Article

ಮಹಾಭಾರತದ ಅಶ್ವತ್ಥಾಮನ ರುದ್ರನಾಟಕವನ್ನ ನೆನಪಿಸುವ `ಅಶ್ವತ್ಥಾಮನ್'

ಅಶ್ವತ್ಥಾಮನ್‌ ಕಾದಂಬರಿ ಓದಿದ ಬಳಿಕ ರುದ್ರನಾಟಕವೊಂದನ್ನು ಓದಿ ಮುಗಿಸಿದ ನಂತರದ ಭಾವನೆ ಮೂಡಿ ಉಳಿಯಿತು. ಮಹಾಭಾರತದ ಅಶ್ವತ್ಥಾಮ ರುದ್ರನಾಟಕಕ್ಕೆ ಸೂಕ್ತ ವಸ್ತು. ನಿರಂತರವಾಗಿ, ತಡೆಯಿಲ್ಲದೆ ಪತನದತ್ತ ಜಾರುತ್ತಲೇ ಹೋಗುವ ಈ ಅಶ್ವತ್ಥಾಮ ಯಾಕೆ ಹೀಗೆ ಮಾಡುತ್ತಿದ್ದಾನೆ ಎಂಬ ವಿಷಾದವನ್ನು ನಮ್ಮಲ್ಲಿ ಉಳಿಸಿ ನಿರ್ಗಮಿಸುತ್ತಾನಲ್ಲವೇ. ಹಾಗಿದೆ ಇದು.

ಬಹು ಬೇಡಿಕೆಯ ನಟ ಅಶ್ವತ್ಥಾಮನಿಗೆ ಒಂದು ಮುಂಜಾನೆ ಲಕ್ವ ಹೊಡೆಯುತ್ತದೆ. ದೇಹದ ನರನರವನ್ನೂ ದುಡಿಸಿ ನಟಿಸಬಲ್ಲ ವ್ಯಕ್ತಿ ನಿಶ್ಚಲನಾಗಿ ಮಲಗಿದಾಗ ಅವನ ಮನಸ್ಸು ಅತ್ಯಂತ ಹೆಚ್ಚು ಕ್ರಿಯಾಶೀಲವಾಯಿತೋ ಎಂಬಂತೆ, ತನ್ನ ಆತ್ಮಕತೆ ಬರೆಸಲು ಮುಂದಾಗುತ್ತಾನೆ. ಬದುಕಿದ ಕತೆಯನ್ನು ಬರೆಯಲು ಹೊರಡುವುದೆಂದರೆ ಅಷ್ಟೂ ದಿನ ಬದುಕಿದ ಸುಖದ, ಯಾತನೆಯ ಕ್ಷ ಣಗಳನ್ನು ಮರಳಿ ನಟಿಸುವುದು ಎಂದೇ ಅರ್ಥ ತಾನೆ. ಅಂಥದೊಂದು ಅಭಿನಯಕ್ಕೆ ಮಲಗಿದಲ್ಲಿಂದಲೇ ಮುಂದಾಗುವ ಅಶ್ವತ್ಥಾಮ ತಾನಿದ್ದಲ್ಲೇ ಊಹಾತೀತವೆನಿಸುವಂಥ ರಂಗಮಂಚವೊಂದನ್ನು ಸೃಷ್ಟಿಸುತ್ತಾನೆ.

