Article

ಮನದ ಕತ್ತಲನ್ನು ಹೊರ ಸೂಸುವ ‘ಕಂದೀಲು’

ಕಂದೀಲು ಕತ್ತಲನ್ನು ದೂರಗೊಳಿಸಲು ಉಪಯೋಗಿಸುವ ಸಾಧನ. ಕಂದೀಲು ಬದುಕಿನ ಅವಿಭಾಜ್ಯ ಅಂಗವೂ ಆಗಿತ್ತು ಒಂದು ಕಾಲಘಟ್ಟದಲ್ಲಿ ಹಳ್ಳಿಯ ಬದುಕಿಗೆ. ಅಂತಹ ಕಂದೀಲಿನ ಸುತ್ತಲೂ ತೆರೆದುಕೊಳ್ಳುವ ಕುಸುಮಾಳ ಬದುಕಿನ ಕಥನ ಓದುಗರ ಹೃದಯವನ್ನು ತಲ್ಲಣಗೊಳಿಸುತ್ತದೆ‌. ಹಳ್ಳಿಯ ಬದುಕಿನ ಚಿತ್ರಣ, ಬಳಕೆಯಾದ ಗ್ರಾಮೀಣ ಭಾಷೆ ಕಾದಂಬರಿಗೆ ಕಿರಿಟಪ್ರಾಯವಾಗಿವೆ. ಕಥಾ ಶೈಲಿ, ನಿರೂಪಣಾ ಕ್ರಮದಿಂದಲೂ ಕಾದಂಬರಿಗೆ ಹೊಸತನದ ಮೆರಗು ಇದೆ.

ದೀಪದ ಸುತ್ತಲೂ ಕತ್ತಲು ಎಂಬಂತೆ ಕಂದೀಲು ರಂಗಪ್ಪನ ಬದುಕಿನ ಸುತ್ತಲೂ ಸುಳಿದ ಕಷ್ಟಗಳು ಕುಸುಮಿಯನ್ನು ಎಂಥೆಂತ ಕೆಟ್ಟ ಪರಿಸ್ಥಿತಿಗೆ ತಂದು ನಿಲ್ಲಿಸಿತು ಊಹಿಸಲೂ ಅಸಾಧ್ಯ. ರಂಗಪ್ಪ ಕುಸುಮಿ ಇವರ ಆರಂಭದ ದಿನಗಳು ಸಣ್ಣಪುಟ್ಟ ಜಗಳಗಳಿಂದ ಕೂಡಿದ್ದರೂ ಅವರ ನಡುವಿನ ದಾಂಪತ್ಯ ಬಾಂಸದವ್ಯ ಸಂತೋಷದ ಸಾಗರದಂತಿತ್ತು. ಅನ್ಯೋನ್ಯವಾಗಿಯೇ ಇದ್ದರು. ರಂಗಪ್ಪನ ಸಾವು ಕುಸುಮಿಯ ಬದುಕಿನ ಮಾರ್ಗವನ್ನೇ ಬದಲಾಯಿಸಿತು. ಕುಸುಮಿಯ ಬದುಕಿನ ಯಾವುದು ಆಯ್ಕೆ ಏನು ಎಂಬ ಅವಳ ಪ್ರಶ್ನೆಗೆ ಸಮಾಜವೇ ಉತ್ತರಿಸಿತ್ತು. ಕುಸುಮಿ ಅಂಟಿಕೊಳ್ಳದೇ ಇರುವ ವ್ಯವಸ್ತೆಗೆ ಸಮಾಜವೇ ಅವಳನ್ನು ಹಾದರದವಳು ಎಂಬ ಪಟ್ಟ ಕೊಟ್ಟಿತು. ಸಭ್ಯಳಾದ ನನ್ನ ಬದುಕನ್ನು ಸಮಾಜ ನೋಡುವ ದೃಷ್ಟಿಕೋನ ಹಾದರದವಳು ಎಂದಾದರೆ ತನ್ನ ಆಯ್ಕೆ ಯಾವುದಾದರೆ ಒಳಿತು ಎಂದು ಯೋಚಿಸಿ ಅಂದಿನ ಸಾಮಾಜ ಅವಳ ಬದುಕಿನ ಹಾದಿ ಒಪ್ಪದಿದ್ದರೂ ಕೂಡ ಕುಸುಮಿ ತನ್ನ ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಸೆರಗುಹಾಸುವ ಕೆಲಸಕ್ಕೆ ಕಾಲಿಟ್ಟಳು.

ಒಂದು ಕಾಲದಲ್ಲಿ ಕಂದೀಲು ರಂಗಪ್ಪನ ಮೂಲಕ ವಾಡೆಗೆ ಹಾಗೂ ಇಡೀ ಊರಿಗೆ ಕಾವಲಿನ ಪ್ರತೀಕವಾಗಿದ್ದರೆ ಇಂದು ಅದೇ ಕಂದೀಲಿನ ಕಮರಿದ ಬೆಳಕು ಕುಸುಮಿಯ ಹಾದರದ ಬದುಕಿಗೆ ಬೆಳಕೂ ಆಗಿತ್ತು. ಅದಕ್ಕೆ ನೋವು ವೇದನೆಯೂ ಕುಸುಮಿಯ ಎದೆಯೊಳಗಿತ್ತು.

