Article

ಎಂ.ವ್ಯಾಸರ ಕಥಾ ಅಸ್ತ್ರಗಳು

ತಮ್ಮದೇ ಭಿನ್ನ ಮತ್ತು ವಿಶಿಷ್ಠ ತಂತ್ರದಲ್ಲಿ ನಿರೂಪಿಸುವ ಕಥಾ ಹಂದರವು one and only ವ್ಯಾಸ ಛಾಪು ಎಂದು  ಕರೆಸಿಕೊಳ್ಳುವಂಥದ್ದು ....!ವ್ಯಾಸರ ಗಮನಾರ್ಹ ಸಂಕಲನ....ವ್ಯಾಸರ ಕಥಾ ಚೌಕಟ್ಟೇ ಅಂಥದ್ದು...! ಎಂಥ ಸನ್ನಿವೇಶವನ್ನು ಕೂಡಾ ಈ ಚೌಕಟ್ಟಿಗೆ ತಂದು ಕಟ್ಟಿ ಹಾಕುತ್ತಾರೆ. ಓದುಗರಿಗೆ ಆಪ್ತವಾಗಿ ಬಿಡುವ ದುರ್ಗಾಪುರ, ಶಂಕರೀ ನದಿ, ಹೊಸದುರ್ಗ ಎಲ್ಲಾ ಕತೆಗಳಲ್ಲಿ  ಕಾಣುವ ಸಾಮಾನ್ಯ ಸ್ಥಳ ನಾಮಗಳು...! ಎರಡಕ್ಷರದ ಶಿರೋನಾಮೆ ಕಥೆಗಳು ಬುದ್ಧಿ ಮತ್ತು ಮನಸ್ಸಿಗೆ ಮುದ ನೀಡುವ ಅಸ್ತ್ರವಾಗಿ ಪರಿಣಮಿಸುವ ವೈಖರಿಯನ್ನು ,ನನಗೆ ದಕ್ಕಿದ ಅನುಭವದ ಅಭಿಪ್ರಾಯವನ್ನು ಸಂಕ್ಷಿಪ್ತದಲ್ಲಿ ಒಂದೊಂದಾಗಿ ಕೆಳಗಿನಂತೆ ಹೇಳಿಬಿಡುತ್ತೇನೆ. ಹೀಗೆ...ಹೀಗೆ,..ಹೀಗೆ...

1973 ರ ಕತೆ 'ನದಿ' ಊಹಾ ಪ್ರಪಂಚದ ವಿಸ್ತಾರ ಹರಿಯುವಿಕೆಯಲ್ಲಿ ಜೀವ ನದಿಯಾಗಿ ಪ್ರಶ್ನಾತೀತವಾಗಿದೆ. ಅರ್ಥೈಸಿಕೊಳ್ಳದ, ಆತ್ಮಿಯತೆ ಇಲ್ಲದ ಮಡದಿಯಿಂದ ಅತೃಪ್ತಗೊಂಡ ನಾಯಕನ ಸುಖಾಪೇಕ್ಷೆಯಲ್ಲಿ ದಿಕ್ಕುಗಾಣದೆ ಚಿಮ್ಮಿ ನದಿಯಾಗುವ ಚಿತ್ರಣ ಮಾರ್ಮಿಕವಾಗಿದೆ. ಹಾದರಕ್ಕೆ ಎಳೆಸುವ ಮನಸ್ಸಿನ ಪರಿಯನ್ನು ವೈಚಾರಿಕವಾಗಿ ವಿಶ್ಲೇಷಿಸುವ 'ಕೊಲೆ' ಕತೆಯ ಅಸಂಗತ ಮುದ ನೀಡುತ್ತದೆ. ದಾಂಪತ್ಯದಲ್ಲಿ ಮನಸ್ಸು ದೈಹಿಕ ವಲ್ಲದೆ  ಮಾನಸಿಕವಾಗಿಯೂ ಭ್ರಷ್ಠ ಗೊಂಡರೆ ಅದು ಸುಖದ ಕೊಲೆ ಎಂಬ ಚಿಂತನೆ ರಸವತ್ತಾಗಿ ಮೂಡಿದೆ. 