ಇದನ್ನು ಓದುತ್ತಾ ಓದುತ್ತಾ ನನಗೆ ಭಾರತದ ಅಶ್ವತ್ಥಾಮನ ನೆನಪು ಬಂದುದು ಕಾಕತಾಳೀಯ ಇದ್ದಿರಲಾರದು. ನೀವು ಕಾದಂಬರಿಯಲ್ಲೇ ಒಂದು ಪಾತ್ರದ ಮೂಲಕ ಹೇಳಿಸಿದ್ದೀರಲ್ಲವೇ- ಹಾಲು ಎಂದು ಅಕ್ಕಿ ತೊಳೆದ ನೀರನ್ನು ಬಾಲ್ಯದಲ್ಲಿ ಕುಡಿದ ಅಶ್ವತ್ಥಾಮ, ನಂತರ ನಿಜವಾದ ಹಾಲೇ ಸಿಕ್ಕಿದರೂ ಅದನ್ನು ಹಾಲೆಂದು ನಂಬಿರಲು ಸಾಧ್ಯವೇ ಅಂತ. ಈ ಮಾತು ಕಾದಂಬರಿಯ ಮೂಲ ಆಶಯವಾಗಿಯೇ ನನಗೆ ಕಾಣಿಸುತ್ತದೆ. ಒಬ್ಬರಾದ ಮೇಲೊಬ್ಬರಂತೆ ಹಲವು ಹೆಣ್ಣುಗಳನ್ನು ಕೂಡುವ ಅಶ್ವತ್ಥಾಮ, ಮೂವರು ಹೆಂಡತಿಯರ ಮೂಲಕ ಕಂಡುಕೊಳ್ಳುವ ಬದುಕಿನ ಸತ್ಯಗಳು ವಿಲಕ್ಷಣವಾಗಿವೆ. ಕೆಲವೊಮ್ಮೆ ತನ್ನೊಳಗಿನ ಪೂರ್ವಗ್ರಹಗಳನ್ನೂ ಈ ಹೆಣ್ಣುಗಳ ಮೂಲಕವೇ ನಿಜ ಮಾಡುತ್ತ ಹೋಗುತ್ತಿದ್ದಾನೋ ಅಂತಲೂ ಅನ್ನಿಸದೇ ಇರದು. ಎದುರಾಗುವ ಎಲ್ಲ ವ್ಯಕ್ತಿಗಳ ಒಳಗಿನ ಪೊಳ್ಳುತನವನ್ನು ಬಯಲು ಮಾಡುತ್ತ ಹೋಗಲು ಬಯಸುವನು, ಒಂದು ಹಂತದಲ್ಲಿ ಪೊಳ್ಳುತನವನ್ನೇ ಆರಾಧಿಸತೊಡಗಿರಬಹುದೇ ಎಂಬಂಥ ಗ್ರಹಿಕೆಗೂ ಎಡೆಮಾಡುತ್ತಾನೆ.

ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ಹಂತದಲ್ಲಿ ಎದುರಾಗುವ ಕೆಲವು ಮೂಲಭೂತ ಪ್ರಶ್ನೆಗಳು ಈ ಕಾದಂಬರಿಯಲ್ಲೂ ನಮಗೆ ಎದುರಾಗುವಂತೆ ನೀವು ಮಾಡುತ್ತೀರಿ. ಮುಖ್ಯವಾಗಿ: ಬದುಕು ಎಲ್ಲಿ ಅಭಿನಯದ ವಲಯವನ್ನು ಪ್ರವೇಶಿಸುತ್ತದೆ, ಅಭಿನಯ ಎಲ್ಲಿ ಮುಗಿದು ನಿಜ ಶುರುವಾಗುತ್ತದೆ ಎಂಬುದು. ಕೆಲವೊಮ್ಮೆ ನಾವು ಈ ಎರಡನ್ನೂ ಪ್ರತ್ಯೇಕಿಸಲು ಆಗುವುದೇ ಇಲ್ಲ. ಎದುರಿಗೆ ಇರುವ ವ್ಯಕ್ತಿಯ ಹುಬ್ಬಿನ ಒಂದು ಅಲುಗು, ಕಣ್ಣಿನ ಒಂದು ಸಿಡಿ, ತುಟಿಯ ಒಂದು ಕೊಂಕು, ಹಣೆಯ ಒಂದು ಗೆರೆ ಕೂಡ ಬದುಕನ್ನು ಆ ಕ್ಷಣದಿಂದಲೇ ಎರಡು ಅಂಚುಗಳಾಗಿ ಒಡೆಯಬಹುದಲ್ಲವೇ. ಹಾಗೆ.

ಜೊತೆಗೆ ವ್ಯಕ್ತಿಯ ಕ್ರೌರ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು. ಯಾವುದು ಕ್ರೌರ್ಯ, ಯಾವುದು ಅಲ್ಲ ಎಂಬ ಪ್ರಶ್ನೆ, ಕ್ರೌರ್ಯದ ವೇಳೆಯಲ್ಲೇ ಮನುಷ್ಯ ತನ್ನ ಸಂಪೂರ್ಣ ಮಗ್ನತೆಯನ್ನು ಪ್ರದರ್ಶಿಶುತ್ತಾನೆಯೇ ಎಂಬಂಧ ಪ್ರಶ್ನೆಗಳು ನಮಗೆ ಇಲ್ಲಿ ಎದುರಾಗುತ್ತವೆ. ಪ್ರೇಮದಲ್ಲಿ, ಕಾಮದಲ್ಲಿ ಮನುಷ್ಯ ಇನ್ನೊಬ್ಬನನ್ನು ವಂಚಿಸಬಹುದು. ಆದರೆ ಕ್ರೌರ್ಯದಲ್ಲಿ ಯಾರೂ ಯಾರನ್ನೂ ವಂಚಿಸಲಾರರು. ಆ ನಿಟ್ಟಿನಲ್ಲಿ ಅಶ್ವತ್ಥಾಮ ಅಸಲಿ ವ್ಯಕ್ತಿ. ಇದನ್ನು ಒಂದು ಎಕ್ಸ್‌ಟ್ರೀಮ್‌ಗೆ ಕೊಂಡೊಯ್ಯುವ ಮೂಲಕ ಕಾಣಿಸಲು ನೀವು ಯತ್ನಿಸಿರುವುದು ಚೆನ್ನಾಗಿದೆ.

