Article

ಕುಂದಾಪ್ರ ಕನ್ನಡದಲ್ಲೊಂದು ಚಂದದ ಕಾದಂಬರಿ ‘ಕಾಡ ಸೆರಗಿನ ಸೂಡಿ’

 "ಸರಿ, ನಾವ್ ಊರಂಗ್ ಇದ್ದರ್ ಎಲ್ಲಾ ಸೇರ್ಕಂಡ್ ಗಾಂಧಿ ಕಾಂಬೂಕ್ ಹೋಪಾ. ನಾವ್ ಎಲ್ಲಾ ಒಟ್ಟಾಯ್ ಇತ್ ಅಂದೇಳಿ ಎಲ್ಲರಿಗೂ ತೋರ್ಸುವಾ. ನೀವ್ ಇಬ್ರೂ ಊರಂಗ್ ಇದ್ದರ್ ಎಲ್ಲರನ್ನೂ ಒಟ್ಟ್ ಸೇರ್ಸೂ ಕೆಲ್ಸಾ ಮಾಡ್ಕ್. ಆದ್ರೆ ಗಾಂಧಿ ಬತ್ರ್ ಅಂದೇಳಿ ಯಾರಿಗೂ ಗೊತ್ತಾಪೂಕ್ ಆಗ. ಗಣೇಶ್ ಕಾಮತ್ರ್ ಮನೇಲ್ ದೇವ್ರ್ ಪೂಜೆ ಅಂತೇಳಿಯೇ ನಾವು ಅಲ್ಲಿಗ್ ಹ್ವಾಯ್ಕ್. ಇಲ್ಲಾಂದ್ರೆ ಪೊಲೀಸ್ರ್ ನಮ್ಮನ್ ಬಿಡೂದಿಲ್ಲೆ"

ಹುಟ್ಟಿದ ಮೇಲೆ ಮೊದಲು ಕಿವಿಗೆ ಬಿದ್ದ ಭಾಷೆ ತುಳು. ಬಾಲ್ಯ ಮತ್ತು ಕೌಮಾರ್ಯದ ಹನ್ನೊಂದು ವರ್ಷ ಇದ್ದುದು ಕುಂದಾಪ್ರ ಕನ್ನಡದ, ಕುಂದಗನ್ನಡದ ಊರಿನಲ್ಲಿ. ಅಂದರೆ ಶಂಕರನಾರಾಯಣದಲ್ಲಿ (ಜನರ ಬಾಯಿಯಲ್ಲಿ ಅದು ಶಂಕ್ರಾಣ). ಹಾಗಾಗಿ ಮನೆಯಿಂದ ಹೊರಬಿದ್ದರೆ ಪೇಟೆ, ಶಾಲೆ ಎಲ್ಲೆಲ್ಲೂ ಕಿವಿಗೆ ಬೀಳುತ್ತಿದ್ದುದು ಮಾತಾಡುತ್ತಿದ್ದುದು ಎಲ್ಲ ಅದೇ ಭಾಷೆ. ಇತರ ಕನ್ನಡ ಗೊತ್ತೇ ಇಲ್ಲ ಎಂಬಷ್ಟರ ಮಟ್ಟಿಗೆ ಅದು ನನ್ನನ್ನು ಆವರಿಸಿಕೊಂಡಿತ್ತು. ಅದು ಎಂತಹ ಒಂದು ಚಂದದ ಭಾಷೆ, ಜಗದೀಶ ಕೊಪ್ಪ ಅವರು ಹೇಳುವ ಹಾಗೆ ‘ಇಂಪಾದ ಕಾವ್ಯದ ಸಾಲುಗಳಂತಹ’ ಭಾಷೆ ಎಂಬುದು ಅರಿವಾದುದು ಅಲ್ಲಿಂದ ಖಾಯಂ ಆಗಿ ಹೊರಬಿದ್ದ ಮೇಲೆ. ಇಲ್ಲದಾಗಲೇ ಅಲ್ಲವೇ ಇದ್ದುದರ ಬೆಲೆ ತಿಳಿವುದು?

