Article

ಹಳ್ಳಿಯ ಮನಸ್ಸುಗಳ ಅಂತರಾಳ ಸೆರೆಹಿಡಿದ ಕತೆಗಳ ಸಂಕಲನ ‘ಕುದರಿ ಮಾಸ್ತರ’

ಹಳ್ಳಿ ಬದುಕಿನ ಚಿತ್ರಣಗಳ ಆಂತರಿಕ ಬದುಕಿನ ವಿವಿಧ ಚಹರೆಗಳನ್ನು, ಅಲ್ಲಿಯ ಮುಗ್ದತೆ, ಸ್ವಾಭಿಮಾನ, ನೆಮ್ಮದಿ ಹುಡುಕುವ ಹಳ್ಳಿಯ ಮನಸ್ಸುಗಳ ಅಂತರಾಳವನ್ನು ಸೊಗಸಾಗಿ ಸೆರೆಹಿಡಿದು ಚಿತ್ರಿಸಿರುವ ಕತಾ ಸಂಕಲನ ಕುದರಿ ಮಾಸ್ತರ. ಬರಹಗಾರ ಟಿ.ಎಸ್. ಗೊರವರ ರಚನೆಯ ಈ ಕತಾ ಸಂಕಲನದ ಎಲ್ಲಾ ಕಥೆಗಳು ಗ್ರಾಮ ಬದುಕಿನ ಭಿನ್ನ ಭಾವವನ್ನು ಹೊರಹಾಕುತ್ತವೆ.

ಗ್ರಾಮೀಣ ಭಾಷೆಯ ಸೊಗಡಿನ ಪದಗಳು ಓದುಗರನ್ನು ಖಷಿಗೊಳಿಸುತ್ತವೆ. ಕಚಗುಳಿ ಇಡುತ್ತವೆ. ವರಪು, ವ್ಯಾಳೆ, ರಜ್ಜಾಗಿ, ಕುಕ್ಕರಗಾಲ, ಥಂಡಿ, ದೀಡುತಾಸು, ವಜ್ಜೆ ಹೊರೆ, ಉಣ್ಣೆ, ಊದುಗೋಳಿ,ಟಬರು,ಜಲ್ಮಕ್ಕೆ, ಗ್ವಾದಲಿ, ಗೂಟ, ಬದು, ಜೇಕು, ಅಗಳಿ, ತೊಣಸಿ, ಹ್ವಾರೆ, ದಬರಿ, ಅಡ್ರಾಸಿ, ಗಜುಗ, ಚಿನಿಪಿನ, ಯಮುಕಿನಿ,ಲಟಿಗೆ, ನೆದರು,ಅಬ್ಬರಸ್ಯಾಡಿ, ಅಲಾದಿ, ಬ್ಯಾಸರ, ಪಟಗ,ಎದಿಗಡ್ರ,ರಾಡ್ಯಾ,ಅರಜಳ, ಹೊಳ್ಳಂಬುಳ್ಳ, ಜಂಪಲು, ಡಬಗೊಳ್ಳಿ ಮುಳ್ಳು, ಕಮಾಯಿ,ಹ್ಯಾಪೆ ಹೀಗೆ ಇನ್ನು ಬಹಳಷ್ಟು ಪದಗಳು ಉತ್ತರಕರ್ನಾಟಕದ ಗ್ರಾಮ್ಯ ಭಾಷೆಯ ಸೊಗಡನ್ನು ಸೂಸುತ್ತವೆ. ಓದುತ್ತಾ ಹೋದಂತೆ ನಮ್ಮ ಹಳ್ಳಿಯ ಬದುಕಿನ ಕಥನಗಳೇ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತವೆ.