'ಕೂಪ'ದಲ್ಲಿ ಮೂಲ ಘಟನೆಯು ಕಾಮ ಕೇಂದ್ರಿತ ಸಂಕೀರ್ಣ ಒಳ ಹರವು ಹೊಂದಿದ್ದು, ಮಾಂಸ ಗೋಪುರದಲ್ಲಿ ಅಡಗಿಸಿಟ್ಟ ಆತ್ಮ ಎನ್ನುವಂತೆ ಸೂಚ್ಯವಾಗಿ ಸಾಕ್ಷಾತ್ಕರಿಸುವ ಕತೆ. ಇಡೀ ಕತೆ ಪೀಠಿಕೆಯಾಗಿಯೇ ತೋರುತ್ತದೆ. 'ಲಾವಾ' ಕತೆಯು ಸತ್ತ ಮನಸ್ಸು ಒಳಗಿನಿಂದ ಎಲ್ಲವನ್ನು ಸುಟ್ಟು ನವೀನತೆಗೆ ಸಜ್ಜುಗೊಳ್ಳುವ, ಕಾಮದ ಪರಿಪಾಕವು ಗುರಿ ಸೇರುವ ಧಾವಂತದಲ್ಲಿ ಅಸ್ಪಷ್ಟ ಭಾವ ರಾಶಿ ಅಗ್ನಿ ಪರೀಕ್ಷೆಗೀಡಾಗುವ ಸನ್ನಿವೇಶ ಭೀಭತ್ಸವಾಗಿದೆ. ಕಾಮದಾಹದ ಮುಂದೆ ಎಲ್ಲವು ನಗಣ್ಯ.  ಮರ್ಮಾಂಗವೇ ಅಸ್ತ್ರವಾಗಿ ಪಾತ್ರವಹಿಸುವುದು ಕತೆಯ ಸಾರ.ಸ್ನೇಹಿತರಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡವನ ಮುಖವಾಡದ ಬದುಕಿನಲ್ಲಿ ಸೆಕ್ಸ್ ಅಸ್ತ್ರವಾಗದ ಅಚ್ಚರಿ 'ಅಸ್ತ್ರ' ಕತೆ ವ್ಯಕ್ತಪಡಿಸುತ್ತದೆ. ವಾಸ್ತವ ಮತ್ತು ಕಲ್ಪನೆಯ ಬದುಕಿನ ವಿವಿಧ ಆಯಾಮದಲ್ಲಿ ತನ್ನತನದ ಹುಡುಕಾಟದಲ್ಲಿ ಬುದ್ಧತ್ವ ಮನಗಾಣುವ, ಕ್ರೂರವಾಗುವ, ಅಸಂಗತ ಜೀವ ಪ್ರವಾಹದ ವೈಚಿತ್ಯ್ರವನ್ನು 'ಬಕ' ಕತೆಯಲ್ಲಿ ಕಾಣಬಹುದಾಗಿದೆ. ಪ್ರೀತಿ ಶಬ್ದಕ್ಕೆ ತೀರಗಳಿರಲಿಲ್ಲ ಎಂಬ ತಾತ್ವಿಕ ಹಿನ್ನೆಲೆಯಲ್ಲಿ 'ತೀರ' ಕತೆ ಭಾವ ಲಹರಿಯ ಕೊರತೆಯಲ್ಲಿ ಸೋತಿರುವಂತೆ ಕಂಡಿತು. ಗುಟುಕು ಕುಡಿದು ಕ್ಷಣ ಹೊತ್ತು ವಿರಮಿಸುವಂತೆ ಸಂಭಾಷಣೆಯ ವಿನೂತನ ತಂತ್ರ ವೈಖರಿ 'ಜಡ' ಕತೆಯಲ್ಲಿದೆ. ಪ್ರೇಮಕ್ಕೆ ಅವಕಾಶವಿಲ್ಲದಂತಾಗಿ ಅಸ್ವಸ್ಥ ಮಡದಿಯ ವಿರಹ ತಪ್ತ ದೇಹದಿಂದ ಪಡೆದ ಹುಚ್ಚನ ಆನಂದ ಲಹರಿ ಬದುಕಿನ ವಿಪರ್ಯಾಸದ, ಹುಚ್ಚು ಆವೇಶವನ್ನು ಜಡದಲ್ಲಿ ಕಾಣುವ ಚೈತನ್ಯದ ಸಂಕೀರ್ಣ ಹಂದರ ಬೆರಗುಗೊಳಿಸುತ್ತದೆ. ಸೆಲೆಬ್ರಿಟಿಗಳ ಆಕರ್ಷಣೆ, ಕೌತುಕ, ಒಂದಾಗುವ ತುಡಿತ ಬರಹಗಾರ ಮತ್ತು ಅಭಿಮಾನಿ ನಡುವಿನ ಸಂಬಂಧದಲ್ಲಿ ಅವರ ಪ್ರವರ ಬಿಚ್ಚಿ ಕೊಳ್ಳುವ ಕತೆ 'ಕುಜ'. ಋಗ್ಣ ಶಯ್ಯದಲ್ಲಿರುವ ವ್ಯಕ್ತಿಯು ದೈವಿ ಸುಖವೆಂಬ ಭ್ರಮೆಯಲ್ಲಿ ಆಲಿಂಗನಕ್ಕೆದುರಾಗುವುದು, ಬೆತ್ತಲೆಯಿಂದ ಭ್ರಮೆ ಕಳೆದು ಕೊಳ್ಳ ಬೇಕೆಂಬ ಬಿಡುಗಡೆ ಭಾವ...., ಭ್ರಮನಿರಸನದಲ್ಲಿ ಮಡದಿ ಮನೆ ಬಿಟ್ಟಂತೆ, ಕತೆ ಅಂತ್ಯಗೊಳಿಸದೆ ಹಲವಾರು ಅಸಂಗತ ಘಟನೆಯ ಪ್ರಸ್ತಾಪದೊಂದಿಗೆ ಕೊನೆಯಲ್ಲಿ ರಹಸ್ಯ ಬಿಡಿಸಿ 'ಭ್ರಷ್ಟ' ಕತೆಯನ್ನು ಸತ್ವಪೂರ್ಣಗೊಳಿಸಿರುತ್ತಾರೆ. ಬದುಕಿಸುತ್ತಾ ಕೊಲ್ಲುವ ದೇವರು ಎಂಬ ದ್ವಂದ್ವ ಮೂಡಿಸುತ್ತಾ, ದೃಶ್ಯ ತುಂಡುಗಳ ಜೋಡಣೆಯ ತಂತ್ರದಲ್ಲಿ ತಳಮಳಿಸುವ ಅಮೂರ್ತ ಭಾವಲೋಕದ ಅನಾವರಣ 'ಅಮ್ಮ' ಕತೆಯಲ್ಲಿ ಗ್ರಹಿಸಬಹುದಾಗಿದೆ.