ಆ ಬಳಿಕ ಆ ಭಾಷೆಯನ್ನು ಬಳಸುವ ಅವಕಾಶ ಇಲ್ಲವಾಯಿತಾದರೂ ಕುಂದಾಪುರದ ಗೆಳೆಯರೊಡನೆ ಮಾತನಾಡುವಾಗ ನಾನು ಬಳಸುತ್ತಿದ್ದುದು ಅದೇ ಭಾಷೆ. ಈಗಲೂ ಆ ಭಾಷೆ ಕಿವಿಗೆ ಬಿದ್ದಾಕ್ಷಣ ಒಮ್ಮೆ ಕಿವಿ ನೆಟ್ಟಗಾಗುತ್ತದೆ. ಬಾಲ್ಯದ ದಿನಗಳಿಗೆ ಒಯ್ಯುತ್ತದೆ. ಅದೇ ಭಾಷೆಯನ್ನು ಮಾತನಾಡುವ ಯಾರಾದರೂ ಸಿಗಬಾರದೇ ಎಂದು ಮನಸು ತವಕಿಸುತ್ತಿರುತ್ತದೆ.

ಮಂಜುನಾಥ ಚಾಂದ್ ರ ಕಾದಂಬರಿ ‘ಕಾಡ ಸೆರಗಿನ ಸೂಡಿ’ಯ (ಅಕ್ಷರಮಂಡಲ ಪ್ರಕಾಶನ) ಬಹುತೇಕ ಪಾತ್ರಗಳು ಮಾತನಾಡುವುದು ಈ ಸೊಗಸಾದ ಕುಂದಗನ್ನಡದಲ್ಲಿ. ಈ ಭಾಷೆಯನ್ನು ಬಳಸಿಕೊಂಡಿರುವ ಮತ್ತು ದುಡಿಸಿಕೊಂಡಿರುವ, ಹಾಗೆಯೇ ನನಗೆ ತುಂಬ ಪರಿಚಯವಿದ್ದ ಆ ಭಾಗದ ಪರಿಸರವನ್ನು ಬಳಸಿಕೊಂಡು ಬರೆದಿರುವುದರಿಂದಲೂ ಈ ಕಾದಂಬರಿ ನನಗೆ ಇಷ್ಟವಾಯಿತು.

ಕಳೆದ ಸುಮಾರು ಮೂರು ದಶಕಗಳಿಂದ ಕನ್ನಡದ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಸಾಹಿತ್ಯ ಪುಟಗಳನ್ನು ಗಮನಿಸುವ ಅಭ್ಯಾಸ ಇರುವ ಬಹುತೇಕರಿಗೆ ಈ ಕವಿ, ಕತೆಗಾರ ಚಾಂದ್ ಗೊತ್ತಿಲ್ಲದಿರುವುದು ಅಸಾಧ್ಯ. ನಾಡಿನ ಅನೇಕ ಪತ್ರಿಕೆಗಳಲ್ಲಿ ವಾಹಿನಿಗಳಲ್ಲಿ ಸುದೀರ್ಘ ಕಾಲ ಕೆಲಸ ಮಾಡಿ ಪತ್ರಿಕಾವೃತ್ತಿಯ ಹಾದಿಯಲ್ಲಿ ತಮ್ಮದೇ ಛಾಪು ಮೂಡಿಸಿದ ಚಾಂದ್ ರ ಪ್ರತಿಭೆ ಬಹುಮುಖಿಯಾದುದು. ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೂರು ಭಾರಿ ವಿಜೇತರಾದವರು ಚಾಂದ್. 

