Article

ಮಹಾಭಾರತ ಹೇಳುವ ವ್ಯಾಸ: ‘ಇನಾಸ ಮಾಮನ ಟಪಾಲು ಚೀಲ’

ಮಾನ್ಯ ಸುರೇಶ ಹೆಗಡೆ ಯವರು ಪ್ರೀತಿಯಿಂದ ಕಳಿಸಿದ ಕತಾ ಸಂಕಲನ ‌'ಇನಾಸ್ ಮಾಮನ ಟಪಾಲು ಚೀಲ’ ಒಂದೇ ಗುಕ್ಕಿನಲ್ಲಿ ಓದಿದೆ‌‌. ಅವರೊಬ್ಬ ಬದುಕಿನ ಕತೆ ತುಂಬಿಕೊಂಡ ಹೊಸ ಹೊಸ ನೋವಿನ, ನಲಿವಿನ ಕತೆಗಳನ್ನು ನಮ್ಮ ಮುಂದೆ ಬಿಚ್ಚಿಡುವ ಸಾಂತಾ ಕ್ಲಾಸ್ ಅಂತನಿಸುತ್ತೆ. ಸರಳ ನಿರೂಪಣೆ, ಗಾಢವಾದ ಜೀವನಾನುಭವ, ಜೀವನ ಪ್ರೀತಿಯಿಂದ ಕತೆಗಳು ನೇರವಾಗಿ ನಮ್ಮ ಹೃದಯಕ್ಕೆ ಲಗ್ಗೆ ಹಾಕುತ್ತವೆ. ನಮ್ಮ ಹೃದಯ ಮತ್ತು ಮನಸ್ಸುಗಳನ್ನು ಮುಟ್ಡುತ್ತದೆ, ತಟ್ಟುತ್ತದೆ. ಪ್ರತಿಯೊಂದು ಕತೆಯು ಓದುಗರಿಗೆ ಜೀವನದ ಕಟು ಸತ್ಯಗಳಿಗೆ ಮುಖಾಮುಖಿ ಮಾಡಿಸಿದಂತೆ ಜೀವನ ಪ್ರೀತಿಯ ಒಸರಾಗಿ ನಮ್ಮನ್ನು ಆಕರ್ಷಿಸುತ್ತದೆ. ಕತೆಯು ನೋವು ಸಾವು, ಮೋಸ, ವಂಚನೆಗಳು, ಕ್ಷುದ್ರತೆ ಮತ್ತು ಮನುಷ್ಯನ ಸಣ್ಣತನಗಳು ಮತ್ತು ಅದಕ್ಕೆ ತದ್ವಿರುದ್ಧವಾಗಿ ಒಳ್ಳೆಯ, ಹೃದಯವಂತ ಪಾತ್ರಗಳೂ ಉಜ್ವಲವಾಗಿ ಮೂಡಿ ಬರುತ್ತವೆ.

