Article

ಮಕ್ಕಳ ಪ್ರಜ್ಞೆ, ಸೃಜನಶೀಲತೆಯನ್ನು ಅರಳಿಸುವ ‘ಉಲ್ಟಾ ಅಂಗಿ’

ಮಕ್ಕಳ ಕತೆಗಳೆಂದ ತಕ್ಷಣ ಮೊದಲು ನೆನಪಿಗೆ ಬರುವುದು ನೀತಿ ಕತೆಗಳು, ಪಂಚತಂತ್ರ, ತೆನಾಲಿ ರಾಮ, ಅಕ್ಬರ್‌ ಬೀರಬಲ್‌ನ ಕತೆಗಳು. ಈ ಎಲ್ಲಾ ಕತೆಗಳು ಮಕ್ಕಳ ಜಾಣ್ಮೆ, ಮನೋರಂಜನೆ, ಮಕ್ಕಳ ಮನೋವಿಕಾಸಕ್ಕೆ ಪಾತ್ರವಾದರೂ ಇಂತಹ ಹಳೆಯ ಮಾದರಿಯ ಕತೆಗಳಿಂದ ಹೊರಬಂದು ಪ್ರಸ್ತುತವೆನಿಸುವ ನವಿರು ಕತೆಗಳು ಕನ್ನಡದಲ್ಲಿ ಬರುತ್ತಿರುವುದು ವಿರಳಾತಿವಿರಳ ಎನ್ನಬಹುದು. ಇಂತಹ ಹಳೆ ಸಿದ್ಧ ಮಾದರಿಯನ್ನು ಮೀರಿ ಹೊಸ ಬಗೆಯ ಕತೆಗಳನ್ನು ಮಕ್ಕಳಿಗೆ ತಲುಪಿಸುವ ಕತೆಗಳೇನಾದರು ಸಿಗಬಹುದೇ ಎಂದು ಹುಡುಕುತ್ತಿದ್ದೆ. ಹಾಗೆ ಸಿಕ್ಕದ್ದು ತಮ್ಮಣ್ಣ ಬೀಗಾರರ ‘ಉಲ್ಟಾ ಅಂಗಿ’ ಮಕ್ಕಳ ಕತಾ ಸಂಕಲನ.

ಬಹು ದಿನದಿಂದ ಓದಬೇಕು ಅಂದುಕೊಂಡರೂ ಕೆಲಸದ ಸಲುವಾಗಿ ಸಾಧ್ಯವಾಗಿರಲಿಲ್ಲ. ಆಗಾಗಾ ಒಂದೆರಡು ಕತೆಗಳನ್ನು ಮಾತ್ರ ಓದಿದ್ದೆ. ಆದರೆ ದಸರಾ ಹಬ್ಬದ ಪ್ರಯುಕ್ತ ಸಿಕ್ಕ ರಜೆಯಲ್ಲಿ ‘ಉಲ್ಟಾ ಅಂಗಿ’ಯ ಕತೆಗಳು ನನ್ನ ಜೊತೆಯಾಗಿ ಪಯಣಿಸಿದವು. ಹಾಗೆ ನಾ ಮೊದಲು ಆಯ್ಕೆ ಮಾಡಿಕೊಂಡು ಓದಿದ್ದು ಶೀರ್ಷಿಕೆ ಕತೆ. ಮಲೆನಾಡಿನ ಪರಿಸರವನ್ನು ಅಲ್ಲಿಯ ಜೀವನಶೈಲಿಯನ್ನು ಸರಾಗವಾಗಿ ಊಹಿಸಿಕೊಂಡು ಓದುವಷ್ಟು ಸಶಕ್ತವಾಗಿವೆ.

ಈ ನೈಜ ಕಥನಗಳನ್ನು ಮಕ್ಕಳಿಗೆ ತಲುಪಿಸಲು ನೀವು ಬಳಸಿರುವ ಸೂಕ್ಷ್ಮ ಹಾಗೂ ಸರಳ ಭಾಷೆಯ ಆಯ್ಕೆಗಳೂ ಆಪ್ತಗೊಳಿಸುತ್ತವೆ. ಹಾಸ್ಯ, ವಾಸ್ತವ, ಪ್ರಸ್ತುತ ಎನಿಸುವ ಈ ಕತೆಗಳನ್ನು ಮಕ್ಕಳು ಮಾತ್ರವಲ್ಲ ದೊಡ್ಡವರೂ ಓದಬೇಕಿದೆ. ‘ಹೀಗೂ ಆಗುತ್ತದೆ, ಗೀಜಗನ ಗೂಡಿಂದ ಗೀಜಗನ ಮರಿ ಹೊರಕ್ಕೆ ಬಂತು, ಏನಾಯ್ತು?, ನಮ್ಮ ಹಿಂದೇ ಹೊರಟಿದ್ದರು’ ಈ ಎಲ್ಲಾ ಕತೆಗಳು ನಿಮ್ಮ ಅನುಭವ ಕಥನವಾ? ಎಂಬ ಸಂದೇಹವನ್ನೂ ಮೂಡಿಸುತ್ತವೆ.

