Article

ಮಾನವತೆಗೆ ಸದ್ದಿಲ್ಲದೇ ಕುದಿಯುವ ಮಾಂತ್ರಿಕ ವಾಸ್ತವ ಕಥನ : ಹಾಣಾದಿ

 "ಹಾಣಾದಿ" ಶಬ್ದರೂಪಿ ಕಾದಂಬರಿ ಅಲ್ಲ.ಇದೊಂದು ಅರ್ಥರೂಪಿ ಕಾದಂಬರಿ.

"ಈ ಬಿಸಿಲಂದ್ರೆ ಅಪ್ಪ.ಮುಂಜಾನೆ ಎಳೆ ಮಗುವಿನಂತೆ ಮಧ್ಯಾಹ್ನ ಉರಿ ಬಿಸಿಲಿನಲ್ಲಿ ಸಿಡುಕಿನ ಮನುಷ್ಯ.ರಾತ್ರಿ ಬಿಸಿಲು ಬಿಟ್ಟು ಹೋದ ಅವಶೇಷದಂತಿರುತ್ತಿದ್ದ.ಬಿಸಿಲನಷ್ಟೇ ಸದ್ದಿಲ್ಲದೇ ಕುದಿಯುತ್ತಿರುವ ಮನುಷ್ಯ ಈಗ ನಾ ಮುಚ್ಚಿಟ್ಟ ಬಾಲ್ಯ ಬಿಸಿಲಾಗಿ ಕೇಳಲು ಕೂತಿದ್ದ"

ಇಂತಹ ಮುಂಜಾನೆಯ ಎಳೆ ಬಿಸಿಲಿನಂತಹ ಅಪ್ಪನನ್ನು ಕಾಣಬೇಕೆಂದು, ಹುಟ್ಟಿದ ಊರಿಂದ ದೂರಾಗಿ, ನಗರದಲ್ಲಿದ್ದ ಮಗ. ತನ್ನ ಹುಟ್ಟಿದ ಊರಿಗೆ ಬರುತ್ತಾನೆ.ಬಾಲ್ಯದಲ್ಲಿ ತಾನು ಕಂಡಿದ್ದ ಊರು ಇಂದು ಎಲ್ಲಾ ರೀತಿಯಲ್ಲೂ ಹಾಳಾಗಿರುವುದ ಕಂಡು. ಮನಸ್ಸಿಗೆ ಪಿಚ್ಚೆನಿಸಿ, ತನ್ನ ಮನೆಯ ಹಾದಿ ಹಿಡಿದು, ಮನೆಯ ಅಂಗಳದೊಳಕ್ಕೆ ಕಾಲಿಡುತ್ತಿದ್ದಂತೆ. ಅಂಗಳದಲ್ಲಿ ಬೆಳೆದಿದ್ದ, ತನ್ನಿಡೀ ಬಾಲ್ಯವನ್ನು ಅದರಡಿ ಕಳೆದಿದ್ದ, ಅಪ್ಪನ ಮತ್ತು ತನ್ನ ಪ್ರೀತಿಯ " ಬಾದಮು ಮರ" ಇಲ್ಲದನ್ನು ಕಂಡು ಆಘಾತವಾಗಿ, ಮನೆಯೊಳಕ್ಕೆ ಕಾಲಿಟ್ಟಾಗ ತನ್ನ ಪ್ರೀತಿಯ ಅಪ್ಪನೂ ಕಾಣುವುದಿಲ್ಲ. ಬಹುಶಃ ಅಪ್ಪ ಹೊಲದ ಬಳಿ ಹೋಗಿರ ಬೇಕೆಂದುಕೊಂಡು, ಯೋಚಿಸುತ್ತಿದ್ದಾಗ, 'ಮಗಾ ಈಗ ಬಂದಾ' ಚೆನ್ನಾಗಿದ್ದೆಯಾ ಎಂದು, ಅವ್ವನಂತೆ ಬಾವಣಿಕೆ ಮಾತುಗಳನ್ನಾಡುತ್ತಲೆ ಮನೆಯೊಳಕ್ಕೆ ಬಂದ, ಹಣ್ಣು ಹಣ್ಣು ಮುದುಕಿ ಯಾರೆಂದು, ತಿಳಿಯದಿದ್ದಾಗ.
ತಾನು ಗುಬ್ಬಿ ಆಯಿ ಎಂದು ಪರಿಚಯಿಸಿಕೊಂಡು. ಅಪ್ಪನ ಮತ್ತು ಅಪ್ಪ ಪ್ರೀತಿಯಿಂದ ಬೆಳೆಸಿದ್ದ, ಅಪ್ಪನ ಜೀವವಾಗಿದ್ದ ಬಾದಾಮು ಮರದ ಕತೆಯನ್ನೂ, ಆ ಬಾದಾಮು ಮರದೊಂದಿಗೆ ಸೇರಿಕೊಂಡಿದ್ದ ಇಡೀ ಊರಿನ ಕತೆಯನ್ನೂ ( ಈ ಕಾದಂಬರಿಯಲ್ಲಿ ಬರುವ ಬಾದಮು ಮರವೂ ಒಂದು ಗಟ್ಟಿ ಪಾತ್ರ)
ಹೊಲಕ್ಕೆ ಹೋಗುವ " ಹಾಣಾದಿ" ( ಕಿರು ಹಾದಿ- ಬಂಡಿದಾರಿ) ಯಲ್ಲಿ ಹೇಳುತ್ತಾ ಹೋಗಿ, ಕಡೆಗೆ ನಿರೂಪಕನಿಂದ ಕಣ್ಮರೆಯಾಗುವ, ನಿರೂಪಕನಿಗೆ ತಾನು ಇಲ್ಲಿಯವರೆಗೂ ಕೇಳಿದ್ದು, ಕಂಡದ್ದು ಎಲ್ಲವೂ ಕನಸೇನೋ ಎಂಬಂತೆ ನಿರೂಪಿತವಾಗಿರುವ
ಕಪಿಲ ಪಿ. ಹುಮನಾಬಾದೆ ಇವರ ಕಾದಂಬರಿ ' ಹಾಣಾದಿ' ಕತೆಯಿದು.

