Article

ಕುರುಗಾಹಿ ’ಸ್ಯಾಂಟಿ’ಯಾನ ಹುಡುಗಾಟ

ಜಗದ್ವಿಖ್ಯಾತ ಬ್ರೆಜಿಲ್ ಸಾಹಿತಿ ಪೌಲೋ ಕೊಯಿಲೊರ 'ದಿ ಅಲ್ ಕೆಮಿಸ್ಟ್' ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿರುವ ಕನ್ನಡದ ಕಮಲಾ ಹೆಮ್ಮಿಗೆ ಅವರ 'ಅಲ್ ಕೆಮಿಸ್ಟ್'ನ ಹೊಂಗನಿಸಿನ ಯುವಕ..!

'ಸ್ಯಾಂಟಿಯಾಗೋ' ಎಂಬ ಕುರುಬನ ಪಾತ್ರದ ಚಿತ್ತ ಜಂಗಮನದು. ನಿಧಿ ಹುಡುಕುತ್ತಾ ಈಜಿಪ್ಟ್ ತಲುಪುವ ಅವನ‌ ಕಣ್ಣು, ಮರುಭೂಮಿಯನ್ನು ದಾಟುವದರಲ್ಲಿ ನಾನಾ ಅನುಭವವನ್ನು ಗ್ರಹಿಸುತ್ತದೆ.

ಕೊಂಚ ಓದಿಕೊಂಡು ಅವನ ಮನಸ್ಸು ಸೂಕ್ಷ್ಮವಾಗಿರುವದರಿಂದ ತನ್ನನ್ನೂ ವಿಮರ್ಶಿಸಿಕೊಳ್ಳುತ್ತಾನೆ. ಬದುಕಿನಲ್ಲಿ ಎಲ್ಲರಂತೆ ಮುಗ್ಧನಾಗಿ ಕಳೆಯುತ್ತ, ದುಃಖಿಸುತ್ತ, ಪಡೆಯುತ್ತ, ಪುಳಕಗೊಳ್ಳುತ್ತ ಅವನ ಚಡಪಡಿಕೆಯ ಯಾತ್ರೆ ಸಾಗುತ್ತದೆ.

'ರಸವಿದ್ಯೆ' ಕಲಿವ ಹಂಬಲ ಬೇರೆ! ಅವನಿಗೆ ದುರಾಸೆಯಿಲ್ಲದ 'ಅಲ್ ಕೆಮಿಸ್ಟ್' ಗುರು ಸಿಗುತ್ತಾನೆ.

ಮಧ್ಯಯುಗದ 'ರಸವಿದ್ಯೆ'ಕಾರರಲ್ಲಿ ಅವನು ಗಣ್ಯ. ಅನುಭಾವಿ, ಪ್ರವಾದಿ, ಚತುರನಾದ ಅವನು 'ಸ್ಯಾಂಟಿ' ಎಂಬೀ ಕುರುಬನ ಬದುಕಿಗೆ ಬೆಳಕಾಗುತ್ತಾನೆ.

ಅವನ ವ್ಯಕ್ತಿತ್ವದ ಉದಾತ್ತತೆ ನೋಡಿದರೆ ಕಥಾ ನಾಯಕ ಅವನೇ ಏನೋ ಎಂದೂ ತೋರುತ್ತದೆ. ಆದರೆ ಇಲ್ಲಿ ಯಾರೂ ಮುಖ್ಯರಲ್ಲ, ಬದುಕು ಮುಖ್ಯ! ಗುರಿ, ಕೈಸೇರುವಷ್ಟರಲ್ಲಿ ನಾವೇ ಬದಲಾಗಿರುತ್ತೇವೆ! ಅನುಭವದಿಂದ ಕಲಿವ ಪಾಠ ನಮ್ಮನ್ನು ಮತ್ತೆ ‌ಪುಟಕ್ಕೆ ಹಾಕುತ್ತದೆ.

ಕೈಕಾಲು ಬಡಿದರೇನೇ ಈಜಲು ಸಾಧ್ಯ! 'ಕುರಿ'ಗಳು ಕೂಡ 'ಸ್ಯಾಂಟಿ'ಯಲ್ಲಿ ತಿಳಿವಳಿಕೆ ಹುಟ್ಟಿಸಬಲ್ಲವು ಎಂಬ ಅಚ್ಚರಿಯ ಸಂಗತಿ! ಈ ಪುಟ್ಟ ಅಲ್ ಕೆಮಿಸ್ಟ್ (ಮೂಲ ಪೋರ್ಚಗೀಜ್: ಪೌಲೋ ಕೊಯಿಲೋ ಮೂಲ ಕೂಡ : ರಮಾ ಮೇನೋನ್) ಕಾದಂಬರಿಯಲ್ಲಿ ಅರಳಿದೆ.