ಈ ನೈಜ ಕತೆಗಳ ಮಧ್ಯೆ ಒಂದಷ್ಟು ಸೈನ್ಸ್ ಬೆರೆತ ಕುತೂಹಲಕಾರಿಯಾಗಿ ಕತಾವಸ್ತು ಇದ್ದರೆ ಸೂಕ್ತ ಎಂದುಕೊಳ್ಳುವಾಗಲೇ ‘ಹೊಳೆಯುವ ಕಲ್ಲು’ ಮತ್ತಷ್ಟು ಕುತೂಹಲದೊಂದಿಗೆ, ಹಾಸ್ಯ ಮಿಶ್ರಿತ ನವಿರುತನದೊಂದಿಗೆ ಕಚಗುಳಿ ಇಡುತ್ತದೆ. ‘ಹೊಳೆಯುವ ಕಲ್ಲು’ ಕತೆ ಹೇಳುವ ಪ್ರಕ್ರಿಯೆಯ ಮಹತ್ವದಿಂದ ಶುರುವಾಗುವ ಕತೆಯಲ್ಲಿ ಕಿಶೋರನು ಪ್ರತಿಯೊಂದನ್ನು ಮೂಗುಮ್ಮಾಗಿ ನಂಬದೆ ತಾರ್ಕಿಕವಾಗಿ ಪ್ರಶ್ನಿಸುವ ಪ್ರವೃತ್ತಿ, ಅಪ್ಪನ ವಿಚಿತ್ರ ವ್ಯಕ್ತಿತ್ವದಿಂದ ಅನೇಕ ಪೇಚಾಟಕ್ಕೆ ಸಿಕ್ಕಿಕೊಳ್ಳುವ ‘ಜ್ಯುಪಿಟರ್‌’ ಇಬ್ಬರೂ ತಮ್ಮ ಅರಿವನ್ನು ಪ್ರದರ್ಶಿಸುತ್ತಾರೆ. ಕತೆಯನ್ನು ಅಂತ್ಯಗೊಳಿಸಿರುವ ರೀತಿ ನಿಮ್ಮ ಜಾಣ್ಮೆಯತ್ತ ತಿರುಗಿ ನೋಡುವಂತೆ ಮಾಡುತ್ತದೆ. ಹಾಗೇ ಮಕ್ಕಳಿಗೆ ಮಗ್ದತೆ, ಅರಿವನ್ನೂ ತರುತ್ತಾ ಗುರು ಗ್ರಹದ ಪರಿಚಯವನ್ನೂ ಕುತೂಹಲಕಾರಿಯಾಗಿ, ಅಗತ್ಯವಿದ್ದಷ್ಟು ಭಾರವಾಗದ ರೀತಿ ಮಂಡಿಸಿದ್ದಾರೆ. ಸರಳವಾಗಿ ಮಕ್ಕಳ ಮೆದುಳು ಗ್ರಹಿಸುವಷ್ಟು ಹೇಳಬೇಕಿರುವಷ್ಟು ಗುರು ಗ್ರಹದ ಮೂಲಕ ಹೇಳಿದ್ದಾರೆ ಲೇಖಕರು.

‘ನಮ್ಮ ಹಿಂದೇ ಹೊರಟಿದ್ದರು’ ಕತೆಯಲ್ಲಿನ ವ್ಯವಹಾರ ಜ್ಞಾನದೊಂದಿಗೆ ಪರಿಸರ ಜ್ಞಾನದ ಪ್ರಾಮುಖ್ಯತೆಯೆಡೆಗೆ ಕೊಂಡೊಯ್ಯುವಲ್ಲಿ ತಮ್ಮಣ್ಣ ಅವರು ನಿರ್ವಹಿಸಿರುವ ರೀತಿ ಮೆಚ್ಚುವಂತಹದ್ದು. ಅಲ್ಲಲ್ಲಿ ಕಾಣಸಿಗುವ ಹಕ್ಕಿ, ಮಲೆನಾಡಿನ ಪರಿಸರ, ಮಕ್ಕಳು ದಿನನಿತ್ಯದ ಆಗುಹೋಗುಗಳನ್ನು ನೋಡಬೇಕಿರುವ ರೀತಿಯನ್ನು ಇಲ್ಲಿನ ಕತೆಗಳು ಹೇಳುತ್ತವೆ. ಅರೆ!! ಇಂಥಾ ಕತೆಗಳೇ ಅಲ್ಲವೆ ನಮ್ಮ ಈಗಿನ ಮಕ್ಕಳ ಪ್ರಜ್ಞೆಯನ್ನು, ಸೃಜನಶೀಲತೆಯನ್ನು ಅರಳಿಸುವಂತಹವು ಎಂಬಷ್ಟು ಕಾಡಿಸುತ್ತದೆ. ‘ನಮ್ಮ ಹಿಂದೇ ಹೊರಟಿದ್ದರು’ ಕತೆಯ ಗಣಿತ ಮೇಷ್ಟ್ರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿ ಶಾಲೆಯಲ್ಲೂ ನಮ್ಮ ಮಕ್ಕಳಿಗೆ ಸಿಗಲಿ..

ಎಡೆಯೂರು ಪಲ್ಲವಿ