ಮೇಲ್ನೋಟಕ್ಕೆ ಈ ಕಾದಂಬರಿ ನಗರದಲ್ಲಿದ್ದ ಯುವಕನೊಬ್ಬ ತನ್ನ ತಂದೆಯನ್ನು, ಹಳ್ಳಿಯನ್ನು ಕಾಣಲು ಬಂದವನು, ಕಡೆಗೆ ತನ್ನ ಪ್ರೀತಿಯ ಅಪ್ಪ,ತನ್ನ ಇಷ್ಟದ ಬದಾಮು ಮರ, ಮತ್ತು ತನ್ನ ಹಳ್ಳಿಯ ದುರಂತ ಅಂತ್ಯವನ್ನು ಕಣ್ಣಾರೆ ಕಾಣುತ್ತಿದ್ದರೂ ಅದನ್ನ ಒಪ್ಪದ ಮನಸ್ಸು ಒಂದು ಭ್ರಮಾತ್ಮಕ ಜಗತ್ತಿನ ಕತೆಯಂತೆ ಕೇಳಿ ವಾಸ್ತವವನ್ನು ಒಪ್ಪಿಕೊಳ್ಳುವ ರೀತಿಯಲ್ಲಿದೆ.

ಆದರೆ ಈ ಕಾದಂಬರಿ ಹೇಳಲು ಹೊರಟಿರುವುದು, ಇವತ್ತು ಗ್ರಾಮಭಾರತದ ದುರಂತ ಅವನತಿಯ ವಿಷಾದತೆ ಮತ್ತು ಇಡೀ ಭಾರತವನ್ನು ಒಂದು ಕುಟುಂಬದಂತೆ ಪ್ರೀತಿಯಿಂದ ಕಾಣುವ,ಜಾತ್ಯತೀತ, ಧರ್ಮಾತೀತ,ಹಾಗೂ ಮಾನವತೆಯಿಂದ ದೀನ ದಲಿತರನ್ನು ಅಪ್ಪಿಕೊಳ್ಳುವ, ಗಾಂಧಿ/ ಅಂಬೇಡ್ಕರ್ ನಂತಹ , ಈ ಭಾರತಕ್ಕೆ ಇಂದು ಅತಿ ಅಗತ್ಯವಾಗಿರುವ 'ಅಪ್ಪನ' ವ್ಯಕ್ತಿತ್ವಕ್ಕಾಗಿ ಹಂಬಲಿಸುತ್ತಾ, ಅದನ್ನು ಹುಡುಕಾಡುತ್ತಾ,ಇರುವ ಮಕ್ಕಳ ಬದುಕಿನ ಕತೆಯೇ ಆಗಿದೆ ಅನ್ನಿಸುತ್ತೆ.