ಚಾಂದ್ ಅವರ ಪ್ರಸ್ತುತ ಕಾದಂಬರಿಯಲ್ಲಿ ಗುಡ್ಡ ಬೆಟ್ಟ, ಕಾಡು, ನದಿ, ಕಣಿವೆ ಸಹಿತ ಸಮೃದ್ಧ ನಿಸರ್ಗವೂ ಒಂದು ಪ್ರಮುಖ ಪಾತ್ರ. ಇಲ್ಲಿನ ಕಂದೀಲು ಗುಡ್ಡ, ಬಿದಿರೆ ತೊಪ್ಪಲು, ಸಂಕಪ್ಪಾಡಿ ಸಂಕ, ಸಿರಿಪುರ ಇವೆಲ್ಲ ಕಾದಂಬರಿಯ ಮಟ್ಟಿಗೆ ಕಾಲ್ಪನಿಕವೇ ಆಗಿದ್ದರೂ ಘಟ್ಟದ ಸೆರಗಿನಲ್ಲಿ ಬದುಕುವ ಮಂದಿಗೆ ಅಂತಹ ಗುಡ್ಡ ಬೆಟ್ಟ ನದಿ ಕಣಿವೆಗಳ ಪರಿಸರ ತುಂಬಾ ಪರಿಚಿತ. ಅಂತಹದೇ ಸುಂದರ ಪರಿಸರದಲ್ಲಿ ಹುಟ್ಟಿ ಬೆಳೆದ ಚಾಂದ್ ಪ್ರಕೃತಿಯ ಆ ಸ್ನಿಗ್ಧ ಸೌಂದರ್ಯ, ರುದ್ರ ರಮಣೀಯತೆ, ಭವ್ಯತೆಯನ್ನು ಎಷ್ಟೊಂದು ಆಸಕ್ತಿಯಿಂದ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ ಎಂದರೆ ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳ ಚಿತ್ರಗಳಿಗೆ ಅದೊಂದು ಚೈತನ್ಯದಾಯಕ ಮತ್ತು ಅರ್ಥಪೂರ್ಣ ಹಿನ್ನೆಲೆ ಸಂಗೀತದಂತಹ ಒಂದು ಕ್ಯಾನ್ವಾಸನ್ನು ಒದಗಿಸುತ್ತ ಓದು ಮುದವಾಗುವಂತೆ ಮಾಡುತ್ತದೆ.
ಮೋಹನದಾಸ್ ಕರಮಚಂದ ಗಾಂಧಿ ಎಂದರೆ ಏನು? ಅವರೊಂದು ವ್ಯಕ್ತಿಯೇ? ಶಕ್ತಿಯೇ? ಒಂದು ತತ್ವವೇ?, ಸಿದ್ಧಾಂತವೇ? ಅದನ್ನು ಸರಳ ವ್ಯಾಖ್ಯಾನಗಳಲ್ಲಿ ಹಿಡಿದಿಡುವುದು ಕಷ್ಟ. ಒಂದಂತೂ ಸತ್ಯ. ಅವರು ಈ ನೆಲದ ಒಂದು ಅಚ್ಚರಿ. ತಮ್ಮದೇ ಆದ ಕಾರಣಗಳಿಗೆ ಅವರನ್ನು ಯಾರೇ ದ್ವೇಷಿಸಲಿ, ಅವರು ಈ ನೆಲದ ಸತ್ಯ. ಅಸಂಖ್ಯ ಮಂದಿಯ ಬದುಕಿಗೆ, ಕಲೆ, ಸಾಹಿತ್ಯಕೃತಿಗಳಿಗೆ ವಸ್ತುವಾದ, ಪ್ರೇರಣೆಯಾದ ಒಂದು ರೂಪಕ.