ಒಟ್ಟು ಒಂಬತ್ತು ಕಥೆಗಳನ್ನು ಹೊಂದಿದ ಸಣ್ಣ ಕಥಾಸಂಕಲನ ಇದಾದರೂ ಪ್ರತಿ ಕಥೆಗಳು ಓದುಗರೆದೆಯನ್ನು ಹೊಕ್ಕು ವಿನೂತನ ಭಾವಧಾರೆಯನ್ನು ಹರಿಸುತ್ತವೆ.

'ಕುರಿ ಕಾಯೋ ರಂಗನ ಕತೆ' ಯಲ್ಲಿ ರಂಗನ ಬದುಕಿನಲ್ಲಾದ ಪಲ್ಲಟ ಸಹಜವೆನಿಸಿದರೂ ಕಾಡಿನಿಂದ ನಾಡಿನ ಪಯಣದ ಸಣ್ಣ ಬದಲಾವಣೆಯ ಗೆರೆ ಹೇಗಿರುತ್ತದೆ ಎಂಬುದನ್ನು ಕಾಣಬಹುದು. 'ಕುದರಿ ಮಾಸ್ತಾರ' ಕಥೆಯಲ್ಲಿ ಮಾಸ್ತಾರನ ಬದುಕು ಹೇಗೆಲ್ಲ ತೆರೆದುಕೊಳ್ಳುತ್ತದೆ ಮಾಸ್ತರನಾದರೂ ಸಗಣಿ ಹಿಡಿದು ಕುದುರೆ ಮೇಲೆ ಹಾಕಿಕೊಂಡು ಶಾಲೆಯ ಮುಂದೆ ತಿಪ್ಪಿ‌ ಮಾಡುವ ಮಾಸ್ತಾರ ಕೊನೆಗೆ ಅದನ್ನು ಮಾರಿ ಬಂದ ದುಡ್ಡನ್ನು ಬಡಮಕ್ಕಳ ಪಾಠಿ, ಪೆನ್ಸಿಲ್ಲಿಗೆ ನೀಡುವುದು ಮಾಸ್ತಾರನಲ್ಲಿರುವ ಮಾನವೀಯ ಕಳಕಳಿಯನ್ನು ತೋರಿಸುತ್ತದೆ‌‌. 'ಸೂಲಗಿತ್ತಿ' ಕಥೆಯ ಬೂಬಮ್ಮನೆ ಎರಡು ಬಾಣಂತನಗಳ ಚಿತ್ರಣ ಧರ್ಮಗಳಾಚೆಗೆಯ ಮಾನವೀಯತೆಯ ಭಾವಕ್ಷಣಗಳನ್ನು ಚಿತ್ರಿಸುತ್ತದೆ. 'ಇದಿಮಾಯಿ ಕತ್ತಲು' ರಮೇಶನ ಬದುಕಿನಲ್ಲಾಗುವ ಬದಲಾವಣೆ ಅವನನ್ನು ಯಾವ ಸ್ಥಿತಿಗೆ ತರುತ್ತದೆ, ಗ್ರಾಮೀಣ ಬದುಕಿನಲ್ಲಿರುವ ಒಣದ್ವೇಷದ ಪರಿ ಎಂತಹುದು ಎಂಬುದನ್ನು ಇಲ್ಲಿ‌ ಕಾಣಬಹುದು. ಕಥೆಯ ಅಂತ್ಯ ವಿಭಿನ್ನವಾಗಿದೆ. ಕಥೆ ಓದುತ್ತಾ ಸಂತೋಷದಿಂದಿರುವಾಗಲೇ ಕೊನೆಯ ಸಾಲುಗಳು ಓದುಗರನ್ನು ಒಮ್ಮಿಂದೊಮ್ಮೆಲೆ ದುತ್ತೆಂದು ದುಃಖದ ಮಡುವಿಗೆ ತಳ್ಳುತ್ತದೆ.

'ಚವರಿ ಮಾರೋ ದುಗ್ಗಿ ಕತೆ' ದುಗ್ಗಿಯ ಬದುಕಿನ ಬವಣೆಯನ್ನು ಚಿತ್ರಿಸುತ್ತದೆ. ಹೊಟ್ಟೆಪಾಡಿಗಾಗಿ ತನ್ನ ಕೂದಲನ್ನೇ ಕತ್ತರಿಸಿ ಗೌಡಸಾನಿಗೆ ಚೌರ ಮಾಡಿಕೊಟ್ಟಾಗ ಆ ವಿಷಯ ತಿಳಿದ ಗೌಡಸಾನಿ ನಿನ್ನಂತ ಕೀಳು ಜಾತಿಯವಳ ಕೂದಲು ನಾನು ಹಾಕಿಕೊಳ್ಳಬೇಕೆ ಎನ್ನುವ ಮೂಲಕ ಗ್ರಾಮಜಗತ್ತಿನ ಜಾತಿ ಕಂದಕವನ್ನು ಇದು ಚಿತ್ರಿಸುತ್ತದೆ. ಚೌರವನ್ನು ತೊಟ್ಟುಕೊಂಡಾಗ ಗೌಡಸಾನಿ ಪಡುವ ಖುಷಿ ಹೇಳತೀರದು ಅಂತಹ ಖುಷಿಯಲ್ಲಿ ಮಿಂದೆದ್ದವರು ಜಾತೀಯತೆಯೆಂಬ ವಿಷವನ್ನು ಒಳತುಂಬಿಕೊಂಡಾಗ ರಾಕ್ಷಸರಂತೆ ವರ್ತಿಸುವುದು ದುಗ್ಗಿಯಂತವಳಿಗೆ ದಿಗಿಲುಬಡಿದಂತಾಗುತ್ತದೆ‌‌. ಬೆಣ್ಣೆ ಹಾಗೂ ಬಿಸಿರೊಟ್ಟಿ ನೆಲಕ್ಕೆ ಬೀಳುತ್ತದೆ. ದುಗ್ಗಿಯ ಬದುಕಿನ ಕಥನವನ್ನು ಕಥೆ ಓದಿಯೇ ತಿಳಿಯಬೇಕು.

ಗುಣವಂತಪ್ಪನ ಬದುಕಿಗೆ ಬಂದೆರಗುವ ಸಿಡಿಲು ಆಧುನೀಕರಣವೆಂಬ ಮಾಯೆ ಎಂದೆನಿಸುತ್ತದೆ. ಇಲ್ಲದಿದ್ದರೆ ನೆಮ್ಮದಿಯಿಂದಲೇ ಬದುಕು ಸಾಗಿಸುತ್ತಿದ್ದ ಗುಣವಂತಪ್ಪ. ಗೋವಾ ಹೇರಕಟಿಂಗ್ ಸಲೂನ ಅವನ ಬದುಕನ್ನೇ ಬರ್ಬಾದ ಮಾಡಿತು. ಆದರೂ ಜನ ಸಲೂನ್ ಅಂಗಡಿಯ ವ್ಯಾಮೋಹಕ್ಕೆ ಹಾಗೂ ಹೊಸತನದ ಆಕರ್ಷಣೆಯ ಬದಲಾವಣೆಗೆ ಒಗ್ಗಿಕೊಳ್ಳುತ್ತಾರೆ ಎಂಬುದ‌ನ್ನು 'ಗುಣವಂತಪ್ಪನ ಕ್ಷೌರದ ಪೆಟ್ಟಿಗೆ ಮತ್ತು ಹೋವಾ ಹೇರ್ ಕಟಿಂಗ್ ಸಲೂನ್' ಕತೆ ಚಿತ್ರಿಸುತ್ತದೆ.

