Article

’ಮಡಿಲ ನಕ್ಷತ್ರ’ದ ಅಂತರಂಗ

ಸಾಹಿತ್ಯ ಕ್ಷೇತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ. ಅದರಲ್ಲೂ ಗಜಲ್ ಪ್ರಕಾರದಲ್ಲಿ ಗಣೇಶ್ ಹೊಸ್ಮನೆ, ಡಾ.ಗೋವಿಂದ ಹೆಗಡೆ, ಶ್ರೀದೇವಿ ಕೆರೆಮನೆ ಮುಂತಾದವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ರೇಖಾ ಭಟ್ಟ ಹೊನ್ನಗದ್ದೆಯವರು. ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರೇಖಾ ಉದಯೋನ್ಮುಖ ಕವಯಿತ್ರಿ. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದ ಕೃತಿಯಿದು.

ಈ ಸಂಕಲನಕ್ಕೆ ಗಜಲ್ ಪ್ರಕಾರದಲ್ಲಿ ವಿಶೇಷ ಕೃಷಿ ಮಾಡಿರುವ ಡಾ.ಗೋವಿಂದ ಹೆಗಡೆ ಅವರು ಮುನ್ನುಡಿಯನ್ನು ಮತ್ತು ಖ್ಯಾತ ಕವಿ ಆನಂದ ಋಗ್ವೇದಿ ಬೆನ್ನುಡಿಯನ್ನು ಬರೆದು ಹಾರೈಸಿದ್ದಾರೆ.ಗೋವಿಂದ ಹೆಗಡೆಯವರ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸುವೆ.

" ಇಂಗುತ್ತಿರುವ ಒರತೆಯಿಂದ ಗುಟುಕುಗಳ ಮೊಗೆಯುತ್ತಲೇ ಇದ್ದೆ.
ನದಿಯೊಂದು ದಿಕ್ಕು ಬದಲಿಸಿ ತಂಪೆರೆಯುವುದೆಂದು ಊಹಿಸಿರಲಿಲ್ಲ"
ಎಂಬ ದ್ವಿಪದಿಯನ್ನು ಉಲ್ಲೇಖಿಸುವ ಮೂಲಕ ರೇಖಾರ ಗಜಲ್ ಯಾನದ ಬಗ್ಗೆ ಗೋಜೀ ಹೇಳುತ್ತಾರೆ.

ಗಜಲ್ ದ್ವಿಪದಿಗಳಲ್ಲಿ ಮಂಡಿತವಾಗುವ ಕಾವ್ಯ ಪ್ರಕಾರ. ಇವಕ್ಕೆ ಷೇರ್/ ಬೈತ್ ಎಂದು ಹೆಸರು. ಪ್ರತಿ ಸಾಲು ' ಮಿಸ್ರ'. ಮೊದಲ ಷೇರ್ - ಮತ್ಲಾ. ಕೊನೆಯದು ಮುಕ್ತಾ. ಸಾಮಾನ್ಯವಾಗಿ ಒಂದು ಗಜಲ್ ನಲ್ಲಿ ಏಳು ಷೇರ್ ಗಳಿರುತ್ತವೆ. ಷೇರ್ ನ ಕೊನೆಯಲ್ಲಿ ಪುನರಾವರ್ತನೆಯಾಗುವ ಪದ - ರದೀಫ್. ಈ ರದೀಫ್ ನ ಹಿಂದಿನ ಪದ; ಅಂತ್ಯಪ್ರಾಸವುಳ್ಳ ಪದ ಕಾಪಿಯಾ. ಈ ಮೇಲಿನ ಮಾಹಿತಿಯನ್ನು ಕೂಡಾ ಮುನ್ನುಡಿಯಲ್ಲಿ ಅವರು ಹೇಳಿದ್ದಾರೆ.

ಬದುಕ ಕಟ್ಟುವ ಕಲೆಯ ಕನಸುಗಳಿಗೆ ಕಲಿಸಬೇಕು
ಕತ್ತಲೆಯ ಅಟ್ಟುವ ಕಲೆಯ ಮನಸುಗಳಿಗೆ ಕಲಿಸಬೇಕು

ಎಂಬಂತಹ ಒಳ್ಳೆಯ ಆಶಯದ ಸಾಲುಗಳಿಂದ ಸಂಕಲನ ಆರಂಭವಾಗುತ್ತದೆ.