ಇದೊಂದು ಅದ್ಭುತ ಫ್ಯಾಂಟಸಿ ಕಾದಂಬರಿ. ಇಲ್ಲಿ ಮಾಟಗಾತಿ ಕೂಡ ಇರುತ್ತಾಳೆ. ಹದ್ದುಗಳು ‌ಆಹಾರ ತರುತ್ತವೆ! ಅಲ್ ಕೆಮಿಸ್ಟ್ ಅತಿಮಾನುಷನಲ್ಲ, ಪ್ರಕೃತಿಯ ಜತೆಗೆ ಹೊಂದಿಕೊಂಡ ಮನುಷ್ಯ, ಮಹತ್ವದ್ದನ್ನು ಸಾಧಿಸಬಲ್ಲ ಎಂಬ ಅರಿವನ್ನು ಯುವಕನಿಗೆ ನೀಡುತ್ತಾನಷ್ಟೆ.

ಕ್ರಿಶ್ಚಿಯನ್ ಯುವಕ 'ಸ್ಯಾಂಟಿ' ಮುಸ್ಲಿಂ ಆದ 'ಫಾತಿಮಾ'ಳನ್ನು ಪ್ರೀತಿಸುವುದೂ ಮಹತ್ವದ ಸಂಗತಿ. ಅವಳಾದರೋ ಮರುಭೂಮಿ ತೊರೆದು ಹೋಗುವ ಗಂಡಸರನ್ನು ಕಾಯುವುದೇ ಕಾಯಕವಾಗಿಸಿಕೊಂಡ, ಎಲ್ಲ ಸ್ತ್ರೀಯರಂತೇ ಇದ್ದಾಳೆ. ಗಟ್ಟಿ ಮನದಾಕೆ. ಅವನಿಗೆ ತಕ್ಕ ಸಂಗಾತಿ.

ಇಲ್ಲಿ 'ಪೌಲೋ' ಮನುಷ್ಯನು ಸಂಗದಲ್ಲಿದ್ದೂ ಹೇಗೆ ನಿಸ್ಸಂಗಿಯಾಗಿರಬಲ್ಲನೆಂಬುದನ್ನು ಪ್ರತಿಪಾದಿಸಿದ್ದಾರೆ. 'ಮರುಭೂಮಿ' ತನ್ನೆಲ್ಲ ವಿಲಕ್ಷಣತೆಯೊಟ್ಟಿಗೆ ಹರಡಿ ಒಂದು ನೇಪಥ್ಯವಾಗಿ ಭಾಸವಾಗುತ್ತದೆ. ಅಲ್ ಕೆಮಿಸ್ಟ್ ಹಠವಾದಿ. ಗುರಿಯತ್ತ ಲಕ್ಷ್ಯಗೊಡುವಂತೆ ಯುವಕನ ಕಿವಿ ಹಿಂಡುತ್ತಲೇ ಇರುತ್ತಾನೆ. 'ಪೂರ್ಣ ಮನದಿಂದ ಶ್ರಮಿಸು ಫಲ ಸಿಕ್ಕೇ ತೀರುತ್ತೆ' ಎನ್ನುವುದು ಅವನ ಬೀಜಮಾತು, ಉಪದೇಶ. ಬದುಕಲ್ಲಿ ನಾನಾ ಪಾಠ ಕಲಿತ ಸ್ಯಾಂಟಿ, ಕುರಿಗಳನ್ನು ಮಾರಿದ, ಬುದ್ಧಿಶಕ್ತಿ ಬೆಳಸಿಕೊಳ್ಳುತ್ತಾನೆ.  ಇದೆಲ್ಲವೂ ಹೂ ಅರಳಿದಷ್ಟೇ ಸಹಜವಾಗಿ ಮೂಡಿದೆ. ಈಗಾಗಲೇ ಅನುವಾದ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಡಾ. ಕಮಲಾ ಹಮ್ಮಿಗೆ, ಈ ಕಾದಂಬರಿಯನ್ನು ಕನ್ನಡಕ್ಕೆ ಅರ್ಪಿಸಿದ್ದಾರೆ.

ಇದಕ್ಕೆ ಚಂಪಾ ಅವರ 'ಬೆನ್ನುಡಿ' ಇದ್ದು, ಬೈರಮಂಗಲ ರಾಮೇಗೌಡರ ಚೆಂದವಾದ 'ಮುನ್ನುಡಿ' ಇದೆ. ಈ ಕೃತಿ ಮಕ್ಕಳಾದಿಯಾಗಿ ವೃದ್ಧರ ತನಕ ಎಲ್ಲರಿಗೂ ಪ್ರಿಯವಾದೀತು. ಸಾಹಸ, ಕೌತಕ, ರೋಚಕತೆ ತುಂಬಿದ ಕಥೆ ಎಲ್ಲರನ್ನೂ ಸೆಳೆಯಬಲ್ಲದು. 'ಕುರುಬ'ನ ಮನಸ್ಸಿನ ಸಂವೇದನೆಗೆ ತಕ್ಕ ಭಾಷೆ, ಸರಳವಾಗಿ ಆಡು ಮಾತಿನಲ್ಲಿದೆ. ಒಳ್ಳೆಯ ಕಣಕದಂತಿದೆ. ಇಂಗ್ಲಿಷ್ ಗಿಂತ ರಮಾ ಮೇನೋನ್ ರ ಮಲೆಯಾಳಂ ಅನುವಾದ ಇಷ್ಟವಾಯಿತೆಂಬ ಅಭಿಪ್ರಾಯ ಕಮಲಾ ಹೆಮ್ಮಿಗೆ ಅವರದು. ( ಈ ಮೊದಲಿನ ಅನುವಾದಗಳು ಲಭ್ಯವಿಲ್ಲ. ಆ ಕೊರತೆ ಇದು ತುಂಬುತ್ತದೆ) ಸರಳವಾಗಿ, ಸುಲಲಿತವಾಗಿ ಕನ್ನಡಕ್ಕೆ ಅನುವಾದಿಸಿದ್ದಕ್ಕೆ ಕಮಲಾ ಹೆಮ್ಮಿಗೆ ಅಭಿನಂದನಾರ್ಹರು.

ಇಂಥ ಕೃತಿಯನ್ನು ಓದಿ ನಾನಂತೂ ಇನ್ನೂ ಅದರ ಗುಂಗಿನಲ್ಲಿದ್ದೇನೆ. ನೀವೂ ಓದಿ ಆ ಗುಂಗು ಹತ್ತಿಸಿಕೊಳ್ಳಿರಿ.ಇಷ್ಟು ಈ ಕೃತಿಯ ಬಗೆಗೆ ಹೇಳಿದ ಮೇಲೆ ಇನ್ನೂ ಅನುವಾದಕಿ ಕಮಲಾ ಹೆಮ್ಮಿಗೆ ಬಗೆಗೆ ಒಂದೆರಡು ಮಾತು ಹೇಳದಿದ್ದರೆ ತಪ್ಪಾದೀತು. ಈ ಕಮಲಾ ಹೆಮ್ಮಿಗೆಯವರು ಆಕಾಶವಾಣಿ, ದೂರದರ್ಶನಗಳಲ್ಲಿ ಕೆಲಸ ಮಾಡುತ್ತಿದ್ದವರು. ಕರ್ನಾಟಕದ ವಿವಿಧ ಕೇಂದ್ರಗಳಲ್ಲಿ ಹೆಚ್ಚಾಗಿ ಕಾಲ ಕಳೆದವರು. ಒಂದು ದಶಕದಿಂದ ಕರ್ನಾಟಕ ಬಿಟ್ಟು ಕೇರಳದಲ್ಲಿ ನೆಲಸಿದರೂ, ಮಲೆಯಾಳಂ ಮತ್ತು ಇತರೆ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡೇ ಬಂದವರು. ಅಂದರೆ, ಇವರ ಸಾಹಿತ್ಯ ಕೃಷಿ ಕನ್ಮಡದಲ್ಲೇ ಇನ್ನೂ ಮುಂದುವರಿದೆ. ಕಮಲಾ ಹೆಮ್ಮಿಗೆ ಕೇವಲ ಅನುವಾದಕರಾಗೇ ಇದ್ದವರು ಅಂತಲ್ಲ. ಇವರು ಜಾನಪದ ಕ್ಷೇತ್ರಕ್ಕೆ ಸಾಕಷ್ಟು ಸಾಹಿತ್ಯಕ ಕೊಡುಗೆಗಳನ್ನು ನೀಡಿದವರು. ಕಳೆದ ಹತ್ತು ವರ್ಷಗಳಿಂದ ಕೇರಳದ ತಿರುವನಂತಪುರಂದಲ್ಲಿ‌ ಇದ್ದರೂ, ಮಲೆಯಾಳಂ ಸಾಹಿತ್ಯ ಸಂಸ್ಕೃತಿಗಳನ್ನು ಹೀರಿಕೊಂಡು ಕನ್ನಡಿಗರಿಗೆ ಉಣ ಬಡಿಸಿದವರು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವು ಕೆ. ಲಕ್ಕಣ್ಣವರ