Article

ಮದಕರಿ ನಾಯಕನ ಅಸ್ತಮಾನದ 'ದುರ್ಗಾಸ್ತಮಾನ'

ಕನ್ನಡದಲ್ಲಿ ನಾನು ಓದಿರುವುದು ಜ್ಞಾನಪೀಠ ಪುರಸ್ಕೃತ ಕೃತಿ ಒಂದೇ. ಆದರೂ ಈ ಕೃತಿಗೆ ಜ್ಞಾನಪೀಠ ಲಭಿಸದಿರುವುದು ಆಶ್ಚರ್ಯಕರ. ಹದಿನೆಂಟನೆ ಶತಮಾನದ ವೀರನ ವೃತ್ತಾಂತವನ್ನು ಇಪ್ಪತ್ತನೆ ಶತಮಾನದಲ್ಲಿ ಒಬ್ಬ ಲೇಖಕ ಕೃತಿಯಾಗಿ ರಚಿಸಿ ಆ ಕೃತಿಯು ಇಪ್ಪತ್ತೊಂದನೆ ಶತಮಾನದಲ್ಲಲೂ ಕೂಡಾ ಮರುಮುದ್ರಣಗೊಂಡು ಓದುಗರ ಮೈನವಿರೇಳಿಸುತ್ತದೆಯೆಂದರೇ ಅದು ಭಾರತೀಯ ಸಾಹಿತ್ಯದ ಒಂದು ಅದ್ವಿತೀಯ ಮೇರು ಕೃತಿಯೇ ಆಗಿರಬೇಕು. ಚಿತ್ರದುರ್ಗದ ಅಮರವೀರ ರಾಜ ಮದಕರಿನಾಯಕನ ಜೀವನವನ್ನು ಕವಿ ತ.ರಾ.ಸುಬ್ಬರಾಯರು ‘ದುರ್ಗಾಸ್ತಮಾನ’ ಎಂಬ ಕೃತಿಯ ಮೂಲಕ ಇಡೀ ಜಗತ್ತಿಗೆ ತೋರಿಸಿದ್ದಾರೆ. 

ಚಿತ್ರದುರ್ಗದಲ್ಲೇ ಹುಟ್ಟಿ ಬೆಳೆದ ತ.ರಾ.ಸು ಅವರಿಗೆ ದುರ್ಗದ ಮೇಲಿದ್ದ ಅಪಾರ ಅಭಿಮಾನದ ಫಲವೇ ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ತಿರುಗುಬಾಣ, ಹೊಸಹಗಲು, ವಿಜಯೋತ್ಸವ, ರಾಜ್ಯದಾಹ, ಕಸ್ತೂರಿ ಕಂಕಣ, ದುರ್ಗಾಸ್ತಮಾನ. ಎಂಬ ದುರ್ಗದ ಇತಿಹಾಸ ಸಾರುವ ಎಂಟು ಕಾದಂಬರಿಯ ಸಮೂಹ. ಇದರಲ್ಲಿ ಮದಕರಿನಾಯಕ ಹಾಗೂ ದುರ್ಗದ ಸಂಸ್ಥಾನದ ಅಳಿವಿನ ಕಥೆಯೇ ದುರ್ಗಾಸ್ತಮಾನ. ಈ ಕೃತಿಯು ಪಟ್ಟಾಭಿಷೇಕದದ ಪಂಜರ. ಗರಿಬಿಚ್ಚಿದ ಗರುಡ, ಸಿಡಿಲು ಮಿಂಚುಗಳೊಡನೆ ಸರಸ. ಸಂಚುಗಳ ಸುಳಿಯಲ್ಲಿ, ಸಮರಾಗಮನ, ರಕ್ತರಂಜಿತ ರವಿ ಎಂಬ ಆರು ಅಧ್ಯಾಯಗಳಲ್ಲಿ ನಾಯಕರ ದುರ್ಗದ ಆಳ್ವಿಕೆಯನ್ನು ಹಂತ ಹಂತವಾಗಿ ವರ್ಣಿಸುತ್ತಾ ಹೋಗುತ್ತದೆ. 