ನೀವು ಕಟ್ಟಿಕೊಟ್ಟ ಅಶ್ವತ್ಥಾಮ ನಮ್ಮ ಹಲವು ಬಗೆಯ ಗ್ರಹಿಕೆಗಳನ್ನು ತಲೆಕೆಳಗು ಮಾಡುವವನು. ನಮ್ಮ ಊರಿನ ತಾಳಮದ್ದಳೆ ಕಲಾವಿದರು, ಯಕ್ಷ ಗಾನದ ಅರ್ಥ ಹೇಳುವಾಗ, ಅಶ್ವತ್ಥಾಮ ಅತ್ತ ಬ್ರಾಹ್ಮಣನೂ ಆಗಲಿಲ್ಲ, ಇಲ್ಲ ಕ್ಷತ್ರಿಯನೂ ಆಗಲಿಲ್ಲ ಎಂದು ಹೇಳುವುದು ಇತ್ತು. ಹಾಗೆಯೇ ನಿಮ್ಮ ಅಶ್ವತ್ಥಾಮ ಅತ್ತ ಪರಿಪೂರ್ಣ ನಟನಾದನೋ, ಇತ್ತ ಪರಿಪೂರ್ಣ ಮನುಷ್ಯನಾದನೋ, ಅಥವಾ ಎರಡೂ ಆಗಲಿಲ್ಲವೋ ಎಂಬುದನ್ನು ಕೂಡ ನಮ್ಮ ಜಿಜ್ಞಾಸೆಗೆ ಒಡ್ಡಿ ನಿರ್ಗಮಿಸುತ್ತಾನೆ. ಬಿಎಂಶ್ರೀ ಅವರ ರುದ್ರನಾಟಕದ ಅಶ್ವತ್ಥಾಮ ಕಾಣುವ ಕೊನೆಗೆ ಹೋಲಿಸಿದರೆ ನಿಮ್ಮ ಅಶ್ವತ್ಥಾಮ ಕಾಣುವ ದುರಂತವೂ ಏನೇನೂ ಕಡಿಮೆಯಿಲ್ಲದ್ದು.

ಎಲ್‌ ಕಾದಂಬರಿಯ ಕವಿ ಲಕ್ಷ್ಮಣ, ಬೆಂಗಳೂರು ಕಾದಂಬರಿಯ ಪತ್ರಕರ್ತ ನರಸಿಂಹ, ಈಗ ಅಶ್ವತ್ಥಾಮ- ನಿಮ್ಮಲ್ಲಿ ಸೋಲಿಲೋಕಿಯೊಂದು ನಿಧಾನವಾಗಿ ವಿಕಾಸವಾಗುತ್ತಾ ಇದೆ ಎಂಬ ಭಾವನೆಯನ್ನು ನನ್ನಲ್ಲಿ ಮೂಡಿಸಿದವು. ಕವಿಯೊಬ್ಬ ನಿರಂತರವಾಗಿ ಜೀವನಪೂರ್ತಿ ಬೇರೆ ಬೇರೆ ಹೆಸರುಗಳಲ್ಲಿ ಒಂದೇ ಕವಿತೆಯನ್ನು ಬರೆಯುವಂತೆ, ನೀವು ಕೂಡ ಸ್ವಗತ ರೂಪದ ಒಂದೇ ಕಾದಂಬರಿಯನ್ನು ಬೇರೆ ಬೇರೆ ಹೆಸರುಗಳಲ್ಲಿ ಬರೆಯುತ್ತಿದ್ದೀರಿ ಅಂತ ನನಗೆ ಭಾಸವಾಗುತ್ತಿದೆ.

ಅಶ್ವತ್ಥಾಮ ಚಿರಂಜೀವಿ. ಒಂದು ದಂತಕತೆಯ ಪ್ರಕಾರ ಇವನು ಆಕಸ್ಮಿಕವಾಗಿ ಕಾಣಲು ಸಿಕ್ಕಿದ ಬಳಿಕ, ಮಹಾಭಾರತದ ಕತೆ ಕುಮಾರವ್ಯಾಸನಿಗೆ ಹೊಳೆಯುತ್ತ ಹೋಯಿತಂತೆ. ಹೀಗೆ ನಿಮಗೆ ಈ ಕತೆಯನ್ನು ಕಾಣುವ ಮುನ್ನ ಸಿಕ್ಕಿದ ಅಶ್ವತ್ಥಾಮ ಯಾರೆಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ!

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹರೀಶ್‌ ಕೇರ