ಈ ಕತೆಯನ್ನು ಕಪಿಲ ಪಿ ಹುಮನಾಬಾದೆ ಅತ್ಯಂತ ಸಶಕ್ತವಾಗಿ, ಸಹಜವಾಗಿ, ರಾಶಿ ರಾಶಿ ದಟ್ಟ ವಿವರಗಳ ಮೂಲಕ ಪರಿಣಾಮಕಾರಿಯಾಗಿ, ಭ್ರಮಾತ್ಮಕ ವಾಸ್ತವ ಕಥಾತಂತ್ರ ಮತ್ತು ಪತ್ತೇದಾರಿ ಕಥನ ಹುಟ್ಟಿಸುವ ಕುತೂಹಲಕಾರಿ ಶೈಲಿಯಲ್ಲಿ ಓದುಗನ ಮುಂದಿಟ್ಟಿದ್ದಾರೆ.

ಕಪಿಲಾ ಪಿ. ಹುಮನಾಬಾದೆ ಅವರ ಈ ಕಾದಂಬರಿಯನ್ನು ಎರಡು ಬಾರಿ ಓದಿ ಇದರ ಬಗ್ಗೆ ಬರೆಯಬೇಕೆಂದವನು, ಬರೆದರೆ ಎಲ್ಲಿ ನನ್ನ ಓದಿನ ಅನುಭವ, ಖುಷಿ, ಮತ್ತು ಕಾದಂಬರಿಯ ವಾಸನೆ ನನ್ನಿಂದ ದೂರವಾಗುವುದೆಂಬ ಭಯದಿಂದ ಸುಮ್ಮನಿದ್ದೆ. ಆದರೆ ಕಡೆಗೆ ನನ್ನ ಓದು ಸ್ವಾರ್ಥವಾಗಬಾರದು, ಇನ್ನಷ್ಟು ಓದುಗರನ್ನು ತಲುಪಿ, ಈ ಕಾದಂಬರಿಯು ಓದುಗರಲ್ಲಿ ಎಬ್ಬಿಸುವ ಹೊಸ ಅಲೆಗಳು, ಮತ್ತಷ್ಟು ಓದುಗರ ಮನದ ತಟಗಳನ್ನು ತಲುಪಲಿ ಎಂಬ ಕಾರಣಕ್ಕೆ ನನ್ನ ಓದಿನ ಕೆಲ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಕಪಿಲಾ ಪಿ ಹುಮನಾಬಾದೆ ಅವರ ಈ ಕಾದಂಬರಿ ಸದ್ಯದ ಕನ್ನಡ ಕಾದಂಬರಿಗಳಲ್ಲಿ ಮೇಲ್ಪಟ್ಟದ್ದು ಎನ್ನಲು ಈ ಕಾದಂಬರಿ ಓದಿದ ಯಾವುದೇ ಓದುಗ ಹಿಂದೆ ಮುಂದೆ ಯೋಚಿಸಲಾರ. ಏಕೆಂದರೆ ಈ ಕಾದಂಬರಿಯ ವಸ್ತು,ಆಶಯ,ಇಲ್ಲಿನ ಭಾಷೆ, ಶೈಲಿ, ತಂತ್ರ, ದಟ್ಟ ವಿವರಗಳು, ಮೇಲಿನ ಮಾತನ್ನು ಗಟ್ಟಿಯಾಗಿ ಸಮರ್ಥಿಸುತ್ತವೆ.
ಕಾದಂಬರಿಕಾರರು ಅಲ್ಲಲ್ಲಿ ಬಳಸಿರುವ ಚತುರ್ಥಿ ಪ್ರಯೋಗ ಕನ್ನಡ ಕಥನಕ್ಕೆ ಹೊಸದಾಗಿದೆ.