'ಸೊಂಪಾಗಿ ಸುರಿದರೆ ಸಾಕಿತ್ತೋ ಮಳೆರಾಯ' ಕಥೆ ಓದಿದಾಗ ನಮ್ಮ ಬಾಲ್ಯದ ಮಳೆಗಾಲದ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಮಳೆಗಾಲ ತಂದೊದಗುವ ವಿಚಿತ್ರ ಸಂಕಟಗಳನ್ನು ಇಲ್ಲಿ ಕಾಣಬಹುದು. ಬಹುದಿನಗಳಿಂದ ಊರು ಕಾಣದೇ ಖುಷಿಯಿಂದ ಊರಿಗೆ ಬರುವ ಕಥಾನಾಯಕನಿಗೆ ಊರಿನಲ್ಲಾದ ಅತೀವೃಷ್ಠಿಯ ಹೊಡೆತ ಬಹುವಾಗಿ ಮನಸ್ಸು ಕಲಕುತ್ತದೆ. ನೋವಿನಿಂದ ನರಳುವ ಜೀವಗಳ ಕಂಡು ನಾಯಕನ ಮನಸ್ಸು ಕಲವಿಲಗೊಳ್ಳುತ್ತದೆ‌. ಆ ನೋವಿನ ಆರ್ತನಾದ ಓದುಗರನ್ನೂ ಇತ್ತೀಚಿಗೆ ಸಂಭವಿಸಿ ಅತೀವೃಷ್ಟಿಯ ಕಹಿನೆನಪುಗಳನ್ನು ಕಣ್ಣೆದುರು ತರುತ್ತದೆ.

ಹೀಗೆ ಪ್ರತಿಯೊಂದು ಕಥೆಗಳು ಗ್ರಾಮೀಣ ಬದುಕಿನ ಸುತ್ತಲೂ ಟಿಸಿಲೊಡೆದು ಹಸಿರಾಗಿ ನಳನಳಿಸುತ್ತವೆ. 'ರೊಟ್ಟಿ ಮುಟಗಿ' 'ಮಲ್ಲಿಗೆ ಹೂವಿನ ಸಖ' ಲೇಖಕರ ಕೃತಿಗಳನ್ನು ಓದಿದ ನಂತರ ಅವರ ಕಥನ ಶೈಲಿ ತುಂಬಾ ಇಷ್ಟವಾಗಿತ್ತು. ಅವರ ಕಥೆಗಳು ಕಾವ್ಯಾತ್ಮಕವಾಗಿ ರೂಪುಗೊಂಡಿರುತ್ತವೆ. ಅಲ್ಲಿ ಬಳಕೆಯಾಗುವ ಉಪಮೇಯಗಳು ತುಂಬಾ ಸೊಗಸಾಗಿ ಕಥೆಗೆ ಮೆರುಗು ಹಾಗೂ ಓದುಗರಲ್ಲಿ ವಿನೂತನ ಭಾವಲಹರಿಯನ್ನುಂಟು ಮಾಡುತ್ತದೆ. ಅವರ ಇತ್ತೀಚಿಗೆ ಹೊಸತು ಹಾಗೂ ಕನ್ನಡ ದಿನಪತ್ರಿಕೆಯಲ್ಲಿ ಓದಿದ 'ರನ್ನಿಂಗ ರೇಸ್', 'ರಾತ್ರಿಗಳು' ಕಥೆಗಳೂ ಕೂಡ ತುಂಬಾ ಇಷ್ಟವಾಗಿದ್ದವು.

ದೊಡ್ಡ ದೊಡ್ಡ ಕಾದಂಬರಿಗಳು ಹೊತ್ತು ತರುವ ಮೌಲ್ಯಗಳು ಚಿಕ್ಕಚಿಕ್ಕ ಕಥೆಗಳ ಅಂತರಾಳಗಳೇ ತಿಳಿಸುತ್ತವೆ. ಅಂತಹ ಕಥೆಗಳು ಕುದರಿ ಮಾಸ್ತಾರ ಕಥಾಸಂಕಲನದಲ್ಲಿವೆ.

ರಾಜು ಹಗ್ಗದ