ಆರಂಭದಲ್ಲಿ ಮಲ್ಲಪ ಶೆಟ್ಟಿಯ ಪ್ರೇಮೋಲ್ಲಾಸದಲ್ಲಿ ಬದುಕು ಸಾಗಿಸಿದ ಕುಸುಮಿಗೆ ಮಲ್ಲಪ್ಪಶೆಟ್ಟಿಯೂ ಮೋಸಗಾರನೆಂದು ತಿಳಿಯಲೇ ಇಲ್ಲ. ಮೋಸ ಮಾಡಿದ ಮಲ್ಲಪ್ಪ ಶೆಟ್ಟಿಯೂ ಕೂಡ ಊರ ಮುಖಂಡ. ಆಸೆ ತೀರಿದ ಬಳಿಕ ಬಿಸಾಕಿ ನಡೆದಿದ್ದ‌. ಆಗಲೂ ಕುಸುಮಿಗೆ ಬದುಕೇ ಸಾಕು ಎಂದು ನಿರ್ಧರಿಸಿದ್ದಳು.  ದುಃಖಗೊಂಡಳು, ಖಿನ್ನಳಾದಳು, ಮತ್ತೆ ಹೊಟ್ಟೆಪಾಡಿಗಾಗಿ ಮತ್ತದೇ ಸೆರಗುಚೆಲ್ಲುವ ಕಾಯಕಕ್ಕೆ ಅಣಿಯಾದಳು.

ಕುಸುಮಿಯ ಗೆಳತಿ ಸೂಜಿಯ ಸಲಹೆಯಂತೆ ಮುಂಬೈ ಶಹರದಲ್ಲಿ ವೇಶ್ಯಾವೇಟಿಕೆಯ ನರಕದರ್ಶನವನ್ನು ಕಂಡ ಕುಸುಮಿ ಆರಂಭದಲ್ಲಿ ನಡುಗಿಹೋದಳು. ಅದಕ್ಕೆ ಹೊಂದಿಕೊಳ್ಳುವಲ್ಲಿ ಸಾಗಿಸಿದ ಜೀವನಕ್ಕಿಂತ ಅಲ್ಲಿಂದ ಪರಾರಿಯಾಗಲು ಯೋಚಿಸಿದ್ದೇ ಹೆಚ್ಚು. ಹುಬ್ಬಳ್ಳಿಯ ಪೋಲಿಸಪ್ಪ ಪಾಪಣ್ಣನು ಕುಸುಮಿಯ ಬದುಕಿಗೆ ಆಸರೆಯಾದದ್ದು, ಅವನ ನೆನಪಲ್ಲೇ ಮಗುವನ್ನು ಪಡೆಯುವ ಹಂಬಲವಿದ್ದರೂ ಮಗು ಪಡೆದಳು ನಿಜಾ. ಆದರೆ ಆ ಮಗುವಿಗೆ ತಂದೆ ಇರಲಿಲ್ಲ.

ವೇಶ್ಯೆಗೃಹದ  ಘರ್ ವಾಲಿಗಳು ನೀಡುವ ವಿವಿಧ ರೀತಿಯ ನೋವು ಕಿರುಕುಳದಲ್ಲಿ ನೊಂದು ಕುದ್ದು ಹೋಗಿದ್ದಳು. ಕುಸುಮಾ ತನ್ನ ಮಗುವಿನಿಂದಲೇ "ಅವ್ವ" ಎನ್ನುವ ಬದಲು "ಆಂಟಿ" ಎಂದು ಕರೆಯಿಸಿಕೊಳ್ಳುವ ದುರ್ಗತಿ ಬಂದಿತ್ತು. ಮಗ ಪ್ರಮೋದ ಹಾಗೆ ಕರೆದಾಗಲೆಲ್ಲ ಕುಸುಮಿಯ ಕಳ್ಳು ಚುರುಗುಟ್ಟುತ್ತಿತ್ತು ಕಂಬನಿ ಹರಿಯುತ್ತಿತ್ತು. ಹಾಗೆ ಕರೆಯಲು ಕಾರಣ ಮಕ್ಕಳಾದವರಿಗೆ ವೇಶ್ಯೆಗೃಹದಲ್ಲಿ ಸ್ಥಾನಮಾನ ಹಾಗೂ ಗಿರಾಕಿಗಳು ಹಿಂದೇಟು ಹಾಕುವುದರಿಂದ ಹೆತ್ತ ಮಗುವಿದ್ದರೂ ಆ ಮಗುವಿನಿಂದ ಆ ರೀತಿ ಕರೆಸುವ ಪದ್ದತಿಯನ್ನು ಘರವಾಲಿಲು ಹುಟ್ಟುಹಾಕಿದ್ದರು.