(ಅಜ್ಜಿಯನ್ನು ನೋಡಿ ಅವಕ್ಕಾದೆ ಅನ್ನುವ ಬದಲು : ನಾ ಈ ಅಜ್ಜಿಗೆ ನೋಡಿ ಅವಕ್ಕಾದೆ ,
ಅವಳನ್ನು ನಾ ನೋಡೆ ಇಲ್ಲ ಅನ್ನುವುದರ ಬದಲು : ಅವಳಿಗೆ ನಾ ನೋಡೆ ಇಲ್ಲ.)

ಈ ಪ್ರಯೋಗವನ್ನು ಲೇಖಕ ಪ್ರಜ್ಞಾಪೂರ್ವಕವಾಗಿ ಮಾಡಿಲ್ಲದಿರುವುದು ಇಲ್ಲಿ ಅದು ದೋಷವಾಗದೆ, ಕಥನಕ್ಕೆ ಮತ್ತು ಓದುಗನಿಗೆ ಹೊಸತು ಎನಿಸಿದೆ.

ಈ ಕಾದಂಬರಿಯ‌ ಮೊದಲ ಓದಿಗೆ, ಓದುಗ ಕೊಂಚ ಗೊಂದಲ/ ಆಘಾತ ಕ್ಕೆ ಒಳಗಾಗಬಹುದು ಇದೇನು ಈ ಕತೆ ಹೀಗಿದೆಯಲ್ಲ ಎಂಬ ಪ್ರಶ್ನೆಗಳ ಮೂಡಬಹುದು. ಒಂದು ಉತ್ತಮ ಅಥವಾ ಶ್ರೇಷ್ಠ ಬರವಣಿಗೆ ಯಾವಾಗಲೂ ಓದುಗನನ್ನು ಮೊದಲ ಓದಿಗೆ ತೃಪ್ತಿಪಡಿಸಲು ಹೋಗುವುದಿಲ್ಲ.ಕೊಂಚ ಆಘಾತ ಮತ್ತು ಗೊಂದಲಲ್ಲಿಯೇ ಇಡುತ್ತದೆ, ಕೆಲ ಓದುಗಳವರೆಗೂ.

ಈ ಕಾದಂಬರಿಯ ಸೊಗಸನ್ನು, ಅರ್ಥವನ್ನು ಹಿಡಿಯಬೇಕಾದರೆ ಓದುಗನಾದವನು ಒಂದಕ್ಕಿಂತ ಹೆಚ್ಚು ಬಾರಿ ಓದಿದಾಗಲೇ ಇದರ ಸೊಗಸು,ವಿಶಿಷ್ಟತೆ ಏನೆಂದು ತಿಳಿಯುತ್ತದೆ.

ಕಾದಂಬರಿಯಲ್ಲಿ ಇರುವ ಕತೆ ಈ ಕಾದಂಬರಿಯ ಮಿತಿ ಅನ್ನಿಸಿದರೂ ಅದರ ಆಶಯ ಮತ್ತು ಕಾದಂಬರಿಯ ಉದ್ದಕ್ಕೂ ಬರುವ ಬದುಕಿನ ದಟ್ಟವಿವರಗಳೇ ಈ ಕಾದಂಬರಿಯ ದೊಡ್ಡ ಶಕ್ತಿಯಾಗಿವೆ.

ಕಪಿಲ ಪಿ. ಹುಮನಾಬಾದೆ ಅವರಲ್ಲಿ ಕುವೆಂಪು ಅವರ ಕಾದಂಬರಿಗಳಲ್ಲಿ ಕಾಣುವ ದಟ್ಟ ವಿವರಗಳ ಛಾಯೆ ಹಾಗೆ ಆವರಿಸಿದಂತೆ ಕಾಣುತ್ತದೆ.ಒಂದು ಕಾದಂಬರಿ,ಅಥವಾ ಕಾದಂಬರಿಕಾರನ ವಿಶೇಷತೆ ಅಂದರೆ ದಟ್ಟ ವಿವರಗಳನ್ನು ಕಟ್ಟಿಕೊಡುವುದು.