ಹಿಂದಿನ ರಾಜ ಕಸ್ತೂರಿ ರಂಗಪ್ಪನ ನಾಯಕರ ಮರಣದ ನಂತರ ಅವರಿಗೆ ಸಂತಾನವಿಲ್ಲದ ಕಾರಣ ಮುಂದಿನ ರಾಜನನ್ನು ರಾಜಮಾತೆಯ ಕನಸ್ಸಿನಲ್ಲಿ ಪೂರ್ವಿಕರ ಮಾತಿನ ಆಜ್ಞೆಯಂತೆ ಜಾನಕಲ್ಲಿನ ರಾಜನ ಮಗನಾದ ಮದಕರಿ ನಾಯಕನನ್ನು ದುರ್ಗದದ ದೊರೆಯಾಗಿ ಪಟ್ಟಾಭಿಷೇಕ ಮಾಡುತ್ತಾರೆ. ವಯಸ್ಸು 12 ಆಡುವ ಬಾಲ್ಯದಲ್ಲಿ ಜವಬ್ದಾರಿಯನ್ನು ಹೊತ್ತು ಏಕಕಾಲಕ್ಕೆ ಯುದ್ಧಶಾಸ್ತ್ರ, ರಾಜ್ಯ ಶಾಸ್ತ್ರ, ದೈವ ಕಾರ್ಯಗಳು ಹೀಗೆ ಹಲವಾರು ವಿದ್ಯೆಗಳನ್ನು ರಾಜಮಾತೆ ಹಾಗೂ ಪ್ರಧಾನಿ ಕಳ್ಳಿ ನರಸಪ್ಪನವರ ಸಮಕ್ಷಮದಲ್ಲಿ ಕಲಿತ ಮದಕರಿಗೆ ರಾಯದುರ್ಗದ ಲಡಾಯಿ ಚಿಕ್ಕ ಯುದ್ಧವಾದರೂ ಅದು ಮೊದಲ ಯುದ್ದ. ತನ್ನ ವಯಸ್ಸನ್ನುು ಹೀಯಾಳಿಸಿದ ದಳವಾಯಿಗಳನ್ನು ಹತನಾಗಿಸಿ ಅವರ ಮೇಲೆ ಮೆಟ್ಟಿ ನಿಂತು ವೀರಾವೇಶವನ್ನು ಪ್ರದರ್ಶಿಸಿದ ಮರಕರಿನಾಯಕರ ಪರಾಕ್ರಮವನ್ನು ತಿಳಿದ ಇಡೀ ರಾಜ್ಯ ಹಾಡಿ ಹೊಗಳಿ ಕುಣಿದು ಸಂಭ್ರಮಿಸಿದರು. 