ತನ್ನ ಗಂಡನ ಸಾವಿಗೆ ಕಾರಣರಾರು? ಎಂಬ ಪ್ರಶ್ನೆ ಹಾಗೂ ಕಂದೀಲು ಹಿಡಿಯುವ ಕಾಯಕ ಮಾಡುವೆ? ಎಂಬ ಹಠದಲ್ಲೇ ಬದುಕನ್ನು ಸಾಗಿಸಿದ ಕುಸುಮಿ ಅನಂತ ದೇಸಾಯಿಯವರಿಂದ ತನ್ನ ಗಂಡನ ಮರಣಕ್ಕೆ ಸಹಾಯಾರ್ಥವಾಗಿ ಬರಬೇಕಾಗಿದ್ದ ಒಂದು ಎಕರೆ ಜಮೀನಿಗಾಗಿ ಹಾಗೂ ತನ್ನ ಗಂಡ ರಂಗಪ್ಪನಂತೆ ಕಂದೀಲು ಹಿಡಿಯಲು ಮಗನನ್ನು ಪಡೆಯಲು ನರಕ ಕೂಪಗಳನ್ನು ದಾಟಿ ಬಂದು ತನ್ನದೇ ಊರ ಮಡಿಲಲ್ಲಿ ನೆಮ್ಮದಿಯಾಗಿ ಮಲಗಿದಳು.

ಗ್ರಾಮೀಣಬದುಕಿನ ಹಿನ್ನಲೆಯಲ್ಲಿ ಶೋಷಿತವರ್ಗದ ಕುಸುಮಿಯ ಬದುಕಿನ ಚಿತ್ರಣದಿಂದ ಆರಂಭವಾಗಿ ನಗರದ ವೇಶ್ಯಾವೃತ್ತಿಯ ಕರಾಳಮುಖಗಳನ್ನು ಪರಿಚಯಿಸಿ ಮತ್ತದೇ ಗ್ರಾಮೀಣ ಬದುಕಿನಲ್ಲಿಯೇ ಬದುಕಿನ ಹಡುಕಾಟದಲ್ಲಿ ಗೆದ್ದು ಸೋಲುವ, ಸೋತು ಗೆಲ್ಲುವ ಕುಸುಮಿಯ ಪಾತ್ರಚಿತ್ರಣ ಕಾದಂಬರಿಯಲ್ಲಿ ಬಹಳಷ್ಟು ಕಾಡುವಂತಹುದು.

ಹನಮಂತ ಹಾಲಿಗೇರಿಯವರ 'ಕೆಂಗುಲಾಬಿ' ಯ ಶಾರದೆಯ ಪಾತ್ರದಂತೆ ಇಲ್ಲಿ ಕುಸುಮಿಯು ಬಹುದಿನದವರೆಗೂ ನೆನಪುಳಿಯುವ ಪಾತ್ರವಾಗುತ್ತಾಳೆ. ಕಾದಂಬರಿಯ ರಚನಾಕ್ರಮ, ಭಾಷೆ, ಕಥೆ ಹೇಳುವ ತಂತ್ರಗಾರಿಕೆ, ನಿರೂಪಣಾಕ್ರಮದಲ್ಲಿ ಲೇಖಕರ ಛಾತಿ ನೋಡಿದರೆ ಮುಂದಿನ ದಿನಗಳಲ್ಲಿ ಲೇಖಕರಿಂದ ಇನ್ನಷ್ಟು ಹೊಸ ಕಾದಂಬರಿಯ ನಿರೀಕ್ಷೆಯಲ್ಲಿ ಓದುಗರು ಕಾಯುವುದಂತೂ ಖಂಡಿತ.

ಒಂದೊಳ್ಳೆ ಹಳ್ಳಿ ಬದುಕಿನ ಚಿತ್ರಣದೊಡನೆ ಒಡನಾಡಿದ ಅನುಭವ ನನ್ನದಾಯ್ತು. ಕುಸುಮಿಯ ಜೀವನಪರಿಗೆ ಅಲ್ಲಲ್ಲಿ ಕೋಪ, ಕಣ್ಣೀರು, ಮರಗುವಿಕೆ, ಎಲ್ಲವೂ ಓದುಗನಾದ ನನ್ನಲ್ಲಿ ಆದವು. ಸಾಮಾಜಿಕ ವ್ಯವಸ್ಥೆಯಲ್ಲಿ ಉಳ್ಳವರ ಬದುಕಿನ ರೀತಿ, ಇಲ್ಲದವರ ಬದುಕಿನ ಕಷ್ಟಗಳನ್ನು ಇಲ್ಲಿ ಕಾಬಹುದು. ಕುಸುಮಿಯ ಪಾತ್ರವೇ ಕಾದಂಬರಿಗೆ ಜೀವಾಳ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