ಕತಾ ಸಂಕಲನದ ಮುಖ್ಯ ಕತೆ ‘ಇನಾಸ ಮಾಮನ ಟಪಾಲು ಚೀಲ’. ಇನಾಸ್‌ ಎಂಬ ಒಬ್ಬ ಸಾಮಾನ್ಯ ಬಡಪಾಯಿ ಜೀವನದ ಹೊರಾಟದಲ್ಲಿ ನಾನಾ ರೀತಿಯ ಕಷ್ಟ ನೋವುಗಳನ್ನು ಅನುಭವಿಸಿದರೂ ಅವನು ತನ್ನ ಪ್ರಾಮಾಣಿಕತೆ ಯನ್ನು ಬಿಟ್ಡುಕೊಡುವುದಿಲ್ಲ. ಈಶ್ವರ ಎಂಬ ಮಿತ್ರನ ಡ್ರಗ್ಸ್ ವ್ಯಾಪಾರದಲ್ಲಿ ಅವನು ಬಲಿಪಶುವಾಗಿ ಟಪಾಲ್ ಚೀಲ ಉಡುಪಿಗೆ ಕೊಡುವ ಕೆಲಸ, ಆ ಚೀಲದಲ್ಲಿ ಡ್ರಗ್ಸ್ ಇರುವುದು ಇನಾಸನಿಗೆ ಗೊತ್ತಾಗುವುದು ಉಡುಪಿಯಲ್ಲಿ ಇರುವ ಅವನ ಮಗನ ರೂಮಿಗೆ ಹೋದಾಗ. ಅವನ ಮಗ ಮತ್ತು ಮಿತ್ರ ಡ್ರಗ್ಸ್ ತೆಗೆದುಕೊಂಡು ಅಮಲೇರಿ ತಮ್ಮದೆ ಲೋಕದಲ್ಲಿ ತರುವಾಗ ಮಗ ಟಪಾಲ್ ಎಂಬ ಪದ ಕೇಳಿ ತಾನು ಟಪಾಲ್ ನಲ್ಲಿ ತಂದು ಈಶ್ವರ ಹೇಳಿದ ವ್ಯಕ್ತಿಗಳಿಗೆ ಕೊಡುತ್ತಿರುವುದು ಡ್ರಗ್ಸ್ ಎಂದು ಗೊತ್ತಾಗಿ ಪೋಲಿಸ್ ರಿಗೆ ತಿಳಿಸುತ್ತಾನೆ ‌‌ಈಶ್ವರನ ಬಂಧನವಾಗುತ್ತದೆ. ಹೆಚ್ಚಿನ ಕತೆಗಳು ಮನುಷ್ಯನ ಮೋಸ, ಕಪಟ, ವಂಚನೆಗಳನ್ನು ಚಿತ್ರಿಸಿದರೂ ಕತೆ ಹೆಚ್ಚಿನವು ಸುಖಾಂತವಾಗಿ ಅಂತ್ಯಗೊಳ್ಳುತ್ತವೆ. ಅನಿರೀಕ್ಷಿತ ತಿರುವುಗಳು ಕತೆಗೆ ಹೆಚ್ಚಿನ‌ ಕುತೂಹಲ ಮತ್ತು ಆಕರ್ಷಣೆಯಾಗಿ ಓದುಗನ ಮನಸ್ಸಿಗೆ ಮುದ ನೀಡುತ್ತದೆ. ಕತೆಗಳು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದ ಹಳ್ಳಿಗಳಲ್ಲಿ, ಮುಂಬೈ, ಅಮೇರಿಕಾ ಮುಂತಾದೆಡೆ ಸಂಚರಿಸುತ್ತವೆ. ಬದುಕು ವಿಷಾದ ವ್ಯಕ್ತಪಡಿಸುವ ಸಂಕಥನವಾದರೂ ಬದುಕಿನ ಆಶಾವಾದ ಜೀವನ ಪ್ರೀತಿ ಹೆಚ್ಚಿನದು ಎಂಬ ಸಂದೇಶ ಕಾಣಬಹುದು. ಹೆಚ್ಚಾಗಿ ಹವ್ಯಕ ಪಾತ್ರಗಳು ಇತರ ಸಮುದಾಯದೊಂದಿಗೆ ವ್ಯವಹರಿಸುವ ಸಂಕಥನಗಳು ಇದ್ದರೂ ಮನುಷ್ಯತ್ವಕ್ಕೆ ಜಾತಿ ಮತಗಳ ಸಂಪ್ರದಾಯದ ಬೇಲಿಗಳನ್ನು ಮುರಿಯುವ ಆಶಯವನ್ನು ಕತೆಗಳು ಹೊಂದಿವೆ. ಅನೈತಿಕ ಸಂಬಂಧ ಸಾವು ಇವುಗಳ ಮಾನವೀಯ ಮುಖವನ್ನು ತೋರಿಸುವಲ್ಲಿ ಕತೆಗಾರ ಯಶಸ್ಸನ್ನು ಕಂಡಿದ್ದಾರೆ‌.


ಸುರೇಶ್ ಹೆಗಡೆಯವರು ನಿವೃತ್ತರಾದ ನಂತರ ಕತೆ ಬರೆಯಲು ಪ್ರಾರಂಭಿಸಿದ್ದು ಇದು ಅವರ ಮೊದಲ ಮೊದಲ ಕತಾ ಸಂಕಲನವಾಗಿದೆ. ಆದರೂ ಅತ್ಯುತ್ತಮ ಕತೆಗಳಾಗಿವೆ. ಮಹಾಭಾರತ ಹೇಳುವ ವ್ಯಾಸರಂತೆ, ವೈಶ್ಯಂಪಾಯನದಂತೆ ಇವರು ಮನುಷ್ಯನ ಬದುಕಿನ ಚರಿತ್ರೆಯನ್ನು ಕತೆಯ ಮೂಲಕ ಕಟ್ಟಿ ಕೊಡುತ್ತಾರೆ. ನಾವು ಜನುಮೇಜಯನಂತೆ ಕತೆ ಓದುತ್ತ ಅಥವಾ ಕೇಳುತ್ತಾ ಹೋಗುತ್ತೇವೆ. ಕತೆಗಳ ಮೊದಲ ವಾಕ್ಯವೆ ನಮ್ಮನ್ನು ಕತಾಲೋಕಕ್ಕೆ ಸೆಳೆದು ಕೊಂಡು ಅಂತ್ಯದವರೆಗೂ ನಮ್ಮನ್ನು ಹಿಡಿದಿಡುವ ಕಲಾವಂತಿಕೆ ‌ಈ ಕತೆಗಳಿಗೆ ಇವೆ. ಪ್ರತಿ ಕತೆಯನ್ನು ಕೆಲವು ಕವಿಗಳ ಕತೆಗೆ ಸೂಟ್ ಆಗುವ ಕವಿತೆಯ ಸಾಲುಗಳಿಂದ ಪ್ರಾರಂಭಿಸುವುದು ಮತ್ತೊಂದು ವಿಶೇಷ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : ಇನಾಸ ಮಾಮನ ಟಪಾಲು ಚೀಲ

ಉದಯ್ ಕುಮಾರ್ ಹಬ್ಬು