Article

ಲಕ್ಷ್ಮಣ ಕೌಂಟೆ ಅವರ ಮಹಾ ಜಂಗಮ..

ಇದೊಂದು ಅದ್ಭುತವಾದ ಒಂದು ಓದು ನನ್ನ ಪಾಲಿಗೆ. 2018 ರಲ್ಲಿ ನೀವು ಓದಿದ ಒಳ್ಳೆಯ ಪುಸ್ತಕ ಯಾವುದು ಎಂದು ಕೇಳಿದರೆ ನಿದ್ದೆಯಲ್ಲಾದರೂ ಲಕ್ಷ್ಮಣ ಕೌಂಟೆಯವರ ಮಹಾಜಂಗಮ ಎಂದು ಬಿಡಬಹುದಾದಷ್ಟು ಇಷ್ಟವಾದ ಪುಸ್ತಕ ಇದು. ಅಲ್ಲಮ ಯಾರನ್ನೂ ಲೆಕ್ಕಿಸದ ಮಹಾಗರ್ವಿ, ಸರಿಸಾಟಿಯೆ ಇಲ್ಲದ ಮಹಾಜ್ಙಾನಿ. ಆದರೆ ಇವೆರಡರ ನಡುವಣ ಸಮತೋಲನ ನನಗೆ ತುಂಬಾ ಇಷ್ಟವಾದದ್ದು. ಇವೆಲ್ಲವೂ ಗೊತ್ತಿರುವ ವಿಷಯವೇ ಆದರೂ ಅಲ್ಲಮನ ಕುರಿತಾದ ಎಳೆಎಳೆಯೂ ಇಲ್ಲಿದೆ.

 ’ಮಹಾಜಂಗಮ’ ಕೃತಿಯ ಕುರಿತು ಈ ಪುಸ್ತಕ ಓದುವವರೆಗೆ ಕಾಮಲತೆ ಹಾಗೂ ಮಾಯೆ ಒಂದೇ ಎಂದುಕೊಂಡಿದ್ದೆ. ಈ ಬಗ್ಗೆ ಲಕ್ಷ್ಮಣ ಕೌಂಟೆಯವರೊಂದಿಗೆ ಚರ್ಚಿಸಿದಾಗಲೂ ಅವರು ಮಾಯೆ ಹಾಗೂ ಕಾಮಲತೆ ಬೇರೆಬೇರೆ ಎಂದು ಹೇಳಿದರು. ಅಲ್ಲಮನ ಕುರಿತಾದ ಬಹಳಷ್ಟು ವಿಷಯಗಳು ಇಲ್ಲಿ ತುಂಬಾ ಚೆನ್ನಾಗಿ ನಿರೂಪಿತವಾಗಿದೆ. ಅರ್ಧಂಬರ್ಧ ತಿಳಿದಿದ್ದ ಅನಿಮಿಷದೇವರ ಕಥಾನಕದ ಪೂರ್ಣ ಪರಿಚಯ ಇಲ್ಲಿದೆ. ಈ ಪುಸ್ತಕದ ಗಮನಿಸಬೇಕಾದ ಅಂಶ ಎಂದರೆ ಭಾಷಾಬಳಕೆ. ಎಲ್ಲೂ ಮಿತಿಮೀರದ ಹಿತವರಿತ, ಆದರೆ ಹೇಳಲೇ ಬೇಕಾದುದನ್ನು ನಿರ್ದಿಷ್ಟವಾಗಿ ಹೇಳಿಬಿಡುವ ಸುಸಂಸ್ಕೃತವಾದ ಹಾಗೂ ಸೌಜನ್ಯಯುತವಾದ ಭಾಷೆ.

ಒಂದು ಓದು ಮತ್ತೊಂದು ಓದಿಗೆ, ಬರಹಕ್ಕೆ ಸ್ಪೂರ್ತಿ ನೀಡಿದರೆ ಅದು ಆ ಪುಸ್ತಕದ/ ಓದಿನ ಸಾರ್ಥಕ್ಯ. ಮಹಾಜಂಗಮದ ಓದಿನ ನಂತರ ನನ್ನ ಅಲ್ಲಮ ಕವಿತೆಗಳು ಮತ್ತೆ ಮುಂದುವರೆದಿದೆ.ಅಂದಹಾಗೆ ಮೊನ್ನೆ ಕವಿತೆ ಬರೆಯುವಾಗ ಯಾಕೋ ಅನುಮಾನವಾಗಿ ಲಕ್ಷ್ಮಣ ಕೌಂಟೆಯವರಿಗೆ ಫೋನಾಯಿಸಿ. ’ಮಾಯೆಯ ಕೊನೆ ಹೇಗಾಯ್ತು?’ ಎಂದೆ.

’ಅಲ್ಲಮ ಸಿಗದ ನಿರಾಸೆಗೆ ಆತ್ಮಹತ್ಯೆ ಮಾಡಿಕೊಂಡಳು’ ಎಂದರು. ದಂತಕಥೆಗಳ ಪ್ರಕಾರ ಅಲ್ಲಮ ಶಿವನ ಅಂಶ. ಮಾಯೆ ಶಿವಾಂಶವನ್ನು ಗೆಲ್ಲಲೆಂದೇ ಬಂದ ಪಾರ್ವತಿಯ ತಾಮಸ ಅಂಶ. ಆದರೂ ಪಾರ್ವತಿಯ ತಮೋಗುಣ ಮಹಾಕಾಳಿಯಾಗಬಹುದೇ ಹೊರತು ಆತ್ಮಹತ್ಯೆ ಮಾಡಿಕೊಂಡೀತೇ? ನನ್ನ ದ್ವಂದ್ವ ಹಾಗೆಯೇ ಮುಂದುವರೆದಿದೆ. ಹೀಗಾಗಿ ಲಕ್ಷ್ಮಣ ಕೌಂಟೆಯವರ ಮುಂದಿನ ಪುಸ್ತಕ ಮಾಯೆಯ ಕುರಿತಾಗಿರಲಿ ಎಂಬ ‌ಆಶಯ ನನ್ನದು. 

ಏನಾದರಾಗಲಿ ನಿರಾಕರಣೆ ಎನ್ನುವ ಅವಮಾನದ ಭಾರದಿಂದಾಗಿ ಯಾವ ಮಾಯೆಯೂ ಸಾವಿಗೆ ಶರಣಾಗದಿರಲಿ.

ಶ್ರೀದೇವಿ ಕೆರೆಮನೆ