ಕಪಿಲಾ ಪಿ. ಹುಮಾನಬಾದೆಯವರ ವಯಸ್ಸು ಸು. ಇಪ್ಪತ್ತೆರಡರ ಆಸು ಪಾಸಂತೆ
ಆದರೆ ಅವರ ಕಾದಂಬರಿಯೊಳಗಿನ ಗಟ್ಟಿಪಾತ್ರ ಗುಬ್ಬಿ ಆಯಿಯ ಮಾತುಗಳನ್ನು ಕೇಳುತ್ತಿದ್ದರೆ,ಓದುತ್ತಿದ್ದರೆ ಖಂಡಿತಾ ಕಪಿಲಾರ ಒಳಗೆ ಹೆಪ್ಪುಗಟ್ಟಿದ ಜೀವನಾನುಭವಗಳ ಸುಕ್ಕು ಮೈಯಿನ 90 ರ ಮುದುಕಿಯೊಬ್ಬಳು ಕೂತು
ತನ್ನ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾಳೆ ಅನ್ನಿಸುತ್ತೆ. ಇದಕ್ಕೆ ನಿಮಗೆ ಕಾದಂಬರಿಯೊಳಗೆ ಅಂತ ಸಾಕಷ್ಟು ಮಾತುಗಳಿದ್ದಾವೆ.

ಒಂದಷ್ಟು ಉದಾಹರಣೆ ಇಲ್ಲಿ ನೋಡಿ ನನ್ನ ಮಾತಿನ ಸತ್ಯ ತಿಳಿಯಬಹುದು.

"ಈ ಬದುಕು ಬರೀ ಅಳಲು ಬಿಟ್ಟರಲ್ಲವೆ? ಮಗುವೊಂದು ಪುಟ್ಟ ಬೆರಳುಗಳಿಂದ ಬೆಳೆದು,ಇನ್ನೊಂದು ಕೂಸೆತ್ತಿ ಕೊಳ್ಳುವಷ್ಟು ಅದರ ಬೆರಳುಗಳು ಬೆಳೆದರೂ ಅದಕ್ಕೆ ಸಾವು ನೆನಪಾಗುವುದಿಲ್ಲ. ಬದುಕೇ ಹಾಗೆ ಮುಗಿಲ ತುದಿ ಹುಡುಕಲು ನಡೆದಂತೆ ಬ್ಯಾಸರಕಿ, ಖುಷಿ ಎಲ್ಲಾ ಇದ್ದಿದ್ದೆ."

"ಉಣ್ಣೊ ಅನ್ನಕ,ದೇವರ ಬೆಳಸಿದ ಗಿಡಕ್ಕ ಎಲ್ಲಿಂದ ಜಾತಿ ಅದರೋ"

"ಮನುಷ್ಯ ಏನನ್ನೂ ಕಳಚುವುದೇ ಇಲ್ಲ ಅನ್ನಿಸುತ್ತದೆ.ಅವನಿಗೆ ಬೆತ್ತಲಾಗೋದು ಅಂದ್ರೇನೆ ಭಯ"

" ಈ ಕೌದಿ ಬಚ್ಚಿಟ್ಟುಕೊಂಡ ಬದುಕುಗಳೆಷ್ಟು ಹೇಳು?
ನಾವು ಮನುಷ್ಯರು ಹಂಗೇ ಮಗ,ಎಷ್ಟೋ ಜೀವಗಳು ಚರ್ಮದೊಳಗೆ ಬಚ್ಚಿಟ್ಟುಕೊಂಡಿರುತ್ತೇವೆ"

"ಈ ಜಗತ್ತಿನಲ್ಲಿ ಬರೀ ಕತ್ತಲಿರಬೇಕಿತ್ತು ಚಂದ್ರನಿಗೆ ಒದ್ದು ಸೂರ್ಯ ಹುಟ್ಟಲೇಬಾರದು"

" ಈ ನಗರಗಳಲ್ಲಿ ಹೆಪ್ಪುಗಟ್ಟಿರುತ್ತೇವೆ ನಾವು.ಹೆಪ್ಪುಗಟ್ಟಿದ್ದು ನಮಗೆ ಗೊತ್ತಾಗದಷ್ಟು"