ಮದುವೆಯಾದ ನಂತರ ತನ್ನ ಅಹಂಕಾರದಿಂದ ಹೆಂಡತಿಯನ್ನು ತವರಿಗೆ ಓಡಿಸಿ ರಾಜಮಾತೆಯ ಆಜ್ಞೆಯಂತೆ ಇನ್ನೆರಡು ಮದುವೆಯಾಗಿ ಸರಸವಾಡುತ್ತಿದ್ದ ರಾಜರಿಗೆ ರಾಜಮಾತೆಯ ನಿಧನದ ನಂತರ ಪೂರ್ಣ ಜವಾಬ್ದಾರಿ ಹೊತ್ತು ಮಾಡಿದ್ದ ಮೊದಲು ಹೈದರ್ ಅಲಿಯ ಸ್ನೇಹ. ಇದರ ಮಧ್ಯೆ ಯಾವುದೋ ಹೆಣ್ಣಿನ ಸೌಂದರ್ಯಕ್ಕೆ ರಾಜರ ಕಣ್ಣು ಮನಸೋಚು ಆಡಿದ ಮಾತುಗಳು, ಹೆಣ್ಣನ್ನು ಬಲಿತೆಗೆದುಕೊಂಡ ನಂತರ ರಾಜರಿಗೆ ಹೆಣ್ಣಿನ ಚಟ ಎಂಬ ಅಪಕೀರ್ತಿಯನ್ನು ತಂದುಕೊಟ್ಟಿತು. ಇದಕ್ಕೆ ಪುಷ್ಟಿ ನೀಡುವಂತೆ ರಾಜರ ಅರಮನೆ ಬೀದಿಯ ಕೊನೆಯ ಮನೆಯಲ್ಲಿ ಕಡೂರಿ ಹಾಗೂ ಆಕೆಯ ತಂಗಿಯ ಜೊತೆ ಕಾಲ ಕಳೆಯುತ್ತಿದ್ದದ್ದು ಪುಷ್ಟಿ ನೀಡಿತ್ತು. ಈ ಅಪಕೀರ್ತಿಯನ್ನು ಮರೆಯಾಗಿಸಿ ತನ್ನ ವಿಜಯೋತ್ಸವವನ್ನು ಮತ್ತೆ ಜನರಿಗೆ ತೋರಿಸಿದ್ದು ನಿಜಗಲ್ಲಿನ ಯುದ್ಧ. ಹೈದರ್ ಅಲಿ ಕೂಡ ತಡಕಾಡುತ್ತಿದ್ದ ಸಮರದಲ್ಲಿ ಹೈದರ್ ಅಲಿಗೆ ಬೆಂಬಲವಾಗಿ ನಿಂತು ಕೋಟೆ ವಶಪಡಿಸಿಕೊಂಡ ಮದಕರಿ ನಾಯಕನಿದೆ ವೈರಿ ರಾಜನಿಂದ ಕೂಡಾ ಮೆಚ್ಚುಗೆಯ ಮಹಾಪೂರ ಹರಿದುಬಂದಿತ್ತು. 

ಹೈದರ್ ಅಲಿಯ ನಂಬಿಕೆ ದ್ರೋಹಗಳು, ರಾಜ್ಯ ದಾಹ, ಅವನ ಸೈನಿಕರು ವೈರಿ ರಾಜ್ಯದ ಮುಗ್ಧ ಪ್ರಜೆಗಳ ಮೇಲೆ ನಡೆಸುತ್ತಿದ್ದ ಅತ್ಯಾಚಾರ ಅವ್ಯವಹಾರ ಮದಕರಿನಾಯಕರಿಗೆ ಇಷ್ಟವಾಗದೆ ಮಾನವೀಯತೆಯನ್ನು ನೆನೆದು ಹೈದರಾಲಿಯಿಂದ ದೂರ ಸರಿಯಲು ಪ್ರಾರಂಭಿಸಿ ಪೇಶ್ವೆಯರ ಸನಿಹವಾದರು. ಈ ನಡುವೆ ಹೈದರ್ ಅಳಿಯು ದುರ್ಗದ ಮೇಲೆ ನಡೆಸಿದ ಹಲವಾರು ರಾಜಕೀಯ ಪಿತೂರಿಗಳು ಇಂದಿಗೂ ಪ್ರಸ್ತುತ. ಮದಕರಿನಾಯಕನ ಸ್ನೇಹವನ್ನು ಮತ್ತೆ ಗಳಿಸಲು ವಿಫಲನಾದ ಹೈದರ್ ಅಲಿಯ ಮನಸ್ಸಿಗೆ ಬಂದಿದ್ದು ದುರ್ಗದ ಮೇಲೆ ಆಕ್ರಮಣ. ಎಷ್ಟೋ ದಶಕಗಳಿಂದ ಕಾಣದ ದುರ್ಗದ ಮೇಲೆ ನೇರ ಯುದ್ಧವು ಜನರನ್ನು ಭೀತಿಗೊಳಿಸದೆ ಇದ್ದದ್ದು ಮದಕರಿ ನಾಯಕನ ಆಳ್ವಿಕೆಯ ನಂಬಿಕೆ ತೋರಿಸುತ್ತದೆ. ಹಲವಾರು ರೀತಿಯ ಸಂಚು ರೂಪಿಸಿ ಆಕ್ರಮಣ ಮಾಡುತ್ತಿದ್ದ ನವಾಬ ಹೈದರ್ ಅಲಿಗೆ ಪ್ರತಿ ದಿನವೂ ಮುಖಭಂಗವೇ ಆಗುತ್ತಿತ್ತು. ಮರಾಠರ ಸಹಾಯವು ಇಲ್ಲದೆ ದುರ್ಗದ ಸೇನೆಯ ತಾಕತ್ತು ಹಾಗೂ ಮದಕರಿಯ ವೀರಾವೇಶವನ್ನು ಕಂಡ ಹೈದರ್ ಅಲಿಯು ತನ್ನ ಸೇನೆಯ ದಳವಾಯಿಗಳಿಗೆ ನಿಮ್ಮಂಥ ಸಾವಿರ ನಾಮರ್ಧರನ್ನು ಇಟ್ಟುಕೊಳ್ಳುವ ಬದಲು ಮದಕರಿ ನಾಯಕ ಒಬ್ಬನ ಸ್ನೇಹ ಇದ್ದಿದ್ದರೆ. ಇಷ್ಟು ಹೊತ್ತಿಗೆ ದೆಹಲಿಯ ತನಕ ನಮ್ಮ ರಾಜ್ಯವನ್ನು ವಿಸ್ತರಿಸಬಹುದಿತ್ತು. ಲಾಕೋನ್ ಮೇ ಏಕ್ ಮದಕರಿ ನಾಯಕ್ ಎಂದು ರಾಜಾರೋಷವಾಗಿ ನುಡಿಯುತ್ತಿದ್ದ. 

ಸತತ ಸೋಲಿನಿಂದ ಕಂಗೆಟ್ಟಿದ್ದ ನವಾಬನಿಗೆ ಮದಕರಿನಾಯಕನು ಸಂಧಾನಕ್ಕೂ ಬಗ್ಗದೆ ಇದ್ದದ್ದು ತಲೆನೋವಾಗಿಸಿತು. ಆದರೆ ವೀರರನ್ನು ಸೋಲಿಸಿ ದುರ್ಗವನ್ನು ವಶಪಡಿಸಿಕೊಳ್ಳುವ ಪಣ ತೊಟ್ಟಿದ್ದ ನವಾಬ ವೀರನಂತೆ ಹೋರಾಡಲು ಹೆದರಿ ಷಂಡನಂತೆ ತೀರ ಕೆಳಗೆ ಇಳಿದು ಅತ್ಯಂತ ಅಸಹ್ಯಕರವಾಗಿ ಹಿಂದೂ ಮುಸ್ಲಿಂ ಎನ್ನುವ ಧರ್ಮದ ವಿಷ ಬೀಜವನ್ನು ತನ್ನ ಗೂಡಾಚಾರಿಯಿಂದ ದುರ್ಗದಲ್ಲಿ ಸಹಬಾಳ್ವೆಯಿಂದ ಬದುಕುತ್ತಿದ್ದ ಮುಸಲ್ಮಾನ ಸೈನಿಕರಿಗೆ ಕುರಾನ್ ಎಂದು ಮಂಕುಬಡಿಸಿ. ಮೊಹರಂ ಹಬ್ಬದ ನೆಪದಲ್ಲಿ ಮುಸಲ್ಮಾನ ಸೈನಿಕರನ್ನು ವಶ ಪಡಿಸಿಕೊಂಡ ನವಾಬ ಆ ಮುಸಲ್ಮಾನ ಸೈನಿಕರ ಸಹಾಯದಿಂದ ದುರ್ಗದ ಕಳ್ಳ ದಾರಿಗಳನ್ನು ತಿಳಿದು ಮೋಸದಿಂದ ಆಕ್ರಮಣ ಮಾಡಿ ನೀಚತನದಿಂದ ದುರ್ಗವನ್ನು ವಶಪಡಿಸಿಕೊಂಡ. ತನ್ನ ಕೊನೆಯ ಪ್ರಾಣದ ಹನಿಯಿರುವವರೆಗೂ ತನ್ನ ಕೈಯಲ್ಲಿ ಪರಿಘಾಯುಧಗಳವನ್ನು ತಿರುಗಿಸಿ ಮುನ್ನುಗ್ಗಿ ಮೆಟ್ಟಲಿಗೆ ಹತ್ತಾರು ವೈರಿಯನ್ನು ಕೊಚ್ಚುತ್ತಾ ಕೊನೆಗೆ ಹೈದರ್ ಅಲಿಯು ಹಾರಿಸಿದ ಹಸಿರು ಧ್ವಜವನ್ನು ಕೆಡವಿ ನೂರಾರು ಸೈನಿಕರ ಕೋವಿಯ ಗುಂಡಿಗೆ ಎದೆಯೊಡ್ಡಿ ವೀರ ಮರಣವನ್ನು ಹೊಂದಿ ಬಿದ್ದ ದೇಹ ಮತ್ತೆ ಅಲುಗಾಡಲಿಲ್ಲ. ದುರ್ಗದ ಬೆಳಕು ಅಂದು ಆರಿ ಕತ್ತಲಾಯಿತು. ದುರ್ಗವು ರೋಧಿಸಿತು. 

ಆಗಿನ ದೊರೆ ಕಸ್ತೂರಿ ರಂಗಪ್ಪ ನಾಯಕನ ಮರಣದ ನಂತರದ ರಾಜಮಾತೆಯ ಮಗಾ..ಎಂಬ ಕೊರಗಿನಿಂದ ಆರಂಭವಾಗಿ ಮದಕರಿನಾಯಕನ ವೀರಮರಣವನ್ನು ಕಂಡು ಇಡೀ ದುರ್ಗದ ಜನತೆಯ ಅಣ್ಣಾ- ಮಡಕೇರಣ್ಣಾ ಆರ್ತನಾದದಲ್ಲಿ ದುರ್ಗವು ಅಸ್ತಮದಲ್ಲಿ ಅಂತ್ಯವಾಗುತ್ತದೆ ಈ ಕೃತಿ. ಇದರ ಮಧ್ಯೆ ಮೂಡಿರುವುದು ಬರಿ ಅಕ್ಷರಗಳಲ್ಲ. ಪದಗಳಲ್ಲ. ಅವು ಓದುಗರ ಕಣ್ಣ ಮುಂದೆ ನವರಸಭರಿತವಾಗಿ ಮೂಡುವ ದೃಶ್ಯಗಳು. ಯುದ್ಧದ ಸಮಯದಲ್ಲಿ ಓದುಗನ ಮೈ ರೋಮಾಂಕಿತಗೊಳಿಸಿ. ದೇವರ ಕಾರ್ಯದಲ್ಲಿ ಓದುಗನಲ್ಲಿ ಭಕ್ತಿಯನ್ನು ಬಿತ್ತಿ. ಕೊನೆಗೆ ವೀರಮರಣ ಕಂಡ ಓದುಗನ ಕಣ್ಣಿನ ಅಂಚಿನಲ್ಲಿ ನೀರು ಸುರಿಸುತ್ತದೆ ಈ ಕೃತಿ. ಉಚ್ಚಂಗಿ ದೇವಿಗೆ ಜಯವಾಗಲಿ 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಪ್ರೀತ್ ಬಿ. ಆರ್