀಸ್ಪೆಕ್ತರ್‍ರ ‘ಐದನೇ ಕಥೆ’, ಮ್ವೋಸೀರ್ ಸ್ಕ್ಲೀರ್‍ರ ‘ಕರೋಲಾ’, ಮುರೀಲೊ ರುಬಿಆವೊನ ‘ಯಾರವನು?’, ಸೆರ್ಗಿಯೊ ರಮೀರೆಝ್‍ರ ‘ಹೆಣದ ವಾಸನೆ’, ಯ್ವೋನ್ನೆ ವೇರಾರ ‘ಸ್ವತಂತ್ರ ದಿನಾಚರಣೆ’ ಸಣ್ಣ ಕಥೆಗಳು ಕನ್ನಡ ಕಥಾ ಜಗತ್ತಿಗೆ ಹೊಸ ಆಯಾಮಗಳನ್ನು ದೊರಕಿಸಿಕೊಡುವಂತಿವೆ. ಈ ಸಣ್ಣ ಕಥೆಗಳಲ್ಲಿ ನಾನು ಹೆಚ್ಚು ಇಷ್ಟಪಟ್ಟಿದ್ದು ಕಥೆಗಾರರು ಬಳಸಿದ ತಂತ್ರವನ್ನು. ವಿಷಯ ನಿರೂಪಣೆಯಲ್ಲಿ ಕಥೆಗಾರರು ಬಳಸುವ ಸಂಭಾಷಣಾ ತಂತ್ರ ಮೆಚ್ಚುವಂಥದ್ದು. ಧ್ವನಿ, ಪ್ರತಿಮೆ ಮತ್ತು ಸಂಕೇತಗಳ ಮೂಲಕ ಅನುಭವಕ್ಕೆ ಮಾತಿನ ಶರೀರ ಕೊಡಲು ಪ್ರಯತ್ನಿಸಿದ್ದು ಪ್ರಮುಖವಾಗಿದೆ. ಅನುಭವವನ್ನು ವಿಶ್ಲೇಷಿಸುವಲ್ಲಿ, ಸನ್ನಿವೇಶಗಳನ್ನು ವ್ಯವಸ್ಥೆಗೊಳಿಸುವಲ್ಲಿ  ಕಥೆಗಾರರ ಬೌದ್ಧಿಕತೆ ಸಮರ್ಥವಾಗಿ ದುಡಿಯುತ್ತದೆ. ಸಂಕಲನದ ಕೆಲವು ಕಥೆಗಳಲ್ಲಿ ಗಹನತೆ ಇಲ್ಲ. ಆದರೆ ಓದಿದ ಸಮಯದಲ್ಲಿ ಮನಸ್ಸಿನ ಮೇಲೆ ಪರಿಣಾಮವನ್ನು ಬೀರಬಲ್ಲವು. ಈಗಾಗಲೇ ಇಂಗ್ಲಿಷಿನ ಕೆಲವು ಕೃತಿಗಳನ್ನು ಕನ್ನಡಕ್ಕೆ ಸಮರ್ಥವಾಗಿ ತಂದಿರುವ ಎಸ್. ದಿವಾಕರ್ ಕನ್ನಡದ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಥೆಗಳನ್ನು ಸರಳವಾಗಿ ಅನುವಾದಿಸಿದ್ದಾರೆ. ಎಸ್. ದಿವಾಕರ್ ಕಥೆಗಾರರೂ ಆಗಿರುವುದರಿಂದ ಅವರ ಅನುವಾದಕ್ಕೆ ಓದಿಸಿಕೊಳ್ಳುವ ಗುಣ ದಕ್ಕಿದೆ. ಎಸ್. ದಿವಾಕರ್ ಅವರ ಅನುವಾದವು ಅನುವಾದ ಎಂದು ಅನ್ನಿಸದೆ ಮೂಲದ ಒಟ್ಟು ಅನುಭವವನ್ನು ಹಿಡಿದುಕೊಡುವುದರಲ್ಲಿ ಯಶಸ್ವಿಯಾಗಿದೆ. ಅವರ ಅನುವಾದ ಎಲ್ಲೂ ಪೆಡಸಾಗಿಲ್ಲ. ಇಂತಹ ಸಂಕಲನವನ್ನು ಸಿದ್ಧಗೊಳಿಸಲು ವಿಶೇಷ ಸಾಹಿತ್ಯ ಪ್ರೀತಿ, ಶ್ರದ್ಧೆ ಮತ್ತು ಶ್ರಮಗಳು ಬೇಕು. ಅನುವಾದಕರು ವಹಿಸಿರುವ ಶ್ರಮ ಅಭಿನಂದನೀಯವಾದದ್ದು. ಅನುವಾದಕರ ಶ್ರದ್ದೆ ಹಾಗೂ ನಿಸ್ಪøಹತೆಗಳು ನಿಜವಾಗಿಯೂ ಪ್ರಶಂಸನೀಯ. ಈ ಅನುವಾದದ ಮೌಲ್ಯವನ್ನು ಹೆಚ್ಚಿಸುವಲ್ಲಿ ವಿಮರ್ಶಕ ಟಿ.ಪಿ. ಅಶೋಕ ಅವರ ಮುನ್ನುಡಿಯ ಪಾತ್ರವೂ ಮಹತ್ವದ್ದಾಗಿದೆ. ಟಿ.ಪಿ. ಅಶೋಕ ಅವರ ಮುನ್ನುಡಿ ಕೃತಿಗೆ ಸಮರ್ಥ ಪ್ರವೇಶವನ್ನು ಒದಗಿಸಿದೆ. ಇದು  ಓದುಗ ಮತ್ತು ಬರಹಗಾರರಿಬ್ಬರಿಗೂ ಆಸಕ್ತಿ ಹುಟ್ಟಿಸುವ ಕೃತಿ. ಓದುಗರಿಗೆ ಹೊಸ ಕಥನಗಳ ಪರಿಚಯವಾಗುವುದಷ್ಟೇ ಅಲ್ಲ ಇಂಥ ಭಿನ್ನವಾದ ಓದಿಗೆ ಇದು ಅವರನ್ನು ಸಿದ್ಧಪಡಿಸುತ್ತದೆ. ಓದುಗರಿಗೆ ಹೊರ ಜಗತ್ತಿನ ಹೊಸ ಕಿಂಡಿ ಮತ್ತು ಕಿಟಕಿಗಳನ್ನು ತೆರೆಯಲು ಶಕ್ತವಾಗಿರುವ ಎಸ್. ದಿವಾಕರ್ ಅವರ ಅನುವಾದಿತ ಈ ಅತಿ ಸಣ್ಣ ಕಥೆಗಳು ಜಗತ್ತಿನ ಹಲವು ದೇಶಗಳ ಕಥನ ಸಾಹಿತ್ಯದ ಅನನ್ಯ ಮಾದರಿಗಳಂತಿವೆ. ಅತ್ಯಂತ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಅಭಿವ್ಯಕ್ತಿಯ ಹೊಸ ಕ್ರಮಗಳಿಗಾಗಿ ಹುಡುಕಾಡುತ್ತಿರುವ ಲೇಖಕರಿಗೆ ಈ ಬಗೆಯ ಕೆಲವು ಪ್ರಯೋಗಗಳು ಹೊಸ ದಾರಿಗಳನ್ನು ತೋರಿಸಬಲ್ಲವು.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಸಿ. ಎಸ್. ಭೀಮರಾಯ (ಸಿಎಸ್ಬಿ)