"ಮನುಷ್ಯ ಬೆಳೆದ ಹಾಗೆ ಕಳಚುತ್ತಿರುವುದನ್ನು ಎತ್ತಿಕೊಂಡೇ ಸಾಗಬೇಕೆಂದರೂ ಆಗದ ಕೆಲಸ.ಬಾಲ್ಯ ಮತ್ತೆಂದೂ ಬರುವುದಿಲ್ಲ.ಆ ಜಗತ್ತಿನ ಬಗ್ಗೆ ಯಾವ ಪುಸ್ತಕವೂ ಪೂರ್ಣ ಅನುಭವ ಕಟ್ಟಿಕೊಡಲಾರದು.ಇದೆಲ್ಲ ಒಂದು ಪ್ರಯತ್ನವಾಗಬಹುದಷ್ಟೇ ಎನಿಸುತ್ತದೆ."

"ಛೇ ! ಎಷ್ಟೋ ತಲೆಮಾರುಗಳು ಬದುಕಿ ಹೋದ ಮನೆಗಳ ತಲೆ ಉರುಳಿಸಿದವರ್ಯಾರು?"

ಇಂತಹ ಮಾತುಗಳನ್ನು ತನ್ನ ಕಾದಂಬರಿಯ ಉದ್ದಕ್ಕೂ ಅತ್ಯಂತ ಸಹಜವಾಗಿ, ಬರೆದಿರುವ ಕಪಿಲಾ ಪಿ.ಹುಮನಾಬಾದೆ ಕನ್ನಡ ಕಾದಂಬರಿ ಜಗತ್ತಿನ ಭವಿಷ್ಯದ ಉತ್ತಮ ಕಾದಂಬರಿಕಾರರ ಸಾಲಲ್ಲಿ ಮೊದಲಿಗರಾಗುತ್ತಾರೆ ಎಂಬ ನಂಬಿಕೆಯನ್ನು ನಮಗೆ ಅವರ " ಹಾಣಾದಿ" ಮಾಡಿಕೊಡುತ್ತದೆ.

"ಲೇಖಕನೆಂದರೆ ಜನಾಂಗ ಬದುಕಿನಿಂದ ಸಾಂಸ್ಕೃತಿಕ ನೆನಪನ್ನು ಹೆಕ್ಕಿ ತರುವ ಶೋಧಕ." ಎಂಬುದನ್ನು ಕಪಿಲ ಪಿ ಹುಮನಾಬಾದೆ ತಮ್ಮ ಕಾದಂಬರಿಯಲ್ಲಿ ಮಾಡಿದ್ದಾರೆ.