ಚಾಂದ್ ಅವರ ಈ ಕಾದಂಬರಿಯೂ ಸ್ವಾತಂತ್ರ್ಯ ಚಳುವಳಿ ತೀವ್ರ ಗತಿ ಪಡೆದಿದ್ದ ಗಾಂಧಿ ಕಾಲದ ಪರಿಸ್ಥಿತಿಯನ್ನು ಹಿನ್ನೆಲೆಯಲ್ಲಿ ಇರಿಸಿಕೊಂಡೇ ಬೆಳೆಯುತ್ತದೆ. ಶತಮಾನ ಪೂರ್ವದ ಅಂದರೆ 1930 ರ ದಶಕದ ಕುಂದಾಪುರ ಪರಿಸರದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾಲಘಟ್ಟಕ್ಕೆ ಒಯ್ಯುತ್ತದೆ. ದೇಶದ ನಾನಾ ಭಾಗದ ಸ್ವಾತಂತ್ರ್ಯ ಹೋರಾಟದ ಮಾಹಿತಿಗಳನ್ನು ಒದಗಿಸುವ, ಹಾಗೆಯೇ ಗಾಂಧಿ ಚಿಂತನೆಗಳನ್ನು ಜನರಲ್ಲಿ ಬಿತ್ತುವ ‘ಸೂಡಿ’ ಪತ್ರಿಕೆಯನ್ನು ಮನೆ ಮನೆಗೆ ತಲಪಿಸುವುದು ಸೇರಿದಂತೆ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿ ನೀಡಿದ ಕರೆಗೆ ಒಂದು ಪುಟ್ಟ ಹಳ್ಳಿ ಸ್ಪಂದಿಸುವ ಸುಂದರ ಕಥನ ಇಲ್ಲಿದೆ. ಇಲ್ಲಿನ ಪಾತ್ರಗಳು ಗಾಂಧಿಯನ್ನು ಕಂಡಿಲ್ಲ. ಆದರೆ ಗಾಂಧಿಯ ಬಗ್ಗೆ ಆ ಬಹುತೇಕ ಎಲ್ಲ ಪಾತ್ರಗಳೂ ತಮ್ಮದೇ ಆದ ಕಲ್ಪನೆಗಳನ್ನು ಹೊಂದಿವೆ. “ಗಾಂಧಿ ಅಂದ್ರೆ ದೇವ್ರು, ಕಣ್ಣಿಗೆ ಕಾಂಬು ದೇವ್ರು” ಎನ್ನುತ್ತಾರೆ ಇಲ್ಲಿನ ಒಂದು ಪಾತ್ರವಾದ ಗಿರಿಜಾ ಹೆಗಡೆ. ಎಂದೂ ಕಂಡಿರದಿದ್ದರೂ ಅವರ ಮೇಲೆಲ್ಲ ಗಾಂಧಿಯ ಪರೋಕ್ಷ ಪ್ರಭಾವವಿದೆ. ಅಸ್ಪೃಶ್ಯತೆಯಂತಹ ಆಚರಣೆಗಳಿಂದ, ಹಿಂಸೆಯ ದಾರಿಯಿಂದ ಅವರು ದೂರ ಸರಿಯುತ್ತಾರೆ. ಗಾಂಧಿ ತತ್ವಗಳು ಅವರನ್ನು ಬದಲಾಯಿಸುತ್ತ ಹೋಗುತ್ತವೆ, ಹೆಚ್ಚು ಹೆಚ್ಚು ‘ಮನುಷ್ಯ’ರನ್ನಾಗಿಸುತ್ತಾ ಹೋಗುತ್ತದೆ. ಎಲ್ಲಿಯವರೆಗೆ ಅಂದರೆ ಆ ಊರಿನ ಜನರನ್ನು ಅನೇಕ ರೀತಿಯಲ್ಲಿ ಕಾಡಿದ ಮತ್ತು ಬ್ರಿಟಿಷ್ ವಿರೋಧಿ ಕೆಲಸ ಮಾಡುತ್ತಿದ್ದ ಮೂವರು ನೇತಾರರನ್ನು ಕೊಂದು ಹಾಕಿದ ದರ್ಪದ ಬ್ರಿಟಿಷ್ ಪೊಲೀಸ್ ಅಧಿಕಾರಿಯೂ ಅಂತಿಮವಾಗಿ ತನ್ನ ಬಂದೂಕು ಕೆಳಗಿಟ್ಟು ಗಾಂಧಿ ಆಶ್ರಮದಲ್ಲಿ ರಾಟೆಯಿಂದ ನೂಲು ನೇಯುತ್ತ ಕೂರುವ ವರೆಗೆ!

ಚಂದದ ಭಾಷೆ, ಆಕರ್ಷಕ ಕಥನ ಶೈಲಿ, ಚುರುಕಿನ ಸಂಭಾಷಣೆ, ವಿಶಿಷ್ಟ ಕಥಾವಸ್ತು, ರೋಚಕ ತಿರುವುಗಳು, ನೀಳ್ಗತೆಯಂತಹ ಕಿರುಕಾದಂಬರಿ.

ನನಗೆ ಇಷ್ಟವಾಯಿತು. ನೀವೂ ಒಮ್ಮೆ ಓದಿ.

ಶ್ರೀನಿವಾಸ ಕಾರ್ಕಳ