ಬುವಿ ಕೂಡಾ ಹೊದೆವಳು ಬೆಳಕು ಕತ್ತಲೆಯ ಹೊದಿಕೆ
ಬಂದ ಹಾಗೆಯೇ ಬದುಕುವ ಸರಳತೆ ಇರಲಿ ನಮ್ಮೊಳಗೆ

ಇಲ್ಲಿ ಅಂತರಂಗದ ನೋಟದ ಬಗೆಗೆ ಸ್ಪಷ್ಟತೆಯಿದೆ.

ಬಣ್ಣಗಳ ನಡುವೆ ಅವಿತುಕೂತ ಬವಣೆಯ ಬಲ್ಲವರು ಯಾರು
ಬೆಳಕಿನೊಳಗೂ ಮನೆಮಾಡಿದ ಹುಳುಕ ಬಗೆಯುವುದು ಯಾರು

ಸೂಚ್ಯವಾಗಿ ಈ ಸಾಲುಗಳು ಹೇಳುವ ಅರ್ಥ ದೊಡ್ಡದು.

ಬಿಂದು ಬಿಂದು ಸೇರಿ ರೇಖೆಯಾಗಿ ಸಾಗಿದ ಬಗೆ ಹೇಗೆ ಹೇಳಲಿ
ಈತನ ಬಾಳಿಗೆ ನಾ ಗತಿಯಾದದ್ದೊಂದೆ ಅಲ್ಲ ಪ್ರೇಮವತಿಯಾದೆ

ರೇಖಾ ಅವರು, ಪ್ರೇಮ, ಸಂಸಾರ, ವಿಷಾದ, ಕತ್ತಲೆ- ಬೆಳಕಿನಾಟ
ಹೀಗೆ ವಿವಿಧ ವಿಷಯಗಳನ್ನು ಗಜಲ್ ಪ್ರಕಾರದಲ್ಲಿ ಚೆನ್ನಾಗಿ ಮೂಡಿಸಿದ್ದಾರೆ.

ಆನಂದ ಋಗ್ವೇದಿ ಅವರು ಬೆನ್ನುಡಿಯಲ್ಲಿ ಹೇಳಿರುವಂತೆ ' ಇಲ್ಲಿ ಭಾವ ತೀವ್ರತೆಯೊಂದೆ ಇಲ್ಲ; ಬದುಕು ಕಟ್ಟುವ ಕಲೆ, ಮಾನವೀಯ ಅಂತಃಕರಣ, ಕಾಳಜಿ, ಆರ್ತತೆ, ಆರ್ದ್ರತೆ ಎಲ್ಲವೂ ಇವೆ. ಇನಿಯ ದನಿಯ ಬಯಕೆಯಿದೆ'.

ಪಾರ್ಸಿಯಲ್ಲಿ ಹುಟ್ಟಿ ನಮ್ಮಲ್ಲಿ ಉರ್ದು ಭಾಷೆಯಲ್ಲಿ ಬೆಳೆದ ಗಜಲನ್ನು ಮಹಿಳೆಯ ಧ್ವನಿಯಾಗಿಸುವಲ್ಲಿ ರೇಖಾ ಯಶಸ್ಸನ್ನು ಸಾಧಿಸಿದ್ದಾರೆ. ಅವರು ವಿವಿಧ ಕಾವ್ಯ/ ಸಾಹಿತ್ಯ ಪ್ರಕಾರಗಳಲ್ಲೂ ಇನ್ನಷ್ಟು ಬರೆಯಲಿ. ಅವರ ರೇಖಾಚಿತ್ರ ಸಾಹಿತ್ಯದ ನಭದಲ್ಲಿ ಮೂಡಲಿ ಎಂದು ಆಶಿಸುತ್ತೇನೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : ಮಡಿಲ ನಕ್ಷತ್ರ

ಅಜಿತ ಹೆಗಡೆ