ಕಪಿಲ ಅವರು "ದಟ್ಟ ವಿವರಗಳನ್ನು ಕಟ್ಟಿಕೊಡುವ ಗಟ್ಟಿ ಲೇಖಕ" ಎಂಬುದಕ್ಕೆ
ನಿರೂಪಕ ಚಿಕ್ಕವನಿದ್ದಾಗ ತನ್ನ ಅಕ್ಕನ ಜೊತೆ ಇರುವೆಗಳನ್ನು ಹಿಡಿದು ಅವುಗಳಿಗೆ ಒಲೆಯ ಕೊಳ್ಳಿಯಿಂದ ತಿವಿದು ಆಡಿಸುತ್ತಿದ್ದ ಪ್ರಸಂಗ,
ಬಾದಮು ಗಿಡದ ವರ್ಣನೆ, ಊರ ವರ್ಣನೆ,
ಹೆಲಿಕಾಪ್ಟರ್ ಹುಳುಗಳನ್ನು ನಿರೂಪಕ ಬಾಲ್ಯದಲ್ಲಿ ಹಿಡಿದು, ದಾರ ಕಟ್ಟಿ ಆಡಿಸುತ್ತಿದ್ದ, ಚಿತ್ರ, ಈಗ ಅದು ತನ್ನ ಬದುಕನ್ನೆ ಹೋಲುತ್ತಿರುವುದು.
ಬಾದಾಮು ಗಿಡದಿಂದ ಇರುವೆಗಳು ತನ್ನ ಅಮ್ಮನ ಮೈಮೇಲೆ ಹರಿದು, ಅದರಿಂದ ಉಂಟಾದ ರಾದ್ದಾಂತ.ಗುಬ್ಬಿ ಆಯಿಯ ವರ್ಣನೆ. ಕಂಟಿ ಪಾತ್ರದ ಚಿತ್ರಣ ಹೀಗೆ ಕಾದಂಬರಿಯಲ್ಲಿ ಪ್ರತಿಯೊಂದು ಹೊಸತು ಎನಿಸುತ್ತವೆ, ಜೊತೆಗೆ ಓದುಗನನ್ನು ನಿಬ್ಬೆರಾಗಿಸುತ್ತವೆ.
ಇವತ್ತು ಬರೆಯುತ್ತಿರುವ ಸಾಕಷ್ಟು ಯುವ ಲೇಖಕರು ಕತೆಗಳನ್ನೊ, ಕವಿತೆಗಳನ್ನೊ ಬರೆಯುವಷ್ಟರಲ್ಲಿ ಸುಸ್ತು ಹೊಡೆದಿರುತ್ತಾರೆ. ಕಾದಂಬರಿಯ ಕ್ಯಾನ್ ವಾಸನ್ನು ಮುಟ್ಟಲು, ಹೆದರುತ್ತಾರೆ. ಇಂತಹ ಹೊತ್ತಿನಲ್ಲಿ "ಹಾಣಾದಿ" ಎಂಬ ಗಟ್ಟಿ ಕಾದಂಬರಿಯನ್ನು ಬರೆಯುವ ಸಾಹಸಕ್ಕೆ ಕೈ ಹಾಕಿ (ಇಪ್ಪತ್ತೊಂದನೆ ಶತಮಾನದಲ್ಲಿ ಮಹಾಕಾವ್ಯವಿಲ್ಲ. ಹಾಗಾಗಿ ಕಾದಂಬರಿಯನ್ನೆ ಮಹಾಕಾವ್ಯ ಎನ್ನುತ್ತಾರೆ) ಜಯಿಸಿ, ಇಂತ ಕಾದಂಬರಿಯನ್ನು ಕನ್ನಡಕ್ಕೆ ಕೊಟ್ಟಿರುವ ಕಪಿಲ.ಪಿ ಹುಮನಾಬಾದೆ ಅವರಿಗೆ ನನ್ನ ಪ್ರೀತಿಯ ಅನಂತ ಧನ್ಯವಾದಗಳು.

ಕಾಡಿಸುವ ಕಡೆಯ ಮಾತುಗಳು...
ಈ ಕಾದಂಬರಿಯಲ್ಲಿ ನನ್ನನ್ನು ಮತ್ತೆ ಮತ್ತೆ ಓದುವಂತೆ ಮಾಡುವ ಸಾಲುಗಳು.

"ದನ,ಕುರಿ,ಕೋಳಿ, ಮೀನು ಎಲ್ಲಾ ತಿಂತಿ ಅಲ್ಲ ನಿಂದು ಹೊಟ್ಟಿನೋ,ಮಟ್ಟಿನೋ" ಅಂತ ನಮ್ಮಪ್ಪ ಕೇಳಿದ

"ಅರೆ ಮಾಲಕ್,ಅದು ನಮ್ಮ ಖಾನಾ ಅದ.ನಿಮಗೆ ಮೊದಲು ನೆಲ ಇತ್ತು ಬೆಳದರಿ ಉಂಡ್ರಿ, ನಮಗ ನೆಲ ಇರಲಿಲ್ಲ ಇವೆಲ್ಲ ತಿಂದಿ ಬದಕ್ತಾ ಇದಿವಿ.ಈಗ ಅದೇ ರೂಢಿ ಬಿದ್ದದ ಮಾಲಕ್. ನೆಲ ಕೊಡಲ್ಲ ಗೌರ್ಮೆಂಟ್ ಮ್ಯಾಲಿಂದ ದನ ತಿನ್ಬೇಡ ಅಂದ್ರ ನಾವೇನ್ ಗಿಡದಲ್ಲಿ ರೊಕ್ಕ ಬೆಳಿತಿವ್ ಏನು ?
( ಕಂಟಿ ಪಾತ್ರ ಕೊಡುವ ಉತ್ತರದ ಮಾತುಗಳಿವು)

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಚ್.ಎಸ್. ರೇಣುಕಾರಾಧ್ಯ