'ಹಕ್ಕಿ' ಕತೆಗೆ ಅಮ್ಮ ಎಂಬ ಶೀರ್ಷಿಕೆ ಬೇಕಿತ್ತೇ...? ಎಂದೆನಿಸಿತು. ಇಬ್ಬರು ಕುಡುಕರು ಬಾರ್‍ನಿಂದ ಹೊರಗಾದ ನಂತರ ಮಾತಿನಲ್ಲಿ ಬಿಚ್ಚಿಕೊಳ್ಳುವ ಕತೆ 'ಹಕ್ಕಿ', ಅತೃಪ್ತ ಕಾಮ ತೃಷೆಯ ಹುಡುಕಾಟದಲ್ಲಿ ಅಮ್ಮ ರೂಪುಧಾರಿ ಕಳೆದು ಹೋಗುವ ಸನ್ನಿವೇಶಗಳು. ಕ್ಷಣಿಕ ಆವೇಶದ ಹಕ್ಕಿ ಬದುಕಿನ ಭಾವ ಲಹರಿಗೆ ಸಂಕೇತವಾಗಿದೆ. ಕ್ರೂರ ಅಪ್ಪನ ಅಹಂ ಅಡಗಿಸಲು ಪ್ರಿಯಕರನನ್ನು ಗುಲಾಮನಂತೆ ನಡೆಸಿಕೊಳ್ಳುವ ಮಗಳ ಪ್ರವೃತ್ತಿ, ಮಾನಸಿಕ ದುಃಖದ ಬಿಡುಗಡೆಗೆ ದೈಹಿಕ ಕ್ರಿಯೆಯಲ್ಲಿ ಸುಖ ಕಾಣಲು ನುಗ್ಗುವ ಪ್ರಿಯಕರ, ಬಲತ್ಕಾರವಾಗಿ ಗುರಿ ಕಾಣುವ ಬಾಣದ ತೀವ್ರತೆ. ಸುಖ ದುಃಖ ಏಕ ಕಾಲಕ್ಕೆ ಮನಸ್ಸು ದೇಹ ಪ್ರತಿಕ್ರಿಯಿಸುವ ಪ್ರಯೋಗವನ್ನು  'ಬಾಣ' ಕತೆಯಲ್ಲಿ ಸೆರೆಹಿಡಿಯಲು ಬಳಸಿದ ನವೀನ ತಂತ್ರ ಕಥಾ ಪ್ರಕಾರಕ್ಕೆ ಮಾದರಿಯಾಗಿದೆ. ಭಾವನೆಗಳ ಮಹಾಪೂರದಲ್ಲಿ ಅಡ್ಡಗಟ್ಟುವ ವಸ್ತುಸ್ಥಿತಿ ಬುಡಮೇಲು ಮಾಡುವ ಬದುಕಿನ ಚಿತ್ರಣ 2007 ರ 'ಓ..ಮ್' ಕತೆಯಲ್ಲಿದೆ. ಓಮ್ ಒಂದುವರೆ ಧ್ವನಿ ಓಂಕಾರದ ಪ್ರತೀಕವಾಗಿ ನೆರಳಾಗಿ ಕಾಡುವ ಮೋಟು ಕೈಯ ವಿಕಲಚೇತನ ಮಗುವಿನ ಜನನ, ಅಹಂ ನಲ್ಲಿ ಮೆರೆಯುವ ಪ್ರತಿಷ್ಠೆಗೆ ಪ್ರಕೃತಿ ಸವಾಲು ಎಸೆಯುವ, ಹೆಪ್ಪುಗಟ್ಟುವ ಸನ್ನಿವೇಶ ಮನವನ್ನು ತಟ್ಟಿ ಬಡಿದೆಬ್ಬಿಸುತ್ತದೆ. ವಿಷಾದವಾಗಿ ಓ..ಮ್ ಝೇಂಕಾರದ ಶಬ್ದ ಅಲೆಗಳು ಮಂತ್ರಮುಗ್ಧಗೊಳಿಸುತ್ತವೆ....!? ಕಥಾ ತಿರುಳು ಗೌಣವೆನಿಸಿದರೂ ನಿರೂಪಣಾ ಶೈಲಿ ತಂತ್ರಕ್ಕಾಗಿ ಎಂ.ವ್ಯಾಸರ ಕತೆಗಳನ್ನು ಕನ್ನಡಿಗರು ತಪ್ಪದೇ ಓದಬೇಕು.

ಕ್ಷಿತಿಜ್ ಬೀದರ್